ಅಥವಾ

ಒಟ್ಟು 11 ಕಡೆಗಳಲ್ಲಿ , 10 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರ್ಜಾಲನ ಹೃದಯದಲ್ಲಿ ಮೂಷಕ ಮನೆಯ ಮಾಡಿ ಇದ್ದಿತ್ತು. ಅದಕ್ಕೆ ಮಣಿಮಾಡಂಗಳಿಂದ ಆಶ್ರಯವೊಂದು ಬಾಗಿಲು ಬೇರೆ. ಅದಕ್ಕೆ ಹೋಗಿ ಆಡುವ ನಾಟಕಸಾಲೆ. ಪವನನೆಂಬ ಸೂಳೆ ಅಘಟದಿಂದ ಆಡುತ್ತಿರಲಾಗಿ, ಕಾಲುಜಾರಿ ನೆಲಕ್ಕೆ ಬಿದ್ದಳು. ಬಿದ್ದ ಘಾತಕ್ಕೆ ಯೋನಿ ಒಡೆಯಿತ್ತು, ಮೊಲೆ ಹರಿದು, ಕಿವಿ ಕಿತ್ತು, ಕಣ್ಣು ಹಿಂಚುಮುಂಚಾಯಿತ್ತು. ನೋಡುವ ಅಣ್ಣಗಳ ಬಯಕೆ ಹರಿಯಿತ್ತು. ಯೋನಿ ಕಿತ್ತಲ್ಲಿ ಕೂಟಕ್ಕೆ ಸುಖವಿಲ್ಲ, ನೋಟಕ್ಕೆ ಬೆಂಬಳಿಯಿಲ್ಲ. ಪವನನ ಅಘಟ ಹೋಯಿತ್ತು, ಕಾಲನ ಕಮಟಕ್ಕೆ. ನೀ ಅಲೇಖನಾದ ಶೂನ್ಯ, ಇವರಾಟದ ಬೆಂಬಳಿಯ ಬಿಡಿಸು, ಕಲ್ಲಿನೊಳಗಿಂದ ಇತ್ತ ಬಾರಯ್ಯಾ.
--------------
ವಚನಭಂಡಾರಿ ಶಾಂತರಸ
ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು. ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು. ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು. ಇಂತಿವನೆಲ್ಲವನರಿವ ಚಿತ್ತ ದೇವರಲ್ಲ. ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು. ಇಂತಿವ ಕಳೆದುಳಿದ ವಸ್ತುವಿಪ್ಪೆಡೆ ಯಾವುದೆಂದಡೆ : ಕಂಡವರೊಳಗೆ ಕೈಕೊಂಡಾಡದೆ, ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ, ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ, ಮತ್ತೊಂದು ಪೆರತನರಿಯದೆ ನಿಂದಾತನೆ ಸರ್ವಾಂಗಲಿಂಗಿ, ವೀರಬೀರೇಶ್ವರಲಿಂಗದೊಳಗಾದ ಶರಣ.
--------------
ವೀರ ಗೊಲ್ಲಾಳ/ಕಾಟಕೋಟ
ತೃಣ ಮುನಿದು ತ್ರಿಣಯನ ಹೆಡಗುಡಿಯ ಕಟ್ಟುವಾಗ, ಹಣೆಯ ಬೆಂಕಿ ಎಲ್ಲಿ ಅಡಗಿತ್ತೆಂದರಿಯೆ, ಕಡುಗಲಿಗಳೆಲ್ಲರೂ ಉಡುವಿನ ಕೈಯಲ್ಲಿ ಸಾವಾಗ, ಉಡಿಯ ಕೈದು ಎಲ್ಲಿ ಉಡುಗಿದವೆಂದರಿಯೆ. ಒಕ್ಕುಡಿತೆಯಲ್ಲಿ ಅಡಗಿತ್ತು ಸಮುದ್ರ, ಕೆರೆ ತುಂಬಿ ತೊರೆ ಒಡೆಯಿತ್ತು ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಭೂಮಿಯಿಲ್ಲದ ಧರೆಯಲ್ಲಿ, ಒಂದು ಮಹಾಮೇರುವೆಯ ಬೆಟ್ಟ ಹುಟ್ಟಿತ್ತು. ಅದರ ತಳ ಒಂದಂಡ, ಮೇಲೆ ಮೂರಂಡ ಮೂರರ ಮೇಲೆ ಹಾರಿಬಂದಿತ್ತು ಕಾಗೆ. ಬಂದ ಕಾಗೆ ತುದಿಯಲ್ಲಿ ಅಂತರಿಸಲಾಗಿ, ಮೇರುವೆ ಕುಸಿಯಿತ್ತು. ಕೆಳಗಣ ಅಂಡ ನಿಂದು, ಮೇಲಣ ಮೇರುವೆ ಒಡೆಯಿತ್ತು. ಮೂರಂಡವನೊಡಗೂಡಿದ ಕಾಗೆ ಹಾರಿತ್ತು , ಬೆಟ್ಟ ಬಟ್ಟಬಯಲು ಬೊಮ್ಮನೊಡೆಯ ತನುಮನ ಸಂಗಮೇಶ್ವರಲ್ಲಿ ಒಡಗೂಡಿದವಂಗೆ.
--------------
ಸಗರದ ಬೊಮ್ಮಣ್ಣ
ಗುಡಿಯೊಡೆಯಂಗೆ ಕಂಬವೊಂದು, ಬಿಗಿಮೊಳೆಯೆಂಟು, ಕಂಬಕ್ಕೆ ಕಟ್ಟಿದ ಆಧಾರ ದಾರವೈದು, ಗುಡಿಯ ಸಂದು ಹದಿನಾರು. ಕೂಟದ ಸಂಪಿನ ಪಟ್ಟಿ ಇಪ್ಪತ್ತೈದು, ಒಂಬತ್ತು ಬಾಗಿಲು, ಮುಗಿಯಿತ್ತು ಗುಡಿ. ಗುಡಿಯ ಮೇಲೆ ಮೂರು ಕಳಸ, ಮೂರಕ್ಕೊಂದೆ ರತ್ನದ ಕುಡಿವೆಳಗು. ಬೆಳಗಿದ ಪ್ರಜ್ವಲಿತದಿಂದ ಗುಡಿ ಒಡೆಯಿತ್ತು. ಗುಡಿಯೊಳಗಾದವೆಲ್ಲವು ಅಲ್ಲಿಯೆ ಅಡಗಿತ್ತು. ಕಳಸದ ಕಳೆ ಹಿಂಗಿತ್ತು, ಮಾಣಿಕದ ಬೆಳಗಿನಲ್ಲಿ. ಆ ಬೆಳಗಡಗಿತ್ತು, ಅಗಮ್ಯೇಶ್ವರಲಿಂಗದಲ್ಲಿ ಒಡಗೂಡಿತ್ತು.
--------------
ಮನುಮುನಿ ಗುಮ್ಮಟದೇವ
ಆಡಿನ ತತ್ತಿಯೊಳಗೊಂದು ಹೇರಡವಿಯಿದ್ದಿತ್ತು. ಆ ಹೇರಡವಿಯೊಳಗೆ ಮೇರುವಿದ್ದಿತ್ತು. ಆ ಮೇರುವಿನ ಒಡಲಲ್ಲಿ ಚತುರ್ದಶಭುವನ ಸಚರಾಚರಂಗಳೆಲ್ಲಾ ಇದ್ದಿತ್ತು. ತತ್ತಿ ಒಡೆಯಿತ್ತು ಅಡವಿ ಅಡಗಿತ್ತು. ಸೌರಾಷ್ಟ್ರ ಸೋಮೇಶ್ವರಲಿಂಗವಿಲ್ಲದಂತಿದ್ದಿತ್ತು.
--------------
ಆದಯ್ಯ
ಊರೊಳಗಣ ಸೂಳೆಯ ಕರೆದು ಮೂವರಿಗೆ ಒತ್ತೆಯ ಕೊಡುವುದು ಕಂಡೆನಯ್ಯ. ಬೇರೆ ನಾಲ್ವರು ಬೇರೆ ಹುಯ್ಯಲು ಹೋಗುವರು ನೋಡಾ. ಮೇಲಿಂದ ಒಬ್ಬ ಸತಿಯಳು ಐವರ ಹಿಡಿದು ನೋಡಲು ಒತ್ತೆಯ ಕೊಟ್ಟ ಸೂಳೆಯ ಮನೆ ಒಡೆಯಿತ್ತು ನೋಡಾ ! ಬೇರೆ ನಾಲ್ವರು ಬೇರೆ ಮಡಿದರು ನೋಡಾ ! ಐವರ ಹೆಜ್ಜೆವಿಡಿದು ನೋಡಲು ಆ ಹೆಜ್ಜೆಯೇ ಮಂಗಳ ಉದಯವೆಂಬ ಲಿಂಗದಲ್ಲಿ ಅಡಗಿಪ್ಪವಯ್ಯ. ಆ ಸತಿಯಳ ಅಂಗವ ಕೂಡಿ ನಿರಂಜನವಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೆಟ್ಟ ಬೆಂದಿತ್ತು, ಬಿದಿರುಗಣ್ಣ ಒಡೆಯಿತ್ತು ಸುತ್ತ ನೋಡಿದಡೆ ನಿರಾಳವಾಯಿತ್ತು ಕತ್ತಲೆ ಹರಿಯಿತ್ತು ಮನ ಬತ್ತಲೆಯಾಯಿತ್ತು ಚಿತ್ತ ಮನ ಬುದ್ಧಿ ಏಕವಾದವು. ಎಚ್ಚತ್ತು ನೋಡಿದಡೆ, ಬಚ್ಚಬರಿಯ ಬೆಳಗಲ್ಲದೆ ಕತ್ತಲೆಯ ಕಾಣಬಾರದು ಕಾಣಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಜೇನುತುಪ್ಪವ ಹೊತ್ತು ಮಾರುವವಳ ಮಡಕೆಯ ಮೇಲೆ ಮೂರು ತುಂಬಿ ಕುಳಿತೈಧಾವೆ. ಒಂದು ತುಂಬಿ ಇದ್ದಿತ್ತು, ಒಂದು ತುಂಬಿ ಹಾರಿತ್ತು, ಒಂದು ತುಂಬಿ ಸತ್ತಿತ್ತು. ಮೂರು ತುಂಬಿ ಅಂದವ ಕಂಡುದಿಲ್ಲ. ಮಡಕೆ ಒಡೆಯಿತ್ತು, ತುಪ್ಪವೊಕ್ಕಿತ್ತು, ಹೊತ್ತವ[ಳು] ಸತ್ತ[ಳು]. ಇದೇನು ಕೃತ್ರಿಮವೆಂದು ಕೇಳುವ ಬನ್ನಿ, ಸದಾಶಿವಮೂರ್ತಿಲಿಂಗವ.
--------------
ಅರಿವಿನ ಮಾರಿತಂದೆ
ನೀರು ನೇಣು ಭೂಮಿಯ ತಡಿಯ ಕುಂಭ ಮುಂತಾಗಿ ಬಂದಲ್ಲದೆ, ಪಾತಾಳ ಜಲವೆಯ್ದದು ಧರೆಗೆ. ಭಕ್ತಿ ಜ್ಞಾನ ವೈರಾಗ್ಯಂಗಳೆಂಬವು, ಒತ್ತಿ ಬೆಳೆದ ಶರೀರದ ಪೃಥ್ವಿಯ ಪಙÂ್ತಯಲ್ಲಿ ಹೊಯ್ದ ಉದಕ ಸಾರಾಯವಾಯಿತ್ತು. ಸಸಿಗೆ ಸಸಿ ಬೆಳೆದು, ಕೊಯ್ದು ಒಕ್ಕಿ ಒಯ್ದ ಮತ್ತೆ ಬಾವಿ ಬಿದ್ದಿತ್ತು, ನೇಣು ಹರಿಯಿತ್ತು, ಕುಂಭ ಒಡೆಯಿತ್ತು, ಭೂಮಿ ಹಾಳಾಯಿತ್ತು, ಅಳೆವವ ಸತ್ತ. ಆ ಬತ್ತ ಸಿಕ್ಕಿತ್ತು ಅರಮನೆಯಲ್ಲಿ. ಸಿಕ್ಕಿದ ಬತ್ತವನುಂಡು ಮತ್ತರಾದರು, ಮತ್ರ್ಯದವರೆಲ್ಲರೂ ತುತ್ತ ನುಂಗಿದರು. ಇತ್ತಲಿದ್ದು ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಂಜಿನ ಧರೆಯಲ್ಲಿ ಬಿಸಿಲ ಬೀಜ ಬಿದ್ದು, ಮರೀಚಕದ ಮಳೆ ಹೊಯ್ಯಿತ್ತು. ಬೇರು ಬೀಳದೆ ಮೊಳೆ ಒಡೆಯಿತ್ತು. ಎಲೆದೋರುವುದಕ್ಕೆ ಮೊದಲೆ, ತಲೆಯಿಲ್ಲದ ಎರಳೆ ಬಂದು ಮೇವುತ್ತಿರಲಾಗಿ, ಅಂಜನಸಿದ್ಧ ಬಂದು ನೋಡುತ್ತಿರ್ದ, ಅದು ನಿರಂಗವಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->