ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನುಭಾವವಿಲ್ಲದ ಭಕ್ತಿ ಅನುವಿಂಗೆ ಬಾರದು, ಅನುಭಾವವಿಲ್ಲದ ಲಿಂಗ ಸಮರಸಸುಖಕ್ಕೆ ನಿಲುಕದು, ಅನುಭಾವವಿಲ್ಲದ ಪ್ರಸಾದ ಪರಿಣಾಮವ ಕೊಡದು, ಅನುಭಾವವಿಲ್ಲದ ಏನನೂ ಅರಿಯಬಾರದು. ತನ್ನಲ್ಲಿ ತಾ ಸನ್ನಿಹಿತವುಳ್ಳಡೆ ಶಿವಶರಣರ ಸಂಗವೇತಕ್ಕೆನಲುಂಟೆ ಕೂಡಲಸಂಗಮದೇವಯ್ಯಾ, ನಿಮ್ಮ ಅನುಭಾವ ಮಾತಿನ ಮಥನವೆಂದು ನುಡಿಯಬಹುದೆ ಪ್ರಭುವೆ
--------------
ಬಸವಣ್ಣ
ಲಿಂಗವಂತನು ಲಿಂಗವಿಲ್ಲದರ ಬಯಸಿದಡೆ ಆತಂಗೆ ಲಿಂಗವಿಲ್ಲ, ಲಿಂಗವಿಲ್ಲದವನು ಆರಿಗೂ ಬಾತೆ ಅಲ್ಲ. ಬಾತೆ ಅಲ್ಲದವಂಗೆ ಆರೂ ಸ್ನೇಹಿಸರು, ಆರು ಏನನೂ ಕೊಡರು. ಇದು ಕಾರಣ, ದುರಾಶೆಯಂ ಬಿಟ್ಟು ನಿರಾಶೆಯಾಗಿ ಲಿಂಗವನಾಶ್ರೈಸಿದಡೆ ಪ್ರಸಾದವಪ್ಪುದು ಪ್ರಸಾದದಿಂದಿಹಪರ ಸಿದ್ಧಿ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಆಗ್ಘವಣಿ ಪತ್ರೆ ಪುಷ್ಪ ಧೂಪ ದೀಪ ನಿವಾಳಿಯಲ್ಲಿ ಪೂಜಿಸಿ ಪೂಜಿಸಿ ಬಳಲುತ್ತೈದಾರೆ. ಏನೆಂದರಿಯರು ಎಂತೆಂದರಿಯರು. ಜನ ಮರುಳೊ ಜಾತ್ರೆ ಮರುಳೊ ಎಂಬಂತೆ; ಎಲ್ಲರೂ ಪೂಜಿಸಿ, ಏನನೂ ಕಾಣದೆ, ಲಯವಾಗಿ ಹೋದರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ದಿನದಿನಕ್ಕೆ ದೀನಮಾನವನಂತೆ, ಹೀನಾಶ್ರಯದಲ್ಲಿ ಹುಟ್ಟಿ, ಏನನೂ ಅರಿಯದೆ, ಜ್ಞಾನವು ಇಲ್ಲದೆ, ನಾನು ನೀನೆಂಬ ಉಭಯವು ಅಳಿಯದೆ, ನಾನು ಭಕ್ತ, ನಾನು ಜಂಗಮವೆಂಬವರ ನೋಡಿ, ನಾಚಿತ್ತೆನ್ನ ಮನ್ನವು. ಅಂಗಕ್ಕೆ ಆಚಾರವಿಲ್ಲ, ಮನಸಿಂಗೆ ಅರುಹಿಲ್ಲ, ಪ್ರಾಣಕ್ಕೆ ಗೊತ್ತು ಇಲ್ಲ. ಭಾವಕ್ಕೆ ಹೇಯವಿಲ್ಲದೆ ಇನ್ನಾವ ಬಗೆಯಲ್ಲಿ ಭಕ್ತ ಜಂಗಮವಾದಿರೆ ಹೇಳಿರಣ್ಣ ? ಭಕ್ತನಾದರೆ ಎಂತಿರಬೇಕೆಂದರೆ, ಮಾಡಿಹನೆಂಬುದು ಮನದೊಳಗೆ ಹೊಳೆಯದೆ, ನೀಡಿಹೆನೆಂಬ ಅರಿಕೆ ಇಲ್ಲದೆ, ಬೇಡುವುದಕ್ಕೆ ಮುನ್ನವೆ ಆ ಜಂಗಮದ ನಿಲುಕಡೆಯನರಿದು ಮಾಡಬಲ್ಲರೆ ಭಕ್ತ. ಮಾಡಿದ ಭಕ್ತಿಯ ಕೈಕೊಂಡು, ಆ ಭಕ್ತನ ಕರಸ್ಥಲಕ್ಕೆ ಲಿಂಗವಾಗಿ, ಮನಸ್ಥಲಕ್ಕೆ ಅರಿವಾಗಿ, ಭಾವಸ್ಥಲಕ್ಕೆ ಜಂಗಮವಾಗಿ ಅಡಗಿದಡೆ, ಐಕ್ಯನೆಂಬೆ, ಜಂಗಮವೆಂಬೆ, ಲಿಂಗವೆಂಬೆ, ಗುರುವೆಂಬೆ. ಆ ಭಕ್ತ ಜಂಗಮ ಎರಡಕ್ಕೂ ಫಲಂ ನಾಸ್ತಿ, ಪದಂ ನಾಸ್ತಿ, ಭವಂ ನಾಸ್ತಿ. ಆ ನಿಲುವಿಂಗೆ ನಮೋ ನಮೋ ಎಂದು ಬದುಕಿದೆ, ನೀವು ಸಾಕ್ಷಿಯಾಗಿ, ಬಸವಪ್ರಿಯ ಕೂಡಲಚೆನ್ನ ಬಸವಣ್ಣ .
--------------
ಹಡಪದ ಅಪ್ಪಣ್ಣ
ಧರೆಯಾಕಾಶದ ನಡುವೆ ಒಂದು ಮಾಮರ ಹುಟ್ಟಿತ್ತು. ಆ ಮರಕ್ಕೆ ಕೊಂಬೆರಡು, ಎಲೆ ಮೂರು, ಮೂವತ್ತಾರು ಪುಷ್ಪ, ಕಾಯಿ ಒಂದೆ, ಹಣ್ಣು ರಸ ತುಂಬಿದಲ್ಲಿ ಏನನೂ ಕಾಣೆ, ಎಲೆ ಉದುರಿದಡೆ ಹಣ್ಣು ತೊಟ್ಟಬಿಟ್ಟು ಬಿದ್ದಿತ್ತು, ನಿಜದಲ್ಲಿ ನಿರ್ವಯಲಾದರು. ಪ್ರಭುವಿನ ಕಾರುಣ್ಯಪ್ರಸಾದವ ನಾನು ಕೊಂಡೆನಾಗಿ, ಕೂಡಲಸಂಗಮದೇವರು ಇತ್ತ ಬಾರೆಂದು ತಮ್ಮ ಹೃದಯಕಮಲದಲ್ಲಿ ಇಂಬಿಟ್ಟುಕೊಂಡರು.
--------------
ಬಸವಣ್ಣ
-->