ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇದಶ್ರುತಿಯಿಂದ ವಸ್ತುವನರಿತೆಹೆನೆಂದಡೆ ಆ ವೇದವೆ ಹಾದಿಯೆ ವಸ್ತುವ ಕಾಬುದಕ್ಕೆ ? ಆ ವೇದ ಸರ್ವವು ಬ್ರಹ್ಮವೆಂದಲ್ಲಿ ವಸ್ತು ಎಲ್ಲಿ ಉಳಿಯಿತ್ತು ? ಆ ತೆರನ ತಿಳಿದು ವೇದವಾರನರಸಿತ್ತು ? ಶ್ರುತಿ ಯಾರ ಭೇದಿಸಿತ್ತು ? ಆ ಗುಣ ನಾದಬಿಂದುಕಳೆಯೊಳಗಾದಲ್ಲಿ ವಸ್ತುತತ್ವರೂಪಾಯಿತ್ತು. ಆ ಸ್ವರೂಪದ ಭೇದದಿಂದ ಪಂಚಭೌತಿಕದ ಗುಣದಿಂದ ಪಂಚವಿಂಶತಿತತ್ವಂಗಳೆಲ್ಲವೂ ಗೊತ್ತಾದವು. ನಾಲ್ಕು ವೇದ, ಹದಿನಾರು ಶಾಸ್ತ್ರ, ಇಪ್ಪತ್ತೆಂಟು ದಿವ್ಯಪುರಾಣಂಗಳಲ್ಲಿ ವೇದ್ಥಿಸಿ ಭೇದಿಸಿ ಕಂಡೆನೆಂಬಲ್ಲಿ ನಿಂದಿತ್ತು ನಿಜ ಸಂದೇಹಕ್ಕೆ ಒಳಗಾದುದಾಗಿ. ತರ್ಕಂಗಳಿಂದ ತರ್ಕಿಸಿ ನೋಡಿ ಮಿಕ್ಕಾದ ತತ್ವಂಗಳಲ್ಲಿ ಲಕ್ಷಿಸಿ ಪ್ರಮಾಣಿಸಿದಲ್ಲಿ ವಸ್ತು ಹಲವು ಕುಲವೆಂದು ಕಲ್ಪಿಸಿ ನುಡಿವಲ್ಲಿ ವಿಭೇದ ಪಕ್ಷವಲ್ಲದೆ ವಸ್ತು ಏಕರೂಪು. ಜಲ ಬಹುನೆಲಂಗಳಲ್ಲಿ ನಿಂದು ಒಲವರವಿಲ್ಲದೆ ಸಸಿ ವೃಕ್ಷಂಗಳ ಸಲಹುವಂತೆ ಸರ್ವಗುಣಸಂಪನ್ನನಾದೆಯಲ್ಲಾ ಪರಮಪ್ರಕಾಶ ಪರಂಜ್ಯೋತಿ ಪಂಚಬ್ರಹ್ಮಸ್ವರೂಪನಾದೆಯಲ್ಲಾ ಎನಗೆ ನೀನಾದೆಹೆನೆಂದು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ.
--------------
ಪ್ರಸಾದಿ ಭೋಗಣ್ಣ
ಏಕರೂಪವಾದ ತೆರನ ತಿಳಿದು, ಆ ಏಕರೂಪು ತ್ರಿವಿಧಸಂಬಂದ್ಥಿಯಾಗಿ, ಆ ತ್ರಿವಿಧಸ್ಥಲದಲ್ಲಿ ಕರ್ತೃ ತ್ರಿವಿಧ ಕೂಡಲಾಗಿ ಕಾಯ ಜೀವದಂತೆ ಉಭಯಸ್ಥಲವಾಯಿತ್ತು. ಉಭಯಸ್ಥಲ ಪ್ರಥಮಸ್ಥಲದಲ್ಲಿ ಕೂಡಲಿಕ್ಕೆ ಏಕಸ್ಥಲ, ಐಕ್ಯ ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ
ಪಿಂಡ ಪಿಂಡಸ್ಥಲವಾದಲ್ಲಿ ಆತ್ಮನೆರಡುಂಟೆ ? ಕರಚರಣ ಅವಯವಾದಿಗಳು ಹಲವಲ್ಲದೆ, ಆತ್ಮ ಹಲವುಂಟೆ ? ಅದು ಏಕರೂಪು ವರುಣನ ಕಿರಣದಂತೆ. ನಿನ್ನ ನೀ ತಿಳಿ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ.
--------------
ಮೋಳಿಗೆ ಮಾರಯ್ಯ
ಧ್ಯಾನ ಆಧ್ಯಾತ್ಮಿಕದಲ್ಲಿ ಕಂಡಹೆನೆಂಬುದು ಜೀವನಲ್ಲದೆ ಪರಮನಲ್ಲ. ಜಪ ತಪ ನೇಮ-ನಿತ್ಯಂಗಳಿಂದ ಕಂಡಹೆನೆಂಬುದು ಪ್ರಕೃತಿಯಲ್ಲದೆ ಸುಚಿತ್ತವಲ್ಲ. ಭಾವದಿಂದ ಪ್ರಮಾಣಿಸುವುದೆ ಏಕರೂಪು, ಗುಹೇಶ್ವರಲಿಂಗವು ತಾನೆ.
--------------
ಅಲ್ಲಮಪ್ರಭುದೇವರು
ಒಂದು ಯೋನಿಯಲ್ಲಿ ಬಂದ ಮಕ್ಕಳ ವಿವರ: ಕಡೆ ನಡು ಮೊದಲೆಂದು ಕುರುಹಿಟ್ಟು ಕರೆದಡೆ ನುಡಿವಂತೆ ಅವರ ಪರಿ. ನಾಮಧೇಯದಲ್ಲಿ ಕರೆದಡೆ ಓ ಎಂಬಂತೆ ಅದು ಏಕರೂಪು. ಸರ್ವಮಯನಾಗಿ ಸಂಪದಕ್ಕೆ ಬಂದುದನರಿ; ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
-->