ಅಥವಾ

ಒಟ್ಟು 9 ಕಡೆಗಳಲ್ಲಿ , 4 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ಮುಳ್ಳುಮೊನೆಯ ಮೇಲೆ ಅರವತ್ತು ಆರು ಕೋಟಿ ಪಟ್ಟಣಂಗಳು ಪುಟ್ಟಿಇದ್ದಾವು ನೋಡಾ ! ಪಾತಾಳಲೋಕದಲ್ಲಿ ಆಧಾರವೆಂಬ ಠಾಣ್ಯ; ಬ್ರಹ್ಮನೆಂಬ ಮುಜುಮದಾರ. ಮತ್ರ್ಯಲೋಕದಲ್ಲಿ ಸ್ವಾಧಿಷ*ವೆಂಬ ಠಾಣ್ಯ; ವಿಷ್ಣುವೆಂಬ ಹುದ್ದೆಯದಾರ. ಸ್ವರ್ಗಲೋಕದಲ್ಲಿ ಮಣಿಪೂರಕವೆಂಬ ಠಾಣ್ಯ; ರುದ್ರನೆಂಬ ಮಹಲದಾರ. ತತ್ಪುರುಷಲೋಕದಲ್ಲಿ ಅನಾಹತವೆಂಬ ಠಾಣ್ಯ; ಈಶ್ವರನೆಂಬ ಗೌಡ . ಈಶಾನ್ಯಲೋಕದಲ್ಲಿ ವಿಶುದ್ಧಿಯೆಂಬ ಠಾಣ್ಯ; ಸದಾಶಿವನೆಂಬ ಪ್ರಧಾನಿ. ಅಂಬರಲೋಕದಲ್ಲಿ ಆಜ್ಞೇಯವೆಂಬ ಠಾಣ್ಯ; ಪರಶಿವನೆಂಬ ಅರಸು. ನಾದಲಕ್ಷ ಬಿಂದುಲಕ್ಷ ಕಳಾಲಕ್ಷ ಇಂತೀ ತ್ರಿವಿಧಲಕ್ಷವನೊಳಕೊಂಡು ಪರಶಿವನೆಂಬ ಅರಸು ಕೂಡಿ ವಿಶ್ವತೋ ಬೆಳಗಿಂಗೆ ಬೆಳಗಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆಧಾರದಲ್ಲಿ ಬ್ರಹ್ಮನೆಂಬ ಮೂರ್ತಿ. ಸ್ವಾಧಿಷ*ದಲ್ಲಿ ವಿಷ್ಣುವೆಂಬ ಮೂರ್ತಿ. ಮಣಿಪೂರಕದಲ್ಲಿ ರುದ್ರನೆಂಬ ಮೂರ್ತಿ ಅನಾಹತದಲ್ಲಿ ಈಶ್ವರನೆಂಬ ಮೂರ್ತಿ ವಿಶುದ್ಧಿಯಲ್ಲಿ ಸದಾಶಿವನೆಂಬ ಮೂರ್ತಿ ಆಜ್ಞೇಯದಲ್ಲಿ ಪರಶಿವನೆಂಬ ಮೂರ್ತಿ ಅಲ್ಲಿಂದತ್ತತ್ತಲೆ ನಿರವಯ ಪರಬ್ರಹ್ಮವು ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ದೇಶದ ಮೇಲೆ ಮೂರು ಮಂಡಲವ ಕಂಡೆನಯ್ಯ, ಮೂರು ಮಂಡಲದ ಮೇಲೆ ಒಬ್ಬ ಪುರುಷನ ಕಂಡೆನಯ್ಯ. ಆ ಪುರುಷನ ಸತಿಯಳು, ತತ್ಪುರುಷಲೋಕಕ್ಕೆ ಬಂದು, ಈಶ್ವರನೆಂಬ ಮಗನ ಕೂಡಿಕೊಂಡು, ನಿಟಿಲವೆಂಬ ಘಟದಲ್ಲಿ ನಿಂದು, ಬ್ರಹ್ಮರಂಧ್ರವೆಂಬ ಪೌಳಿಯಂ ಪೊಕ್ಕು, ಶಿಖಾಚಕ್ರವೆಂಬ ಮೇರುವೆಯ ಹತ್ತಿ, ಪಶ್ಚಿಮಚಕ್ರವೆಂಬ ನಿರಂಜನಜ್ಯೋತಿಯ ಕೂಡಿ, ಅತ್ತತ್ತಲೆ ಪರಕ್ಕೆ ಪರವ ತೋರುತಿಪ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಓಂಕಾರವೆಂಬ ಲಿಂಗದಲ್ಲಿ ನುಡಿದಾಡುವನಾರಯ್ಯ ? ನೋಡುವನಾರಯ್ಯ? ಕೊಂಬುವನಾರಯ್ಯ ? ಇಂತೀ ಭೇದವರಿತು ಸದಾಶಿವಲಿಂಗದಲ್ಲಿ ನೆಲೆಯಂಗೊಂಡು ಐದು ಅಂಗವ ಗರ್ಭೀಕರಿಸಿಕೊಂಡು ಈಶ್ವರನೆಂಬ ಮೆಟ್ಟಿಗೆಯ ಮೆಟ್ಟಿ ಬ್ರಹ್ಮ ವಿಷ್ಣು ರುದ್ರಾದಿಗಳೆಂಬ ಭವಸಾಗರವ ಹರಿದು ಒಂಬತ್ತು ನೆಲೆಯ ಮೇಲೆ ನಡೆದು ಹೋಗುವ ಗಂಭೀರ ನಿರವಯನೆಂಬ[ನ] ಸತಿಯಳುವಿಡಿದು ಎಂತಿರ್ದಂತಿರ್ದಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ
--------------
ಜಕ್ಕಣಯ್ಯ
ಎಂಟು ಮೇರುವೆಯ ಮೇಲೆ ಒಬ್ಬ ಸತಿಯಳು ನಿಂದಿರುವುದ ಕಂಡೆನಯ್ಯ. ಆ ಸತಿಯಳ ಬಸುರಲ್ಲಿ ಒಬ್ಬ ಬಾಲಕ ಹುಟ್ಟಿ, ಈಶ್ವರನೆಂಬ ಗದ್ದುಗೆಯ ಮೇಲೆ ನಿಂದು, ಬ್ರಹ್ಮ ವಿಷ್ಣು ರುದ್ರಾದಿಗಳು ಗುಣತ್ರಯಂಗಳನಳಿದು ಜ್ಞಾನವೆಂಬ ಸತಿಯಳ ಕೂಡಿಕೊಂಡು. ಸಾಸಿರದಳ ಕಮಲವಂ ಪೊಕ್ಕು ಲಿಂಗಧ್ಯಾನವ ಮಾಡುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮನೆಂಬ ಪೂಜಾರಿಗೆ ಬ್ರಹ್ಮನೇ ಅಧಿದೈವನಾಗಿ ಪೂರ್ವದಿಕ್ಕಿನೊಳು ಭಕ್ತಿಸ್ಥಲವೆನಿಸಿತ್ತು. ವಿಷ್ಣುನೆಂಬ ಪೂಜಾರಿಗೆ ವಿಷ್ಣುವೆ ಅಧಿದೈವನಾಗಿ ಪಶ್ಚಿಮದಿಕ್ಕಿನೊಳು ಮಹೇಶ್ವರಸ್ಥಲವೆನಿಸಿತ್ತು. ರುದ್ರನೆಂಬ ಪೂಜಾರಿಗೆ ರುದ್ರನೇ ಅಧಿದೈವನಾಗಿ ದಕ್ಷಿಣದಿಕ್ಕಿನೊಳು ಪ್ರಸಾದಿಸ್ಥಲವೆನಿಸಿತ್ತು. ಈಶ್ವರನೆಂಬ ಪೂಜಾರಿಗೆ ಈಶ್ವರನೇ ಅಧಿದೈವನಾಗಿ ಉತ್ತರದಿಕ್ಕಿನೊಳು ಪ್ರಾಣಲಿಂಗಿಸ್ಥಲವೆನಿಸಿತ್ತು. ಸದಾಶಿವನೆಂಬ ಪೂಜಾರಿಗೆ ಸದಾಶಿವನೇ ಅಧಿದೈವನಾಗಿ ಊಧ್ರ್ವದಿಕ್ಕಿನೊಳು ಶರಣಸ್ಥಲವೆನಿಸಿತ್ತು. ಮಹಾದೇವನೆಂಬ ಪೂಜಾರಿಗೆ ಮಹಾದೇವನೇ ಅಧಿದೈವನಾಗಿ ಪಾತಾಳದಿಕ್ಕಿನೊಳು ಐಕ್ಯಸ್ಥಲವೆನಿಸಿತ್ತು. ಇಂತು ತತ್ವವನೆ ಅರಿತು ನನ್ನ ನಾ ಮರೆತು ನಿನ್ನೊಳು ಬೆರೆತೆನಾಗಿ ನೀ ನಾನೆಂಬ ಉಭಯ ಭೇದವನಳಿಸಿ ಸಂದಿಲ್ಲದೆ ಒಂದಾಗಿ ತೋರ್ದ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯಯೆಂಬ ಷಡುಸ್ಥಲಕ್ಕೆ ಷಡ್ವಿಧಮೂರ್ತಿಗಳಿಪ್ಪವು ನೋಡಾ. ಅದು ಹೇಗೆಂದಡೆ : ಆಧಾರದಲ್ಲಿ ಬ್ರಹ್ಮನೆಂಬ ಮೂರ್ತಿ, ಸ್ವಾಧಿಷಾ*ನದಲ್ಲಿ ವಿಷ್ಣುವೆಂಬ ಮೂರ್ತಿ, ಮಣಿಪೂರಕದಲ್ಲಿ ರುದ್ರನೆಂಬ ಮೂರ್ತಿ, ಅನಾಹತದಲ್ಲಿ ಈಶ್ವರನೆಂಬ ಮೂರ್ತಿ, ವಿಶುದ್ಧಿಯಲ್ಲಿ ಸದಾಶಿವನೆಂಬ ಮೂರ್ತಿ, ಆಜ್ಞೇಯದಲ್ಲಿ ಪರಶಿವನೆಂಬ ಮೂರ್ತಿ, ಇಂತೀ ಭೇದವ ಮರೆತು ಇರಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಲಿಂಗದೇವರ ಪಾದದ ನೆನೆವ ನಿತ್ಯಮಾಡಿ, ಹೇಮದ ಕೂಟದ ಹಿರಿಯರುಗಳು ಆಶೀರ್ವಾದ ಬಿನ್ನಹ. ಅಂಗದ ಮೇಲೆ ಲಿಂಗವನು ಕಟ್ಟಿ ಶಿವಭಕ್ತರಾದ ಮೇಲೆ ಭವಿಗಳು ಇದ್ದಲ್ಲಿ ಶಿವಶಾಸ್ತ್ರವ ಓದಿ, ಭವಿಗಳ ಪಂಕ್ತಿಯಲ್ಲಿ ಅನ್ನವನು ಉಣಲಾಗದೆಂದು ಬರಿಯ ಮಾತಿನ ಬಣಬೆಯ ಹಿಡಕೊಂಡು ತಿರುಗುವ ನರಗುರಿಗಳು, ಆಧಾರಚಕ್ರದಲ್ಲಿ ಬ್ರಹ್ಮನೆಂಬೊ ಭವಿ ಹುಟ್ಟಿ, ಹೊರಗೆ ಪೃಥ್ವಿತತ್ವದ ಸ್ವಾಧಿಷ್ಟದಲ್ಲಿ ವಿಷ್ಣುವೆಂಬೊ ಭವಿ ಹುಟ್ಟಿ, ಒಳಗೆ ಅಪ್ಪುತತ್ವದ ಹೊರಗೆ ಅಪ್ಪುತತ್ವದ ಮಣಿಪೂರಕದಲ್ಲಿ ರುದ್ರನೆಂಬೊ ಭವಿ ಹುಟ್ಟಿ, ಒಳಗೆ ತೇಜತತ್ವದ ಹೊರಗೆ ತೇಜತತ್ವದ ಅನಾಹತದಲ್ಲಿ ಈಶ್ವರನೆಂಬೊ ಭವಿ ಹುಟ್ಟಿ, ಒಳಗೆ ವಾಯುತತ್ವದ ಹೊರಗೆ ವಾಯುತತ್ವದ ವಿಶುದ್ಧಿಯಲ್ಲಿ ಸದಾಶಿವನೆಂಬ ಭವಿ ಹುಟ್ಟಿ, ಒಳಗೆ ಆಕಾಶತತ್ವದ ಹೊರಗೆ ಆಕಾಶತತ್ವದ ಅಗ್ನಿಯಿಂದ ಪರಬ್ರಹ್ಮನೆಂಬೊ ಭವಿ ಹುಟ್ಟಿ. ಇಂತೀ ಇವರು ಆರುಮಂದಿ ಭವಿಗಳು. ಭಕ್ತನ ಅಂತರಂಗದೊಳು ಹುಟ್ಟಿ, ಅಂತರಂಗದೊಳು ಬೆಳೆದು, ಬೇರೊಂದು ವಿಷ್ಣುಲಿಂಗವಾಗಿ ಬಂದು ಪೂಜೆಗೊಂಬುತಿದರು ಕಾಣಿರೊ. ಅದು ಎಂತೆಂದರೆ : ಬ್ರಹ್ಮನೆಂಬ ಭವಿ, ವಿಷ್ಣುವೆಂಬ ಭವಿ, ರುದ್ರನೆಂಬ ಭವಿ. ಇಂತಿವರು ಮೂರುಮಂದಿ ಭವಿಗಳು ಒಂದುಗೂಡಲಿಕೆ ಈಶ್ವರನೆಂಬ ಲಿಂಗಾಕಾರ ಭವಿಯಾಯಿತು ಕಾಣಿರೊ. ಆ ಲಿಂಗದ ರೂಪನು ನೋಡಿ, ಶಿಲ್ಪಕಾರರು ತಮ್ಮ ಹೊಟ್ಟೆಕಿಚ್ಚಿಗೆ ಕಟೆದಿಟ್ಟು ಮಾರುವ ಶಿಲೆಯ ಲಿಂಗವ ತಂದು, ಶಿರದಲ್ಲಿ ಕಟ್ಟಿ, ಕರದಲ್ಲಿ ಪೂಜೆ ಮಾಡಿ ಶಿವಭಕ್ತರೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳ ಅಂತರಂಗದೊಳು ಕಾಮವೆಂಬೊ ಭವಿ, ಕ್ರೋಧವೆಂಬೊ ಭವಿ, ಲೋಭವೆಂಬೊ ಭವಿ, ಮೋಹವೆಂಬೊ ಭವಿ, ಮದವೆಂಬೊ ಭವಿ, ಮತ್ಸರವೆಂಬೊ ಭವಿ. ಇಂತೀ [ಈ]ರಾರು ಹನ್ನೆರಡುಮಂದಿ ಭವಿಗಳನು ಹತ್ತೇಲಿಯಿಟ್ಟುಕೊಂಡು, ಕೂಡಿಯುಂಡು ಕುಲವನರಸುವಂಥ ಕೋತಿಗಳು ಮಾಡಿದ ಭಕ್ತಿ ಏನಾಯಿತೆಂದರೆ, ಅಜ್ಜಿಗೆ ಅರಸಿನ ಚಿಂತೆಯಾದರೆ, ಮಗಳಿಗೆ ಮಿಂಡಗಾರನ ಚಿಂತೆಯನು ಮಾಡಿಕೊಂಡು, ಹಲವು ಮಿಂಡಗಾರಗೆ ಸೆರಗುಹಾಸಿ ಮಾಡಿಕೊಂಡು ಹೋದಂತಾದೀತು ಕಾಣಿರೊ. ಅದು ಎಂತೆಂದರೆ : ಒಂಕಾರ ಪರಬ್ರಹ್ಮನೆಂಬೊ ವಿಪ್ರನ ಗರ್ಭದಲ್ಲಿ ನಕಾರವೆಂಬೊ ಅಕ್ಷರ ಹುಟ್ಟಿ, ಸದ್ಯೋಜಾತಮುಖದಲ್ಲಿ ಬ್ರಹ್ಮನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ಹುಟ್ಟಿಸಬೇಕೆಂದು ಚಿಂತೆಯನು ತಾಳಿ, ಪೃಥ್ವಿತತ್ವವೆಂಬೊ ಆದಿ ಆಧಾರ ಬುಡವಾಗಿಯಿದ್ದ ಕಾಣಿರೊ. ಮಕಾರವೆಂಬೊ ಅಕ್ಷರ ಹುಟ್ಟಿ, ವಾಮದೇವಮುಖದಲ್ಲಿ ವಿಷ್ಣುವೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳಿಗೆಲ್ಲ ರಕ್ಷಿಸಬೇಕೆಂಬೊ ಚಿಂತೆಯನು ತಾಳಿ, ಅಪ್ಪುತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಶಿಕಾರವೆಂಬೊ ಅಕ್ಷರ ಹುಟ್ಟಿ, ಅಘೋರಮುಖದಲ್ಲಿ ರುದ್ರನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ಭಕ್ಷಿಸಬೇಕೆಂಬೊ ಚಿಂತೆಯನು ತಾಳಿ, ತೇಜತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ವಕಾರವೆಂಬೊ ಅಕ್ಷರ ಹುಟ್ಟಿ, ತತ್ಪುರುಷಮುಖದಲ್ಲಿ ಈಶ್ವರನೆಂಬೊ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳಿಗೆಲ್ಲ ಅಂಗದೊಳಗೆ ಪ್ರಾಣಲಿಂಗವಾಗಿ ಪೂಜೆಗೊಳಬೇಕೆಂಬ ಚಿಂತೆಯನು ತಾಳಿ, ವಾಯುತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಯಕಾರವಂಬೊ ಅಕ್ಷರ ಹುಟ್ಟಿ, ಈಶಾನ್ಯಮುಖದಲ್ಲಿ ಸದಾಶಿವನೆಂಬ ಭವಿಯಾಗಿ ಬಂದು, ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆಲ್ಲ ತನ್ನ ಅಂತರಂಗದೊಳಗೆ ಇಂಬಿಟ್ಟು ಇರಬೇಕೆಂಬ ಚಿಂತೆಯನು ತಾಳಿ, ಆಕಾಶತತ್ವವೆಂಬೊ ಆದಿ ಆಧಾರದ ಬುಡವಾಗಿಯಿದ್ದ ಕಾಣಿರೊ. ಅದು ಎಂತೆಂದಡೆ : ಇಂತೀ ಇಪ್ಪತ್ತೈದು ತತ್ವಗಳ ಆಧಾರದಲ್ಲಿ ಹುಟ್ಟಿದ ಭಕ್ತರೆಂಬ ಕೊಂಬೆಗಳು ಮಾಡಿದ ಭಕ್ತಿಯೆನಗಾಯಿತು ಅಂದರೆ, ಪೃಥ್ವಿತತ್ವದ ಆಧಾರದಲ್ಲಿ ಹುಟ್ಟಿದ ಕಸಕಡ್ಡಿಗಳೆಲ್ಲ ಕುಸುಕಿಂದ ಹರಕೊಂಡು ತಿಂದು ಹರಿಹೋದಂತೆ ಕಾಣಿರೊ. ಅದು ಎಂತೆಂದರೆ : ಭವಿಗಳ ಆಧಾರದಲ್ಲಿ ಭಕ್ತರೆಂಬ ಕೊಂಬೆಗಳು ಹುಟ್ಟಿ ಪೃಥ್ವಿತತ್ವವೆಂಬೊ ಭವಿಯ ಹುಟ್ಟಿಸೆಂದರೆ ಹುಟ್ಟಿಸಲಿಲ್ಲ. ಅಪ್ಪುತತ್ವವೆಂಬೊ ಭವಿಯ ರಕ್ಷಿಸಿಯೆಂದರೆ, ರಕ್ಷಿಸಿಯಿದ್ದಿಲ್ಲ. ತೇಜತತ್ವಯೆಂಬೊ ಭವಿಯ ಭಕ್ಷಿಸಿಯೆಂದರೆ, ಭಕ್ಷಿಸಿಯಿದ್ದಿಲ್ಲ. ವಾಯುತತ್ವವೆಂಬೊ ಭವಿಯ ಅಂಗದೊಳಗೆ ಲಿಂಗವಾಗಿ ಪೂಜೆಗೊಂಡಿದ್ದರೆ ಪೂಜೆಗೊಂಡಿದ್ದಿಲ್ಲಾ. ಆಕಾಶತತ್ವಯೆಂಬೊ ಭವಿಯನು ತಮ್ಮ ಅಂತರಂಗದೊಳಗೆ ಮರೆಯೊಳಗೆ ಇಂಬಿಟ್ಟುಕೊಂಡು ಇರಲಾರದ ಅಜ್ಞಾನಿಗಳು. ಪೃಥ್ವಿತತ್ವವೆಂಬೊ ಭವಿ ಆಧಾರದಲ್ಲಿ ಹುಟ್ಟಿ, ಭವಿ ಆಧಾರದಲ್ಲಿ ಬೆಳೆದು, ಆಕಾಶತತ್ವವೆಂಬೊ ಭವಿಯ ಅಂತರಂಗದ ಮರೆಯಲ್ಲಿ ಅಡಗಿಕೊಂಡಿದ ಅಜ್ಞಾನಿಗಳು. ಬ್ರಹ್ಮನೆಂಬೊ ಭವಿ, ವಿಷ್ಣುವೆಂಬೊ ಭವಿ, ರುದ್ರನೆಂಬೊ ಭವಿ. ಮೂವರು ತ್ರಿಮೂರ್ತಿಗಳು ಕೂಡಿ ಏಕಮೂರ್ತಿಯಾದ ಆಕಾರಲಿಂಗವನು ತಂದು, ತಮ್ಮ ಶಿರದಲ್ಲಿ ಕಟ್ಟಿಕೊಂಡು ಶಿವಭಕ್ತನೆ ಹೆಚ್ಚು, ಭವಿ ಕಡಿಮೆಯೆಂದು ಕೈಯಲ್ಲಿ ಕಂಜರದ ಬಾಕನೆ ಹಿಡಿದುಕೊಂಡು, ಕೆಂಜಡೆಯ ಬಿಟ್ಟುಕೊಂಡು, ವೀರಗಾಸೆಯಂತೆ ಕುಣಿದಾಡಿ, ಕೂಗಿ ಕೂಗಿ ಹೇಳುವ ಕುನ್ನಿಗಳು ಮಾಡಿದ ಭಕ್ತಿಯೇನಾಯಿತೆಂದರೆ, ಕೈಲಾಸದ ನಾಯಿಗಳು ಕೈಮೈಯನ್ನ ಹರಕೊಂಡು, ವೈಹಾಳಿಯ ಬಯಲಿಗೆ ಹೋಗಿ, ಒದರಿದರೆ, ಸತ್ತಂತಾಯಿತೆಂದು ಇಕ್ಕುವೆನು ಮುಂಡಿಗೆಯ. ಇದನೆತ್ತುವರಾರುಂಟೊ, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
--------------
ಸರ್ವೇಶ್ವರಲಿಂಗ
ಆದಿ ಅನಾದಿಯಿಲ್ಲದಂದು, ಸಾಧ್ಯ ಅಸಾಧ್ಯವಿಲ್ಲದಂದು, ಸ್ಥೂಲ ಸೂಕ್ಷ್ಮವೆಂಬ ಮೂರ್ತಿಗಳಿಲ್ಲದಂದು, ಸಾಕಾರ ನಿರಾಕಾರವೆಂಬ ವಾಕು ಹುಟ್ಟದಂದು, ಶಂಕರ ಶಶಿಧರ ಈಶ್ವರನೆಂಬ ಗಣಾಧೀಶ್ವರರಿಲ್ಲದಂದು, ಉಮೆಯ ಕಲ್ಯಾಣವಿಲ್ಲದಂದು, ಶಿವರತಿ ಮಹಾರತಿ ಬಸವಣ್ಣನಿಂದಾಯಿತ್ತು. ಸರ್ವವಿಸ್ತೀರ್ಣವ ನೀಕರಿಸಿ ಶಿವಲಿಂಗಾರ್ಚನೆಯ ತೋರಿದ. ನಿತ್ಯಲಿಂರ್ಗಾಚನೆಯಲ್ಲಿ ಪ್ರಸಾದಧ್ಯಾನ, ಜಂಗಮಾರ್ಚನೆಯಲ್ಲಿ ಪ್ರಸಾದಭೋಗ ಎಂಬುದನು ಸಂಗನಬಸವಣ್ಣನಲ್ಲದೆ ಮತ್ತಾರೂ ಅರಿಯರು. ಭಕ್ತಿಯ ಕುಳಸ್ಥಳವನೂ ಭಕ್ತಿಯ ಸಾರಾಯವನೂ ಮುನ್ನವೆ ಅತಿರಥ ಸಮರಥರೆಲ್ಲರೂ ಅರಿಯರು. ನಿಮ್ಮ ಬಸವಣ್ಣನಿಂತಹ ಸ್ವತಂತ್ರನಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
-->