ಅಥವಾ

ಒಟ್ಟು 15 ಕಡೆಗಳಲ್ಲಿ , 10 ವಚನಕಾರರು , 15 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರುತ ಸಂಗವ ಮಾಡಿದ ಉರಿ, ವಾರಿ ಗಂಧದಂತೆ, ವಾಳುಕ ಸಂಬಂದ್ಥಿಯಾದ ಜಲದ ಇರವಿನಂತೆ, ಶಿಲೆ ತೈಲದ ಒಲುಮೆಯಂತಿರಬೇಕು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಮಾರುತನಲ್ಲಿ ಬೆರೆದ ಗಂಧದಂತೆ, ಸುರತದಲ್ಲಿ ಬೆರೆದ ಸುಖದಂತೆ, ಮಚ್ಚಿದಲ್ಲಿ ಕೊಡುವ ಉಚಿತದಂತೆ, ಭಕ್ತರಿಗದೆ ಹಾದಿ ಎಂದೆ ನಾಸ್ತಿನಾಥ.
--------------
ಗೊಗ್ಗವ್ವೆ
ವೇದದ ಉತ್ತರವ ವಿಚಾರಿಸಿ, ಶಾಸ್ತ್ರದ ಸಂದೇಹವ ನಿಬದ್ಧಿಸಿ ಪುರಾಣದ ಅಬ್ಥಿಸಂದ್ಥಿಯ ತಿಳಿದು ಇಂತಿವು ಮೊದಲಾದ ಆಗಮಂಗಳಲ್ಲಿ ಚಿಂತಿಸಿಯೆ ನೋಡಿ ಸಕಲಯುಕ್ತಿ ಶಬ್ದಸೂತ್ರಂಗಳಲ್ಲಿ ಪ್ರಮಾಣಿಸಿಯೆ ಕಂಡು ಮಾತುಗಂಟಿತನದಲ್ಲಿ ತರ್ಕಶಾಸ್ತ್ರಂಗಳಿಗೆ ಹೋಗದೆ ಪಂಚವಿಂಶತಿತತ್ವದೊಳಗಾದ ಆಧ್ಯಾತ್ಮ ಆದಿಭೌತಿಕವ ತಿಳಿದು ಪಂಚಭೂತಿಕದ ಸಂಚಿತ ಪ್ರಾರಬ್ಧ ಆಗಾಮಿಗಳ ಸಂಚಿನ ಸಂಕಲ್ಪವ ತಿಳಿದು ಪೃಥ್ವಿತತ್ವದ ಮಲ, ಅಪ್ಪುತತ್ವದ ಸಂಗ, ತೇಜತತ್ವದ ದಗ್ಧ, ವಾಯುತತ್ವದ ಸಂಚಲ, ಆಕಾಶತತ್ವದ ಬಹುವರ್ಣಕೃತಿ. ಇಂತೀ ಪಂಚಭೂತಿಕಂಗಳಲ್ಲಿ ತಿಳುವಳವಂ ಕಂಡು ಕರಂಡದಲ್ಲಿ ನಿಂದ ಗಂಧದಂತೆ ತನ್ನಂಗವಿಲ್ಲದೆ ಗಂಧ ತಲೆದೋರುವಂತೆ ವಸ್ತುಘಟಭೇದವಾದ ಸಂಬಂಧ. ಇಂತೀ ತೆರನ ತಿಳಿದು ವಾಗ್ವಾದಂಗಳಲ್ಲಿ ಹೋರಿಹೆನೆಂದಡೆ ಮಹಾನದಿಯ ವಾಳುಕದ ಮರೆಯ ನೀರಿನಂತೆ ಚೆಲ್ಲಿ ಕಂಡೆಹೆನೆಂದಡೆ ಆ ನದಿವುಳ್ಳನ್ನಕ್ಕ ಕಡೆಗಣಿಸಬಾರದು. ನಿಂದಲ್ಲಿ ಪ್ರಮಾಣುವಿಂದಲ್ಲದೆ ಮೀರಿ ತುಂಬದಾಗಿ ಇಂತೀ ಶ್ರುತ್ಯರ್ಥವಿಚಾರದಿಂದ ಹಾಕಿದ ಮುಂಡಿಗೆ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವಲ್ಲದಿಲ್ಲಾಯೆಂದು.
--------------
ಪ್ರಸಾದಿ ಭೋಗಣ್ಣ
ಪುಷ್ಪಗಂಧದಂತೆ ಪ್ರಾಣಲಿಂಗಭಾವ. ನೀರು ಗಂಧದಂತೆ ಇಷ್ಟಲಿಂಗಭಾವ. ಇಂತೀ ನಾಲ್ಕರ ಯೋಗ ಕೂಡಿದಲ್ಲಿ ಶರಣಸ್ಥಲಭಾವ. ಇಂತೀ ಐದರ ಭಾವವ ಅವಗವಿಸಿ ನಿಂದುದು, ಐಕ್ಯಸ್ಥಲಂಗೆ ಅವದ್ಥಿಗೊಡಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಒಂದು ಪಕ್ಷಿಗೆ ಐದು ತಲೆ, ಶಿರವೊಂದರಲ್ಲಿಯೆ ಮೂಡಿತ್ತು ನೋಡಾ. ಒಡಲು ಒಂದಾಯಿತ್ತು, ಬಣ್ಣ ಹದಿನಾರಾಯಿತ್ತು. ಅದರ ಚಂದ ಇಪ್ಪತ್ತೈದಾಯಿತ್ತು, ಹುಟ್ಟಿದ ಗರಿ ನೂರೊಂದಾಯಿತ್ತು. ಆ ಹಕ್ಕಿಯ ಜೀವವಿದ್ದಂತೆ ಕೊಂದು, ಸುಡದ ಬೆಂಕಿಯಲ್ಲಿ ಸುಟ್ಟು, ತಲೆಯಿಲ್ಲದ ಕಣ್ಣಿನಲ್ಲಿ ನೋಡಿ, ಬಾಯಿಲ್ಲದ ನಾಲಗೆಯಲ್ಲಿ ಸವಿದು, ಸವಿವುದಕ್ಕೆ ಮೊದಲೆ ರುಚಿಯನರ್ಪಿತವ ಮಾಡಿದ ಜ್ಞಾನಜಂಗಮವ ನೋಡಾ. ಆತನ ಇರವು ತುರುಬೊ? ಜಡೆಯೊ? ಅರಿಯಬಾರದಣ್ಣಾ. ಎಣ್ಣೆ ಕೊಂಡ ಮಣ್ಣಿನಂತೆ, ಅನಲ ಕೊಂಡ ದ್ರವ್ಯದಂತೆ, ಕುಸುಮ ಕೊಂಡ ಮಣ್ಣಿನಂತೆ, ಅನಲ ಕೊಂಡ ದ್ರವ್ಯದಂತೆ, ಕುಸುಮಕೊಂಡ ಗಂಧದಂತೆ, ರಸ ಕೊಂಡ ಪಾಷಾಣದಂತೆ, ಹೆಸರಿಡಬಾರದಯ್ಯಾ, ಆ ಜಂಗಮದಿರವ. ಆ ಜಂಗಮ ಬಂದು ಎನ್ನ ಹುಳ್ಳಿಯಂ ಬಿಡಿಸಿ, ತಳ್ಳಿಯಂ ಹರಿದು, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ತಲ್ಲೀಯವಾದ.
--------------
ಮೋಳಿಗೆ ಮಾರಯ್ಯ
ದ್ವೈತವೆಂದಡೆ ತಾನಿದಿರು ಎಂಬುದು ಎರಡುಂಟಾದುದು. ಅದ್ವೈತವೆಂದಡೆ ಕಾಣಬಾರದುದ ಕಂಡೆಹೆನೆಂಬುದು. ಇಂತು ದ್ವೈತ ಅದ್ವೈತಂಗಳಿಂದ ಕಂಡೆ ಕಾಣಿಸಿಕೊಳ್ಳೆನೆಂಬ ಬಂಧವಿಲ್ಲದೆ ನಿಜಸಂಗವೆಂಬುದು ತಲೆದೋರದೆ, ಉರಿಕೊಂಡ ಕರ್ಪುರದ ಗಂಧದಂತೆ ಅಲ್ಲಿಯೆ ಸ್ಥಲಲೇಪ ಲೋಪ, ಸದ್ಯೋಜಾತಲಿಂಗ ಬಟ್ಟಬಯಲು.
--------------
ಅವಸರದ ರೇಕಣ್ಣ
ಭಕ್ತಸ್ಥಲಕ್ಕೆ ವಿಶ್ವಾಸ ಶ್ರದ್ಧೆ ಸನ್ಮಾರ್ಗ, ಮಾಹೇಶ್ವರಸ್ಥಲಕ್ಕೆ ಅಪರಾಧವಂ ಮಾಡದೆ ನಿಂದೆಗೆ ಒಡಲಲ್ಲದೆ ಅನುಸರಣೆಯ ಕಂಡು ಕೇಳಿ ತಾಳದೆ, ಪ್ರಸಾದಿಸ್ಥಲಕ್ಕೆ ಶುದ್ಧ-ಸಿದ್ಧ-ಪ್ರಸಿದ್ಧ-ಪ್ರಸನ್ನವೆಂಬುದನರಿಯದೆ ಮಲಿನ ಅಮಲಿನವೆಂಬುದ ಕಾಣದೆ ಚಿಕಿತ್ಸೆ ಜಿಗುಪ್ಸೆಯೆಂಬುದ ಭಾವಕಿಲ್ಲದೆ, ಪ್ರಾಣಲಿಂಗಿಸ್ಥಲಕ್ಕೆ ಅರ್ಪಿತ ಅನರ್ಪಿತಂಗಳನರಿದು ರಸವನೀಂಟಿದ ಘಟದಂತೆ ಅಸಿಯ ಮೊನೆಗೆ ಬಂದು ನಿಲುವಂತೆ, ಶರಣಸ್ಥಲಕ್ಕೆ ತೊಟ್ಟುಬಿಟ್ಟ ಫಳ ಮರುತ ಸಂಚಾರಿಸಿದಲ್ಲಿಯೆ ಶಾಖೆಯ ಬಿಡುವಂತೆ ಸ್ತುತಿನಿಂದೆಗಳಲ್ಲಿ ರಾಗವಿರಾಗನಾಗಿ, ಐಕ್ಯಸ್ಥಲಕ್ಕೆ ಉರಿಕೊಂಡ ಕರ್ಪುರದಂತೆ ಭ್ರಮರ ಅನುಭವಿಸಿದ ಗಂಧದಂತೆ ಭೂಸ್ಥಾಪಿತದಂತೆ, ಅನಲಕಾಷ*ಪಾಷಾಣದಂತೆ ದೃಷ್ಟವ ಕಾಬನ್ನಕ್ಕ ಷಟ್‍ಸ್ಥಲಸಂಬಂಧ. ಇಂತೀ ಸ್ಥಲಂಗಳನಾರೋಪಿಸಿದಲ್ಲಿ ಸದ್ಯೋಜಾತಲಿಂಗವು ಸಂಬಂಧನಪ್ಪನು.
--------------
ಅವಸರದ ರೇಕಣ್ಣ
ಉಭಯ ಭಕ್ತ ಜಂಗಮದಿರವು : ಹಾಲು ಹುಳಿಯಂತೆ, ಸತಿ ಪುರುಷನಂತೆ, ಕೀಲೋತ್ಪನ್ನದಂತೆ, ಕುಸುಮ ಗಂಧದಂತೆ, ಘಟ ಪ್ರಾಣದಂತೆ, ಒಂದನೊಂದು ಮೀರಿ ಹಿಂಗುವ ಕಾವಿಲ್ಲ. ಇದರ ಸಂಗವಾವುದು ಹೇಳಾ, ಅಲೇಖನಾದ ಶೂನ್ಯ ಬಹುಶಿಲೆಯ ನೆಲೆಯ ಬಿಟ್ಟೆಯಲ್ಲ.
--------------
ವಚನಭಂಡಾರಿ ಶಾಂತರಸ
ಇಡಾ ಪಿಂಗಳ ಸುಷಮ್ನನಾಳ ನಾಡಿಗಳಲ್ಲಿ, ಆತ್ಮನು ಸಂಚರಿಸಬಾರದೆಂಬ ಯೋಗಾಂಗದ ಅಣ್ಣಗಳು ಕೇಳಿರಯ್ಯಾ. ಆ ವಾಯುವನಧೋಮುಖಕ್ಕೆ ತರಬಾರದೆಂದು, ಊಧ್ರ್ವಮುಖಕ್ಕೆ ತಂದು, ಅಮೃತವನುಂಡೆಹೆನೆಂಬ ಅಷ್ಟಾಂಗಕರ್ಮಿಗಳು ಕೇಳಿರೊ. ಶರೀರದಲ್ಲಿ ಶುಕ್ಲ ಶೋಣಿತ ಮಜ್ಜೆ ಮಾಂಸ ಇವರೊಳಗಾದ ಸಾಕಾರದ ತಲೆಯಲ್ಲಿ ನಿರಾಕಾರದ ಅಮೃತದ ಉಂಡೆಹೆನೆಂಬುದು ಹುಸಿಯಲ್ಲವೆ? ಬಂಜೆಯಾವಿಂಗೆ ಕ್ಷೀರದ ಕೆಚ್ಚಲುಂಟೆ? ಕಲ್ಲಿನ ಹಳ್ಳದಲ್ಲಿ ಚಿಲುಮೆಯ ಸಾರವುಂಟೆ? ಹೊಲ್ಲಹ ದೇಹದಲ್ಲಿ ನಲ್ಲಹ ಕ್ಷೀರವುಂಟೆ? ಇವನೆಲ್ಲವನರಿಯದೆ ಬಲ್ಲತನವ ಸೂರೆಗೊಟ್ಟ ಗೆಲ್ಲಗೂಳಿಗೆಲ್ಲಿಯದೊ, ಲಿಂಗಾಂಗಸಂಯೋಗದ ಪರಿ? ಹರಿವ ವಾರಿಧಿಗೆ ನೊರೆ ಪಾಂಸೆ ಮುಸುಕುವುದೆ? ಸುಡುವ ಅನಲಂಗೆ ತೃಣದ ಕಟ್ಟು ನಿಲುವುದೆ? ಅರಿವ ಪರಂಜ್ಯೋತಿ ಪ್ರಕಾಶಂಗೆ ತನುವ ದಂಡಿಸಿ, ಕಂಡೆಹೆನೆಂಬ ಭ್ರಾಂತೆಲ್ಲಿಯದೊ? ಆತನಿರವು ಘಟಮಠದೊಳಗೆ ಗ್ರಹಿಸಿರ್ಪ ಬಯಲಿನ ಇರವಿನಂತೆ ರವಿಯೊಳಗೆ ಸೂಸುವ ಕಿರಣದಂತೆ, ವಾಯುವಿನ ಬೆಂಬಳಿಯ ಗಂಧದಂತೆ ಬಿತ್ತಳಿದ ರಜ್ಜುವಿನ ತೈಲದ ಕುಡಿವೆಳಗಿನ ಕಳೆಯಂತೆ ಭಾವದ ಮಧ್ಯದಲ್ಲಿ ನಿಂದ ಓಂಕಾರಸ್ವರೂಪವನರಿಯದೆ ಕೆಟ್ಟರಲ್ಲ ಕರ್ಮಯೋಗಿಗಳು. ಪಳುಕಿನ ಶಿಲೆಯ ತೆರದಲ್ಲಿ ನಿಂದ ವಾರಣದಂತೆ, ನಿನ್ನ ನೀ ತಿಳಿಯಾ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಸರ್ವಾಂಗಭರಿತವಾದ ಶರಣ.
--------------
ಮೋಳಿಗೆ ಮಾರಯ್ಯ
ಭಕ್ತನಂತೆ ತ್ರಿವಿಧ ಮಲಕ್ಕಿಕ್ಕುವನೆ ಚಿತ್ತವ ? ವಿರಕ್ತನಂತೆ ಸರ್ವವ್ಯಾಪಾರಕ್ಕೆ ಮೊತ್ತದ ಇಂದ್ರಿಯ ವರ್ಗದಲ್ಲಿ , ಸುಚಿತ್ತವ ಬಿಟ್ಟು ಮತ್ತೆ ವಿರಕ್ತನಪ್ಪನೆ ? ಈ ಉಭಯದ ಭಾವವ ನಿಶ್ಚೆ ೈಸಿದಲ್ಲಿ , ಕುಸುಮ ಗಂಧದಂತೆ, ಮುಕುರ ಬಿಂಬದಂತೆ, ಉರಿ ಕಪುರದಿರವಿನ ತೆರದಂತೆ, ನಿಃಕಳಂಕ ಕೂಡಲಚೆನ್ನ ಸಂಗಮದೇವ ತಾನಾದ ಶರಣ.
--------------
ಹಡಪದ ರೇಚಣ್ಣ
ಸದಾಶಿವ ವಸ್ತುವ ಭೇದವಂಶದಲ್ಲಿ ಆದ ಮಹಾ ಅಂಧಕಾರದಲ್ಲಿ ಬಲಭದ್ರ ವೀರರುದ್ರನ ಸಂಬಂಧದಿಂದ ಆದ ಉಭಯ ಯುಗಳದಿಂದ ಆದ ಜಾತಿ ಉದ್ಭವ ಲಕ್ಷಣ. ಜಿಹ್ವೆಯಲ್ಲಿ ವೇದ, ಭುಜದಲ್ಲಿ ಶಸ್ತ್ರ, ಉದರದಲ್ಲಿ ವ್ಯವಹಾರ, ಜಂಘೆಯಲ್ಲಿ ಕೃಷಿ. ಇಂತೀ ಶೂದ್ರ ವೈಶ್ಯ ಕ್ಷತ್ರಿಯ ದ್ವಿಜ ಇಂತೀ ಮತಭೇದಂಗಳಲ್ಲಿ ಗೋತ್ರ ಹಲವಾಗಿ ವಾಸಿವಟ್ಟಕ್ಕೆ ಒಳಗಾದವು. ಇಂತಿವರ ಒಳಗು ಹೊರಗಲ್ಲ ಸಂತತ ಶರಣ ಶಿವಯೋಗಿ. ಕರಂಡದ ಗಂಧದಂತೆ, ಮೃತ್ತಿಕೆಯ ಹೇಮದಂತೆ ಶುಕ್ತಿಯ ಅಪ್ಪುವಿನಂತೆ, ಶಿಲೆಕುಲದ ರತಿಯಂತೆ ಮತ್ರ್ಯದ ಮತ್ತರ ಹೊದ್ದದ ಸ್ವಯಿಚ್ಫಾಪರ ಭಕ್ತ ಶಿವಯೋಗಿಗೆ ಮತ್ರ್ಯ ಕೈಲಾಸವೆಂಬ ಗೊತ್ತಿಲ್ಲ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನು ತಾನೆ.
--------------
ಪ್ರಸಾದಿ ಭೋಗಣ್ಣ
ಇಂತೀ ಗುರುಸ್ಥಲವ ಲಿಂಗಸ್ಥಲವ, ಅಂಗೀಕರಿಸಿ ನಿಂದ ಶರಣನ ಇರವು ವಾಯುವಿನ ಕೈಯ ಗಂಧದಂತೆ, ಸಾವಯ ನಿರವಯವೆ ಭೇದಿಸುವ ಸುನಾದದಂತೆ, ಅದ್ರಿಯ ಮುಸುಕಿದ ಮುಗಿಲ ರಂಜನೆಯ ಸಂದೇಹದ ನಿರಂಜನದಂತೆ, ಅಂಬುಧಿಯ ಚಂದ್ರನ ಪೂರ್ಣದ ಬೆಂಬಳಿಯಂತೆ. ಇಂತೀ ನಿಸ್ಸಂಗದಲ್ಲಿ ಸುಸಂಗಿಯಾದ ಐಕ್ಯಂಗೆ, ಬಂಧ ಮೋಕ್ಷ ಕರ್ಮಂಗಳೆಂದು ಸಂದೇಹವಿಲ್ಲ, ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ನೆನಹೆ ಲಿಂಗವಾದ ಮತ್ತೆ ಮುಟ್ಟುವುದಕ್ಕೆ ಮಸ್ತಕವಿಲ್ಲ. ಮಾಡುವಾತ ವರ್ಮಜ್ಞನಾದಲ್ಲಿ ಇಕ್ಕಿಹೆ ಕೊಚ್ಚಿಹೆನೆಂಬುದು ನಷ್ಟವಾಯಿತ್ತು. ಅರಿದು ಚರಿಸುವ ವಿರಕ್ತಂಗೆ ತಥ್ಯಮಿಥ್ಯವಳಿದಲ್ಲಿ ಹೊಕ್ಕೆಹೆ ಹೊರಟಿಹೆ ಇದಿರ ಚಿತ್ತವನರಿದೆಹೆನೆಂಬ ಗೊತ್ತುಗೆಟ್ಟಿತ್ತು. ಇಂತೀ ಭೇದಂಗಳ ಭೇದಿಸಿ ವಿಭಾಗಿಸದೆ ವಾಯುವಿನ ಕೈಯ ಗಂಧದಂತೆ ನಾಸಿಕಕ್ಕೆ ವಾಸನೆ ತೋರಿ ಹಿಡಿದೆಹೆನೆಂದಡೆ ಬುಡ ಸಿಕ್ಕದೆ ತ್ರಿವಿಧ ಭಕ್ತಿ ಸನ್ನದ್ಧನಾಗಿಪ್ಪ ಸದ್ಭಕ್ತನ ಶ್ರೀಪಾದವೆ ಗೋಪತಿನಾಥ ವಿಶ್ವೇಶ್ವರಲಿಂಗವಿಪ್ಪ ಆಲಯ.
--------------
ತುರುಗಾಹಿ ರಾಮಣ್ಣ
ತಾ ಗುರುವಾಹಾಗ ತನ್ನ ಗುರುವ ತಾನರಿತು, ತನಗೆ ಇಹದಲ್ಲಿ ಸುಖ, ತನ್ನ ಗುರುವಿಂಗೆ ಪರದಲ್ಲಿ ಪರಿಣಾಮವನೈದಿಸುವ ಉಭಯ ಗುರು ತಾನಾಗಿ ಇದಿರಿಂಗೆ ಪ್ರತಿಸ್ವರೂಪವ ಕೊಡುವಲ್ಲಿ, ತನ್ನಯ ನಿಜರೂಪ ಪ್ರಾಣಪ್ರತಿಷೆ*ಯ ಮಾಡಿ ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡುವಲ್ಲಿ, ಕಾಯದ ಸೂತಕವ ಕಳೆದು, ಮನದ ವಿಕಾರವ ಹಿಂಗಿಸಿ, ತನ್ನಿರವನರಿತು ಅರಿದರಿವ ಶಿಷ್ಯನ ಹೃತ್ಕಮಲ ಮಧ್ಯದಲ್ಲಿನೆಲೆಗೊಳಿಸಿ, ಅರಿವಿನ ಭೇದದಿಂದ ಶಿಲೆಯ ಸೂತಕವ ಕಳೆದು ಇಷ್ಟಪ್ರಾಣವ ಬೆಸುವ ಬೆಸುಗೆಯ ತೋರಿ, ಉಡುವ ತೊಡುವ, ಕೊಡುವ ಕೊಂಬ, ಮುಟ್ಟುವ ಅರ್ಪಿತಭೇದವ ದೃಷ್ಟದಿಂದ ತೋರಿ, ಗುರುವೆಂಬ ಭಾವ ತನಗೆ ತಲೆದೋರದೆ ಹರಶರಣರ ಮುಂದಿಟ್ಟು ನಿನ್ನಯ ಪರಿದೋಷವ ಪರಿಹರಿಸಿಕೊ ಎಂದು ತ್ರಿವಿಧದ ಭೇದವ ತೋರಿ, ಗುರುವೆಂಬ ಭಾವ ತನಗೆ ತಲೆದೋರದೆ ಹರಶರಣರ ಮುಂದಿಟ್ಟು, ನಿನ್ನಯ ಪರಿದೋಷವ ಪರಿಹರಿಸಿಕೊ ಎಂದು ತ್ರಿವಿಧವ ಭೇದವ ತೋರಿ. ತಾನು ಶುಕ್ತಿ ನುಂಗಿದ ಜಲದಂತೆ, ಭ್ರಮರ ನುಂಗಿದ ಗಂಧದಂತೆ, ದೃಜಕೊಂಡ ದೃಮಣಿಯಂತೆ, ನಾಮ ರೂಪು ಭಾವವಳಿದು ತಾನು ತಾನಾದಡೆ ಗುರುಸ್ಥಲ. ಅದ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕಾಯಕ್ಕೆ ಲಿಂಗವ ಸಾಹಿತ್ಯವ ಮಾಡುವಾಗ ಕರಣಂಗಳು ಮುಂಚು, ಕಾಯ ಹಿಂಚಾಗಿರಬೇಕು. ಆತ್ಮನನರಿವಾಗ ಕುರುಹಿನ ಭಾವವೆಲ್ಲಿದ್ದಿತ್ತು? ಅಂಗನಿರಂಗವ ಕೂಡಿ ಸಂಘಟಿಸುವಾಗ ಚಂದನ ಗಂಧದಂತೆ ಕ್ರೀ ಜ್ಞಾನ ಭೇದ. ಅದರಂಗವ ತಿಳಿದಲ್ಲಿ ಕಾಲಾಂತಕ ಭೀಮೇಶ್ವರ ಲಿಂಗವನರಿದುದು.
--------------
ಡಕ್ಕೆಯ ಬೊಮ್ಮಣ್ಣ
-->