ಅಥವಾ

ಒಟ್ಟು 18 ಕಡೆಗಳಲ್ಲಿ , 10 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಹ್ಮ ಸೋರೆಯಾಗಿ, ವಿಷ್ಣು ದಂಡವಾಗಿ, ಸಕಲದೇವತಾಕುಲ ದಾರವಾಗಿ, ಶ್ರುತಿನಾದ ವಸ್ತುವಾಗಿ ತೋರುತ್ತಿರೆ, ತನ್ನ ಲೀಲೆಯಿಂದ, ಜಗಕ್ರೀಡಾಭಾವದಿಂದ ಒಂದಕ್ಕೊಂದು ಸೇರಿಸಿ, ಉತ್ತಮ ಕನಿಷ್ಠ ಮಧ್ಯಮವೆಂಬ ತ್ರಿವಿಧಮೂರ್ತಿಯಾಗಿ, ಕಲ್ಪಿಸಿದ ಜಗ ಹಾಹೆಯಿಂದ ಎಂಬುದನರಿಯದೆ, ಮಲಕ್ಕೂ ನಿರ್ಮಲಕ್ಕೂ ಸರಿಯೆನಬಹುದೆ? ವಾದಕ್ಕೆ ಈ ತೆರ ಅರಿದಡೆ ಆ ತೆರ. ಸದಾಶಿವಮೂರ್ತಿಲಿಂಗವು ಅತ್ಯತಿಷ್ಠದ್ದಶಾಂಗುಲವು.
--------------
ಅರಿವಿನ ಮಾರಿತಂದೆ
ನಿಮ್ಮ ನುಡಿಯ ಇರವಿನಂತೆ, ಪ್ರಮಥರ ಇರವೊ, ನಿಮ್ಮ ಇರವೊ? ಒಂದಕ್ಕೊಂದು ಒಂದಕ್ಕೊಂಬತ್ತು ಮಾಡಿ ನುಡಿದಡೆ, ಸಹಜವೆಂಬುವ ಭಾವ ಅದೆಂತು? ಕಪಿಲಸಿದ್ಧಮಲ್ಲಿಕಾರ್ಜುನ ಶರಣರಲ್ಲಿ ಸಹಜಪ್ರೇಮವುಳ್ಳಡೆ, ಸಕಲರ ನುಡಿಯೆ ಇಷ್ಟ ಕೇಳಾ, ಕಿನ್ನರಯ್ಯಾ.
--------------
ಸಿದ್ಧರಾಮೇಶ್ವರ
ಪೃಥಿವ್ಯಪ್ತೇಜೋವಾಯ್ವಾಕಾಶಂಗಳಲ್ಲಿ ಪೃಥಿವ್ಯಪ್ತೇಜಸ್ಸುಗಳು ಸಾಕರಾಗಳೂ ವಾಯ್ವಾಕಾಶಂಗಳು ನಿರಾಕಾರಗಳೂ ಆಗಿ, ಸ್ಥೂಲ ಸೂಕ್ಷ್ಮಕಾರಣಂಗಳಾಗಿಹವು. ಪೃಥ್ವಿಯಲ್ಲೈದು ಗುಣಗಳೂ ಜಲದಲ್ಲಿ ನಾಲ್ಕು ಗುಣಗಳೂ ಅಗ್ನಿಯಲ್ಲಿ ಮೂರು ಗುಣಗಳೂ ವಾಯುವಿನಲ್ಲಿರಡು ಗುಣಗಳೂ ಇರ್ಪವು. ಆಕಾಶದಲ್ಲೊಂದು ಗುಣವಿರ್ಪುದು. ಆತ್ಮನು ನಿರ್ಗುಣಮಾಗಿ ಸಕಲಗುಣಂಗಳಿಗೂ ತಾನು ಕಾರಣಮಾಗಿಹನು. ಅದೆಂತೆಂದೊಡೆ : ನಿರ್ಗುಣಮಾದ ಬಿಂದುಪದಾರ್ಥವು ಸಗುಣರೂಪಮಾದ ಮನುಷ್ಯರಿಗೆ ತಾನು ಕಾರಣಮಾಗಿರ್ಪಂದದಿ ಆತ್ಮನಿಹನು. ಪಂಚವರ್ಣಂಗಳು ಸತ್ವರಜಸ್ತಮೋಗುಣಂಗಳು. ನಾದ ಬಿಂದು ಕಲೆಗಳು ಬಾಲ್ಯ ಯೌವನ ಕೌಮಾರ ವಾರ್ಧಕ್ಯಂಗಳು. ಇವೆಲ್ಲವೂ ಪ್ರಪಂಚಕ್ಕೆ ಗುಣಂಗಳಲ್ಲದೆ ಆತ್ಮನ ಗುಣವಲ್ಲ. ಅಂತಪ್ಪ ಆತ್ಮನೇ ಶಿವನು, ಆಕಾಶವೇ ವಿಷ್ಣು, ವಾಯುವೇ ಬ್ರಹ್ಮನು. ಸಾಕಾರದಲ್ಲಿ ಅಗ್ನಿಯೇ ರುದ್ರನು, ಜಲವೇ ವಿಷ್ಣು. ಪೃಥ್ವಿಯೇ ಬ್ರಹ್ಮನು. ಇವು ಒಂದಕ್ಕೊಂದು ಸೃಷ್ಟಿ ಸ್ಥಿತಿ ಸಂಹಾರಹೇತುಗಳಾಗಿ, ಎಲ್ಲವೂ ಆತ್ಮನಲ್ಲಿ ಲಯವನೈದುತ್ತಿಹವು. ಅಂತಪ್ಪ ಆತ್ಮಸ್ವರೂಪಮೆತೆಂದೊಡೆ : ದೃಷ್ಟಿಗೋಚರಮಲ್ಲ, ಒಂದು ವಸ್ತುವಿನಲ್ಲಿ ಸಾಮ್ಯಗೋಚರಮಲ್ಲ. ಅದೆಂತೆಂದೊಡೆ : ವಾಯ್ವಾಕಾಶಾತ್ಮಸ್ವರೂಪಿಗಳಾದ ತ್ರಿಮೂರ್ತಿಗಳು. ವಾಯುರೂಪಮಾದ ಬ್ರಹ್ಮನೇ ಲಕ್ಷ್ಮಿಯು, ಆಕಾಶರೂಪಮಾದ ವಿಷ್ಣುವೇ ಮಹಾದೇವಿಯು, ಆv್ಮÀರೂಪಮಾದ ಶಿವನೇ ಶಾರದೆಯು. ವಾಯುರೂಪಮಾದ ಬ್ರಹ್ಮನು ಆತ್ಮರೂಪಮಾದ ಶಾರದೆಯನ್ನು ಕೂಡಿಹನು. ಆಕಾಶರೂಪಮಾದ ವಿಷ್ಣುವು ವಾಯುರೂಪಮಾದ ಲಕ್ಷ್ಮಿಯಂ ಕೂಡಿಹನು. ಆತ್ಮÀರೂಪಮಾದ ಶಿವನು ಆಕಾಶರೂಪಮಾದ ಮಹಾದೇವಿಯಂ ಕೂಡಿಹನು. ಆತ್ಮನೇ ವಿವೇಕವೆಂದು ತಿಳಿವುದು, ವಿವೇಕವೇ ಸತ್ಯಜ್ಞಾನಾಂದಸ್ವರೂಪು, ವಿವೇಕದಿಂದ ಸಕಲಪ್ರಪಂಚವೆಲ್ಲಾ ಮಿಥ್ಯೆಯಾಗಿಹುದು. ಅಂತಪ್ಪ ಸಕಲಪ್ರಪಂಚಮೆಲ್ಲವೂ ಮಿಥ್ಯವೆಂದು ತಿಳಿದು ಆ ಪ್ರಪಂಚದಲ್ಲಿ ಹೊಂದಿರ್ಪ ವಿವೇಕವೇ ಮುಕ್ತಿಯು, ಆಮುಕ್ತಿಯೇ ಶಿವನು. ಅಂತಪ್ಪ ವಿವೇಕದಲ್ಲಿನಾಹಂಭಾವವಡಗಿ, ಅಂತಪ್ಪ ವಿವೇಕವೇ ಮಹಾಲಿಂಗವು, ಅಂತಪ್ಪ ವಿವೇಕಮಿರ್ದಲ್ಲಿ ಪಾಪಗಳು ಹೊಂದದೇ ಇಹವು. ಅದುಕಾರಣ, ತಾನು ತಾನಾಗಿರ್ಪ ನಿಜಾನಂದಸುಖದೊಳೋಲಾಡುತಿರ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಮೂಲಾಧಾರ ಮುಂತಾದ ಷಡಾಧಾರಂಗಳಲ್ಲಿ ಆಶ್ರಯವರ್ಣ ದಳವರ್ಣ ಭಾವವರ್ಣ ಆತ್ಮವರ್ಣ ಅಕ್ಷರವರ್ಣ ಸ್ಥಲವರ್ಣಂಗಳ ಕಲ್ಪಿಸಿ, ಭೇದಕ್ರೀಯಿಂದ ಅರಿಯಬೇಕಾಗಿ ಕ್ರೀ ಮೂರು, ಸ್ಥಲವಾರು, ತತ್ವವಿಪ್ಪತ್ತೈದು, ಕಥನ ಮೂವತ್ತಾರು, ಪ್ರಸಂಗ ನೂರೊಂದರಲ್ಲಿ ನಿರ್ವಾಹ. ಈ ಏಕವಸ್ತು ತ್ರಿಗುಣಾತ್ಮಕವಾದ ಸಂಬಂಧ. ಇಂತಿವನರಿತೆಹೆನೆಂದು ಒಂದಕ್ಕೊಂದು ಸಂದನಿಕ್ಕದೆ ಗುರುವಿನ ಕಾರುಣ್ಯವನರಿತು, ಲಿಂಗದಲ್ಲಿ ಚಿತ್ತವ ಮೂರ್ತಿಗೊಳಿಸಿ ಜಂಗಮದಲ್ಲಿ ಸತ್ವಕ್ಕೆ ತಕ್ಕ ಸಾಮಥ್ರ್ಯದಲ್ಲಿ ಭಕ್ತಿಯನೊಪ್ಪಿ ನಿಶ್ಚಯನಾಗಿಪ್ಪುದೆ ಭಕ್ತಿಯ ಅಂಗಕ್ಕೆ ಇಕ್ಕಿದ ಗೊತ್ತು ವಿಶ್ವಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 77 ||
--------------
ದಾಸೋಹದ ಸಂಗಣ್ಣ
ಅಪ್ಪು ಆಧಾರವಾಗಿ, ಕಮಠ ಶೇಷ ನೆಮ್ಮುಗೆಯಿಂದ ಪೃಥ್ವಿ ಆ[ಧೇಯ]ವಾಗಿ ನಿಂದು ತೋರುವಂತೆ, ವಸ್ತುವಿನ ಹಾಹೆಯಿಂದ ಕಾಯ ನಿಂದು ತೋರುತ್ತಿಹುದೇ ದೃಷ್ಟ. ಒಂದಕ್ಕೊಂದು ನೆಮ್ಮಿ ಕಾಣುವ ಅರಿವಿಂಗೆ ಕುರುಹು ಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ವಾಚಾತೀತವೂ ಮನೋತೀತವೂ ಭಾವಾತೀತವೂ ಆದ ಮಹಾಲಿಂಗವು ಸತ್ಯಜ್ಞಾನಾನಂದ ಸ್ವರೂಪಮಾದಲ್ಲಿ, ಸತ್ಯವೇ ಭಕ್ತ, ಜ್ಞಾನವೇ ಗುರು, ಆನಂದವೇ ಜಂಗಮಸ್ವರೂಪವಾಗಿ ನಟಿಸುತಿರ್ಪ ಮಹಾಲಿಂಗವು ತನ್ನ ಲೀಲೆಗೋಸುಗ ಆನಂದವನ್ನು ಮರೆವಿಡಿದು, ಅದರಲ್ಲಿಯೇ ದುಃಖಸ್ವರೂಪಮಾಗಿ ಮಹಾರುದ್ರನಂ ಸೃಜಿಸಿ, ಜ್ಞಾನಮಂ ಮರೆವಿಡಿದು, ಅದರಲ್ಲಿಯೇ ಅಜ್ಞಾನವೆಂಬ ವಿಷ್ಣುವಂ ಕಲ್ಪಸಿ, ಸತ್ಯವಂ ಮರೆವಿಡಿದು, ಅದರಲ್ಲಿ ಮಿಥ್ಯೆಯೆಂಬ ಬ್ರಹ್ಮನು ಕಲ್ಪಿಸಲು, ಸರ್ಗಸ್ಥಿತಿ ಸಂಹಾರಂಗಳಿಗಿದೇ ಕಾರಣಮಾಗಿ, ಆ ರುದ್ರನಲ್ಲಿ ಜಾಗ್ರವೂ, ವಿಷ್ಣುವಿನಲ್ಲಿ ಸುಷುಪ್ತಿಯೂ, ಬ್ರಹ್ಮನಲ್ಲಿ ಸ್ವಪ್ನವೂ ಉತ್ಪನ್ನವಾಗಿ, ಆ ಜಾಗ್ರದಲ್ಲಿ ತೇಜವೂ, ಸುಷುಪ್ತಿಯಲ್ಲಿ ವಾಯ್ವಾಕಾಶಂಗಳೂ, ಸ್ವಪ್ನದಲ್ಲಿ ಪೃಥ್ವಿಯಪ್ಪುಗಳೂ ಆಗಿ, ಅವುಗಳೇ ಒಂದಕ್ಕೊಂದಾವರಣಂಗಳಾಗಿರ್ಪ ಈ ಪ್ರಪಂಚದಲ್ಲಿ ಕ್ರೀಡಾನಿಮಿತ್ತವಾಗಿ ಜೀವಪರಮರೂಪುಗಳಂ ಧರಿಸಿ, ಇದಕ್ಕೆ ಹೊರಗಾಗಿ, ತಾನು ಪರಮರೂಪದಲ್ಲಿ ನಿಂದು, ತನ್ನೊಳ್ತಾನೆ ಕಲ್ಪಿಸಿದ ಜೀವಕೋಟಿಗಳನ್ನು ಇದಕ್ಕೊಳಗುಮಾಡಲು, ಅವೆಲ್ಲವೂ ಒಂದಕ್ಕೊಂದು ಸುತ್ತಿಮುತ್ತಿ ಮಿಥ್ಯೆಯೇ ಸ್ಥೂಲಮಾಗಿ, ಅಜ್ಞಾನವೇ ಸೂಕ್ಷ್ಮವಾಗಿ, ದುಃಖವೇ ಕಾರಣಮಾಗಿ, ಜಾಗ್ರತ್ಸ್ವಪ್ನಸುಷುಪ್ತ್ಯವಸ್ಥೆಗಳನನುಭವಿಸುತ್ತಾ. ನಿಜವಂ ಮರತು ನಿಜಾವಸ್ಥೆಯಂ ತೊರೆದು, ತ್ರಿಮೂರ್ತಿಗಳ ಬಲೆಗೆ ಸಿಕ್ಕಿ ದಾಂಟಲಾರದೆ, ಕೋಟಲೆಗೊಳುತತಿಪ್ರ್ಮದಂ ನೋಡಿ ನೋಡಿ, ಆನಂದಿಸುತ್ತಿರ್ಪನೆಂತೆಂದೊಡೆ: ಮದ್ದಂ ಮೆಲುವಾತಂಗದೇ ಸಾಧಕಮಾಗಿ, ಆ ಲಹರಿಯೊಳಗೆ ಕೂಡಿ, ನಿಜಾವಸ್ಥೆಯಂ ತೊರೆದು, ತದವಸ್ಥೆಯೊಳು ಬದ್ಧನಾಗಿ, ಆ ಲಹರಿಯಳಿದಲ್ಲಿ ಮರಣವೇ ಕಾರಣಮಾಗಿ, ತಿರಿಗಿ ಶರೀರಮಂಪೊಂದಿ, ಅವಸ್ಥಾತ್ರಯಂಗಳನನುಭವಿಸುತ್ತಿಪ್ರ್ಮದಂ ನೋಡಿ, ಪರಮಾನಂದಿಸುತ್ತಿಪುನು. ಇಂತಪ್ಪ ಭ್ರಮೆಯಂ ಕಳೆದು, ತನ್ನ ನಿಜಸ್ವರೂಪಮಪ್ಪ ತೂರ್ಯಾವಸ್ಥೆಯಂ ಹೊಂದುವನೆಂದೊಡೆ, ಹೊಂದತೀರದೆ ಸ್ವಲ್ಪಕಾಲವೇ ಮಹಾತ್ಕಾಲಮಾಗಿ, ಪೃಥ್ವಿವ್ಯಪ್ತೇಜೋವಾಯ್ವಾಕಾಶಾದಿ ಪಂಚಭೂತಂಗಳು ದಾಂಟಲಾರದೆ, ಆ ಪಂಚಭೂತಗುಣಗಂಗಳಂ ಪಂಚೇಂದ್ರಿಯಮುಖಗಳಿಂದ ತನ್ನತಃಕರಣದಿಂ ಕೊಂಡುಂಡು, ಭಾವವಂ ಮುಟ್ಟಲೊಲ್ಲದೆ, ಪಂಚೇದ್ರಿಯಂಗಳಲ್ಲಿರ್ಪ ಬ್ರಹ್ಮನ, ಅಂತಃಕರಣದಲ್ಲಿರ್ಪ ವಿಷ್ಣುವಿನ, ಭಾವದಲ್ಲಿರ್ಪ ರುದ್ರನ ಕಾಟದಲ್ಲಿ ಕೋಟಲೆಗೊಳುತ್ತಿರ್ಪುದಂ ತಪ್ಪಿಸುವುದಕ್ಕುಪಾಯಮಂ ಕಾಣದಿರ್ಪ ಜೀವನಿಗೆ ತಾನೇ ದಯೆಯಿಂ ಗುರುರೂಪನಾಗಿ ಬಂದು, ತನ್ನ ನಿಜವನ್ನೇ ಇದಿರಿಟ್ಟು ತೋರಿದಲ್ಲಿ, ಆ ವಸ್ತುವಂ ನೋಡಿ ನೋಡಿ, ತನ್ನ ಅಂತರಂಗದಲ್ಲಿರ್ಪ ಅಜ್ಞಾನವು ಹರಿದು, ಅಲ್ಲೊಂದು ಸೂಕ್ಷ್ಮದ್ವಾರವು ಕಾಣಿಸಲಲ್ಲಿ ಪ್ರವೇಶಿಸಲೆಸದಿರ್ಪ ಅನೇಕ ದುರ್ಗುಣಗಳಿಗಂಜದೆ ಆತ್ಮಾನಮಾತ್ಮನಾವೇತ್ತಿ ಎಂಬ ಶ್ರುತಿವಚನದಿಂ ತನ್ನಿಂದುತ್ಪನ್ನಮಾದ ಪಂಚಭೂತಗಳಲ್ಲಿ ತಾನೇ ಕಾರಣಭೂತಮಾಗಿ ಕೂಡಲು, ಆ ಗುಣಂಗಳು ಆತ್ಮಸ್ವರೂಪಮಾಗಿ, ಆತ್ಮನಿಂದಲೇ ಉಧ್ಭವಿಸಿ, ಆತ್ಮನಿಗೆ ಸುಖವನ್ನೂ ವಾಯುರೂಪಮಾದ ಜೀವನಿಗೆ ದುಃಖವನ್ನೂ ಉಂಟುಮಾಡುತ್ತಿರ್ಪವೆಂತೆಂದೊಡೆ: ಅರಸಿನಲ್ಲಿ ಹುಟ್ಟಿದ ಗ್ರಹವು ಅರಸಿಂಗೆ ಸುಖಮಂ ಪರರಿಗೆ ದುಃಖಮಂ ಮಾಡುವಂದದಿ, ಆಧಿಯಲ್ಲಾಕಾಶಾತ್ಮಸಂಗದಿಂ ಜ್ಞಾನವು ಹುಟ್ಟಿ, ಅದು ಅಭೇದಮಾಗಿರ್ಪ ಆಕಾಶಾತ್ಮಂಗಳಲ್ಲಿ ಇದಾಕಾಶವಿದಾತ್ಮವೆಂಬ ಭೇದಮಂ ಪುಟ್ಟಿಸಿ, ಜೀವರ ಸೃಷ್ಟಿ ಸ್ಥಿತಿ ಸಂಹಾರಂಗಳಿಗೆ ಕಾರಣಮಾಯಿತ್ತು. ಉಳಿದ ನಾಲ್ಕು ಭೂತಂಗಳಲ್ಲಂತಃಕರಣಚತುಷ್ಟಯಂಗಳು ಹುಟ್ಟಿ, ಅವೇ ನಾಲ್ಕುಮುಖಂಗಳಾಗಿ, ಜ್ಞಾನವು ಮಧ್ಯಮುಖಮಾಗಿ, ತದ್ಬಲದಿಂ ಅಹಂ ಬ್ರಹ್ಮವೆಂದಹಂಕರಿಸುತ್ತಿರ್ಪ ಬ್ರಹ್ಮನಂ ನೋಡಿ, ಆತ್ಮರೂಪಮಾದ ಶಿವನು ಭಾವಹಸ್ತದಲ್ಲಿ ಅಂತಃಕರಣಮಧ್ಯದಲ್ಲಿರ್ಪ ಜ್ಞಾನವೆಂಬ ಬ್ರಹ್ಮಕಪಾಲವಂ ಪರಿಗ್ರಹಿಸಲು, ಉಳಿದ ನಾಲ್ಕು ಶಿರಸ್ಸುಗಳಿಂ ಸೃಷ್ಟಿಕರ್ತನಾದ ಬ್ರಹ್ಮನು ಸಂಹಾರರೂಪಮಾದ ಜ್ಞಾನಮುಖದಲ್ಲಿ ಸಕಲ ಪದಾರ್ಥಗಳನ್ನು ಪರಿಗ್ರಹಿಸುತ್ತಿರ್ಪನು. ಅಂತಪ್ಪ ಆತ್ಮರೂಪಮಾದ ಶಿವನೊಳಗೆ ಆಕಾಶಮೆಂತೈಕ್ಯಮಪ್ಪುದೆಂದೊಂಡೆ : ಆಕಾಶವೂ ವಾಯುರೂಪು. ಭಸ್ತ್ರಿಯಲ್ಲಿ ಪ್ರವೇಶಿಸಿರ್ಪ ವಾಯುವಿನಿಂದ ಆಕಾಶಮಧಿಕಮಾಗಲು. ವಾಯುವಡಗಲಾಕಾಶವೂ ಕೂಡ ಅಡಗುವಂದದಿ, ಅಂತಪ್ಪ ವಾಯುವೇ ಜೀವನು, ಆ ಜೀವನಿಗವಸಾನಸ್ಥಾನವೇ ಆತ್ಮನು, ಆ ಆತ್ಮನಲ್ಲಿ ಕೂಡಿ ತನ್ನ ಮುನ್ನಿನ ವಾಯುರೂಪಮಳಿದಲ್ಲಿ ಅದಕಿಂತ ಮೊದಲೇ ಆಕಾಶವಳಿವುತ್ತಿರ್ಪುದು. ಅಂತಪ್ಪ ಆತ್ಮಸ್ವರೂಪವೆಂತೆಂದೊಂಡೆ : ಆತ್ಮವಂ ವಿಚಾರಿಸಿ ಆತ್ಮಸ್ವರೂಪವನರಿಸಿದ ಜೀವನು ತಾನಾತ್ಮನಾಗುತ್ತಿರಲು ಆತ್ಮಸ್ವರೂಪಮಿತೆಂದು ಮರಳಿಯೋರ್ವರೊಳುಸುರುವುದೆಂತಯ್ಯಾ! ಸತ್ತವನು ಬಂದು ತನ್ನ ವೃತ್ತಾಂತವಂ ಹೇಳಬಲ್ಲನೆ? ಉರಿಯೊಳ್ಕೂಡಿದ ಕರ್ಪುರವು ಉರಿಯಪ್ಪುದಲ್ಲದೆ ಕರ್ಪುರವಪ್ಪುದೆ? ಅಂತಪ್ಪ ಅಭೇದಾನಂದ ಪರಮಾತ್ಮಸಂಗದೊಳೇಕಮಾಗಿರ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಮಹದಾಕಾಶದ ಮನೆಯಲ್ಲಿ ಪಂಚಕಾಲಿನ ನೆಲಹು ಕಟ್ಟಿರಲಾಗಿ, ಅದಕ್ಕೆ, ಜಲತ್ಕಾರನೆಂಬ ಗಡಿಗೆ ಇದ್ದಿತ್ತು. ಅದರೊಳಗೆ ಮಧುರ ಮಾಂದಿರ ವಿಮಲ ಜಲತುಂಬಿ. ಒಂದಕ್ಕೊಂದು ಹೊದ್ದದೆ ಕುಂಭವೊಂದರಲ್ಲಿ ನಿಂದ ಭೇದವ ನೋಡಾ. ಆ ಗಡಿಗೆಯ ತೆಗೆವುದಕ್ಕೆ ಮಹದಾಕಾಶವನೇರುವುದಕ್ಕೆ ನೆಲೆಯಿಲ್ಲ. ನೆಲಹಿಂಗೆ ಮೊದಲಿಲ್ಲ, ಕುಂಭಕ್ಕಂಗವಿಲ್ಲ, ಒಳಗಳ ಭೇದವ ವಿವರಿಸಬಾರದು. ಇಂತೀ ಘಟಮಠ ಆಧಾರದಲ್ಲಿ ಪರಿಪೂರ್ಣನಾದೆಯಲ್ಲಾ, ಸದಾಶಿವಮೂರ್ತಿಲಿಂಗವೆ ಅವಿರಳನಾಗಿ.
--------------
ಅರಿವಿನ ಮಾರಿತಂದೆ
ಅದೃಷ್ಟಕರಣದ ಮೇಲಣ ಪೂರ್ವಾಶ್ರಯವ ಕಳೆದು ಗುರುವಿನ ಹಸ್ತ ಮುಟ್ಟಿತ್ತೆಂಬ ಸಂದಣಿಯಲ್ಲಿ ಹೋಗದು. ಪಂಚೇಂದ್ರಿಯ ಲಿಖಿತವ ತೊಡೆದು, ಲಿಂಗಲಿಖಿತವ ಬರೆವುದು ಶಿಷ್ಯನ ಕೈಯಲ್ಲಲ್ಲದೆ ಗುರುವಿನ ಕೈಯಲಾಗದು. ಭವಿ ಮಾಡುವ ಬೋನವ, ಭಕ್ತ ಕಾಣದ ಹಾಗೆ ಅರ್ಪಿಸುವ ಭೇದವರಿದು, ಪ್ರಸಾದದ ಪೂರ್ವಾಶ್ರಯವ ಕಳೆದು, ರೂಪಿಸಬಲ್ಲೆವೆಂದಡೆ ಹರಿಯದು. ಗುರುವಿಲ್ಲದ ಶಿಷ್ಯ ಶಿಷ್ಯನಿಲ್ಲದ ಗುರು_ ಇಂತೀ ಒಂದಕ್ಕೊಂದು ಇಲ್ಲದೆ ಗುಹೇಶ್ವರಲಿಂಗದಲ್ಲಿ ಸಹಜದುದಯವಾದ ನಮ್ಮ ಚನ್ನಬಸವಣ್ಣಂಗೆ ನಮೋ ನಮೋ ಎಂಬೆನು.
--------------
ಅಲ್ಲಮಪ್ರಭುದೇವರು
ಇಂತಪ್ಪಪ್ರಸಾದದ ಘನವನರಿಯದೆ ಸ್ಥಾವರಕ್ಕೆ ಕೊಟ್ಟ ದ್ರವ್ಯವು ಲಿಂಗಕ್ಕೆ ಸಲ್ಲದೆಂಬರು. ಅದೇನು ಕಾರಣವೆಂದಡೆ: ಸ್ಥಾವರವು ನಿಶ್ಶಬ್ದ, ಲಿಂಗವು ಮಂತ್ರಶಬ್ದ ಎಂಬರಯ್ಯಾ. ಎಲೆ ಮರುಳ ಮಾನವರಿರಾ, ಹದಿನೆಂಟು ಜೀನಸು ಧಾನ್ಯವು ಭೂಮಿಯಲ್ಲಿ ಬೆಳೆಯುವದು. ಆ ಭೂಮಿ ಸ್ಥಾವರವಲ್ಲವೆ? ಆ ಧಾನ್ಯವ ತಂದು ಕಲ್ಲವಳ್ಳಿಗೆ ಹಾಕಿ ಕುಟ್ಟಿ ಬೀಸಿ ಗಡಿಗೆಯೊಳಗೆ ಹಾಕಿ ಪಾಕವ ಮಾಡುವರು. ಆ ಕಲ್ಲು ಒಳ್ಳು ಗಡಿಗೆ ಸ್ಥಾವರವಲ್ಲವೆ? ಅಂತಪ್ಪ ಪಾಕವನು ಗಡಿಗೆಯೊಳಗೆ ಇದ್ದಾಗ ಬೋನವೆಂಬರು. ಹರಿವಾಣಕ್ಕೆ ಬಂದಲ್ಲಿ ನೈವೇದ್ಯವೆಂಬರು. ಜಂಗಮದ ಹಸ್ತಸ್ಪರ್ಶವಾದಾಗಲೇ ಪದಾರ್ಥದ ಪೂರ್ವಾಶ್ರಯವಳಿಯಿತೆಂಬರು. ಜಂಗಮವು ತನ್ನ ಲಿಂಗಕ್ಕೆ ತೋರಿ, ಸಲಿಸಿದ ಮೇಲೆ ಪ್ರಸಾದವಾಯಿತೆಂಬರು. ಇಂತಪ್ಪ ಪ್ರಸಾದಕ್ಕೆ 'ಅಯ್ಯಾ ಹಸಾದ ಮಹಾಪ್ರಸಾದ ಪಾಲಿಸಿರೆ'ಂದು ಕೂಳ ಚೆಲ್ಲಿದರೆ ಕಾಗಿ ನೆರೆದು ಒಂದಕ್ಕೊಂದು ಕಚ್ಚಿ ಕಡಿದಾಡುವಂತೆ, ಒಬ್ಬರಿಗೊಬ್ಬರು ನಾ ಮುಂದೆ ನೀ ಮುಂದೆಂದು ಅಡ್ಡಡ್ಡ ಬಿದ್ದು, ಆ ಜಂಗಮ ತಿಂದ ಎಂಜಲ ಪ್ರಸಾದವೆಂದು ಪಡಕೊಂಡು ತಮ್ಮ ತಮ್ಮ ಲಿಂಗಕ್ಕೆ ತೋರಿ ತೋರಿ ಆಧಾರಸ್ಥಾನ ಮೊದಲಾಗಿ ವಿಶುದ್ಧಿಸ್ಥಾನ ಪರಿಯಂತರ ತೊಗಲತಿತ್ತಿ ನೀರ ತುಂಬಿದಂತೆ ತುಂಬಿಕೊಂಡು, ಸತ್ತ ಮೊಲದಂತೆ ಕಣ್ಣ ಬಿಡುವಣ್ಣಗಳು ನಿಮ್ಮ ಶಿವಶರಣರ ಮಹಾಘನಪ್ರಸಾದವ ಈ ಕುರಿಮನುಜರೆತ್ತಬಲ್ಲರಯ್ಯ. ಅದೆಂತೆಂದಡೆ : ಲಿಂಗಕ್ಕೆ ಶಿವಕಳೆಯಿಲ್ಲ, ಭಕ್ತಂಗೆ ಗುರುಕಾರುಣ್ಯವಿಲ್ಲ, ಜಂಗಮಕ್ಕೆ ಪರಮಕಳೆಯಿಲ್ಲ. ಪ್ರಸಾದಕ್ಕೆ ಜಡರೂಪಿಲ್ಲದಾದಕಾರಣ ಹೀಗೆಂಬುದ ತಿಳಿಯದೆ ಮಾಡುವ ಮಾಟವೆಲ್ಲ, ನೀರೊಳಗೆ ಅಗ್ನಿಹೋಮವನಿಕ್ಕಿದಂತೆ ಆಯಿತು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸೃಷ್ಟಿಹೇತುವಾದ ಸಂಸಾರವೇ ಪೃಥ್ವಿಯು, ತದ್ರಕ್ಷಣಹೇತುವಾದುದೇ ಜಲವು, ಇವೆರಡನ್ನೂ ಸಂಬಂಧಿಸಿ, ಏಕಮಾಗಿ ಘನೀಭವಿಸುವಂತೆ ಮಾಡಿ, ತತ್ಸಂಹಾರಕ್ಕೆ ತಾನೇ ಕಾರಣಮಾಗಿರ್ಪ ಮನಸ್ಸೇ ಅಗ್ನಿಯು. ಆ ಮನಸ್ಸನ್ನು ಪ್ರಕಾಶಗೊಳಿಸಿ ಅದರೊಳಗೆ ಕೂಡಿ ಅಭೇದಮಾಗಿರ್ಪ ಜೀವನೇ ವಾಯುವು, ಅಗ್ನಿಯು ಪೃಥ್ವಿಯೊಳಗೆ ಬದ್ಧಮಾಗಿರ್ಪಂತೆ, ಮನವು ಸಂಸಾರಬದ್ಧಮಾಗಿರ್ಪುದು. ವಾಯುವು ಜಲದೊಳಗೆ ಬದ್ಧಮಾಗಿರ್ಪಂತೆ, ಜೀವನು ಶರೀರದಲ್ಲಿ ಬದ್ಧಮಾಗಿರ್ಪನು. ಜೀವನು ತಾನು ಸಂಸಾರದೊಳ್ಕೂಡಿ ಸ್ಥೂಲವಾಗಿಯೂ ಮನದೊಳ್ಕೊಡಿ ಸೂಕ್ಷ್ಮವಾಗಿಯೂ ಇರ್ಪನು. ಸಂಸಾರ ಶರೀರ ಮನೋಜೀವಗಳಿಗಾಧಾರಮಾಗಿರ್ಪ ಕರ್ಮವೇ ಆಕಾಶವು, ಆ ಕರ್ಮವನಾವರಿಸಿರ್ಪ ಮಹಾಮೋಹವೆಂಬ ಸುಷುಪ್ತಿಯ ಒಳಹೊರಗೆ ಪ್ರಕಾಶಿಸುತ್ತಿರ್ಪ ಜಾಗ್ರತ್ಸ್ವಪ್ನಜ್ಞಾನಂಗಳೇ ಚಂದ್ರಸೂರ್ಯರು. ಮನಸ್ಸೆಂಬ ಅಗ್ನಿಯು ಜೀವಾನಿಲನಿಂ ಪಟುವಾಗಿ ಸಂಸಾರಶರೀರಂಗಳಂ ಕೆಡಿಸಿ, ಕರ್ಮವೆಂಬಾಕಾಶದೊಳಗೆ ಜೀವಾನಿಲನಿಂ ಕೂಡಿ ಧೂಮರೂಪಮಾಗಿ ಶರೀರಸಂಸಾರಗಳೆಂಬ ಮೇಘÀಜಲವರ್ಷವಂ ನಿರ್ಮಿಸಿ, ಜೀವನಿಗವಕಾಶವಂ ಮಾಡಿಕೊಟ್ಟು, ತಾನಲ್ಲಿಯೇ ಬದ್ಧನಾಗಿ, ಜೀವನಿಂದ ಪ್ರಕಾಶಮಾಗುತ್ತಿರ್ಪುದು. ಇಂತಪ್ಪ ಕರ್ಮವೆಂಬಾಕಾಶಕ್ಕೆ ಜೀವನೆಂಬ ವಾಯುವೇ ಕಾರಣವು. ಇವು ಒಂದಕ್ಕೊಂದು ಕಾರಣಮಾಗಿ, ಒಂದಕ್ಕೊಂದು ಸೃಷ್ಟಿ ಸ್ಥಿತಿ ಸಂಹಾರಹೇತುಗಳಾಗಿ ತೋರುತ್ತಾ ಅಡಗುತ್ತಾ ಬಳಲುತ್ತಾ ತೊಳಲುತ್ತಿರ್ಪ ಭವರೋಗದಲ್ಲಿ ಜೂಗುತ್ತಿರ್ಪ ಬಂಧನದ ಈ ದಂದುಗವಿನ್ನೆಂದಿಗೆ ಪೋಪುದು ಎಂದು ಮುಂದುಗಾಣದೆ ಇರ್ಪೆನ್ನ ತಾಪವಂ ನೀಂ ದಯೆಯಿಂ ತಣ್ಣನೆ ಮಾಳ್ಪೊಡೆ, ಸತ್ಯಜ್ಞಾನಾನಂದಮೂರ್ತಿಯಾದ ಪರಮಾತ್ಮನೇ ಗುರು ಲಿಂಗ ಜಂಗಮ ಸ್ವರೂಪಿಯಾಗಿ, ಜ್ಞಾನದಿಂದ ನಿಜವೂ ನಿಜದಿಂದಾನಂದವೂ ಪ್ರಕಾಶಮಾಗಿರ್ಪಂತೆ, ಗುರುವಿನಿಂದ ಲಿಂಗವಂ ಲಿಂಗದಿಂದ ಜಂಗಮವಂ ಕಂಡೆನು. ಅಂತಪ್ಪಾ ನಿಜಾತ್ಮಲಿಂಗವನು ಕರ್ಮವೆಂಬ ಆಕಾಶದಲ್ಲಿ ಬೆರೆಸಲು, ಅದೇ ಕಾರಣಮಾಯಿತ್ತು. ಆ ಕರ್ಮವೆಂಬ ಶಕ್ತಿಯು ಲಿಂಗವೆಂಬ ಶಿವನೊಳಗೆ ಕೂಡಲು, ಲಿಂಗತೇಜಸ್ಸಿನಿಂ ಕರ್ಮಗರ್ಭದಲ್ಲಿ ಜೀವನಿಗೆ ಪುನರ್ಭವಮಾದುದರಿಂದ ಪ್ರಾಣಲಿಂಗಮಾಯಿತ್ತು. ಅದೆಂತೆಂದೊಡೆ : ಲಿಂಗವೆಂಬ ಮಹಾಲಿಂಗದಿಂ ಜನಿಸಿದ ಕರ್ಮವೇ ಪ್ರಸಾದಲಿಂಗವು, ಆ ಕರ್ಮದಿಂ ಜನಿಸಿದ ಜೀವನೇ ಜಂಗಮಲಿಂಗವು, ಅಂತಪ್ಪ ಲಿಂಗದಿಂದುಸಿದ ಮನಸ್ಸೇ ಶಿವಲಿಂಗವು, ಅಂತಪ್ಪ ಮನಸ್ಸಿನಿಂದ ಪರಿಶುದ್ಧಮಾಗಿರ್ಪ ಶರೀರವೇ ಗುರುಲಿಂಗವು. ಅಂತಪ್ಪ ಗುರುಲಿಂಗಮಾಗಿರ್ಪ ಶರೀರದಿಂದನುಭವಿಸುತ್ತಿರ್ಪ ಸಂಸಾರವೇ ಆಚಾರಲಿಂಗವು. ಇಂತು ಸಂಸಾರಶರೀರಂಗಳಿಗೆ ಇಷ್ಟಲಿಂಗವೇ ಕಾರಣವೂ ಮನೋಜೀವರಿಗೆ ಪ್ರಾಣಲಿಂಗವೇ ಕಾರಣವೂ ಆಗಿ, ಕರ್ಮಲಿಂಗಂಗಳಿಗೆ ಭಾವಲಿಂಗಂಗಳೇ ಕಾರಣಮಾಗಿ, ಕಾರಣವೇ ಐಕ್ಯಸ್ಥಾನವಾದುದರಿಂ ಸಂಸಾರ ಶರೀರಂಗಳು ಇಷ್ಟಲಿಂಗದೊಳಗೂ ಮನೋಜೀವಂಗಳು ಪ್ರಾಣಲಿಂಗದೊಳಗೂ ಐಕ್ಯವಂ ಹೊಂದಿದವು. ಕರ್ಮಲಿಂಗಗಳು ಭವಲಿಂಗದೊಳಗೈಕ್ಯಮಾಗಿ, ಪ್ರಾಣವು ಭಾವದೊಳಗೆ ಬೆರೆದು, ಭೇದವಡಗಿ ತಾನು ತಾನಾಗಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಮನಸ್ಸು ಏತರಿಂದ ಅರಿವುದು ಲಿಂಗವನು? ಬುದ್ಧಿ ಏತರಿಂದ ಅರಿವುದು ಮನಸ್ಸನು? ಚಿತ್ತ ಏತರಿಂದ ಅರಿವುದು ಬುದ್ಧಿಯ? ಅಹಂಕಾರ ಏತರಿಂದ ಅರಿವುದು ಚಿತ್ತವನು? ಈ ಚತುಷ್ಟಯವ ಏತರಿಂದ ಅರಿವೆ? ಒಂದಕ್ಕೊಂದು ಹಂದಿಲ್ಲದೆ ಕಾಣೆ. ಒಂದನೆಣಿಸಿ ಎಣಿಕೆಗೆ ತುಂಬಿದ ಮತ್ತೆ, ಮತ್ತೊಂದೆಂದಲ್ಲದೆ ಸಂಗವಿಲ್ಲ ಲೆಕ್ಕ. ಇದರಂದದ ತೆರ ಲಿಂಗ. ಇದ ಸಂಗಂಗೊಳಿಸು, ಭಂಗಿತನಾಗಲಾರೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಖಂಡಕಾಲಾತೀತಮಾದ ಮಹಾಲಿಂಗವೇ ಆದಿಶಕ್ತಿಯ ಸಂಗದಿಂ ಸೋಮನಾದುದರಿಂ ಆದಿತ್ಯನೇ ಶಕ್ತಿಯು, ಸೋಮನೇ ಶಿವನು. ಆದಿತ್ಯ ಸೋಮರಿಂದುದಯಿಸಿದ ಶನಿಯೇ ವಿಷ್ಣುವು, ಶುಕ್ರನೇ ಲಕ್ಷ್ಮಿಯು. ಆ ಶನಿ ಶುಕ್ರರಿಂದುದಿಸಿದ ಬೃಹಸ್ಪತಿಯೇ ಬ್ರಹ್ಮನು, ಅದಕೆ ಬುಧನೇ ಶಕ್ತಿ; ಆ ಬೃಹಸ್ಪತಿ ಬುಧರಿಂದುದಿಸಿದ ಪ್ರಪಂಚವೇ ಮಂಗಳ, ಸೋಮನೇ ಬ್ರಾಹ್ಮಣನು, ಅದಕೆ ಕ್ಷತ್ರಿಯ ಶಕ್ತಿ, ಶನಿಯೇ ಕ್ಷತ್ರಿಯನು, ಅದಕೆ ವೈಶ್ಯಶಕ್ತಿ; ಬೃಹಸ್ಪತಿಯೇ ವೈಶ್ಯನು, ಅದಕೆ ಬ್ರಾಹ್ಮಣಶಕ್ತಿ; ಅಂಗಾರಕನೇ ಶೂದ್ರನು, ಅದಕೆ ಆತ್ಮಶಕ್ತಿ. ಇಂತು ಕೃಷ್ಯಾದಿಕರ್ಮಂಗಳಿಗೆ ಕಾರಣಮಾಗಿಹ ಸೋಮನೇ ಸಪ್ತವಾರಂಗಳೊಳು ಅಂಶವಾದೊಡೆ, ಆದಿತ್ಯನಲ್ಲಿ ಶನಿರೂಪಮಾಗಿ ತಾನೇ ಜನಿಸುತ್ತಿಹನು. ಈ ಪ್ರಕಾರದಲ್ಲಿ ಸಪ್ತವಾರಂಗಳು ಒಂದಕ್ಕೊಂದು ಕಾರಣಮಾಗಿಹವು. ಸೋಮಾದಿತ್ಯ ಶನಿ ಶುಕ್ರಾಂಗಾರಕರು ಉಪಾಸನಾದಿ ಪೂಜಾಯೋಗ್ಯರಾಗಿಹರು. ಬೃಹಸ್ಪತಿ ಬುಧರು ಬ್ರಹ್ಮಸರಸ್ವತೀ ಸ್ವರೂಪಿಗಳಾದುದುರಿಂದ ಉಪಾಸನಾಕರ್ಮಯೋಗ್ಯರಲ್ಲದಿಹರು. ಪರಮಶಾಂತಿಮಯನಾದ ಶಿವನು ಉಗ್ರಸ್ವರೂಪವಾದ ಆದಿಶಕ್ತಿಯಂ ಕೂಡಿದುದರಿಂ ತಮೋಗುಣಸ್ವರೂಪಿಯಾಗಿಹನು, ಉಗ್ರಸ್ವರೂಪವಾದ ವಿಷ್ಣುವು ಶಾಂತಶುಕ್ಲಸ್ವರೂಪಮಾದ ಲಕ್ಷ್ಮಿಯೊಳಗೆ ಕೂಡಿದುದರಿಂ ಸತ್ವಗುಣಸ್ವರೂಪಿಯಾಗಿಹನು, ಹೀಗೆ ಈ ಈರ್ವರು ಸಂಸಾರಯುಕ್ತರಾಗಿರಲು, ಈ ಪ್ರಪಂಚದಲ್ಲಿ ಸಂಸಾರಬದ್ಧನಾದ ನಾನು ನಿಜವಾಸನೆಯಲ್ಲಿ ಸಂಚರಿಸಬಲ್ಲೆನೇನಯ್ಯಾ? ಮಿಥ್ಯೆಯಲ್ಲಿ ನನ್ನಂ ಕೂಡಿ ಸತ್ಯಪ್ರಕಟನವಂ ಮಾಡಲಿಲ್ಲೆಂದು ನನ್ನಂ ಸಾಧಿಸುವುದು ನಿನಗೆ ಯೋಗ್ಯವೇ? ನಿನ್ನಂತೆ ನನ್ನಂ ನೋಡದಿರ್ದೊಡೆ ಆತ್ಮವತ್ಸರ್ವಭೂತಾನಿ ಎಂಬ ಶ್ರುತ್ಯರ್ಥಕ್ಕೆ ಹಾನಿ ಬಾರದಿರ್ಪುದೆ? ಶ್ರುತಿಯಬದ್ಧದಲ್ಲಿ ಕರ್ಮಕ್ಕೆ ಹಾನಿಯಪ್ಪುದು, ಕರ್ಮನಾಶವೇ ಸಂಸಾರಕಾರಣವು. ಇದನರಿತು ನನ್ನ ಮಿಥ್ಯಾದುರ್ಗುಣಂಗಳಂ ವಿಚಾರಿಸಿದೆ ನನ್ನಂ ಪರಿಗ್ರಹಿಸಿ ಕೊಡಿದೊಡೆ, ನಿನ್ನ ಸರ್ವಜ್ಞತ್ವವು ಸಾರ್ಥಕಮಾಗಿ ನಿನ್ನ ಕ್ರೀಡೆಗೆ ಕೇಡುಬಾರದು ಕಂಡ್ಯಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಕೇವಲ ಸದ್ರೂಪಮಾದ ನಿಷ್ಕಳಶಿವತತ್ವವು ತನ್ನೊಳ್ತಾನೇ ಪ್ರಕಾಶಿಸುತ್ತಿರ್ಪುದರಿಂ ಪರಮಾತ್ಮನೆಂಬ ಸಂಜ್ಞೆಯಿಂ ತನ್ನ ನಿಜಮಹಾತ್ಮ್ಯ ಪ್ರಕಟನೆಗೋಸುಗ ತಾನೇ ಆತ್ಮನಾಗಿ, ಆತ್ಮನೇ ಆಕಾಶವಾಗಿ, ಆಕಾಶವೇ ವಾಯುವಾಗಿ, ವಾಯುವೇ ಅಗ್ನಿಯಾಗಿ, ಅಗ್ನಿಯೇ ಜಲಮಾಗಿ, ಆ ಜಲವೇ ಪೃಥ್ವೀರೂಪವಾಗಿ ಘÀಟ್ಟಿಕೊಂಡು ಆ ಪೃಥ್ವಿಗೆ ಜಲವೇ ಕಾರಣಮಾಗಿ, ಆ ಜಲಕಗ್ನಿಯೇ ಕಾರಣಮಾಗಿ, ಆ ಅಗ್ನಿಗೆ ವಾಯುವೇ ಕಾರಣಮಾಗಿ, ಆ ವಾಯುವಿಗೆ ಆಕಾಶವೇ ಕಾರಣಮಾಗಿ, ಆ ಆಕಾಶಕ್ಕಾತ್ಮನೇ ಕಾರಣಮಾಗಿ, ಆ ಆತ್ಮನಿಗೆ ಪರಮಾತ್ಮನೇ ಕಾರಣಮಾಗಿ, ಒಂದಕ್ಕೊಂದು ತಮ್ಮಲ್ಲಿಯೇ ತಾವು ಸೃಷ್ಟಿ ಸ್ಥಿತಿ ಸಂಹಾರಂಗಳಿಗೆ ಕಾರಣಮಾಗಿರ್ಪ, ಆತ್ಮಾದಿ ಷಡ್ಭೂತಂಗಳಿಗೆ ತಾನೇ ಚೈತನ್ಯ ಸ್ವರೂಪಮಾಗಿರ್ಪ ಪರಮನು ಆತ್ಮಸಂಗದಿಂ ಜೀವಕೋಟಿಗಳಂ ಸೃಷ್ಟಿಸಿ, ಕರ್ಮಕ್ಕೆ ಕಾರಣಮಂ ಮಾಡಿ ಕ್ರೀಡಿಸುತ್ತಿರ್ದನದೆಂತೆಂದೊಡೆ: ಜಲವು ತಾನೇ ಪೃಥ್ವೀಸ್ವರೂಪಮಾಗಿ ಬಲಿದು, ಆ ಪೃಥ್ವಿಯನ್ನೇ ತನಗಾಧಾರವಂ ಮಾಡಿಕೊಂಡು, ತಾನೇ ಪೃಥ್ವಿಗೆ ಆಧಾರಮಾಗಿ, ಪೃಥ್ವಿಯಂ ಪರಿವೇಷಿ*ಸಿರ್ಪ ಜಲವೇ ಪತಿಯಾಗಿ, ಪೃಥ್ವಿಯಲ್ಲಿ ಪರಿವ ಜಲವೇ ಸತಿಯಾಗಿರ್ಪ ಆ ಜಲಬಂಧದಿಂ ಕುಡ್ಯ ಸೌಧ ಗೃಹಾದಿ ನಾನಾಸ್ವರೂಪಂಗಳಾಗಿ ನಿಂತು, ತನ್ನಲ್ಲಿರ್ಪ ಜಲವಾರಿಹೋಗಲು, ಆ ಸೃಷ್ಟಿಶಕ್ತಿಯಿಂ ತಾಂ ಘಟ್ಟಿಕೊಂಡು, ಜೀವರಿಗೆ ಜಲಹಿಂಸೆಯಂ ನಿವಾರಣಮಾಡುತ್ತಾ, ಆ ಜಲದಿಂದಲ್ಲೇ ತಾನು ಲಯವನೈದುತ್ತಿರ್ದಂದದಿ, ಆ ಪರಮಾತ್ಮನೇ ಆತ್ಮನಂ ಸುತ್ತಿ, ಆತ್ಮನಲ್ಲೇ ಸುಳಿದು, ತಾನೇ ಶಿವಶಕ್ತಿಸ್ವರೂಪಮಾಗಿ, ತನ್ನಿಂದ ಬುದ್ಧಮಾಗಿರ್ಪ ಆತ್ಮಪದಾರ್ಥದಲ್ಲಿ ಜೀವಜಾಲಂಗಳಂ ಸೃಷ್ಟಿಸಿ, ಪೃಥ್ವಿಯಲ್ಲಿ ಬೆಳೆದ ಬೆಳೆಯನ್ನು ಗೃಹದಲ್ಲಿ ತುಂಬಿ, ಶರೀರದಿಂದ ಅನುಭವಿಸುವಂದದಿ ಆತ್ಮನಿಂದ ಬೆಳೆದ ಕರ್ಮದ ಬೆಳಸನ್ನು ಜೀವಂಗಳಲ್ಲಿ ತುಂಬಿ, ತದನುಭವಕ್ಕೆ ತಾನೇ ಕಾರಣಮಾಗಿ, ನಿಜಮಹಾತ್ಮ್ಯ ಪ್ರಕಟನಮಂ ಮಾಡಿಯಾಡುತಿರ್ಪಭವನೆ ನಿನ್ನ ಸಂಬಂಧಮಾಗಿರ್ಪುದಂ ಭಾವದಲ್ಲಿ ತಿಳಿದುನೋಡಿದಲ್ಲಿ, ಎಲ್ಲವೂ ನೀನಾಗಿರ್ಪೆಯಲ್ಲದೆ, ಪೆರೆತೊಂದುಂಟೇನಯಾ? ನಿನ್ನ ಕ್ರೀಡಾನಿಮಿತ್ತ ನಾನೆಂಬ ಬರಿಯ ಭ್ರನೆಯಂ ಸೃಷ್ಟಿಸಿ, ಕಷ್ಟಬಡಿಪುದೊಳ್ಳಿತ್ತೇನಯ್ಯಾ? ಅರಿತವನ ಮುಂದೆ ಇಂದ್ರಜಾಲವಂ ಮಾಡಲು ಪರಿಶೋಭಿಸಬಲ್ಲುದೆ? ನಿನ್ನ ಮಾಯೆಯೆನಗೆ ಮನೋರಥಮಾಗಬಲ್ಲುದೆ? ಬೇರ ಬಲ್ಲವಂಗೆ ಎಲೆಯಂ ತೋಋಹೋದರೆ, ಅಪಹಾಸ್ಯಕಾರಣಮಾಗಿಹುದು. ಇದನರಿತು ನನ್ನಂ ಕಾಡದಿರು ಕಂಡ್ಯಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಇಷ್ಟ ಕೈಯಲ್ಲಿ ಬಂದು ನಿಂದಿರೆ, ದೃಷ್ಟಿಯ ಭಾವ ಚಿತ್ತದ ಕೈಯಲ್ಲಿ ಕೂಡಿ, ಅರಿವು ಆತ್ಮನಲ್ಲಿ ಸ್ವಸ್ಥ ಕರಿಗೊಂಡು, ತನು ಅರಿವ ಮನಕ್ಕೂ ಅರುಹಿಸಿಕೊಂಬ ನೆರೆ ವಸ್ತುವಿಗೂ ಬೇರೊಂದೆಡೆಯಿಲ್ಲದೆ, ಅಂಗ ಮನ ಪ್ರಾಣ ಒಂದಕ್ಕೊಂದು ಹಿಂಗಲಾಗಿ, ನಿಜಸಂಗವನರಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗದಲ್ಲಿ.
--------------
ಸಗರದ ಬೊಮ್ಮಣ್ಣ
ಆಚಾರಲಿಂಗಕ್ಕೆ ಗುರುಲಿಂಗವೇ ಪ್ರಾಣ. ಗುರುಲಿಂಗಕ್ಕೆ ಶಿವಲಿಂಗವೇ ಪ್ರಾಣ. ಶಿವಲಿಂಗಕ್ಕೆ ಜಂಗಮಲಿಂಗವೇ ಪ್ರಾಣ. ಜಂಗಮಲಿಂಗಕ್ಕೆ ಪ್ರಸಾದಲಿಂಗವೇ ಪ್ರಾಣ. ಪ್ರಸಾದಲಿಂಗಕ್ಕೆ ಮಹಾಲಿಂಗವೇ ಪ್ರಾಣ. ಇಂತಿವು ಒಂದಕ್ಕೊಂದು ಪ್ರಾಣವಾಗಿಪ್ಪುದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->