ಅಥವಾ

ಒಟ್ಟು 8 ಕಡೆಗಳಲ್ಲಿ , 7 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಳ್ಳೆ ಪದಾರ್ಥಬಂದಡೆ ನೀಡೆಂಬಿರಿ, ಕೀಳುಪದಾರ್ಥಬಂದಡೆ ಬೇಡೆಂಬಿರಿ. ಕಮ್ಮಾದರೆ ನೀಡೆಂಬಿರಿ, ಆ ಪದಾರ್ಥ ಹೆಚ್ಚಾದರೆ ಪ್ರಸಾದ[ವೆಂದು] ಕೈಕೊಂಬಿರಿ. ಕಡ್ಡಿ ಹರಳು ಮೊದಲಾದ ಕಠಿನಪದಾರ್ಥ ಬಂದಡೆ, ಜಿಹ್ವೆಯಲ್ಲಿ ತೊಂಬಲವನಾರಿಸಿಬಿಡುವಿರಿ. ಮಕ್ಷಿಕ ಮೊದಲಾದ ಕ್ರಿಮಿಗಳು ಬಿದ್ದರೆ ಆರೂ ಅರಿಯದ ಹಾಗೆ ತೆಗೆದು ಸಿಪ್ಪದೆ ವರಸದೆ ಕದ್ದು ಚಲ್ಲುವಿರಿ. ಇಂತಪ್ಪ ಮೂಳಹೊಲೆಯರು ಪ್ರಸಾದಿಗಳೆಂದಡೆ ಪರಶಿವಪ್ರಸಾದಿಗಳಾದ ಶಿವಶರಣರು ಊರ ಸೂಳೆಯರ ಹಾಟಹೊಯಿಸಿ ತಲೆಯಬೋಳಿಸಿ ಪಟ್ಟಿಯ ತೆಗೆದು ಅವರ ಎಡಗಾಲಕೆರ್ಪಿನಿಂದ ಘಟ್ಟಿಸಿ ಮೂಡಲದಿಕ್ಕಿಗೆ ಅಟ್ಟಿದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಉಳ್ಳಿ ಇಂಗು ಬೆಲ್ಲ ಮೆಣಸು ಇವ ಕೊಳ್ಳಬಾರದುಯೆಂಬ ಒಳ್ಳೆ ವ್ರತಿಗಳು ನೀವು ಕೇಳಿರೊ. ಸುಳ್ಳು ಸಟೆಯ ಬಿಟ್ಟು ತಳ್ಳಿಬಳ್ಳಿಯ ಬಿಟ್ಟು ಒಳ್ಳಿತಾಗಿ ನಡೆಯಬಲ್ಲಡೆ ಬಳ್ಳೇಶ್ವರನ ಭಕ್ತರೆಂಬೆ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಶೀಲ ಶೀಲವೆಂದು ನುಡಿವುತಿರ್ಪರೆಲ್ಲರು. ಶೀಲದ ಹೊಲಬನಾರೂ ಅರಿಯರಲ್ಲ. ಕೆರೆ ಬಾವಿ ಹಳ್ಳ ಕೊಳ್ಳ ಹೊಳೆಗಳ ನೀರ ಬಳಸದಿರ್ದಡೆ ಶೀಲವೆ ? ಕೊಡಕ್ಕೆ ಪಾವಡವ ಹಾಕಿ ಚಿಲುಮೆಯ ಶೀತಳವ ತಂದಡೆ ಶೀಲವೆ ? ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಟ್ಟಡೆ ಶೀಲವೆ ? ಬೆಳೆದ ಬೆಳೆಸು ಕಾಯಿಹಣ್ಣುಗಳ ಬಿಟ್ಟಡೆ ಶೀಲವೆ ? ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಟ್ಟಡೆ ಶೀಲವೆ ? ಪರಪಾಕವ ಬಿಟ್ಟು ಸ್ವಯಪಾಕದಲ್ಲಿರ್ದಡೆ ಶೀಲವೆ ? ಅಲ್ಲಲ್ಲ. ಭವಿಕಾಣಬಾರದಂತಿರ್ದಡೆ ಶೀಲವೆ ? ಅಲ್ಲಲ್ಲ. ಅದೇನು ಕಾರಣವೆಂದೊಡೆ : ಇಂತಿವೆಲ್ಲವು ಹೊರಗಣ ವ್ಯವಹಾರವು. ಇನ್ನು ಅಂತರಂಗದ ಅರಿಷಡ್ವರ್ಗಂಗಳೆಂಬ ಭವಿಯ ಕಳೆಯಲಿಲ್ಲ. ಮಾಯಾಮೋಹವೆಂಬ ಒಳ್ಳೆ ಭಂಗಿ ಉಳ್ಳೆ ನುಗ್ಗೆಯ ಬಿಡಲಿಲ್ಲ. ಸಂಸಾರವಿಷಯರಸವೆಂಬ ಹಳ್ಳ ಕೊಳ್ಳ ಕೆರೆ ಬಾವಿಗಳ ನೀರ ನೀಗಲಿಲ್ಲ. ಅಷ್ಟಮದಂಗಳೆಂಬ ಉಪ್ಪು ಎಣ್ಣೆ ತುಪ್ಪ ಹಾಲು ಇಂಗು ಮೆಣಸು ಅಡಿಕೆ ಬೆಲ್ಲಗಳ ಬಿಡಲಿಲ್ಲ. ಸಕಲ ಕರಣಂಗಳೆಂಬ ಬೆಳಸು ಫಲಂಗಳ ಬಿಡಲಿಲ್ಲ. ಮನವೆಂಬ ಕೊಡಕ್ಕೆ ಮಂತ್ರವೆಂಬ ಪಾವಡವ ಮುಚ್ಚಿ ಚಿತ್‍ಕೋಣವೆಂಬ ಚಿಲುಮೆಯಲ್ಲಿ ಚಿದಾಮೃತವೆಂಬ ಶೀತಳವ ತಂದು ಚಿನ್ಮಯಲಿಂಗಕ್ಕೆ ಅಭಿಷೇಕವ ಮಾಡಲಿಲ್ಲ. ಇಂತೀ ಅಂತರಂಗದ ಪದಾರ್ಥಂಗಳ ಬಿಟ್ಟು ಮುಕ್ತಿಯ ಪಡೆವೆನೆಂಬ ಯುಕ್ತಿಗೇಡಿಗಳಿಗೆ ಭವಬಂಧನಂಗಳು ಹಿಂಗಲಿಲ್ಲ, ಜನನಮರಣಂಗಳು ಜಾರಲಿಲ್ಲ, ಸಂಸಾರದ ಮಾಯಾಮೋಹವ ನೀಗಲಿಲ್ಲ. ಇಂತಪ್ಪ ಅಜ್ಞಾನಜೀವಿಗಳ ವಿಧಿಯೆಂತಾಯಿತ್ತೆಂದಡೆ : ಹುತ್ತದೊಳಗಣ ಹಾವ ಕೊಲುವೆನೆಂದು ಮೇಲೆ ಹುತ್ತವ ಬಡಿದ ಅರೆಮರುಳನಂತಾಯಿತ್ತು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮುಳ್ಳು ಮೂರರ ಮೇಲೆ ಕಳ್ಳ ಮೂರುತಿ ತಿರುಗುತ್ತಿಹ ನೋಡಾ. ಒಳ್ಳೆ ಗುಣಗಳ್ಳರಿಗೆ ತನ್ನ ತಳ್ಳಿ ತೋರಿಸುವ ನೋಡಾ. ಜಳ್ಳು ಜೀವಗಳ್ಳರಿಗೆ ಸಾಧ್ಯವದು ಎಳ್ಳಿನಿತಿಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹರಬೀಜವಾದಡೆ ಹಂದೆ ತಾನಪ್ಪನೆ ಒರೆಗಟ್ಟಿ ಇರಿಯದವರ ಲೋಕ ಮೆಚ್ಚುವುದೆ ಉಟ್ಟ ಚಲ್ಲಣ ಕೈಯ ಪಟ್ಟೆಯವಿಡಿದು, ಗರುಡಿಯ ಕಟ್ಟಿ ಶ್ರವವ ಮಾಡುವಂತೆ ತನ್ನ ತಪ್ಪಿಸಿಕೊಂಡಡೆ ಶಿವ ಮೆಚ್ಚುವನೆ ಅರಿಯದವರಿಗೆ ಒಳ್ಳೆ ಹೆಡೆಯನೆತ್ತಿಯಾಡುವಂತೆ ಬೊಳ್ಳೆಗನ ಭಕ್ತಿ ಕೂಡಲಸಂಗಮದೇವಾ.
--------------
ಬಸವಣ್ಣ
ಅಂಗದ ಮೇಲೆ ಲಿಂಗವಿದ್ದವರೆಲ್ಲರು ಸರಿಗಾಣಬೇಕೆಂಬರು, ಲಿಂಗಲಾಂಛನಧಾರಿಗಳೆಲ್ಲ, ಶರಣಂಗೆ ಸರಿಯೆ? ಶರಣರ ಸಂಗ ಎಂತಿಪ್ಪುದೆಂದರೆ, ಪರಮಜ್ಞಾನವೆಂಬ ಉರಿಯನೆ ಉಟ್ಟು, ಉರಿಯನೆ ತೊಟ್ಟು, ಉರಿಯನೆ ಉಂಡು, ಉರಿಯನೆ ಹಾಸಿ, ಉರಿಯನೆ ಹೊದ್ದು, ನಿರವಯಲಾದ ಶರಣಂಗೆ ನರರುಗಳು ಸರಿ ಎನ್ನಬಹುದೆ? ಹರಿಗೆ ಕರಿ ಸರಿಯೇ? ಉರಗಗೆ ಒಳ್ಳೆ ಸರಿಯೇ? ಮರುಗಕ್ಕೆ ಗರುಗ ಸರಿಯೇ? ಇಂತೀ ನಿರ್ವಯಲಾದ ಶರಣಂಗೆ ಮರ್ತ್ಯದ ನರಗುರಿಗಳು ಸರಿ ಎಂದರೆ, ನಾಯಕ ನರಕದಲ್ಲಿಕ್ಕುವ, ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಗುರುಭಕ್ತರು ವಾರ ತಿಥಿ ನಕ್ಷತ್ರ ವ್ಯತಿಪಾತ ಯೋಗ ಕರಣ ಶುಭಾಶುಭವ ನೋಡಲಾಗದು, ಕೇಳಲಾಗದು. ಅವರ ಮನೆಯಲ್ಲಿ ಬಾಲರಂಡೆ ಇಪ್ಪ ಕಾರಣ ಕೇಳಲಾಗದು. ವಾರ ತಿಥಿ ನಕ್ಷತ್ರ ಆರೈದು ಕೇಳಿದವರಿಗೆ ಗುರುವಿಲ್ಲ, ಶಿವನಿಲ್ಲ. ಅವರಿಗೆ ವಾರಗಳೇ ದೈವವಾಗಿಪ್ಪವು. ಇದಕ್ಕೆ ದೃಷ್ಟಾಂತ: ವಸಿಷ*ಮುನಿ ರಾಮ ಲಕ್ಷ್ಮಣರಿಗೆ ಒಳ್ಳೆ ಶುಭವೇಳೆಯ ಲಗ್ನವ ನೋಡಿ ತೆಗೆದುಕೊಟ್ಟನು. ಲಗ್ನವಾದ ಮೇಲೆ ಹೆಂಡತಿ ಸೀತೆಯನ್ನು ರಾವಣನೇಕೆ ಒಯ್ದ? ಮತ್ತೆ ಅವರು ದೇಶತ್ಯಾಗಿಯಾಗಿ ವನವಾಸವೇಕೆ ಹೋದರು? ಸಾಕ್ಷಿ: 'ಕರ್ಮಣಾಂ ಹಿ ಪ್ರಧಾನತ್ವಂ ಕಿಂ ಕರೋತಿ ಶುಭಗ್ರಹಃ | ವಸಿಷಾ*ದಿ ಕೃತೇ ಲಗ್ನೇ ರಾಮಃ ಕಿಂ ಭ್ರಮತೇ ವನಂ||' ಎಂದುದಾಗಿ, ಈ ನಡತೆ ಭಕ್ತಗಣಂಗಳಿಗೆ ಸಮ್ಮತವಲ್ಲ. ಸಮ್ಮತ ಹೇಗೆಂದಡೆ : ಮದುವೆಯ ಮಾಡುವಲ್ಲಿ, ಊರು ಕೇರಿಗೆ ಹೋಗುವಲ್ಲಿ, ಪ್ರಸ್ಥವ ಮಾಡುವಲ್ಲಿ, ಕೆರೆ ಬಾವಿ ಅಗಿಸುವಲ್ಲಿ, ಸಮಸ್ತ ಕಾರ್ಯಕ್ಕೆ ಗುರುಲಿಂಗಜಂಗಮ ಭಕ್ತಗಣಂಗಳ ಕೇಳಿ, ಅವರು ಹೇಳಿದ ಹಾಗೆ ಕೇಳಿ ಅಪ್ಪಣೆಯ ತಕ್ಕೊಂಡು ಸಮಸ್ತ ಕಾರ್ಯವ ಮಾಡುವುದು. ಹೀಗೆ ನಂಬಿದವರಿಗೆ ಸಿದ್ಧಿಯಾಗುವುದು. ಅದು ಹೇಗೆಂದಡೆ : ನಕ್ಷತ್ರಫಲವ ಕೇಳಿಹೆನೆಂದಡೆ, ನಮ್ಮ ಗಣಂಗಳಾದ ರಾಜೇಂದ್ರಜೋಳ, ಚೇರಮರಾಯ, ಸೌಂದರ ಪಾಂಡ್ಯ ಈ ಮೂವರ ಸೀಮೆಯ ಮೇಲೆ ಮಳೆ ಬೀಳದಿದ್ದಡೆ ಆಗ ಮೂವರು ಕೂಡಿ ಸ್ವರ್ಗಕ್ಕೆ ಹೋಗಿ ಆ ಇಪ್ಪತ್ತೇಳು ನಕ್ಷತ್ರಗಳ ಮುಂಗೈ ಕಟ್ಟಿ ತಮ್ಮ ಊರಿಗೆ ತಂದು ಸೆರೆಮನೆಯೊಳಗೆ ಹಾಕಿದುದ ಜಗವೆಲ್ಲ ಬಲ್ಲುದು. ಅಂದಿನ ಗಣಂಗಳು ಇಂದಿದ್ದಾರೆಂದು ನಂಬಿದವರಿಗೆ ಬೇಡಿದ್ದನೀವ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
-->