ಅಥವಾ

ಒಟ್ಟು 8 ಕಡೆಗಳಲ್ಲಿ , 6 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೂಡಿದ ಧನವೆಲ್ಲವನು ಗುರುಲಿಂಗಜಂಗಮಕ್ಕೆ ವಂಚನೆಯ ಮಾಡಿ ಒಳಗಿಟ್ಟುಕೊಂಡು, ನೆಲನ ತೋಡಿ ಬಚ್ಚಿಟ್ಟುಕೊಂಡು. ಹಲವು ತೆರದ ಆಭರಣಂಗಳ ಮಾಡಿಸಿ, ಕರ ಚರಣ ಉರ ಕರ್ಣಂಗಳೊಳಗಿಟ್ಟುಕೊಂಡು, ಮತ್ತಿಷ್ಟು ಬದುಕಾಗಲೆಂದು ತನ್ನ ಕೈಯೊಳಗಿನ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡುವ ಲಿಂಗಪೂಜಕನ ಪರಿ ಎಂತೆಂದೊಡೆ; ಆ ಭಕ್ತನು ಪಂಚಾಬ್ಥಿಷೇಕದಿಂದ ಲಿಂಗಕ್ಕೆ ಮಜ್ಜನವ ನೀಡಿದಡೆ ಲಿಂಗದ ಚಿತ್ತದಲ್ಲಿ ಸುಣ್ಣ ನೀರನೆತ್ತಿ ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ವಿಭೂತಿಯ ಧರಿಸಿದಡೆ ಲಿಂಗದ ಚಿತ್ತದಲ್ಲಿ ಬೂದಿಯ ಬೊಕ್ಕಣವ ಕಟ್ಟಿ ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ಗಂಧವ ಧರಿಸಿದರೆ ಲಿಂಗದ ಚಿತ್ತದಲ್ಲಿ ಚಂಡಿಟ್ಟು ಬಾಜಿಸಿದಂತಾಯಿತ್ತಯ್ಯಾ ! ಆ ಭಕ್ತನು ಅಕ್ಷತೆಯನೇರಿಸಿದರೆ ಲಿಂಗದ ಚಿತ್ತದಲ್ಲಿ ಕಲ್ಲು ಹೊರಿಸಿ ಬಾದ್ಥಿಸಿದಂತಾಯಿತ್ತಯ್ಯಾ ! ಆ ಭಕ್ತನು ಪುಷ್ಪವ ಧರಿಸಿದರೆ ಲಿಂಗದ ಚಿತ್ತದಲ್ಲಿ ಬೆನ್ನ ಮೇಲೆ ಹೇರು ಹೊರಿಸಿದಂತಾಯಿತ್ತಯ್ಯಾ ! ಆ ಭಕ್ತನು ಧೂಪವ ಬೀಸಿದರೆ ಲಿಂಗದ ಚಿತ್ತದಲ್ಲಿ ಅರವನಿಕ್ಕಿ ಬಾದ್ಥಿಸಿದಂತಾಯಿತ್ತಯ್ಯಾ ! ಆ ಭಕ್ತನು ದೀಪಾರತಿಯನೆತ್ತಿದರೆ ಲಿಂಗದ ಚಿತ್ತದಲ್ಲಿ ಪಂಜುಗಳ್ಳರು ಬಂದು ಮೋರೆಯ ಸುಟ್ಟು ಬಾ[ದ್ಥಿ]ಸಿದಂತಾಯಿತ್ತಯ್ಯಾ ! ಆ ಭಕ್ತನು ಸ್ತೋತ್ರಮಂತ್ರವ ನುಡಿದರೆ ಲಿಂಗದ ಚಿತ್ತದಲ್ಲಿ ಕರ್ಣದೊಳಗೆ ತೊಣಚಿ ಹೊಕ್ಕು ಗೋಳಿಟ್ಟು ಬಾದ್ಥಿಸಿದಂತಾಯಿತ್ತಯ್ಯಾ ! ಇಂತಪ್ಪ ಲಿಂಗಬಾಧಕರನು ಲಿಂಗಪೂಜಕರೆನಬಹುದೆ ? ಆತನ ಅಂಗಳವ ಮೆಟ್ಟಬಹುದೆ ? ಇದರ ಇಂಗಿತವ ನಿಜಭಾವವುಳ್ಳ ಶರಣರು ನೀವೇ ತಿಳಿದು ನೋಡಿರೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಸತಿ ತಪ್ಪಿ ಪಾರದ್ವಾರವ ಮಾಡಿದಲ್ಲಿ, ಒಳಗಿಟ್ಟುಕೊಂಡು ಸಂದುಸಂಶಯವಿಲ್ಲದಿದ್ದಡೆ, ಗುರುಲಿಂಗಜಂಗಮಕ್ಕೆ ಉದಾಸೀನವ ಮಾಡಿದಡೆ, ತಪ್ಪನೊಪ್ಪಬಹುದು. ಅಲ್ಲಿಗೆ ದ್ವೇಷ, ಇಲ್ಲಿಗೆ ಶಾಂತಿಯೇ? ಇದು ಭಕ್ತಿಯ ಬಲ್ಲವರ ಮತವಲ್ಲ. ಸತಿಸುತ ಬಂಧುಗಳು ತಪ್ಪಿದಲ್ಲಿ, ಭಕ್ತಿಗೆ ಅನುಸರಣೆಯ ಮಾಡಿದಡೆ, ಲಿಂಗಕ್ಕೆ ಮಜ್ಜನಕ್ಕೆರೆದಡೆ, ಜಂಗಮ ಪ್ರಸಾದವ ಕೊಂಡಡೆ, ಆ ಅಂಗ ಧರೆಯಲ್ಲಿ ನಿಂದಿತ್ತಾದಡೆ, ನಾ ನಿಂದ ಕಾಯಕಕ್ಕೆ ಭಂಗ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜನನ ಸೂತಕ ಮರಣ ಸೂತಕಂಗಳ ಕಳೆದು ಶುದ್ಧವಾದೆನೆಂಬ ಅಜ್ಞಾನಿ ಜಡಜೀವಿಗಳು ನೀವು ಕೇಳಿರೋ! ಪೃಥ್ವಿ ಶುದ್ಧವೆಂಬಿರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಅಪ್ಪು ಶುದ್ಧವಲ್ಲ. ಅಗ್ನಿ ಶುದ್ಧವೆಂಬಿರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಅಗ್ನಿ ಶುದ್ಧವಲ್ಲ. ಅಪ್ಪು ಶುದ್ಧವೆಂಬಿರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ಪೃಥ್ವಿ ಶುದ್ಧವಲ್ಲ. ಅಪ್ಪು ಶುದ್ಧವೆಂಬರಿ, ಇಪ್ಪತ್ತೊಂದು ಲಕ್ಷ ಜೀವರಾಶಿಗಳು ಅಲ್ಲಿಯೇ ಹುಟ್ಟಿ, ಅಲ್ಲಿಯೇ ಹೊಂದಿದವಾಗಿ ವಾಯು ಶುದ್ಧವಲ್ಲ. ಆಕಾಶ ಶುದ್ಧವೆಂಬಿರಿ, ಈ ಚತುರ್ವಿಧ ತತ್ವಂಗಳ ಒಳಗಿಟ್ಟುಕೊಂಡು ಈ ಪ್ರಕಾರವಾದ ಕಾರಣ ಆಕಾಶ ಶುದ್ಧವಲ್ಲ. ಇವು ಶುದ್ಧವಹ ಪರಿ ಎಂತೆಂದೊಡೆ: ಈ ಪಂಚತತ್ವಂಗಳು ಹುಟ್ಟಿದವು ನಮ್ಮ ಸದಾಶಿವನ ಸಿರಿಯಪ್ಪದೊಂದು ಇಷ್ಟಲಿಂಗದಲ್ಲಿ. ಆ ಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡಿ ಸರ್ವ ರುಚಿಪದಾರ್ಥವನು ತಂದು ಆ ಲಿಂಗಕ್ಕೆ ಕೊಟ್ಟಲ್ಲಿ, ಲಿಂಗಪ್ರಸಾದವದು ಅಂಗಕ್ಕೆ ಲೇಸಾಗಲೆಂದು, ಕೊಂಬಾತನ ಸರ್ವಾಂಗವೆಲ್ಲ ಶುದ್ಧವಯ್ಯಾ. ಆತನಿಪ್ಪ ಗೃಹವೇ ಪುಣ್ಯಕ್ಷೇತ್ರವು, ಅಂತಹವರ ಪಾದಕ್ಕೆ ಶರಣಾರ್ಥಿ. ಈ ವಿವರವನರಿಯದೆ ತನ್ನ ಕರದ ಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡದೆ, ಭೋಜನ ಪದಾರ್ಥ ನೀರು ರೊಟ್ಟಿ ಮುಟ್ಟಿಗೆ ಗುಗ್ಗರಿ ಸೀತೆನಿ ಬೆಳಸಿ ಕಾಯಿ ಕಸಿಕು ಹಣ್ಣು ಹಂಪಲ ಹಾಲು ಮೊಸರು ಮಜ್ಜಿಗೆ ತುಪ್ಪ ಸಕ್ಕರೆ ಹೋಳು ವೀಳೆಯ -ಇವನೆಲ್ಲವನು ತನ್ನ ಲಿಂಗಕ್ಕೆ ಕೊಡದೆ, ಅಂಗಕ್ಕೆ ಲೇಸಾಗಲೆಂದು ತಿಂಬುವನು ಅವನೀಗ ತಾನೇ ಶುದ್ಧ ಹೊಲೆಯನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಹಲವುತೆರದ ಕ್ರೀಯನಾಧರಿಸಿ ನಡೆವಲ್ಲಿ ಅಂಗಕ್ಕೆ ಆಚಾರ, ಮನಕ್ಕೆ ಅರಿವು ಮುಂತಾಗಿ, ಪೂರ್ವದ ಸ್ವಸ್ಥಾನ, ಉತ್ತರದ ನಿಶ್ಚಯವ ಕಂಡು, ಸತ್ಕ್ರೀಯಿಂದ ಆದರಿಸಿ, ಪರಧನ ಪರಸತಿ ಪರಾಪೇಕ್ಷೆ ಅನ್ಯನಿಂದೆ ದುರ್ಗುಣ ದುಶ್ಚರಿತ್ರ ದುರ್ವಿಕಾರ ದುರ್ಬೋಧೆ ಇಂತೀ ಅನ್ಯವ ನೇತಿಗಳೆದು, ತನಗೆ ಅನ್ಯವಿಲ್ಲದುದ ಅಂಗೀಕರಿಸಿ, ತಾ ಹಿಡಿದ ವ್ರತಕ್ಕೆ ತನ್ನ ಸತಿಸುತ, ತನ್ನ ಕ್ರೀ ಮುಂತಾದ ಒಡೆಯರು ಭಕ್ತರು ಸಹವಾಗಿ ತಾ ತಪ್ಪದೆ, ತಪ್ಪಿದವರ ಕಂಡು ಒಳಗಿಟ್ಟುಕೊಂಡು ಒಪ್ಪದೆ ಇಪ್ಪ ಭಕ್ತನ ಸತ್ಯದ ಕಾಯವಳಿಯಿತ್ತು ಉಳಿಯಿತ್ತೆಂಬ ಸಂದೇಹವಿಲ್ಲ. ಆತನಿಹಪರದಲ್ಲಿ ಸುಖಿ. ಆತನಾಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ವಂದಿಸಿ ನಿಂದಿಸುವ ಸಂದೇಹಿಯ ಮನೆಯ ಕೂಳು ಹಂದಿಯ ಬಾಯ ತುತ್ತ ನಾಯಿ ಕಿತ್ತುಕೊಂಡು ತಿಂದಂತಾಯಿತ್ತು ಕಾಣ. ಅದೇನು ಒಡಲ ಉಪಾಧಿಗೆ ತನ್ನ ನಿಂದಿಸಿದುದನರಿಯದೆ ಭಕ್ತನೆಂದು ಒಳಗಿಟ್ಟುಕೊಂಡು ನಡೆವವರನೊಲ್ಲೆ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಒಳಗಿಟ್ಟುಕೊಂಡು ನಡೆದರೂ ನಡೆಯಲಿ; ಅದಕೇನು? ಶಿವಶರಣರಿಗೆ ತಥ್ಯ ಮಿಥ್ಯ ಸಲುವುದೆ? ಸಲ್ಲದೆಂದುದಾಗಿ ಆದಿ-ವ್ಯಾಧಿ, ಸುಖ-ದುಃಖ, ಭಯ-ಮೋಹ, ಪುಣ್ಯ-ಪಾಪ, ಇಹ-ಪರವೆಂಬ ಉಪಾಧಿಯ ಹೊದ್ದದೆ ಆಚಾರ ಅನಾಚಾರವೆಂಬುದರಿಯದಿರ್ದಡೆ ಜಲದೊಳಗಣ ಸೂರ್ಯನಂತೆ ವಿಶ್ವಪ್ರಪಂಚ ಹೊದ್ದಿಯು ಹೊದ್ದದೆ ಬೆರಸಿಯು ಬೆರಸದೆ ಸರ್ವಸಾಕ್ಷಿಕನಾಗಿರಬಲ್ಲರೆ ಆತಂಗೆ ಸಲುವುದೀ ಮತ ಆಚಾರದೆಡೆಯಲ್ಲಿ ಅನುಸರಣೆಯುಂಟೇ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜೀವನ್ಮುಕ್ತಿ ಯಾವುದೆಂದಡೆ ಹೇಳಿಹೆ ಕೇಳಿರಯ್ಯಾ. ಜೀವನ ಬುದ್ಧಿಯ ಬಿಟ್ಟುದು ಜೀವನ್ಮುಕ್ತಿ. ಜೀವನ ಬುದ್ಧಿ ಯಾವುದೆಂದಡೆ : ಜ್ಞಾನಗುರುಗಳಿಂದ ಜ್ಞಾನವ ಪಡೆದು ಅಂಗಲಿಂಗಸಂಗ ಸಮರಸವಾದುದೇ ಜೀವನ್ಮುಕ್ತಿ. ಇಂಥದ ಬಿಟ್ಟು ತಾನು ಮಂಗಬುದ್ಧಿಯಿಂದ ನಡೆದು ಜ್ಞಾನಪ್ರಕಾಶವ ಕಾಣಲಿಲ್ಲವೆಂದು ಮತ್ತೊಬ್ಬ ಗುರುಗಳಲ್ಲಿ ತಿಳಿಯಬೇಕೆಂಬರು. ಅವರಲ್ಲಿ ಏನು ಇದ್ದಿತೊ ! ಹೀಗೆಂಬುದೇ ಜೀವನ ಬುದ್ದಿಯು. ಹೊಲವ ಬಿತ್ತುವ ಒಕ್ಕಲಿಗ ಯಾವನಾದಡೆ ಆಗಲಿ ಬೀಜವ ಬಿತ್ತುವ ಪರಿ ಒಂದೇ. ಮತ್ತೆ ಗೊಲ್ಲಾಳಯ್ಯಂಗೆ ಕುರಿಯ ಹಿಕ್ಕೆಯ ದೃಢದಿಂದ ಪೂಜಿಸಿ ಗುರು ಪ್ರಸನ್ನತೆಯ ಹಡೆದುದಿಲ್ಲವೆ ? ಅವಿಶ್ವಾಸದಿಂದೆ, ಅಂಗಬುದ್ಧಿಯಿಂದೆ ಹಲವು ಗುರು, ಹಲವು ಲಿಂಗ ಅರ್ಚಿಸಿ ಪೂಜಿಸಿ ಹಲವು ಭವದಲ್ಲಿ ಬಂದರು ನೋಡಾ ! ಜೀವನ ಬುದ್ಧಿ ಎಂತೆಂದಡೆ : ಆಶೆ ರೋಷ ಅಹಂಕಾರ ಅರಿಷಡ್ವರ್ಗಂಗಳು ಅಷ್ಟಮದಂಗಳು, ಅನೃತ, ಪರಧನ, ಪರಸ್ತ್ರೀ, ಪರನಿಂದೆ, ಪರಹಿಂಸೆ ಇವೆಲ್ಲವೂ ಜೀವನಬುದ್ಧಿ. ಇಂತಿವೆಲ್ಲವ ಒಳಗಿಟ್ಟುಕೊಂಡು ನಾವು ಜೀವನ್ಮುಕ್ತರೆಂಬರು ಎಂತಹರೋ ನೋಡಾ! ದೀಪವೆಂದಡೆ ಕತ್ತಲೆ ಹೋಯಿತ್ತೆ ? ಅಮೃತವೆಂದಡೆ ಹಸಿವು ಹೋಯಿತ್ತೆ ? ಉದಕವೆಂದಡೆ ತೃಷೆ ಹೋಯಿತ್ತೆ ? ಇಂಥವರಿಗೆ ಮುಕ್ತಿಯಿಲ್ಲವಯ್ಯಾ. ಮತ್ತೆ ಜೀವನ್ಮುಕ್ತಿ ಹೇಗೆಂದಡೆ - ಶರಣಸತಿ ಲಿಂಗಪತಿಯೆಂಬ ಭೇದವ ತಿಳಿದಡೆ ಜೀವನ್ಮುಕ್ತಿ. ಈ ತ್ರಿವಿಧತನವು ಮೀಸಲಾಗಿ ತ್ರಿವಿಧಲಿಂಗಕ್ಕೆ ಅರ್ಪಿಸಬಲ್ಲಾತನೆ ಜೀವನ್ಮುಕ್ತನು ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಇಂತಪ್ಪ ಭೇದವ ತಿಳಿಯದೆ ಪುರಾತರ ವಚನವ ನೋಡಿ ಕೇಳಿ, ಹೊನ್ನು, ಹೆಣ್ಣು, ಮಣ್ಣು ಬಿಟ್ಟು ಪ್ರಪಂಚವ ಬಿಟ್ಟೆವೆಂಬಿರಿ, ಬಿಟ್ಟ ಪರಿಯ ಪೇಳಿರಯ್ಯ ? ಹೊನ್ನಲ್ಲವೇ ಆತ್ಮ ? ಹೆಣ್ಣಲ್ಲವೇ ಮನಸ್ಸು ? ಮಣ್ಣಲ್ಲವೇ ಪೃಥ್ವಿತತ್ವಾಂಶಭೂತವಾದ ದೇಹವು ? ಇಂತಪ್ಪ ಹೊನ್ನು, ಹೆಣ್ಣು, ಮಣ್ಣು ಒಳಗಿಟ್ಟುಕೊಂಡು ಬಾಹ್ಯದ ಹೊನ್ನು ಹೆಣ್ಣು ಮಣ್ಣನೆ ಬಿಟ್ಟರೆ, ಬಿಟ್ಟಂತಾಯಿತೇ ಎಲಾ ಮರುಳ ಮಾನವರಿರಾ ? ದೇಹವ ದಗ್ಧಮಾಡಬೇಕೆಂದು ಅನ್ನ ಉದಕವ ಬಿಟ್ಟು, ಅರಣ್ಯಕ್ಕೆ ಹೋಗಿ, ಕಂದಮೂಲ ಪರ್ಣಾಹಾರವ ಭಕ್ಷಿಸಿ ತನು ಒಣಗಿಸಿದರೇನು ದೇಹದಗ್ಧವಾದಂತಾಯಿತೇ ? ಆಗದು. ಹುತ್ತದ ಮೇಲೆ ಬಡಿದು ಸರ್ಪನ ಕೊಂದಂತಾಯಿತಲ್ಲದೆ ದೇಹ ದಗ್ಧವಾಗಲರಿಯದು ಎಲೆ ಮರುಳ ಮಾನವರಿರಾ. ಅದೆಂತೆಂದೊಡೆ: ಶಿವಜ್ಞಾನೋದಯವಾಗಿ ಗುರುಕಾರುಣ್ಯವ ಪಡದು, ಲಿಂಗಾಂಗಸಂಬಂಧಿಯಾದ ಶಿವಶರಣನ ದೇಹವು ಜ್ಞಾನಾಗ್ನಿಯಲ್ಲಿ ದಗ್ಧವಾಯಿತಲ್ಲದೆ ಉಳಿದ ಜೀವಾತ್ಮರ ದೇಹವು ದಗ್ಧವಾಗಲರಿಯದು. ದೇಹದ ಗುಣವ ಬಿಡಬೇಕೆಂಬಿರಿ, ಬಿಡಲಿಕ್ಕೇನು ಕಟ್ಟಿದ ಪಶುಗಳೆ ? ಬಿಡಲಿಕ್ಕೇನು ಹಟ್ಟಿಯ ಪಶುಗಳೆ ? ಕಣ್ಣಿಗೆ ಕಾಣಿಸದ, ಕೈಗೆ ಸಿಕ್ಕದ ಗುಣಗಳ ಬಿಡಬೇಕೆಂಬಿರಿ. ಇದಕ್ಕೆ ದೃಷ್ಟಾಂತ: ಸೂರ್ಯನ ಬಿಂಬ ಜಲದಲ್ಲಿ ಕಾಣುವದು. ಆ ಬಿಂಬವ ಹಿಡಿಯಬಲ್ಲರೆ ಗುಣವ ಬಿಟ್ಟರೆಂಬೆ. ಜ್ಯೋತಿಯ ಪ್ರಭೆಯ ಕಡೆಯಕ್ಕೆ ತೆಗೆದು ಹಿಡಿಯಬಲ್ಲರೆ ಗುಣವ ಬಿಟ್ಟರೆಂಬೆ. ದೇಹದೊಳಗಣ ಪ್ರಾಣವ ಬಹಿಷ್ಕರಿಸಿ ಹಿಡಿಯಬಲ್ಲರೆ ಗುಣವ ಬಿಟ್ಟರೆಂಬೆ. ಇಂತೀ ಭೇದವ ತಿಳಿಯದೆ ವನವಾಸದಲ್ಲಿ ತನುಮನವ ಬಳಲಿಸಿ ಭವದತ್ತ ಮುಖವಾಗಿ ಹೋಗುವ ಹೇಸಿಮೂಳರ ಕಂಡು ನಾಚಿತ್ತಯ್ಯ ಎನ್ನ ಮನವು, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->