ಅಥವಾ

ಒಟ್ಟು 12 ಕಡೆಗಳಲ್ಲಿ , 8 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಡಜ ಇಪ್ಪತ್ತೊಂದು ಲಕ್ಷ, ಪಿಂಡಜ ಇಪ್ಪತ್ತೊಂದು ಲಕ್ಷ, ಉದ್ಬಿಜ ಇಪ್ಪತ್ತೊಂದು ಲಕ್ಷ, ಜರಾಯುಜ ಇಪ್ಪತ್ತೊಂದು ಲಕ್ಷ, ಇಂತು ಎಂಬತ್ತುನಾಲ್ಕುಲಕ್ಷ ಜೀವರಾಶಿಗಳೊಳಗೆ ಒಂದೊಂದು ಜನ್ಮದೊಳಗೆ ಸಹಸ್ರ ಸಹಸ್ರವೇಳೆ ಹುಟ್ಟಿಬಂದ ಅನೇಕ ದುಃಖವಂತಿರಲಿ. ಮುಂದೆ ಮನುಷ್ಯದೇಹವಿಡಿದು ಬಂದ ದುಃಖಮಂ ಪೇಳ್ವೆನದೆಂತೆನೆ : ತಂದೆಯ ವಿಕಾರದದೆಸೆಯಿಂದೆ ಬಂದು ಬಿಂದುರೂಪಾಗಿ, ತಾಯಿಯ ಬಸುರಲ್ಲಿ ನಿಂದು ಒಂಬತ್ತುತಿಂಗಳ ಪರಿಯಂತರ ಅವಯವಂಗಳು ಬಲಿದು ಪಿಂಡವರ್ಧನವಾಗಿ, ಕದ್ದ ಕಳ್ಳನ ಹೆಡಗೈಯಕಟ್ಟಿ ಸೆರೆಮನೆಯಲ್ಲಿ ಕುಳ್ಳಿರಿಸುವಂತೆ, ಗರ್ಭವೆಂಬ ಸೆರೆಮನೆಯಲ್ಲಿ ಶಿಶುವು ಮುಚ್ಚಿದ ಕಣ್ಣು, ಮುಗಿದ ಬಾಯಾಗಿ, ಕುಕ್ಕುಟಾಸನದಲ್ಲಿ ಕುಳ್ಳಿರ್ದು, ಕಡಿವ ಜಂತುಜಂಗುಳಿಯ ಬಾಧೆ, ಸುಡುವ ಜಠರಾಗ್ನಿಯ ಬಾಧೆ, ಎಡದಲ್ಲಿ ಮೂತ್ರದ ತಡಿಕೆಯ ಬಾಧೆ, ಬಲದಲ್ಲಿ ಅಮೇಧ್ಯದ ಹಡಿಕೆಯ ಬಾಧೆ, ಇಂತಿವು ಮೊದಲಾದನಂತಕೋಟಿ ಬಾಧೆಗಳಿಂದೆ ದಿನದಿನಕ್ಕೆ ದುಃಖಮಂಬಡುತಿರ್ದು, ಆ ಮೇಲೆ ಜಾತಿಸ್ಮರತ್ವ ಉದಯವಾಗಿ, ತನ್ನ ಹಿಂದಣ ಧರ್ಮಕರ್ಮಂಗಳ ಪುಣ್ಯಪಾಪಂಗಳ ಅರಹು ಮರಹುಗಳನಾರೈದು ನೋಡಿ, ಹಿಂದರಿಯದ ಪಾಪದ ದೆಸೆಯಿಂದೆ ಈ ಗರ್ಭನರಕಕ್ಕೆ ಬಂದೆ, ಇನ್ನು ಮುಂದೆ ತೆರನೇನೆಂದು ತನ್ನೊಳಗೆ ತಾನೆ ಚಿಂತಿಸಿ ಸರ್ವರಿಗೆ ಪರಮೇಶ್ವರನೇ ಕರ್ತನು, ಸರ್ವರ ಭವಪಾಶಂಗಳ ಛೇದಿಸುವಾತನು ಪರಮೇಶ್ವರನೆಂದರಿದು, ಮನದಲ್ಲಿ ನಿಶ್ಚೈಸಿಕೊಂಡು ಆ ಪರಮೇಶ್ವರಂಗೆ ಶಿವಧೋ ಶಿವಧೋ ಎಂದು ಮೊರೆಯಿಡುತ್ತ ಶಿವಧ್ಯಾನಮಂ ಮಾಳ್ಪ ಸಮಯದಲ್ಲಿ ಕೋಟಿಸಿಡಿಲು ಹೊಯ್ದಂತೆ ವಿಷ್ಣುಪ್ರಸೂತಿಯೆಂಬ ಗಾಳಿ ಬೀಸಲು, ಅದಕಂಡು ಥರಥರನೆ ನಡುಗಿ ಧ್ಯಾನಪಲ್ಲಟವಾಗಿ ದಿಗ್‍ಭ್ರಮಣೆಗೊಂಡು ಊಧ್ರ್ವಮುಖವಾಗಿ ಕುಳಿತಿರ್ದ ಶಿಶುವು ಗಿರ್ರನೆ ತಿರುಗಿ ತಲೆಕೆಳಗಾಗಿ ಕರ್ತಾರನ ಕಂಬೆಚ್ಚಿನಲ್ಲಿ ಚಿನ್ನದ ಸಲಾಕೆ ತೆಗವಂತೆ, ಬಚ್ಚಲಹುಳುವಿನಂದದಿ ಯೋನಿಯೆಂಬ ಸೂಕ್ಷ್ಮದ್ವಾರದಿಂದೆ ಪೊರಮಟ್ಟು ಹುಟ್ಟಿದಲ್ಲಿ ಕೋಟಿಬಾಧೆಗಳಿಂದ ನೊಂದು ಹವ್ವನೆ ಹಾರಿ ಕಡುದುಃಖಮಂಬಟ್ಟು ಪಿಂದಣ ಜಾತಿಸ್ಮರತ್ವ ಕೆಟ್ಟು, ಮತಿ ಮಸುಳಿಸಿ, ತನ್ನ ಮಲಮೂತ್ರಂಗಳಲ್ಲಿ ತಾ ಹೊರಳಾಡಿ ಬಾಲಲೀಲೆಯ ಸುಖದುಃಖಂಗಳನನುಭವಿಸಿ, ಆ ಬಾಲಲೀಲೆಯು ಹಿಂದುಳಿದ ಮೇಲೆ ಯೌವನದ ವಯಸ್ಸೊದಗಿದಲ್ಲಿ, ಕಾಮದಲ್ಲಿ ಕರಗಿ ಕ್ರೋಧದಲ್ಲಿ ಕೊರಗಿ ಮದಮತ್ಸರಂಗಳಲ್ಲಿ ಮುಂದುಗೆಟ್ಟು ನಾನಾ ವ್ಯಾಪಾರವನಂಗೀಕರಿಸಿ ಬಂದ ಯೋನಿಯೆಂದರಿಯದೆ, ಉಂಡ ಮೊಲೆಯೆಂದರಿಯದೆ, ಕಾಮವಿಕಾರ ತಲೆಗೇರಿ ವಿಷಯಾತುರನಾಗಿ, ಈಳಿಗಾರನ ದೆಸೆಯಿಂದ ಈಚಲಮರ ನಿಸ್ಸಾರವಾದಂತೆ, ಸ್ತ್ರೀಯರ ಸಂಗದಿಂದೆ ದೇಹದೊಳಗಣ ಊರ್ಧ್ವಬಿಂದು ಜಾರಿ ಜಾರಿ ಇಳಿದು ಸೋರಿ ಸೋರಿ ಹೋಗಿ ದೇಹವು ನಿಸ್ಸಾರವಾಗಿ, ಯೌವನದ ಬಲಗೆಟ್ಟು ಮುಪ್ಪಾವರಿಸಿ ಅಚೇತನಗೊಂಡು ಸರ್ವಾಂಗವೆಲ್ಲ ನೆರೆತೆರೆಗಳಿಂದ ಮುಸುಕಲ್ಪಟ್ಟಾತನಾಗಿ, ಆದ್ಥಿ ವ್ಯಾದ್ಥಿ ವಿಪತ್ತು ರೋಗ ರುಜೆಗಳಿಂದೆ ಬಹು ದುಃಖಬಟ್ಟು, ಎದೆ ಗೂಡುಗಟ್ಟಿ, ಬೆನ್ನು ಬಾಗಿ, ಕಣ್ಣು ಒಳನಟ್ಟು, ಶರೀರ ಎಳತಾಟಗೊಂಡು, ಕಾಲಮೇಲೆ ಕೈಯನೂರಿ ಕೋಲವಿಡಿದು ಏಳುತ್ತ, ನಾನಾ ತೆರದ ದುಃಖಧಾವತಿಯಿಂದೆ ಆತ್ಮ ಕೆಟ್ಟು ನಷ್ಟವಾಗಿ ಹೋಯಿತ್ತು ನೋಡಾ. ಇದ ಕಂಡು ನಾನಂಜಿ ಮರಳಿ ಜನ್ಮಕ್ಕೆ ಬರಲಾರದೆ ನಿಮ್ಮ ಮೊರೆಹೊಕ್ಕೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಹೋಗುವ ಬನ್ನಿರಯ್ಯ ; ಶಕ್ತಿಪಾತವಾದ ಶಿವಯೋಗೀಶ್ವರರು ಶಿವಭಕ್ತರು ಹೋಗುವ ಬನ್ನಿರಯ್ಯ. ಸುಕ್ಷೇತ್ರದಲ್ಲಿರ್ಪ ಮಹಲಿಂಗದರುಶನಕೆ ಹೋಗುವ ಬನ್ನಿರಯ್ಯ. ಜೀವಸಂಚಾರವೆಂಬ ಪ್ರಾಕೃತವೆನಿಸುವ ಅಧೋಕುಂಡಲಿಸ್ವರೂಪಮಾದ ಅಹಂ ಎಂಬ ಹೆಬ್ಬಟ್ಟೆಯಂ ಬಿಟ್ಟು, ಸಜ್ಜೀವವೆಂಬ ವೈಕೃತವೆನಿಸುವ ಮಧ್ಯಕುಂಡಲಿಸ್ವರೂಪಮಾದ ಸೋಹಮೆಂಬ ಸಣ್ಣಬಟ್ಟೆಯ ಹಿಡಿದು ಹೋಗುವ ಬನ್ನಿರಯ್ಯ ಮಹಲಿಂಗದರುಶನಕೆ. ಕೇವಲ ಶಿವಯೋಗವೆಂಬ ಏಕವೆನಿಸುವ ಊಧ್ರ್ವಕುಂಡಲಿಸ್ವರೂಪಮಾದ ಓಂ ಎಂಬ ನುಸುಳುಗಂಡಿಯಂ ನುಸಿದು ಹೋಗುವ ಬನ್ನಿರಯ್ಯ ಮಹಲಿಂಗದರುಶನಕೆ. ದ್ವಯಮಂಡಲವ ಭ್ರೂಮಧ್ಯವೆಂಬ ಮಹಾಮೇರುವ ಮಧ್ಯದಲ್ಲಿ ಏಕಮಂಡಲಾಕಾರ ಮಾಡಿ, ಆ ಕಮಲಮಧ್ಯದಲ್ಲಿ ಮೂರ್ತಿಗೊಂಡಿಪ್ಪ ಮಹಾಲಿಂಗದಲ್ಲಿ ಜೀವಪರಮರಿಬ್ಬರನೇಕಾರ್ಥವಂ ಮಾಡಿ, ಶಾಂಭವೀಮುದ್ರಾನುಸಂಧಾನದಿಂದೆ ಅಧೋಮುಖಕಮಲವೆಲ್ಲ ಊಧ್ರ್ವಮುಖವಾಗಿ, ಆ ಮಹಾಲಿಂಗವ ನೋಡುತಿರಲು ಆ ಕಮಲಸೂತ್ರವಿಡಿದಿಹ ಷಡಾಧಾರಚಕ್ರಂಗಳ ಊಧ್ರ್ವಮುಖವಾಗಿ ಆ ಕಮಲದಲ್ಲಿ ಅಡಗಿ, ಆ ಕಮಲದ ಎಸಳು ಐವತ್ತೆರಡಾಗಿ ಎಸೆವುತಿರ್ಪವು. ಪರಿಪೂರ್ಣ ಜ್ಞಾನದೃಷ್ಟಿಯಿಂ ಆ ಮಹಾಲಿಂಗಮಂ ನಿರೀಕ್ಷಿಸಲು ಆ ಕಮಲದಲ್ಲಿ ಮಹಾಲಿಂಗಸ್ವರೂಪಮಾಗಿ ಸಕಲ ಕರಣೇಂದ್ರಿಯಂಗಳು ಆ ಮಹಾಲಿಂಗದಲ್ಲಿಯೆ ಅಡಗಿ, ಸುನಾದಬ್ರಹ್ಮವೆಂಬ ಇಷ್ಟವೆ ಮಹಾಲಿಂಗವೆಂದರಿದು ನೋಡುತ್ತಿರಲು, ಜ್ಯೋತಿರ್ಮಯವಾಗಿ ಕಾಣಿಸುತಿಪ್ಪುದು. ಅದೇ ಜೀವಪರಮರೈಕ್ಯವು ; ಅದೇ ಲಿಂಗಾಂಗಸಂಬಂಧವು. ಆ ಮಹಾಲಿಂಗದ ಕಿರಣಂಗಳೆ ಕರಣಂಗಳಾಗಿ ಆ ಕಮಲವು ಅಧೋಮುಖವಾಗಿ ಆ ಮಹಾಲಿಂಗವು ತನ್ನ ನಿಜನಿವಾಸವೆನಿಸುವ `ಅಂತರೇಣ ತಾಲುಕೇ' ಎಂಬ ಶ್ರುತಿ ಪ್ರಮಾಣದಿ ತಾಲುಮೂಲದ್ವಾದಶಾಂತವೆಂಬ ಬ್ರಹ್ಮರಂಧ್ರದ ಮಧ್ಯದಲ್ಲಿ ಪ್ರಕಾಶಿಸುತ್ತಿರ್ಪುದೊಂದು ಶಿವಚಕ್ರವು. ಆ ಶಿವಚಕ್ರವೆ ಶಿವಲೋಕವೆನಿಸುವುದು. ಆ ಶಿವಲೋಕವೆ ಶಾಂಭವಲೋಕವೆನಿಸುವುದು. ಶಾಂಭವಲೋಕವೆ ಶಾಂಭವಚಕ್ರವೆನಿಸುವುದು. ಆ ಶಾಂಭವಚಕ್ರದಲ್ಲಿ ಆಧಾರವಾದಿ ಪಶ್ಚಿಮಾಂತ್ಯವಾದ ನವಚಕ್ರಂಗಳು ಸಂಬಂಧವಾಗಿರುತಿರ್ಪವು. ಅದು ಹೇಗೆಂದೊಡೆ ; ಆ ಶಾಂಭವಚಕ್ರಮಧ್ಯದ ಚತುರ್ದಳಾಗ್ರದಲ್ಲಿ ಅಗ್ನಿಮಂಡಲದಲ್ಲಿ ಅಷ್ಟದಳ ಇರ್ಪುವು. ಆ ಅಷ್ಟದಳ ಚತುರ್ದಳದಲ್ಲಿ `ವಶಷಸ' ಎಂಬ ನಾಲ್ಕಕ್ಷರಯುಕ್ತವಾದ ಆಧಾರಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿ `ನ' ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ತಾರಕಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಅಗ್ನಿಮಂಡಲದ ಚತುರ್ದಳದ ಈಶಾನ್ಯ ದಳದಲ್ಲಿ `ಬ ಭ ಮ ಯ ರ ಲ' ಎಂಬ ಆರಕ್ಷರಯುಕ್ತವಾದ ಸ್ವಾದ್ಥಿಷ್ಠಾನಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಮ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ದಂಡಕಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಅಷ್ಟದಳಾಗ್ರದಲ್ಲಿ ಸೂರ್ಯಮಂಡಲವಿರ್ಪುದು. ಆ ಸೂರ್ಯಮಂಡಲದಲ್ಲಿ `ಡಢಣ ತಥದಧನ ಪಫ' ಎಂಬ ದಶಾಕ್ಷರಯುಕ್ತವಾದ ಮಣಿಪೂರಕಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಶಿ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ಕುಂಡಲಾಕೃತಿಯಲ್ಲಿ ಸಂಬಂಧವಾಗಿರ್ಪುದು. `ಕಖಗಘಙ ಚಛಜಝಞ ಟಠ' ಎಂಬ ದ್ವಾದಶಾಕ್ಷರಯುಕ್ತವಾದ ಅನಾಹತಚಕ್ರವು ಸೂರ್ಯಮಂಡಲದಲ್ಲಿ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ವ'ಕಾರವು ಆ ಮಹಾಲಿಂಗಸ್ವರೂಪವಾದಪ್ರಣವದ ಅರ್ಧಚಂದ್ರಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಅಷ್ಟದಳದಮಧ್ಯದಲ್ಲಿ ಚಂದ್ರಮಂಡಲವಿರ್ಪುದು. ಆ ಚಂದ್ರಮಂಡಲದಲ್ಲಿ- `ಅ ಆ ಇ ಈ ಉ ಊ ಋ Iೂ ಲೃ ಲೂೃ ಏ ಐ ಓ ಔ ಅಂ ಅಃ' ಎಂಬ ಷೋಡಶಾಕ್ಷರಯುಕ್ತವಾದ ವಿಶುದ್ಧಿಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಯ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ದರ್ಪಣಾಕೃತಿಯಲ್ಲಿ ಸಂಬಂಧವಾಗಿರ್ಪುದು. ಆ ಮಹಾಲಿಂಗಕ್ಕೆ ಪೀಠಮಾಗಿರ್ದ ಬಿಂದುಯುಕ್ತಮಾದ ಪ್ರಣವವು ಆ ಮಹಾಲಿಂಗದ ಮುಂದಿರ್ದ `ಹಂ ಳಂ ಹಂ ಕ್ಷಂ' ಎಂಬ ಚುತವರ್ಣಾಕ್ಷರಯುಕ್ತವಾದ ಆಜ್ಞಾಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ ಓಂಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ಜ್ಯೋತಿರಾಕೃತಿಯಲ್ಲಿ ಸಂಬಂಧವಾಗಿರ್ಪುದು. ಚತುರ್ದಳವು ತ್ರಿದಳದಲ್ಲಿ ಕ್ಷ ಉ ಸ ಎಂಬ ತ್ರಯಕ್ಷರಯುಕ್ತವಾದ ಶಿಖಾಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿ `ಕ್ಷ' ಕಾರವು ಆ ಮಹಾಲಿಂಗಸ್ವರೂಪವಾದ ಕುಂಡಲಾಕೃತಿ ಅರ್ಧಚಂದ್ರಾಕೃತಿಗಳಲ್ಲಿ ಸಂಬಂಧವಾಗಿರ್ಪುದು. ಆ ಚತುರ್ದಳದ ಮಧ್ಯದಲ್ಲಿ ಬಟುವೆ ಏಕದಳವೆನಿಸಿಕೊಂಬುದು. ಆ ಏಕದಳದಲ್ಲಿ ಪಶ್ಚಿಮಚಕ್ರ ಸಂಬಂಧವಾಗಿರ್ಪುದು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ `ಹ್ರಾಂ'ಕಾರವು ಆ ಮಹಾಲಿಂಗಸ್ವರೂಪವಾದ ಪ್ರಣವದ ದರ್ಪಣಾಕೃತಿ ಜ್ಯೋತಿರಾಕೃತಿಗಳಲ್ಲಿ ಸಂಬಂಧವಾಗಿರ್ಪುದು. ಹೀಂಗೆ ಅಷ್ಟಚಕ್ರಂಗಳ ತನ್ನೊಳಗೆ ಗಬ್ರ್ಥೀಕರಿಸಿಕೊಂಡು ಬೆಳಗುತ್ತಿರ್ಪುದೊಂದು ಬ್ರಹ್ಮರಂಧ್ರಚಕ್ರವು. ಆ ಚಕ್ರದ ಕರ್ಣಿಕಾಮಧ್ಯದಲ್ಲಿರ್ಪ ಹ್ರೀಂ ಕಾರಗಳು. ಆ ಹರದನಹಳ್ಳಿಯ ಪ್ರಭುಲಿಂಗಗುರುಸ್ವಾಮಿಯ ಶಿಷ್ಯರು ನಿಜಾನಂದ ಗುರುಚೆನ್ನಯ್ಯನವರು. ಆ ನಿಜಾನಂದ ಗುರುವಿನ [ಶಿಷ್ಯರು] ಗುರುಸಿದ್ಧವೀರೇಶ್ವರದೇವರು. ಆ ಸಿದ್ಧವೀರೇಶ್ವರದೇವರ ಕರಕಮಲದಲ್ಲಿ ಉದಯವಾದ ಬಾಲಸಂಗಯ್ಯನು ನಾನು. ಆ ನಿರಂಜನ ಗುರುವೆ ತಮ್ಮ ಕೃಪೆಯಿಂದ ತಮ್ಮಂತರಂಗದಲ್ಲಿರ್ದ ಅತಿರಹಸ್ಯವಾದ ಶಾಂಭವಶಿವಯೋಗವೆಂಬ ಮಹಾಜ್ಞಾನೋಪದೇಶಮಂ ಹರಗುರು ವಾಕ್ಯಪ್ರಮಾಣಿನಿಂ ಎನ್ನ ಹೃದಯಕಮಲದಲ್ಲಿ ಕರತಳಾಮಳಕದಂತೆ ತೋರಿ, ಆ ಹೃದಯಕಮಲಕರ್ಣಿಕಾಮಧ್ಯದಲ್ಲಿರ್ಪ ನಿರಂಜನಗುರುವೆ ನಿರಂಜನಮಹಾಲಿಂಗವೆಂದರಿದು ಆ ನಿರಂಜನಮಹಾಲಿಂಗವೆ ಕರಸ್ಥಲದಲ್ಲಿರ್ಪ ಸುನಾದಬ್ರಹ್ಮವೆಂಬ ಇಷ್ಟಲಿಂಗವೆಂದರಿದು, ಆ ಕರಸ್ಥಲದಲ್ಲಿರ್ಪ ಇಷ್ಟಲಿಂಗವೆ ತಾನೆಂದರಿದು ``ಮಂತ್ರಮಧ್ಯೇ ಭವೇತ್‍ಲಿಂಗಂ ಲಿಂಗಮಧ್ಯೇ ಭವೇತ್‍ಮಂತ್ರಂ | ಮಂತ್ರಲಿಂಗದ್ವಯಾದೇಕಂ ಇಷ್ಟಲಿಂಗಂತು ಶಾಂಕರಿ ||' ಎಂದುದಾಗಿ, ಎನ್ನ ಹೃತ್ಕಮಲಕರ್ಣಿಕಾಮಧ್ಯದಲ್ಲಿ ಶಾಂಭವೀಮುದ್ರಾನುಸಂಧಾನದಿಂದ ಆ ಲಿಂಗವೆ ಮಂತ್ರ, ಮಂತ್ರವೆ ಲಿಂಗವೆಂದರಿದು ಓಂ ಓಂ ಎಂದು ಶಿವಸಮಾದ್ಥಿಯ ಜಪಮಂ ಜಪಿಸುತ್ತ ಜ್ಯೋತಿರ್ಲಿಂಗಮಂ ಕೇಳುತ, ಜ್ಯೋತಿರ್ಲಿಂಗದೊಳು ಮುಳುಗಾಡುತ್ತಿರ್ದೆನಯ್ಯಾ ಬಸವಣ್ಣಪ್ರಿಯ ಚೆನ್ನಸಂಗಯ್ಯನೆಂಬ ಗುರುವಿನ ಕೃಪೆಯಿಂದ, ನಿಮ್ಮ ಶರಣರ ಪಡುಗ ಪಾದರಕ್ಷೆಯ ಹಿಡಿವುದಕ್ಕೆ ಯೋಗ್ಯನಾದೆನಯ್ಯ ನಿಮ್ಮ ಕೃಪೆಯಿಂದ.
--------------
ಭಿಕ್ಷದ ಸಂಗಯ್ಯ
ಇಂತಪ್ಪ ಪ್ರಣಮಮಂತ್ರಸಂಬಂಧವನು ಸ್ವಾನುಭಾವಗುರುಮೂರ್ತಿಗಳಿಂದ ವಿಚಾರಿಸಿಕೊಳ್ಳಬೇಕಲ್ಲದೆ, ಭಿನ್ನ ಜ್ಞಾನಗುರುಮೂರ್ತಿಗಳಿಂದ ವಿಚಾರಿಸಿಕೊಳ್ಳಲಾಗದು. ಅದೇನು ಕಾರಣವೆಂದಡೆ: ದ್ವಾದಶ ರುದ್ರಾಕ್ಷಿಮಾಲೆಯಂ ಮಾಡಿ, ಆ ದ್ವಾದಶ ರುದ್ರಾಕ್ಷಿಗೆ ದ್ವಾದಶಪ್ರಣಮವ ಸಂಬಂಧಿಸಿ, ಶಿಖಾರುದ್ರಾಕ್ಷಿಗೆ ನಿರಂಜನ ಅವಾಚ್ಯಪ್ರಣವವೆಂಬ ಹಕಾರ ಪ್ರಣಮವ ಸಂಬಂಧಿಸಿ, ಉದಯ ಮಧ್ಯಾಹ್ನ ಸಾಯಂಕಾಲವೆಂಬ ತ್ರಿಕಾಲದಲ್ಲಿ ಸ್ನಾನವ ಮಾಡಿ, ಏಕಾಂತಸ್ಥಾನದಲ್ಲಿ ಉತ್ತರವಾಗಲಿ ಪೂರ್ವವಾಗಲಿ ಉಭಯದೊಳಗೆ ಆವುದಾನೊಂದು ದಿಕ್ಕಿಗೆ ಮುಖವಾಗಿ ಶುಭ್ರವಸ್ತ್ರವಾಗಲಿ, ಶುಭ್ರರೋಮಶಾಖೆಯಾಗಲಿ, ಶುಭ್ರ ರೋಮಕಂಬಳಿಯಾಗಲಿ, ತೃಣದಾಸನವಾಗಲಿ, ನಾರಾಸನವಾಗಲಿ, ಇಂತೀ ಪಂಚಾಸನದೊಳಗೆ ಆವುದಾನೊಂದು ಆಸನ ಬಲಿದು, ಮೂರ್ತವ ಮಾಡಿ, ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ, ಆ ರುದ್ರಾಕ್ಷಿಮಾಲೆಗೆ ವಿಭೂತಿ ಅಗ್ಗಣಿ ಪತ್ರಿಯ ಧರಿಸಿ, ತರ್ಜನ್ಯವಾಗಲಿ ಅನಾಮಿಕ ಬೆರಳಾಗಲಿ ಉಭಯದೊಳಗೆ ದಾವುದಾದರೇನು ಒಂದು ಬೆರಳಿಗೆ ರುದ್ರಾಕ್ಷಿಯಂ ಧರಿಸಿ ಅದರೊಳಗೆ ದೀಕ್ಷಾಗುರು ಅಧೋಮುಖವಾಗಿ ರುದ್ರಾಕ್ಷಿಮಾಲೆಯ ಜಪಿಸೆಂದು ಪೇಳ್ವನು. ಮತ್ತಂ, ಕುರುಡರೊಳಗೆ ಮೆಳ್ಳನು ಚಲುವನೆಂಬ ಹಾಗೆ ಅಜ್ಞಾನಿಗಳೊಳಗಣ ಜ್ಞಾನಿಗಳು ಊಧ್ರ್ವಮುಖವಾಗಿ ರುದ್ರಾಕ್ಷಿ ಜಪಿಸೆಂದು ಪೇಳುವರು. ಇಂತಪ್ಪ ಸಂಶಯದಲ್ಲಿ ಮುಳುಗಿ ಮೂರುಲೋಕವು ಭವಭವದಲ್ಲಿ ಎಡೆಯಾಡುವುದು ಕಂಡು, ಶಿವಜ್ಞಾನ ಶರಣನು ವಿಸರ್ಜಿಸಿ ಸ್ವಾನುಭಾವಸೂತ್ರದಿಂ, ದ್ವಾದಶಪ್ರಣಮವ ಪೋಣಿಸಿ, ಅಧೋ ಊಧ್ರ್ವವೆಂಬ ವಿಚಾರವಿಲ್ಲದೆ ದಿವಾರಾತ್ರಿಯಲ್ಲಿ ನಿಮಿಷ ನಿಮಿಷವನಗಲದೆ ಮರಿಯದೆ ಜಪಿಸಿ ಸದ್ಯೋನ್ಮುಕ್ತನಾಗಿ ಶಿವಸುಖದಲ್ಲಿ ಸುಖಿಯಾಗಿರ್ದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಉದಯ ಮುಖದ ಜ್ಯೋತಿಯಿಂ ಅಧೋಮುಖಕಮಲ ಊಧ್ರ್ವಮುಖವಾಗಿ ಷಡುಕಮಲಾಂಬುಜಂಗಳು ಉದಯವಾಗಿ ಆರುಕಮಲದ ಎಸಳು ಅರುವತ್ತಾಗಿ ಎಸೆವುತಿದಾವೆ ನೋಡಾ. ಅಂಬುಜಕಮಲ ಆರರಿಂದ ಸ್ವಯಂಭುವ ಪೂಜಿಸುತಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮೂರಾರು ಪರ್ವತದ ಮೇಲುಗಿರಿ ಅಗ್ರದ ಕಮಲದೊಳಗೆ, ಸೂರ್ಯವರ್ಣದ ಶೇಷವು. ಆ ಶೇಷನ ವಕ್ತ್ರದೊಳಗೆ ಚಂದ್ರವರ್ಣದ ಮಂಡೂಕ. ಆ ಮಂಡೂಕನ ವಕ್ತ್ರದ ಜೊಲ್ಲು ಭೂಮಿಗೆ ಬೀಳಲು, ತಲೆಯಿಲ್ಲದ ಶೇಷ, ಸೇವಿಸಲು ತಲೆ ಬಂದು, ಕಣ್ಣು ತೆರೆದು ನೋಡಿ, ಜೊಲ್ಲಿನ ದಾರಿಯ ಪಿಡಿದು, ಎಡಬಲದ ಬಟ್ಟೆಯ ಬಿಟ್ಟು, ನಡುವಣ ಬಟ್ಟೆಯಿಂದ ಊಧ್ರ್ವಮುಖವಾಗಿ ಏರಲು, ಆ ಏರುವ ಶೇಷನ ರಭಸದಿಂ ಕತ್ತಲಿಪುರದರಸು ಮಂತ್ರಿ ಮಾರ್ಬಲವೆಲ್ಲ ಬೆದರಿ, ಶೇಷ ಮಂಡೂಕನ ಕಚ್ಚಿ, ಮಂಡೂಕ ಶೇಷನ ನುಂಗಲು, ಶೇಷ ಸತ್ತು, ಮಂಡೂಕ ಉಳಿದಿತ್ತು. ಆ ಉಳಿದ ಉಳುಮೆಯ ತಾನೇನೆಂದು ತಿಳಿದಾತನೇ ಅಸುಲಿಂಗಸಂಬಂಧಿ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವಿವೇಕವೆಂಬುದು ಬೇರಿಲ್ಲ ಕಂಡಯ್ಯಾ, ನವನಾಳದ ಸುಳುಹ ತೊಡೆದು ಸುನಾಳವ ಶುದ್ಧವ ಮಾಡುವೆ. ಅಷ್ಟದಳ ಕಮಲವನು ಊಧ್ರ್ವಮುಖವಾಗಿ ನಿಜಪದದಲ್ಲಿ ನಿಲ್ಲಿಸುವೆ. ಐವತ್ತೆರಡಕ್ಷರವ ತಿಳಿದು ನೋಡಿ ಏಕಾಕ್ಷರದಲ್ಲಿ ನಿಲ್ಲಿಸುವೆ. ಕಪಿಲಸಿದ್ಧಮಲ್ಲಿಕಾರ್ಜುನಾ, ಎನ್ನ ವಿಚಾರದ ಹವಣ ನೀನೆ ಬಲ್ಲೆ.
--------------
ಸಿದ್ಧರಾಮೇಶ್ವರ
ಏಕಮಾಗಿರ್ಪ ಬೀಜಮಧ್ಯದಲ್ಲಿರಿಸಿ ಅಂಕುರಿಸೆ, ಆ ಬೀಜ ಭಿನ್ನಮಾಗಿ ತೋರ್ಪಂದದಿಂ ಏಕಮೇವನದ್ವಿತೀಯಮಾಗಿ, ಬ್ರಹ್ಮನಲ್ಲಿ ಮನಸ್ಸು ಅಂಕುರಿಸೆ, ಶಿವಭಕ್ತಿಸ್ವರೂಪಮಾಗಿ ಉತ್ತರಭಾಗಮೇ ಶಕ್ತಿಯಾಯಿತ್ತು. ದಕ್ಷಿಣಭಾಗಮೇ ಶಿವನಾಯಿತ್ತು. ಶಕ್ತಿಯಿಂದ ಪೂರ್ವಭಾಗದಲ್ಲಿ ಕರ್ಮವುತ್ಪನ್ನವಾಯಿತ್ತು. ಶಿವನಿಂದ ಪಶ್ಚಿಮಭಾಗದಲ್ಲಿ ಧರ್ಮವುತ್ಪನ್ನಮಾಯಿತ್ತು. ಆ ಕರ್ಮೇಂದ್ರಿಯಂಗಳೈದು ಶಕ್ತಿಮುಖ ಧರ್ಮೇಂದ್ರಿಯಂಗಳೈದು ಶಿವಮುಖ ಶಕ್ತಿಸ್ವರೂಪಮಾದ ಉತ್ತರಹಸ್ತವು ಕರ್ಮೇಂದ್ರಿಯಂಗಳಿಗೆ ತಾನೇ ಕಾರಣಮಾಯಿತ್ತು. ಶಿವಸ್ವರೂಪಮಾದ ದಕ್ಷಿಣಹಸ್ತವು ಧರ್ಮೇಂದ್ರಿಯಂಗಳಿಗೆ ತಾನೇ ಕಾರಣಮಾಯಿತ್ತು. ಧರ್ಮೇಂದ್ರಿಯಂಗಳಲ್ಲಿ ನಾದಹುಟ್ಟಿತ್ತು. ಕರ್ಮೇಂದ್ರಿಯಂಗಳಿಂದ ಬಿಂದುಹುಟ್ಟಿತ್ತು. ಬಿಂದುವೇ ಅಧೋಮುಖವಾಗಿ, ನಾದ ಊಧ್ರ್ವಮುಖವಾಗಿ, ಮಧ್ಯವೊಗೆದ ಮನಸ್ಸಿನಲ್ಲಿ ಕಳೆಯೇ ಪ್ರಕಾಶಮಾಯಿತ್ತು. ಶಿವಶಕ್ತಿಗಳಿಗೆ ಬುದ್ಧಿಯೇ ಕಾರಣಮಾದಂದದಿ ನಾದಬಿಂದುಗಳಿಗೆ ಕಳೆಯೇ ಕಾರಣಮಾಯಿತ್ತು. ಕರ್ಮಮುಖದಿಂ ಬಿಂದುವಂ ಸಾಧಿಸಲು, ಆನಂದಸಾಧ್ಯಮಾಯಿತ್ತು. ಧರ್ಮಮುಖದಿಂ ನಾದವಂ ಸಾಧಿಸಲು, ಜ್ಞಾನಸಾಧ್ಯಮಾಯಿತ್ತು. ಕಳಾಯುಕ್ತಮಾದ ಮನಸ್ಸಿನಲ್ಲಿ ನಿಜಮಾಯಿತ್ತು. ಆನಂದಸ್ವರೂಪಮಾದ ಶಕ್ತಿ ಶಿವನೊಳಗೆ ಬೆರೆದು ಸಾಕಾರವ ನಿರಾಕಾರವ ಮಾಡುತ್ತಿರಲು, ಜ್ಞಾನಸ್ವರೂಪನಾದ ಶಿವನು ಶಕ್ತಿಯೊಳಗೆ ಬೆರೆದು ನಿರಾಕಾರವ ಸಾಕಾರವ ಮಾಡುತ್ತಿರಲು, ಆ ನಿರಾಕಾರಸ್ವರೂಪನಾದ ಶಿವನೇ ಆನಂದಶಕ್ತಿಯ ಸಂಗದಿಂ ಬಿಂದುರೂಪಮಾದ ಲಿಂಗಮಾದನು. ಸಾಕಾರಸ್ವರೂಪಮಾದ ಶಕ್ತಿ ಜ್ಞಾನರೂಪಮಾದ ಶಿವಸಂಗದಿಂ ನಾದಾಕಾರಮಾದ ನಿರಾಕಾರಮಂತ್ರಶಕ್ತಿಯಾಯಿತ್ತು. ಪ್ರಾಣಸ್ವರೂಪಮಾದ ಲಿಂಗಕ್ಕೆ ಮಂತ್ರಸ್ವರೂಪಮಾದ ಶರೀರವೇ ಶಕ್ತಿಯಾಯಿತ್ತು. ಲಿಂಗದಲ್ಲಿ ಹುಟ್ಟಿದ ಇಂದ್ರಿಯಸುಖ ಶರೀರದಲ್ಲಿ ಹುಟ್ಟಿದ ವಿಷಯಸುಖಂಗಳು ಲಿಂಗದಲ್ಲಿ ಬೆರೆದು, ಲಿಂಗಾಂಗಗಳೆರಡು ಮನಸ್ಸಿನಲ್ಲಿ ಶಂಕಿಸುತ್ತಿರಲು, ಲಿಂಗವೇ ಅಂಗವಾಯಿತ್ತು. ಲಿಂಗಾಂಗಮೆಂಬ ಭೇದಮೆ ತನಗಸಾಧ್ಯಮಾದೊಡೆ, ಮನಸ್ಸು ಲಿಂಗದಲ್ಲಿ ಲೀನಮಾಯಿತ್ತು. ಅಂಗದ ಕರ್ಮವಳಿಯಿತ್ತು ಲಿಂಗದ ಜ್ಞಾನವು ಮೆರೆಯಿತ್ತು. ಮನವಳಿಯೆ ನಿಜಮಾಯಿತ್ತು. ಅಂಗದಲ್ಲಿರ್ಪ ಬಿಂದು ಲಿಂಗದಲ್ಲಿ ನಿಶ್ಚೈತನ್ಯಮಾಗಿ, ಲಿಂಗದೊಳಗಿರ್ಪ ನಾದ ಅಂಗದಲ್ಲಿ ನಿಶ್ಶಬ್ದಮಾಗಿ, ಮನದಲ್ಲಿರ್ಪ ಕಳೆ ಲಿಂಗಾಂಗಲಿಂಗಸಮರಸಮಾಗಿ, ನಿದ್ರೆಯಲ್ಲಿ ಸ್ವಪ್ನಂ, ಸ್ವಪ್ನದಲ್ಲಿರ್ಪ ನಿಜಂ, ಜಾಗ್ರದಲ್ಲಿ ಮಿಥ್ಯಮಾಗಿತೋರ್ಪಂತೆ, ನಿನ್ನ ಲೀಲಾಜಡತ್ವದಲ್ಲಿ ತೋರ್ಪ ಸಕಲಪ್ರಪಂಚವೆಲ್ಲವು ತನ್ನ ನಿಜದಲ್ಲಿ ಮಿಥ್ಯಮಾಗಿ, ತಾನೇ ನಿಜಮಾಗಿ, ತನ್ನಿಂದನ್ಯಮೇನೂ ಇಲ್ಲದೆ ಇರ್ಪುದೇ ಶಿವತತ್ವ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಮಹಾಮನೆಯೊಳಗೊಂದು ಮಂದಿರವಾಡ: ಅದರೊಳಗೆ ಹದಿನಾರು ಕೋಣೆ, ಒಂಬತ್ತು ಬಾಗಿಲು ಮುಚ್ಚಿ, ಒಂದು ಬಾಗಿಲು ತೆಗೆದಿಹುದು. ತೆಗೆದ ಬಾಗಿಲಲ್ಲಿ ಮೂರು ಮುಖದ ಸರ್ಪ, ಊಧ್ರ್ವಮುಖವಾಗಿ ತಿರುಗಾಡುತ್ತಿಹುದು. ಮಿಕ್ಕ ಆರು ಬಾಗಿಲಲ್ಲಿ ಮೂರು ಬಾಗಿಲು ಕೀಳಾಗಿ, ಕೀಳಿನೊಳಗೆ ಅಧೋಮುಖದ ಸರ್ಪವುಡುಗಿಹುದು. ಮೇಲಣ ಮೂರು ಬಾಗಿಲು ಊಧ್ರ್ವದ ತ್ರಿಗುಣದ ಸರ್ಪ ಬಾಲ ಮೊದಲು ತಲೆ ಕಡೆಯಾಗಿ ಎದ್ದು ನಿಂದಾಡುತ್ತಿರಲಾಗಿ, ವಿಶ್ವಮಯವೆಂಬ ಆಕಾಶದ ಹದ್ದು ಹೊಯಿದು ಎತ್ತಿತ್ತು, ಅದರೊಳಗೆ ಎರಡು ತಲೆಯ ಮರೆದು, ಒಂದು ತಲೆಯೆಚ್ಚತ್ತು, ಹದ್ದಿನ ಕೊಕ್ಕ ತಪ್ಪಿ, ಕಾಲುಗುರ ಹೆಜ್ಜೆಯ ಘಾಯವ ತಪ್ಪಿ ಗರಿಯ ಅಡುಹ ತೊಲಗಿಸಿ ಹಿಡಿಯಿತ್ತು. ಅಡಿಹೊಟ್ಟೆಯ ನೋಡಿಯೇರಿತ್ತು, ವಿಷ ಹದ್ದಿನ ಅಸುವ ಬಿಡಿಸಿತ್ತು, ಹದ್ದು ಹಾವು ಕೂಡಿ ಘಟಕರ್ಮಕ್ಕೊಳಗಾಯಿತ್ತು. ಕರ್ಮದ ಒಳಗಾದ ಜ್ಞಾನ ಸದಾಶಿವಮೂರ್ತಿಲಿಂಗವ ಮುಟ್ಟಿದುದಿಲ್ಲ.
--------------
ಅರಿವಿನ ಮಾರಿತಂದೆ
ಶುಕ್ಲ ಶೋಣಿತಾತ್ಮಸಂಬಂಧವಾದ ಮಾತಾಪಿತೃಗಳ ಸಂಯೋಗ ಕಾಲಕ್ಕೆ ಜೀವಾತ್ಮರು ಜನಿಸಿದ ಪರಿಯ ಪೇಳುವೆ. ಅದೆಂತೆಂದೊಡೆ : ಜನಿಸಿದ ಮೂರುದಿವಸಕ್ಕೆ ಸ್ತ್ರೀಯರ ನಯನ ಕೆಂಪಾಗಿ ಮೂರಾರುದಿವಸಕ್ಕೆ ಕೈಕಾಲು ಕತ್ತರಿಸಿ ಏಳೆಂಟುದಿವಸಕ್ಕೆ ಅಂಗ ಜಾಡ್ಯವಾಗಿ ಈರ್ಹತ್ತುದಿವಸಕ್ಕೆ ಇಂದ್ರಿಯ ಹೆಪ್ಪುಗೊಂಡು ಒಂದುಮಾಸಕ್ಕೆ ಮಾಂಸಗೊಂಡು ಎರಡುತಿಂಗಳಿಗೆ ಪಿಂಡಗಟ್ಟಿ ಬಯಕೆ ತೋರಿ ಮೂರುತಿಂಗಳಿಗೆ ಅಂಡಗಟ್ಟಿ ಹೇಸಿಕೆ ಹುಟ್ಟಿ ನಾಲ್ಕುತಿಂಗಳಿಗೆ ಅಂಗರೂಪು ಹುಟ್ಟಿ ಐದುತಿಂಗಳಿಗೆ ಅವಯವಂಗಳು ಹುಟ್ಟಿ ಆರುತಿಂಗಳಿಗೆ ಅವಯವಂಗಳು ಬಲಿದು ಏಳುತಿಂಗಳಿಗೆ ರೋಮ ಹುಟ್ಟಿ ಇಂತೀ ಪರಿಯಲ್ಲಿ ಶಿವಕೃಪೆಯಿಂದ ಪಿಂಡವರ್ಧನವಾಗಲು, ಇಂತಪ್ಪ ಪಿಂಡದಲ್ಲಿ ಶಿವಾಜ್ಞೆಯಿಂದ ಆತ್ಮನು ಪ್ರವೇಶವಾದಾಕ್ಷಣವೇ ಗರ್ಭದಲ್ಲಿ ಶಿಶುವು ಉಲುಕುವುದು. ಎಂಟುತಿಂಗಳಿಗೆ ಕುಕ್ಕುಟಾಸನದಿಂದ ಶಿಶುವು ಹುದುಗಿಕೊಂಡಿರ್ಪುದು. ನವಮಾಸಕ್ಕೆ ಮರ್ಕಟಾಸನದಿಂದ ನೆಟ್ಟನೆ ಕುಳ್ಳಿರ್ದು ಶಿಶುವು ಸರ್ಪನುಂಗಿದ ಇಲಿಯ ಹಾಂಗೆ ಗರ್ಭವೆಂಬ ಸರ್ಪ ಶಿಶುವನೊಳಕೊಂಡಿರ್ಪುದು. ಆ ಶಿಶುವಿಗೆ ಕ್ರಿಮಿಕೀಟಕ ಜಂತುಗಳು ಮೊದಲಾದ ಅನೇಕ ಬಾಧೆಗಳುಂಟು. ಆ ಬಾಧೆಗಳಿಂದ ಆ ಶಿಶುವು ತನ್ನ ಕೆನ್ನೆಗೆರಡು ಹಸ್ತವ ಹಚ್ಚಿ ಊಧ್ರ್ವಮುಖವಾಗಿ ಶಿವಧೋ ಶಿವಧೋ ಎಂದು ಶಿವಧ್ಯಾನವ ಮಾಳ್ಪ ಸಮಯದಲ್ಲಿ ಹರಕರುಣದಿಂದ ಆ ಗರ್ಭವೆಂಬ ಮನೆಯ ಬಿಟ್ಟು ಹೊರಡುವ ಸಮಯಕ್ಕೆ ಆ ಶಿಶುವಿನ ದುಃಖವ ಪೇಳ್ವೆ: ಕೋಟಿಸಿಡಿಲು ಹೊಯ್ದಂತೆ, ಸಾವಿರಚೇಳು ಕಡಿದಂತೆ, ಧರ್ಮಿಷ್ಟರಾಜನು ಮೃತವಾದರೆ ಅತಿಬಡವರಿಗೆ ದುಃಖವಾದಹಾಂಗೆ. ಬಳಗುಳ್ಳ ಪುಣ್ಯಪುರುಷನು ಸಾಯಂಕಾಲದಲ್ಲಿ ಮೃತನಾಗಿ ಪ್ರಾತಃಕಾಲದಲ್ಲಿ ಅವನ ಶವ ಎತ್ತುವಕಾಲಕ್ಕೆ ಅವನ ಬಳಗಕ್ಕೆ ದುಃಖವಾದಹಾಂಗೆ. ಆ ಮಾಯಾಯೋನಿಯೆಂಬ ಸೂಕ್ಷ್ಮ ಅಧೋದ್ವಾರದಿಂ ಆತ್ಮನು ಅನೇಕ ದುಃಖ ದಾವತಿಯಿಂದ ಜನಿಸಲು ಅಂತಪ್ಪ ಪಿಂಡಕ್ಕೆ ಯೋನಿ ಕಂಡರೆ ಹೆಣ್ಣೆಂಬರು ಶಿಶ್ನವ ಕಂಡರೆ ಗಂಡೆಂಬರು. ಒಳಗಿರುವ ಆತ್ಮನು ಹೆಣ್ಣು ಅಲ್ಲ, ಗಂಡು ಅಲ್ಲ ನಿರಾಳ ಬ್ರಹ್ಮಾಂಶಿಕವು. ಅದೆಂತೆಂದಡೆ: ಪಾಪದದೆಸೆಯಿಂದ ಹೆಣ್ಣಾಗಿ ಜನಿಸುವುದು; ಪುಣ್ಯದದೆಸೆಯಿಂದ ಪುರುಷನಾಗಿ ಜನಿಸುವುದು. ಇಂತೀ ಪರಿಯಲ್ಲಿ ಇರುವೆ ಮೊದಲು ಆನೆ ಕಡೆ ಎಂಬತ್ತುನಾಲ್ಕುಲಕ್ಷ ಜೀವರಾಶಿಯ ಯೋನಿಚಕ್ರಮಾರ್ಗದಲ್ಲಿ ತಿರುಗಿ ತಿರುಗಿ ಭವರಾಟಾಳಮಾರ್ಗದಲ್ಲಿ ದೇವ ದಾನವ ಮಾನವರು ಮೊದಲಾದ ಸಕಲಜನರು ಬರುವದುಕಂಡು ಥರಥರನೆ ನಡುಗಿ ಮರಳಿ ಈ ಜನನೀಜಠರಕ್ಕೆ ಬರಲಾರೆನೆಂದು ಅಂಜಿ ನಿಮ್ಮ ಮರೆಹೊಕ್ಕನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಯ್ಯ, ಒಂದು ಕೋಟಿ ವರುಷ ತಲೆ ಕೆಳಗಾಗಿ ತಪವ ಮಾಡಿದಕಿಂದಲು ಒಂದು ದಿನ ಶಿವಭಕ್ತರಲ್ಲಿ ನಿರಹಂಕಾರವಾಗಿರ್ದಡೆ ಸಾಕು ನೋಡಾ. ಒಂದು ಕೋಟಿ ವರುಷ ಊಧ್ರ್ವಮುಖವಾಗಿ ಸೂರ್ಯನ ನೋಡಿದ ಫಲವು ಒಂದು ದಿನ ಸದಾಚಾರ ಸದ್ಧರ್ಮರಪ್ಪ ಶಿವಭಕ್ತರ ನೋಡಿದುದಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಅಖಿಳ ದೇವತೆಗಳ ಸ್ತೋತ್ರವ ಮಾಡಿದ ಫಲವು ಒಂದು ದಿನ ಶರಣರಿಗೆ ಶರಣು ಮಾಡಿದುದಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಅರವತ್ತಾರು ಕೋಟಿ ನದಿಗಳ ಮಿಂದು ಮುಡಿಯಿಟ್ಟ ಫಲವು, ಒಂದು ದಿನ ಸದ್ಭಕ್ತ_ಜಂಗಮ_ಶರಣಗಣ ತೀರ್ಥಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಚಾಂದ್ರಾಯಣವ್ರತ ಮೊದಲಾದ ಸರ್ವವ್ರತಂಗಳ ನಡಸಿದ ಫಲವು ಒಂದು ದಿನ ಗುರು_ಲಿಂಗ_ಜಂಗಮ_ಪ್ರಸಾದಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ವೇದಾಗಮ ಪುರಾಣಶಾಸ್ತ್ರ ಮಂತ್ರಂಗಳ ಓದಿದ ಫಲವು ಒಂದು ದಿನ ಶಿವಭಕ್ತಶರಣರ ಸಂಭಾಷಣಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಮಹಾಯೋಗವ ಮಾಡಿದ ಫಲವು ಒಂದು ದಿನ ಶ್ರೀಗುರು_ಲಿಂಗ_ಜಂಗಮ ಧ್ಯಾನಕ್ಕೆ ಸರಿಯಲ್ಲ ನೋಡಾ. ಒಂದು ಕೋಟಿ ವರುಷ ಷೋಡಶ ಮಹಾದಾನಂಗಳ ಮಾಡಿದ ಫಲವು ಒಂದು ದಿನ ಸದ್ಧರ್ಮಿ ಶಿವಯೋಗಿಗೆ ನೀಡಿದ ತೃಪ್ತಿಯ ಮಾಡಿದುದಕ್ಕೆ ಸರಿಯಲ್ಲ ನೋಡಾ. ಅಖಿಳ ಕ್ರಿಯೆಗಳು ಲಿಂಗಜಂಗಮಾರ್ಚನೆ ಕ್ರಿಯೆಗಳೆಗೆ ಸರಿಯಲ್ಲ ನೋಡಾ. ಯೋಗದ ಬಲದಿಂದ ಸಮಸ್ತ ಭೋಗವ ಪಡೆದ ಫಲವು ಒಂದು ವೇಳೆ ಗುರು_ಲಿಂಗ_ಜಂಗಮಕ್ಕೆ ದೀರ್ಘದಂಡ ನಮಸ್ಕಾರವ ಮಾಡಿ ಸನ್ನಿಧಿಯಲ್ಲಿ ಭೃತ್ಯನಾಗಿರ್ದುದಕ್ಕೆ ಸರಿಯಲ್ಲ ನೋಡಾ. ಪ್ರಾಣನ ಬ್ರಹ್ಮರಂಧ್ರದಲ್ಲಿ ಬಿಡುವ ಯೋಗವು ಪ್ರಾಣಲಿಂಗ ಸಂಬಂಧಕ್ಕೆ ಸರಿಯಲ್ಲ ನೋಡಾ [ಗುಹೇಶ್ವರ]
--------------
ಅಲ್ಲಮಪ್ರಭುದೇವರು
ತನ್ನ ಬೆನ್ನ ಎನ್ನನೊಯ್ದ ಮಾಯಾಪಟ್ಟಣವ ಹೊಕ್ಕೆ. ಐದು ಮುಖಂಗಳ ಕಂಡೆನು. ಮುಖದೊಳಗೆ ಮುಖಂಗಳು ಅಗೆಯ ಹೊಯ್ದಂತಿದ್ದವಾತನ ತೂರ್ಯಾವಸ್ಥೆ ವೇದಂದ ಊಧ್ರ್ವಮುಖವಾಗಿ ತುರಿಸುತ್ತಿದ್ದ ಕಾರಣ. ವೇದಪುರದಿಂದತ್ತ ತಲಹಿಲ್ಲದ ಬಯಲಾದನವ್ವಾ, ಎನ್ನ ಕಪಿಲಸಿದ್ಧಮಲ್ಲಿನಾಥದೇವರ ದೇವ.
--------------
ಸಿದ್ಧರಾಮೇಶ್ವರ
-->