ಅಥವಾ

ಒಟ್ಟು 11 ಕಡೆಗಳಲ್ಲಿ , 7 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದಿರರಿದಹರೆಂದು ಮರೆಯ ಮಾಡಿ, ಗೂಢವ ನುಡಿಯಬಹುದೆ ವಸ್ತುವ ? ಅರು[ವೆ]ಯಲ್ಲಿ ಕೆಂಡವ ಕಟ್ಟಿದಡೆ ಅಡಗಿಹುದೆ ? ನೆರೆ ವಸ್ತು ಒಬ್ಬರಿಗೆ ಒಡಲೆಡೆವುಂಟೆ ? ಅರ್ಕೇಶ್ವರಲಿಂಗ ಅರಿವರ ಮನ ಭರಿತ, ಸಂಪೂರ್ಣ.
--------------
ಮಧುವಯ್ಯ
ಅನಂತ ತಪಸ್ಸಿನ ಫಲ ಒದಗಿ, ಗುರುಕರುಣದಿಂದ ಚಿದ್ಘನಲಿಂಗಾಂಗಸಂಬಂಧ ವೀರಶೈವೋದ್ಧಾರಕರಾದ ಮಹಾಗಣ ಪ್ರಸನ್ನಪ್ರಸಾದವೆನಿಸುವ ವಚನಸಾರಾಮೃತನುಭಾವಸುಖಮಂ ಸವಿಸವಿದುಂಡುಪವಾಸಿ ಬಳಸಿಬ್ರಹ್ಮವಾಗಲರಿಯದೆ ಒಬ್ಬರಿಗೆ ಹುಟ್ಟಿ,ಒಬ್ಬರಿಗೆ ಹೆಸರಹೇಳಿ,ಶಿವಾಚಾರಮಾರ್ಗಸಂಪನ್ನರೆನಿಸಿ, ತಮ್ಮ ತಾವರಿಯದೆ, ಹಲವು ಮತದವರ ಎಂಜಲಶಾಸ್ತ್ರವಿಡಿದು, ಶೈವಕರ್ಮೋಪವಾಸ ಕ್ರಿಯಾಚಾರವಿಡಿದು, ಜ್ಞಾನವ ಬಳಕೆಯಾಗಿರ್ಪುದೆ ಅಂತರಂಗದ ಚತುರ್ಥಪಾತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಪ್ರಸಾದಿಗೆ ಪರದ್ರವ್ಯದ ಪ್ರೇಮವುಂಟೆ ? ಪ್ರಸಾದಿಗೆ ಪರಸ್ತ್ರೀಯರ ಮೋಹವುಂಟೆ ? ಪ್ರಸಾದಿಗೆ ಮಾತಾಪಿತ ಸತಿಸುತರ ಮಮಕಾರವುಂಟೆ ? ಒಬ್ಬರಿಗೆ ಉಂಟು, ಒಬ್ಬರಿಗೆ ಇಲ್ಲ. ಈ ಭೇದವ ನಿಮ್ಮ ಶರಣರೇ ಬಲ್ಲರು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಪತಿವ್ರತೆಯಾದಡೆ ಅನ್ಯಪುರುಷರ ಸಂಗವೇತಕ್ಕೆ? ಲಿಂಗಸಂಗಿಯಾದಡೆ ಅನ್ಯಸಂಗವೇತಕ್ಕೆ? ಈ, ಕಂಡ ಕಂಡವರ ಹಿಂದೆ ಹರಿವ ಚಾಂಡಾಲಗಿತ್ತಿಯಂತೆ ಒಬ್ಬರ ಕೈವಿಡಿದು, ಒಬ್ಬರಿಗೆ ಮಾತಕೊಟ್ಟು, ಮತ್ತೊಬ್ಬರಿಗೆ ಸನ್ನೆಮಾಡುವ ಬೋಸರಗಿತ್ತಿಯಂತೆ ಪ್ರಾಣಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಹರಿಸಿ ಹೊಡೆವಡಲೇತಕ್ಕೆ? ಇದು ಕಾರಣ ಸೌರಾಷ್ಟ್ರ ಸೋಮೇಶ್ವರಾ, ಇಂತಪ್ಪ ಪಾಪಿಗಳ ನುಡಿಸಿದಡೆ ಅಘೋರನರಕ ತಪ್ಪದಯ್ಯಾ.
--------------
ಆದಯ್ಯ
ಅಶನಕ್ಕಾಗಿ ವನಸಕ್ಕಾಗಿ ದೆಸೆ ದೆಸೆಯಲ್ಲಿರ್ದವರೆಲ್ಲ ನೆರೆದ ಪರಿಯ ನೋಡಾ. ಒಬ್ಬರ ನುಡಿ ಒಬ್ಬರಿಗೆ ಸೊಗಸದ ಕಾರಣ ಮಥನಕರ್ಕಶದಲ್ಲಿರ್ಪ ಪರಿಯ ನೋಡಾ. ಅಯ್ಯಾ ಜೀಯಾ ದೇವರು ಎಂಬರು ಮತ್ತೊಂದು ಮಾತ ಸೈರಿಸದೆ. ಎಲವೊ ಎಲವೊ ಎಂದು ಕುಲವೆತ್ತಿ ನುಡಿವರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನೀ ಮಾಡಿದ ಮಾಯದ ಬಿನ್ನಾಣದ ಮರೆಯಲ್ಲಿದ್ದವರ ಕಂಡು ನಾ ಬೆರಗಾದೆನು.
--------------
ಸ್ವತಂತ್ರ ಸಿದ್ಧಲಿಂಗ
ಅವರನಿವರಿಗೆ ಹೇಳಲದೇಕೆ, ಇವರನವರಿಗೆ ಹೇಳಲದೇಕೆ? ಒಬ್ಬರಿಗೆ ಹೇಳಿ ಕೂಗಿಡಲೇಕೆ, ಒಬ್ಬರಿಗೆ ಕಣ್ಣುಗಳ ಹರಹರಿಕೆ. ಕಪಿಲಸಿದ್ಧಮಲ್ಲಿನಾಥಾ, ನೀನಿಕ್ಕಿದ ತೊಡಕಿನ ನಾಟಕವೆಂಬುದ ನಾನರಿಯೆ ನೋಡಯ್ಯಾ.
--------------
ಸಿದ್ಧರಾಮೇಶ್ವರ
ಪತಿವ್ರತೆಯಾದಡೆ ಪರಪುರುಷರ ಸಂಗವೇತಕೆ? ಲಿಂಗಸಂಗಿಯಾದಡೆ ಅನಂಗಸಂಗವೇತಕೆ? (ಸ್ಥಾವರಲಿಂಗಸಂಗವೇತಕೆ) ಕಂಡ ಕಂಡವರ ಹಿಂದೆ ಹರಿವ ಚಾಂಡಾಳಗಿತ್ತಿಯಂತೆ: ಒಬ್ಬರ ಕೈವಿಡಿದು, ಒಬ್ಬರಿಗೆ ಮಾತಕೊಟ್ಟು, ಒಬ್ಬರಿಗೆ ಸನ್ನೆಗೆಯ್ವ ಬೋಸರಿಗಿತ್ತಿಯಂತೆ ಪ್ರಾಣಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಹರಸಿ ಹೊಡವಡಲೇಕೆ? ಪಾದೋದಕ ಪ್ರಸಾದ ಜೀವಿಯಾದ ಬಳಿಕ ಅನ್ಯರಿಗೆ ಕೈಯಾನಲೇಕೆ? ಇದು ಕಾರಣ ಕೂಡಲಚೆನ್ನಸಂಗಯ್ಯಾ ಇಂತಪ್ಪ ಪಾಪಿಗಳನೆನಗೆ ತೋರದಿರಯ್ಯಾ.
--------------
ಚನ್ನಬಸವಣ್ಣ
-->