ಅಥವಾ

ಒಟ್ಟು 12 ಕಡೆಗಳಲ್ಲಿ , 4 ವಚನಕಾರರು , 12 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣವು ಲಿಂಗವ ನುಂಗಿತ್ತೋ, ಲಿಂಗವು ಪ್ರಾಣವ ನುಂಗಿತ್ತೋ ಎಂದರಿಯೆನಯ್ಯ. ಭಾವವು ಲಿಂಗದಲ್ಲಿ ತುಂಬಿತ್ತೋ, ಲಿಂಗವು ಭಾವದಲ್ಲಿ ತುಂಬಿತ್ತೋ ಎಂದರಿಯೆನಯ್ಯ. ಮನವು ಲಿಂಗದಲ್ಲಿ ಮುಳುಗಿತ್ತೊ , ಲಿಂಗವು ಮನದಲ್ಲಿ ಮುಳುಗಿತ್ತೋ ಎಂದರಿಯೆನಯ್ಯ. ಅಖಂಡೇಶ್ವರಾ, ನಿಮ್ಮ ಕೂಡುವ ವಿಕಳಾವಸ್ಥೆಯಲ್ಲಿ ಏನೇನೂ ಅರಿಯದಿರ್ದೆನಯ್ಯ.
--------------
ಷಣ್ಮುಖಸ್ವಾಮಿ
ಏನೇನೂ ಇಲ್ಲದಲ್ಲಿ ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ. ಆ ಪುರುಷಂಗೆ ಒಬ್ಬ ಸತಿಯಳು ಹುಟ್ಟಿದಳು ನೋಡಾ. ಆ ಸತಿಯಳ ಅಂಗದಲ್ಲಿ ಮೂವರು ಮಕ್ಕಳು ಇರುವುದ ಕಂಡೆನಯ್ಯ. ಆ ಮಕ್ಕಳು ಒಂದೊಂದು ಎರಡೆರಡಾಗಿ, ಆರು ಕೇರಿಗಳಲ್ಲಿ ಸುಳಿದಾಡುತಿರ್ಪರು ನೋಡಾ. ಆ ಕೇರಿಗಳನಳಿದು, ಮೂರು ಮಕ್ಕಳ ಬಿಟ್ಟು ಆ ಸತಿಯಳ ಅಂಗವ ಕೂಡಿ, ಆ ಪುರುಷನಾಚರಿಸುತಿರ್ಪನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಘನಮಹಾಲಿಂಗಕ್ಕೆ ಮನವೆ ಪೀಠವಾಗಿ, ತನುವೆ ಶಿವಾಲಯವಾಗಿ, ನೆನವೆ ಪೂಜೆಯಾಗಿ, ಧ್ಯಾನವೆ ತೃಪ್ತಿಯಾಗಿ, ಅಂಬುದ್ಥಿಯೊಳಗೆ ಮುಳುಗಿದ ಪೂರ್ಣಕುಂಭದಂತೆ, ನಿಮ್ಮ ಅವಿರಳ ದಿವ್ಯ ಮಹಾಬೆಳಗಿನೊಳಗೆ ಮುಳುಗಿ, ನಾನು ನೀನೆಂಬುಭಯದ ಕುರುಹ ಮರೆದು ಏನೇನೂ ಅರಿಯದಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಡ್ಡಬಿದ್ದು ಶಿಷ್ಯನ ಮಾಡಿಕೊಂಬ ದಡ್ಡ ಪ್ರಾಣಿಗಳನೇನೆಂಬೆನಯ್ಯ. ಏನೇನೂ ಅರಿಯದ ಎಡ್ಡ ಮಾನವರಿಗೆ ಉಪದೇಶವ ಮಾಡುವ ಗೊಡ್ಡ ಮಾನವನ ಮುಖವ ತೋರದಿರಯ್ಯಾ. ಅದೇನು ಕಾರಣವೆಂದಡೆ: ಆ ಮೂಢಜೀವಿಯ ಪ್ರಪಂಚವ ಕಳೆಯಲಿಲ್ಲ. ಅವನ ಪಂಚೇಂದ್ರಿಯಂಗಳು, ಸಪ್ತವ್ಯಸನಂಗಳು, ಅಷ್ಟಮದಂಗಳೆಂಬ ಖೊಟ್ಟಿ ಗುಣಂಗಳ ಬಿಡಿಸಲಿಲ್ಲ. ಸೂತಕ ಪಾತಕಂಗಳ ಕೆಡಿಸಿ, ಮೂರು ಮಲಂಗಳ ಬಿಡಿಸಿ ಮುಕ್ತಿಪಥವನರುಹಲಿಲ್ಲ. ಮಹಾಶೂನ್ಯ ನಿರಾಳ ನಿರಂಜನಲಿಂಗವ ಕರ-ಮನ-ಭಾವ ಸರ್ವಾಂಗದಲ್ಲಿ ತುಂಬಿ ನಿತ್ಯನೆಂದೆನಿಸಲಿಲ್ಲ. ಇದನರಿಯದ ವ್ಯರ್ಥಕಾಯರುಗಳ ಗುರುವೆಂದಡೆ ಪ್ರಮಥರು ಮೆಚ್ಚುವರೆ ? ಇಂತಪ್ಪ ಗುರು ಶಿಷ್ಯರೀರ್ವರು ಅಜ್ಞಾನಿಗಳು. ಅವರು ಇಹಲೋಕ ಪರಲೋಕಕ್ಕೆ ಹೊರಗೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಭಕ್ತ ಮಹೇಶ್ವರರಿಲ್ಲದಂದು, ಪ್ರಸಾದಿ ಪ್ರಾಣಲಿಂಗಿಯಿಲ್ಲದಂದು, ಶರಣ ಐಕ್ಯರಿಲ್ಲದಂದು, ಏನೇನೂ ಇಲ್ಲದಂದು, ತಾನೇ ನಿಃಶೂನ್ಯನಾಗಿರ್ದನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮಾತು ಮಥನಗಳಿಲ್ಲದಂದು, ನೋಟ ಬೇಟಗಳಿಲ್ಲದಂದು, ಶೂನ್ಯ ನಿಃಶೂನ್ಯವಿಲ್ಲದಂದು, ಬಯಲು ನಿರ್ವಯಲು ಇಲ್ಲದಂದು, ಏನೇನೂ ಇಲ್ಲದಂದು, ಅತ್ತಲೆ ತಾನು ತಾನಾಗಿದ್ದೆಯಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮಾತು ಮಥನಂಗಳಿಲ್ಲದಂದು, ನೀತಿ ನಿರ್ಮಲವಿಲ್ಲದಂದು, ಜಾತಿಸೂತಕವಿಲ್ಲದಂದು, ನಾಮ-ರೂಪ-ಕ್ರಿಯೆಗಳಿಲ್ಲದಂದು, ಏನೇನೂ ಇಲ್ಲದಂದು, ತಾನೇ ನಿಷ್ಪತಿಯಾಗಿರ್ದನಯ್ಯ. ತನ್ನ ಚಿದ್ವಿಲಾಸದಿಂದ ಓಂಕಾರವೆಂಬ ಪ್ರಣವವಾಯಿತ್ತು ನೋಡಾ. ಆ ಓಂಕಾರವೆಂಬ ಪ್ರಣವದಲ್ಲಿ ಅಕಾರ ಉಕಾರ ಮಕಾರಂಗಳಾದವು. ಆ ಅಕಾರ ಉಕಾರ ಮಕಾರಂಗಳೊಡನೆ ನಾದ-ಬಿಂದು-ಕಲೆಗಳಾದವು. ಆ ನಾದ ಬಿಂದು ಕಲೆಗಳೊಡನೆ ಷಡಾಧಾರಚಕ್ರಂಗಳಾದವು. ಆ ಷಡಾಧಾರಚಕ್ರಂಗಳಲ್ಲಿ ಭಕ್ತ-ಮಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯರೆಂಬ ಷಡ್ವಿಧಮೂರ್ತಿಗಳಾದರು ನೋಡಾ. ಭಕ್ತಂಗೆ ಆಚಾರಲಿಂಗ, ಮಹೇಶ್ವರಂಗೆ ಗುರುಲಿಂಗ, ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ, ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗವಾಗಿ, ನಿಶ್ಚಿಂತ ನಿರಾಕುಳ ನಿರ್ಭರಿತ ಲಿಂಗವ ಅರಿಯಬಲ್ಲಡೆ ಆತನೆ ಪ್ರಾಣಲಿಂಗಸಂಬಂಧಿ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹರಿ ಬ್ರಹ್ಮ ಕಾಲ ಕಾಮ ದಕ್ಷಾದಿಗಳ ದೇವರೆಂದು ಗಟ್ಟಿಯತನದೊಳು ಬೊಗಳುವ ಮಿಟ್ಟೆಯಭಂಡರು ನೀವು ಕೇಳಿರೊ. ಅವರ ಹುಟ್ಟನರಿಯಿರಿ, ಹೊಂದನರಿಯಿರಿ. ಅವರ ಹುಟ್ಟು ಕೇಳಿರಣ್ಣಾ ! ಏನೇನೂ ಇಲ್ಲದಂದು, ಶೂನ್ಯ ನಿಃಶೂನ್ಯಕ್ಕೆ ನಿಲುಕದ ಘನವು ಕೋಟಿಚಂದ್ರಸೂರ್ಯರ ಬೆಳಗಾಗಿ ಬೆಳಗುತ್ತಿಪ್ಪಲ್ಲಿ , ಒಂಕಾರವೆಂಬ ನಿರಕ್ಷರ ಹುಟ್ಟಿತ್ತು . ಒಂಕಾರದಿಂದ ನಕಾರ, ಮಕಾರ, ಶಿಕಾರ, ವಕಾರ, ಯಕಾರವೆಂಬ ಪಂಚಾಕ್ಷರ ಹುಟ್ಟಿದವು. ಆ ಪಂಚಾಕ್ಷರಿಗೆ ಪರಾಶಕ್ತಿ ರೂಪಾದಳು. ಆ ಪಂಚಾಕ್ಷರಕ್ಕೂ ಪರಾಶಕ್ತಿಗೂ ಇಬ್ಬರಿಗೂ ಸದಾಶಿವನಾದ. ಆ ಸದಾಶಿವಂಗೆ ಜ್ಞಾನಶಕ್ತಿಯಾದಳು. ಆ ಸದಾಶಿವಂಗೆ ಜ್ಞಾನಶಕ್ತಿಯರಿಬ್ಬರಿಗೂ ಶಿವನಾದ. ಆ ಶಿವಂಗೆ ಇಚ್ಛಾಶಕ್ತಿಯಾದಳು. ಆ ಶಿವಂಗೂ ಇಚ್ಛಾಶಕ್ತಿಗೂ ಇಬ್ಬರಿಗೂ ರುದ್ರನಾದ. ಆ ರುದ್ರಂಗೆ ಕ್ರಿಯಾಶಕ್ತಿಯಾದಳು. ಆ ರುದ್ರಂಗೂ ಕ್ರಿಯಾಶಕ್ತಿಗೂ ಇಬ್ಬರಿಗೂ ವಿಷ್ಣುವಾದ. ಆ ವಿಷ್ಣು ಪಡೆದ ಸತಿ ಲಕ್ಷಿ ್ಮೀಯು. ಆ ವಿಷ್ಣುವಿಂಗೂ ಮಹಾಲಕ್ಷಿ ್ಮೀಗೂ ಇವರಿಬ್ಬರಿಗೂ ಬ್ರಹ್ಮನಾದ. ಆ ಬ್ರಹ್ಮಂಗೆ ಸರಸ್ವತಿಯ ಕೊಟ್ಟು, ಬರೆವ ಸೇವೆಯ ಕೊಟ್ಟ. ಬ್ರಹ್ಮಂಗೂ ಸರಸ್ವತಿಗೂ ಇಬ್ಬರಿಗೂ ಮನುಮುನಿದೇವರ್ಕಳಾದರು. ಆ ಮನುಮುನಿದೇವರ್ಕಳಿಗೆ ಸಕಲ ಸಚರಾಚರವಾಯಿತ್ತು . ಇಹಲೋಕಕ್ಕೆ ನರರು ಆಗಬೇಕೆಂದು ಬ್ರಹ್ಮನು ಹೋಗಿ, ಹರನಿಗೆ ಬಿನ್ನಹಂ ಮಾಡಲು, ಹರನು ಪರಮಜ್ಞಾನದಿಂದ ನೋಡಿ, ತನ್ನ ಶರೀರದಿಂದಲೆ ನಾಲ್ಕು ಜಾತಿಯ ಪುಟ್ಟಿಸಿ ಇಹಲೋಕಕ್ಕೆ ಕಳುಹಿಸಿದನು. ಆ ಶಿವನ ಶರೀರದಲ್ಲಿ ಪುಟ್ಟಿದವರು ಶಿವನನ್ನೇ ಅರ್ಚಿಸಿ, ಶಿವನನ್ನೇ ಪೂಜಿಸಿ, ಶಿವನನ್ನೇ ಭಾವಿಸಿ, ಶಿವನೊಳಗಾದರು. ಅದರಿಂದಾದ ಭವಬಾಧೆಗಳು ತಾವು ತಮ್ಮ ಹುಟ್ಟನರಿಯದೆ, ಹುಟ್ಟಿಸುವಾತ ಬ್ರಹ್ಮ , ರಕ್ಷಿಸುವಾತ ವಿಷ್ಣು , ಶಿಕ್ಷಿಸುವಾತ ರುದ್ರನೆಂದು ಹೇಳಿದರು. ಈ ಭ್ರಷ್ಟರ ಮಾತ ಕೇಳಿ ಕೆಟ್ಟಿತ್ತು ಜಗವೆಲ್ಲ . ಆಗ ಶಿವನು ಕೊಟ್ಟು ಕಳುಹಿದ ಮಾಯೆಗೆ ಮರವೆಂಬ ಪಾಶ. ಅವಳು ಕಟ್ಟಿ ಕೆಡಹಿದಳು ಮೂರುಜಗವೆಲ್ಲವನು. ಇವಳ ಕಟ್ಟಿಗೊಳಗಾದ ಭ್ರಷ್ಟರೆತ್ತಬಲ್ಲರೋ ನಿಮ್ಮ ಶರಣರ ಸುದ್ದಿಯ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಘನಗಂಭೀರ ಮಹಾಘನ ಬೆಳಗಿನೊಳಗೆ ನಾನೆಂಬುದನರಿಯದಿರ್ದೆನಯ್ಯಾ. ನೀನೆಂಬುದನರಿಯದಿರ್ದೆನಯ್ಯಾ. ಏನೇನೂ ಅರಿಯದೆ ಮೌನದಿಂದೆ ಮರೆದಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮಾಡುವ ತನುವು ನೀವೇ ಆದಿರಿ. ಕೂಡುವ ಮನವು ನೀವೇ ಆದಿರಿ. ನೀಡುವ ಧನವು ನೀವೇ ಆದಿರಿ. ಅಖಂಡೇಶ್ವರಾ, ನಾನೂ ಇಲ್ಲ , ನೀವೂ ಇಲ್ಲ , ಏನೇನೂ ಇಲ್ಲ.
--------------
ಷಣ್ಮುಖಸ್ವಾಮಿ
ಪೃಥ್ವಿ-ಅಪ್ಪು-ತೇಜ-ವಾಯು-ಆಕಾಶವಿಲ್ಲದಂದು, ರವಿ-ಶಶಿ-ಆತ್ಮರಿಲ್ಲದಂದು, ನಾದ-ಬಿಂದು-ಕಲೆಗಳಿಲ್ಲದಂದು, ಸಾಕ್ಷಿ-ಸಭೆಗಳಿಲ್ಲದಂದು, ಶೂನ್ಯ-ನಿಃಶೂನ್ಯವಿಲ್ಲದಂದು, ಏನೇನೂ ಇಲ್ಲದಂದು ಅತ್ತತ್ತಲೆ, ಅಪರಂಪರ ನಿರಾಳ ತಾನೇ ನೋಡಾ. ಆ ನಿರಾಳನ ಚಿದ್ವಿಲಾಸದಿಂದ ಪರಬ್ರಹ್ಮನಾದನಯ್ಯ. ಆ ಪರಬ್ರಹ್ಮನ ಭಾವದಿಂದ ಪರಶಿವನಾದ. ಆ ಪರಶಿವನ ಭಾವದಿಂದ ಸದಾಶಿವನಾದ. ಆ ಸದಾಶಿವನ ಭಾವದಿಂದ ಈಶ್ವರನಾದ. ಆ ಈಶ್ವರನ ಭಾವದಿಂದ ರುದ್ರನಾದ. ಆ ರುದ್ರನ ಭಾವದಿಂದ ವಿಷ್ಣುವಾದ. ಆ ವಿಷ್ಣುವಿನ ಭಾವದಿಂದ ಬ್ರಹ್ಮನಾದ. ಆ ಬ್ರಹ್ಮಂಗೆ ಸರಸ್ವತಿಯ ಸಂಬಂಧಿಸಿ ಧಾರೆಯನೆರೆದರು. ವಿಷ್ಣುವಿಂಗೆ ಲಕ್ಷ್ಮಿಯ ಸಂಬಂಧಿಸಿ ಧಾರೆಯನೆರೆದರು. ರುದ್ರಂಗೆ ಕ್ರಿಯಾಶಕ್ತಿಯ ಸಂಬಂಧಿಸಿ ಧಾರೆಯನೆರೆದರು. ಈಶ್ವರಂಗೆ ಇಚ್ಫಾಶಕ್ತಿಯ ಸಂಬಂಧಿಸಿ ಧಾರೆಯನೆರೆದರು. ಸದಾಶಿವಂಗೆ ಜ್ಞಾನಶಕ್ತಿಯ ಸಂಬಂಧಿಸಿ ಧಾರೆಯನೆರೆದರು. ಪರಶಿವಂಗೆ ಪರಾಶಕ್ತಿಯ ಸಂಬಂಧಿಸಿ ಧಾರೆಯನೆರೆದರು. ಪರಬ್ರಹ್ಮಕೆ ಚಿತ್‍ಶಕ್ತಿಯ ಸಂಬಂಧಿಸಿ ಧಾರೆಯನೆರೆದರು. ಇಂತೀ ಭೇದವನರಿತು ಇರಬಲ್ಲರೆ ಅವರೇ ಪ್ರಾಣಲಿಂಗಸಂಬಂಧಿಗಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಾನು ಇಲ್ಲದೆ ನೀನು ಇಲ್ಲದೆ ತಾನು ತಾನೆಂಬುದು ಇಲ್ಲದೆ ಏನೇನೂ ಇಲ್ಲದೆ ಹೋಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
-->