ಅಥವಾ

ಒಟ್ಟು 18 ಕಡೆಗಳಲ್ಲಿ , 13 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಗನ ಮಂಡಳದ ಸೂಕ್ಷ್ಮನಾಳದಲ್ಲಿ `ಸೋಹಂ ಸೋಹಂ' ಎನುತ್ತಿರ್ದತ್ತದೊಂದು ಬಿಂದು, ಅಮೃತದ ವಾರಿಧಿಯ ದಣಿಯುಂಡ ತೃಪ್ತಿಯಿಂದ. ಗುಹೇಶ್ವರಾ ನಿಂದ(ನಿಮ್ಮ?)ಲ್ಲಿಯೆ ಎನಗೆ ನಿವಾಸವಾಯಿತ್ತು.
--------------
ಅಲ್ಲಮಪ್ರಭುದೇವರು
ಗಗನ ಮಂಡಲದಲ್ಲಿ ಹುಟ್ಟಿದ ಶಶಿಕಳೆ ಭೂಮಂಡಲದಲ್ಲಿ ಉದಯವಾದುದ ಕಂಡೆನಯ್ಯ. ಭೂಮಂಡಲದಲುದಯವಾದ ಶಶಿಕಳೆ, ತ್ರೆ ೈಜಗವ ನುಂಗಿತ್ತು ನೋಡ. ನಾರಿಯರ ತಲೆಯ ಮೆಟ್ಟಿ, ಮೇರುವೆಯ ಹೊಕ್ಕಿತ್ತು ನೋಡಾ. ಮೇರುಗಿರಿಯ ಪರ್ವತದಲ್ಲಿಪ್ಪಾತನನೆಯ್ದೆ ನುಂಗಿತ್ತು ನೋಡಾ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಿಜವನರಿಯದ ಶರಣರು, ಲಿಂಗೈಕ್ಯರು, ಗಿರಿ ಗಗನ ಗಹ್ವರದೊಳಗಿದ್ದಲ್ಲಿ ಫಲವೇನೊ? ಮನವು ಲೇಸಾಗಿದ್ದಡೆ ಸಾಲದೆ? ಪರಮಸುಖಿಯಾಗಿರ್ಪ ಶರಣನ ಹೃದಯದಲ್ಲಿ ಸದಾಸನ್ನಹಿತನು ಸಕಳೇಶ್ವರದೇವ.
--------------
ಸಕಳೇಶ ಮಾದರಸ
ಒಂದು ಎರಡಹುದೆ ? ಎರಡು ಒಂದಹುದೆ ? ಒಂದು ಒಂದೇ, ಎರಡು ಎರಡೇ. ಅದು ಕಾರಣ, ಶಿವನು ತನ್ನ ಲೀಲಾಕಾರಣವಾಗಿ ಮಾಯಾ ನಿರ್ಮಿತವಂ ಮಾಡಿ, ಆ ಮಾಯಾರಚನೆಯಿಂದಾದ ಬ್ರಹ್ಮಾಂಡ ಸಂದೋಹ, ಹರಿ ವಿರಿಂಚಿ ಸುರಪತಿ ಸುರಾಸುರರು ನರನಿಕರ, ಖಗಮೃಗ ಜೀವರಾಶಿಗಳೆಲ್ಲವೂ ಶಿವನಿಂದಲಾಗಿ, ಶಿವನಿಂದ ಹೊರೆಯಿಸಿಕೊಂಡು, ಶಿವನಿಂದವೆ ಹೋದವೆಂದಡೆ, ಅವರ ಆಗು ಹೋಗು ಇರವು ಹೋಗಿನೊಳಗೆ ಲಯ ಗಮನ ಸ್ಥಿತಿ ಶಿವಂಗುಂಟೆ, ಎಲೆ ಮರುಳಗಳಿರಾ ? ಗಗನದಲ್ಲಿ ತೋರಿದ ಮೇಘವು ಗಗನದಲ್ಲಿ ಅಡಗಿದವೆಂದಡೆ, ಆ ಗಗನ ತಾ ಮೇಘವೆ ? ತನ್ನಾದ್ಥೀನಶಕ್ತಿದಂಡದಿಂ ಕುಂಬಾರ ಚಕ್ರವ ತಿರುಗಿಸಲು, ಆ ಚಕ್ರಭ್ರಮಣ ಚೈತನ್ಯವು ಆ ಕುಂಬಾರನೆ, ಮರುಳುಗಳಿರಾ ? ಆ ಚೈತನ್ಯ ಅಡಗುವುದೆ ? ನಿಲ್ಲು ಮಾಣು. ಬಿಲ್ಲ ನಾರಿಗೆ ಅಂಬಂ ಸಂಧಾನಿಸಿ ಎಸೆಯಲಾ, ಅಂಬು ಹರಿದ ಚೈತನ್ಯ ಬಿಲ್ಲು ಕಾರಣವೆ ? ಅಲ್ಲ , ನಿಲ್ಲು , ಮಾಣು. ಇವೆಲ್ಲವು ಚೈತನ್ಯಂಗಳು. ಅಂತು ಸರ್ವವೆಲ್ಲವು ತೋರಿಯಡಗುವುದು. ಸರ್ವೇಶ್ವರನು, ಸರ್ವಕರ್ತೃ, ಸರ್ವಚೈತನ್ಯ, ಸೂತ್ರಯಂತ್ರವಾಹಕ ಶಿವನು. ಸರ್ವಲಯ ಗಮನ ಸ್ಥಿತಿ ತನಗುಂಟೆ ? ನಿಲ್ಲು , ಮಾಣಿರೆ, ಎಲೆ ಜಡಜೀವಿಗಳಿರಾ. ಗಗನದ ರವಿ ಕಿರಣದಿಂದ ಸಕಲರೂಪಿತ ದ್ರವ್ಯಪದಾರ್ಥಂಗಳಲ್ಲಿ ಪ್ರತಿಪ್ರಭೆ ತೋರಲು, ಆ ಪ್ರತಿಪ್ರಭೆಯ ಆಗುಹೋಗಿನ ಸ್ಥಿತಿಗತಿ ಆ ಗಗನದ ಸೂರ್ಯಂಗುಂಟೆ, ಎಲೆ ಜಡಜೀವಿಗಳಿರಾ ? ಈ ಪರಿಯಲೆ ವಿಶ್ವವೆಲ್ಲವಕ್ಕೂ ತಾನಲ್ಲದ ತಾನಿಲ್ಲದ ಪ್ರೇರಣ ಚೈತನ್ಯವೇ ವಿಶ್ವದ ನಯನ, ವಿಶ್ವದ ಮುಖ, ವಿಶ್ವದ ಬಾಹು, ವಿಶ್ವದ[ಚ]ರಣ, ಸ್ವರ್ಗಮತ್ರ್ಯ ಭುವನಾದ್ಯಂಗಳ ಮೂಲಚೈತನ್ಯಸೂತ್ರ ತಾನಲ್ಲದೆ, ತಾನಿಲ್ಲದೆ ಆಡಿಸುವ ಸೂತ್ರಾತ್ಮಕನಲ್ಲದೆ ಅವರಾಗು ತನಗುಂಟೆ, ಎಲೆ ಭ್ರಮಿತರಿರಾ ? `ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋ ಬಾಹುರುತ ವಿಶ್ವತಸ್ಪಾ ಪಾತ್ | ಸಂ ಬಾಹುಭ್ಯಾಂಧಮತಿ ಸಂಪತತ್ರೈದ್ರ್ಯಾವಾ ಭೂಮೀ ಜನಯನ್ ದೇವ ಏಕಃ ಎನಲು, `ಈಶಾನಃ ಶಿವ ಏಕೋದೇವಃ ಶಿವಂ ಕರಃ ತತ್ಸರ್ವಮನ್ಯತ್ ಪರಿತ್ಯಜೇತ್' ಎನಲು, `ಏಕ ಏವ ರುದ್ರೋ ನ ದ್ವಿತೀಯಾಯ ತಸ್ಥು' ಎನಲು, ಶಿವನೊಬ್ಬನೇ, ಇಬ್ಬರಿಲ್ಲ . `ನ ಯಥಾಸ್ತಿ ಕೂರ್ಮರೋಮಾಣಿ, ಶೃಂಗಂ ನ ನರಮಸ್ತಕೇ ನ ಯಥಾಸ್ತಿ ವಿಯತ್ಪುಷ್ಪಂ ನ ತಥಾಸ್ತಿ ಪರಾತ್ಪರಃ |' ನಾಲ್ಕು ವೇದಂಗಳು ಬಿನ್ನವಿಸಿದವು ಕೇಳಿರೇ ಎಲೆ ವಿಪ್ರರಿರಾ. ಇದನರಿದು, ಬಸವಪ್ರಿಯ ಕೂಡಲಚೆನ್ನಸಂಗಯ್ಯನನೆ ಧ್ಯಾನಿಸಿ, ನಿರೀಕ್ಷಿಸಿ, ಸ್ತುತಿಸಿ, ಯಜಿಸಿ ಕೃತಾರ್ಥರಾಗಿರೆ ಎಲೆ ಮರುಳು ವಿಪ್ರರಿರಾ.
--------------
ಸಂಗಮೇಶ್ವರದ ಅಪ್ಪಣ್ಣ
ಆನು ನೀನೆಂಬ ಸಂದೇಹ ಗಗನಕ್ಕೆ ಕೈಯನಿಟ್ಟಂತೆ! ಕೈ ಗಗನವ ನುಂಗಿತ್ತೊ, ಗಗನ ಕೈಯ ನುಂಗಿತ್ತೊ ಎಂಬುದ ನಿನ್ನ ನೀ ತಿಳಿದು ತಿಳಿವಿನ ಕಣ್ಣಿಂದ ನೋಡಯ್ಯಾ. ನಿಜಗುಣವೆಂಬ ಆನಂದರತ್ನವ ನುಂಗಿದ ರುಚಿಯನು ಏನೆಂದು ಉಪಮಿಸುವೆ?
--------------
ನಿಜಗುಣಯೋಗಿ
ಬಸುರಿಲ್ಲದ ಬಯಕೆ ಇದೆತ್ತಣದೊ ! ಶಿಶುವಿಲ್ಲದ ಜೋಗುಳ ತೊಟ್ಟಿಲು ತೂಗುವುದಿದೇನೊ ! ಆಸವಲ್ಲದ ಹೊಳೆಯ ಅಂಬಿಗನ ಹುಟ್ಟುನುಂಗಿ, ಶಶಿಯಿದ್ದ ಗಗನ ಬಿಸಿಯಾಗಿಪ್ಪುದಿದೇನೊ ! ಮಸಣವ ನುಂಗಿದ ಹೆಣ, ವಿಷವ ನುಂಗಿದ ಸರ್ಪನೊ ! ಕೃಷಿ ಹೊಲನ ನುಂಗಿ, ಬೀಜಕೆ ನೆಲೆಯಿಲ್ಲ . ಆಸವಲ್ಲದ ಕೊಟ್ಟವ ಬೇಡನ ಬಲೆ ನುಂಗಿ ಎಸೆವುದಿದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭವೆ.
--------------
ಹೇಮಗಲ್ಲ ಹಂಪ
ಆರು ಬಣ್ಣದ ಹಕ್ಕಿ, ತೋರಿದ ಗುರಿಯ ನುಂಗಿ ಮೀರಿ ನಿಂದುದು ಗಗನ ಮಂಡಲದಲ್ಲಿ. ಸಾರುತೈದೂದೆ ಹೋಗಿ ಮೀರಿ ಬರಬೇಡಾ ಎಂದು ಬೇರೆ ಮತ್ತೊಂದು ದಿಕ್ಕ ತೋರುತ್ತದೆ. ಮೂರುಕೋಣೆಯೊಳಗೆ ಈರೈದು ತಲೆಯುಂಟು. ನೋಡಿ ಬಂದಾ ಶಿಶು ಬೆಸಗೊಂಬುದು. ಪ್ರಾಣವಿಲ್ಲದ ಸೇನೆ ಪದ್ಮಸಂಖ್ಯೆಯು ಕೋಟೆದಾಳಿವರಿದುದು ಎಂಟುಜಾವದೊಳಗೆ. ಜಾಲಗಾರನ ಕೈಯ ಮಾಣಿಕ್ಯ ಸಿಕ್ಕದೆ ಆಳಿಗೊಂಡಿತ್ತು. ಜಗವ ಬೆಳುಮಾಡಿ, ಜಾಣ ಕವಿಗಳಿಗೆ ಎದೆ ದಲ್ಲಣ. ಬಳ್ಳೇಶ್ವರನ ಕನ್ನಡವು ಹೇಳುವಡೆ ಯುಗಸಂಖ್ಯೆ ಶಿವ ಶಿವಾ
--------------
ಬಳ್ಳೇಶ ಮಲ್ಲಯ್ಯ
ಅರಿದು ಮರೆದವನಲ್ಲ, ಮರೆದು ಅರಿದವನಲ್ಲ, ಅರಿವು ಮರೆವು ಹಿಡಿದು ಚರಿಸಿದವನಲ್ಲ, ಗಗನ ಧರೆಹಿರಿಯರ ನೆರವಿಯವನಲ್ಲ. ಪರಮ ಪರಿಣಾಮಿ ನಿರಂತರ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅರುದರುಶನದೊಡೆಯನ ಅಂತರಂಗದೊಳಿಪ್ಪ ಅರಿಗಾದಡೆ[ಯೂ] ಗಗನ ಭುವನವೊಂದೆ ಎಂದುದಾಗಿ, ಮಹಾಬಯಲು ಕಡಿದು ಎರಡ ಮಾಡಿಹೆನೆಂದು, ಆ ಬಯಲು ಎರಡಹುದೆ? ಅಣುರೇಣು [ತೃಣಕಾಷ*] ಮಧ್ಯ ಗುಣಭರಿತ ಅಖಂಡ ಬ್ರಹ್ಮವ ಪ್ರಾದೇಶಿಕ ಪರಿಚ್ಛಿನ್ನವೆಂದು ನುಡಿಯಲುಂಟೆ ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಶರಣನೇ ಲಿಂಗ; ಲಿಂಗವೇ ಶರಣ ಈ ಎರಡಕ್ಕೂ ಭಿನ್ನವಿಲ್ಲವಯ್ಯ. ಲಿಂಗಕ್ಕಿಂತಲೂ ಶರಣನೇ ಅಧಿಕವಯ್ಯ. ನಿಮಗೆ ಪಂಚಮುಖ; ನಿಮ್ಮ ಶರಣಂಗೆ ಸಹಸ್ರ ಮುಖ, ಸಹಸ್ರ ಕಣ್ಣು, ಸಹಸ್ರ ಬಾಹು, ಸಹಸ್ರ ಪಾದ. ಆ ಶರಣನ ಮುಖದಲ್ಲಿ ರುದ್ರ; ಭುಜದಲ್ಲಿ ವಿಷ್ಣು, ಜಂಫೆಯಲ್ಲಿ ಆಜನ ಜನನ. ಇಂದ್ರ ಪಾದದಲ್ಲಿ; ಚಂದ್ರ ಮನಸ್ಸಿನಲ್ಲಿ; ಸೂರ್ಯ ಚಕ್ಷುವಿನಲ್ಲಿ; ಅಗ್ನಿ ವಕ್ತ್ರದಲ್ಲಿ; ಪ್ರಾಣದಲ್ಲಿ ವಾಯು; ನಾಭಿಯಲ್ಲಿ ಗಗನ; ಪಾದತಲದಲ್ಲಿ ಭೂಮಿ; ದಶದಿಕ್ಕು ಶ್ರೋತ್ರದಲ್ಲಿ; ಶಿರದಲುದಯ ತೆತ್ತೀಸಕೋಟಿ ದೇವಾದಿದೇವರ್ಕಳು. ಇಂತು ಕುಕ್ಷಿಯಲ್ಲಿ ಜಗವ ನಿರ್ಮಿಸಿ ನಿಕ್ಷೇಪಿದನು ಅಕ್ಷಯನು, ಅಗಣಿತನು. ಇಂತಪ್ಪ ಮಹಾಮಹೇಶ್ವರನ ನಿಜ ಚಿನ್ಮಯಸ್ವರೂಪವೇ ಪ್ರಭುದೇವರು ನೋಡಾ. ಅಂತಪ್ಪ ಪರಮ ಪ್ರಭುವೇ ಎನಗೆ ಪರಮಾನಂದವಪ್ಪ ಪ್ರಾಣಲಿಂಗವೆಂದು ಆರಾಧಿಸಿ ಬದುಕಿದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಗಲಿರುಳ್ಗಳಿಲ್ಲದಂದು, ಯುಗಜುಗಂಗಳು ಮರಳಿ ಮರಳಿ ತಿರುಗದಂದು, ಗಗನ ಮೇರು ಕೈಲಾಸಂಗಳಿಲ್ಲದಂದು, ಖಗ ಮೃಗ ಶೈಲ ವೃಕ್ಷಂಗಳಿಲ್ಲದಂದು, ಅಜಹರಿಸುರಾಸುರ ಮನುಮುನಿಗಳಿಲ್ಲದಂದು, ಜಗದ ಲೀಲಾವೈಭವಂಗಳೇನೂ ಇಲ್ಲದಂದು, ಅಖಂಡೇಶ್ವರಾ, ನಿಮ್ಮ ನೀವರಿಯದೆ ಅನಂತಕಾಲವಿರ್ದಿರಂದು.
--------------
ಷಣ್ಮುಖಸ್ವಾಮಿ
ಭೂಮಿ ಘನವೆಂಬೆನೆ ಪಾದಕ್ಕೊಳಗಾಯಿತ್ತು ಗಗನ ಘನವೆಂಬೆನೆ ಕಂಗಳೊಳಗಾಯಿತ್ತು. ಮಹವು ಘನವೆಂಬೆನೆ ಮಾತಿಂಗೊಳಗಾಯಿತ್ತು. ಘನ ಘನವೆಂಬುದಿನ್ನೆಲ್ಲಿಯದೆಲವೊ! ಅರಿವಿಂಗಾಚಾರವಿಲ್ಲ, ಕುರುಹಿಂಗೆ ನೆಲೆಯಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಕೇಳುವ ಸಂಗೀತ, ನೋಡುವ ಸುರೂಪುಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ವಾಸಿಸುವ ಸುಗಂಧ, ರುಚಿಸುವ ಸುರಸಂಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ತಟ್ಟು ಮುಟ್ಟು ತಾಗು ನಿರೋಧ ಸೋಂಕು ಸಂಬಂಧಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ಹಲ್ಲುಕಡ್ಡಿ ದರ್ಪಣ ಮೊದಲಾದ ಪದಾರ್ಥಂಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ಚಳಿ ಮಳೆ ಗಾಳಿ ಬಿಸಿಲು ಸಿಡಿಲು ಮಿಂಚು ನೀರು ನೆಳಲುಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ಪೃಥ್ವಿ ಗಗನ ತತ್ತ್ವತೋರಿಕೆ ಸೂರ್ಯ ಚಂದ್ರ ಅಗ್ನಿ ತಾರೆ ಪ್ರಕಾಶಂಗಳ ಲಿಂಗಾರ್ಪಿತವ ಮಾಡಬಲ್ಲರೆ ಪರಮಪ್ರಸಾದಿಯೆಂಬೆನು. ಇಂತೀ ಲಿಂಗಾರ್ಪಿತ ಸಕೀಲವನರಿಯದೆ ಬರಿದೆ ಪ್ರಸಾದಿಗಳೆಂದು ನುಡಿವ ನುಡಿಜಾಣರ ಕಂಡು ನಾಚಿದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗಿರಿಯ ಕರದಿಂದೆತ್ತಿದಡೇನು ? ಹರಿವ ವಾರುಧಿಯನಾಪೋಷಣಂಗೊಂಡಡೇನು ? ಗಗನ ಗಮನದಲ್ಲಿ ಸುಳಿದಡೇನು ? ಇವರೆಲ್ಲರೂ ಪವನದ ಬಳಿಯಲಭ್ಯಾಸಿಗಳು. ಅರ್ಚಿಸಿ, ಪೂಜಿಸುವ ಮಚ್ಚರದೊಳಗಣ ಲೌಕಿಕರ ಮೆಚ್ಚ, ಸಕಳೇಶ್ವರದೇವ, ವೇಷಡಂಬಕರ.
--------------
ಸಕಳೇಶ ಮಾದರಸ
ಇಹಲೋಕ ಪರಲೋಕ ತಾನಿರ್ದಲ್ಲಿ, ಗಗನ ಮೇರುಮಂದಿರ ತಾನಿರ್ದಲ್ಲಿ, ಸಕಲಭುವನ ತಾನಿರ್ದಲ್ಲಿ, ಸತ್ಯ ನಿತ್ಯ ನಿರಂಜನ ಶಿವತತ್ವ ತಾನಿರ್ದಲ್ಲಿ, ಅಂತರ ಮಹದಂತರ ತಾನಿರ್ದಲ್ಲಿ, ಸ್ವತಂತ್ರ ಗುಹೇಶ್ವರಲಿಂಗ ತಾನಿರ್ದಲ್ಲಿ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->