ಅಥವಾ

ಒಟ್ಟು 21 ಕಡೆಗಳಲ್ಲಿ , 13 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ. ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ ಚೆಲುವಂಗೆ ನಾನೊಲಿದೆ ಎಲೆ ಅವ್ವಗಳಿರಾ ? ಭವವಿಲ್ಲದ ಭಯವಿಲ್ಲದ ನಿರ್ಭಯ ಚೆಲುವಂಗೊಲಿದೆ ನಾನು. ಸೀಮೆಯಿಲ್ಲದ ನಿಸ್ಸೀಮಂಗೊಲಿದೆ ನಾನು. ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆ ಮಿಗೆ ಮಿಗೆ ಒಲಿದೆ ಎಲೆ ಅವ್ವಗಳಿರಾ.
--------------
ಅಕ್ಕಮಹಾದೇವಿ
ಪಾರದ್ವಾರವ ಮಾಡಬಂದವ ಅಬೆಯ ಗಂಡಗೆ ಕೂಪನೆ ? ಅವಳು ತನ್ನ ಪತಿಗೆ ಓಪಳೆ ? ಈ ಉಭಯದ ಮಾರ್ಗ ಅರಿವ ಅರಿವಿಂಗೆ, ಹೇಸಿ ತಿಂಬ ಕರಣಕ್ಕೆ ಒಡಗೂಡಿದ ಸ್ನೇಹವುಂಟೆ ? ಇದನರಿ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವನರಿವುದಕ್ಕೆ.
--------------
ಸಗರದ ಬೊಮ್ಮಣ್ಣ
ಗಂಡಂಗೆ ನಾಚಿದ ಹೆಂಡತಿ ಮಕ್ಕಳ ಹೇಂಗೆ ಹಡೆವಳಯ್ಯ? ಲಿಂಗಕ್ಕ ನಾಚಿದಾತ ಶರಣನೆಂತಪ್ಪನಯ್ಯ? ಈ ಲಜ್ಜೆ ನಾಚಿಕೆಯೆಂಬ ಪಾಶವಿದೇನಯ್ಯ? ಸಂಕಲ್ಪ ವಿಕಲ್ಪದಿಂದ ಸಂದೇಹಿಸುವ ಭ್ರಾಂತಿಯೇ ಲಜ್ಜೆಯಯ್ಯ. ಅಹುದೋ ಅಲ್ಲವೋ, ಏನೋ ಎಂತೋ ಎಂದು ಹಿಡಿವುತ್ತ ಬಿಡುತ್ತಿಪ್ಪ ಲಜ್ಜಾಭ್ರಾಂತಿ ಉಡುಗಿರಬೇಕಯ್ಯ. ಗಂಡನ ಕುರುಹನರಿಯದಾಕೆಗೆ ಲಜ್ಜೆ, ನಾಚಿಕೆ ಉಂಟಾದುದಯ್ಯ. ಲಿಂಗವನರಿಯದಾತಂಗೆ ಸಂಕಲ್ಪ ವಿಕಲ್ಪವೆಂಬ ಸಂದೇಹ ಭ್ರಾಂತಿ ಉಂಟಾದುದಯ್ಯ. ಈ ಅರುಹು ಮರಹೆಂಬುಭಯದ ಮುಸುಕ ತೆಗೆದು ನೆರೆ ಅರುಹಿನಲ್ಲಿ ಸನ್ನಿಹಿತವಿಲ್ಲದ ಜಡರುಗಳ ಕೈಯಲ್ಲಿ ಲಿಂಗಾನುಭಾವವ ಬೆಸಗೊಳಲುಂಟೆ ಅಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅತ್ತಲಿಂದ ಒಂದು ಪಶುವು ಬಂದು, ಇತ್ತಲಿಂದ ಒಂದು ಪಶುವು ಬಂದು, ಒಂದರ ಮೋರೆಯನೊಂದು ಮೂಸಿ ನೋಡಿದಂತೆ, ಗುರುವು ಗುರುವಿನೊಳಗೆ ಸಂಬಂಧವಿಲ್ಲ ಶಿಷ್ಯರು ಶಿಷ್ಯರೊಳಗೆ ಸಂಬಂಧವಿಲ್ಲ, ಭಕ್ತರಲಿ ಭಕ್ತರಲಿ ಸಂಬಂಧವಿಲ್ಲ. ಈ ಕಲಿಯುಗದೊಳಗುಪದೇಶವ ಮಾಡುವ ಹಂದಿಗಳಿರಾ ನೀವು ಕೇಳಿರೊ, ಗಂಡಗೆ ಗುರುವಾದಡೆ ಹೆಂಡತಿಗೆ ಮಾವನೆ ? ಹೆಂಡತಿಗೆ ಗುರುವಾದಡೆ ಗಂಡಂಗೆ ಮಾವನೆ ? ಗಂಡ ಹೆಂಡತಿಗೆ ಗುರುವಾದಡೆ ಇವರಿಬ್ಬರೇನು ಒಡಹುಟ್ಟಿದರೆ ? ಈ ಭೇದವನರಿಯದೆ ದೀಕ್ಷೆ ಕಾರಣವ ಮಾಡುವಾತ ಗುರುವಲ್ಲ. ಈ ಕಳೆಯ ಕುಲವನರಿಯದಾತ ಶಿಷ್ಯನಲ್ಲ. ಈ ಭೇದವನರಿದು ಕಾರಣವ ಮಾಡುವ ಗುರುಶಿಷ್ಯ ಸಂಬಂಧವೆಲ್ಲ ಉರಿ ಕರ್ಪುರ ಸಂಯೋಗದಂತಹುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ತಲೆಯಿಲ್ಲದ ಪುರುಷನಿಗೆ ಕಾಲಿಲ್ಲದ ಸ್ತ್ರೀ. ಕುಲಗೇಡಿ ಗಂಡಗೆ ಅನಾಚಾರಿ ಹೆಂಡತಿ. ಇಬ್ಬರ ಸಂಗದಿಂದುತ್ಪತ್ಯವಿಲ್ಲದ ಒಂದು ಶಿಶುವು ಹುಟ್ಟಿ, ಒಡಹುಟ್ಟಿದ ಬಂಧುಗಳ ಕೊಂದು, ತಂದಿತಾಯಿಯ ಹತವ ಮಾಡಿ, ಸತ್ತವರ ನುಂಗಿ, ಬದುಕಿದವರ ಹೊತ್ತು ಇತ್ತ ಮರದು, ಅತ್ತ ಹರಿದು, ಸತ್ತು ಕಾಯಕವ ಮಾಡುತಿರ್ದುದು ಶಿಶು. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅನಲನೆಂಬ ಗಂಡಂಗೆ ತೃಣವೆಂಬ ಹೆಂಡತಿ ಮೋಹದಿಂದಪ್ಪಲಾಗಿ, ಬೇಯ್ದ[ಆಕೆಯ] ಕರಚರಣಾದಿಗಳು, ಆ ಗಂಡನಲ್ಲಿಯೆ ಒಪ್ಪವಿಟ್ಟಂತಿರಬೇಕು. ಇಂತಪ್ಪ ಇಷ್ಟಲಿಂಗವ ದೃಷ್ಟದಲ್ಲಿ ಹಿಡಿದುದಕ್ಕೆ ಇದೇ ದೃಷ್ಟ. ಹೀಂಗಲ್ಲದೆ ಲೌಕಿಕಾರ್ಚನೆಯ ಮಾಡುವ ಪೂಜಕರ ಮೆಚ್ಚೆನೆಂದ, ನಚ್ಚಿನಗ್ಫಣಿಯ ಮಜ್ಜನದೊಡೆಯ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬೇರಿಲ್ಲದ ಗಂಡಂಗೆ ತೋರಿಮಾಡುವರಾರೂ ಇಲ್ಲ. ಈ ಧರೆಯಿಂದಲರಿದು ಶರಣುಹೊಕ್ಕು ಸುಖಿಯಾದೆ. ಈ ಜಲದಿಂದಲರಿದು ಶರಣುಹೊಕ್ಕು ಸುಖಿಯಾದೆ. ಈ ತೇಜದಿಂದಲರಿದು ಶರಣುಹೊಕ್ಕು ಸುಖಿಯಾದೆ. ಈ ಪವನದಿಂದಲರಿದು ಶರಣುಹೊಕ್ಕು ಸುಖಿಯಾದೆ. ಈ ಅಂಬರದಿಂದಲರಿದು ಶರಣುಹೊಕ್ಕು ಸುಖಿಯಾದೆ. ಗುರುನಿರಂಜನ ಚನ್ನಬಸವಲಿಂಗಾ ನಿನ್ನ ಪಂಚಮುಖದಿಂದೆ ನಿನ್ನನರಿದು ಶರಣುಹೊಕ್ಕು ಪರಮಸುಖಪರಿಣಾಮಿಯಾಗಿರ್ದೆನು ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹಸಿದು ಬಂದ ಗಂಡಂಗೆ ಉಣಲಿಕ್ಕದೆ, ಬಡವಾದನೆಂದು ಮರುಗುವ ಸತಿಯ ಸ್ನೆಹದಂತೆ ಬಂದುದನರಿಯಳು, ಇದ್ದುದ ಸವಸಳು. ದುಃಖವಿಲ್ಲದ ಅಕ್ಕೆ ಹಗರಣಿಗನ ತೆರನಂತೆ ಕೂಡಲಸಂಗಮದೇವಾ. 218
--------------
ಬಸವಣ್ಣ
ಎಲ್ಲರ ಹೆಂಡಿರು ತೊಳಸಿಕ್ಕುವರು; ಎನ್ನ ಗಂಡಂಗೆ ತೊಳಸುವುದಿಲ್ಲ. ಎಲ್ಲರ ಗಂಡಂದಿರಿಗೆ ಬಸಿವರು; ಎನ್ನ ಗಂಡಂಗೆ ಬಸಿವುದಿಲ್ಲ. ಎಲ್ಲರ ಗಂಡಂದಿರಿಗೆ ಬೀಜವುಂಟು; ಎನ್ನ ಗಂಡಂಗೆ ಅಂಡದ ಬೀಜವಿಲ್ಲ. ಎಲ್ಲರ ಗಂಡಂದಿರು ಮೇಲೆ; ಎನ್ನ ಗಂಡ ಕೆಳಗೆ, ನಾ ಮೇಲೆ. ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ.
--------------
ಕದಿರರೆಮ್ಮವ್ವೆ
ಅರ್ಧನಾರಿಯಾಗಿದ್ದ ಉಮಾದೇವಿ ಬೇರೆ ಮತ್ತೊಬ್ಬರೊಡನುಂಬಳೆ? ಗಂಡಂಗೆ ತೆರಹಿಲ್ಲದ ವಧು ಪರಿವಿರೋಧಿಯಾಗಿ, ಬೇರೆ ಮತ್ತೊಬ್ಬರೊಡನುಂಬ ಪರಿಯೆಂತೊ? ಮನ ಪುನರ್ಜಾತನಾಗಿ, ಪ್ರಾಣಲಿಂಗ ಪ್ರಸಾದಿಯಾದ ಪ್ರಸಾದಿಗ್ರಾಹಕ ಪ್ರಸಾದಿ, ಇದರೊಡನೆ ಭುಂಜಿಸುವ ಪರಿಯಿನ್ನೆಂತೊ? ಒಂದಾಗಿ ಭೋಜನವ ಮಾಡಿದಲ್ಲಿ, ಸಜ್ಜನಸ್ಥಲ ಬೆಂದಿತ್ತು, ಗುರುವಚನ ನೊಂದಿತ್ತು, ಜಂಗಮ ನಾಚಿತ್ತು, ಪ್ರಸಾದ ಹೇಸಿತ್ತು, ಅವಧಾನವಡಗಿತ್ತು, ಭಕ್ತಿ ಮೀಸಲಳಿದು ಬೀಸರವೋಯಿತ್ತು, ಪ್ರದೀಪಿಕೆ : ಭಕ್ತೋಭಕ್ತಸ್ಯ ಸಂಯೋಗಾನ್ನ ಭುಂಜಿಯಾತ್ಮವಾನ್ ಸಃ| ತಥಾಪಿ ಭುಂಜನಾದ್ದೇವಿ ಪ್ರಸಾದತ್ರಯನಾಶನಂ|| ಇಂತೆಂದುದಾಗಿ, ಇದು ಕಾರಣ, ಒಂದೆನಲಮ್ಮೆ ಬೇರೆನಲಮ್ಮೆ. ನಿಮ್ಮ ಶರಣರೊಕ್ಕುದ ಕೊಂಬೆ ಕಾಣಾ, ಮಹಾಲಿಂಗ ಕಲ್ಲೇಶ್ವರಾ.
--------------
ಹಾವಿನಹಾಳ ಕಲ್ಲಯ್ಯ
ನೀರ ಒರಳ ಮಾಡಿ, ನೆರಳ ಒನಕೆಯ ಮಾಡಿ, ಆಕಾರವಿಲ್ಲದಕ್ಕಿಯ ಥಳಿಸುತ್ತಿರಲು, ಮೇರುಗಿರಿಯಾಕಳ ಕರೆದ ಕ್ಷೀರದಲ್ಲಿ ಅಡಿಗೆಯ ಮಾಡಿ ನಾರಿಯ ಬಸುರೊಳಗೆ ಗಂಡ ಬಂದು ಕುಳ್ಳಿರಲು, ಮಾಡಿದಡಿಗೆಯ ಮನವುಂಡು ಹೋಗಲು, ಮೇಲು ಕೈ ತಲೆ ಹಿಡಿದು ಸಂತೋಷದಿಂದ, ಪ್ರಾಣಸಖಿ ತನ್ನ ಗಂಡಂಗೆ ನೀಡುತ್ತಿರಲು, ಅರಳ ಹುಟ್ಟಿಗೆಯಲ್ಲಿ ಹೊರಳಿ ಕೂಡುವ ಭೇದ, ಮರಳಿ ಕೂಡಲಿಕೆಂತು ಪಣವಿಲ್ಲ. ಕೆರಳಿ ಮುನಿದು ಘುಡುಘುಡಿಸಿ ಗರ್ಜಿಸಲೊಡನೆ ಕೆರಳಲಮ್ಮದೆ ಅಂಜಿ ಒಳಗಡಗಿದ, ಶರಣಸತಿ ಲಿಂಗಪತಿಯೆಂಬ ಭಾಷೆ. ನೀನು ಹರನ ಬಟ್ಟೆಯ ನೋಡಿ ಸುಯ್ಯಬೇಡ, ಜನನ ಮರಣವಿರಹಿತ ಕೂಡಲಸಂಗನ ಅನುಭಾವ, ಪ್ರಭುವಿನ ಶ್ರೀಪಾದದೊಳಗಿದ್ದು ಸುಖಿಯಾದೆನು.
--------------
ಬಸವಣ್ಣ
ದೇಗುಲದೊಳಗೆ ಒಬ್ಬ ಗಂಡಂಗೆ ಐವರು ಹೆಂಡರಾಗಿಪ್ಪರು ನೋಡಾ. ಕಂಡ ಕಂಡ ದಾರಿಯನಳಿದು ಮಂಡೆ ಬೋಳ ಮಾಡಿ ಹೆಂಡರು ಆ ಗಂಡನ ಕೂಡಿದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಐದೆ ಬಿನ್ನಾಣಿಕೆ ಬಿನ್ನಾಣಿಯ ಬಸುರಲ್ಲಿ ಹುಟ್ಟಿದವಳು ಬಾಯಲ್ಲಿ ಬಳೆದೊಟ್ಟವಳು; ಬಾಯಲ್ಲಿ ತಲೆಯಾದವಳು; ತಲೆಯೊಳಗೆ ಮೊಲೆಯಾದವಳು; ಮೊಲೆಯೊಳಗೆ ನಾಭಿಯಾದವಳು; ನಾಭಿಯೊಳಗೆ ಬಸುರಾದವಳು; ಬಸುರೊಳಗೆ ಬೆನ್ನಾದವಳು; ಬೆನ್ನೊಳಗೆ ಕಾಲಾದವಳು; ಗಂಡಂಗೆ ಕೈಯೆಂದು ಬಾಯಲಿ ಹಿಡಿದು ಹರಿದವಳು ಕಪಿಲಸಿದ್ಧಮ್ಲನಾಥನ ಬಾಯಲ್ಲಿ ಭೋಗಿಯಾದವಳು. ಇಂತಪ್ಪ ವಿದ್ಯದ ಬೇಟದ ಮಾತಿನ ಕೊಂಬ ಹೇಳಿದಡೆ, ಅಲ್ಲಿಗೆ ಬಂದಡೆ ತಾ ಕಂಡಯ್ಯಾ, ಐದೆ ಬಿನ್ನಾಣಿಕೆ!
--------------
ಸಿದ್ಧರಾಮೇಶ್ವರ
ಮೂರು ಸುತ್ತಿನಕೋಟೆಯ ನಟ್ಟನಡುಮಧ್ಯ ಸಡಗರದ ಮನೆಯೊಳಗಿಪ್ಪನೊಬ್ಬ ಶಿವಯೋಗಿ. ಆ ಶಿವಯೋಗಿ ಮೊದಲ ಗಂಡನ ಸಂಭೋಗಸವಿಯಲ್ಲಿ ಬಂದನೆನ್ನ ಕಣ್ಣ ಮುಂದೆ. ಮೊದಲ ಗಂಡನಕೊಂದು ಅವಗೆ ಮಡದಿಯಾದುದು ಮೂರುಲೋಕವೆಲ್ಲ ಬಲ್ಲುದು ನೋಡಾ. ಹಲವು ಬಗೆಯಿಂದೆ ಹಲವು ಗಂಡರ ಸಂಗವ ನಲಿನಲಿದು ಮಾಡಿದರೆ ಗೆಲುವಾಯಿತ್ತು ಎನ್ನ ಗಂಡಂಗೆ. ನಿತ್ಯ ಮುತ್ತೈದೆ ನಿಜವಾದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ, ಬೆಳೆದೆನು ಅಸಂಖ್ಯಾತರ ಕರುಣದೊಳಗೆ. ಭಾವವೆಂಬ ಹಾಲು, ಸುಜ್ಞಾನವೆಂಬ ತುಪ್ಪ, ಪರಮಾರ್ಥವೆಂಬ ಸಕ್ಕರೆಯನಿಕ್ಕಿದರು ನೋಡಾ. ಇಂತಪ್ಪ ತ್ರಿವಿಧಾಮೃತವನು ದಣಿಯಲೆರೆದು ಸಲಹಿದಿರೆನ್ನ. ವಿವಾಹವ ಮಾಡಿದಿರಿ, ಸಯವಪ್ಪ ಗಂಡಂಗೆ ಕೊಟ್ಟಿರಿ, ಕೊಟ್ಟ ಮನೆಗೆ ಕಳುಹಲೆಂದು ಅಸಂಖ್ಯಾತರೆಲ್ಲರೂ ನೆರೆದು ಬಂದಿರಿ. ಬಸವಣ್ಣ ಮೆಚ್ಚಲು ಒಗತನವ ಮಾಡುವೆ. ಚೆನ್ನಮಲ್ಲಿಕಾರ್ಜುನನ ಕೈವಿಡಿದು ನಿಮ್ಮ ತಲೆಗೆ ಹೂವ ತಹೆನಲ್ಲದೆ ಹುಲ್ಲ ತಾರೆನು. ಅವಧರಿಸಿ, ನಿಮ್ಮಡಿಗಳೆಲ್ಲರೂ ಮರಳಿ ಬಿಯಂಗೈವುದು, ಶರಣಾರ್ಥಿ.
--------------
ಅಕ್ಕಮಹಾದೇವಿ
ಇನ್ನಷ್ಟು ... -->