ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟದಲ್ಲಿ ನೋಟ, ಜ್ಞಾನದಲ್ಲಿ ಕೂಟ ಏಕಾರ್ಥವಾದಲ್ಲಿ ಕಾಯವೆಂಬ ಕದಳಿಯ ಬಿಟ್ಟುದು ಭಾವವೆಂಬ ಕುರುಹ ಮರೆದುದು. ಇಂತೀ ಉಭಯ ನಿರ್ಭಾವವಾದಲ್ಲಿ ಇಹಪರವೆಂಬ ಹೊಲಬುಗೆಟ್ಟಿತ್ತು, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ಒಂದೆಂದಲ್ಲಿ
--------------
ಮೋಳಿಗೆ ಮಹಾದೇವಿ
ಪ್ರಥಮದಲ್ಲಿ ವಸ್ತು ಏನೂ ಏನೂ ಇಲ್ಲದ ಮಹಾಘನಶೂನ್ಯಬ್ರಹ್ಮವಾಗಿದ್ದಿತ್ತು. ಅಂತಿರ್ದ ಪರವಸ್ತು ತಾನೆ, ತನ್ನ ಲೀಲೆಯಿಂದ, ತನ್ನ ದಿವ್ಯಾನಂದ ಸ್ವಲೀಲಾ ಸ್ವಭಾವದಿಂದಾದುದು ಆತ್ಮನೆಂಬಂಗಸ್ಥಲ. ಅಂತಾದ ಜೀವಾತ್ಮನೆಂಬ ಅಂಗಸ್ಥಲಕ್ಕೆ ಸೇರಿದ ತತ್ವಂಗಳಿಪ್ಪತ್ತೈದು. ಅವಾವುವಯ್ಯಾ ಎಂದಡೆ: ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು, ವಾಗಾದಿ ಕರ್ಮೇಂದ್ರಿಯಂಗಳೈದು, ಶಬ್ದಾದಿ ವಿಷಯಂಗಳೈದು, ಪ್ರಾಣಾದಿ ವಿಷಯಂಗಳೈದು, ಮನ ಬುದ್ಧಿ ಚಿತ್ತ ಅಹಂಕಾರ ಜೀವಂಗಳೈದು._ ಅಂತು ಅಂಗ ತತ್ವಂಗಳಿಪ್ಪತ್ತೈದು. ಇಂತು ಅಂಗತತ್ವ ಇಪ್ಪತ್ತೈದು ತನ್ನೊಳಗೆ ಸಮರಸತ್ವನೆಯ್ದಿಸಲೋಸುಗ, ಭಕ್ತಿ ತದರ್ಥವಾಗಿ, ಆ ಮಹಾಘನ ಪರಾತ್ಪರವಪ್ಪ ದಿವ್ಯಲಿಂಗವು ಹನ್ನೊಂದು ತತ್ವವಾಯಿತ್ತು. ಇಂತೀ ಹನ್ನೊಂದು ತತ್ವದ ಪರಿಕ್ರಮವೆಂತೆಂದೊಡೆ: ಶಾಂತ್ಯಾದಿ ಶಕ್ತಿಗಳೈದು, ಶಿವಾದಿ ಸಾದಾಖ್ಯಗಳೈದು, ಪರಶಿವತತ್ವವೊಂದು._ ಇಂತೀ ಲಿಂಗತತ್ತ್ವ ಹನ್ನೊಂದು. ಆ ಅಂಗತತ್ತ್ವ ಲಿಂಗತತ್ತ್ವವೆಂಬ ಉಭಯತತ್ತ್ವ ಮೂವತ್ತಾರು. ಇಂತಿವರ ಸಮರಸೈಕ್ಯವೆಂತುಂಟಯ್ಯಾ ಎಂದಡೆ: ನಿವೃತ್ತಿಶಕ್ತಿಯನೈದಿ, ವಾಗಾದಿ ಕರ್ಮೇಂದ್ರಿಯಂಗಳೈದು ಕರ್ಮ ಸಾದಾಖ್ಯವನೊಡಗೂಡಿದಲ್ಲಿ, ಪೃಥ್ವಿ ತತ್ತ್ವ ಬಯಲಾಯಿತ್ತು. ಪ್ರತಿಷಾ*ಶಕ್ತಿಯನೈದಿ, ಶಬ್ದಾದಿ ವಿಷಯಂಗಳೈದು ಕರ್ತುಸಾದಾಖ್ಯವನೊಡಗೂಡಿದಲ್ಲಿ, ಅಪ್ಪು ತತ್ತ್ವ ಬಯಲಾಯಿತ್ತು. ವಿದ್ಯಾಶಕ್ತಿಯನೈದಿ, ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು ಮೂರ್ತಿ ಸಾದಾಖ್ಯವನೊಡಗೂಡಿದಲ್ಲಿ, ತೇಜತತ್ತ್ವ ಬಯಲಾಯಿತ್ತು. ಶಾಂತಿಶಕ್ತಿಯನೈದಿ, ಪ್ರಾಣಾದಿವಾಯುಗಳೈದು ಅಮೂರ್ತಿಸಾದಾಖ್ಯವನೊಡಗೂಡಿದಲ್ಲಿ, ವಾಯುತತ್ತ್ವ ಬಯಲಾಯಿತ್ತು. ಶಾಂತ್ಯತೀತ ಶಕ್ತಿಯನೈಯ್ದಿ, ಮನ ಬುದ್ಧಿ ಚಿತ್ತ ಅಹಂಕಾರ ಜೀವಂಗಳೈದು ಶಿವಸಾದಾಖ್ಯವನೊಡಗೂಡಿದಲ್ಲಿ, ಆಕಾಶತತ್ತ್ವ ಬಯಲಾಯಿತ್ತು. ಇಂತೀ ಪಂಚವಿಂಶತಿತತ್ತ್ವಂಗಳು ಲಿಂಗೈಕ್ಯವಾಗಲೊಡನೆ, ಲಿಂಗತತ್ತ್ವ ಹನ್ನೊಂದು ತಾವು ಒಂದೊಂದನೊಡಗೂಡಿ ಏಕಾರ್ಥವಾದಲ್ಲಿ, ಕುಳಸ್ಥಲವಡಗಿತ್ತು. ಇಂತು ಕುಳಸ್ಥಲ_ಸ್ಥಲಕುಳವಡಗಲೊಡನೆ, ಮಹಾಘನ ಪರಾತ್ಪರವಪ್ಪ ದಿವ್ಯಲಿಂಗವು, ವಾರಿಕಲ್ಲು ಕರಗಿ ನೀರಾದಂತೆ ತನ್ನ ಪರಮಾನಂದದಿಂದವೆ ಸರ್ವಶೂನ್ಯವಾಯಿತ್ತು. ಅದೆಂತೆನಲು, ಸಾಕ್ಷಿ: ಅನಾದಿಸಿದ್ಧಸಂಸಾರಂ ಕರ್ತೃ ಕರ್ಮ ವಿವರ್ಜಯೇತ್ ಸ್ವಯಂಮೇವ ಭವೇದ್ದೇಹೀ ಸ್ವಯಂಮೇವ ವಿಲೀಯತೇ ಅಂತಃ ಶೂನ್ಯಂ ಬಹಿಃ ಶೂನ್ಯಂ ಶೂನ್ಯಶೂನ್ಯಾ ದಿಶೋ ದಶ ಸರ್ವಶೂನ್ಯಂ ನಿರಾಕಾರಂ ನಿದ್ರ್ವಂದ್ವಂ ಪರಮಂ ಪದಂ _ಎಂದುದಾಗಿ, ಇಂತೀ ಅಂಗ ತತ್ತ ್ವವಿಪ್ಪತ್ತೈದು ಲಿಂಗತತ್ತ್ವ ಹನ್ನೊಂದು, ಇಂತೀ ಉಭಯತತ್ತ್ವ ಏಕಾರ್ಥವಾಗಿ, ಸರ್ವಶೂನ್ಯವನೆಯ್ದಿದ ಪರಿಕ್ರಮದ ನಿರ್ಣಯದ ಬೆಡಗು, ತತ್ತ್ವಮಸ್ಯಾದಿ ವಾಕ್ಯಾರ್ಥಂಗಳಲ್ಲಿ ಕಾಣಲಾಯಿತ್ತು._ಅದೆಂತೆಂದಡೆ: ತತ್ಪದವೇ ಲಿಂಗ, ತ್ವಂ ಪದವೇ ಅಂಗ, ಈ ಎರಡರ ಐಕ್ಯವೇ ಅಸಿ ಎಂದುದಾಗಿ . ಇಂತು ಸಕಲನಾಗಬಲ್ಲ, ಸಕಲ ನಿಃಕಲನಾಗಬಲ್ಲ, ಸಕಲ ನಿಃಕಲಾತೀತನಾಗಿ ಏನೂ ಏನೂ ಇಲ್ಲದ ಮಹಾ ಘನಶೂನ್ಯಬ್ರಹ್ಮವಾಗಿ ಇರಬಲ್ಲನಯ್ಯಾ ನಮ್ಮ ಗುಹೇಶ್ವರಲಿಂಗವು !
--------------
ಅಲ್ಲಮಪ್ರಭುದೇವರು
ಪ್ರಥಮದಲ್ಲಿ ರುದ್ರತ್ವ; ಅದು ಘಟಿಸಿದಲ್ಲಿ ಈಶ್ವರತ್ವ. ಈ ಎರಡು ಕೂಡಿದಲ್ಲಿ ಸದಾಶಿವತತ್ವ. ಇಂತೀ ತ್ರಿವಿಧಲೀಲೆ ಏಕಾರ್ಥವಾದಲ್ಲಿ ಪರಶಿವತತ್ತ್ವದ ಪರಮಪ್ರಕಾಶ. ಇದರಿಂದ ಮೀರುವ ತೆರನುಂಟಾದಡೆ ನೀವು ಹೇಳಿ ನಾ ಮಾರ್ಕೊಳ್ಳೆನು. ನೀವು ಹೇಳಿದಂತೆ ನಾ ಪ್ರಸಾದವೆಂಬೆನು. ಆರು ಶೈವದ ಭೇದ, ಮೂರು ಶೈವದ ಭಜನೆ, ಷಡುದರ್ಶನದ ತರ್ಕ ಇವನೆಲ್ಲವನುದ್ಧರಿಸಬಂದ ಪ್ರಭುದೇವರು, ಬಸವಣ್ಣ, ಚೆನ್ನಬಸವಣ್ಣ ಇವರೊಳಗಾದ ಏಳ್ನೂರೆಪ್ಪತ್ತಮರಗಣಂಗಳು, ಸ್ವತಂತ್ರ ಸಂಬಂಧಿಗಳಪ್ಪ ಪ್ರಥಮರು ಶಿವಾಚಾರ ಚಕ್ರವರ್ತಿಗಳು, ಸತ್ಯರು ನಿತ್ಯರು ಸದ್ಯೋನ್ಮುಕ್ತರು ಸುಮನರು ವಿಮಲರು ಪೂರ್ಣರು ಪರಿಪೂರ್ಣರು ಮೇಖಲೇಶ್ವರಲಿಂಗದಲ್ಲಿ ಮಹಾನುಭಾವಿಗಳು.
--------------
ಕಲಕೇತಯ್ಯ
-->