ಅಥವಾ

ಒಟ್ಟು 6 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಥ ಬ್ರಹ್ಮಾಂಡವ ಅನಂತಕೋಟಿ ಬ್ರಹ್ಮಾಂಡವನೊಳಕೊಂಡುದೊಂದು ಕಾಲಾಗ್ನಿರುದ್ರವೆಂಬ ಭುವನ. ಆ ಭವನದೊಳು ಓಂಕಾರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಅನಂತಕೋಟಿ ರುದ್ರರು ಅನಂತಕೋಟಿ ಬ್ರಹ್ಮರು ಅನಂತಕೋಟಿ ನಾರಾಯಣರಿಹರು ನೋಡಾ. ಅನಂತಕೋಟಿ ಇಂದ್ರರು ಅನಂತಕೋಟಿ ಚಂದ್ರರು ಅನಂತಕೋಟಿ ವೇದಪುರುಷರು ಅನಂತಕೋಟಿ ಮುನೀಂದ್ರರು ಅನಂತಕೋಟಿ ದೇವರ್ಕಳಿಹರು ನೋಡಾ ಅಪ್ರಮಾಣ ಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಾದಬಿಂದುಗಳಿಲ್ಲದಂದು ನಿರ್ಭಯನೆಂಬ ಗಣೇಶ್ವರನು, ಉತ್ಪತ್ತಿ ಸ್ಥಿತಿ ಲಯವಿಲ್ಲದಂದು ಅಕ್ಷಯನೆಂಬ ಗಣೇಶ್ವರನು, ಓದು ವೇದಂಗಳಿಲ್ಲದಂದು ಓಂಕಾರನೆಂಬ ಗಣೇಶ್ವರನು, ಯುಗಜುಗಂಗಳಿಲ್ಲದಂದು ಊಧ್ರ್ವಮುಖನೆಂಬ ಗಣೇಶ್ವರನು, ಗುಹೇಶ್ವರಲಿಂಗವಿಲ್ಲದಂದು ನಿರ್ಮಾಯನೆಂಬ ಗಣೇಶ್ವರನು.
--------------
ಅಲ್ಲಮಪ್ರಭುದೇವರು
ಬ್ರಹ್ಮರಂಧ್ರದಲ್ಲಿ ಅನಾದಿಗಣೇಶ್ವರನೆನಿಸಿ, ಸರ್ವತೋಮುಖ[ವಾ]ಗಿಪ್ಪಿರಯ್ಯ. ಲಲಾಟದಲ್ಲಿ ಆದಿಗಣೇಶ್ವರನೆನಿಸಿಪ್ಪಿರಯ್ಯ. ಬಲದ ಕರ್ಣದಲ್ಲಿ ಆತ್ಮಗಣೇಶ್ವರನೆನಿಸಿಪ್ಪಿರಯ್ಯ. ಎಡದ ಕರ್ಣದಲ್ಲಿ ಆಧ್ಯಾತ್ಮಗಣೇಶ್ವರನೆನಿಸಿಪ್ಪಿರಯ್ಯ. ಬಲದ ನಯನದಲ್ಲಿ ನಿರ್ಮಾಯನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ನಯನದಲ್ಲಿ ನಿರ್ಮಲನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ನಾಸಿಕದಲ್ಲಿ ನಿರ್ಭಯನೆಂಬ ಗಣೇಶ್ವರನೆನೆಸಿಪ್ಪಿರಯ್ಯ. ಜಿಹ್ವೆಯಲ್ಲಿ ನಿರ್ಭಾವನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬೆನ್ನಿನಲ್ಲಿ ಪಂಚವದನನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಕಂಠದಲ್ಲಿ ಜ್ಞಾನಾನಂದನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಭುಜದಲ್ಲಿ ಅಕ್ಷಯನೆಂಬ ಗಣೇಶ್ವರನೆಸಿಪ್ಪಿರಯ್ಯ. ಎಡದ ಭುಜದಲ್ಲಿ ವ್ಯೋಮಸಿದ್ಧನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ತೋಳಿನಲ್ಲಿ ಸದಾಶಿವನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ತೋಳಿನಲ್ಲಿ ಶೂಲಪಾಣಿಯೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಮುಂಗೈಯಲ್ಲಿ ಭಾಳಲೋಚನನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಮುಂಗೈಯಲ್ಲಿ ಪಶುಪತಿಯೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಬರಿಯಲ್ಲಿ ಭವಹರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಬರಿಯಲ್ಲಿ ಮೃಡನೆಂಬ ಗಣೇಶ್ವರನೆನಿಸಿಪ್ಪಿರಯ್ಯ ಹೃದಯದಲ್ಲಿ ಓಂಕಾರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ನಾಭಿಯಲ್ಲಿ ಶಂಕರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಕಟಿಯಲ್ಲಿ ಮೃತ್ಯುಂಜಯನೆಂಬ ಗಣೇಶ್ವರನೆನಿಸಿಪ್ಪಿರಯ್ಯ ಗುಹ್ಯದಲ್ಲಿ ಕಾಮಾಂತಕನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಗುಧಸ್ಥಾನದಲ್ಲಿ ಕಾಲಾಂತಕನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ತೊಡೆಯಲ್ಲಿ ಪ್ರಮಥನಾಥನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ತೊಡೆಯಲ್ಲಿ ಮಹಾಮಹೇಶ್ವರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಮಣಿಪಾದದಲ್ಲಿ ಪಟ್ಟವರ್ಧನನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಮಣಿಪಾದದಲ್ಲಿ ಚಂದ್ರಶೇಖರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಕಣಪಾದದಲ್ಲಿ ಅಖಂಡಿತನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಕಣಪಾದದಲ್ಲಿ ವ್ಯೋಮಕೇಶನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಹರಡಿನಲ್ಲಿ ಜನನ ವಿರಹಿತನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಹರಡಿನಲ್ಲಿ ವಿಶ್ವೇಶ್ವರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಮೇಗಾಲಲ್ಲಿ ಮೇಘವಾಹನನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಮೇಗಾಲಲ್ಲಿ ಈಶಾನ್ಯನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಉಂಗುಷ*ದಲ್ಲಿ ಮಣಿಭೂಷಣನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಉಂಗುಷ*ದಲ್ಲಿ ವಿರೂಪಕ್ಷನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಆರೆಪಾದದಲ್ಲಿ ಊಧ್ರ್ವಮುಖನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಅರೆಪಾದದಲ್ಲಿ ಸಚರಾಚರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಆಧಾರಸ್ಥಾನದಲ್ಲಿ ಆಚಾರಲಿಂಗವೆನಿಸಿಪ್ಪಿರಯ್ಯ. ಸ್ವಾಧಿಷಾ*ನದಲ್ಲಿ ಗುರುಲಿಂಗವೆನಿಸಿಪ್ಪಿರಯ್ಯ. ಮಣಿಪೂರಕದಲ್ಲಿ ಶಿವಲಿಂಗವೆನಿಸಿಪ್ಪಿರಯ್ಯ. ಅನಾಹತದಲ್ಲಿ ಜಂಗಮಲಿಂಗವೆನಿಸಿಪ್ಪಿರಯ್ಯ. ವಿಶುದ್ಧಿಯಲ್ಲಿ ಪ್ರಸಾದಲಿಂಗವೆನಿಸಿಪ್ಪರಯ್ಯ. ಆಜ್ಞಾಯಲ್ಲಿ ಮಹಾಲಿಂಗವೆನಿಸಿಪ್ಪಿರಯ್ಯ. ಇಂತಿವೆಲ್ಲಾ ನಾಮಂಗಳನೊಳಕೊಂಡು, `ಓಂ ನಮಃ ಶಿವಾಯ ಇತಿಮಂತ್ರಂ ಸರ್ವಮಂತ್ರಾನ್ ಸ್ಥಾಪಯೇತ್. ಮಂತ್ರಮೂರ್ತಿ ಮಹಾರುದ್ರಂ, ಓಂ ಇತಿ ಜ್ಯೋತಿರೂಪಕಂ' ಎನಿಸಿಕೊಂಡು ಬಾಹ್ಯಾಭ್ಯಂತರದೊಳು ಪರಿಪೂರ್ಣವಾಗಿ ಪ್ರಕಾಶಿಸುತ್ತಿಪ್ಪಿರಿಯಾಗಿ ಸರ್ವಾಂಗವು ಲಿಂಗಮಯವೆಂದರಿದು ಅಡಿಗಡಿಗೆ ಶ್ರೀ ವಿಭೂತಿಯನೆ ಧರಿಸುತಿಪ್ಪೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಾದ ಬಿಂದು ಕಲೆಗಳು ಇಲ್ಲದ ಮುನ್ನ, ಅತ್ತತ್ತಲೆ ಓಂಕಾರನೆಂಬ ಗಣೇಶ್ವರನಿರ್ಪ ನೋಡಾ. ಆ ಓಂಕಾರಗಣೇಶ್ವರಂಗೆ ಒಬ್ಬ ಸತಿಯಳು ಇರ್ಪಳು ನೋಡಾ. ಆ ಸತಿಯಳ ಅಂಗದಲ್ಲಿ ಐವರು ಮಕ್ಕಳು ಇರ್ಪರು ನೋಡಾ. ಐವರು ಮಕ್ಕಳು ಇಪ್ಪತ್ತೈದು ಕೇರಿಗಳಲ್ಲಿ ಸುಳಿದಾಡುತಿರ್ಪರು ನೋಡಾ. ಆ ಇಪ್ಪತ್ತೈದು ಕೇರಿಗಳ ಒಂದು ಇರುವೆ ನುಂಗಿತು ನೋಡಾ. ಆ ಇರುವೆಯ ಒಬ್ಬ ಸತಿಯಳು ನುಂಗಿದಳು ನೋಡಾ. ಆ ಸತಿಯಳ ಓಂಕಾರಗಣೇಶ್ವರನು ನುಂಗಿದನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದಶನಾದಗಳು ಇಲ್ಲದಂದು, ಸುನಾದಗಳು ನೆಲೆಗೊಳ್ಳದಂದು, ಝೇಂಕಾರವು ಮೊನೆದೋರದಂದು, ಅತ್ತತ್ತಲೆ ನಿಶ್ಚಿಂತ ನಿರಾಕುಳನಾಗಿದ್ದನಯ್ಯ. ತನ್ನ ನೆನವಿನ ಮಂತ್ರದಲ್ಲಿ ಓಂಕಾರನೆಂಬ ಮೂರ್ತಿಯಾದನಯ್ಯ. ಆ ಓಂಕಾರನೆಂಬ ಮೂರ್ತಿಂಗೆ ಚಿಚ್ಫಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಪರಶಿವನಾದ. ಆ ಪರಮಶಿವಂಗೆ ಪರಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಸದಾಶಿವನಾದ, ಆ ಸದಾಶಿವಂಗೆ ಜ್ಞಾನಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಈಶ್ವರನಾದ, ಆ ಈಶ್ವರಂಗೆ ಇಚ್ಫಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ರುದ್ರನಾದ, ಆ ರುದ್ರಂಗೆ ಕ್ರಿಯಾಶಕ್ತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ವಿಷ್ಣುವಾದ, ಆ ವಿಷ್ಣುವಿಂಗೆ ಲಕ್ಷ್ಮಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ಬ್ರಹ್ಮನಾದ, ಆ ಬ್ರಹ್ಮಂಗೆ ಸರಸ್ವತಿಯ ಸಂಬಂಧಿಸಿ ಧಾರೆಯನೆರೆದರಯ್ಯ. ಅವರಿಬ್ಬರಿಗೂ ನರಲೋಕಾದಿ ಲೋಕಂಗಳು ಆದವು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
-->