ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಯದ ಕೈಯಲಿ ಓಲೆ ಕÀಂಠವ ಕೊಟ್ಟಡೆ, ಲಗುನ ವಿಗುನವ ಬರೆಯಿತ್ತು ನೋಡಾ ಅರಗಿನ ಪುತ್ಥಳಿಗೆ ಉರಿಯ ಸೀರೆಯನುಡಿಸಿದಡೆ, ಅದು ಸಿರಿಯ ಸಿಂಗಾರವಾಯಿತ್ತು ನೋಡಾ. ಅಂಬರದೊಳಗಾಡುವ ಗಿಳಿ ಪಂಜರದೊಳಗಣ ಬೆಕ್ಕ ನುಂಗಿ ರಂಭೆಯ ತೋಳಿಂದ ಅಗಲಿತ್ತು ನೋಡಾ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅಂಗದ ಕೈಯಲ್ಲೊಂದಂಗವದೆ ನೋಡಾ. ಲಿಂಗದ ಕೈಯಲ್ಲೊಂದು ಲಿಂಗವದೆ ನೋಡಾ. ಈ ಉಭಯದ ಮಧ್ಯದಲ್ಲಿ ಅರಿದ ತಲೆಯ, ಕೈಯಲ್ಲಿ ಹಿಡಿದುಕೊಂಡು, ಮುಂಡ ಉದಯವಾಯಿತ್ತ ಕಂಡೆ. ಅದಕ್ಕೆ ತಲೆಯಲ್ಲಿ ಓಲೆ, ಮುಂಡದಲ್ಲಿ ಮೂಗುತಿ, ಮೂಗಿನಲ್ಲಿ ಕಣ್ಣು, ಕಿವಿಯಲ್ಲಿ ತೋರಣ, ಕಂಗಳ ಮುತ್ತುಸರವ ಪವಣಿಸುವ ಜಾಣೆಯ ಕಣ್ಣ ಕೈಯ ಲಿಂಗಕ್ಕೆ ಮದುವೆಯ ಮಾಡಿದರೆಮ್ಮವರು. ಆ ಲಿಂಗದಿಂದ ರೂಪಲ್ಲದ, ಸೋಂಕಿಲ್ಲದ ಸೊಬಗಿನ ಅಭಿನವ ಶಿಶು ಹುಟ್ಟಿತ್ತು ನೋಡಾ. ಆ ನಾಮವ ಹಿಡಿದು ಕರೆದಡೆ ಕೈಸನ್ನೆ ಮಾಡಿತ್ತು. ನೋಡಿದಡೆ ಮುಂದೆಬಂದು ನಿಂದಿತ್ತು. ಅಪ್ಪಿದಡೆ ಸೋಂಕಿಲ್ಲದೆ ಹೋಯಿತ್ತು. ಅರಸಹೋದಡೆ ಅವಗವಿಸಿತ್ತು. ನಿಜಗುರು ಭೋಗೇಶ್ವರಾ, ಇದರ ಕೌತುಕದ ಕಾರಣವೇನು ಹೇಳಯ್ಯಾ.
--------------
ಭೋಗಣ್ಣ
ಅಕ್ಕ ಕೇಳೌ, ನಾನೊಂದು ಕನಸ ಕಂಡೆ. ಅಕ್ಕಿ ಅಡಕೆ ಓಲೆ ತೆಂಗಿನಕಾಯ ಕಂಡೆ. ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ. ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು. ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆನು.
--------------
ಅಕ್ಕಮಹಾದೇವಿ
ಹರ[ನಿತ್ತಾ]ಗ್ರಹ ನಿಗ್ರಹದ ಬೆಸನ, ಗುರುನಿರೂಪವೆಂದು ಕೈಕೊಂಡು, ಕರುಣಿ ಬಸವಣ್ಣ ಕೈಲಾಸದಿಂದ ಗುರುಲಿಂಗಜಂಗಮಕ್ಕೆ ಭಕ್ತಿಯ ಮಾಡಬೇಕೆಂದು ಏಳುನೂರೆಪ್ಪತ್ತು ಅಮರಗಣಂಗಳು ಸಹಿತ ಮತ್ರ್ಯಲೋಕಕ್ಕೆ ಬಂದನಯ್ಯಾ. ಶಿವಸಮಯಕ್ಕಾಧಾರವಾದನಯ್ಯಾ, ಬಸವಣ್ಣನು. ಜಡರುಗಳ ಮನದ ಕತ್ತಲೆಯ ಕಳೆಯಲೆಂದು ಕಟ್ಟಿತ್ತು ಕಲ್ಯಾಣದಲ್ಲಿ ಮಹಾಮಠವು. ಪರಮನಟ್ಟಿದ ಓಲೆ ಬಂದಿಳಿಯಿತ್ತು, ಬಿಜ್ಜಳನ ಸಿಂಹಾಸನದ ಮುಂದೆ. ಅದತಂದು ಓದಿದಡೆ ಸೃಷ್ಟಿಯ ಸೇನಬೋವರಿಗೆ ತಿಳಿಯದು ಛಪ್ಪನ್ನ ದೇಶದ ಭಾಷೆಯ ಲಿಪಿ ಮುನ್ನವಲ್ಲ. ಇದನೋದಿದವರಿಗೆ ಆನೆ ಸೇನೆ ಕುದುರೆ ಭಂಡಾರ ಅರವತ್ತಾರು ಕರಣಿಕರಿಗೆ ಮುಖ್ಯನ ಮಾಡುವೆನೆಂದು ಬಿಜ್ಜಳ ಭಾಷೆಯ ಕೊಡುತ್ತಿರಲು, ಹರನಿರೂಪವ ಶಿರದ ಮೇಲಿಟ್ಟು ಶಿವಶರಣೆಂದು ಬಸವಣ್ಣನೋದಿ ಮೆಟ್ಟಿ ತೆಗೆಸಿದನಯ್ಯಾ ಅರವತ್ತಾರು ಕೋಟಿ ವಸ್ತುವ ಅರಮನೆಗೆ. ರಾಜ್ಯಕ್ಕೆ ಅರಮನೆಗೆ [ಶಿರಃ ಪ್ರಧಾನ]ನಾಗಿ ಹರಗಣಂಗಳಿಗೆ ಗತಿಮತಿ ಚೈತನ್ಯನಾಗಿ ಕೂಡಲಚೆನ್ನಸಂಗಯ್ಯನಲ್ಲಿ ಅಂಡಜದೊಳಗಿದ್ದು ಶಿವನ ಭಂಡಾರಿಯಾದನಯ್ಯಾ ಎನ್ನ ತಂದೆ ಪೂರ್ವಾಚಾರಿ ಸಂಗನಬಸವಣ್ಣನು.
--------------
ಚನ್ನಬಸವಣ್ಣ
ಅಯ್ಯಾ, ವಿರಕ್ತ ವಿರಕ್ತರೆಂದೇನೊ? ವಿರಕ್ತಿಯ ಮಾತನಾಡುವರಲ್ಲದೆ ವಿರಕ್ತಿಕೆ ಎಲ್ಲರಿಗೆಲ್ಲಿಯದೊ? ಕೈಯೊಳಗಣ ಓಲೆ, ಕಂಕುಳೊಳಗಣ ಸಂಪುಟ, ಬಾಯೊಳಗಣ ಮಾತು. ಪುಣ್ಯವಿಲ್ಲ-ಪಾಪವಿಲ್ಲ, ಕರ್ಮವಿಲ್ಲ-ಧರ್ಮವಿಲ್ಲ, ಸತ್ಯವಿಲ್ಲ-ಅಸತ್ಯವಿಲ್ಲವೆಂದು ಮಾತನಾಡುತಿಪ್ಪರು. ಅದೆಂತೆಂದಡೆ ಕಂಗಳ ನೋಟ ಹಿಂಗದನ್ನಕ್ಕ, ಕೈಯೊಳಗಣ ಬೆರಟು ನಿಲ್ಲದನ್ನಕ್ಕ, ಹೃದಯದ ಕಾಮ ಉಡುಗದನ್ನಕ್ಕ ವಿರಕ್ತಿಕೆ ಎಲ್ಲರಿಗೆಲ್ಲಿಯದೊ? ಬಲ್ಲ ವಿರಕ್ತನ ಹೃದಯವುದಕದೊಳಗಣ ಗುಂಡಿನಲ್ಲಿ ಮಾಣಿಕ್ಯದ ಪ್ರಭೆಯ ಕಂಡವರಾರೊ? ಕಂಡಾತಂಗೆ ಕಂಗಳಲ್ಲಿ ನೋಡಿದ ಸರ್ವವಸ್ತುಗಳು ಆ ಲಿಂಗಕ್ಕರ್ಪಿತ. ಆ ಲಿಂಗವ ಕಂಡಾತಂಗೆ, ಕರ್ಣದಲ್ಲಿ ಕೇಳಿದ ಆಗಮ ಪುರಾಣಂಗಳು ಆ ಲಿಂಗಕ್ಕರ್ಪಿತ. ಆ ಲಿಂಗವ ಕಂಡಾತಂಗೆ ಜಿಹ್ವೆಯಲ್ಲಿ ರುಚಿಸಿದ ಪದಾರ್ಥಗಳು ಆ ಲಿಂಗಕ್ಕರ್ಪಿತ. ಅದೆಂತೆಂದಡೆ ಅಂಗವೂ ಲಿಂಗವೂ ಏಕೀಭವಿಸಿದಡೆ ಅವಂಗೆ ಪುಣ್ಯವಿಲ್ಲ-ಪಾಪವಿಲ್ಲ, ಕರ್ಮವಿಲ್ಲ-ಧರ್ಮವಿಲ್ಲ, ಸತ್ಯವಿಲ್ಲ-ಅಸತ್ಯವಿಲ್ಲ. ಅದೆಂತೆಂದಡೆ: ಬಂದುದ ಲಿಂಗಕ್ಕೆ ಕೊಟ್ಟನಾಗಿ, ಬಾರದುದ ಬಯಸನಾಗಿ. ಅಂಗನೆಯರು ಬಂದು ಕಾಮಿತಾರ್ಥದಿಂದ ತನ್ನನಪ್ಪಿದಡೆ ತಾ ಮಹಾಲಿಂಗವನಪ್ಪುವನಾಗಿ, ಅವಂಗೆ ಮುಖ ಬೇರಲ್ಲದೆ, ಆತ್ಮನೆಲ್ಲಾ ಒಂದೆ. ಅದಕ್ಕೆ ಜಗವು ಪಾಪ ಪುಣ್ಯವೆಂದು ಮಾತನಾಡುತಿಪ್ಪರು. ಅದೆಂತೆಂದಡೆ: ಶಿವಂಗೆ ತಾಯಿಯಿಲ್ಲ, ಭುವನಕ್ಕೆ ಬೆಲೆಯಿಲ್ಲ. ತರು ಗಿರಿ ಗಹ್ವರಕ್ಕೆ ಮನೆಯಿಲ್ಲ. ಲಿಂಗವನೊಡಗೂಡಿದ ವಿರಕ್ತಂಗೆ ಪುಣ್ಯ ಪಾಪವಿಲ್ಲ ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
-->