ಅಥವಾ

ಒಟ್ಟು 221 ಕಡೆಗಳಲ್ಲಿ , 2 ವಚನಕಾರರು , 221 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಷ್ಠೆಯುಳ್ಳಾತಂಗೆ ನಿತ್ಯನೇಮದ ಹಂಗೇಕೆ ? ಸತ್ಯವುಳ್ಳಾತಂಗೆ ತತ್ವವಿಚಾರದ ಹಂಗೇಕೆ ? ಅರಿವುಳ್ಳಾತಂಗೆ ಅಗ್ಘವಣಿಯ ಹಂಗೇಕೆ ? ಮನಶುದ್ಧವುಳ್ಳವಂಗೆ ಮಂತ್ರದ ಹಂಗೇಕೆ ? ಭಾವ ಶುದ್ಧವುಳ್ಳವಂಗೆ ಹೂವಿನ ಹಂಗೇಕೆ ? ಕೂಡಲಚೆನ್ನಸಂಗಯ್ಯಾ, ನಿಮ್ಮನರಿದಾತಂಗೆ ನಿಮ್ಮ ಹಂಗೇಕೆ ?
--------------
ಚನ್ನಬಸವಣ್ಣ
ಇಷ್ಟಲಿಂಗ ಸಂಬಂಧವಾದ ಬಳಿಕ ಕಾಯಗುಣ ಕೆಟ್ಟು ಲಿಂಗವಾಯಿತ್ತು. ಪ್ರಾಣಲಿಂಗ ಸಂಬಂಧವಾದ ಬಳಿಕ ಕರಣಗುಣ ಕೆಟ್ಟು ಲಿಂಗಕರಣಂಗಳಾದುವು. ಭಾವಲಿಂಗ ಸಂಬಂಧವಾದ ಬಳಿಕ ಇಂದ್ರಿಯಗುಣ ಕೆಟ್ಟು ಲಿಂಗೇಂದ್ರಿಯಗಳಾದುವು. ಇದು ಕಾರಣ- ಶರಣಂಗೆ ಬೇರೆ ಲಿಂಗವಿಲ್ಲ, ಬೇರೆ ಅಂಗವಿಲ್ಲ. ಅರ್ಪಿತ ಅನರ್ಪಿತವೆಂಬ ಉಭಯ ಶಂಕೆ ಹಿಂಗಿತ್ತು, ಕೂಡಲಚೆನ್ನಸಂಗಯ್ಯಾ ನಿನ್ನೊಳಡಗಿದ ನಿಜೈಕ್ಯಂಗೆ
--------------
ಚನ್ನಬಸವಣ್ಣ
ಕಿಸು (ಕೇಶ?) ಕಾಷಾಂಬರವನಿಕ್ಕಿದರೆನುಳ ರುದ್ರಾಕ್ಷೆಯ ಮಕುಟವ ಧರಿಸಿದರೇನು? ಸಾಕಾರದಲ್ಲಿ ಸನುಮತರಲ್ಲ, ನಿರಾಕಾರದಲ್ಲಿ ನಿರುತರಲ್ಲ, ಪರಮಾರ್ಥದಲ್ಲಿ ಪರಿಣಾಮಿಗಳಲ್ಲ. ಇದು ಕಾರಣ ಕೂಡಲಚೆನ್ನಸಂಗಯ್ಯಾ ತುರುಬಾಗಲಿ, ಬೋಳಾಗಲಿ, ಅರಿವುಳ್ಳುದೆ ಜಂಗಮ.
--------------
ಚನ್ನಬಸವಣ್ಣ
ಸರ್ವವೂ ಶಿವನಿಂದ ಉದ್ಭವಿಸುವವೆಂದರೆ, ಉದ್ಭವಿಸುವವೆಲ್ಲವೂ ಶಿವನೆ? ಸಕಲ ಬೀಜವ ಬಿತ್ತುವನೊಕ್ಕಲಿಗನೆಂದರೆ ಆ ಬೆಳೆ ತಾನೊಕ್ಕಲಿಗನೆ? ಮಡಕೆಯ ಕುಂಬಾರ ಮಾಡುವನೆಂದರೆ, ಆ ಮಡಕೆ ತಾ ಕುಂಬಾರನೆ? ಕಬ್ಬುನವ ಕಮ್ಮಾರ ಮಾಡುವನೆಂದರೆ, ಆ ಕಬ್ಬುನ ತಾ ಕಮ್ಮಾರನೆ? ಆ ಪರಿಯಲಿ ಸಕಲ ಜಗತ್ತಿನ ಸಚರಾಚರವನು ಮಾಡುವನೆಂದರೆ, ಆ ಸಚರಾಚರವು ಶಿವನೆ? ಅಹಂಗಾದರೆ ಅಷ್ಟಾದಶವರ್ಣವೇಕಾದವು? ಚೌರಾಸಿಲಕ್ಷ ಜೀವರಾಶಿಗಳೇಕಾದವು? ಸುಖ-ದುಃಖ ಸ್ವರ್ಗ-ನರಕಂಗಳೇಕಾದವು? ಉತ್ತಮ-ಮಧ್ಯಮ-ಕನಿಷ್ಠಂಗಳೇಕಾದವು? ಪುಣ್ಯ-ಪಾಪ, ಭವಿ-ಭಕ್ತರೆಂದೇಕಾದವು? ಇದು ಕಾರಣ ಸದಾಚಾರ ಸದ್ಭಕ್ತಿಯಲ್ಲಿಪ್ಪಾತನೆ ಶಿವ. ಅಂತಲ್ಲದೆ ಸರ್ವವೂ ಶಿವನೆಂದರೆ ಅಘೋರ ನರಕ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಪ್ರಾಣಲಿಂಗಸಂಬಂಧಿಯಾದ ಬಳಿಕ ತನುಗುಣವಿರಲಾಗದಯ್ಯಾ. ಕೈ ಸಿಂಹಾಸನವಾದ ಬಳಿಕ ಸಂದಾಗಿರಲಾಗದಯ್ಯಾ. ಕೂಡಲಚೆನ್ನಸಂಗಯ್ಯಾ, ಈಯನುವನಲ್ಲಮ ತೋರಿದ.
--------------
ಚನ್ನಬಸವಣ್ಣ
ಖಂಡಿತವಿಲ್ಲಾಗಿ ಸರ್ವಾಂಗವೂ ನಾಸಿಕವಾಯಿತ್ತು. ತಾನಲ್ಲದೆ ಅನ್ಯವಾಸನೆಯಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಪೃಥ್ವಿಯಡಗಿತ್ತು. ಖಂಡತವಿಲ್ಲಾಗಿ ಸರ್ವಾಂಗವೂ ಜಿಹ್ವೆಯಾಯಿತ್ತು. ತಾನಲ್ಲದೆ ಅನ್ಯ ರುಚಿಯಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಅಪ್ಪುವಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೂ ನೇತ್ರವಾಯಿತ್ತು. ತಾನಲ್ಲದೆ ಅನ್ಯ ರೂಪಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಅಗ್ನಿಯಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೂ ಮಹಾತ್ವಕ್ಕಾಯಿತ್ತು. ತಾನಲ್ಲದೆ ಅನ್ಯಸ್ಪರ್ಶವಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ವಾಯುವಡಗಿತ್ತು ಖಂಡಿತವಿಲ್ಲಾಗಿ ಸರ್ವಾಂಗವೂ ಶ್ರೋತ್ರವಾಯಿತ್ತು ತಾನಲ್ಲದೆ ಅನ್ಯ ಶಬ್ದವಿಲ್ಲಾಗಿ ಅಲ್ಲಿಯ ಮಹತ್ತಪ್ಪ ಆಕಾಶವಡಗಿತ್ತು. ಇಂತು ಬ್ರಹ್ಮಾಂಡವೆ ಪಂಚಭೂತಮಯವಾದಡೆ, ಶರಣನ ಸರ್ವಾಂಗದಲ್ಲಿ ಪಂಚಬ್ರಹ್ಮಮಯವಡಗಿತ್ತು. ಅದೆ ಪಂಚವರ್ಣಾತೀತವಾದ ಮಹಾಬಯಲೊಳಗೆ ನಿಂದ ಭೇದವು. ಅದರಲ್ಲಿ ಜಗತ್ತು ಅಡಗಿದ ಭೇದವ, ಮಹತ್ತು ಮಹತ್ತನೊಳಕೊಂಡ ಭೇದವ ಏನೆಂದುಪಮಿಸುವೆನಯ್ಯಾ, ಕೂಡಲಚೆನ್ನಸಂಗಯ್ಯಾ !
--------------
ಚನ್ನಬಸವಣ್ಣ
ಸ್ಥಲವೆಂದೆನ್ನೆ, ನಿಃಸ್ಥಲವೆಂದೆನ್ನೆ, ತಾನು ಎನಗಾದ ಬಳಿಕ ನಿಃಪತಿಯೆನಗಾದ ಬಳಿಕ ಎತ್ತಲೆಂದರಿಯೆನು. ಇದು ಕಾರಣ ಕೂಡಲಚೆನ್ನಸಂಗಯ್ಯಾ, ಲಿಂಗೈಕ್ಯವೆಂದು ಎನ್ನೆನಾಗಿ.
--------------
ಚನ್ನಬಸವಣ್ಣ
ಮಾಟವಿಲ್ಲದ ಕೂಟವದೇಕೋಳ ಕೂಟವಿಲ್ಲದ ಮಾಟವದೇಕೋ? ಮಾಟಕೂಟವೆರಡರನುವರಿಯಬೇಕು. ಸಟೆಯಿಲ್ಲದೆ ದಿಟ ಘಟಿಸಿ ಸಯವಾಗಬೇಕು. ಕೂಟಮಾಟವೆರಡರ ಅನುಮತದಿಂದವೆ ಭಕ್ತಿ. ಇದೇ [ಕೂಟ] ಕೂಡಲಚೆನ್ನಸಂಗಯ್ಯಾ ನಿಮ್ಮಲ್ಲಿ.
--------------
ಚನ್ನಬಸವಣ್ಣ
ಅರ್ಪಿತದಲ್ಲಿ ಅವಧಾನವರತು, ಅನರ್ಪಿತದಲ್ಲಿ (ಅರ್ಪಿತದಲ್ಲಿ?) ಸುಯಿಧಾನವರತು. ಬಂದುದು ಬಾರದುದೆಂದರಿಯದೆ, ನಿಂದ ನಿಲವಿನ ಪರಿಣಾಮತೆಯಾಯಿತ್ತು. ರುಚಿ ರೂಪಂ ನ ಚ ಜ್ಞಾನಂ ಅರ್ಪಿತಾನರ್ಪಿತಂ ತಥಾ ಆದೌ ಪ್ರವರ್ತತೇ ಯಸ್ಯ ಶಿವೇನ ಸಹಮೋದತೇ ಎಂಬುದಾಗಿ, ಕೂಡಲಚೆನ್ನಸಂಗಯ್ಯಾ. ನಿಮ್ಮವರು ಶಿವಸುಖಸಂಪನ್ನರಾದರಯ್ಯಾ.
--------------
ಚನ್ನಬಸವಣ್ಣ
ಅವಸರ, ಆರೋಗಣೆ, ಆಪ್ಯಾಯನ-ತ್ರಿವಿಧವೂ, ಲಿಂಗ ಮುಖದಲ್ಲಿ ಅರ್ಪಿತವಾಗೆ, ಆತನ ಪ್ರಸಾದಿಯೆಂಬೆನು. ಅವಸರ ಅನವಸರ ಆತ್ಮ(ಅಂಗ?)ದಿಚ್ಛೆ ಲಿಂಗಮುಖದಲ್ಲಿ ಅರ್ಪಿತವಿಲ್ಲಾಗಿ ಆತನನೆಂತು ಪ್ರಸಾದಿಯೆಂಬೆನು? ಅವಸರ ಅನವಸರವರಿದು ವೇಧಿಸಬಲ್ಲರೆ ಆತನ ಪ್ರಸಾದಿಯೆಂಬೆನು- ``ಲಿಂಗಸ್ಯಾವಸರೇ ಯಸ್ತು ಅಚ್ರ್ಯಂ ದದ್ಯಾತ್ ಸುಖಂ ಭವೇತ್ ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಅವಸರವರಿದು ಅರ್ಪಿಸುವ ಅರ್ಪಣೆ ಸದ್ಭಾವಿಗಲ್ಲದಿಲ್ಲ.
--------------
ಚನ್ನಬಸವಣ್ಣ
ಪಶ್ಚಿಮಪದ್ಮಾಸನದಲ್ಲಿ ಕುಳ್ಳಿರ್ದು, ನಿಟ್ಟೆಲುವ ನೆಟ್ಟನೆ ಮಾಡಿ, ಅಧೋಮುಖ ಕಮಲವ ಬಲಿದು, ಊಧ್ರ್ವಮುಖವ ಮಾಡಿ, ಇಂದ್ರಿಯಂಗಳನು ಏಕಮುಖವ ಮಾಡಿ, ಚಂದ್ರ ಸೂರ್ಯರನೊಂದಠಾವಿನಲ್ಲಿರಿಸಿ ಅತ್ತಿತ್ತ ಮಿಸುಕದೆ ನಡುಗೀರ ಜ್ಯೋತಿಯ ದೃಢವಾಗಿ ಹಿಡಿದು, ಪರಮಾನಂದದ ವಠದೊಳಗೆ, ಪ್ರಾಣಲಿಂಗಾರ್ಚನೆಯ ಮಾಡುವ ಮಹಾಮಹಿಮರ ತೋರಿ ಬದುಕಿಸಾ, ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಭವಿಯ ತಂದು ಪೂವಾಶ್ರಯವ ಕಳೆದು ಭಕ್ತನ ಮಾಡಿದ ಬಳಿಕ, ಪೂರ್ವವನ್ನೆತ್ತಿ ನುಡಿವ ಶಿವದ್ರೋಹಿಯ ಮಾತ ಕೇಳಲಾಗದು. ಲಿಂಗವೆ ಗುರು, ಗುರುವೇ ಲಿಂಗವೆಂದು, ಹೆಸರಿಟ್ಟು ಕರೆವ ಗುರುದ್ರೋಹಿಯ ಮಾತ ಕೇಳಲಾಗದು. ಹೆಸರಿಲ್ಲದ ಅಪ್ರಮಾಣ ಮಹಿಮನನು ಹೆಸರಿಟ್ಟು ಕರೆವ ಲಿಂಗದ್ರೋಹಿಯ ಮಾತ ಕೇಳಲಾಗದು. ಪೂರ್ವವಿಲ್ಲದ ಶಿಷ್ಯ, ನೇಮವಿಲ್ಲದ ಗುರು, ಹೆಸರಿಲ್ಲದ ಲಿಂಗ ಈ ತ್ರಿವಿಧವನರಿಯದೆ ಕೆಟ್ಟು ಹೋದರು, ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಲಿಂಗಪ್ರಸಾದವ ಜಂಗಮಕ್ಕೆ ಕೊಡುವ ಕರ್ಮಿ ನೀ ಕೇಳಾ ! ಜಂಗಮಪ್ರಸಾದವ ಲಿಂಗಕ್ಕೆ ಕೊಡುವ ಸುಧರ್ಮಿ ನೀ ಕೇಳಾ ! ಲಿಂಗಪ್ರಸಾದವ ಜಂಗಮಕ್ಕೆ ಕೊಡುವದು ಅನಾಚಾರ; ಜಂಗಮದ ಪ್ರಸಾದವ ಲಿಂಗಕ್ಕೆ ಕೊಡುವದು ಸದಾಚಾರ. ಅಅದೆಂತೆಂದಡೆ: ಲಿಂಗಾರ್ಪಿತಂ ಪ್ರಸಾದಂ ಚ ನ ದದ್ಯಾತ್ ಚರಮೂರ್ತಯೇ ಚರಾರ್ಪಿತಂ ಪ್ರಸಾದಂ ಚ ತದ್ದದ್ಯಾತ್ ಲಿಂಗಮೂರ್ತಯೇ ಎಂದುದಾಗಿ, ಇದು ಕಾರಣ, ಕೂಡಲಚೆನ್ನಸಂಗಯ್ಯಾ, ಜಂಗಮ ಮುಖದಲ್ಲಿ ಲಿಂಗ ನಿರಂತರ ಸುಖಿ
--------------
ಚನ್ನಬಸವಣ್ಣ
ರೂಪನರ್ಪಿಸಬಹುದಲ್ಲದೆ ರುಚಿಯನರ್ಪಿಸುವ ಪರಿಯಿನ್ನೆಂತೊ ? ಉರವಣಿಸಿ ಬಂದ ತನುಗುಣಾದಿಗಳ ಲಿಂಗದೊಳಗೆ ನಿಕ್ಷೇಪವ ಮಾಡದಿದ್ದರೆ ಪ್ರಾಣಲಿಂಗನಾಸ್ತಿ, ಪ್ರಸಾದವೆಲ್ಲಿಯದು ಕೂಡಲಚೆನ್ನಸಂಗಯ್ಯಾ ?
--------------
ಚನ್ನಬಸವಣ್ಣ
ಸದ್ಭಕ್ತರ ಬಸುರಲ್ಲಿ ಹುಟ್ಟಿದ ಮಕ್ಕಳು ಭವಿಯನಾಚರಿಸಿದಡೆ ಪಂಚಮಹಾಪಾತಕವೆಂದುದು ವಚನ. ತಿಲಷೋಡಶಭಾಗಂ ಚ ತೃಣಾಗ್ರಾಂಬುಕಣೋಪಮಂ ಪಾದೋದಕಂ ಪ್ರಸಾದಾನ್ನಂ ನಾಶನಾನ್ನರಕಂ ವ್ರಜೇತ್ ಎಂದುದಾಗಿ, ಇದು ಕಾರಣ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರಿಗೆ ಸಂತಾನ ಅಭಿವೃದ್ಧಿಯಾಗದಿರಲಿ.
--------------
ಚನ್ನಬಸವಣ್ಣ
ಇನ್ನಷ್ಟು ... -->