ಅಥವಾ

ಒಟ್ಟು 6 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚರಾಚರಾತ್ಮಕ ಪ್ರಪಂಚವೆಲ್ಲ ಶಿವನ ಚಿದ್ಗರ್ಭದಿಂದುಯಿಸಿಪ್ಪವೆಂದು, ಶಿವಾಭಿನ್ನತ್ವದಿಂ ಸಕಲಪ್ರಾಣಿಗಳಲ್ಲಿ ತನ್ನಾತ್ಮಚೇತನವ ತನ್ನಲ್ಲಿ ಸಕಲ ಪ್ರಾಣಿಗಳ ಆತ್ಮ ಚೇತನವ ಕಂಡು, ದಯಾಪರತ್ವವನುಳ್ಳ ಸರ್ವಜ್ಞತಾ ಶಕ್ತಿಯನು ಭಕ್ತಿಸ್ಥಲದಲ್ಲಿ ಪಡೆವುದು ನೋಡಾ. ತನಗೆ ಬಂದ ಅಪವಾದ ನಿಂದೆ ಎಡರಾಪತ್ತುಗಳಲ್ಲಿ ಎದೆಗುಂದದೆ ಬಪ್ಪ ಸುಖ ದುಃಖ ಖೇದ ಹರ್ಷಾದಿಗಳು ಶಿವಾಜ್ಞೆಯಹುದೆಂದು ಪರಿಣತನಪ್ಪ ತೃಪ್ತಿಯ ಶಕ್ತಿಯನು ಮಾಹೇಶ್ವರಸ್ಥಲದಲ್ಲಿ ಪಡೆವುದು ನೋಡಾ. ದೇಹಾದಿ ಆದಿ ಪ್ರಪಂಚಕ್ಕೆ ಮೂಲಿಗನಾದ ಅನಾದಿ ಪರಶಿವನು ಪ್ರಸನ್ನತ್ವವನುಂಟುಮಾಡುವ ಅನಾದಿ ಬೋಧ ಶಕ್ತಿಯನು ಪ್ರಸಾದಿಸ್ಥಲದಲ್ಲಿ ಪಡೆವುದು ನೋಡಾ. ಅಂತಪ್ಪ ದೇಹಾದಿ ಪ್ರಪಂಚದ ಚಲನವಲನವು ತನ್ನಾಶ್ರಯದಲ್ಲಿ ನಡೆದು ತಾನು ಆವುದನ್ನೂ ಆಶ್ರಯಿಸದೆ ಸರ್ವಸ್ವತಂತ್ರ ತಾನೆಂಬರಿವನುಂಟುಮಾಡುವ ಸ್ವತಂತ್ರ ಶಕ್ತಿಯನು ಪ್ರಾಣಲಿಂಗಿಸ್ಥಲದಲ್ಲಿ ಪಡೆವುದು ನೋಡಾ. ತನ್ನಾಶ್ರಯವ ಪಡೆದ ದೃಶ್ಯಮಾನ ದೇಹಾದಿ ಜಗವೆಲ್ಲ ಅನಿತ್ಯವೆಂಬ ಆ ದೃಶ್ಯಮಾನದೇಹಾದಿಗಳ ಮೂಲೋತ್ಪತ್ತಿಗಳಿಗೆ ಕಾರಣನಪ್ಪ ಪತಿಪರಶಿವಲಿಂಗವೇ ನಿತ್ಯವೆಂಬರಿವನುಂಟುಮಾಡುವ ಅಲುಪ್ತ ಶಕ್ತಿಯನು ಶರಣಸ್ಥಲದಲ್ಲಿ ಪಡೆವುದು ನೋಡಾ. ಅಂಗಲಿಂಗಗಳ ಸಂಯೋಗವ ತೋರಿ, ಅಖಂಡ ಪರಶಿಲಿಂಗೈಕ್ಯವನುಂಟುಮಾಡಿ ಕೊಡುವ ಅನಂತ ಶಕ್ತಿಯನು ಐಕ್ಯಸ್ಥಲದಲ್ಲಿ ಪಡೆವುದು ನೋಡಾ. ಇದಕ್ಕೆ ಶಿವರಹಸ್ಯೇ ; 'ಯದ್ಭಕ್ತಿಸ್ಥಲಮಿತ್ಯಾಹುಸ್ತತ್ಸರ್ವಜ್ಞತ್ವಮಿತೀರ್ಯತೇ ೀ ಯನ್ಮಾಹೇಶ್ವರಂ ನಾಮ ಸಾ ತೃಪ್ತಿರ್ಮಮ ಶಾಂಕರಿ || ಯತ್ಪ್ರಸಾದಾಭಿದಂ ಸ್ಥಾನಂ ತದ್ಬೋಧೋ ನಿರಂಕುಶಃ ೀ ಯತ್ಪ್ರಣಲಿಂಗಕಂ ನಾಮ ತತ್ಸ್ವಾತಂತ್ರೈಮುದಾಹೃತಂ || ಯದಸ್ತಿ ಶರಣಂ ನಾಮ ಹ್ಯಲುಪ್ತಾ ಶಕ್ತಿರುಚ್ಯತೇ ೀ ಯದೈಕ್ಯಸ್ಥಾನಮೂರ್ಧಸ್ಥಾ ಹ್ಯನಂತಾಶಕ್ತಿರುಚ್ಯತೇ ||ú ಎಂದುದಾಗಿ, ಇಂತಪ್ಪ ಷಟ್‍ಸ್ಥಲಗಳಲ್ಲಿ ಷಡ್ವಿಧ ಶಕ್ತಿಗಳ ಸ್ಥಳಕುಳಂಗಳ ತಿಳಿದು, ಷಡ್ವಿಧ ಲಿಂಗಗಳಲ್ಲಿ ಧ್ಯಾನ ಪೂಜಾದಿಗಳಿಂದ ಅಂಗಗೊಂಡು ಭವದ ಬಟ್ಟೆಯ ಮೆಟ್ಟಿ ನಿಂದಲ್ಲದೆ ಷಟ್‍ಸ್ಥಲಬ್ರಹ್ಮಿಗಳಾಗರು. ಇಂತಲ್ಲದೆ ಅಪವಾದ ನಿಂದೆಗಳ ಪರರ ಮೇಲೆ ಕಣ್ಗಾಣದೆ ಹೊರಿಸುತ್ತ ಪರದಾರ ದಾಶಿ ವೇಶಿ ಸೂಳೆಯರ ಕೂಡಿ ಭುಂಜಿಸಿ ತೊಂಬಲತಿಂಬ ಹೇಸಿ ಮೂಳರು ಪೋತರಾಜ, ಜೋಗಿ, ಕ್ಷಪಣರಂತೆ ಜಟಾ, ತುರುಬು, ಬೋಳುಮುಂಡೆಗೊಂಡು ಕೂಳಿಗಾಗಿ ತಿರುಗುವ ಮೂಳ ಚುಕ್ಕೆಯರ ವಿರಕ್ತ ಷಟ್‍ಸ್ಥಲಬ್ರಹ್ಮಿಗಳೆನಬಹುದೇನಯ್ಯ ? ಅಂತಪ್ಪ ಅನಾದಿ ಷಟ್‍ಸ್ಥಲಬ್ರಹ್ಮದ ಷಡ್ವಿಧಶಕ್ತಿಯನರಿದು ವಿರಕ್ತ ಜಂಗಮ ಷಟ್‍ಸ್ಥಲ ಬಾಲಬ್ರಹ್ಮಿ ನಿರಾಭಾರಿಯಾದ ಚೆನ್ನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಎನ್ನ ಮೂವತ್ತಕ್ಷರಸ್ವರೂಪವನೊಳಕೊಂಡು ಆಚಾರಲಿಂಗವಾಗಿ ಎನ್ನ ಭಕ್ತಿಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಇಪ್ಪತ್ತೆ ೈದುಕ್ಷರಸ್ವರೂಪವನೊಳಕೊಂಡು ಗುರುಲಿಂಗ ಸ್ವರೂಪಾಗಿ ಎನ್ನ ಮಾಹೇಶ್ವರಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಇಪ್ಪತ್ತಕ್ಷರಸ್ವರೂಪವನೊಳಕೊಂಡು ಶಿವಲಿಂಗ ಸ್ವರೂಪಾಗಿ ಎನ್ನ ಪ್ರಸಾದಿಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಹದಿನೈದಕ್ಷರಸ್ವರೂಪವನೊಳಕೊಂಡು ಜಂಗಮಲಿಂಗ ಸ್ವರೂಪಾಗಿ ಎನ್ನ ಪ್ರಾಣಲಿಂಗಿಸ್ಥಳದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ದಶಾಕ್ಷರಸ್ವರೂಪವನೊಳಕೊಂಡು ಪ್ರಸಾದಲಿಂಗ ಸ್ವರೂಪಾಗಿ ಎನ್ನ ಶರಣಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಏಕಾಕ್ಷರಸ್ವರೂಪವನೊಳಕೊಂಡು ಮಹಾಲಿಂಗ ಸ್ವರೂಪಾಗಿ ಎನ್ನ ಐಕ್ಯಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಇಂತೀ ನಾನಾವಿಧ ಪ್ರಕಾರವನೊಳಕೊಂಡ ಬಸವಣ್ಣನೆ ಇಷ್ಟಬ್ರಹ್ಮವೆನಗೆ. ಈ ಇಷ್ಟಬ್ರಹ್ಮವೆ ಎನ್ನ ಭಾವ ಮನ ದೃಕ್ಕಿನಲ್ಲಿ ತೊಳಗಿ ಬೆಳಗುತ್ತಿರ್ದೆ ಭೇದವನು ಸಿದ್ಧೇಶ್ವರನು ಅರುಹಿ ಕೊಟ್ಟ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಸಿದ್ಧೇಶ್ವರನ ಕೃಪೆ ಎನಗೆ ಸಾಧ್ಯವಾಯಿತ್ತಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಭಕ್ತಂಗೆ ಭಕ್ತಸ್ಥಲವಲ್ಲದೆ ಮಾಹೇಶ್ವರಸ್ಥಲದಲ್ಲಿ ನಿಲ್ಲ ಮಾಹೇಶ್ವರಂಗೆ ಮಾಹೇಶ್ವರಸ್ಥಲವಲ್ಲದೆ ಪ್ರಸಾದಿಸ್ಥಲದಲ್ಲಿ ನಿಲ್ಲ ಪ್ರಸಾದಿಗೆ ಪ್ರಸಾದಿಸ್ಥಲವಲ್ಲದೆ ಪ್ರಾಣಲಿಂಗಿಸ್ಥಲದಲ್ಲಿ ನಿಲ್ಲ ಪ್ರಾಣಲಿಂಗಿಗೆ ಪ್ರಾಣಲಿಂಗಿಸ್ಥಲವಲ್ಲದೆ ಶರಣಸ್ಥಲದಲ್ಲಿ ನಿಲ್ಲ ಶರಣಂಗೆ ಶರಣಸ್ಥಲವಲ್ಲದೆ ಐಕ್ಯಸ್ಥಲದಲ್ಲಿ ನಿಲ್ಲ ಐಕ್ಯಂಗೆ ಐಕ್ಯಸ್ಥಲವಲ್ಲದೆ ಮಹಾಬೆಳಗಿನ ಕಳೆಗೆ ನಿಲುಕ. ಅದು ಪೂರ್ಣಭಾವ ಪರಿಪೂರ್ಣವಾಗಿಪ್ಪುದು. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಲಿಂಗವು ಭಕ್ತಿಕಾರಣವಾಗಿ ಸ್ಥಲಂಗಳಿಗೆ ಗೊತ್ತಾದ ಭೇದ.
--------------
ಮೋಳಿಗೆ ಮಹಾದೇವಿ
ಅಯ್ಯಾ, ನಾನು ಆಚಾರಲಿಂಗಜಂಗಮಕ್ಕೆ ಅಷ್ಟವಿಧಾರ್ಚನೆಯಿಂದ ಅರ್ಚಿಸುವೆನೆ ? ಭಕ್ತಸ್ಥಲ ಎನಗಿಲ್ಲವಯ್ಯಾ. ಗುರುಲಿಂಗಜಂಗಮಕ್ಕೆ ಅಷ್ಟವಿಧಾರ್ಚನೆಯಿಂದ ಅರ್ಚಿಸುವೆನೆ ? ಮಹೇಶ್ವರಸ್ಥಲವೆನಗಿಲ್ಲವಯ್ಯಾ. ಶಿವಲಿಂಗಜಂಗಮಕ್ಕೆ ಅಷ್ಟವಿಧಾರ್ಚನೆಯಿಂದ ಅರ್ಚಿಸುವೆನೆ ? ಪ್ರಸಾದಿಸ್ಥಲವೆನಗಿಲ್ಲವಯ್ಯಾ. ಜಂಗಮಲಿಂಗಜಂಗಮಕ್ಕೆ ಅಷ್ಟವಿಧಾರ್ಚನೆಯಿಂದ ಅರ್ಚಿಸುವೆನೆ ? ಪ್ರಾಣಲಿಂಗಿಸ್ಥಲವೆನಗಿಲ್ಲವಯ್ಯಾ. ಪ್ರಸಾದಲಿಂಗಜಂಗಮಕ್ಕೆ ಅಷ್ಟವಿಧಾರ್ಚನೆಯಿಂದ ಅರ್ಚಿಸುವೆನೆ ? ಶರಣಸ್ಥಲವೆನಗಿಲ್ಲವಯ್ಯಾ. ಇಂತು ಪಂಚಸ್ಥಲವನೊಳಗೊಂಡಿಪ್ಪ ಐಕ್ಯಸ್ಥಲದಲ್ಲಿ ನಿಂದು ಪಂಚಲಿಂಗವನೊಳಗೊಂಡಿಪ್ಪ ಮಹಾಲಿಂಗಜಂಗಮಕ್ಕೆ ಅಷ್ಟವಿಧಾರ್ಚನೆಯೊಳ್ವೆರೆದು ಮಾಡದ ಮುನ್ನವೇ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮೊಳೈಕ್ಯ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗದಲಳವಟ್ಟ ಸುಖವು ಲಿಂಗದಲ್ಲಿ ಲೀಯವಾಗಿ, ಲಿಂಗದಲ್ಲಿ ಲೀಯವಾದ ಸುಖವು ಮಹಾಲಿಂಗದಲ್ಲಿ ಲೀಯವಾಗಿ ಮಹಾಲಿಂಗದಲ್ಲಿ ಲೀಯವಾದ ಸುಖವು ಜ್ಞಾನಮುಖದಲ್ಲಿ ಲೀಯವಾಗಿ, ಜ್ಞಾನಮುಖದಲ್ಲಿ ಲೀಯವಾದ ಸುಖವು ಮಹಾಜ್ಞಾನದಲ್ಲಿ ಲೀಯವಾಗಿ, ಮಹಾಜ್ಞಾನದಲ್ಲಿ ಲೀಯವಾದ ಸುಖವು ಸರ್ವಾಂಗಮುಖದಲ್ಲಿ ಲೀಯವಾಗಿ, ಸರ್ವಾಂಗ[ಮುಖ]ದಲ್ಲಿ ಲೀಯವಾದ ಸುಖವು ಸಮರಸಸಂಗದಲ್ಲಿ ಲೀಯವಾಗಿ, ಸಮರಸಸಂಗದಲ್ಲಿ ಲೀಯವಾದ ಸುಖವು ಐಕ್ಯಸ್ಥಲದಲ್ಲಿ ಲೀಯವಾಗಿ, ಐಕ್ಯಸ್ಥಲದಲ್ಲಿ ಲೀಯವಾದ ಸುಖವು ನಿರಾಕಾರದಲ್ಲಿ ಲೀಯವಾಗಿ, ನಿರಾಕಾರದಲ್ಲಿ ಲೀಯವಾದ ಸುಖವು ನಿಶ್ಶಬ್ದದಲ್ಲಿ ಲೀಯವಾಗಿ, ನಿಶ್ಶಬ್ದದಲ್ಲಿ ಲೀಯವಾದ ಸುಖವು ನಿರಂಜನದಲ್ಲಿ ಲೀಯವಾಗಿ, ನಿರಂಜನದಲ್ಲಿ ಲೀಯವಾದ ಸುಖವು ಪರಬ್ರಹ್ಮದಲ್ಲಿ ಲೀಯವಾಗಿ, ಪರಬ್ರಹ್ಮದಲ್ಲಿ ಲೀಯವಾದ ಸುಖವ ಅಹಂ ಬ್ರಹ್ಮದಲ್ಲಿ, ಲೀಯವ ಮಾಡಿದರು ನಮ್ಮ ಶರಣರು. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತ ಚೆನ್ನಮಲ್ಲಿಕಾರ್ಜುನದೇವಯ್ಯನಲ್ಲಿ ಜನನಮರಣವಿರಹಿತ ನಿಜತತ್ವ ನಿಸ್ಪೃಹ ನಿಃಕಳಂಕ ಮಹಾಶರಣನಲ್ಲದೆ ಮತ್ತೆ ಉಳಿದ ಭೂಲೋಕದ ಭೂಭಾರ ಜೀವಿಗಳಿಗೆ ಅಳವಡುವುದೆ ಮಹಾಲಿಂಗೈಕ್ಯವು ? ಇಂತಪ್ಪ ಮಹಾಲಿಂಗೈಕ್ಯನ ನಿಲವ ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
-->