ಅಥವಾ

ಒಟ್ಟು 7 ಕಡೆಗಳಲ್ಲಿ , 4 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕರೂಪವಾದ ತೆರನ ತಿಳಿದು, ಆ ಏಕರೂಪು ತ್ರಿವಿಧಸಂಬಂದ್ಥಿಯಾಗಿ, ಆ ತ್ರಿವಿಧಸ್ಥಲದಲ್ಲಿ ಕರ್ತೃ ತ್ರಿವಿಧ ಕೂಡಲಾಗಿ ಕಾಯ ಜೀವದಂತೆ ಉಭಯಸ್ಥಲವಾಯಿತ್ತು. ಉಭಯಸ್ಥಲ ಪ್ರಥಮಸ್ಥಲದಲ್ಲಿ ಕೂಡಲಿಕ್ಕೆ ಏಕಸ್ಥಲ, ಐಕ್ಯ ಸದ್ಯೋಜಾತಲಿಂಗದಲ್ಲಿ.
--------------
ಅವಸರದ ರೇಕಣ್ಣ
ಭಕ್ತಿಸ್ಥಲವಾರು, ಮಹೇಶ್ವರಸ್ಥಲವಾರು, ಪ್ರಸಾದಿಸ್ಥಲವಾರು, ಪ್ರಾಣಲಿಂಗಿಸ್ಥಲವಾರು, ಶರಣಸ್ಥಲವಾರು, ಐಕ್ಯನ ಐಕ್ಯ ಆರೆಂಬಲ್ಲಿ, ನೇತಿಗಳೆದು ಸ್ಥಲನಿಂದ ಮತ್ತೆ ಐಕ್ಯನ ಆರುಕೂಟವಾವುದಯ್ಯಾ ? ಅದು ದರ್ಪಣದ ಭಾವದೊಪ್ಪ. ಅದು ಭಾಗೀರಥಿಯ ಅಪ್ಪುವಿನ ಭೇದ. ಇದು ಆರ ಭಾವಕ್ಕೂ ತಪ್ಪದ ಸ್ಥಲ. ಸಂದೇಹವುಳ್ಳನ್ನಕ್ಕ ಷಟ್ಸ್ಥಲ, ಸಂದೇಹ ನಿಂದು ಒಂದೆಂದಲ್ಲಿ ಏಕಸ್ಥಲ. ಏಕಸ್ಥಲ ಪ್ರತಿರೂಪಾಗಿ ಕರ್ತೃಭೃತ್ಯನೆಂಬ ಉಭಯರೂಪಾಯಿತ್ತು. ಉಭಯದ ರೂಪಿಂದ ಹಲವುಸ್ಥಲ ಒಲವರವಾಯಿತ್ತು. ಆ ಹೊಲಬ ತಿಳಿದು, ಸಲೆ ವಸ್ತು ಒಂದೆಂದಲ್ಲಿ ಸ್ಥಲಲೇಪ, ನಿಃಕಳಂಕ ಮಲ್ಲಿಕಾರ್ಜುನಲಿಂಗವೆಂಬ ಕುರುಹಡಗಿದಲ್ಲಿ.
--------------
ಮೋಳಿಗೆ ಮಾರಯ್ಯ
ಭಕ್ತನ ಅಂಗಸ್ಥಲ, ಮಹೇಶ್ವರನ ಭಾವಸ್ಥಲ, ಪ್ರಸಾದಿಯ ಜ್ಞಾನಸ್ಥಲ, ಪ್ರಾಣಲಿಂಗಿಯ ಉಭಯಸ್ಥಲ, ಶರಣನ ಏಕಸ್ಥಲ, ಐಕ್ಯನ ಕೂಟಸ್ಥಲ. ಇಂತೀ ಆರುಸ್ಥಲವ ವೇಧಿಸಿ ನಿಂದಲ್ಲಿ, ಮಹದೈಕ್ಯ ಏಕಮೂರ್ತಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪ್ರಥಮ ಮೂಲದಲ್ಲಿ ನಿರಾಕಾರವಸ್ತು ಸಾಕಾರವಾಯಿತ್ತು. ಆಚಾರಕ್ಕೋಸ್ಕರವಾಗಿ ವಸ್ತು ಅನಾಚಾರಿಯಾದ. ಅನಾಹತ ಸಂಸಿದ್ಧ ಆಗಲಾಗಿ ವಿಚಾರಮುಖದಿಂದ ಆಚಾರ್ಯನಾದ. ಆ ಮರದ ಶಾಖೆಯ ತೊಡಪಿಂದ ಆ ಮರದ ಫಲದ ಕೈಗೆ ತಾಹಂತೆ ಈ ಗುಣ ಕ್ರೀ ನಿಃಕ್ರೀಯೆಂಬ ಉಭಯವಿವರದ ಭೇದ. ಉಭಯಕ್ಕೆ ಒಂದು ಶುದ್ಧವಾದಲ್ಲಿ ಒಂದಲ್ಲಿ ಒಂದು ಸಂದಿತ್ತು. ಈ ಗುಣ ಕ್ರೀ ನಿಃಕ್ರೀಲೇಪ, ಏಕಸ್ಥಲ ಐಕ್ಯನ ಕೂಟ ಗೋಪತಿನಾಥ ವಿಶ್ವೇಶ್ವರಲಿಂಗದ ಒಳಗಿನಾಟ.
--------------
ತುರುಗಾಹಿ ರಾಮಣ್ಣ
ಇಂತೀ ವಾಚಾಶ್ರುತಿಗಳಲ್ಲಿ ಸರ್ವವೇದ ಶಾಸ್ತ್ರ ಪುರಾಣ ಆಗಮಂಗಳಲ್ಲಿ ಪಂಚಾಶತ್ಕೋಟಿ ವಿಸ್ತೀರ್ಣದೊಳಗಾದ ಕವಿ ಗಮಕಿ ವಾದಿ ವಾಗ್ಮಿಗಳು ಮುಂತಾದ ಪೂರ್ವತತ್ವ ನೂತನಪ್ರಸಂಗ ಮುಂತಾದ ಸರ್ವಯುಕ್ತಿ ಸ್ವಯಂಸಂಪನ್ನರು ಷಟ್ಸ್ಥಲಬ್ರಹ್ಮ ಪಂಚವಿಂಶತಿತತ್ವ ಶತ ಏಕಸ್ಥಲ ಮುಂತಾದ ಸರ್ವಸಾರಸಂಪನ್ನರಿಗೆಲ್ಲಕ್ಕೂ ಹಾಕಿದ ಮುಂಡಿಗೆ. ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವಮೂರ್ತಿಗಳೆಲ್ಲವೂ ಅನಾದಿವಸ್ತುವಿನ ಬೀಜರೇಣು. ಅದಕ್ಕೆ ಪ್ರಥಮಾಚಾರ್ಯರು ಬಸವಣ್ಣ ಚೆನ್ನಬಸವಣ್ಣ ಪ್ರಭು ತ್ರೈಮೂರ್ತಿಗಳು. ತ್ರಿಗುಣ ಏಕಾತ್ಮಕವಾಗಿ ಗುರುಲಿಂಗಜಂಗಮ ಮೂರೊಂದಾದಂತೆ ಭಕ್ತಿ, ಜ್ಞಾನ, ವೈರಾಗ್ಯ ತ್ರಿವಿಧ ಬೆಚ್ಚಂತೆ ಸ್ಥೂಲ, ಸೂಕ್ಷ್ಮ, ಕಾರಣ ತ್ರಿವಿಧ ಏಕವಾದಂತೆ ರೂಪು, ರುಚಿ, ಗಂಧ ಸೌಖ್ಯಸಂಬಂಧವಾದಂತೆ ಮತ್ರ್ಯಕ್ಕೆ ಬಂದು, ಭಕ್ತಿವಿರಕ್ತಿಗೆ ಸಲೆ ಸಂದು ನಿಶ್ಚಯವಾದ ಶರಣಸಂಕುಳಕ್ಕೆ ಕರ್ತ ನೀನೊಬ್ಬನಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗಾ.
--------------
ಪ್ರಸಾದಿ ಭೋಗಣ್ಣ
ಹುತ್ತದಲ್ಲಿ ಕೈಯನಿಕ್ಕಿ ಸರ್ಪನ ತೆಗೆವಾಗ, ಸರ್ಪನ ಒಪ್ಪತಪ್ಪಿ, ಮತ್ತೆ ವಸ್ತುವಿನ ನೇವಳ ಆಭರಣವಹಲ್ಲಿ, ಅದಾರ ದೃಷ್ಟ ? ಮತ್ತೆ ನಿರ್ಧನಿಕ ವಿಶ್ವಾಸದಿಂದ ಬಸವಣ್ಣ ಮುಂತಾದ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಕೃತ್ಯ ತಪ್ಪದೆ ಇಕ್ಕುವಾಗ ಅದಾರ ವಿಶ್ವಾಸ ಹೇಳಾ ? ನಾ ಹೊತ್ತ ಕಟ್ಟಿಗೆಯ ಸರಬು ಮತ್ತೆ ಸುವರ್ಣದಂಡವಾದಾಗ ಆದಾರ ನಿಶ್ಚಯದ ವಿಶ್ವಾಸ ? ಅವು ತಮ್ಮ ಚಿತ್ತದ ದೃಢತೆಯಿಂದ ಗುರುವಿಂಗೆ ತನುವೆಂದಲ್ಲಿ, ಕಂಡಲ್ಲಿಯೆ ಆತ್ಮತೇಜವಳಿದು ಹೊಡೆಗೆಡೆಯಬೇಕು. ಲಿಂಗಕ್ಕೆ ಮನ ಮುಟ್ಟಿ ಪೂಜೆಯ ಮಾಡುವಲ್ಲಿ, ರಾಜ ಚೋರ ಅನಲ ಅಹಿ ಮುಂತಾದ ಭಯಂಗಳಿಗೆ ತಲೆದೋರದಿರಬೇಕು. ಜಂಗಮಾರ್ಚನೆಯ ಮಾಡುವಲ್ಲಿ, ಅರ್ಥ ಪ್ರಾಣ ಅಪಮಾನಕ್ಕೆ ಕಟ್ಟುಮೆಟ್ಟದಿರಬೇಕು. ಇಂತೀ ತ್ರಿವಿಧ ವಿಶ್ವಾಸ ಭಕ್ತಂಗೆ ಮೂರುಸ್ಥಲ ಮುಂತಾಗಿ, ಆರುಸ್ಥಲವೊಳಗಾಗಿ ನೂರೊಂದುಸ್ಥಲ ವೇಧಿಸಿ ನಿಂದಲ್ಲಿ, ಅದು ಒಂದೆ ವಿಶ್ವಾಸದ ಒಡಲು. ಇದಕ್ಕೆ ಹಲವು ಮಾತನಾಡಿ, ನಾನಾಸ್ಥಲ ಉಂಟೆಂದು ಹಲಬುತ್ತಿರಲಿಲ್ಲ. ಇದು ನೆಲೆ, ವಸ್ತುವಿನ ಏಕಸ್ಥಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->