ಅಥವಾ

ಒಟ್ಟು 11 ಕಡೆಗಳಲ್ಲಿ , 4 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದಕವೊಂದರಲ್ಲಿ ತಂದು, ವರ್ಣ ಭೇದಕ್ಕೆ ಹಲವಾದ ತೆರನಂತೆ, ಆತ್ಮ ನಾನೆಂಬುದ ಮರೆದು, ಸರ್ವರಲ್ಲಿ ಬೆರಸುವ ಚಿತ್ತ ಒಂದೋ, ಎರಡೋ ? ನೆಲಜಲ ಒಂದಾದಡೆ, ಬೆಳೆವ ವೃಕ್ಷ ಹಲವಾದ ತೆರದಂತೆ, ಅರಿವು ಮರವೆಗೊಳಗಾದ ಆತ್ಮನ ತಿಳಿದಲ್ಲಿ, ಬೇರೊಂದೆಡೆಗೆ ತೆರಪಿಲ್ಲ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಮೊದಲು ರೂಪಾದ ಬಿತ್ತು, ಭೂಮಿಯಲ್ಲಿ ಬಿತ್ತಿ, ಅದು ಬೀಜ ನಾಮ ನಿಂದು, ಸಸಿಯೆಂಬ ನಾಮವಾಯಿತ್ತು. ಸಸಿ ಬಲಿದು ಬೆಳೆದು, ಉಂಡಿಗೆಯ ಬೀಜವೆಂಬ ಉಭಯನಾಮವ ತಾಳಿದುದು. ಬೀಜ ಒಂದೋ, ಎರಡೋ ? ಎಂಬುದನರಿದಲ್ಲಿ, ಕ್ರೀ ಶೂನ್ಯವೆಂಬ ಉಭಯನಾಮವಡಗಿತ್ತು. ಐಘಟದೂರ ರಾಮೇಶ್ವರಲಿಂಗ[ದ] ಉಭಯನಾಮ ನಿಂದಿತ್ತು.
--------------
ಮೆರೆಮಿಂಡಯ್ಯ
ಶತಭಿನ್ನಪತ್ರದಲ್ಲಿ ತೋರುವ ಪ್ರಕಾಶ, ಒಂದೋ, ಹಲವೋ ಉಂಟೆಂಬುದ ತಿಳಿ. ಜಲಘಟದಲ್ಲಿ ತೋರುವ ಪ್ರತಿಬಿಂಬ, ಒಂದೋ, ಹಲವೋ ಉಂಟೆಂಬುದ ತಿಳಿ. ಮುಕುರದಲ್ಲಿ ಹಲವು ನೋಡಿದಡೆ, ನುಂಗಿದ ಮುಕುರ ಒಂದೋ, ಹಲವೋ ಉಂಟೆಂಬುದ ತಿಳಿ. ಅದರಂದವ ಬಲ್ಲಡೆ ಲಿಂಗದ ಸಂದ ಬಲ್ಲರೆಂಬೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಸರ್ವಘಟಂಗಳಲ್ಲಿ ಸುಖದುಃಖ ಅನುಭವಿಸುವ ಆ ಆತ್ಮ ಒಂದೋ, ಎರಡೋ? ಸರ್ವಯೋನಿಗಳಲ್ಲಿ ಕೂಡುವ ಶಿಶ್ನೆಯ ಸುಖ ಒಂದೋ, ಎರಡೋ ? ಆತ್ಮ ಒಂದೆಂದಡೆ ಘಟಭೇದಕ್ಕೆ ಭಿನ್ನವಾಗಿಪ್ಪುದು. ಆತ್ಮ ಹಲವೆಂದಡೆ ಚೇತನ ಸ್ವಭಾವ ಏಕವಾಗಿಪ್ಪುದು. ಆ ಘಟ ಆತ್ಮನ ಕೂಟ ಎಂತೆಯಿದ್ದಿತ್ತು ಅಂತೆ ಸುಖವಿದ್ದಿತ್ತು. ಯೋನಿಯ ಘಟ ಸಾಕಾರ ಎಂತೆಯಿದ್ದಿತ್ತು ಅಂತೆಯಿದ್ದಿತ್ತು ಶಿಶ್ನೆಯ ಯೋಗ. ಆತ್ಮನ ಘಟಸಂಗ ಜಾತಿಯ ಸುಜಾತಿಯ ಕೂಟಸ್ಥ ವಿಶ್ವಾಸದ ಭ್ರಾಂತಿಯ ಭ್ರಾಮಕಯೆಂತಿದ್ದಿತ್ತು ಅಂತೆಯಿದ್ದಿತ್ತು ಆತ್ಮ. ಇಂತೀ ಘಟದ ಸಾಕಾರವಡಗಿ ತೋರುವ ಆತ್ಮನ ಪರಿ. ಭಿನ್ನ ಇಂದ್ರಿಯಂಗಳ ಹಲವು ಸಂಚಿನ ಯೋನಿ. ಅದ ಸಂಧಿಸಿ ಕೂಡಿಹೆನೆಂಬ ಅರಿಕೆಯ ತೃಷ್ಣೆಯ ಶಿಶ್ನೆ ತಲಹಗೆಟ್ಟಲ್ಲಿ, ಭ್ರಾಂತಿನ ಭ್ರಮೆಯ ಸೂತಕ ಹೋಯಿತ್ತು, ಕಾಮಧೂಮ ಧೂಳೇಶ್ವರನ ತಾನು ತಾನಾದ ಕಾರಣ.
--------------
ಮಾದಾರ ಧೂಳಯ್ಯ
ಭಕ್ತನ ಭಕ್ತಿ, ಮಹೇಶ್ವರನ ಮಾಹೇಶ, ಪ್ರಸಾದಿಯ ಪ್ರಸಾದಿ, ಪ್ರಾಣಲಿಂಗಿಯ ಪ್ರಾಣಲಿಂಗಿ, ಶರಣನ ಶರಣ, ಐಕ್ಯನ ಐಕ್ಯವೆಂಬಲ್ಲಿ ದೃಷ್ಟವಾವುದು ಹೇಳಿರಣ್ಣಾ ? ಘಟ ಬಿದ್ದಲ್ಲಿ ಆತ್ಮನೆಲ್ಲಿ ಅಡಗಿತ್ತು ಎಂಬುದನರಿದಲ್ಲಿ, ಭಕ್ತನ ಭಕ್ತಸ್ಥಲ. ಕೆಚ್ಚಲ ಕೊಯಿದು ಹಿಕ್ಕಿದಲ್ಲಿ ಅಮೃತವಿಪ್ಪೆಡೆಯ ಬಲ್ಲಡೆ, ಮಹೇಶ್ವರನ ಮಾಹೇಶ್ವರಸ್ಥಲ. ಇಂಗಳ ಕೆಡಿಸಿ ನಂದಿದಲ್ಲಿ ಆ ವಹ್ನಿಯ ಅಂಗವೆಲ್ಲಿ ಅಡಗಿತ್ತು ಎಂಬುದನರಿದಲ್ಲಿ, ಪ್ರಸಾದಿಯ ಪ್ರಸಾದಿಸ್ಥಲ. ರತ್ನದ ಶಿಲೆ ಒಡೆದು ಪುಡಿಯಾದಲ್ಲಿ ರತಿಯೆಲ್ಲಿ ಅಡಗಿತ್ತು ಎಂಬುದನರಿದಲ್ಲಿ, ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ. ವಾಸನೆಯ ಕುಸುಮವ ಹೊಸೆದು ವಾಸನೆ ಹೋಗಿ, ಆ ಸುವಾಸನೆ ಅಡಗಿತ್ತೆಂಬುದನರಿದಲ್ಲಿ, ಶರಣನ ಶರಣಸ್ಥಲ. ಅನಲ ಆಹುತಿಗೊಂಡು ಬೇವಲ್ಲಿ ಆ ಭಾವವ ಭಾವಿಸಬಲ್ಲಡೆ, ಐಕ್ಯನ ಐಕ್ಯಸ್ಥಲ. ಇಂತೀ ಆರು ಸ್ಥಲದ ಭೇದವನರಿತು, ಮೂರು ಆರಾದ ಉಭಯವ ಕಂಡು, ಇಂತೀ ಆರರೊಳಗೆ ಆರಾದ ಭೇದವ ಭಾವಿಸಿ ತಿಳಿದು, ಮುಕುರದೊಳಗಣ ಬಿಂಬವ ಪ್ರತಿಬಿಂಬಿಸಿ ಕಾಬುದು, ಒಂದೋ, ಎರಡೋ ? ಎಂಬುದ ತಿಳಿದಲ್ಲಿ, ಸರ್ವಸ್ಥಲ ಸಂಪೂರ್ಣ. ಆತ ಸರ್ವಾಂಗಲಿಂಗಿ ಐಕ್ಯಾನುಭಾವಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಯುಕ್ತಿಯಿಂದ ಚಿತ್ರಾರ್ಥವ ಕಾಬ ಆತ್ಮನು ತನ್ನ ಹೆಚ್ಚುಗೆ ತಗ್ಗನರಿಯದೆ, ಮತ್ತತ್ವದಿಂದ ಕೆಲವನಾಡಿ, ಎಚ್ಚತ್ತಲ್ಲಿ ಚಿತ್ರವನಾಡುವುದು. ಅದು ಸಚ್ಚಿತ್ತ, ಒಂದೋ, ಎರಡೋ ? ಕೆಟ್ಟಲ್ಲಿ ಕೆಂಡವಾಗಿ, ಉರಿದಲ್ಲಿ ಬೆಂಕಿಯಾಗಿ, ಉಭಯಕ್ಕೆ ಬೇರೊಂದೊಡಲುಂಟೆ ? ಕಾಷ*ವುಳ್ಳನ್ನಕ್ಕ ಹೊತ್ತಿ, ಕಾಷ* ಹಿಂಗಿದ ಮತ್ತೆ ಹೊತ್ತಬಲ್ಲುದೆ ? ದೃಷ್ಟದ ಇಷ್ಟ ಚಿತ್ತದಲ್ಲಿ ಲೋಪವಾದ ಮತ್ತೆ, ಕಟ್ಟಿಬಿಟ್ಟೆನೆಂಬುದು ಇತ್ತಲೆ ಉಳಿಯಿತ್ತು, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ವಾದ್ಯವೊಂದರಲ್ಲಿ ಬಹುಸಂಚುಗಳ ಮುಟ್ಟಿ ತೋರುವುದು ಒಂದೋ, ಹಲವೋ ? ವೇಣು ಮುಹುರಿಗಳಲ್ಲಿ ಮೂವತ್ತೆರಡು ರಾಗಮಿಶ್ರಂಗಳ ಅರುವತ್ತುನಾಲ್ಕರಲ್ಲಿ ಕೂಡಿ ನುಡಿವುದು ಒಂದೋ, ಎರಡೋ ? ಅದರಂತೆ ಪರಿ ಭಿನ್ನವಾಗಿ, ಸ್ವಸ್ಥಾನಂಗಳಲ್ಲಿ ಮುಟ್ಟಿ, ವೇಧಿಸಿಕೊಂಬ ವಸ್ತು ಒಂದಾದಲ್ಲಿ, ಅದು ಖಂಡನೆಯ ಪತ್ರದ ಚಂಡಿಕಾ ಕಿರಣದಂತೆ. ಸಂಗವನರಿದಲ್ಲಿ, ನಿಃಕಳಂಕ ಮಲ್ಲಿಕಾರ್ಜುನಲಿಂಗ ಭಿನ್ನರೂಪನಲ್ಲ.
--------------
ಮೋಳಿಗೆ ಮಾರಯ್ಯ
-->