ಅಥವಾ

ಒಟ್ಟು 7 ಕಡೆಗಳಲ್ಲಿ , 5 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತನೆಂಬ ಭೂಮಿಯಲ್ಲಿ ಗುರೂಪದೇಶವೆಂಬ ನೇಗಲಿಯಂ ಪಿಡಿದು, ಅಂತಃಕರಣ ಚತುಷ್ಟಯವೆಂಬ ಸೆಳೆಗೋಲಂ ಪಿಡಿದು, ಉತ್ತರ ಕ್ರಿಯೆಯೆಂಬ ಹಂಸನೇರಿ, ದುಷ್ಕರ್ಮದ ಕಾಟದ ಕುಲವಂ ಕಡಿದು, ಅರಿವೆಂಬ ರವಿಕಿರಣದಲ್ಲಿ ಒಣಗಿಸಿ, ಜ್ಞಾನವೆಂಬ ಬೆಂಕಿಯಲ್ಲಿ ಸುಟ್ಟುರುಹಿ, ಆ ಹೊಲನ ಹಸನವ ಮಾಡಿ, ಅದಕ್ಕೆ ಬಿತ್ತುವ ಭೇದವೆಂತೆಂದಡೆ: ಈಡಾ ಪಿಂಗಳ ಸುಷುಮ್ನವೆಂಬ ನಾಳವಂ ಜೋಡಿಸಿ, ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು, ಕುಂಡಲಿಯೆಂಬ ಹಗ್ಗವಂ ಬಿಗಿದು, ಹಂಸನೆಂಬ ಎರಡೆತ್ತನ್ನೇ ಹೂಡಿ, ಶಾಂತಿ ನಿರ್ಮಲವೆಂಬ ಮಳೆಗಾಲದ ಮೇಘಮಂ ಸುರಿದು, ಆ ಬೀಜ ಪಸರಿಸಿ, ಪ್ರಜ್ವಲಿಸಿ ಫಲಕ್ಕೆ ಬಂದು ನಿಂತಿರಲು, ಅದಕ್ಕೆ ಒತ್ತುವ ಕಸ ಆವಾವೆಂದಡೆ : ಅಷ್ಟಮದದ ಹಲವಂ ಕಿತ್ತು, ಸಪ್ತವ್ಯಸನದ ಸೆದೆಯಂ ಕಳೆದು, ಮನೋರಥವೆಂಬ ಮಂಚಿಗೆಯನ್ನೇರಿ, ಬಾಲಚಂದ್ರನೆಂಬ ಕವಣಿಯಂ ಪಿಡಿದು, ಪ್ರಪಂಚವೆಂಬ ಹಕ್ಕಿಯಂ ಹೊಡೆದು, ಆ ಭತ್ತ ಬಲಿದು ನಿಂದಿರಲು, ಅದನ್ನು ಕೊಯ್ಯುವ ಭೇದವೆಂತೆಂದಡೆ : ಇಷ್ಟವೆಂಬ ಕುಡುಗೋಲಿಗೆ, ಪ್ರಾಣವೆಂಬ ಹಿಡಿಯ ಜೋಡಿಸಿ, ಭವಭವವೆಂಬ ಹಸ್ತದಿಂದ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವಡಂ ಕಟ್ಟಿ, ಸುಜ್ಞಾನಪಥವೆಂಬ ಬಂಡಿಯ ಹೇರಿ, ಮುಕ್ತಿ ಕೋಟಾರಕ್ಕೆ ತಂದು, ಉನ್ನತವೆಂಬ ತೆನೆಯಂ ತರಿದು, ಷಡುವರ್ಣವೆಂಬ ಬೇಗಾರರಂ ಕಳೆದು, ಅಂಗಜನೆಂಬ ಕಾಮನಂ ಕಣ್ಕಟ್ಟಿ, ಮಂಗಲನೆಂಬ ಕಣದಲ್ಲಿ ಯಮರಾಜನಿಗೆ ಕೋರ ಹಾಕದೆ, ಚಿತ್ರಗುಪ್ತರ ಸಂಪುಟಕ್ಕೆ ಬರಿಸದೆ, ಈ ಶಂಕರನೆಂಬ ಸವಿಧಾನ್ಯವನುಂಡು, ಸುಖಿಯಾಗಿರುತಿರ್ಪ ಒಕ್ಕಲಮಗನ ಎನಗೊಮ್ಮೆ ತೋರು ತೋರಯ್ಯಾ, ಅಮರಗುಂಡದ ಮಲ್ಲಿಕಾರ್ಜುನ ಪ್ರಭುವೆ.
--------------
ಪುರದ ನಾಗಣ್ಣ
ಒಣಗಿಸಿ ಎನ್ನ ಘಣಘಣಲನೆ ಮಾಡಿದಡೆಯೂ, ಹರಣವುಳ್ಳನ್ನಕ್ಕ ನಿಮ್ಮ ಚರಣದ ನೆನೆವುದ ಮಾಣೆ, ಮಾಣೆ. ಶರಣೆಂಬುದ ಮಾಣೆ, ಮಾಣೆ. ಕೂಡಲಸಂಗಮದೇವಯ್ಯಾ, ಎನ್ನ ಹೆಣನ ಮೇಲೆ ಕಂಚಿಟ್ಟುಂಡಡೆಯೂ ಮಾಣೆ, ಮಾಣೆ.
--------------
ಬಸವಣ್ಣ
ಭಕ್ತಿಯೆಂಬ ಪೃಥ್ವಿಯಲ್ಲಿ ಗುರೂಪದೇಶವೆಂಬ ನೇಗಿಲಂ ಪಿಡಿದು, ಅಂತಃಕರಣ ಚತುಷ್ಟಯವೆಂಬ ಪಶುವಂ ಕಟ್ಟಿ ಓಂಕಾರನಾದವೆಂಬ ಸೆಳೆಕೋಲಂ ಪಿಡಿದು ಉತ್ತರ ಕ್ರೀಯೆಂಬ ಸಾಲನೆತ್ತಿ ದುಃಕರ್ಮವೆಂಬ ಕಂಟಕದ ಗುಲ್ಮವಂ ಕಡಿದು ಅರುಹೆಂಬ ರವಿಯ ಕಿರಣದಿಂದ ಒಣಗಿಸಿ ಅವಂ ಕೂಡಲೊಟ್ಟಿ, ಜ್ಞಾನಾಗ್ನಿಯೆಂಬ ಅಗ್ನಿಯಿಂದ ಸುಟ್ಟುರುಹಿ ಆ ಹೊಲನಂ ಹಸಮಾಡಿ, ಬಿತ್ತುವ ಪರಿ ಇನ್ನಾವುದಯ್ಯಾ ಎಂದಡೆ: ನಾದ. ಬಿಂದು, ಕಳೆ, ಮಳೆಗಾಲದ ಹದಬೆದೆಯನರಿದು ಸ್ಥೂಲವೆಂಬ ದಿಂಡಿಗೆ ತ್ರಿದೇವರೆಂಬ ತಾಳ ನಟ್ಟು ಇಡಾಪಿಂಗಳ ಸುಷುಮ್ನಾನಾಳವೆಂಬ ಕೋವಿಗಳ ಜೋಡಿಸಿ, ಮೇಲೆ ತ್ರಿಕೂಟಸ್ಥಾನವೆಂಬ ಬಟ್ಟಲಂ ಬಲಿದು, ಕುಂಡಲೀಸರ್ಪನೆಂಬ ಹಗ್ಗವ ಸೇದಿ ಕಟ್ಟಿ, ಹಂಸನೆಂಬ ಎತ್ತಂ ಹೂಡಿ, ಪ್ರಣವನೆಂಬ ಬೀಜವ ಪಶ್ಚಿಮ ಮುಖಕ್ಕೆ ಬಿತ್ತಿ, ಸರ್ವಶಾಂತಿ ನಿರ್ಮಲವೆಂಬ ಮೇಘ ಸುರಿಯಲ್ಕೆ ನೀಲಬ್ರಹ್ಮವೆಂಬ ಸಸಿ ಹುಟ್ಟಿತ್ತ. ಆ ಸಸಿಯ ಮುಟ್ಟುವ ಸಪ್ತವರ್ಣದ ಸದೆಯ ಕಳೆದು ಅಷ್ಟವರ್ಣದ ಅಲಬಂ ಕಿತ್ತು, ದಶವಾಯುವೆಂಬ ಕಸಮಂ ತೆಗೆದು, ಆ ಸಸಿ ಪಸರಿಸಿ ಪ್ರಜ್ವಲಿಸಿ ಫಲಕ್ಕೆ ಬರಲಾಗಿ ಚತುರ್ವಿಧವೆಂಬ ಮಂಚಿಗೆಯಂ ಮೆಟ್ಟಿ ಬಾಲಚಂದ್ರನೆಂಬ ಕವಣೆಯಂ ಪಿಡಿದು ಪ್ರಪಂಚುವೆಂಬ ಹಕ್ಕಿಯಂ ಸೋವಿ ಆ ಬತ್ತ ಬಲಿದು ನಿಂದಿರಲು, ಕೊಯ್ದುಂಬ ಪರಿ ಇನ್ನಾವುದಯ್ಯಾ ಎಂದಡೆ: ಇಷ್ಟವೆಂಬ ಕುಡುಗೋಲಿಗೆ ಪ್ರಣವವೆಂಬ ಹಿಡಿಯಂ ತೊಡಿಸಿ, ಭಾವವೆಂಬ ಹಸ್ತದಿಂ ಪಿಡಿದು, ಜನನದ ನಿಲವಂ ಕೊಯ್ದು, ಮರಣದ ಸಿವುಡ ಕಟ್ಟಿ, ಆಕಾಶವೆಂಬ ಬಣವೆಯನೊಟ್ಟಿ ಉನ್ಮನಿಯೆಂಬ ತೆನೆಯನ್ನರಿದು, ಮನೋರಥವೆಂಬ ಬಂಡಿಯಲ್ಲಿ ಹೇರಿ, ಮುಕ್ತಿಯೆಂಬ ಕೋಟಾರಕ್ಕೆ ತಂದು, ಅಷ್ಟಾಂಗಯೋಗವೆಂಬ ಜೀವಧನದಿಂದೊಕ್ಕಿ, ತಾಪತ್ರಯದ ಮೆಟ್ಟನೇರಿ, ಪಾಪದ ಹೊಟ್ಟ ತೂರಿ, ಪುಣ್ಯದ ಬೀಜಮಂ [ತ]ಳೆದು ಷಡುವರ್ಗ ಷಡೂರ್ಮೆಯೆಂಬ ಬೇಗಾರಮಂ ಕಳೆದು ಅಂಗಜಾಲನ ಕಣ್ಣ[ಮು]ಚ್ಚಿ, ಚಿತ್ರಗುಪ್ತರೆಂಬ ಕರಣಿಕರ ಸಂಪುಟಕೆ ಬರಿಸದೆ ಯಮರಾಜನೆಂಬರಸಿಗೆ ಕೋರನಿಕ್ಕದೆ ಸುಖ ಶಂಕರೋತಿ ಶಂಕರೋತಿ ಎಂಬ ಸಯಿದಾನವನುಂಡು ಸುಖಿಯಾಗಿಪ್ಪ ಒಕ್ಕಲಮಗನ ತೋರಿ ಬದುಕಿಸಯ್ಯಾ, ಕಾಮಭೀಮ ಜೀವಧನದೊಡೆಯ ಪ್ರಭುವೆ ನಿಮ್ಮ ಧರ್ಮ, ನಿಮ್ಮ ಧರ್ಮ..
--------------
ಒಕ್ಕಲಿಗ ಮುದ್ದಣ್ಣ
ಇಂತಪ್ಪ ಶ್ರೀವಿಭೂತಿಯ ಧರಿಸಲರಿಯದೆ ಶ್ವೇತ, ಪೀತ, ಕಪೋತ, ಮಾಂಜಿಷ್ಟ, ಮಾಣಿಕ್ಯವೆಂಬ ಪಂಚವರ್ಣದ ಗೋವಿಗೆ ಭೂಮಿಯ ಸಾರಿಸಿ ಆ ಭೂಮಿಯಲ್ಲಿ ಪಂಚಗೋವುಗಳ ಕಟ್ಟಿ, ಪೂಜೋಪಚಾರ ಮಾಡಿ, ಮಂತ್ರದಿಂದ ಅನ್ನ ಉದಕವ ಹಾಕಿ, ಆ ಗೋವಿನ ಸಗಣಿ ಭೂಮಿಗೆ ಬೀಳದೆ ಅಂತರದಲ್ಲಿಯೇ ಪಿಡಿದು, ಕುಳ್ಳು ಮಾಡಿ ಬಿಸಿಲಿಲ್ಲದೆ ನೆರಳಲ್ಲಿ ಒಣಗಿಸಿ, ಮಂತ್ರದಿಂದ ನೆಲ ಸಾರಿಸಿ, ಮಂತ್ರದಿಂದ ಸುಟ್ಟು ಭಸ್ಮವ ಮಾಡಿ, ಆ ಭಸ್ಮಕ್ಕೆ ಜಂಗಮಾರ್ಚನೆಯ ಮಾಡಿ, ಜಂಗಮದ ಪಾದೋದಕದಿಂದ ಆ ಭಸ್ಮವ ಮಂತ್ರದಿಂದ ಶುದ್ಧಸಂಸ್ಕಾರವ ಮಾಡಿ, ಇಂತಪ್ಪ ವಿಭೂತಿಯ ತ್ರಿಕಾಲದಲ್ಲಿ ಕ್ರೀಯವಿಟ್ಟು ಧರಿಸಿ ಲಿಂಗಾರ್ಚನೆಯ ಮಾಡಿದವರಿಗೆ ಸಕಲ ಕಂಟಕಾದಿಗಳ ಭಯ ಭೀತಿ ನಷ್ಟವಾಗಿ ಚತುರ್ವಿಧಫಲಪದಪ್ರಾಪ್ತಿ ದೊರಕೊಂಬುವದು. ಆ ಫಲಪದ ಪಡೆದವರು ವೃಕ್ಷದ ಮೇಲೆ ಮನೆಯ ಕಟ್ಟಿದವರು ಉಭಯರು ಒಂದೆ. ಅದೆಂತೆಂದಡೆ: ವೃಕ್ಷದ ಮೇಲೆ ಮನೆ ಕಟ್ಟಿದವರು ಆ ವೃಕ್ಷವಿರುವ ಪರ್ಯಂತರವು ಆ ಮನೆಯಲ್ಲಿರುವರು. ಆ ವೃಕ್ಷವು ಮುಪ್ಪಾಗಿ ಅಳಿದುಹೋದಲ್ಲಿ ನೆಲಕ್ಕೆ ಬೀಳುವರಲ್ಲದೆ, ಅಲ್ಲೆ ಸ್ಥಿರವಾಗಿ ನಿಲ್ಲಬಲ್ಲರೆ? ನಿಲ್ಲರೆಂಬ ಹಾಗೆ. ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವೆಂಬ ಚತುರ್ವಿಧಫಲಪದವ ಪಡೆದವರು ಆ ಫಲಪದವಿ ಇರುವ ಪರ್ಯಂತರವು ಸ್ಥಿರವಾಗಿ ಇರುವರಲ್ಲದೆ, ಆ ಫಲಪದವಿ ಕಾಲೋಚಿತದ ಮೇಲೇರಿ ಅಳಿದು ನಾಶವಾದ ಮೇಲೆ ಮರಳಿ ಭವಕ್ಕೆ ಬೀಳುವರಲ್ಲದೆ, ಅಲ್ಲಿ ಸ್ಥಿರವಾಗಿ ನಿಲ್ಲಲರಿಯರೆಂದು ನಿಮ್ಮ ಶರಣ ಕಂಡು ಅದು ಮಾಯಾಜಾಲವೆಂದು ತನ್ನ ಪರಮಜ್ಞಾನದಿಂ ಭೇದಿಸಿ ಚಿದ್‍ವಿಭೂತಿಯನೇ ಸರ್ವಾಂಗದಲ್ಲಿ ಧರಿಸಿ, ಶಿಖಿ-ಕರ್ಪುರದ ಸಂಯೋಗದ ಹಾಗೆ ಆ ಚಿದ್ಭಸ್ಮದಲ್ಲಿ ನಿರ್ವಯಲಾದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಯ್ಯಾ, ಶ್ರೀವಿಭೂತಿಯ ಸತ್ಕ್ರಿಯೆಯಿಂದ (ಮಾಡಿ) ಧರಿಸುವ ಭೇದವೆಂತೆಂದಡೆ : ಆವ ವರ್ಣದ ಗೋವಾದಡೆಯೂ ಸರಿಯೆ, ಅವಯವಂಗಳು ನೂನು-ಕೂನಿಲ್ಲದೆ, ಬರೆಗಳ ಹಾಕದೆ ಇರುವಂತಹ ಗೋವ ತಂದು, ಅದಕ್ಕೆ ಧೂಳಪಾದೋದಕ ಸ್ನಾನವ ಮಾಡುವಂತಹದೆ ಕ್ರಿಯಾಲಿಂಗಧಾರಣದೀಕ್ಷೆ; ಧೂಳಪಾದೋದಕಸೇವನೆಯೆ ಮಹಾತೀರ್ಥ. ಭಕ್ತ ಆತನ ಭಾಂಡದಲ್ಲಿರುವ ಪದಾರ್ಥವ ಹಸ್ತ ಮುಟ್ಟಿ ಹಾಕಿದ ಮೇಲೆ ಮಹಾಪ್ರಸಾದವಾಯಿತ್ತು. ಇಂತಹ ಆಚಾರಯುಕ್ತವಾದ ಗೋವಿನ ಸಗಣಿಯ ಸ್ವಚ್ಛವಾದ ಸ್ಥಳದಲ್ಲಿ ಚೂರ್ಣ ಮಾಡಿ ಒಣಗಿಸಿ ಕ್ರಿಯಾಗ್ನಿಯಿಂದ ದಹಿಸಿದ ಬೂದಿಯ ಧೂಳಪಾದೋದಕದಲ್ಲಿ ಶೋಧಿಸಿ, ಅದರೊಳಗೆ ತಿಳಿಯ ತೆಗೆದು ಘಟ್ಟಿಯ ಮಾಡಿ ಪೂರ್ವದಲ್ಲಿ (ಗುರು) ಹೇಳಿದ ವಚನೋಕ್ತಿಯಿಂದ ಧರಿಸಿದ ಲಿಂಗಾಧಾರಕಭಕ್ತಂಗೆ ಗುರುದೀಕ್ಷೆಯುಂಟಾಗುವುದಯ್ಯಾ, ಉಪಾಧಿಭಕ್ತಂಗೆ ಗುರುಲಿಂಗಜಂಗಮದ ಸದ್ಭಕ್ತಿ ದೊರೆವುದಯ್ಯಾ, ನಿರುಪಾಧಿಭಕ್ತಂಗೆ ತ್ರಿವಿಧಪಾದೋದಕ ಪ್ರಸಾದ ದೊರೆಯುವುದಯ್ಯಾ ಸಹಜ ಭಕ್ತಂಗೆ ಸಚ್ಚಿದಾನಂದಪದ ದೊರೆಯುವುದಯ್ಯಾ ನಿರ್ವಂಚಕ ಭಕ್ತಂಗೆ ನಿರ್ವಾಣ ಪದವಾಗುವುದಯ್ಯಾ ನಿರ್ವಾಣಭಕ್ತಂಗೆ ನಿಷ್ಕಳಂಕ ಜ್ಯೋತಿರ್ಮಯ ಪರಶಿವಲಿಂಗದಲ್ಲಿ ಕೂಟಸ್ಥವಾಗಿ, ನಿರಂಜನಜಂಗಮದಲ್ಲಿ ಕೂಡಿ ಹರಗಣಸಹವಾಗಿ ನಿರವಯಸಮಾಧಿ ತಪ್ಪದು ನೋಡಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಸುಟ್ಟ ಸುಣ್ಣವ ಹಸಿಮಡಕೆಗೆ ತುಂಬದೆ, ಹಸಿಗೋಡೆಗೆ ಸಾರಿಸದೆ, ಬಿಸಿಮಡಕೆಗೆ ತುಂಬದೆ, ಬಿಸಿಲಿಗೆ ಒಣಗಿಸಿ ಬಿಸಿನೀರೊಳಗೆ ಕಲಿಸಿ, ಒಣಗೋಡೆಗೆ ಸಾರಿಸುವರು. ಬಯಸಿ ಹಿಂಗದವರು ಈ ಸುಣ್ಣವ ಕೊಳ್ಳಿರಿ. ಇಲ್ಲಾದರೆ ಇರುವಿರಿ ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶೀಲಮಾಡುವಣ್ಣಗಳ ಶುಚಿ ಅವಶುಚಿಯೆಂಬ ಅಂಕುಶದಿಂದಳಿಕಿಸಿ ಕಾಡಿತ್ತು ಮಾಯೆ. ಕ್ರೀಯ ಮಾಡುವಣ್ಣಗಳ ಕರ್ಮಕ್ಕೆ ಒಳಗು ಮಾಡಿ ಕಾಡಿತ್ತು ಮಾಯೆ. ವ್ರತಮಾಡುವಣ್ಣಗಳ ವ್ರತಭ್ರಷ್ಟರ ಮಾಡಿ ಕಾಡಿತ್ತು ಮಾಯೆ. ನೇಮ ಮಾಡುವಣ್ಣಗಳ ನೇಮವೆಂಬ ಸಂಕಲ್ಪಶೂಲದಲ್ಲಿ ನೀರಿಲ್ಲದ ವೃಕ್ಷದಂತೆ ಒಣಗಿಸಿ ಕಾಡಿತ್ತು ಮಾಯೆ. ದಾಸೋಹಮಾಡುವಣ್ಣಗಳ ದೇಶದೇಶಕ್ಕೆ ಯಾಚಕನಮಾಡಿ ತಿರುಗಿಸಿ ಕಂಡಕಂಡವರಿಗೆ ಬಾಯಿತೆರಿಸಿ ಕಾಡಿ ಬೇಡಿಸಿ ಕಾಡಿತ್ತು ಮಾಯೆ. ಭಕ್ತಿಮಾಡುವಣ್ಣಗಳ ಹೊನ್ನು ವಸ್ತ್ರ ಹದಿನೆಂಟುಜೀನಸು ಧಾನ್ಯ ಮೊದಲಾದ ಭತ್ತದ್ರವ್ಯವ ಹಾಳುಮಾಡಿ, ಲೋಕದ ಜನರ ಮುಂದೆ ನಗೆ ಹಾಸ್ಯ ಅವಮಾನದಿಂ ಕಾಡಿತ್ತು ಮಾಯೆ. ಧರ್ಮಮಾಡುವಣ್ಣಗಳ ಯುಕ್ತಿ ಮುಂದುದೋರಿ ಕರ್ಮಕ್ಕೆ ಬೆಳಗುಮಾಡಿ ಕಾಡಿತ್ತು ಮಾಯೆ. ವೇದಾಗಮಶಾಸ್ತ್ರಪುರಾಣವನೋದಿ ಹಾಡಿ ಹೇಳುವಣ್ಣಗಳ ಅಂತಪ್ಪ ಪುಣ್ಯಕಥೆ ಕಾವ್ಯವನೋದಿಸಿ ಲಾಲಿಸಿ ಏಕಚಿತ್ತರಾಗಿ ಕೇಳುವಣ್ಣಗಳ ಬಾಲೆಯರ ತೋಳು ತೊಡೆಯಲ್ಲಿ ಒರಗಿಸಿ ಕಾಡಿತ್ತು ಮಾಯೆ. ಇಂತಪ್ಪ ಮಾಯೆಯ ಗೆಲುವರೆ ಆರಿಗೂ ಅಳವಲ್ಲ. ಸದಾಚಾರಮಾರ್ಗ ಮುನ್ನವೇ ಅಲ್ಲ. ಅದೆಂತೆಂದೊಡೆ: ಸುಜ್ಞಾನೋದಯವಾಗಿ ಸಕಲಪ್ರಪಂಚವ ನಿವೃತ್ತಿಯ ಮಾಡಿ ಶ್ರೀಗುರುಕಾರುಣ್ಯದಿಂ ತ್ರಿವಿಧ ಷಡ್ವಿಧಾಂಗ ಮೊದಲಾದ ಸರ್ವಾಂಗದಲ್ಲಿ ಘನಮಹಾ ಇಷ್ಟಬ್ರಹ್ಮವನು ತ್ರಿವಿಧ ಷಡ್ವಿಧಲಿಂಗ ಮೊದಲಾಗಿ ಅನೇಕ ಲಿಂಗಸ್ವರೂಪಿನಿಂ ಸ್ವಾಯತವ ಮಾಡಿ, ಅಚ್ಚೊತ್ತಿದ ಅರಿವಿಯಂತೆ, ಕಚ್ಚಾದ ಗಾಯದಂತೆ, ಬೆಚ್ಚ ಬಂಗಾರದಂತೆ, ಅಂಗಲಿಂಗಕ್ಕೆ ಭಿನ್ನವಿಲ್ಲದೆ ಅವಿರಳ ಸಮರಸದಿಂ ಏಕಲಿಂಗನಿಷಾ*ಪಾರಿಗಳಾದ ವೀರಮಹೇಶ್ವರರೇ ಸದಾಚಾರ ಸದ್ಭಕ್ತಶರಣಜನಂಗಳು. ಇಂತಿವರು ಮೊದಲಾದ ಶಿವಜ್ಞಾನಿಗಳಾದ ಜ್ಞಾನಕಲಾತ್ಮರು ಮಾಯಾಕೋಲಾಹಲರಲ್ಲದೆ, ಇಂತಪ್ಪ ಶಿವಾಚಾರ ಧರ್ಮವನು ತಿಳಿಯದೆ ನೇಮದಿಂದಾಚರಿಸಿ ಇಷ್ಟ ಶೀಲ ವ್ರತ ಕ್ರಿಯಾ ದಾನಧರ್ಮವ ಮಾಡಿದರೇನು ವ್ಯರ್ಥವಲ್ಲದೆ ಸಾರ್ಥಕವಲ್ಲ ಎಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->