ಅಥವಾ

ಒಟ್ಟು 8 ಕಡೆಗಳಲ್ಲಿ , 6 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗತಿಯ ಪಥವನರಿವಡೆ, ದಿಟವ ಸುಯಿದಾನ ಮಾಡು. ದಿಟ ಬೇರೆ ಆಚಾರ ಶಿವಾಚಾರವೆಂ[ದರು]ಮರುಳೆ. ಗುರು ದೇವನೆಂದರು ಮರುಳೆ. ದೂರತೋsಂ ಗುರುಂ ದಷ್ಟ್ವಾ ಉದಾಸೀನೇನ ಯೋ ವ್ರಜೇತ್ | ಶ್ವಾನಯೋನಿಂ ಶತಂ ಗತ್ವಾ ಚಾಂಡಾಲಗೃಹಮಾಚರೇತ್ || ಶಿವೇ ಕೃದ್ಧೇ ಗುರುಸ್ತ್ರಾತಾ ಗುರೌ ಕೃದ್ಧೇ ನ ಕಶ್ಚನ | ತಸ್ಮಾದಿಷ್ಟಂ ಗುರೋಃ ಕುರ್ಯಾತ್ ಕಾಯೇನ ಮನಸಾ ಗಿರಾ || ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಮದೇವ ಮುನಿದಡೆ ತಿಳುಹಬಹುದು, ಗುರು ಮುನಿದಡೆ ತಿಳುಹಬಾರದು, ಏಳೇಳು ನರಕ ತಪ್ಪದು.
--------------
ಸಂಗಮೇಶ್ವರದ ಅಪ್ಪಣ್ಣ
ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ! ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ. ಪ್ರಥಮಭವಾಂತರದಲ್ಲಿ ಶಿಲಾದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಭೃತ್ಯನ ಮಾಡಿ ಎನನ್ನಿರಿಸಿಕೊಂಡಿರ್ದಿರಯ್ಯಾ. ಎರಡನೆಯ ಭವಾಂತರದಲ್ಲಿ ಸ್ಕಂದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ. ಮೂರನೆಯ ಭವಾಂತರದಲ್ಲಿ ನೀಲಲೋಹಿತನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ. ನಾಲ್ಕನೆಯ ಭವಾಂತರದಲ್ಲಿ ಮನೋಹರನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಐದನೆಯ ಭವಾಂತರದಲ್ಲಿ ಕಾಲಲೋಚನನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ಸರ್ವಕಾಲಸಂಹಾರವ ಮಾಡಿಸುತ್ತಿರ್ದಿರಯ್ಯಾ. ಆರನೆಯ ಭವಾಂತರದಲ್ಲಿ ವೃಷಭನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ. ಏಳನೆಯ ಭವಾಂತರದಲ್ಲಿ ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಇದು ಕಾರಣ ಕೂಡಲಸಂಗಮದೇವಾ, ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ. 4
--------------
ಬಸವಣ್ಣ
ಗುರುವ ನರನೆಂದೆನಾದರೆ ಹಿಂದಣ ಭವಮಾಲೆ ಹಿಂಗದು. ಗುರುಶಬ್ದಕ್ಕೆ ರೋಷವ ಮಾಡಿದೆನಾದರೆ, ಶ್ವಾನನ ಬಳಗದಂತಪ್ಪೆನು. ಗುರೂಪದೇಶವ ಮೀರಿದೆನಾದರೆ ಎನಗೆ ಏಳೇಳು ಭವಕರ್ಮ ಹಿಂಗದು. ಇದು ಕಾರಣ ಗುರುಲಿಂಗವು ಭರ್ಗೋದೇವನೆಂಬೆನು ಕೂಡಲಚೆನ್ನಸಂಗಯ್ಯ, ಇವ ನಂಬದಿದ್ದರೆ ಭವ ಹಿಂಗದು.
--------------
ಚನ್ನಬಸವಣ್ಣ
ಮದ್ಯಪಾನಿಗೆ ಲಿಂಗಸಾಹಿತ್ಯವ ಮಾಡಿದಾತ ಹಿಂಗದೆ ನರಕದಲಾಳುತ್ತಿಪ್ಪನು. ಮಾಂಸಾಹಾರಿಗೆ ಲಿಂಗಸಾಹಿತ್ಯವ ಮಾಡಿದಾತನ ವಂಶಕ್ಷಯವೆಂದುದು. ಜೂಜುಗಾರಂಗೆ ಲಿಂಗಸಾಹಿತ್ಯವ ಮಾಡಿದಾತ ರೌರವನರಕಕ್ಕೆ ಹೋಹನು. ಸೂಳೆಗೆ ಲಿಂಗಸಾಹಿತ್ಯವ ಮಾಡಿದಾತ ಏಳೇಳು ಜನ್ಮದಲ್ಲೂ ಶ್ವಾನನ ಗರ್ಭದಲ್ಲಿ ಬರುತಿಪ್ಪನು. ಅಂಗಹೀನಂಗೆ ಲಿಂಗಸಾಹಿತ್ಯವ ಮಾಡಿದಾತ ಲಿಂಗದ್ರೋಹಿ, ಆತನ ಮುಖವ ನೋಡಲಾಗದು. ಮದ್ಯಪಾನೀ ಮಾಂಸಭಕ್ಷೀ ಶಿವದೀಕ್ಷಾವಿವರ್ಜಿತಃ ದ್ಯೂತೀ ವೇಶ್ಯಾಂಗಹೀನಶ್ಚ ತದ್ಗರೋರ್ದರ್ಶನಂ ತ್ಯಜೇತ್ ಇದು ಕಾರಣ ಕೂಡಲಚೆನ್ನಸಂಗನಲ್ಲಿ ವಿಚಾರಿಸದೆ ಲಿಂಗವ ಕೊಟ್ಟ ಗುರುವಿಂಗೆ ನರಕ ತಪ್ಪದು.
--------------
ಚನ್ನಬಸವಣ್ಣ
ಅನ್ಯದೇಹಿಯೆಂದು ಎನ್ನ ಕಳೆಯದಿರು, ಕರ್ಮದೇಹಿಯೆಂದು ಕೈಯ ಬಿಡದಿರು, ಮತ್ರ್ಯನೆಂದು ಮಾಯಕ್ಕೆ ಗುರಿಮಾಡದಿರು, ಮದಡನೆಂದು ಮನವಿಕಾರಕ್ಕೆ ಗುರಿಮಾಡದಿರು, ಅಜ್ಞಾನಿಯೆಂದು ಅಹಂಕಾರಕ್ಕೆ ಗುರಿಮಾಡದಿರು, ಮದದೇಹಿಯೆಂದು ಮಾಯಾತಮಂಧಕ್ಕೆ ಗುರಿಮಾಡದಿರು, ಜಲ ಅಗ್ನಿಯ ಗುಣವಿರಲೊ ಎನ್ನಯ್ಯ. ಅದು ಎಂತೆಂದೊಡೆ : ಜಲ ಹರಿವೆಡೆಯಲ್ಲಿ ಹೊಲಗೇರಿ ಉತ್ತಮಗೇರಿ ಅಮೇಧ್ಯದಗೇರಿಯೆಂದು ನೋಡಿ ಹರಿವುದೆ ? ಹರಿಯದು ; ಅದಕ್ಕೆಲ್ಲ ಸಮ. ಅಗ್ನಿ ಶ್ವಪಚರ ಮನೆ, ಗೃಹಸ್ಥರ ಮನೆ, ಬೇಡ ಮಾದಿಗ ಹದಿನೆಂಟು ಜಾತಿ ಎಂದು ಅಡಿಯಿಡಲು ಮುನಿವುದೆ ? ಮುನಿಯದು. ಎನ್ನ ಅನ್ಯದೇಹಿಯೆಂದು, ಕರ್ಮದೇಹಿಯೆಂದು, ಮತ್ರ್ಯದೇಹಿಯೆಂದು, ಮದಡದೇಹಿಯೆಂದು, ಅಜ್ಞಾನಿಯೆಂದು ಕಳೆದಡೆ ಹುರುಳಿಲ್ಲ. ಅತ್ತಿಯಹಣ್ಣು ಬಿಚ್ಚಿದರೆ ಬಲು ಹುಳು. ಎನ್ನ ಚಿತ್ತದೊಳವಗುಣವ ವಿಸ್ತರಿಸಿದರೇನು ? ಫಲವಿಲ್ಲ. ನೋಡದೆ ಕಾಡದೆ ಮಾಯಾತಮವಕಳೆದು ಜ್ಞಾನಜ್ಯೋತಿಯ ತೀವು. ಎನ್ನ ನಿಮ್ಮಯ ಶರಣರು ಚೆನ್ನಬಸವಣ್ಣ ಅಕ್ಕನಾಗಮ್ಮ ನೀಲಲೋಚನೆ ನಿಂಬವ್ವೆ ಮಹಾದೇವಿ ಮುಕ್ತಾಯಕ್ಕ ಅಜಗಣ್ಣ ಅಂಬಿಗರ ಚೌಡಯ್ಯ ಕಲಿಕೇತಯ್ಯ ಬ್ರಹ್ಮಯ್ಯ ನಿರ್ಲಜ್ಜಶಾಂತಯ್ಯ ನಿಜಗುಣದೇವರು ಸಿದ್ಧರಾಮಿತಂದೆ ಮರುಳಶಂಕರದೇವರು ಕಿನ್ನರಿಬ್ರಹ್ಮಯ್ಯ ವೀರಗಂಟೆಯ ಮಡಿವಾಳಯ್ಯ ಮೇದರ ಕೇತಯ್ಯಗಳು ಅರವತ್ತುಮೂವರು ಪುರಾತನರು ತೇರಸರು ಷೋಡಶರು ದಶಗಣರು ಮುಖ್ಯವಾದೈನೂರಾ ಎಪ್ಪತ್ತು ಅಮರಗಣಂಗಳ ಆಳಿನಾಳಿನಾ ಮನೆಯ ಕೀಳಾಳ ಮಾಡಿ ಅವರ ಲೆಂಕನಾಗಿ, ಅವರುಟ್ಟ ಮೈಲಿಗೆ, ಉಗುಳ್ದ ತಾಂಬೂಲ ಪಾದೋದಕ, ಅವರೊಕ್ಕ ಪ್ರಸಾದಕೆನ್ನ ಯೋಗ್ಯನಮಾಡೆ ಏಳೇಳು ಜನ್ಮದಲ್ಲಿ ಬರುವೆ ಕಂಡಾ, ಭವವಿರಹಿತ ತಂದೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
>ಶೈವ ಸೈವೆರಗಾದ, ಪಾಶುಪತಿ ಪಥವನರಿಯ ಕಾಳಾಮುಖಿ ಕಂಗೆಟ್ಟ, ಮಹಾವ್ರತಿ ಮದವೇರಿದ ಸನ್ಯಾಸಿ ಪಾಷಂಡಿಯಾದ, ಕಾಪಾಲಿ ಮರುಳಾಗಿ ತಿರುಗಿದ. ಈ ಆರು ಭಕ್ತಿಸ್ಥಲಕ್ಕೆ ಸಲ್ಲವು ಕೇಳಿರಣ್ಣಾ- ಏಳೇಳು ಭವದಲ್ಲಿ ಭವಿಯಾಗಿ ಬಂದು, ಶ್ರೀಗುರುಕಟಾಕ್ಷ ನಿರೀಕ್ಷಣೆಯಿಂದ ಪ್ರಾಣದಮೇಲೆ ಲಿಂಗಪ್ರತಿಷೆ*ಯಂ ಮಾಡಿಕೊಂಡು ಆರರಿಂದ ಮೀರಿದ ಸ್ಥಲವಿಟ್ಟು ವೀರಮಾಹೇಶ್ವರತ್ವಮಂ ಪಡೆದು ಮರಳಿ ತನ್ನ ಕುಲವನರಿಸಿದರೆ ಒಡೆದ ಮಡಕೆಯ ಓಡಿನಂತಹನು ಕೇಳಿರಣ್ಣಾ. ತನ್ನ ಕುಲವೆಂದು ಪ್ರಾಣಸ್ನೇಹ ಮಾಯಾಮೋಹ ಕಿಂಚಿತ್ ಮಾತ್ರ ಬೆರಸಿದರೆ, ಅವ ಪಂಚಮಹಾಪಾತಕಿ, ರೌರವ ನಾರಕಿ. ಅವನ ಭಕ್ತನೆಂದು ನೋಡಿದಡೆ, ನುಡಿಸಿದಡೆ, ಸಪಂಕ್ತಿಯಲ್ಲಿ ಕುಳಿತಡೆ, ಸಂಭಾಷಣೆಯ ಮಾಡಿದಡೆ, ಕೈವೊಡ್ಡಿ ಬೇಡಿದಡೆ ಅವಂಗೆ ಕುಂಭೀಪಾತಕ ನಾಯಕನರಕ ಕೇಳಿರಣ್ಣಾ. ಭಕ್ತಂಗೆ ಭವಿನೇಮಸ್ತರು ಸಲಲಾಗದು. ಭವಿ ಶ್ವಪಚ, ನೇಮಸ್ತ ಸಮ್ಮಗಾರ- ಇವರಿಬ್ಬರನು ಸತಿಸುತ ಮಿತ್ರರೆಂದು ಮಠಮಂ ಹೊಗಿಸಿದಡೆ ಅನ್ನಮನಿಕ್ಕಿದಡೆ; ಸುರೆಯ ಮಡಕೆಯಂ ತೊಳೆದು ಘೃತಮಂ ತುಂಬಿ ಶ್ವಾನನಂ ಕರೆದು ತಿನಿಸಿ, ಮಿಕ್ಕುದನು ತಾನು ಭುಂಜಿಸಿದಂತೆ ಕೇಳಿರಣ್ಣಾ. ಭಕ್ತ ಲಿಂಗಾರ್ಚನೆಯ ಮಾಡಿದ ಪವಿತ್ರ ಭಾಜನಮಂ ಶ್ವಾನ ಸೂಕರ ಕುಕ್ಕುಟ ಮಾರ್ಜಾಲಂಗಳು ಮುಟ್ಟಿದಡೆ ಅವರ ಕೂಡೆ ಸಹಭೋಜನವ ಮಾಡಿದಂತೆ. ಗುರುಲಿಂಗಜಂಗಮಕ್ಕೆ ಅರ್ಪಿತವ ಮಾಡಿ, ಒಕ್ಕುಮಿಕ್ಕ ಪ್ರಸಾದವ ಭೋಗಿಸುವಲ್ಲಿ ಪದಾರ್ಥವೆಂದು ಭಾವಿಸಿದಡೆ ಪ್ರಸಾದದ್ರೋಹ. ಜಂಗಮದಲ್ಲಿ ಅನೃತ ಅಸ್ಥಿರವಾಕ್ಯ ಪಂಕ್ತಿಭೇದ ಉದಾಸೀನ, ನಿರ್ದಯೆ, ಇಷ್ಟು (ಇರ್ದಡೆ) ಜಂಗಮದ್ರೋಹ. ಲಿಂಗದಲ್ಲಿ ತ್ರಿಕಾಲಪೂಜೆ ಪ್ರೀತಿ ಪ್ರೇಮ ಸ್ನೇಹ ಮೋಹ -ಇಂತೀ ಐದು ಇಲ್ಲದಿರುವದೆ ಲಿಂಗದ್ರೋಹ ಗುರುವಿನಲ್ಲಿ ಅಹಂಕಾರ, ಭಯವಿಲ್ಲದಿಹುದು, ಸಮಪಂಕ್ತಿಯಲ್ಲಿ ಕುಳ್ಳಿರುವುದು ಸಂಭಾಷಣೆಯ ಮಾಡುವುದು, ಕೈವೊಡ್ಡಿ ಬೇಡುವುದು- ಇಷ್ಟು ಗುರುದ್ರೋಹ. ಇದು ಕಾರಣ ಗುರುಲಿಂಗಜಂಗಮಕ್ಕೆ, ತನುಮನಧನವ ಸಮರ್ಪಿಸಿ ಏಕಲಿಂಗನಿಷಾ*ಪರನಾಗಿ, ಭಕ್ತಕಾಯ ಮಮಕಾಯವೆಂಬ ಶಬ್ದಕ್ಕೆ ಸಂದು, ಪ್ರಸಾದವೆಂದು ಕೊಂಡು ಎಂಜಲೆಂದು ಕೈತೊಳೆದಡೆ ಅಘೋರನರಕ ತಪ್ಪದು ಕೂಡಲಚೆನ್ನಸಂಗಮದೇವಯ್ಯಾ.
--------------
ಚನ್ನಬಸವಣ್ಣ
ಎನ್ನಂತೆ ಪುಣ್ಯಗೈದವರುಂಟೆ ? ಎನ್ನಂತೆ ಭಾಗ್ಯಂಗೈದವರುಂಟೆ ? ಕಿನ್ನರನಂತಪ್ಪ ಸೋದರರೆನಗೆ? ಏಳೇಳು ಜನ್ಮದಲ್ಲಿ ಶಿವಭಕ್ತರೆ ಬಂಧುಗಳೆನಗೆ. ಚೆನ್ನಮಲ್ಲಿಕಾರ್ಜುನನಂತಪ್ಪ ಗಂಡ ನೋಡಾ ಎನಗೆ.
--------------
ಅಕ್ಕಮಹಾದೇವಿ
ಹೆದರದಿರು ಮನವೆ, ಹಿಮ್ಮೆಟ್ಟದಿರು ಮನವೆ, ಹಿಡಿದ ಛಲವ ಬಿಡದಿರು ಮನವೆ. ಜರಿದರೆಂದು ಝಂಕಿಸಿದರೆಂದು ಶಸ್ತ್ರ ಸಮಾಧಿ ನೀರು ನೇಣು ವಿಷ ಔಷಧದಲ್ಲಿ ಘಟವ ಬಿಡದೆ ಗುರುವಾದಡು ಲಿಂಗವಾದಡು ಜಂಗಮವಾದಡು ನೊಸಲಲ್ಲಿ ಕಣ್ಣುಳ್ಳ ಪಶುಪತಿಯಾದಡು ತೆತ್ತಿಗರು ಕಂಡು ಒತ್ತಿ ನುಡಿದರೆಂದು ಘಟವ ಬಿಡುವ ಘಟಕರ್ಮಿಗಳು ಏಳೇಳು ಜನ್ಮದಲ್ಲಿ ಸೂಕರನ ಹೊಟ್ಟೆಯಲ್ಲಿ ಹುಟ್ಟಿ, ನೂರೊಂದು ಕುಲ ಹದಿನೆಂಟು ಜಾತಿಯ ಅಮೇಧ್ಯವ ತಿಂದು ಹೊಲೆಯರ ಮನೆಯ ಹೊಸ್ತಿಲ ಕಾಯ್ದುಕೊಂಡಿಪ್ಪರಯ್ಯಾ : ಅಮುಗೇಶ್ವರಲಿಂಗವೆ, ನಿಮ್ಮಾಣೆ ನಿಮ್ಮ ಪ್ರಮಥರಾಣೆ.
--------------
ಅಮುಗೆ ರಾಯಮ್ಮ
-->