ಅಥವಾ

ಒಟ್ಟು 4 ಕಡೆಗಳಲ್ಲಿ , 4 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲರೂ ವೀರರು, ಎಲ್ಲರೂ ದ್ಥೀರರು, ಎಲ್ಲರೂ ಮಹಿಮರು, ಎಲ್ಲರೂ ಪ್ರಮಥರು. ಕಾಳಗದ ಮುಖದಲ್ಲಿ ಕಾಣಬಾರದು, ಓಡುವ ಮುಖದಲ್ಲಿ ಕಾಣಬಹುದು. ನಮ್ಮ ಕೂಡಲಸಂಗನ ಶರಣರು ದ್ಥೀರರು, ಉಳಿದವರೆಲ್ಲರೂ ಅಧೀರರು. 445
--------------
ಬಸವಣ್ಣ
ತಂದೆಯ ವಿಕಾರದಿಂದ ತಾಯಿಯ ಬಸುರಲ್ಲಿ ಬಂದು, ತಂದೆಯದು ಒಂದು ದಿನದ ಶುಕ್ಲ, ತಾಯಿಯದು ಒಂಬತ್ತು ತಿಂಗಳದ ಶೋಣಿತವು ಕೂಡಿ, ಗಟ್ಟಿಗೊಂಡು ಪಿಂಡವಾದ ಈ ಶರೀರದ ಕಷ್ಟ ಎಷ್ಟಂತ್ಹೇಳಲಿ, ಆ ತಾಯಿಯ ಉದರದಲ್ಲಿರ್ದ ಆ ಪರಿಯೆಂತೆಂದರೆ : ಕದ್ದ ಕಳ್ಳನ ಹೆಡಗುಡಿಯಕಟ್ಟಿ ಹೊಗಸಿದ ಸೆರೆಮನೆಗಿಂತ ಸಹಸ್ರ ಇಮ್ಮಡಿ ಉಪದ್ರವಾಯಿತು. ಎಡಬಲ ಮೂತ್ರದ ಹಡಕಿಯ ಬಾಧೆ, ನಡುವೆ ಕಡಿವ ಜಂತುಗಳ ಬಾಧೆ, ಕುದಿವ ಜಠರಾಗ್ನಿಯ ಬಾಧೆ, ಏರಿಳಿವ ಶ್ವಾಸಮಾರುತನ ಬಾಧೆ, ಹೆತ್ತವ್ವ ನುಂಗಿದ ತುತ್ತು ಅಳನೆತ್ತಿಗೆ ತಗಲಲು ಹತ್ತುಸಾವಿರ ಸಿಡಿಲು ಹೊಡೆದಂತಾಯಿತು. ಮೇಲೆ ಕುಡಿವ ನೀರಿನಿಂದಾದ ಸಂಕಟ ಹೇಳಲಳವಲ್ಲ. ಆ ತಾಯಿ ನಡಿವ ನುಡಿವ ಆಡುವ ಹಾಡುವ ಓಡುವ ಕೂಡ್ರುವ ಆಕಳಿಸುವ ಮಲಗುವ ಏಳುವ ಬೀಳುವ ಮೈಮುರಿಯುವ ಇಂತು ಅನಂತ ಬಾಧೆಯೊಳಗೆ ಸಾಯದ ಕಾರಣವೇನು ? ಕರ್ಮನಿವೃತ್ತಿ ಇಲ್ಲದಾಗಿ. ಇಂತು ದುಃಖದಲ್ಲಿ ಒಂಬತ್ತುತಿಂಗಳು ತುಂಬಿ ಸರ್ವ ಅವಯವಂಗಳ ಬಲಿದು ಎಚ್ಚರಹುಟ್ಟಿ ಜಾತಿಸ್ಮರತ್ವವ ತಿಳಿದು, ಕೆಟ್ಟೆ ಕೆಟ್ಟೆನೆಂದು ತನ್ನ ಮುನ್ನಿನ ಕರ್ಮಕ್ಕೆ ನಡುನಡುಗಿ ಕಡೆಗಾಣುವ ಪರಿಯೆಂತೆಂದು ಚಿಂತಿಸಿ, ಸರ್ವರಿಗೆ ಶಿವನೇ ದೈವವೆಂದು ಸರ್ವರ ಪಾಪಪೊರೆವಾತನೆಂದು ತಿಳಿದು, ಈ ಭವಬಾಧೆ ಬಿಡಿಸಿಕೊಳ್ಳುವುದಕ್ಕೆ ಶಿವಧೋ ಶಿವಧೋ ಶಿವಧೋ ಎಂದು ಮೊರೆಯಿಡುವ ಸಮಯಕ್ಕೆ ವಿಷ್ಣು ಪ್ರಸೂತಿಯ ಗಾಳಿಬೀಸಲು ತಲೆಮೇಲಾಗಿದ್ದ ಶಿಶುವು, ಅಗಸ ಅರವಿಯ ಹಿಂಡಿದಂತೆ, ಹೆಡಕ್ಹಿಡಿದು ಮುರಿದೊತ್ತಿ ತಲೆಕೆಳಗೆ ಮಾಡಿ ಯೋನಿದ್ವಾರದಾ ಹೊರಯಕ್ಕೆ ನೂಕಲು, ಅಕ್ಕಸಾಲಿಗನು ಕಂಬೆಚ್ಚಿನಲ್ಲಿಕ್ಕಿ ತೆಗೆದ ಚಿನ್ನದ ಸಲಾಕೆಯಂತಾಯಿತಲ್ಲಾ. ಮುಂದೆ ಭೂಸ್ಪರ್ಶನದಿಂದೆ ಹಿಂದಿನ ಜಾತಿಸ್ಮರತ್ವವ ಮರೆತು, ತನ್ನ ಮಲಮೂತ್ರದಲ್ಲಿ ತಾನೆ ಹೊರಳ್ಯಾಡಿ, ಅನಂತದುಃಖವಂ ಬಡೆದು, ಬಾಲತ್ವನೀಗಿ ಯವ್ವನಬರಲು, ತಾನು ಹ್ಯಾಂಗಾದೆನೆಂದು ತಿಳಿಯದೆ ತಾ ಹಿಂದೆ ಬಂದ ಮೂತ್ರದ ಕುಣಿಗೆ ಮನವಿಟ್ಟು ಬಾಯಿದೆರೆದು ಕುದಿಕುದಿದು ಕಿಸುಕುಳದ ಕೀವು ರಕ್ತವೊಸರುವ ಹಸಿ ಘಾಯಿ ಹಳದೊಗಲಿಗೆ ಸೋತು ಮುಪ್ಪಾಗಿ ಕೆಮ್ಮು ಕ್ಯಾಕರಿಕೆ ವಾತ ಪಿತ್ಥ ಶ್ಲೇಷ್ಮಾದಿ ಅನಂತ ರೋಗಾದಿಗಳಿಂದ ಸತ್ತು ಸತ್ತು ಹೋಯಿತು ಅನಂತಕಾಲ ಅನಂತಜನ್ಮ, ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ವಿಪಿನದೊಳು ಮದಕರಿಯ ಹಿಂಡು ಆನಂದಲೀಲೆಯೊಳಾಡುತ್ತಿರಲು, ಕೇಸರಿ ಬರಲು, ಮದಕರಿಗಳೆಲ್ಲಾ ಕೆದರಿ ಓಡುವ ತೆರನಂತೆ, ಸಾಕಾರ ಸೊಡ್ಡಳಾ, ನಿಮ್ಮ ಶರಣ ಪ್ರಭುದೇವರು ಬರಲೊಡನೆ ಹರೆದುದಯ್ಯಾ ನೆರೆದ ಶಿವಗಣಂಗಳು.
--------------
ಸೊಡ್ಡಳ ಬಾಚರಸ
ಶಿವ ಶಿವಾ ! ಕನಸಿನಲ್ಲಿ ಜಂಗಮವ ಕಂಡು, ಮನಸ್ಸಿನಲ್ಲಿ ಗುಡಿಯ ಕಟ್ಟುವರಯ್ಯಾ ! ನೆಟ್ಟನೆ ಮನೆಗೆ ಜಂಗಮ ಬಂದಡೆ ಕೆಟ್ಟೆವಿನ್ನೇನ ಬೇಡಿಯಾರೆಂಬ ಕಷ್ಟ ಜೀವಿಯ ಭಕ್ತಿಯಂತಾಯಿತ್ತು ವ್ರತಸ್ಥನ ಭಕ್ತಿ. ಕಾಗೆ ತಮ್ಮ ದೇವರೆಂದು ಕರೆದು ತಮ್ಮ ಮನೆಯ ಮೇಲೆ ಕೂಳ ಹಾಕಿ ಕೈಮುಗಿದು ಬೇಡಿಕೊಂಬರಯ್ಯಾ, ಆ ಕಾಗೆ ಬಂದು ಮನೆಯ ಹೊಕ್ಕಡೆ ಒಕ್ಕಲೆತ್ತಿ ಹೋಹ ಮರ್ಕಟನ ಭಕ್ತಿಯಂತಾಯಿತ್ತಯ್ಯಾ ನೇಮಸ್ಥನ ಭಕ್ತಿ. ಹಾವು ತಮ್ಮ ದೇವರೆಂದು ಹಾಲನೆರೆದು ಕೈಮುಗಿದು ಬೇಡಿಕೊಂಬರಯ್ಯಾ ಆ ಹಾವ ಕಂಡಡೆ ಹೆದರಿ ಓಡುವ ಭಾವಭ್ರಮಿತರ ಭಕ್ತಿಯಂತಾಯಿತ್ತಯ್ಯಾ ಶೀಲವಂತನ ಭಕ್ತಿ. ಹೊಸ್ತಿಲ ದೇವರೆಂದು ಪೂಜಿಸಿ ಮರಳಿ ಇಕ್ಕಾಲಿಕ್ಕಿ ದಾಂಟಿ ಹೋಹ ಒಕ್ಕಲಗಿತ್ತಿಯ ಭಕ್ತಿಯಂತಾಯಿತ್ತಯ್ಯಾ, ಭಾಷೆವಂತನ ಭಕ್ತಿ. ಕೆರಹ ಕಳೆದು ಕೈಯ ತೊಳೆದು ಸಗ್ಗಳೆಯ ನೀರ ಕುಡಿದ ಬ್ರಾಹ್ಮಣನ ಭಕ್ತಿಯಂತಾಯಿತ್ತಯ್ಯಾ ಸಮಯಾಚಾರಿಯ ಭಕ್ತಿ. ನಾಯ ನಡು ಸಣ್ಣದೆಂದು ಅಂದಣವನೇರಿಸಿದಡೆ ಆ ನಾಯಿ ಎಲುವ ಕಂಡಿಳಿದಂತಾಯಿತ್ತಯ್ಯಾ ನಿತ್ಯಕೃತ್ಯನ ಭಕ್ತಿ_ ಇಂತೀ ಆರು ಪ್ರಕಾರದ ದೃಷ್ಟಾಂತಗಳ ತೋರಿ ಹೇಳಿದೆ. ಅಂತು ಭಕ್ತನ ಜಂಗಮವೆ ಶಿವನೆಂದರಿದು ಪಾದೋದಕ ಪ್ರಸಾದವ ಕೊಂಡು ನಮಸ್ಕರಿಸಿದ ಬಳಿಕ ಮತ್ತಾ ಜಂಗಮ ಮನೆಗೆ ಬಂದು, ಹೊನ್ನು [ವಸ್ತ್ರಾದಿ] ಮುಟ್ಟಿಯಾರೆಂಬ ಅಳುಕುಂಟೆ ಸದ್ಭಕ್ತಂಗೆ ? ಇಲ್ಲವಾಗಿ, ಅದೆಂತೆಂದಡೆ, ಲೈಂಗ್ಯೇ: ಅರ್ಥಪ್ರಾಣಾಭಿಮಾನೇಷು ವಂಚನಂ ನೈವ ಕುತ್ರಚಿತ್ ಯಥಾ ಭಾವಸ್ತಥಾ ದೇವಶ್ಚರೋಚ್ಛಿಷ್ಟಂ ವಿಶೇಷತಃ ಸ್ವೇಷ್ಟಲಿಂಗಾಯ ದತ್ವಾ ತು ಪುನಃ ಸೇವೇತ ಭಕ್ತಿಮಾನ್ ಸ ಏವ ಷಟ್‍ಸ್ಥಲಬ್ರಹ್ಮೀ ಪ್ರಸಾದೀ ಸ್ಯಾನ್ಮಹೇಶ್ವರಃ _ಇಂತೆಂಬ ಪುರಾಣ ವಾಕ್ಯವನರಿಯದೆ ಅಳುಳ್ಳಡೆ ಸುಡುಸುಡು, ಅವನು ಗುರುದ್ರೋಹಿ ಆಚಾರಭ್ರಷ್ಟ ವ್ರತಗೇಡಿ ನರಮಾಂಸಭುಂಜಕ ಜಂಗಮನಿಂದಕ ಪಾಷಂಡಿ ದೂಷಕ. ಆತನ ಹಿಡಿದು ಹೆಡಗುಡಿಯ ಕಟ್ಟಿ ಮೂಗನುತ್ತರಿಸಿ ಇಟ್ಟಿಗೆಯಲೊರಸಿ ಅನಂತಕಾಲ ಕೆಡಹುವ ನಮ್ಮ ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
-->