ಅಥವಾ

ಒಟ್ಟು 7 ಕಡೆಗಳಲ್ಲಿ , 4 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

'ಅಯ್ಯಾ, ಮಹಾಲಿಂಗೈಕ್ಯಾನುಭಾವಿಯೆಂದು' ಪೂರ್ವಾರ್ಜಿತವನುಂಡಡೆ ಭಂಗ; ಹರಶರಣೆಂದು ಭವಮಾಲೆಗೆ ಒಳಗಾದಡೆ ಭಂಗ. ಹರವಶವೆನಿಸಿ ವಿಧಿವಶವೆನಿಸಿದಡೆ ಅದು ನಿಮಗೆ ಭಂಗ ಕಾಣಾ ಶಂಭುಜಕ್ಕೇಶ್ವರಾ.
--------------
ಸತ್ಯಕ್ಕ
ಕುಳಿತಲ್ಲಿ ಎರಡು, ನಿಂದಲ್ಲಿ ನಾಲ್ಕು, ನಡೆನುಡಿಯಲ್ಲಿ ಎಂಟು, ಅರೆನಿದ್ದೆಯಲ್ಲಿ ಹದಿನಾರು. ರತಿಸಂಗದಲ್ಲಿ ಮೂವತ್ತೆರಡಂಗುಲ ರೇಚಕ, ತದರ್ದ ಪೂರಕ, ಹೊರಗು ಒಳಗಾದಡೆ ಕೂಡಲಚೆನ್ನಸಂಗಯ್ಯನಲ್ಲಿ ಸಂಯೋಗ.
--------------
ಚನ್ನಬಸವಣ್ಣ
ಲಿಂಗ ಛಿನ್ನ ಭಿನ್ನವಾದಡೆ ಸ್ಥೂಲಸೂಕ್ಷ್ಮವನರಿಯಬೇಕು. ಸ್ಥೂಲವಾವುದು ಸೂಕ್ಷ್ಮವಾವುದು ಎಂದಡೆ : ಲಿಂಗದ ಶಕ್ತಿಪೀಠದಲ್ಲಿ ಅಕ್ಕಿಯ ತೂಕ ಮೇಣವನೊತ್ತಿ ನೋಡಿದಲ್ಲಿ ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೆಚ್ಚಾದಡೆ ಸೂಕ್ಷ್ಮ ಮತ್ತಂ, ಲಿಂಗದ ಕಟಿಯಲ್ಲಿ ಅರ್ಧ ಅಕ್ಕಿಯ ತೂಕ ಮೇಣವನು ಒತ್ತಿ ನೋಡಿದಲ್ಲಿ ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೆಚ್ಚಾದಡೆ ಸೂಕ್ಷ್ಮ. ಮತ್ತಂ, ಲಿಂಗದ ವರ್ತುಳ ಗೋಮುಖದಲ್ಲಿ ಅರ್ಧ ಅಕ್ಕಿಯ ಸರಿಭಾಗವ ಮಾಡಿದಲ್ಲಿ ಗಿರ್ದವೆನಿಸಿತ್ತು. ಆ ಗಿರ್ದ ಅಕ್ಕಿಯ ತೂಕ ಮೇಣವನ್ನು ಒತ್ತಿ ನೋಡಿದಲ್ಲಿ ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೆಚ್ಚಾದಡೆ ಸೂಕ್ಷ್ಮ. ಮತ್ತಂ, ಲಿಂಗದ ನಾಳ ಗೋಳಕದಲ್ಲಿ ಎಳ್ಳಿನ ತೂಕ ಮೇಣವನ್ನು ಒತ್ತಿ ನೋಡಿದಲ್ಲಿ ಆ ಮೇಣ ಒಳಗಾದಡೆ ಸ್ಥೂಲ, ಆ ಮೇಣ ಹೊರಗಾದಡೆ ಸೂಕ್ಷ್ಮ. ಮತ್ತಂ, ಲಿಂಗದ ಮಸ್ತಕದಿಂದೆ ಕೆಳಗಣ ಪೀಠಪರಿಯಂತರವಾಗಿ ಕೂದಲು ಮುಳುಗುವಷ್ಟು ಸೀಳಿದಡೆ ಸ್ಥೂಲ, ಆ ಕೂದಲು ಹೆಚ್ಚಾದಡೆ ಸೂಕ್ಷ್ಮ. ಈ ಉಭಯಾರ್ಥವ ತಿಳಿದು ಸೂಕ್ಷ್ಮವಾದಡೆ ಮುನ್ನಿನಂತೆ ಧರಿಸಿಕೊಳ್ಳಬೇಕು. ಸ್ಥೂಲವಾದಡೆ ಆ ಲಿಂಗದಲ್ಲಿ ಐಕ್ಯವಾಗಬೇಕು. ಅದೆಂತೆಂದೊಡೆ: ``ವ್ರೀಹಿ ವ್ರೀಹ್ಯರ್ಧ ವಿಚ್ಛಿನ್ನಂ ಕೇಶಗ್ರಾಹ್ಯಂ ಪ್ರಮಾದತಃ | ಪೀಠಾದಿ ಲಿಂಗಪರ್ಯಂತಂ ತ್ಯಜೇತ್ ಪ್ರಾಣಾನ್ ನಗಾತ್ಮಜೇ ||'' ಮತ್ತಂ; ``ತಂಡುಲಾರ್ಧಂ ಪೀಠಮಧ್ಯಂ ತದರ್ಧಂ ವೃತ್ತಗೋಮುಖಂ | ತಿಲಮಾತ್ರ ಯೋನಿಲಿಂಗಂ ತದಾಧಿಕ್ಯಂ ತ್ಯಜೇದಸೂನ್ ||'' ಎಂದುದಾಗಿ, ಇಂತಪ್ಪ ಲಿಂಗೈಕ್ಯರಾದ ಮಹಾಶರಣರು ಮೂರುಲೋಕಕ್ಕೆ ಅಧಿಕರು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅರ್ಚನೆಗೊಳಗಾಯಿತ್ತು ಲಿಂಗವೆಂಬರು, ಅದು ಹುಸಿ, ನಿಲ್ಲು. ಪೂಜನೆಗೊಳಗಾಯಿತ್ತು ಲಿಂಗವೆಂಬರು, ಅದು ಹುಸಿ, ನಿಲ್ಲು. ಇಂತೀ ಉಭಯದೊಳಗಾದ ಅಷ್ಟವಿಧಾರ್ಚನೆ, ಷೋಡಶೋಪಚಾರಕ್ಕೊಳಗಾಯಿತ್ತು ಲಿಂಗವೆಂಬರು, ಇಲ್ಲ, ಇಂತೀ ನೇಮ ಹುಸಿ, ನಿಲ್ಲು. ಇಂತೀ ನೇಮಕ್ಕೆ ಒಳಗಾದಡೆ, ಇಷ್ಟಾರ್ಥ ಕಾಮ್ಯಾರ್ಥ ಮೋಕ್ಷಾರ್ಥ, ತನಗೆ ದೃಷ್ಟದಲ್ಲಿ ಆದುದಿಲ್ಲ. [ಇಹ]ದಲ್ಲಿ ಕಾಣದೆ, ಪರದಲ್ಲಿ ಕಂಡೆನೆಂಬುದು, ಹುಸಿ, ಸಾಕು ನಿಲ್ಲು. ಕುರುಹಿನಿಂದ ಕಾಬಡೆ, ತನ್ನಿಂದಲೋ, ಕುರುಹಿನಿಂದಲೋ ? ಅರಿವಿನಿಂದಲೋ, ಕುರುಹಿನಿಂದಲೋ ? ಕುರುಹಿನಿಂದಲರಿದೆಹೆನೆಂದಡೆ, ಆ ಅರಿವಿನಿಂದ ಬೇರೊಂದು ಕಂಡೆಹೆನೆಂದಡೆ, ಕಾಣಿಸಿಕೊಂಡುದು ನೀನೋ, ನಾನೋ ? ಇಂತುಭಯವೇನೆಂದರಿಯದಿಪ್ಪುದೆ ಬೆಳಗಿನ ಕಳೆಯ ಕಾಂತಿಯೊಳಗಣ ನಿಶ್ಚಯ ತಾನಾದ ಮತ್ತೆ ಏನೂ ಎನಲಿಲ್ಲ, ಅದು ತಾನೇ. ಅದು ತಾ[ನೇನೂ] ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->