ಅಥವಾ

ಒಟ್ಟು 7 ಕಡೆಗಳಲ್ಲಿ , 5 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮತ್ರ್ಯಲೋಕದ ಕವಿಗಳೆಲ್ಲರೂ ಎನ್ನ ತೊತ್ತಿನ ಮಕ್ಕಳು. ದೇವಲೋಕದ ಕವಿಗಳೆಲ್ಲರೂ ಎನ್ನ ಕರುಣದ ಕಂದಗಳು ಹಿಂದೆ ಮುಂದೆ ಆಡುವ ಕವಿಗಳೆಲ್ಲರೂ ಲೆಂಕ ಡಿಂಗರಿಗರು ಹರಿ ಬ್ರಹ್ಮ ರುದ್ರ ಈ ಮೂವರೂ ಎನ್ನ ಕಕ್ಷೆಯ ಒಕ್ಕಲು ಗುಹೇಶ್ವರಾ ನೀ ಮಾವ ನಾನಳಿಯ.
--------------
ಅಲ್ಲಮಪ್ರಭುದೇವರು
ಅಯ್ಯಾ, ನಾನು ಊರ ಮರೆದು ಆಡ ಹೋದಡೆ, ಒಕ್ಕಲು ಹೆಚ್ಚಿ ಸೊಕ್ಕಾಟ ಘನವಾಯಿತ್ತು. ಇದ ಕಂಡು ಊರ ಹೊಕ್ಕೆ, ಸ್ಥಾನದಲ್ಲಿ ನಿಂದೆ, ಒಂಬತ್ತು ಬಾಗಿಲ ಕದವನಿಕ್ಕಿದೆ. ಆ ಜ್ಞಾನಾಗ್ನಿಯ ಹೊತ್ತಿಸಲು, ಉರಿ ಎದ್ದಿತ್ತು, ಉಷ್ಣ ಊರ್ದ್ವಕ್ಕೇರಿತ್ತು. ತಲೆಯೆತ್ತಿ ನೋಡಲು, ಒಕ್ಕಲು ಓಡಿತ್ತು, ಊರು ಬಯಲಾಯಿತ್ತು. ಆ ಬಯಲನೆ ನೋಡಿ, ನಿರಾಳದೊಳಗಾಡಿ ಮಹಾಬೆಳಗನೆ ಕೂಡಿ, ಸುಖಿಯಾದರಯ್ಯಾ ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಬಿಸಿಲ ಕಹರು ಮಂಜಿನ ಮುಂಡಿಗೆಯ ನೆಟ್ಟು ಮನೆ ಒಲೆಯದಂತೆ ಅನಲನ ತೊಲೆಯ ಹಾಕಿ ಮಳೆಯ ಗಳು ಬೀಸಿ, ಕೆಂಡದ ಹಂಜರಗಟ್ಟು ಕಟ್ಟಿ, ಹಿಂಡುಗಟ್ಟಿಗೆ ಗಳುವಿನ ಸಂದಿಯಲ್ಲಿ ಅಡಗಿತ್ತು. ಅನಿಲನ ಹುಲ್ಲು ಹೊದಿಸಿ ಮನೆ ಹೊಲಬಾಯಿತ್ತು. ನೆಲಗಟ್ಟು ಶುದ್ಧವಿಲ್ಲಾಯೆಂದು ಗೋರಕ್ಷಪಾಲಕ ಮಹಾಪ್ರಭು ಸಿದ್ಧಸೋಮನಾಥ ಲಿಂಗವು ಆ ಮನೆಗೆ ಒಕ್ಕಲು ಬಾರ.
--------------
ಗೋರಕ್ಷ / ಗೋರಖನಾಥ
ಸಹಸ್ರದಳ ಕಮಲವ ಸೂಸದೆ ಮೇಲುಕಟ್ಟು ಕಟ್ಟಿ, ಭಾಸುರವೆಂಬ ಹೃದಯದ ಸಿಂಹಾಸನವಿಕ್ಕಿ, ಲೇಸಾಗಿ ಗುರುಸ್ವಾಮಿಯ ಮೂರ್ತಮಾಡಿಸಿ, ನಾಲ್ಕೆಸಳ ಪದ್ಮವ ಸಮ್ಮಾರ್ಜನೆಯ ಮಾಡಿ, ಆರೆಸಳ ಪದ್ಮವ ರಂಗವಾಲೆಯ ತುಂಬಿ, ಹತ್ತೆಸಳ ಪದ್ಮವ ಕರಕಮಲವಂ ಮಾಡಿ, ನಿರ್ಭಾವವೆಂಬ ಅಗ್ಗವಣಿಯಲ್ಲಿ ಮಜ್ಜನಕ್ಕೆರೆದು, ಚಿದ್ಬೆಳಗೆಂಬ ಚಿದ್ವಿಭೂತಿಯ ಧರಿಸಿ, ಶಾಂತಿಯೆಂಬ ಗಂಧವ ಧರಿಸಿ, ಚಿತ್ತನಿರ್ಮಲವೆಂಬ ಅಕ್ಷತೆಯನರ್ಪಿಸಿ, ಹೃತ್ಕಮಲವೆಂಬ ಅರಳಿದ ಪುಷ್ಪವ ಧರಿಸಿ, ಸುಗಂಧವೆಂಬ ಧೂಪವ ಬೀಸಿ, ಕಂಗಳೆ ದೀಪ, ಕರ್ಣವೆ ಗಂಟೆ, ನಾಸಿಕವೆ ಆಲವಟ್ಟಲು, ಜಿಹ್ವೆಯ ತಾಳ, ಪಾದವೆ ಪಾತ್ರದವರು, ಹಸ್ತವೆ ಸೇವಕರು, ನಿಶ್ಚಿಂತವೆಂಬ ಅಕ್ಕಿಯ ತಂದು, ಪಶ್ಚಿಮವೆಂಬೊರಳಿಗೆ ನೀಡಿ, ಏಕೋಭಾವವೆಂಬೊನಕೆಯ ಪಿಡಿದು ತಳಿಸಿ, ಸುಬುದ್ಭಿಯೆಂಬ ಮೊರದಲ್ಲಿ ಕೇರಿ, ತ್ರಿಕೂಟವೆಂಬ ಒಲೆಯ ಹೂಡಿ, ಕರಣಂಗಳೆಂಬ ಸೌದೆಯನಿಟ್ಟು, ಜ್ಞಾನಾಗ್ನಿಯನುರುಹಲು, ಒಮ್ಮನವೆಂಬ ಕಂದಲಿಗೆ ಆನಂದ ಜಲವೆಂಬಗ್ಗಣಿಯನೆತ್ತಿ, ನಿಶ್ಚಿಂತವೆಂಬಕ್ಕಿಯ ನೀಡಿ, ಸುಮ್ಮಾನವೆಂಬ ಹುಟ್ಟಿನಲ್ಲಿ ಉಕ್ಕಿರಿದು, ಮನ ಬುದ್ಧಿಯೆಂಬ ಚಿಬ್ಬಲುಮರದಟ್ಟೆಯನಿಕ್ಕಿ, ಅಹಂಕಾರವೆಂಬ ಭಾಜನದಲ್ಲಿ ಬಾಗಿ, ಜ್ಞಾತೃ ಜ್ಞಾನ ಜ್ಞೇಯವೆಂಬ ಅಡ್ಡಣಿಗೆಯನಿರಿಸಿ, ಮನವೆಂಬ ಹರಿವಾಣದಲ್ಲಿ ಗಡಣಿಸಿ, ಆನಂದವೆಂಬಮೃತವನಾರೋಗಣೆಯ ಮಾಡಿ, ನಿತ್ಯವೆಂಬಗ್ಗವಣಿಯಲ್ಲಿ ಹಸ್ತಪ್ರಕ್ಷಾಲನವ ಮಾಡಿಸಿ, ಸತ್ವರಜತಮವೆಂಬ ವೀಳೆಯವ ಕೊಟ್ಟು, ಅಂತಃಕರಣಚತುಷ್ಟಯವೆಂಬ ನಾಲ್ಕು ಕಾಲು ಮಾಡಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಮಂಚವ ಹಾಸಿ, ನಾಸಿಕ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಎಂಬ ಸುಪ್ಪತ್ತಿಗೆಯನು ಹಚ್ಚಡಿಸಿ, ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬ ಒರಗು ಇಕ್ಕಿ, ತತ್ವ ಪರತತ್ವವೆಂಬ ಹಸ್ತಕ್ಕೆ ಮೆತ್ತೆಯನಿಕ್ಕಿ, ಸುತ್ತಣ ಪರಿಚಾರಕರು, ಆನೆ ಕುದುರೆ ಅರಸು ಮನ್ನೆಯ ಪ್ರಧಾನಿಗಳು ಎತ್ತ ಹೋದರೆಂದು ಅತ್ತಿತ್ತ ನೋಡುತ್ತಿರಲು, ಊರು ಬಯಲಾಯಿತ್ತು, ಒಕ್ಕಲು ಓಡಿತ್ತು, ಮಕ್ಕಳ ಗಲಭೆ ನಿಂದಿತ್ತು, ಮಾತಿನ ಮಥನವಡಗಿತ್ತು. ಉತ್ತರದಲ್ಲಿ ವಸ್ತುವ ಕಂಡು ಓಲಗಂಗೊಟ್ಟಿರಲು, ಓಲಗದಲ್ಲಿ ಲೋಲುಪ್ತವನೆಯ್ದಿ ಆವಲ್ಲಿ ಹೋದನೆಂದರಿಯೆನಯ್ಯಾ. ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅಯ್ಯಾ, ನಿಮ್ಮ ಶರಣರಲ್ಲದವರ ಮನೆ ಕೆಮ್ಮನೆ ಕಂಡಯ್ಯಾ. ನಿಮ್ಮ ಶರಣರ ಮನೆ ನೆರೆವನೆ ನೋಡಾ ಎನಗೆ. ಸಿರಿಯಾಳ ಮನೆಗಟ್ಟಿ ಬೇರೂರಿಗೆ ಒಕ್ಕಲು ಹೋದ. ದಾಸಿಮಯ್ಯ ಮನೆಗಟ್ಟಿ ವ್ಯವಹಾರನಾಗಿ ಹೋದ. ಸಿಂಧುಬಲ್ಲಾಳ ಮನೆಗಟ್ಟಿ ಕೈಕೂಲಿಕಾರನಾಗಿ ಹೋದ. ಗಂಗೆವಾಳುಕರು ಮನೆಗಟ್ಟಿ ಲಿಂಗದ ಹೊಲಬನರಿಯದೆ ಹೋದರು. ಇವರೆಲ್ಲರು ಮನೆಯ ಮಾಡಿ ಮಹದ್ವಸ್ತುವನರಿಯದೆ, ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಪದವಿಗೊಳಗಾದರು. ನಿಮ್ಮ ಸಂಗನಬಸವಣ್ಣ ಬಂದು ಕಲ್ಯಾಣದಲ್ಲಿ ಮನೆಯ ಕಟ್ಟಿದಡೆ, ಮತ್ರ್ಯಲೋಕವೆಲ್ಲವು ಭಕ್ತಿಸಾಮ್ರಾಜ್ಯವಾಯಿತ್ತು. ಆ ಮನೆಗೆ ತಲೆವಾಗಿ ಹೊಕ್ಕವರೆಲ್ಲರು ನಿಜಲಿಂಗ ಫಲವ ಪಡೆದರು. ಆ ಗೃಹವ ನೋಡಬೇಕೆಂದು ನಾನು ಹಲವು ಕಾಲ ತಪಸಿದ್ದೆನು. ಕಪಿಲಸಿದ್ಧಮಲ್ಲಿನಾಥಾ, ನಿಮ್ಮ ಶರಣ ಸಂಗನಬಸವಣ್ಣನ ಮಹಾಮನೆಗೆ ನಮೋ ನಮೋ ಎಂದು ಬದುಕಿದೆನು.
--------------
ಸಿದ್ಧರಾಮೇಶ್ವರ
ಚಿದ್ಘನಪ್ರಸಾದಕ್ಕಂಗವಾದ ಚಿನ್ಮಯ ಶರಣರ ಘನವನರಿಯದೆ, ನಾವು ಫಲಪದಕ್ಕೆಳಸದ ಸದಮಲ ದಾಸೋಹಿಗಳೆಂದು, ಮದನಾರಿಯ ವೇಷವ ಧರಿಸಿ, ಇತರ ಇಂಗಿತವನರಿಯದೆ ಹದುರ ಚೆದುರಿನಿಂದೆ ಮದಮಾನವರ ಹೃದಯಕರಗಿಸಿ, ಸಹಜ ನಿರೂಪಾಧಿಗಳುಳಿದು ದುರ್ವುಪಾಧಿಯೊಳು ನಿಂದು ಭಕ್ತ ಮಹೇಶ್ವರರುಗಳಿಗೆ ಮಾಡುವೆನೆಂದು ಭೂತಜನಕಿಕ್ಕಿ ಲೆಕ್ಕವ ಹೇಳಿ ಅಕ್ಕರೆಯಿಂದೆ ಮುಕ್ಕಣ್ಣನ ಪದವೆಮಗೆಂದು ಹೆಚ್ಚುಗೆವಡೆದು ಒಕ್ಕಲು ಸಹಿತ ಉದರ ಹೊರೆವ ಮುಕ್ಕ ಭಂಗಿತರಿಗಿಕ್ಕಿದ ಭಾವತೊಡರು ಸಹಜವೆಂದು ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರು ಗಹಗಹಿಸಿ ಮಿಕ್ಕಿ ನಿಂದರು.
--------------
ದೇಶಿಕೇಂದ್ರ ಸಂಗನಬಸವಯ್ಯ
-->