ಅಥವಾ

ಒಟ್ಟು 7 ಕಡೆಗಳಲ್ಲಿ , 3 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊನ್ನು ಹೆಣ್ಣು ಮಣ್ಣನಾವರಿಸಿಕೊಂಡು, ಒಡವೆ ಆಭರಣಂಗಳ ಹಲ್ಲಣಿಸಿಕೊಂಡು ಬಂದು, ಸರ್ವರಿಗೆ ಶಾಸ್ತ್ರೋಪದೇಶವ ಹೇಳುವರು ವೇಷಧಾರಿಗಳು. ಸೂಳೆಯರಂತೆ ತಮ್ಮ ಉಪಾದ್ಥಿಕೆಗೆ ಒಡಲಾಸೆಗೆ ಹಿತವಚನ ನುಡಿವರು. ಇಂತಪ್ಪ ಪ್ರಪಂಚಿನ ವೇಷಡಂಭಕ ಧೂರ್ತಲಾಂಛನಧಾರಿಗಳಿಗೆ ಮಹಂತಿನ ದೇವರೆನ್ನಬಹುದೆ ? ಎನಲಾಗದು. ಅದೇನು ಕಾರಣವೆಂದಡೆ, ತಮ್ಮಾದಿಯ ನಿಲುವ ತಾವರಿಯರು. ಷಟ್‍ಸ್ಥಲದ ನಿರ್ಣಯವ ಏನೆಂದರಿಯರು. ಆಚಾರದನುಭಾವದಂತರಂಗದ ಮೂಲವ ಮುನ್ನವೇ ಅರಿಯರು. ಇಂತಿದನರಿಯದ ಪಶುಪ್ರಾಣಿಗಳಿಗೆ ಜಂಗಮವೆನ್ನಬಹುದೆ ? ಎನ್ನಲಾಗದಯ್ಯಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಏನೆಂದರಿಯರು ಎಂತೆಂದರಿಯರು, ಅರಿವನರಿದೆವೆಂಬರು, ಮರಹ ಮರೆದೆವೆಂಬರು. ಒಂದನರಿದೆನೆಂದಡೆ ಮುಖ ಮೂರಾಯಿತ್ತು. ಮೂರು ಮುಖವ ಏಕಾಗ್ರಹಕವ ಮಾಡಿದಲ್ಲದೆ ಶರಣನಲ್ಲ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತಮ್ಮ ತಾವರಿಯರು ಹೇಳಿದಡೂ ಕೇಳರು. ಆರರ ಹೊಲಬ ಏನೆಂದರಿಯರು. ಎಂಟರ ಕಂಟಕವ ಮುನ್ನರಿಯರು. ಏರಿದ ಬೆಟ್ಟವ ಇಳಿಯಲರಿಯದವರ ಏನೆಂಬೆ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಏನೆಂದರಿಯರು, ಎಂತೆಂದರಿಯರು, ಹಗರಣದ ಹಬ್ಬಕ್ಕೆ ಜಗದ ಜನರೆಲ್ಲ ನೆರೆದು, ಗೊಂದಣಗೊಳುತ್ತಿದ್ದರಲ್ಲ. ತ್ರಿಭಂಗಿಯ ತಿಂದು, ಅದು ತಲೆಗೇರಿ ಗುರುವೆಂದರಿಯರು, ಲಿಂಗವೆಂದರಿಯರು, ಜಂಗಮವೆಂದರಿಯರು. ಶಿವ ಶಿವಾ, ಮಾಯಾಜಾಲದಲ್ಲಿ ಸಿಕ್ಕಿದ ಮರುಳು ಜನರು, ಮುಕ್ಕಣ್ಣನಿಕ್ಕಿದ ಛತ್ರದಲುಂಡು ಸೊಕ್ಕಿ, ಸಲಹುವ ಕರ್ತನನರಿಯದವರಿಗೆನ್ನೆತ್ತಣ ಮುಕ್ತಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?.
--------------
ಸ್ವತಂತ್ರ ಸಿದ್ಧಲಿಂಗ
ಆಗ್ಘವಣಿ ಪತ್ರೆ ಪುಷ್ಪ ಧೂಪ ದೀಪ ನಿವಾಳಿಯಲ್ಲಿ ಪೂಜಿಸಿ ಪೂಜಿಸಿ ಬಳಲುತ್ತೈದಾರೆ. ಏನೆಂದರಿಯರು ಎಂತೆಂದರಿಯರು. ಜನ ಮರುಳೊ ಜಾತ್ರೆ ಮರುಳೊ ಎಂಬಂತೆ; ಎಲ್ಲರೂ ಪೂಜಿಸಿ, ಏನನೂ ಕಾಣದೆ, ಲಯವಾಗಿ ಹೋದರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಏನೆಂದರಿಯರು ಎಂತೆಂದರಿಯರು, ಬರುಮಾತಿನ ಬೊಮ್ಮವನಾಡುತ್ತಿಪ್ಪರು. ರುದ್ರನ ನೊಸಲ ಕಣ್ಣ ಕಿಚ್ಚಿನೊಳಗೆ ತ್ರಿಪುರವ ಸುಡಲರಿಯದೆ ಕಾಮನ ಕಣ್ಣ ಕಿಚ್ಚಿನೊಳಗೆ ತ್ರಿಪುರವ ಸುಡುತ್ತಿಪ್ಪರು. ಭೂಮಿಯಾಕಾಶವ ಮೆಟ್ಟಿ, ಕಾಮಗುಣಂಗಳ ಕೂಡೆ ಕಾದಿ ಗೆಲಲರಿಯದೆ ನೀಲಗಿರಿಯ ಮೇಲೆ ನಿಂದು ಉಲಿವದ (ಉಲಿಯ?) ಉಯ್ಯಾಲೆಯನಾಡುತ್ತಿಪ್ಪರಯ್ಯಾ. ಗುಹೇಶ್ವರಾ ನಿಮ್ಮನರಿದೆಹೆವೆಂಬವರೆಲ್ಲ ಬರುದೊರೆವೋದರಯ್ಯಾ
--------------
ಅಲ್ಲಮಪ್ರಭುದೇವರು
ಭೂಮಿಯೊಳಗಿಲ್ಲ ಆಕಾಶದೊಳಗಿಲ್ಲ: ಚತುರ್ದಶ ಭುವನದೊಳಗಿಲ್ಲ, ಹೊರಗಿಲ್ಲ. ಏನೆಂದರಿಯರು ಎಂತೆಂದರಿಯರು ಹೇಳಿರಯ್ಯಾ (ಹೇಳಯ್ಯಾ?) ಕೃತಯುಗದಂದಿನ ಮಾತು ಬೇಡ ಗುಹೇಶ್ವರ ಅಂದೂ ಇಲ್ಲ ಇಂದೂ ಇಲ್ಲ.
--------------
ಅಲ್ಲಮಪ್ರಭುದೇವರು
-->