ಅಥವಾ

ಒಟ್ಟು 190 ಕಡೆಗಳಲ್ಲಿ , 61 ವಚನಕಾರರು , 170 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೆಯಿ ಬೆಳೆವಲ್ಲಿ ಸದೆಗೆ ಮುನಿವರಲ್ಲದೆ ಬೆಳೆಗೆ ಮುನಿದವರುಂಟೆ ಅಯ್ಯಾ? ಅರಿದಂಗವ ತಾಳಿದವರಲ್ಲಿ ಮರವೆಗೆ ಮುನಿವರಲ್ಲದೆ ಅರಿವಿಗೆ ಮುನಿವರುಂಟೆ ಅಯ್ಯಾ? ಕೊಲ್ಲಿ ಆವಿಂಗೆ ಕಾಲ ಕಟ್ಟುವರಲ್ಲದೆ ಮೊಲೆಯ ಕಟ್ಟಿದರುಂಟೆ ಅಯ್ಯಾ? ಗುರುವಾದಡೂ ಆಗಲಿ, ಲಿಂಗವಾದಡೂ ಆಗಲಿ, ಜಂಗಮವಾದಡೂ ಆಗಲಿ ಅರಿವಿಂಗೆ ಶರಣು ಮರವಿಂಗೆ ಮಥನವ ಮಾಡಿದಲ್ಲದೆ ಇರೆ. ಇದು ನೀವು ಕೊಟ್ಟ ಅರಿವಿನ ಮಾರನ ಇರವು, ಸದಾಶಿವಮೂರ್ತಿಲಿಂಗದ ಬರವು.
--------------
ಅರಿವಿನ ಮಾರಿತಂದೆ
ಎನ್ನ ಕರಣಂಗಳ ಲಿಂಗದಲ್ಲಿ ಕಟ್ಟುವೆ; ಗುರುಲಿಂಗಜಂಗಮದ ಕಾಲ ಕಟ್ಟುವೆ; ವ್ರತಭ್ರಷ್ಟರ ನಿಟ್ಟೊರಸುವೆ, ಸುಟ್ಟು ತುರುತುರನೆ ತೂರುವೆ, ನಿರ್ಭೀತ ನಿಜಲಿಂಗದಲ್ಲಿ?
--------------
ಕಾಲಕಣ್ಣಿಯ ಕಾಮಮ್ಮ
ಇಷ್ಟವನು ಅಷ್ಟಮದಲ್ಲಿ ಕಂಡು, ಕಾಮದ ಕಣ್ಣ ಕಿತ್ತು, ಕರ್ಮದ ಕಾಲ ಮುರಿದು, ಬಯಕೆಯ ಮುದ್ರಿಸಿ, ಸಂಗಯ್ಯನಲ್ಲಿ ಇಷ್ಟವನು ಅಷ್ಟಮದಲ್ಲಿಯೇ ನಿಲಿಸಿದಾತ ಬಸವಯ್ಯನು.
--------------
ನೀಲಮ್ಮ
ಜಗತ್ಪ್ರಪಂಚ ಮಾಡಿ, ಆ ಜಗದಲ್ಲಿ ಜೀವರೂಪಿಂದ ಬಳಿಸಂದನೆಂದು ಹೇಳುವ ಶ್ರುತಿಯಂತಿರಲಿ, ಜೀವನೆ ಶಿವನಾದಡೆ ಶೋಕ ಮೋಹ ಋಣ ರೋಗ ಪುಣ್ಯ ಪಾಪ ಕಾಲ ಕಲ್ಪಿತ ಪ್ರಳಯ ಪ್ರಕೃತಿ ಸಂಸಾರಪಾಶಬದ್ಧವುಂಟೆ? ಇವೆಲ್ಲವೂ ಜೀವಂಗಲ್ಲದೆ ಶಿವಂಗಿಲ್ಲವಾಗಿ ತ್ರಿಗುಣರಹಿತ ಸೌರಾಷ್ಟ್ರ ಸೋಮೇಶ್ವರನು.
--------------
ಆದಯ್ಯ
ಕಾಲ ಕರ್ಮ ಬಿಂದು ಮಾಯೆ ಜೀವ ಪ್ರಕೃತಿ ಮಲ ರೋಧನ ಕಳವು ಹಿಂಸೆ ತೃಷೆ ನಿದ್ರೆ ವ್ಯಸನಕ್ಕೆ ಕ್ಲೇಶ ಕಾಮಾದಿಗಳುಳ್ಳನ್ನಕ್ಕರ ಏಕ ಭಾಜನೆವೆಲ್ಲಿಯದೊ? ಇವೆಲ್ಲವ ಕಳೆದುಳಿದಲ್ಲಿ ಸೌರಾಷ್ಟ್ರ ಸೋಮೇಶ್ವರಲಿಂಗದೊಡನೆ ಏಕಭಾಜನ, ದೊರಕೊಂಬುದು.
--------------
ಆದಯ್ಯ
`ನಾನು ಭಕ್ತ, ನಾನು ಪ್ರಸಾದಿ ಎಂದು ವಿಪ್ರಕರ್ಮವ ಮಾಡುವೆ ಕರ್ಮೀ: ಲಿಂಗದೇವನ ಮುಟ್ಟಿ ಮಜ್ಜನಕ್ಕೆರೆವ ಕೈಯಲು ವಿಪ್ರನ ಕಾಲ ತೊಳೆವಡೆ ಲಿಂಗೋದಕ ಹೃದಯದಲ್ಲಿ, ವಿಪ್ರನ ಕಾಲ ತೊಳೆದ ನೀರು ಮಂಡೆಯ ಮೇಲೆ ! ಶ್ರುತ್ಯತ್ಕಟದುರಾಚಾರೀ ಯಜ್ಞಕೂಪಸಘಾತಕಃ ಉದ್ರೇಕೇಣ ಕೃತೇ ಶಾಂತೇ ವಿಪ್ರರೂಪೇಣ ರಾಕ್ಷಸಃ ಇದು ಕಾರಣ ಕೂಡಲಸಂಗಮದೇವಾ, ಇಂತಪ್ಪ ದುರಾಚಾರಿಗಳ ಮುಖವ ನೋಡಲಾಗದು.
--------------
ಬಸವಣ್ಣ
ಕಾಲ ಸಡಗರ ಕೈಯಲದೆ ಕೈಯ ಸಡಗರ ಕಂಗಳಲದೆ. ಅದೇನು ಕಾರಣವೆಂದಡೆ, ಕಂಗಳೇ ಕಾರಣವಾಗಿ, ಒಂದು ಮಾತಿನೊಳಗೆ ವಿಚಾರವದೆ; ಕನ್ನಡಿಯೊಳಗೆ ಕಾರ್ಯವದೆ,_ ಇದೇನು ಕಾರಣ ತಿಳಿಯಲರಿಯರು ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ತನ್ನ ತಾ ಬೀಳುವರ ಕಂಡು ತಳ್ಳಿ ಹಗೆಯಾಗಲೇಕೆ? ಒಡೆದುದ ಕಂಡು ಒಡಯಿರಿಯಲೇಕೆ? ಇಂತೀ ಬಿಡುಮುಡಿಯನರಿಯದೆ ಒಡೆಯರೆಂದು ಕೊಡುವರ ಕಾಲ ಪಡಿಗಕ್ಕೆ ಇವರು ಹೆಸರೊಡೆಯರಲ್ಲದೆ ಅಸಮಾಕ್ಷರಲ್ಲ. ಇಂತೀ ಗಸಣಿಗಿನ್ನೇವೆ, ಕಣ್ಣಯ್ಯಪ್ರಿಯ ಗೊಹೇಶ್ವರನ ಶರಣ ಅಲ್ಲಮಾ.
--------------
ಗಾಣದ ಕಣ್ಣಪ್ಪ
ಎಲೆ ಎಲೆ, ಭಕ್ತ ಭವಿ ಎಂಬೋ ನೀತಿಯಂ ಕೇಳು : ಭಕ್ತ ದಾರು ? ಭವಿ ದಾರು ? ಎಂದಡೆ, ಎಲಾ, ಯಾವ ಕುಲ[ದವ]ನಾದಡೆ ಸರಿಯೋ ? ಯಾವ ದೇವರು ಆದರೆ ಸರಿಯೋ ? ಎಲ್ಲಾ ದೇವರಿಗೂ ಆತ್ಮಲಿಂಗವಾಗಿಪ್ಪನೇ ಮಹಾದೇವನೆಂದು ಹೇಳುವುದು ಶ್ರುತಿವಾಕ್ಯ. ಇದರೊಳಗೆ ಏಕದೈವವನು ಪಿಡಿದು ಪೂಜಿಸಿ, ಧ್ಯಾನಿಸಿ, ನಮಸ್ಕರಿಸಿ, ಕ್ರಿಯಾಚಾರದಿಂ ನಡೆದು, ನೀತಿಗಳನೋದಿ, ನಿರ್ಮಳಚಿತ್ತನಾದಡೆ ಭಕ್ತ. ಇದಂ ಮರೆದು, ಹಲವು ಕಾಲ ಲಿಂಗಧ್ಯಾನ, ಹಲವು ಕಾಲ ಹರಿಧ್ಯಾನ, ಹಲವು ಕಾಲ ಬ್ರಹ್ಮಧ್ಯಾನ, ಹಲವು ಕಾಲ ಎಲ್ಲಮ್ಮ, ಎಕನಾತಿ, ಶಾಕಿನಿ, ಡಾಕಿನಿ ಕಲ್ಲು ಮರದೊಳಗಿಪ್ಪ ದೇವರ ಪೂಜಿಸಿದಡೆ, ಎಲ್ಲಾರ ಎಂಜಲ ತಿಂಬೋರ ಎಂಜಲ [ತಿಂದು], ಭಕ್ತನೆಂದರಿಯದೆ, ಪ್ರಸಾದದ ಮಹಾತ್ಮೆಯ ತಿಳಿವ ತಿಳಿಯದೆ, ಧನದ ಪಿಶಾಚಿ ಎಂದು ಧರ್ಮ ಪರಹಿತಾರ್ಥವನು ಮರೆದು, ನಿತ್ಯ ನಿತ್ಯ ಅನ್ನಕ್ಲೇಶದಲ್ಲಿ ಹೊರಳುವ[ವ] ಲಿಂಗದೇಹಿಕನಾದಡೆಯು ಬ್ರಾಹ್ಮಣನಾದೆಡೆಯು, ಇವನೇ ಭವಿ. ಇಂತಾ ಭಕ್ತ ಭವಿಗಳ ನೆಲೆಯ ತಿಳಿದು ನಮ್ಮ ಶರಣರು ನಿರ್ಲೇಪ ದೇಹಮಂ ಅಂಗೀಕರಿಸಿ ಪೋದರು ಕಾಣಾ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಕಾಮ ಬಲ್ಲಿದನೆಂದಡೆ ಉರುಹಿ ಭಸ್ಮವ ಮಾಡಿದ. ಕಾಲ ಬಲ್ಲಿದನೆಂದಡೆ ಕೆಡಹಿ ತುಳಿದ. ಎಲೆ ಅವ್ವಾ, ನೀನು ಕೇಳಾ ತಾಯೆ. ಬ್ರಹ್ಮ ಬಲ್ಲಿದನೆಂದಡೆ ಶಿರವ ಚಿವುಟಿಯಾಡಿದ. ಎಲೆ ಅವ್ವಾ ನೀನು ಕೇಳಾ ತಾಯೆ. ವಿಷ್ಣು ಬಲ್ಲಿದನೆಂದಡೆ ಆಕಳ ಕಾಯ್ದಿರಿಸಿದ. ತ್ರಿಪುರದ ಕೋಟೆ ಬಲ್ಲಿತ್ತೆಂದಡೆ ನೊಸಲಕಂಗಳಲುರುಹಿದನವ್ವಾ. ಇದು ಕಾರಣ, ಚೆನ್ನಮಲ್ಲಿಕಾರ್ಜುನ ಗಂಡನೆನಗೆ, ಜನನ ಮರಣಕ್ಕೊಳಗಾಗದ ಬಲುಹನೇನ ಬಣ್ಣಿಪೆನವ್ವಾ.
--------------
ಅಕ್ಕಮಹಾದೇವಿ
ಶ್ರೀಗುರುಸ್ವಾಮಿ ಕರುಣಿಸಿ ಕೊಟ್ಟ ಇಷ್ಟಲಿಂಗಪ್ರಸಾದವ ಚೆಲ್ಲದಿರುವುದೆ ಪಂಚಾಂಗ. ತನ್ನ ಲಿಂಗವಲ್ಲದೆ ಭೂದೇವರ ಅಲ್ಲಗಳೆವುದೆ ಪಂಚಾಂಗ. ಎಲ್ಲ ಕಾಲ ವೇಳೆಯಲ್ಲಿ ನಿಲ್ಲದೆ ನೆನೆವುದೆ ಶುಭದಿನ ಶುಭಲಗ್ನ ಶುಭಮುಹೂರ್ತ ಗುರುಬಲ ಚಂದ್ರಬಲ ಸೂರ್ಯಬಲವೆನಿಸುವುದಯ್ಯ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಕಾಲೊಳಗಿನ ಮುಳ್ಳ ಕಣ್ಣಿನಿಂದೆ ತೆಗೆಯಬಹುದು. ಕಣ್ಣೊಳಗಿನ ಮುಳ್ಳ ಕಾಲಲ್ಲಿ ತೆಗೆವ ಜಾಣರನಾರನು ಕಾಣೆ ಮೂರುಲೋಕದೊಳಗೆ. ಇದು ಕಾರಣ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರು ಕಣ್ಣ ಮುಚ್ಚಿ ಕಾಲ ಮುಳ್ಳ ತೆಗೆವರು ಕಾಲಕೊಯ್ದು ಕಣ್ಣ ಮುಳ್ಳ ತೆಗೆವರು, ಮರಳಿ ನೋಡಿದರೆ ದೀಪದೊಳಡಗುವರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಲ,_ಕಾಲವರವತ್ತು; ಕಾಲ ಕಾಲವನೆ ಅರಿವುದು. ಕಾಲ_ಕಾಲವೈವತ್ತು; ಕಾಲ ಕಾಲವನೆ ಅರಿವುದು. ಕಾಲ_ಕಾಲ ನಾಲ್ವತ್ತು; ಕಾಲ ಕಾಲವನೆ ಅರಿವುದು. ಕಾಲ_ಕಾಲ ಮೂವತ್ತು; ಕಾಲ ಕಾಲವನೆ ಅರಿವುದು. ಕಾಲ_ಕಾಲ ಇಪ್ಪತ್ತು; ಕಾಲ ಕಾಲವನೆ ಅರಿವುದು. ಕಾಲ_ಕಾಲ ಹತ್ತು; ಕಾಲ ಕಾಲವನೆ ಅರಿವುದು. ಇಂತೀ ಕಾಲಂಗಳ ಕಾಲವನರಿವಡೆ ಗುಹೇಶ್ವರಲಿಂಗದಲ್ಲಿ ಹೇಳು ಚೆನ್ನಬಸವಣ್ಣಾ ?
--------------
ಅಲ್ಲಮಪ್ರಭುದೇವರು
ಎನ್ನ ಮೀಸಲ ಬೀಸರ ಮಾಡಿದೆಯಲ್ಲಯ್ಯ. ಎನ್ನ ಮೀಸಲ ಬೀಸಾಡಿ ಕಳೆದೆಯಲ್ಲಯ್ಯ. ಎನ್ನ ಭಾಷೆಯ ಪೈಸರ ಮಾಡಿದೆಯಲ್ಲಯ್ಯ. ಎನ್ನ ಭಾಷೆಗೆ ದೋಷವ ತೋರಿಸಿದೆಯಲ್ಲಯ್ಯ. ಎನ್ನ ಮೀಸಲ ಕಾಯವ ನಿಮಗೆಂದಿರಿಸಿಕೊಂಡಿದ್ದಡೆ, ಬೀಸಾಡಿ ಕಳೆವರೆ ಹೇಳಾ ತಂದೆ ? ಏಸು ಕಾಲ ನಿಮಗೆ ನಾನು ಮಾಡಿದ ತಪ್ಪ ಈ ಸಮಯದಲ್ಲಿ ಹೊರಿಸಿ ಕೊಂದೆಯಲ್ಲಾ ಚೆನ್ಮಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಅನಾದಿಪುರುಷ ಬಸವಣ್ಣಾ, ಕಾಲ ಮಾಯೆಗಳೆರಡೂ ನಿಮ್ಮ ಮುಂದಿರ್ದು, ನಿಮ್ಮ ಕಾಣೆವೆನುತ್ತಿಹವು. ಆದಿಪುರುಷ ಬಸವಣ್ಣಾ; ಸುರಾಸುರರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು. ನಾದಪುರುಷ ಬಸವಣ್ಣಾ, ನಾದ ಮಂತ್ರಗಳು ಪಂಚಮಹಾವಾದ್ಯಂಗಳು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹವು. ವೇದಪುರುಷ ಬಸವಣ್ಣಾ, ವೇದಶಾಸ್ತ್ರಾಗಮ ಪುರಾಣಂಗಳು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹವು. ಆಗಮ್ಯಪುರುಷ ಬಸವಣ್ಣಾ, ಅಂಗಾಲ ಕಣ್ಣವರು ಮೈಯೆಲ್ಲ ಕಣ್ಣವರು ನಂದಿವಾಹನರು ಗಂಗೆವಾಳುಕರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು. ಅಗೋಚರಪುರುಷ ಬಸವಣ್ಣಾ, ಈ ಗೋಚರಿಸಿದ ಮನುಮುನಿ ದೇವದಾನವ ಮಾನವರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು. ಅಪ್ರಮಾಣಪುರುಷ ಬಸವಣ್ಣ, ಈ ಪ್ರಮಾಣರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು. ಸರ್ವಜ್ಞಪುರುಷ ಬಸವಣ್ಣಾ, ಈ ಸರ್ವರು ನಿಮ್ಮ ಬಳಸಿರ್ದು ನಿಮ್ಮ ಕಾಣೆವೆನುತ್ತಿಹರು. ಇಂತೀ ಸರ್ವಪ್ರಕಾರದವರೆಲ್ಲರೂ ನಿಮ್ಮ ಸಾಧಿಸಿ ಭೇದಿಸಿ ಪೂಜಿಸಿ ತರ್ಕಿಸಿ ಹೊಗಳಿ ಕಾಣದೆ ನಿಮ್ಮಿಂದವೆ ಉತ್ಪತ್ತಿ ಸ್ಥಿತಿಲಯಂಗಳಾಗುತ್ತಿಹರು. ಅದು ಕಾರಣ,_ನಮ್ಮ ಗುಹೇಶ್ವರಲಿಂಗದಲ್ಲಿ ಭಕ್ತಿವಡೆದ ಅನಂತ ಭಕ್ತರೆಲ್ಲ ಬಸವಣ್ಣ ಬಸವಣ್ಣ ಬಸವಣ್ಣ ಎನುತ್ತ ಬದುಕಿದರಯ್ಯಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->