ಅಥವಾ

ಒಟ್ಟು 15 ಕಡೆಗಳಲ್ಲಿ , 6 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುದಸ್ಥಾನದಲ್ಲಿ ಆಧಾರಚಕ್ರ, ಅಲ್ಲಿಗೆ ಪೃಥ್ವಿಯೆಂಬ ಮಹಾಭೂತ, ಸದ್ಯೋಜಾತವಕ್ತ್ರ, ಬ್ರಹ್ಮ ಪೂಜಾರಿ, ಸುವರ್ಣದ ತೇಜ, ಬಾಲರವಿಕೋಟಿ ಪ್ರಕಾಶ, ನಾಲ್ಕೆಸಳಿನ ತಾವರೆಯ ಮಧ್ಯದಲ್ಲಿ ಸುವರ್ಣಮಯಲಿಂಗ - ಅದು ಆಚಾರಲಿಂಗ, ಅದಕ್ಕೆ ಬೀಜಾಕ್ಷಾರ ಓಂ ನಾಂ ನಾಂ ನಾಂ ಎಂಬ ನಾದಘೋಷ. ಎಸಳು ನಾಲ್ಕರಲ್ಲಿ ವ, ಶ, ಷ, ಸ ಎಂಬ ನಾಲ್ಕಕ್ಷರ. ಅದು ದೇವರಿಗೂ ತಮಗೂ ಪಶ್ಚಿಮಮುಖ- ಸದ್ಯೋಜಾತ ವಕ್ತ್ರ, ಆಧಾರಚಕ್ರ. ಲಿಂಗಸ್ಥಾನದಲ್ಲಿ ಸ್ವಾದಿಷ್ಠಾನಚಕ್ರ, ಅಲ್ಲಿಗೆ ಅಪ್ಪುವೆಂಬ ಮಹಾಭೂತ, ವಾಮದೇವವಕ್ತ್ರ, ವಿಷ್ಣು ಪೂಜಾರಿ, ನೀಲದ ತೇಜ, ಬಾಲದ್ವಿಕೋಟಿ ಸೂರ್ಯಪ್ರಕಾಶ, ಅರೆಸಳಿನ ತಾವರೆಯ ಮಧ್ಯದಲ್ಲಿ ಗೋಕ್ಷೀರದ ಹಾಗೆ ಧವಳ ವರ್ಣದ ಲಿಂಗ - ಅದು ಗುರುಲಿಂಗ; ಅದಕ್ಕೆ ಬೀಜಾಕ್ಷರ ಓಂ ಮಾಂ ಮಾಂ ಮಾಂ ಎಂಬ ನಾದಘೋಷ. ಎಸಳು ಆರರಲ್ಲಿ ಬ ಭ ಮ ಯ ರ ಲ ಎಂಬ ಷಡಕ್ಷರ ಅದು ದೇವರಿಗೂ ತಮಗೂ ಉತ್ತರಮುಖ-ವಾಮದೇವವಕ್ತ್ರ, ಸ್ವಾದಿಷ್ಠಾನಚಕ್ರ. ನಾಭಿಸ್ಥಾನದಲ್ಲಿ ಮಣಿಪೂರಕಚಕ್ರ, ಅಲ್ಲಿಗೆ ಅಗ್ನಿಯೆಂಬ ಮಹಾಭೂತ, ಅಘೋರವಕ್ತ್ರ ರುದ್ರ ಪೂಜಾರಿ, ಮಾಣಿಕ್ಯತೇಜ, ಬಾಲತ್ರಿಕೋಟಿಸೂರ್ಯಪ್ರಕಾಶ, ಹತ್ತೆಸಳಿನ ತಾವರೆಯ ಮಧ್ಯದಲ್ಲಿ ಮಾಣಿಕ್ಯವರ್ಣದ ಲಿಂಗ-ಅದು ಶಿವಲಿಂಗ, ಅದಕ್ಕೆ ಬೀಜಾಕ್ಷರ ಓಂ ಶಿಂ ಶಿಂ ಶಿಂ ಎಂಬ ನಾದಘೋಷ. ಎಸಳು ಹತ್ತರಲ್ಲಿ ಡ, ಢ, ಣ, ತ, ಥ, ದ, ಧ, ನ, ಪ, ಫ ಎಂಬ ದಶಾಕ್ಷರ. ಅದು ದೇವರಿಗೂ ತಮಗೂ ದಕ್ಷಿಣಮುಖ - ಅಘೋರವಕ್ತ್ರ, ಮಣಿಪೂರಕಚಕ್ರ. ಹೃದಯ ಸ್ಥಾನದಲ್ಲಿ ಅನಾಹತಚಕ್ರ, ಅಲ್ಲಿಗೆ ವಾಯುವೆಂಬ ಮಹಾಭೂತ, ತತ್ಪುರುಷವಕ್ತ್ರ, ಈಶ್ವರ ಪೂಜಾರಿ ಕಪೋತವರ್ಣದ ತೇಜ, ಬಾಲಚತುಷ್ಕೋಟಿ ಸೂರ್ಯಪ್ರಕಾಶ, ಹನ್ನೆರಡೆಸಳಿನ ತಾವರೆಯ ಮಧ್ಯದಲ್ಲಿ ಶುದ್ಧ ಪಚ್ಚವರ್ಣದಲಿಂಗ-ಅದು ಜಂಗಮಲಿಂಗ, ಅದಕ್ಕೆ ಬೀಜಾಕ್ಷರ ಓಂ ವಾಂ ವಾಂ ವಾಂ ಎಂಬ ನಾದಘೋಷ. ಎಸಳು ಹನ್ನೆರಡರಲ್ಲಿ ಕ ಖ ಗ ಘ ಙ ಚ ಛ ಜ ಝ ಞ ಟಂಠ ಎಂಬ ದ್ವಾದಶಾಕ್ಷರ ಅದು ದೇವರಿಗೂ ತಮಗೂ ಪೂರ್ವಮುಖ-ತತ್ಪುರುಷ ವಕ್ತ್ರ, ಅನಾಹತ ಚಕ್ರ. ಕÀಠಸ್ಥಾನದಲ್ಲಿ ವಿಶುದ್ಧಿಚಕ್ರ, ಅಲ್ಲಿಗೆ ಆಕಾಶವೆಂಬ ಮಹಾಭೂತ, ಈಶಾನವಕ್ತ್ರ, ಸದಾಶಿವ ಪೂಜಾರಿ, ವಿದ್ಯುಲ್ಲತೆಯ ತೇಜ, ಬಾಲಪಂಚಕೋಟಿ ಸೂರ್ಯಪ್ರಕಾಶ, ಹದಿನಾರೆಸಳಿನ ತಾವರೆಯ ಮಧ್ಯದಲ್ಲಿ ಅನಂತಕೋಟಿ ಮಿಂಚುಗಳ ವರ್ಣದ ಲಿಂಗ_ ಅದು ಪ್ರಸಾದಲಿಂಗ, [ಓಂ ಯಾಂ ಯಾಂ ಯಾಂ ಎಂಬ ನಾದಘೋಷ]. ಎಸಳು ಹದಿನಾರರಲ್ಲಿ ಅ ಆ ಇ ಈ ಉ ಊ ಋ Iೂ ಏ ಐ ಓ ಔ ಅಂ ಅಃ ಎಂಬ ಷೋಡಶಾಕ್ಷರ. ಅದು ದೇವರಿಗೂ ತಮಗೂ ಊಧ್ರ್ವಮುಖ_ ಈಶಾನವಕ್ತ್ರ, ವಿಶುದ್ಧಿಚಕ್ರ. ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಅಲ್ಲಿಗೆ ಮನವೆಂಬ ಮಹಾಭೂತ, ಶ್ರೀಗುರುವೆ ವಕ್ತ್ರ ಮಾಹೇಶ್ವರ ಪೂಜಾರಿ, ಜ್ಯೋತಿರ್ವರ್ಣದ ತೇಜ. ಬಾಲಷಟ್ಕೋಟಿ ಸೂರ್ಯಪ್ರಕಾಶ ಎರಡೆಸಳಿನ ತಾವರೆಯ ಮಧ್ಯದಲ್ಲಿ ಶ್ರೀಗುರುವಿನ ಶ್ರೀಪಾದದ ವರ್ಣದ ಲಿಂಗ ಎಡಗಡೆಯ ಪಾದ ಕೆಂಪು ವರ್ಣ, ಬಲಗಡೆಯ ಪಾದ ಶ್ವೇತವರ್ಣ-ಅದು ಮಹಾಲಿಂಗ. ಅದಕ್ಕೆ ಬೀಜಾಕ್ಷರ `ಓಂಕಾರನಾದ ಘೋಷ. ಎಸಳೆರಡರಲ್ಲಿ ಅಕ್ಷರ ಹಂ ಸಂ ಎಂಬ [ಎರಡಕ್ಷರ] ಅದು ದೇವರಿಗೂ ತನಗೂ ಗಂಭೀರ ಮುಖ-ಶ್ರೀಗುರುವಕ್ತ್ರ, ಆಜ್ಞಾಚಕ್ರ. ಅಲ್ಲಿಂದತ್ತ ಬ್ರಹ್ಮರಂಧ್ರದಲ್ಲಿ ಬ್ರಹ್ಮಚಕ್ರ ಅಲ್ಲಿಗೆ ಚಂದ್ರನೆಂಬ ಮಹಾಭೂತ, ಲಿಂಗವಕ್ತ್ರ ಪರಮೇಶ್ವರ ಪೂಜಾರಿ, ಮಹಾಜ್ಯೋತಿರ್ವರ್ಣದ ತೇಜ, ಬಾಲ ಅನಂತಕೋಟಿಸೂರ್ಯಪ್ರಕಾಶ ಒಂದುನೂರ ಎಂಟು ಸಾವಿರೆಸಳಿನ ತಾವರೆಯ ಮಧ್ಯದಲ್ಲಿ ಮಹಾಜ್ಯೋತಿರ್ವರ್ಣದ ಲಿಂಗ. ಅದು ನಿರಾಮಯ ಲಿಂಗ, ಅದಕ್ಕೆ ಬೀಜಾಕ್ಷರ ಪ್ರಣವ ನಾದ ಘೋಷ, ಎಸಳೊಂದುನೂರ ಎಂಟು ಸಾವಿರದಲ್ಲಿ, ಒಂದನೂರ ಎಂಟು ಸಾವಿರ ಅಕ್ಷರ_ ಪ್ರೇತಾಸನ ವಿಶ್ವತೋಮುಖೋ ಬ್ರಹ್ಮಚಕ್ರ. ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ ವಿಶ್ವತೋ ಬಾಹುರುತ ವಿಶ್ವತಃ ಪಾತ್ ಸಂ ಬಾಹ್ಯಭ್ಯಾಂ ಧಮತಿ ಸಂಪತತ್ರೈ ದ್ರ್ಯಾವಾ ಭೂಮೀ ಜನಯನ್ ದೇವ ಏಕಃ ಇಂತೀ ಗುರುವಿನ ಬೆಳಗು ವಿಶ್ವವನ್ನಪಹರಿಸಿ, ತಾನು ತಾನೆ ಸೋಹಂ ಪ್ರಕಾಶ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಅರಿಯಲಿಲ್ಲದ ಅರಿವಿಂಗೆ ಬರಸೆಳೆದು ಕೊಟ್ಟನೊಂದು ಲಕ್ಷವನು. ಹಿರಿಯ ಮಾರ್ಗದಲ್ಲಿ ನಿಂದು ಹಗಲಿರುಳು ವ್ಯಾಪಾರ ನಡೆವಲ್ಲಿ, ಸುಂಕಿಗರೈತಂದು ನೋಡಲು ಕಾಡದ ಮುನ್ನ ಲೆಕ್ಕವ ಕೊಟ್ಟು ಕೌಲು ಕೊಂಡಲ್ಲಿ ಮೂಲದ್ರವ್ಯ ಮುಳುಗಿತ್ತು. ಹೇಳಲಿಲ್ಲ ಕೇಳಲಿಲ್ಲ, ಗುರುನಿರಂಜನ ಚನ್ನಬಸವಲಿಂಗದಲ್ಲಿ ಗಂಭೀರ ನಿಮ್ಮ ಮಹೇಶ್ವರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗಂಭೀರ ಗುಹೆಯೊಳಗಿಪ್ಪ ನಿರವಯ ಪರಮಾತ್ಮಲಿಂಗವನು ಅರುವಿನಮುಖದಿಂದ ಅಂಗ ಭಾವದ ಕಳೆಯೊಳು ನಿಂದು ಕರಸ್ಥಲಕ್ಕೆಯ್ದಿಸಿ, ನಯನಸ್ಥಲವೆರಸಿ ಹೃದಯಸ್ಥಲಕ್ಕೊಯ್ದು ಭೃಕುಟಿಸ್ಥಲದಲ್ಲಿರಿಸಿ ಮಂತ್ರಸ್ಥಲ ಕೂಡಿ ಲಯಸ್ಥಲದಲ್ಲಿ ಘನಸುಖಪರಿಣಾಮಿಯಾಗಿರ್ದ ಕಾಣಾ ನಿಮ್ಮ ಶರಣ. ಇಂತೀ ಸಗುಣ ನಿರವಯಾನಂದ ನಿಜಸುಖವನರಿಯಲರಿಯದೆ ಶೈವಾಗಮದ ನುಡಿಯವಿಡಿದು ಗಿರಿ ಗಹ್ವರ ನದಿಮೂಲ ಶರಧಿ ಕಾಂತಾರ ಕಾಶಿ ಮೊದಲಾದ ಕಂಡ ಕಂಡದುದಕ್ಕೆ ಹರಿದು ಹೋಗಿ ಅನ್ನೋದಕವ ಸಣ್ಣಿಸಿ ಸೊಪ್ಪು ಪಾಷಾಣಪುಡಿಯ ಕೊಂಡು ಕಷ್ಟಬಟ್ಟು ಕಾಣಲರಿಯದೆ ಕೆಟ್ಟುಹೋಗುವ ಭ್ರಷ್ಟರಿಗೆ ಜ್ಞಾನಿಯೆಂದು ನುಡಿವ ಶುನಕರಿಗೆ ನಾಯಕ ನರಕ ತಪ್ಪದು ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶಿಷ್ಯನಿಲ್ಲದಡೆ ಗುರು ಎಲ್ಲಿಹನಯ್ಯಾ? ಪೂಜಕನಿಲ್ಲದಡೆ ಲಿಂಗವೆಲ್ಲಹುದಯ್ಯಾ? ಭಕ್ತನಿಲ್ಲದಡೆ ಜಂಗಮವ್ಲೆಹನಯ್ಯಾ? ಜಲವಿಲ್ಲದಡೆ ಪಾದೋದಕವೆಲ್ಲಹುದಯ್ಯಾ? ಧೇನುವಿಲ್ಲದಡೆ ಭೂತಿಯೆಹುದಯ್ಯಾ? ತ್ರೈಪುರವಿಲ್ಲದಡೆ ರುದ್ರಾಕ್ಷಿಗಳೆಲ್ಲಿಹವಯ್ಯಾ? ವರ್ಣಂಗಳಿಲ್ಲದಡೆ ಮಂತ್ರಂಗಳೆಲ್ಲಿಹವಯ್ಯಾ? ನಾನಿಲ್ಲದಡೆ ನೀನೆಲ್ಲಿಯವನಯ್ಯಾ? ಇವೆಲ್ಲ ಭಾವಭ್ರಮೆಯಲ್ಲದೆ, ನಿರ್ಭಾವ ನಿಜಾನಂದ ತೂರ್ಯಾತೀತ ಪರವಸ್ತುವಿನ ಕೂಟದಲ್ಲಿ ಆನು ನೀನೆಂಬುಭಯ ಭಾವ ಇದ್ದಡೆ ತೋರ ಬಾರಾ, ಮಾರಹರ ಧೀರ ಗಂಭೀರ ಕಪಿಲಸಿದ್ಧಮಲ್ಲಿಕಾರ್ಜುನವೀರ.
--------------
ಸಿದ್ಧರಾಮೇಶ್ವರ
ಸ್ಫಟಿಕದ ಘಟದೊಳಗಿರ್ದ ಜ್ಯೋತಿಯ ಪ್ರಕಾಶವು ಆ ಘಟವನಾವರಿಸಿ ಪರೋಪಕಾರಕ್ಕೆ ಪ್ರವರ್ತಿಸುವಂತೆ, ಮಹಾಘನ ಗಂಭೀರ ಶರಣನ ಧವಲಾಂಗದಲ್ಲಿರ್ಪ ಜ್ಯೋತಿರ್ಮಯಲಿಂಗವು ಅಂಗವನಾವರಿಸಿ ಮಹಾಜ್ಞಾನವನೈದಿ ದಿವ್ಯಾನುಭಾವಪ್ರಕಾಶವನು ಸಹಜೋಪಕಾರಕ್ಕೆ ಪ್ರಭಾಮಯವಾಗಿ ಪ್ರವರ್ತಿಸುತ್ತಿಹನು ಗುರುನಿರಂಜನ ಚನ್ನಬಸವಲಿಂಗವು.
--------------
ದೇಶಿಕೇಂದ್ರ ಸಂಗನಬಸವಯ್ಯ
ಓಂಕಾರವೆಂಬ ಲಿಂಗದಲ್ಲಿ ನುಡಿದಾಡುವನಾರಯ್ಯ ? ನೋಡುವನಾರಯ್ಯ? ಕೊಂಬುವನಾರಯ್ಯ ? ಇಂತೀ ಭೇದವರಿತು ಸದಾಶಿವಲಿಂಗದಲ್ಲಿ ನೆಲೆಯಂಗೊಂಡು ಐದು ಅಂಗವ ಗರ್ಭೀಕರಿಸಿಕೊಂಡು ಈಶ್ವರನೆಂಬ ಮೆಟ್ಟಿಗೆಯ ಮೆಟ್ಟಿ ಬ್ರಹ್ಮ ವಿಷ್ಣು ರುದ್ರಾದಿಗಳೆಂಬ ಭವಸಾಗರವ ಹರಿದು ಒಂಬತ್ತು ನೆಲೆಯ ಮೇಲೆ ನಡೆದು ಹೋಗುವ ಗಂಭೀರ ನಿರವಯನೆಂಬ[ನ] ಸತಿಯಳುವಿಡಿದು ಎಂತಿರ್ದಂತಿರ್ದಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ
--------------
ಜಕ್ಕಣಯ್ಯ
ಸಂಭ್ರಮದ ಶರಧಿಯೊಳಿಂಬಿನಲ್ಲಿ ಪರಿತಪ್ಪಾಗ ಗಂಭೀರ ಉಳ್ಳುದನೊಂದನು ಕಾಣೆ, ಎನ್ನ ಬಿಡು ತನ್ನ ಬಿಡೆಂಬುದು ತನುಗುಣ ಸಂಬಂಧ. ಎನ್ನ ಬಿಡು ತನ್ನ ಬಿಡೆಂಬುದು ಕಾಯವಿಕಾರ. ದೆಸೆದೆಸೆವರಿದು ಪಸರಿಸುವ ಮನವನು ನಿಮ್ಮ ವಶಕ್ಕೆ ತಂದಿರಿಸಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಜಲದ ಚಿತ್ತಾರದ ಕೊರಳಿನಲ್ಲಿ ದಾರವಿಲ್ಲದ ಮುತ್ತಿನ ಸರವು ನೋಡಾ ! ಚಿತ್ತಾರವಳಿಯದೆ, ಮುತ್ತು ಉಳಿಯದೆ ನಿಂದ ನಿಲವಿನ ಪರಿಯ ನೋಡಾ ! ಗಮನವಿಲ್ಲದ ಗಂಭೀರ, ಶಬುದವಿಲ್ಲದ ಸಾರಾಯ ಸಮತೆಯಾಗಿ ನಿಂದ ಅಜಗಣ್ಣಂಗೆ ಇನ್ನಾರು ಸರಿ ಎಂಬೆನು
--------------
ಮುಕ್ತಾಯಕ್ಕ
ಪೂರ್ವಸಿಂಹಾಸನದಲ್ಲಿ, ಮಹಾಪರ್ವತದ ಮಸ್ತಕದಲ್ಲಿ, ಆ ಪರ್ವತಕ್ಕೆ ಕಾವಲು ಒಂಬತ್ತಾಗಿ, ಆ ಒಂಬತ್ತ ಕೂಡಿದ ದ್ವಾರ ಕೆಳಗಾಗಿ, ಅದರಿಂದ ನಡೆಯುತಿದ್ದು ಸಕಲ ವ್ಯವಹಾರಂಗಳು. ಆ ಪೂರ್ವದ್ವಾರದಲ್ಲಿ ಮಹಾಜ್ವಲ, ಮಹಾಜ್ವಲದಲ್ಲಿ ಗಂಭೀರ ಕಮಲ, ಗಂಭೀರ ಕಮಲದಲ್ಲಿ ಭವಿಸಿದಗ್ನಿ, ಪೂರ್ವದ್ವಾರವ ತಾಗೆ ಅಲ್ಲಿದ್ದ ವಾಯುರಾಜನು ದುರ್ಗ ಒಂಬತ್ತಕ್ಕೆ ಒಂದೇ ದ್ವಾರದಲ್ಲಿ ದಾಳಿಯನಿಟ್ಟು ನಾಯಕ ದುರ್ಗದಲ್ಲಿದ್ದ ಸುಗುಣ ಸುಜ್ಞಾನವೆಂಬ ಸರೋವರ ಹೊಕ್ಕು, ಮೂರು ಮೆಟ್ಟಿನ ಭಾವಿಯನ್ನಿಳಿದು, ಆ ಜಲವ ಕದಡಲಾಗಿ ಬಪ್ಪ ಬಾಹತ್ತರ ನಿಯೋಗದ ಧಾಳಾಧಾಳಿಯಂ ಕಂಡು, ಅಯ್ಯ, ಜಲವ ಹೋಗೆ ಇವರು ಕದಡಿದ ಜಲದೊಳಗೆ ಹೋದವರೆಲ್ಲಾ ಮುಕ್ತರಾ, ನೀನೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಹಿಡಿಗೊಳಗಾದ.
--------------
ಸಿದ್ಧರಾಮೇಶ್ವರ
ಅಲ್ಲೆನ್ನ ಅಹುದೆನ್ನ, ಎಲ್ಲವು ತನ್ನಿಂದಾಯಿತ್ತಾಗಿ. ಬೇಕೆನ್ನ ಬೇಡೆನ್ನ, ನಿತ್ಯತೃಪ್ತ ತಾನೆಯಾಗಿ. ಆಕಾರ ನಿರಾಕಾರವೆನ್ನ, ಉಭಯವನೊಳಕೊಂಡ ಗಂಭೀರ ತಾನೆಯಾಗಿ. 'ನಿಶ್ಯಬ್ದಂ ಬ್ರಹ್ಮ ಉಚ್ಯತೇ ' ಎಂಬ ಶ್ರುತಿಯ ಮತದಿಂದ ನುಡಿಗೆಟ್ಟವನಲ್ಲ. ಬೆಳಗು ಬೆಳಗನೆಯ್ದಿ ಮಹಾಬೆಳಗಾದ ಬಳಿಕ, ಹೇಳಲಿಲ್ಲದ ಶಬ್ದ ಕೇಳಲಿಲ್ಲದ ಕೇಳುವೆ. ರೂಹಿಲ್ಲದ ಕೂಟ, ಕೂಟವಿಲ್ಲದ ಸುಖ. ಸುಖವಿಲ್ಲದ ಪರಿಣಾಮ, ಪರಿಣಾಮವಿಲ್ಲದ ಪರವಶ. ಪರವಶ ಪರಮಾನಂದವೆಂಬುದಕ್ಕೆ ಎರವಿಲ್ಲವಾಗಿ ಆತ ಲಿಂಗೈಕ್ಯನು. ಇಂತಪ್ಪ ಲಿಂಗೈಕ್ಯನೊಳಗೆ ಏಕವಾಗಿ ಬದುಕಿದೆನು ಕಾಣಾ, ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯ.
--------------
ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನ
ಮಹಾಘನ ಗಂಭೀರ ಗುರುವಿನಿಂದುದಯವಾದ ಚಿದಾನಂದ ಭಕ್ತನು, ಸತ್ಯಕಾಯಕದಿಂದೆ ಗಳಿಸಿದರ್ಥವನು ತ್ರಿಕರಣ ಸುಪ್ರಕಾಶದೊಳು ನಿಂದು, ಕಾಯದೆರೆಯಂಗೆ ಕಪಟರಹಿತನಾಗಿ, ಮನದೆರೆಯಂಗೆ ಸಂಕಲ್ಪರಹಿತನಾಗಿ, ಪ್ರಾಣದೆರೆಯಂಗೆ ಭ್ರಾಮಕರಹಿತನಾಗಿ, ನಿರ್ವಂಚನೆ ತನಿರಸದೊಳ್ಮುಳುಗಿ ಕೊಟ್ಟು ಕೊಳದಿರಬಲ್ಲಾತನೇ ಸಹಜವೆಂಬೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಂಡರೆ ಮನೋಹರವಯ್ಯಾ, ಮಾತನಾಡಿದರೆ ಸೊಗಸು ಕಾಣಯ್ಯಾ. ನಮೋ ನಮೋ ಎಂದು ಕೊಂಡಾಡಿದರೆ ಕುಲಕೋಟಿ ಪಾವನವಯ್ಯಾ. ನಿಮ್ಮ ಶಿವಶರಣರ ಸಂಗವ ಬಯಸುವ ಭಾವಜ್ಞರಾ ಗುರುನಿರಂಜನ ಚನ್ನಬಸವಲಿಂಗದಲ್ಲಿ ಅಚ್ಚೊತ್ತಿದ ಅನಘ ಗಂಭೀರ.
--------------
ದೇಶಿಕೇಂದ್ರ ಸಂಗನಬಸವಯ್ಯ
ನೆಲ ಗಗನಕ್ಕೆ ನಿಲುಕದ ಗಂಭೀರ ಮಹಾಘನ ಪರಬ್ರಹ್ಮಮೂರುತಿ ಕರಸ್ಥಲದಲ್ಲಿ ಬಂದಿರಲು, ಭವಿಬೆರಸಿದುದಕವ ಮಜ್ಜನಕ್ಕೆರೆದರೆ ಗುರುದ್ರೋಹ. ಭವಿಬೆಳೆದ ಪತ್ರಿ ಪುಷ್ಪಂಗಳ ಧರಿಸಿದರೆ ಲಿಂಗದ್ರೋಹ. ಭವಿಬೆರಸಿದ ಗಂಧಾಕ್ಷತೆ ಪರಿಮಳದ್ರವ್ಯಂಗಳ ಧರಿಸಿದರೆ ಜಂಗಮದ್ರೋಹ. ಭವಿಬೆರಸಿದ ಪಾಕಪದಾರ್ಥವನರ್ಪಿಸಿದರೆ ಪ್ರಸಾದದ್ರೋಹ. ಭವಿಸೋಂಕಿದ ಹಾಲು ತುಪ್ಪ ಸಕ್ಕರೆ ಮಧು ಮೊಸರು ಮೊದಲಾದವನರ್ಪಿದರೆ ಪಾದೋದಕದ್ರೋಹ. ಇಂತು ಪಂಚವಿಧವನರಿಯದೆ ಪಂಚಮಹಾಪಾತಕಕ್ಕಿಳಿವ ಪಾಶಬದ್ಧರಿಗೆ ದೂರವಾಗಿಪ್ಪ ನಮ್ಮ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭುವನದ್ವಯ ತತ್ವದ್ವಯ ವರ್ಣದ್ವಯ ಮಂತ್ರದ್ವಯ ಕಲಾದ್ವಯ ಪದದ್ವಯ ನಿರಾಮಯ ನಿರುಪಮಾನಂದ ಸುಖಮಯ ಶರಣ ತಾನು ಸಾಧ್ಯಾಸಾಧ್ಯ ಗಮನಕ್ಕೆ ಗೋಚರನಾಗಿ, ಗಮನಾಗಮನ ಗರ್ಭಭರಿತ ಗಂಭೀರ ಗುಣಾರ್ಣವ ಪರಮಜ್ಯೋತಿರ್ಲಿಂಗವಾಗಿರ್ದನಲ್ಲದೆ ಪಂಚೇಂದ್ರಿಯವಿಷಯ ಗುಣಭರಿತನಾಗಿ ಬಲ್ಲಂತೆ ಭುಲ್ಲವಿಸಿ ಚರಿಸುತ್ತ ಅಲ್ಲಲ್ಲಿಗೊಂದೊಂದು ವ್ರತ ನಿಯಮಂಗಳ ಗಂಟಿಕ್ಕಿಕೊಂಡು ಬಲೆಯೊಳು ಬಿದ್ದು ಹೋಗುವ ಫಲಪಿಸುಣಿಗಳಂತಲ್ಲ ಕಾಣಾ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣನ ಪರಿ ಆರಿಗೆಯೂ ಕಾಣಬಾರದು.
--------------
ದೇಶಿಕೇಂದ್ರ ಸಂಗನಬಸವಯ್ಯ
-->