ಅಥವಾ

ಒಟ್ಟು 17 ಕಡೆಗಳಲ್ಲಿ , 10 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊರ ಹೊರಗಣ ಹೊಲೆಯರ ಮನೆಯಲ್ಲಿ ಈರೈದು ಮಗ್ಗ. ಆ ಮಗ್ಗಕ್ಕೆ ಒಬ್ಬನೆ ಹಾರುವ ನೈವಾತ. ಆ ಮಗ್ಗದೊಳಗಿದ್ದು ಸುಂಕಕಂಜಿ ಹೊಲೆಯನಾದ, ಬಂಕೇಶ್ವರಲಿಂಗವನರಿಯದೆ.
--------------
ಸುಂಕದ ಬಂಕಣ್ಣ
ಒಂದು ಶಿಲೆಯೊಡೆದು ಮೂರಾದ ಭೇದವ ನೋಡಾ. ಒಂದು ಶಿಲೆ, ಶೂಲ ಕಪಾಲ ಡಿಂಡಿಮ ರುಂಡಮಾಲೆ ಐದು ತಲೆ, ತಲೆಯೊಳಗೊಬ್ಬಳು, ತೊಡೆಯೊಳಗೊಬ್ಬಳು. ಇಂತೀ ಕಡುಗಲಿಯ ದೇವನೆಂಬರು ನೋಡಾ. ಎನ್ನ ದೇವಂಗೈದು ಮುಖವಿಲ್ಲ, ಈರೈದು ಭುಜವಿಲ್ಲ. ಎನ್ನ ದೇವಂಗೆ ತೊಡೆಮುಡಿಯೊಳಾರನೂ ಕಾಣೆ. [ಹಿಡಿ]ವುದಕ್ಕೆ ಕೈದಿಲ್ಲ, ಕೊಡುವುದಕ್ಕೆ ವರವಿಲ್ಲ. ತೊಡುವುದಕ್ಕಾಭರಣವಿಲ್ಲ, ಒಡಗೂಡುವುದಕ್ಕೆಪುರುಷ[ನಿಲ್ಲ]. ತನಗೆ ಮತಿಯಿಲ್ಲ, ತನ್ನನರಿವವರಿಗೆ ಗತಿಯಿಲ್ಲ. ಗತಿಯಿಲ್ಲವಾಗಿ ಶ್ರುತಿಯಿಲ್ಲ, ಶ್ರುತಿಯಿಲ್ಲವಾಗಿ ನಾದವಿಲ್ಲ. ನಾದವಿಲ್ಲಾಗಿ ಬಿಂದುವಿಲ್ಲ, ಬಿಂದುವಿಲ್ಲವಾಗಿ ಕಳೆಯಿಲ್ಲ. ಇಂತಿವೆಲ್ಲವೂ ಇಲ್ಲವಾಗಿ ಹೊದ್ದಲಿಲ್ಲ, ಹೊದ್ದಲಿಲ್ಲವಾಗಿ ಸಂದಿಲ್ಲ, ಸಂದಿಲ್ಲವಾಗಿ ಸಂದೇಹವಿಲ್ಲ. ನಿಃಕಳಂಕ ಮಲ್ಲಿಕಾರ್ಜುನನಲ್ಲದೆ ಎಲ್ಲಿಯೂ ಕಾಣೆ.
--------------
ಮೋಳಿಗೆ ಮಾರಯ್ಯ
ಎರಡಿಲ್ಲದ ಭೂಮಿಯಲ್ಲಿ ಬಯಲ ಪಟ್ಟಣ. ಆ ಪಟ್ಟಣಕ್ಕೆ ಒಡೆಯನಾದ ನಿರಂಜನನೆಂಬ ರಾಜನು ಸಂಗವಿಲ್ಲದ ಸ್ತ್ರೀಸಂಯೋಗದಿಂ ಶಿಶುವ ಪಡೆದು, ಆ ಶಿಶು ತಂಗಿಯನೊಡಗೂಡಿ ಪಂಚಮುಖವುಳ್ಳಾತನ ಪಡೆದು, ಆ ಪುತ್ರನ ಮಮಕಾರಶಕ್ತಿಯಿಂದ ಮೂವರು ಪುಟ್ಟಿದರು. ಆ ಮೂವರು ಮೂರುಪುರವ ನಿರ್ಮಿಸಿದರು. ಆ ಮೂರುಪುರ ಈರೈದು ನಾಲ್ಕು ದೇಶ, ಆ ದೇಶದಲ್ಲಿ ಎರಡು ಕುಲ, ಎಂಬತ್ತುನಾಲ್ಕು ಕುಲವಾಯಿತ್ತು. ಇಂತೀ ಎಲ್ಲವು ಯಾತರಿಂದಾಯಿತ್ತೆಂದರಿದು ಅದ ನುಂಗಿ ತಾನಳಿದುಳಿದು ಇರ್ಪಾತನೇ ಶರಣ. ಅಂಗಲಿಂಗಸಂಬಂದ್ಥಿ ಸರ್ವಾಂಗಲಿಂಗಿಯೆಂದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಐದರ ಮಧ್ಯದ ಕಣ್ಣ ಕಾಡಿನೊಳಗೆ ಬಿದ್ದಿದಾವೆ ಈರೈದು ಹೆಣನು ಬೆಂಬಳುವರು ಬಳಗ ಘನವಾದ ಕಾರಣ ಆ ಹೆಣನು ಬೇಯವು, ಕಾಡೂ ನಂದದು ಮಾಡು ಉರಿಯಿತ್ತು ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಎಂಟು ಯೋಗ ಆರು ಭೇದ ಮೂರು ಬಟ್ಟೆ ಐದು ಮುಟ್ಟು ಈರೈದು ಹಾದಿ ಹದಿನಾರು ಸಂಗ ನಾಲ್ಕು ಮೆಟ್ಟು ಎರಡುಸಂಚಾರ ಒಂದರ ಕಟ್ಟಿನಲ್ಲಿ ಮುಟ್ಟುಮಾಡಿ ನಿಲಿಸಿ, ದೃಷ್ಟದ ಇಷ್ಟದಲ್ಲಿ ಬೈಚಿಟ್ಟು, ಅವರವರ ಸ್ವಸ್ಥಾನದ ಕಟ್ಟಣೆಯಲ್ಲಿ ವಿಶ್ರಮಿಸಿ ಆ ಚಿತ್ತವ ಆ ಚಿತ್ತು ಒಡಗೂಡಿ ಇಪ್ಪುದೆ ಕ್ರಿಯಾಪಥಲಿಂಗಾಂಗಯೋಗ. ಇದನರಿಯದೆ ಮಾಡುವ ಯೋಗವೆಲ್ಲವೂ ತನ್ನಯ ಭವರೋಗ, ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಕಾಯಪುರವೆಂಬ ಪಟ್ಟಣದೊಳಗೆ; ಮನವೆಂಬ ಅರಸು, ತ್ರಿಗುಣವೆಂಬ ಪ್ರಧಾನರು, ವಶೀಕರಣವೆಂಬ ಸೇನಬೋವ ಸಂಚಲವೆಂಬ ತೇಜಿ, ಅಷ್ಟಮದವೆಂಬ ಆನೆ, ಈರೈದು (ಮನ್ನೆಯ) ನಾಯಕರು, ಇಪ್ಪತ್ತೈದು ಪ್ರಜೆ, ನೂರನಾಲ್ವತ್ತೆಂಟು ದೇಹವಿಕಾರವೆಂಬ ಪರಿವಾರ, ಈ ಸಂಭ್ರಮದಲ್ಲಿ ಮನೋರಾಜ್ಯಂಗೆಯ್ಯುತ್ತಿರಲು_ ಇತ್ತ ಶೂನ್ಯವೆಂಬ ಪಟ್ಟಣದೊಳಗೆ ಅನಾಮಿಕನೆಂಬ ಲಿಂಗದರಸು, ಅಜಾತನೆಂಬ ಶರಣ ಪ್ರಧಾನಿ ಪ್ರಪಂಚವೆಂಬ ದಳ ಮುರಿದು ಮೂವರಾಟ ಕೆಟ್ಟಿತ್ತು, ಅರಸು ಕೂಡಲಚೆನ್ನಸಂಗಯ್ಯನು, ಒಲಿದ ಕಾರಣ.
--------------
ಚನ್ನಬಸವಣ್ಣ
ತನುತ್ರಯದಲ್ಲಿ ಘನಂಗ ಪ್ರಾಣಸಂಬಂಧಿಯಾದವರ ತೋರಯ್ಯಾ, ನಿಮ್ಮ ಧರ್ಮ. ಅವಯವಂಗಳೆ ನಿಮ್ಮ ವದನಂಗಳಾಗಿ, ಅರ್ಪಿತವಲ್ಲದ ಅನರ್ಪಿತವ ಕೊಳ್ಳರಾಗಿ, ಐದಾರು ಪ್ರಸಾದದಲ್ಲಿ ಅನುಮಾನವಿಲ್ಲದೆ ನಿತ್ಯರಪ್ಪವರ, ಈರೈದು ಪಾದೋದಕದಲ್ಲಿ ವಿರಳವಿಲ್ಲದೆ ವಿಮಲರಪ್ಪವರ, ನೋಡಿ ಕಂಡೆಹೆನೆಂದಡೆ, ಎನಗೆ ಕಾಣಬಾರದು. ಅವರಿಚ್ಛಾಮಾತ್ರದಲ್ಲಿ ನೀನಿಪ್ಪೆಯಾದಂತೆ, ನಿನಗೆ ಕಾಣಬಹುದು. ಅಲ್ಲದ್ದಡೆ ನಿನಗೆಯೂ ಅಭೇದ್ಯ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಈರೈದು ತಲೆಯನರಿದು, ಧಾರೆವಟ್ಟಲನಿಕ್ಕಿ, ಧಾರುಣಿಯ ಮೇಲೆ ತಂದಿರಿಸಿದವರಾರೊ ? ಸೋಮ ಸೂರ್ಯರ ಹಿಡಿದೆಳೆತಂದು, ವಾರಿಧಿಯ ತಡೆಯಲ್ಲಿ ಓಲೆಗಳೆದವರಾರೊ ? ಊರಿಲ್ಲದ ಊರಿನಲ್ಲಿ[ಹೆ]ಮ್ಮಾರಿ ಹೊಕ್ಕುದ ಕಂಡು ಆರೈಯ ಹೋಗಿ [ನೀ] ನಾನಿಲ್ಲ ಗುಹೇಶ್ವರಾ:
--------------
ಅಲ್ಲಮಪ್ರಭುದೇವರು
ಆರು ಬಣ್ಣದ ಹಕ್ಕಿ, ತೋರಿದ ಗುರಿಯ ನುಂಗಿ ಮೀರಿ ನಿಂದುದು ಗಗನ ಮಂಡಲದಲ್ಲಿ. ಸಾರುತೈದೂದೆ ಹೋಗಿ ಮೀರಿ ಬರಬೇಡಾ ಎಂದು ಬೇರೆ ಮತ್ತೊಂದು ದಿಕ್ಕ ತೋರುತ್ತದೆ. ಮೂರುಕೋಣೆಯೊಳಗೆ ಈರೈದು ತಲೆಯುಂಟು. ನೋಡಿ ಬಂದಾ ಶಿಶು ಬೆಸಗೊಂಬುದು. ಪ್ರಾಣವಿಲ್ಲದ ಸೇನೆ ಪದ್ಮಸಂಖ್ಯೆಯು ಕೋಟೆದಾಳಿವರಿದುದು ಎಂಟುಜಾವದೊಳಗೆ. ಜಾಲಗಾರನ ಕೈಯ ಮಾಣಿಕ್ಯ ಸಿಕ್ಕದೆ ಆಳಿಗೊಂಡಿತ್ತು. ಜಗವ ಬೆಳುಮಾಡಿ, ಜಾಣ ಕವಿಗಳಿಗೆ ಎದೆ ದಲ್ಲಣ. ಬಳ್ಳೇಶ್ವರನ ಕನ್ನಡವು ಹೇಳುವಡೆ ಯುಗಸಂಖ್ಯೆ ಶಿವ ಶಿವಾ
--------------
ಬಳ್ಳೇಶ ಮಲ್ಲಯ್ಯ
ಈರೈದು ಸೀಮೆಯಿಂದಾರಯ್ಯ ಬಂದಾರೆ, ಓರಂತೆ ಅವರುವನು ನೀನೆಂಬೆನು; ಕಾರುಣ್ಯಕರ ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಅವರ ದ್ವಾರಕಿಂಕರನಾಗಿಯಾನಿಪ್ಪೆನು.
--------------
ಸಿದ್ಧರಾಮೇಶ್ವರ
ಮೂರು ಮೊಲೆಯನುಂಡು ಬಂದವ, ಈರೈದು ಕಂಡು ಬಂದವ ನೀನಾರು ಹೇಳಾ? ಸಂದಿಲ್ಲದ ಪಟ್ಟಣದಲ್ಲಿ ಬಂದು ನೊಂದೆಯಲ್ಲ! ಅಂದಿನ ಬೆಂಬಳಿಯ ಮರೆದು ಇಂದಿನ ಸಂದೇಹಕ್ಕೊಡಲಾಗಿ, ಈ ಉಭಯದ ಸಂದ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ
--------------
ಕೋಲ ಶಾಂತಯ್ಯ
ಮೂರುಸ್ಥಲದಲ್ಲಿ ಎಯ್ದಿಹೆನೆಂದಡೆ, ಮಲಮೂರು ಮುಟ್ಟಲೀಸದಿವೆ ನೋಡಾ. ಆರುಸ್ಥಲದಲ್ಲಿ ಕೂಡಿಹೆನೆಂದಡೆ, ಅರಿಷಡುವರ್ಗಂಗಳು ಹಗೆಯಾಗಿವೆ ನೋಡಾ. ಐದು ಗುಣದಲ್ಲಿ ಅರಿದೆಹೆನೆಂದಡೆ, ಈರೈದು ಕೊಂದು ಕೂಗುತ್ತವೆ ನೋಡಾ. ಇವರ ಸಂದನಳಿದು ಒಂದರಲ್ಲಿ ಕೂಡೆಹೆನೆಂದಡೆ, ಇಂದ್ರಿಯಂಗಳ ಬಂಧ ಬಿಡದು. ಈ ಉಭಯಸಂದೇಹ, ನೀನು ಎನ್ನಲ್ಲಿ ಬಂದಡೆ ಬಿಡುಗು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಾಲ ವೇಳೆಯನರಿತು ಕೂಗಿದ ಕೋಳಿಯ ಕಂಡು ಊರೆಲ್ಲರು ಬೆಳಗಾಯಿತ್ತೆಂದು ಏಳುವರಿಂದ ಕಡೆಯೆ ? ಹೇಳುವ ಕೇಳುವ ಮಾತ ಕೇಳಿ ಆರ ಮರೆದು ಮೂರನರಿದು ಈರೈದು ಕಂಡು ಬೇರೈದರಲ್ಲಿ ಗಾರಾಗದೆ, ಸಾರಿದೆ, ಕೆಡಬೇಡೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಾಭಿಮಂಡಲದೊಳಗೆ ಈರೈದು ಪದ್ಮದಳ, ಸದಮದ ಗಜಮಸ್ತಕದೊಳಗೆ ತೋರುತ್ತದೆ. ಅಕಾರ ಉಕಾರ ಮಕಾರ ಮರ್ಮಸ್ಥಾನ ತ್ರಿಕೂಟಸ್ಥಾನದ ಸಮರಸದ ಸುಖದಲ್ಲಿ ಬೆಳೆದ ಕಂದ ಮೂಲಾದಿಗಳ, ಹೊಸರಸದ ಅಮೃತವನು ಓಸರಿಸಿ, ದಣಿಯುಂಡ ತೃಪ್ತಿಯಿಂದ ಸುಖಿಯಾದೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತನುತ್ರಯದ ಗುಣದಲ್ಲಿ ತಾಮಸಿಯಲ್ಲ ಬಸವಣ್ಣ; ಮನತ್ರಯದಲ್ಲಿ ಮತ್ತನಲ್ಲ ಬಸವಣ್ಣ; ಮಲತ್ರಯದಲ್ಲಿ ಮಗ್ನನಲ್ಲ ಬಸವಣ್ಣ; ಲಿಂಗತ್ರಯದಲ್ಲಿ ನಿಪುಣ ಬಸವಣ್ಣ; ಐದಾರು ಪ್ರಸಾದದಲ್ಲಿ ಪ್ರಸನ್ನ ಬಸವಣ್ಣ; ಈರೈದು ಪಾದೋದಕದಲ್ಲಿ ಪ್ರಭಾವ ಬಸವಣ್ಣ; ಎರಡು ಮೂರು ಭಕ್ತಿಯಲ್ಲಿ ಸಂಪನ್ನ ಬಸವಣ್ಣ; ಮೂವತ್ತಾರು ತತ್ತ್ವದಿಂದತ್ತತ್ತ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ, ಫಲಪದಕ್ಕೆ ದೂರವಾದನಯ್ಯಾ ನಮ್ಮ ಬಸವಣ್ಣನು.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->