ಅಥವಾ

ಒಟ್ಟು 7 ಕಡೆಗಳಲ್ಲಿ , 4 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂತೀ ಅಷ್ಟಾವರಣವ ಸದ್ಗುರುಮುಖದಿಂ ಚಿದಂಗಚಿದ್ಘನಲಿಂಗದ ಮಧ್ಯದಲ್ಲಿ ಸಂಬಂಧವಿಟ್ಟು, ಏಕಲಿಂಗನಿಷ್ಠಾಪರತ್ವದಿಂದ ಸ್ಥೂಲಕಂಥೆಯ ಧರಿಸಿ ಸತ್ಕಾಯಕ-ಸತ್ಕ್ರಿಯಾ-ಸಮ್ಯಜ್ಞಾನ-ಸದ್ಭಕ್ತಿ- ಸದಾಚಾರಸನ್ನಿಹಿತರೆ ನೂತನಗಣಂಗಳೆನಿಸುವರು ನೋಡ. ಅದರಿಂ ಮೇಲೆ ಚಿದಂಗ-ಚಿತ್ಪ್ರಾಣಾಂಗದ ಮಧ್ಯದಲ್ಲಿ ಚಿದ್ಘನಲಿಂಗ-ಚಿತ್ಪ್ರಾಣಲಿಂಗವ ಸದ್ಗುರುಮುಖದಿಂ ಸಂಬಂಧವಿಟ್ಟು ಆ ಲಿಂಗದ ಮಧ್ಯದಲ್ಲಿ ಸಾಕಾರ-ನಿರಾಕಾರವಾದ ಷೋಡಶಾವರಣವ ಸಂಪೂರ್ಣವಮಾಡಿಕೊಂಡು, ಸೂಕ್ಷ್ಮತನುವೆಂಬ ಕಂಥೆಯ ಧರಿಸಿ ಕಂಗಳಾಲಯದ ಜ್ಯೋತಿರ್ಲಿಂಗದ ಮಧ್ಯದಲ್ಲಿ ಮನವ ಮುಳುಗಿಸುವರೆ ಆದಿಗಣಂಗಳೆನಿಸುವರು ನೋಡ. ಅದರಿಂ ಮೇಲೆ, ಚಿದ್ಘನ ತ್ರಿವಿಧಾಂಗ-ಚಿದ್ಘನ ತ್ರಿವಿಧಲಿಂಗವ ಸದ್ಗುರುಮುಖದಿಂ ಸಂಬಂದ್ಥಿಸಿಕೊಂಡು ಆ ಲಿಂಗಾಂಗದ ಮಧ್ಯದಲ್ಲಿ ಕ್ರಿಯಾಷ್ಟಾವರಣ-ಜ್ಞಾನಾಷ್ಟಾವರಣ-ಮಹಾಜ್ಞಾನಾಷ್ಟಾವರಣವ ಸಂಬಂಧವಿಟ್ಟು, ಕಾರಣತನುವೆಂಬ ಕಂಥೆಯ ಧರಿಸಿ, ಹೃತ್ಕಮಲಮಧ್ಯದಲ್ಲಿ ಬೆಳಗುವ ಪರಂಜ್ಯೋತಿರ್ಲಿಂಗಮಧ್ಯದಲ್ಲಿ ಭಾವವ ಮುಳುಗಿಸಿ ಬಚ್ಚಬರಿಯಾನಂದದಲ್ಲಿ ಪರಿಪೂರ್ಣಾನಂದದಿಂದಾಚರಿಸುವರೆ ಅನಾದಿಗಣಂಗಳೆನಿಸುವರು ನೋಡ. ಅದರಿಂ ಮೇಲೆ, ಚಿದ್ಘನ ಅಷ್ಟಾಂಗದ ಮಧ್ಯದಲ್ಲಿ ಚಿದ್ಘನ ಅಷ್ಟಲಿಂಗಂಗಳ ಸದ್ಗುರುಮುಖದಿಂ ಧರಿಸಿ, ಆ ಲಿಂಗಾಂಗದ ಮಧ್ಯದಲ್ಲಿ ಅರುವತ್ತುನಾಲ್ಕು ತೆರದಾವರಣವ ಸಂಬಂದ್ಥಿಸಿಕೊಂಡು ತಮ್ಮ ಸರ್ವಾಂಗದಲ್ಲಿ ಅಷ್ಟವಿಧಕಮಲಂಗಳ ಕಂಡು, ಆ ಕಮಲಮಧ್ಯದಲ್ಲಿ ನೆಲಸಿರ್ಪ ಚತುರ್ವಿಧ ಬಿಂದುಲಿಂಗ, ಷಡ್ವಿಧ ಧಾತುಲಿಂಗ, ದಶವಿಧ ಕ್ಷೇತ್ರಲಿಂಗ, ದ್ವಾದಶ ವಿಕೃತಿಲಿಂಗ, ಷೋಡಶ ಕಳಾಲಿಂಗ, ದ್ವಿವಿಧ ವಿದ್ಯಾಲಿಂಗ, ಸಹಸ್ರ ಶಿವಕಳಾಲಿಂಗ, ತ್ರಿವಿಧ ವಿವೇಕಲಿಂಗ ಇಂತೀ ಅಷ್ಟವಿಧಕಮಲಂಗಳ ಮಧ್ಯದಲ್ಲಿ ನೆಲಸಿರ್ಪ ಅಷ್ಟವಿಧಲಿಂಗಗಳ ಅಷ್ಟವಿಧ ಹಸ್ತಗಳಿಂದ, ಅಷ್ಟವಿಧಾರ್ಚನೆ, ಷೋಡಶೋಪಚಾರಂಗಳ ಮಾಡಿ, ಎರಡಳಿದು ಏಕರೂಪವಾಗಿ ನಿರಾವಯ ಕಂಥೆಯ ಧರಿಸಿ, ಪರತತ್ವ ಜ್ಯೋತಿರ್ಮಯಲಿಂಗದೊಳಗೆ ಉರಿಯುಂಡ ಕರ್ಪುರದಂತೆ ಸಮರಸವಾದರು ನೋಡ. ಅವರಾರೆಂದಡೆ : ರುದ್ರಲೋಕದ ರುದ್ರಗಣಂಗಳು, ಶಿವಲೋಕದ ಶಿವಗಣಂಗಳು, ದೇವಲೋಕದ ದೇವಗಣಂಗಳು, ನಾಗಲೋಕದ ನಾಗಗಣಂಗಳು, ಶಾಂಭವಲೋಕದ ಶಾಂಭವಗಣಂಗಳು ಮುಂತಾದವರು ಬಯಲೊಳಗೆ ಮಹಾಬಯಲು ಬೆರದಂತಾದರು ನೋಡ. ಇಂತೀ ಸರ್ವಾಚಾರಸಂಪತ್ತಿನಾಚರಣೆಯನಾಚರಿಸುವರೆ ನಿರಾವಯಗಣಂಗಳೆನಿಸುವರು ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಕಾಲಜ್ಞಾನಿ, ಕರ್ಮವಿದೂರ, ನಿತ್ಯತೃಪ್ತನೆ, ನಿಮ್ಮಭೇದಿಸುವರಾರು ಹೇಳಾ ಎಲೆ ಅಯ್ಯಾ. ಎನ್ನ ಭವಕರ್ಮವು ಕಳೆಯಲಿಕೆ ಏಕರೂಪವಾಗಿ ಬಂದೆಯಯ್ಯಾ. ನಿಮ್ಮ ಪದಂಗಳೆ ಲಿಂಗವಾಗಿ, ನಿಮ್ಮ ಕರಣಂಗಳೆ ಶ್ರೀಗುರುವಾಗಿ, ನಿಮ್ಮುರುತರಮಪ್ಪ ಜಿಹ್ವೆಯ ಜಂಗಮವಾಗಿ ಬಂದೆಯಯ್ಯಾ. ನೀನು ಶಿಷ್ಯ ಕಾರಣ ಪರಶಿವಮೂರ್ತಿಯಾದುದನು ನಾನಿಂದು ಕಂಡೆ ಕಾಣಾ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆವಾವ ವಿಶ್ವಾಸದಲ್ಲಿ, ಭಕ್ತಿಯ ಮಾಡುವಲ್ಲಿ, ಸತಿ ಸುತ ಬಂಧುಗಳು ಮುಂತಾದ ಬಂಧಿತವಳಯವೆಲ್ಲವೂ ಭಕ್ತಿಗೆ ಏಕರೂಪವಾಗಿ, ಸತ್ಯಕ್ಕೆ ನಿಜರೂಪಾಗಿ. ಕೃತ್ಯಕ್ಕೆ ತಪ್ಪುವರಲ್ಲದೆ, ವಸ್ತು ಭಾವದಲ್ಲಿ ತಪ್ಪದೆ ಇದ್ದಾತನ ಭಕ್ತಿ, ನಿಃಕಳಂಕ ಮಲ್ಲಿಕಾರ್ಜುನನ ನಿಶ್ಚಯದ ನಿಜನಿವಾಸ.
--------------
ಮೋಳಿಗೆ ಮಾರಯ್ಯ
ಅಯ್ಯ, ಶ್ರೀಗುರುಲಿಂಗಜಂಗಮವೇ ರುದ್ರಲೋಕದ ರುದ್ರಗಣಂಗಳಿಗೆ, ಶಾಂಭವಲೋಕದ ಶಾಂಭವಗಣಂಗಳಿಗೆ, ನಾಗಲೋಕದ ನಾಗಗಣಂಗಳಿಗೆ, ದೇವಲೋಕದ ದೇವಗಣಂಗಳಿಗೆ, ಮರ್ತೃಲೋಕದ ಮಹಾಗಣಂಗಳಿಗೆ ಅವರವರ ಮನ-ಭಾವ-ಕಾರಣಂಗಳು ಹೇಗುಂಟೊ ಹಾಂಗೆ ಆಯಾಯ ಪ್ರಸನ್ನೇತಿ ಪ್ರಸಾದವಾಗಿರ್ಪರು ನೋಡ. ಸ್ವರ್ಗ-ಮರ್ತೃ-ಪಾತಾಳಲೋಕದಲ್ಲಿ ಚರಿಸುವ ಹÀರಿಸುರಬ್ರಹ್ಮಾದಿ ದೇವದಾನವಮಾನವ ಮನಮುನಿಗಳೆಲ್ಲ ಅತ್ಯತಿಷ*ದ್ದಶಾಂಗುಲವೆಂದು ಹೊಗಳುವ ಶ್ರುತಿಯಂತೋ ಹಾಂಗೆ ಅವರವರ ಮನದಂತೆ ಮಹಾದೇವನಾಗಿ ಫಲಪದಂಗಳ ಕೊಟ್ಟು, ದುಷ್ಟನಿಗ್ರಹ ಶಿಷ್ಟಪ್ರತಿಪಾಲಕತ್ವದಿಂದ ಸರ್ವಲೋಕಂಗಳಿಗೆಲ್ಲ ಸೂತ್ರಧಾರಿಗಳಾಗಿರ್ಪರು ನೋಡ. ಇಂತು ಏಕಮೇವ ಪರಬ್ರಹ್ಮವೆಂಬ ಶ್ರುತಿಯ ದಿಟವಮಾಡಿ ಪರಮಸ್ವಸ್ಥಿರದ ಮಂಡಲದ ಮೇಲೆ ಶಿವ-ಶಕ್ತಿ, ಅಂಗ-ಲಿಂಗವೆಂಬ ಉಭಯನಾಮವಳಿದು ಶಿಷ್ಯರೂಪಿನಿಂದ ಕುಳ್ಳಿರಿಸಿ ದೀಕ್ಷಾಪಾದೋದಕ ಮಿಶ್ರವಾದ ಗೋಮೂತ್ರದಿಂದ ಸಪ್ತವ್ಯಸನ ಸಂಬಂಧವಾದಂಗ, ಸಪ್ತಧಾತುಸಂಬಂಧವಾದ ಲಿಂಗ, ಇಂತು ಅಂಗದ ಮಲಿನಭಾವ, ಲಿಂಗದ ಶಿವಭಾವವ ಕಳದು, ಕ್ಷೀರ, ಘೃತ, ರಂಭಾ, ಇಕ್ಷು, ಮಧುಯುಕ್ತವಾದ ರಸಪಂಚಾಮೃತವ ಜಂಗಮಚರಣೋದಕ ಮಿಶ್ರದಿಂದ ಅಭಿಷೇಕಮಾಡಿಸಿ, ಅದರಿಂ ಮೇಲೆ ಗುರುಪಾದೋದಕದಲ್ಲಿ ಶರಣಗಣಂಗಳು ಹಸ್ತೋದಕ, ಮಂತ್ರೋದಕ, ಶುದ್ಧೋದಕ, ಗಂಧೋದಕ, ಪುಷ್ಪೋದಕವೆಂಬ ಪಂಚಪರಮಾನಂದ ಜಲದಿಂದ ಅಭ್ಯಂಗಸ್ನಾನ ಮಾಡಿಸಿ, ಹಿಂದು-ಮುಂದಣ ಕಾಲಕಾಮರ ಭಯಕ್ಕೆ ಅಂಜಬೇಡವೆಂದು ತ್ರಿವಿಧಂಗುಲಪ್ರಮಾಣವಾದ ದರ್ಭೆಯ ಅಂತು ಮಾಡಿ ತ್ರಿವಿಧಮಂತ್ರಸ್ಮರಣೆಯಿಂದ ಕಟಿಯಲ್ಲಿ ಧರಿಸಿದರಯ್ಯ. ಆರುವೈರಿಗಳಿಗೆ ಒಳಗಾಗಬೇಡವೆಂದು ಷಡಂಗುಲಪ್ರಮಾಣವಾದ ರಂಭಾಪಟ್ಟೆಯ ಕೌಪೀನವ ಮಾಡಿ ಷಡಕ್ಷರಮಂತ್ರಸ್ಮರಣೆಯಿಂದ ಹರಿಯಜದ್ವಾರಗಳ ಬಂಧಿಸಿದರಯ್ಯ. ಅದರಿಂದ ಮೇಲೆ ನಾರಂಗಶಾಟಿಯ ಪವಿತ್ರತೆಯಿಂ ಹೊದ್ದಿಸಿ, ಶ್ರೀ ಗುರುದೇವನ ಚರಣಕಮಲಕ್ಕೆ ಅಷ್ಟಾಂಗಪ್ರಣಿತನ ಮಾಡಿಸಿ, ಶಿವಶರಣ ಭಕ್ತ ಮಾಹೇಶ್ವರರುಗಳಿಗೆ ಹುಸಿಯ ನುಡಿಯದೆ, ದಿಟವ ಬಿಡದೆ, ಆಪ್ತತ್ವದಿಂದ ನಡೆ-ನುಡಿ, ಕೊಟ್ಟುಕೊಂಬ ವಿಚಾರಂಗಳ ಶ್ರುತಮಾಡಿದಲ್ಲಿ ಶ್ರೀ ಗುರುದೇವನು ಶರಣಗಣ ಒಪ್ಪಿಗೆಯಿಂದ ಶಿಷ್ಯನ ಮಸ್ತಕದ ಮೇಲೆ ಅಭಯಹಸ್ತವನ್ನಿಟ್ಟು, ಗುರುಶಿಷ್ಯಭಾವವಳಿದು, ಗುರುವಿನ ಸೂತ್ರದ ಶಿಷ್ಯಹಿಡಿದು, ಶಿಷ್ಯನ ಸೂತ್ರವ ಗುರುವು ಹಿಡಿದು, ಅಂತರಂಗಬಹಿರಂಗದಲ್ಲಿ ಶಿವಯೋಗಾನುಸಂಧಾನದಿಂದ ಏಕರೂಪವಾಗಿ ಭೃತ್ಯರಿಂದ ಕಳಸಾರ್ಚನೆಯ ರಚಿಸಿ, ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಡಗೂಡಿ ನವರತ್ನಖಚಿತವಾದ ಶೂನ್ಯಸಿಂಹಾಸನದ ಮೇಲೆ ಮೂರ್ತಿಗೊಂಡಿರುವಂಥ ಮಂತ್ರಮೂರ್ತಿ ನಿರಂಜನಜಂಗಮಕ್ಕೆ ವಿಭೂತಿ ವೀಳ್ಯ, ಸುವರ್ಣಕಾಣಿಕೆ, ದಶಾಂಗಘನಸಾರ, ಪುಷ್ಪದಮಾಲೆ, ವಸ್ತ್ರಾಭರಣ ಮೊದಲಾಗಿ ಸಪ್ತಪದಾರ್ಥಂಗಳ ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರ ಮಧ್ಯದಲ್ಲಿ ಇಟ್ಟು ಅಷ್ಟಾಂಗಯುಕ್ತರಾಗಿ ಸ್ವಸ್ಥದೃಢಚಿತ್ತದಿಂದ ಬಹು ಪರಾಕು ಭವರೋಗ ವೈದ್ಯನೆ ಎಂದು ತ್ರಿಕರಣಶುದ್ಧತಿಯಿಂದ ಅಭಿವಂದಿಸುವಂಥಾದ್ದೆ ಸ್ವಸ್ತಿಕಾರೋಹಣದೀಕ್ಷೆ. ಇಂತುಟೆಂದು ಶ್ರೀ ಗುರುನಿಷ್ಕಳಂಕಮೂರ್ತಿ ಚೆನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯ, ವರಕುಮಾರದೇಶಿಕೇಂದ್ರನೆ, ನೀನು ಅಷ್ಟಭೋಗಂಗಳಂ ತ್ಯಜಿಸಿ, ನಿನ್ನ ನಿಜದಿಂದ ನಿನ್ನಾದಿಮಧ್ಯಾವಸಾನವ ತಿಳಿದು ನೋಡಿದಡೆ ನಿನ್ನ ಕಣ್ಣ ಮುಂದೆ ಬಂದಿರ್ಪುದು ನೋಡ ಮಹಾಪ್ರಸಾದವು. ಅದೆಂತೆಂದಡೆ :ಮಹಾಜ್ಞಾನ ತಲೆದೋರಿ ಸರ್ವಸಂಗ ಪರಿತ್ಯಾಗವ ಮಾಡಿ, ಗುರೂಪಾವಸ್ತೆಯಂ ಮಾಡಿದ ಶಿಷ್ಯೋತ್ತಮಂಗೆ ಶ್ರೀಗುರುಲಿಂಗಜಂಗಮವು ಪ್ರತ್ಯಕ್ಷವಾಗಿ ನಾಲ್ವರಾರಾಧ್ಯ ಭಕ್ತ ಮಾಹೇಶ್ವರರೊಡಗೂಡಿ, ಅಂಗಲಿಂಗದ ಪೂರ್ವಾಶ್ರಯವ ಕಳೆದು, ಕುಮಾರ ಠಾವ ಮಾಡಿಸಿ, ಸೇವಾಭೃತ್ಯರಿಂದ ಪಂಚಕಲಶಂಗಳ ಸ್ಥಾಪಿಸಿ, ಸೂತ್ರವ ಹಾಕಿಸಿ, ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿಸಿ, ತಮ್ಮ ಕೃಪಾಹಸ್ತವನ್ನಿಟ್ಟು, ಜಂಗಮಮೂರ್ತಿಗಳ ಸಿಂಹಾಸನದ ಮೇಲೆ ಮೂರ್ತವ ಮಾಡಿಸಿ, ಶ್ರೀಗುರುಲಿಂಗವು ಎದ್ದು ಪ್ರಮಥರೊಡಗೂಡಿ, ಕುಮಾರ ಠಾವಮಾಡಿದಂಗಲಿಂಗವ ತನ್ನ ಚರಣತಳಕ್ಕೆ ಸೂತ್ರವ ಹಿಡಿಸಿ, ಗುರು-ಶಿಷ್ಯತ್ವವೆಂಬ ಉಭಯಭೇದವಳಿದು ಏಕರೂಪವಾಗಿ ನಿರಂಜನಜಂಗಮಮೂರ್ತಿಗೆ ಅಭಿವಂದಿಸಿ ಅಷ್ಟಾಂಗಪ್ರಣತರಾಗಿ, ಅಪ್ಪಣೆಯ ಬೆಸಗೊಂಡು, ಆ ನಿರಂಜನ ಜಂಗಮಮೂರ್ತಿಗೆ ಪ್ರತಿಸಿಂಹಾಸನವ ಮಾಡಿಸಿ, ಮೂರ್ತಗೊಳಿಸಿ, ಗುರುಶಿಷ್ಯರಭಿಮುಖರಾಗಿ, ಗುರುವಿನ ದೃಕ್ಕು ಶಿಷ್ಯನಮಸ್ತಕದ ಮೇಲೆ ಸೂಸಿ, ಶಿಷ್ಯನ ದೃಕ್ಕು ಗುರುವಿನ ಚರಣಕಮಲದಲ್ಲಿ ಸೂಸಿ, ಏಕಲಿಂಗನೈಷೆ*ಯಿಂದ ಸಾವಧಾನಭಕ್ತಿ ಕರಿಗೊಂಡು, ಆ ಲಿಂಗಾಂಗದ ಭಾಳದ ಪೂರ್ವಲಿಖಿತವ ಜಂಗಮದ ಚರಣೋದ್ಧೂಳನದಿಂದ ತೊಡದು, ಲಿಂಗಾಂಗಕ್ಕೆ ಇಪ್ಪತ್ತೊಂದು ಪೂಜೆಯ ಮಾಡಿಸಿ, ಲಿಂಗಕ್ಕೆ ಅಂಗವ ತೋರಿ, ಅಂಗಕ್ಕೆ ಲಿಂಗವ ತೋರಿ, ಪಾಣಿಗ್ರಹಣವ ಮಾಡಿ, ಕರ್ಣದಲ್ಲಿ ಮಂತ್ರವನುಸುರಿ, ಪ್ರಮಥರೊಡಗೂಡಿ ಶಾಸೆಯನೆರದು, ಕಂಕಣವಕಟ್ಟಿ, ನಿಮಿಷಾರ್ಧವಗಲಬೇಡವೆಂದು ಅಭಯಹಸ್ತವನಿತ್ತು, ಸರ್ವಾಂಗದಲ್ಲಿ ಚಿದ್ಘನಲಿಂಗವನಿತ್ತುದೆ ಪ್ರಥಮದಲ್ಲಿ ಗುರುಪ್ರಸಾದ ನೋಡ. ಅದರಿಂ ಮೇಲೆ ಕ್ರಿಯಾಮಂತ್ರವ ಹೇಳಿ, ದಶವಿಧ ಪಾದೋದಕವ ಏಕಾದಶಪ್ರಸಾದವ ಕರುಣಿಸಿದ್ದುದೆ ದ್ವಿತೀಯದಲ್ಲಿ ಲಿಂಗಪ್ರಸಾದ ನೋಡ. ಅದರಿಂ ಮುಂದೆ ಲಿಂಗಾಂಗದ ಷಟ್ಸ್ಥಾನಂಗಳಲ್ಲಿ ಅಷ್ಟವಿಧಸಕೀಲು ಮೊದಲಾಗಿ ಸಮಸ್ತ ಸಕೀಲವರ್ಮವ ಕರುಣಿಸಿದ್ದುದೆ ತೃತೀಯದಲ್ಲಿ ಜಂಗಮಪ್ರಸಾದ ನೋಡ. ಅದರಿಂದತ್ತ ಲಿಂಗಾಂಗವೆರಡಳಿದು, ಸರ್ವಾಚಾರಸಂಪತ್ತಿನಾಚರಣೆಯ ತೋರಿ, ಮಹಾಪ್ರಸಾದ ಶಿವಾನುಭಾವಸ್ವರೂಪವ ಬೋಧಿಸೆ, ಶ್ರೀಗುರುಲಿಂಗಜಂಗಮದಂತರಂಗದಲ್ಲಿ ಬೆಳಗುವ ಚಿಜ್ಜ್ಯೋತಿಶರಣನೆ ಚತುರ್ಥದಲ್ಲಿ ನಿಜಪ್ರಸಾದ ನೋಡ. ಈ ಚತುರ್ವಿಧ ಪ್ರಸಾದ ಸ್ವರೂಪವೆ ನೀನೆಂದರಿದು, ಇನ್ನಾವ ಭಯಕ್ಕೆ ಹೆದರಬೇಡಯ್ಯ! ಪ್ರಮಥರಾಚರಿಸಿದ ಆಚಾರಕ್ರಿಯಾಜ್ಞಾನಾಚರಣೆ ಸಂಬಂಧಕ್ಕೆ, ಬಂದುದು ಕೊಂಡು, ಬಾರದುದನುಳಿದು ಚಿದ್ಘನಮಹಾಲಿಂಗದಲ್ಲೇಕವಾಗಿ ಬಾರಾ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಒಂದು ದ್ವಾರದಲ್ಲಿ ಬಂದ ಆತ್ಮಂಗೆ, ಹಲವು ದ್ವಾರದಲ್ಲಿ ಉಂಟೆಂದು, ಹೊಲಬುದಪ್ಪಿ ನುಡಿದವರ ನೋಡಾ. ವಾಯು ಒಂದಲ್ಲದೆ ಶತವಾಯುವಿಲ್ಲೆಂದೆ, ಇಂದ್ರಿಯ ಒಂದಲ್ಲದೆ ಐದಿಲ್ಲವೆಂದೆ. ಕರಣ ಒಂದಲ್ಲದೆ ನಾಲ್ಕಿಲ್ಲವೆಂದೆ, ಮದ ಒಂದಲ್ಲದೆ ಎಂಟಿಲ್ಲವೆಂದು. ವ್ಯಸನ ಒಂದಲ್ಲವೆ ಏಳಿಲ್ಲವೆಂದೆ, ಆಧಾರ ಒಂದಲ್ಲದೆ ಷಡಾಧಾರವಿಲ್ಲವೆಂದೆ. ಒಂದು ಬೀಜದಲ್ಲಿ ಅದ ಹಣ್ಣಿನ ರುಚಿಗೆ, ನಾನಾ ಫಲದ ರಸದ ರುಚಿ ಉಂಟೆ? ಆ ಬೀಜ ಮೊಳೆತಲ್ಲಿ ಏಕರೂಪವಾಗಿ ತಲೆದೋರಿತ್ತು. ಬಲಿದು ಮತ್ತೆ ಹಲವುರೂಪಾಗಿ ಪಲ್ಲವಿಸಿತ್ತು. ನೆಲೆಯ ಕಡಿದ ಮತ್ತೆ ರೂಪೆಲ್ಲ ನೆಲೆಯೊಳಡಗಿದವು. ಸೆಲೆಸಂದ ಹೊನ್ನಿಂಗೆ ಒಟ್ಟವುಂಟೆ? ಬಲುಹು ಮುರಿದವಂಗೆ ರಣದ ಸುದ್ದಿಯೇಕೋ? ಜಲದಲ್ಲಿ ಮುಳುಗಿದವಂಗೆ ಇಳೆಯವರ ಸುದ್ದೀಯೇಕೋ? ಇದು ಕಾರಣ, ನಾನಾ ವರ್ಣದ ಹೇಮವ ಭಾವಿಸಿ, ಒಂದರಲ್ಲಿ ಕಡೆಗಾಣಿಸಿದ ಮತ್ತೆ ಭಾವನೆಯ ಬಣ್ಣ ಒಂದಲ್ಲದೆ ಮತ್ತೆ ಭಾವಿಸಲಿಲ್ಲವಾಗಿ, ಅರಿದಲ್ಲಿ ಜ್ಞಾನ, ಮರೆದಲ್ಲಿ ಅಜ್ಞಾನ, ನಾನಾರೆಂಬುದನರಿದಲ್ಲಿಯೆ ಒಂದು ಗುಣ ನಿಂದಿತ್ತು. ತನ್ನ ಮರೆದಲ್ಲಿಯೆ ನಾನಾ ಸಂಚಲನವಾಯಿತ್ತು, ಇದಕ್ಕಿದೇ ದೃಷ್ಟ. ದೇಹವಿಡಿದುದಕ್ಕೆರಡಿಲ್ಲದೆ ಮೀರಲಿಲ್ಲವಾಗಿ, ಜಗವನರಿವುದಕ್ಕೆ ದಿವರಾತ್ರಿಯದೆ ಮೀರಿ ತೋರಲಿಲ್ಲವಾಗಿ, ಸಂಸಾರ ಹರಿವುದಕ್ಕೆ ನಿಃಕಳಂಕ ಮಲ್ಲಿಕಾರ್ಜುನನಲ್ಲದಿಲ್ಲವಾಗಿ.
--------------
ಮೋಳಿಗೆ ಮಾರಯ್ಯ
ನಾನಾ ವರ್ಣಕ್ಕೆ ಶ್ವೇತಾಂಗ ಅಂಗವಾಗಿ ಮಿಕ್ಕಾದ ವರ್ಣಂಗಳಿಗೆ ಇಂಬುಗೊಟ್ಟಂತೆ. ಐಕ್ಯಸ್ಥಲ ಆದಿಯಾಗಿ, ಶರಣಸ್ಥಲ ಸಂಬಂಧಿಯಾಗಿ ಪ್ರಾಣಲಿಂಗಿಸ್ಥಲ ಏಕವಾಗಿ, ಪ್ರಸಾದಿಸ್ಥಲ ಪರಿಪೂರ್ಣವಾಗಿ ಮಾಹೇಶ್ವರಸ್ಥಲ ಮಾಯಾಮಲಂ ನಾಸ್ತಿಯಾಗಿ ಭಕ್ತಿಸ್ಥಲ ಸರ್ವಗುಣಸಂಪನ್ನವಾಗಿ ಅಳಿವು ಉಳಿವು ಗರ್ಭಾಂತರವನರಿತು ನೋಡನೋಡ ಮಹದೊಡಲಿಕ್ಕೆ ರಂಜನೆ ಬಿಸಿಲೊಳಗಡಗಿ, ಬಿಸಿಲು ರಂಜನೆಯ ನುಂಗಿ ಉತ್ತರ ಪೂರ್ವವ ಹೊತ್ತಾಡಿ, ಪೂರ್ವ ಉತ್ತರದಲ್ಲಿ ನಿಶ್ಚಯವಾಗಿ ಬೆಸುಗೆ ಕಲೆದೋರದೆ ಉಭಯಚಕ್ಷು ಏಕರೂಪವಾಗಿ ಲಕ್ಷಿಸಿ ನಿರ್ಧರವೆಂದಲ್ಲಿ ಗುರಿಯನೆಚ್ಚ ಕರ ಅಹುದಲ್ಲಾ ಎಂಬುದನರಿದಂತೆ ಕ್ರೀಯಲ್ಲಿ ಮಾರ್ಗ, ಜ್ಞಾನದಲ್ಲಿ ನಿಶ್ಚಯ ಇಂತಿವನರಿದು ಅರುಹಿಸಿಕೊಂಬ ಭೇದ. ಕರ್ತೃಭೃತ್ಯಸಂಬಂಧ ವಸ್ತು ಶಕ್ತಿಸಮೇತವಾದ ಭೇದ. ಇಂತೀ ಸ್ಥಳಂಗಳು, ಭಕ್ತಿಗೆ ನಾಮರೂಪಾದ ಭೇದವನರಿತು ಸ್ಥಲಂಗಳ ಹಂಚಿಹಾಕಿ, ಕುರುಡ ದಡಿವಿಡಿದು ನಡೆವಂತೆ ಷಟ್‍ಸ್ಥಲಭೇದ. ಆ ಭೇದಲೋಲುಪ್ತನಾಗಿ ಸರ್ವಾಂಗಲಿಂಗಭರಿತನಾಗಿ ಆಹ್ವಾನ ವಿಸರ್ಜನವಿಲ್ಲದೆ ನಾಮರೂಪೆಂಬ ಉಭಯವಳಿದು ಕಲೆ ತಲೆದೋರದೆ ನಿಂದ ಉಳುಮೆ ಐಕ್ಯಸ್ಥಲಕೂಟ ನಿರ್ವಾಹ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
-->