ಅಥವಾ

ಒಟ್ಟು 8 ಕಡೆಗಳಲ್ಲಿ , 6 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೊದಲಿಂದತ್ತಲರಿಯದೆ, ಕಡೆಯಿಂದ ಮೇಲೆ ಕಾಣದೆ, ಚದುರಿನ ಹದನ ಸದನ ಸಂಭ್ರಮಕ್ಕೆ ಒದಗಿ ಬಿದ್ದೊರಲಿದರು ಅಜ ವಿಷ್ಣು ಇಂದ್ರಾದಿ ಸಕಲ ಸಂದೋಹ. ಉಳಿದ ಉಚ್ಛಿಷ್ಟ ಬಚ್ಚಲದೊಳು ಬಿದ್ದ ಪ್ರಾಣಿಗಳಂತಿರಲಿ, ಮತ್ತೆ ಕೋಟಲೆಯ ಕಳೆದು ರಾಟಣವ ಹರಿದು, ನಿಜಬೇಟವರಿದು ನಿರ್ಮಲವನರ್ಪಿಸಿ, ನಿರಾವಯವ ಕೊಂಡಾಡುವ ನಿಜಪ್ರಸಾದಿಗಲ್ಲದೆ ಅಸಾಧ್ಯ ಕಾಣಾ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅನಂತ ತಪಸ್ಸಿನ ಫಲ ಒದಗಿ, ಗುರುಕರುಣದಿಂದ ಚಿದ್ಘನಲಿಂಗಾಂಗಸಂಬಂಧ ವೀರಶೈವೋದ್ಧಾರಕರಾದ ಮಹಾಗಣ ಪ್ರಸನ್ನಪ್ರಸಾದವೆನಿಸುವ ವಚನಸಾರಾಮೃತನುಭಾವಸುಖಮಂ ಸವಿಸವಿದುಂಡುಪವಾಸಿ ಬಳಸಿಬ್ರಹ್ಮವಾಗಲರಿಯದೆ ಒಬ್ಬರಿಗೆ ಹುಟ್ಟಿ,ಒಬ್ಬರಿಗೆ ಹೆಸರಹೇಳಿ,ಶಿವಾಚಾರಮಾರ್ಗಸಂಪನ್ನರೆನಿಸಿ, ತಮ್ಮ ತಾವರಿಯದೆ, ಹಲವು ಮತದವರ ಎಂಜಲಶಾಸ್ತ್ರವಿಡಿದು, ಶೈವಕರ್ಮೋಪವಾಸ ಕ್ರಿಯಾಚಾರವಿಡಿದು, ಜ್ಞಾನವ ಬಳಕೆಯಾಗಿರ್ಪುದೆ ಅಂತರಂಗದ ಚತುರ್ಥಪಾತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಮಗನ ಮದುವೆಯ ತೊಡಗಿದಾಗ ಬಡಬಡನೆ ಹೋಗಿ ಹಾರುವನ ಕರೆವಿರಿ. ಅವನೇನು ನಿಮ್ಮ ಗುರುವೆ ? ನಿಮ್ಮ ಮನೆದೇವರೆ ? ನಿಮ್ಮ ಅಣ್ಣ ತಮ್ಮನೆ ? ನಿಮ್ಮ ಕುಲಬಾಂಧವನೆ ? ನಿಮ್ಮ ಹೊಂದಿ ಹೊರದವನೆ ? ಶಿವ ಸಹೋದರನೆ ? ನಿಮ್ಮ ಅಜ್ಜ ಮುತ್ತೈನೆ? ಛೀ ಛೀ ಎಲೊ ಶಿವದ್ರೋಹಿ ಕೇಳೊ. ಬಣ್ಣಗಾರ ಬಾಯಿಬಡಕ ಭ್ರಷ್ಟಮಾದಿಗ ವಿಪ್ರಜೋಯಿಸನ ಮಾತ ಕೇಳಿ ಮದುವೆಯಾದ ಪಂಚಪಾಂಡವರು ಕೆಟ್ಟರು. ಹರಿವಿರಂಚಿ ಹರಿಶ್ಚಂದ್ರ ದೇವೇಂದ್ರ ನಾಗಾರ್ಜುನ ಕಂಸರಾಜ ನಳಚಕ್ರವರ್ತಿ ಚಂದ್ರ ಸೂರ್ಯ ಮಂಗಳ ಬುಧ ಶುಕ್ರ ಸುರಸ್ತೋಮ ಮುನಿಸ್ತೋಮ ಕೆಟ್ಟಿತು. ಪಂಚಾಂಗ ಕೇಳಿದ ದಕ್ಷನ ಪಡೆಯೆಲ್ಲ ಕೆಟ್ಟು ನಷ್ಟವಾಗಿಹೋದ ದೃಷ್ಟವ ಕಂಡು ಕೇಳಿ, ಶಿವನ ಹಳಿವ ಹೊಲೆಮನದ ವಿಪ್ರಜೋಯಿಸನ ಕರೆಸಿ, ಕೈಮುಗಿದು ಕಾಣಿಕೆಯ ಕೊಟ್ಟು ಪಂಚಾಂಗವ ಕೇಳಿದ ಶಿವಭಕ್ತರಿಗೆ ತಾ ಗುರುದ್ರೋಹ, ಲಿಂಗದ್ರೋಹ, ಜಂಗಮದ್ರೋಹವು ಒದಗಿ, ತಾವು ಹಿಂದೆ ಮಾಡಿದ ದಾನಧರ್ಮ ಪರೋಪಕಾರವು ಕೆಟ್ಟು ನರಕಸಮುದ್ರದೊಳಗೆ ಮುಳುಗಾಡುತ್ತೇಳುತ್ತ ತಾವೇ ಸೇರಲರಿಯದೆ ಕೆಟ್ಟರು ನೋಡಾ ಹಲಕೆಲಬರು ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಶರೀರವ ಕುರಿತಲ್ಲಿ ಸಾಧಕಾಂಗವ ನುಡಿಯಬೇಕು. ಆತ್ಮನ ಕುರಿತಲ್ಲಿ ಚಿದ್ಘನದಲ್ಲಿ ನಿಂದು ಒದಗಿ ಅಡಗಿರುವಠಾವ ನುಡಿಯಬೇಕು. ಇಂತೀ ಉಭಯದಿರವ ತಾನರಿತು ಅಂಗಕ್ಕೆ ಶಿಲೆ, ಆತ್ಮಂಗೆ ಓಗರವಾದಂತೆ, ಲೌಕಿಕಕ್ಕೆ ಆಚರಣೆ ಪರಮಾರ್ಥಕ್ಕೆ ಪರಂಜ್ಯೋತಿ ಪ್ರಕಾಶವಾಗಿರಬೇಕು, ಸದಾಶಿವಮೂರ್ತಿಲಿಂಗಕ್ಕೆ ಅಂಗವಾಗಿ ನಿರಂಗಕ್ಕೆ ಸಂಗವನೆಯ್ದಬೇಕು.
--------------
ಅರಿವಿನ ಮಾರಿತಂದೆ
ಯದಾ ಶಿವಕಲಾಯುಕ್ತಂ ಲಿಂಗಂ ದದ್ಯಾನ್ಮಹಾಗುರುಃ ತದಾರಾಭ್ಯಂ ಶಿವಸ್ತತ್ರ ತಿಷ*ತ್ಯಾಹ್ವಾನಮತ್ರ ಕಿಂ ಸುಸಂಸ್ಕೃತೇಷು ಲಿಂಗೇಷು ಸದಾ ಸನ್ನಿಹಿತಃ ಶಿವಃ ತಥಾsಹ್ವಾನಂ ನ ಕರ್ತವ್ಯಂ ಪ್ರತಿಪತ್ತಿವಿರೋಧತಃ ನಾಹ್ವಾನಂ ನಾ ವಿಸರ್ಗಂ ಚೆ ಸ್ವೇಷ್ಟಲಿಂಗೇ ಕಾರಯೇತ್ ಲಿಂಗನಿಷಾ*ಪರೋ ನಿತ್ಯಮಿತಿ ಶಾಸ್ತ್ರವಿನಿಶ್ಚಯಃ ಆಹ್ವಾನಕ್ಕೋಸ್ಕರವಾಗಿ ಎಲ್ಲಿರ್ದನು ? ಈರೇಳು ಭುವನ ಹದಿನಾಲ್ಕು ಲೋಕವನೊಡಲುಗೊಂಡಿಪ್ಪ ದಿವ್ಯವಸ್ತು ಮತ್ತೆ ವಿಸರ್ಜಿಸಿ ಬಿಡುವಾಗ ಎಲ್ಲಿರ್ದನು ? ಮುಳ್ಳೂರೆ ತೆರಹಿಲ್ಲದಂತಿಪ್ಪ ಅಖಂಡವಸ್ತು ! ಆಕಾಶಂ ಲಿಂಗಮಿತ್ಯಾಹುಃ ಪೃಥಿವೀ ತಸ್ಯ ಪೀಠಿಕಾ ಆಲಯಂ ಸರ್ವಭೂತಾನಾಂ ಅಯನಂ ಲಿಂಗಮುಚ್ಯತೇ ಲಿಂಗಮಧ್ಯೇ ಜಗತ್‍ಸರ್ವಂ ತ್ರೈಲೋಕ್ಯಂ ಸಚರಾಚರಂ ಲಿಂಗಬಾಹ್ಯಾತ್ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ ವೇದಾದಿನಾಮ ನಿರ್ನಾಮ ಮಹತ್ವಂ ಮಮ ರೂಪಯೋಃ ಗುರೂಕ್ತಮಂತ್ರಮಾರ್ಗೇಣ ಇಷ್ಟಲಿಂಗಂ ತು ಶಾಂಕರಿ ಇಂತೆಂದುದಾಗಿ, ಬರಿಯ ಮಾತಿನ ಬಳಕೆಯ ತೂತುಜ್ಞಾನವ ಬಿಟ್ಟು ನೆಟ್ಟನೆ ತನ್ನ ಕರಸ್ಥಲದೊಳ್ ಒಪ್ಪುತಿರ್ಪ ಇಷ್ಟಲಿಂಗವ ದೃಷ್ಟಿಸಿ ನೋಡಲು ಅಲ್ಲಿ ತನ್ನ ಮನಕ್ಕೆ ಮನ ಸಂಧಾನವಾದ ದಿವ್ಯ ನಿಶ್ಚಯ ಒದಗಿ, ಆ ದಿವ್ಯ ನಿಶ್ಚಯದಿಂದ ವ್ಯಾಕುಳವಡಗಿ ಅದ್ವೈತವಪ್ಪುದು. ಅದು ಕಾರಣ_ನಮ್ಮ ಕೂಡಲಚೆನ್ನಸಂಗಯ್ಯನ ಶರಣರು ಆಹ್ವಾನ_ವಿಸರ್ಜನವೆಂಬ ಉಭಯ ಜಡತೆಯ ಬಿಟ್ಟು ತಮ್ಮ ತಮ್ಮ ಕರಸ್ಥಲದಲ್ಲಿ ನಿಶ್ಚಯಿಸಿದರಾಗಿ ಸ್ವಯಲಿಂಗವಾದರು ಕಾಣಿರೋ !
--------------
ಚನ್ನಬಸವಣ್ಣ
ಅಯ್ಯಾ, ಸಮಸ್ತ ಮಾಯಾಬಲೆಯಲ್ಲಿ, ಜನ್ಮಜನ್ಮಾಂತರವೆತ್ತತೊಳಲಿ ಬಳಲಿ ಅಂತ್ಯದಲ್ಲಿ ಜ್ಞಾನೋದಯವಾಗಿ `ಶಿವಧೋ' ಎಂದು ಗುರೂಪಾವಸ್ಥೆಯ ಮಾಡುತಿರ್ದ ಶಿವಕಳಾತ್ಮಂಗೆ ಶ್ರಿಗುರು ಪ್ರತ್ಯಕ್ಷವಾಗಿ ಕೃಪಾದೃಷ್ಟಿಯಿಂದ ನೋಡಲು ಆ ಶಿವಕಳಾತ್ಮನು ಅತಿಸಂತೋಷದಿಂದ `ಎಲೆ ಗುರುನಾಥನೆ, ಎನ್ನ ಅಪರಾಧವ ನೋಡದೆ ನಿನ್ನ ದಯಾಂಬುಧಿಯಲ್ಲಿ ಮಡಗಿಕೋ, ಎನ್ನ ಸರ್ವಾಧಾರ ಮೂರ್ತಿಯೆ' -ಎಂದು ಅಭಿನಂದಿಸಲು ಆಗ, ಶ್ರೀಗುರುನಾಥನು ಮಹಾಸಂತೋಷ ಹುಟ್ಟಿ ಆ ಶಿವಕಳಾತ್ಮಂಗೆ ಪೂರ್ವದ ಜಡಶೈವಮಾರ್ಗವ ಬಿಡಿಸಿ ನಿಜ ವೀರಶೈವದೀಕ್ಷೆಯನೆ ಇತ್ತು ಹಸ್ತಮಸ್ತಕಸಂಯೋಗವ ಮಾಡಿ ಅಂತರಂಗದಲ್ಲಿರುವ ಪ್ರಾಣಲಿಂಗವ ಬಹಿಷ್ಕರಿಸಿ, ಕರಸ್ಥಲಕ್ಕೆ ತಂದುಕೊಟ್ಟನು. ಮತ್ತಾ ಲಿಂಗವ ಸರ್ವಾಂಗದಲ್ಲಿ ಪೂರ್ಣವ ಮಾಡಿ ಲಿಂಗಾಂಗ ಷಟ್‍ಸ್ಥಾನವ ತೋರಿ ಚಿದ್ವಿಭೂತಿ, ರುದ್ರಾಕ್ಷಿ, ಪಂಚಾಕ್ಷರಿ, ಷಡಕ್ಷರಿ ಮೊದಲಾದ ಸಪ್ತಕೋಟಿ ಮಹಾಮಂತ್ರವನರುಹಿ ಷಟ್‍ಸ್ಥಲಮಾರ್ಗ, ಷಡ್ವಿಧ ಶೀಲ ವತ್ರನೇಮಂಗಳನರುಹಿ ಷೋಡಶಭಕ್ತಿಯ ಮಾರ್ಗವ ತಿಳುಹಿ, ಬತ್ತೀಸ ಕಳೆಯ ನೆಲೆಯನರುಹಿ ಷೋಡಶವರ್ಣ, ದ್ವಾದಶಾಚಾರ, ಸಗುಣನಿರ್ಗುಣಲೀಲೆಯ ಕರುಣಿಸಿ ನನಗೂ ನಿನಗೂ ಚೈತನ್ಯಸ್ವರೂಪವಾದ ನಿರಂಜನಜಂಗಮಲಿಂಗ ಲಿಂಗಜಂಗಮವೆ ಗತಿಯೆಂದು ನಿರೂಪವ ಕೊಡಲು- ಆಚರಣೆಯ ವಿಚಾರವ ಕರುಣಿಸಬೇಕಯ್ಯಾ ಸ್ವಾಮಿ ಎಂದು ಬೆಸಗೊಳಲು, ಕೇಳಯ್ಯಾ, ವರಕುಮಾರ ದೇಶಿಕೋತ್ತಮನೆ ಆ ಲಿಂಗಜಂಗಮ ಜಂಗಮಲಿಂಗದಾಚರಣೆಯ ಸಂಬಂಧವ: ಸದ್ಗುರುಮಾರ್ಗಹಿಡಿದ ಜಂಗಮ, ಭಕ್ತನಾದ ನಿಜಪ್ರಸಾದಿ ಇವರಿಬ್ಬರಾಚರಣೆಯ ನಿನ್ನೊಬ್ಬನಲ್ಲಿ ಹುರಿಗೊಳಿಸಿಕೊಟ್ಟೆವು ನೋಡಯ್ಯಾ. ಅದೆಂತೆಂದಡೆ:ಕ್ರಿಯಾಜಂಗಮಮೂರ್ತಿಗಳು ನಿನ್ನರ್ಚನಾ ಸಮಯಕ್ಕೆ ದಿವಾರಾತ್ರಿಗಳೆನ್ನದೆ ಒದಗಿ ಬಂದಲ್ಲಿ, ಅಚ್ಚಪ್ರಸಾದಿಯೋಪಾದಿಯಲ್ಲಿ, ಕ್ರಿಯಾಚರಣೆಯನ್ನಾಚರಿಸುವುದಯ್ಯಾ. ನಿನ್ನ ಸಮಯೋಚಿತಕ್ಕೆ ಕ್ರಿಯಾಜಂಗಮ ದೊರೆಯದಿರ್ದಡೆ ದಿವಾರಾತ್ರಿಯಲ್ಲಿ ನಿಚ್ಚಪ್ರಸಾದಿ ಸಂಬಂಧದಂತೆ ಜ್ಞಾನಜಂಗಮಸ್ವರೂಪವಾದ ಇಷ್ಟಮಹಾಲಿಂಗದಲ್ಲಿ ಚಿದ್ಘನತೀರ್ಥಪ್ರಸಾದವ ಸಮರ್ಪಿಸಿ ತಾನಾ ಪರಿಣಾಮಪ್ರಸಾದದಲ್ಲಿ ಲೋಲುಪ್ತನಾದಾತನೆ ಲಿಂಗಭಕ್ತನಾದ ಸಮಯಪ್ರಸಾದಿ ನೋಡಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅಯ್ಯಾ, ಗುರುಲಿಂಗಜಂಗಮ ಕರುಣಕಟಾಕ್ಷದಿಂದ ಚಿದ್ವಿಭೂತಿ ರುದ್ರಾಕ್ಷಿ ಚಿನ್ಮಂತ್ರಗಳ ಗುರುವಚನ ಪ್ರಮಾಣದಿಂದ ನಿರಂತರವು ಆಚರಿಸಿ, ಚಿದ್ಘನ ಇಷ್ಟ ಮಹಾಲಿಂಗವ ಉರಸ್ಥಲದಲ್ಲಿ ಧರಿಸಬೇಕಾದಡೆ, ದಾರದಿಂದ ಹುಟ್ಟಿದ ಸಜ್ಜೆಯ ಕರಕಮಲವಟುವ ನೂಲಕಾಯಿ, ಬಿಲ್ವಕಾಯಿ, ಗಂಧದ ಮನೆ, ನಾರಂಗದ ಕಾಯಿ, ರಜತ, ಹೇಮ, ತಾಮ್ರ, ಹಿತ್ತಾಳೆ, ಮೃತ್ತಿಕೆ ಮೊದಲಾದ ಆವುದು ತನಗೆ ಯೋಗ್ಯವಾಗಿ ಬಂದ ಚಿದ್ಘನಲಿಂಗದೇವಂಗೆ ಪರಿಣಾಮ ಕಟ್ಟುವಂತೆ, ಮೂವತ್ತಾರೆಳೆಯ ದಾರವಾದಡೆಯೂ ಸರಿಯೆ, ನಾಲ್ವತ್ತೆರಡೆಳೆಯ ದಾರವಾದಡೆಯೂ ಸರಿಯೆ, ಐವತ್ತಾರೆಳೆಯಾದಡೆಯೂ ಸರಿಯೆ, ಅರುವತ್ತುಮೂರಾದಡೆಯೂ ಸರಿಯೆ, ನೂರೆಂಟು ಇನ್ನೂರ ಹದಿನಾರು, ಮುನ್ನೂರರುವತ್ತು ಎಳೆ ಮೊದಲಾಗಿ ಲಿಂಗಾಣತಿಯಿಂದ ಒದಗಿ ಬಂದಂತೆ ಶಿವಲಾಂಛನಸಂಯುಕ್ತದಿಂದ ದಾರವ ಕೂಡಿ ಜ್ಞಾನಕ್ರಿಯಾಯುಕ್ತವಾದ ಎರಡೆಳೆಯಾದಡೆಯೂ ಸರಿಯೆ, ಪರಿಪೂರ್ಣ ಅವಿರಳ ಪರಂಜ್ಯೋತಿ ಎಂಬ ಮಹಾಜ್ಞಾನಸೂತ್ರಯುಕ್ತವಾದ ಮೂರೆಳೆಯಾದಡೆಯೂ ಸರಿಯೆ. ಸತ್ತು ಚಿತ್ತು ಆನಂದ ನಿತ್ಯವೆಂಬ ಸ್ವಾನುಭಾವ ಸೂತ್ರಯುಕ್ತವಾದ ನಾಲ್ಕೆಳೆಯಾದಡೆಯೂ ಸರಿಯೆ. ಆ ಲಿಂಗಗೃಹಂಗಳಿಗೆ ಮಂತ್ರಧ್ಯಾನದಿಂದ ಸೂತ್ರವ ರಚಿಸಿ ಲಾಂಛನಯುಕ್ತವಾದ ಪಾವಡ ಯಾವುದಾದಡೆಯೂ ಸರಿಯೆ, ಗುರುಪಾದೋದಕದಲ್ಲಿ ತೊಳೆದು ಮಡಿಕೆಯ ಮಾಡಿ, ಬೆಳ್ಳಿ ಬಂಗಾರ ತಾಮ್ರ ಹಿತ್ತಾಳೆ ಕರತಾಳವೋಲೆ ಮೊದಲಾಗಿ ತಗಡ ಮಾಡಿ. ಪ್ರಮಾಣಯುಕ್ತವಾಗಿ ಪಾವಡವ ಮಡಿಚಿ ಹುದುಗಿ, ಪೂರ್ವ ಗಳಿಗೆಯಲ್ಲಿ ತ್ರಿವಿಧಪ್ರಣವ, ಪಶ್ಚಿಮ ಗಳಿಗೆಯಲ್ಲಿ ತ್ರಿವಿಧಪ್ರಣವ ಮಧ್ಯ ಗಳಿಗೆಯಲ್ಲಿ ತ್ರಿವಿಧಪ್ರಣವ, ಎತ್ತುವ ಹುದುಗದಲ್ಲಿ ಪಂಚಪ್ರಣವ, ಉತ್ತರ ಭಾಗದರಗಿನಲ್ಲಿ ಚಿಚ್ಛಕ್ತಿಪ್ರಣವ, ದಕ್ಷಿಣ ಭಾಗದರಗಿನಲ್ಲಿ ಚಿಚ್ಛಿವಪ್ರಣವ, ಇಂತು ಹದಿನಾರು ಪ್ರಣವಂಗಳ ಷೋಡಶವರ್ಣಸ್ವರೂಪವಾದ ಷೋಡಶಕಗಳೆಂದು ಭಾವಿಸಿ, ಕ್ರಿಯಾಭಸಿತದಿಂದ ಆಯಾಯ ನಸ್ಧಲದಲ್ಲಿಫ ಸ್ಥಾಪಿಸಿ, ಆ ಮಂತ್ರಗೃಹದಲ್ಲಿ ಚಿದ್ಘನಮಹಾಪರತತ್ವಮೂರ್ತಿಯ ಮೂರ್ತವ ಮಾಡಿಸುವುದಯ್ಯಾ, ಆಮೇಲೆ ನಿರಂಜನಜಂಗಮದ ಪಾದಪೂಜೆಯ ಮಾಡಬೇಕಾದಡೆ ರೋಮಶಾಟಿಯಾಗಲಿ ಪಾವಡವಾಗಲಿ, ಆಸನವ ರಚಿಸಿ, ಮಂತ್ರಸ್ಮರಣೆಯಿಂದ ಗುರುಪಾದೋದಕದ ವಿಭೂತಿಯಿಂದ ಸಂಪ್ರೋಕ್ಷಣೆಯ ಮಾಡಿ ಪುಷ್ಪಪತ್ರೆಗಳ ರಚಿಸಿ, ಆ ಮಹಾಪ್ರಭುಜಂಗಮಕ್ಕೆ ಅಘ್ರ್ಯಪಾದ್ಯಾಚಮನವ ಮಾಡಿಸಿ, ಪಾವುಗೆಯ ಮೆಟ್ಟಿಸಿ ಮಂತ್ರಸ್ಮರಣೆಯಿಂದ ಪಾಣಿಗಳನೇಕಭಾಜನವ ಮಾಡಿ, ಬಹುಪರಾಕೆಂದು ಆ ಸಿಂಹಾಸನಕ್ಕೈತಂದು ಮೂರ್ತವ ಮಾಡಿದ ಮೇಲೆ ಪಾದಾಭಿಷೇಕಜಲವ ಶಿವಗೃಹಕ್ಕೆ ತಳಿದು, ಪಾದೋದಕ ಪುಷ್ಪೋದಕ ಗಂಧೋದಕ ಭಸ್ಮೋದಕ ಮಂತ್ರೋದಕದಿಂದ ಲಿಂಗಾಭಿಷೇಕವ ಮಾಡಿಸಿ, ಸಾಕಾರ ನಿರಾಕಾರ ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಿ, ಸಮ್ಮುಖದಲ್ಲಿ ಗರ್ದುಗೆಯ ಹಾಕಿ, ಅಷ್ಪಾಂಗಹೊಂದಿ ಶರಣುಹೊಕ್ಕು, ಗರ್ದುಗೆಯ ಮೇಲೆ ಮೂರ್ತವ ಮಾಡಿ, ಆ ಲಿಂಗಜಂಗಮವ ಮೂಲಮಂತ್ರದಿಂದ ಅನಿಮಿಷದೃಷ್ಟಿಯಿಂದ ನಿರೀಕ್ಷಿಸಿ ತನ್ನ ವಾಮಕರದ ಪಂಚಾಂಗುಲಿಗಳಲ್ಲಿ ಪಂಚಪ್ರಣವವ ಲಿಖಿಸಿ ಮಧ್ಯಸಿಂಹಾಸನದಲ್ಲಿ ಮೂಲಪ್ರಣವ ಸ್ಥಾಪಿಸಿ ಅರ್ಚಿಸಿ, ಮಹಾಪ್ರಭುಜಂಗಮದ ಶ್ರೀಪಾದವ ಮೂರ್ತವ ಮಾಡಿ ಬಹಿರಂಗದ ಕ್ರೀ ಅಂತರಂಗದ ಕ್ರೀಯಿಂದರ್ಚಿಸಿ ಪ್ರಥಮ ತಳಿಗೆಯಲ್ಲಿ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ತ್ರಿಪುಂಡ್ರರೇಖೆಗಳ ರಚಿಸಿ, ಪಂಚದಿಕ್ಕುಗಳಲ್ಲಿ ಪ್ರಣವವ ಲಿಖಿಸಿ, ದ್ವಿತೀಯ ಬಟ್ಟಲೊಳಗೆ ಮೂಲಪ್ರಣವವ ಲಿಖಿಸಿ ಗುರುಪಾದೋದಕದ ಪಾತ್ರೆಯಲ್ಲಿ ಬಿಂದುಯುಕ್ತವಾಗಿ ಮೂಲಪ್ರಣವವ ಲಿಖಿಸಿ ತ್ರಿವಿಧಲಿಂಗಸ್ವರೂಪವಾದ ಸ್ಥಾನವನರಿದು ಪಂಚಾಕ್ಷರ, ಷಡಕ್ಷರ, ನವಾಕ್ಷರ ಸ್ಮರಣೆಯಿಂದ ಪಡಕೊಂಡು ಮಂತ್ರಸ್ಮರಣೆಯಿಂದ ಲಿಂಗ ಜಂಗಮ ಭಕ್ತ ಶರಣಗಣಂಗಳಿಗೆ ಸಲಿಸಿ, ಮುಕ್ತಾಯವ ಮಾಡಿ ಪ್ರಸಾದಭೊಗವ ತಿಳಿದಾಚರಿಸೆಂದಾತ ನಮ್ಮ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಇಂತಪ್ಪ ದೇಹವ ತಾಳಿ ತನ್ನ ಮಲಮೂತ್ರದಲ್ಲಿ ತಾನೇ ಹೊರಳ್ಯಾಡಿ ಬಾಲತ್ವ ತೀರಿ ಯೌವ್ವನವಯಸ್ಸು ಒದಗಲು, ಕನ್ಯಕುಮಾರಿ ಹೆಣ್ಣಿನ ಕೆಂಪನ್ನ ಚರ್ಮವ ಕಂಡು ಉಳುವಿನ ಕುದುರೆಯಂದದಿ ಊರ ಮಾರಿಯ ಕೋಣನಂದದಿ ಮದವೇರಿದ ಆನೆಯಂದದಿ ಇಂದ್ರಿಯವೆಂಬ ಮದ ತಲೆಗೇರಿ ಮನಬಂದತ್ತ ತಿರಿತಿರಿಗಿ, ಯೌವ್ವನವಯಸ್ಸು ತೀರಿದಮೇಲೆ ಮುಪ್ಪಿನವಯಸ್ಸು ಒದಗಿ ಕಣ್ಣು ಒಳನಟ್ಟು ಗಲ್ಲ ಒಳಸೇರಿ ನಿರಿಗೆಗಟ್ಟಿ ಬೆನ್ನುಬಾಗಿ, ಮಣಕಾಲು ಗೂಡುಗಟ್ಟಿ. ಕೂದಲು ಬಿಳಿದಾಗಿ, ಕೋಲುಪಿಡಿದು ಕೆಮ್ಮುತ್ತ ಕೆಕ್ಕರಿಸುತ್ತ ಮಣಕಾಲಮೇಲೆ ಕೈಯನ್ನೂರಿ ಏಳುವಾಗ ಶಿವನ ನೆನೆದರೆ, ಶಿವನ ನೆನಹು ನೆಲೆಗೊಳ್ಳದು, ಶಿವನು ಮೆಚ್ಚನು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->