ಅಥವಾ

ಒಟ್ಟು 18 ಕಡೆಗಳಲ್ಲಿ , 12 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಟವಾಕಾಶವನಡರಿತ್ತೆಂದಡೆ, ಪಟಸೂತ್ರದ ಸಂಚು ಕೆಳಗಿಪ್ಪುದು ನೋಡಾ ! ವ್ಯೋಮದಲ್ಲಿ ಚರಿಸುವ ಸೋಮಸೂರ್ಯರೆಂದಡೆ ಹೇಮಗಿರಿಯ ಸಂಚ ತಪ್ಪದು ನೋಡಾ ! ಭೂಮಿಯನೊಲ್ಲದೆ ಗಗನಕ್ಕೆ ಹಾರಿದವಂಗೆ, ಆ ವ್ಯೋಮದಲ್ಲಿ ನಿಲುವುದಕ್ಕೆ ಒಂದೆಡೆಯುಂಟೆ ? ನಮ್ಮ ಕೂಡಲಚೆನ್ನಸಂಗನ ಶರಣರೊಳಗಿರ್ದು ಸೀಮೆಯ ಮೀರಿದ ನಿಸ್ಸೀಮನು ಸಿದ್ಧರಾಮಯ್ಯನೆಂಬ ಮಾತು ಅಂತಿರಲಯ್ಯಾ ಪ್ರಭುವೆ.
--------------
ಚನ್ನಬಸವಣ್ಣ
ಕೋಣನೊಂದು ಕುದುರೆಯ ನುಂಗಿತ್ತು. ಇರುಹೆ ಒಂದಾನೆಯ ನುಂಗಿತ್ತು. ಬಲ್ಲುಕನನಲ್ಲವೆನಿಸಿತ್ತು, [ಕ]ಟ್ಟಿದ ಪಕ್ಷಿ ನೆರೆ ಪಾರಿತ್ತು ಗಗನಕ್ಕೆ. ಚಿದಾಕಾಶವೆ ತಾನಾಗಿ, ಬಿಂದ್ವಾಕಾಶವನೊಡೆಯಿತ್ತು. ದೃಷ್ಟಾಕಾಶವ ನಷ್ಟಂಗೈಯಿತ್ತು, ಬ್ಥಿನ್ನಾಕಾಶವನೊಡಗೂಡಿತ್ತು, ಮಹದಾಕಾಶವನೊಳಕೊಂಡಿತ್ತು. ಸೌರಾಷ್ಟ್ರ ಸೋಮೇಶ್ವರನೆಂಬ ನಿಜದಾಕಾಶದಲ್ಲಿ ನಿಂದು ನಾಮರೂಪು ನಷ್ಟವಾಯಿತ್ತು.
--------------
ಆದಯ್ಯ
ಅಂಗದೊಳಗೊಂದು ಮಂಗಳದ ಹಕ್ಕಿ ಕುಳಿತಿಪ್ಪುದ ಕಂಡೆನಯ್ಯ. ಆ ಹಕ್ಕಿಯ ಹಿಡಿದು ಹೋಗದ ಮುನ್ನ ಅದು ಗಗನಕ್ಕೆ ಹಾರಿತ್ತು ನೋಡಾ! ಹಕ್ಕಿ ಹೋಯಿತ್ತು ಲಿಂಗದ ಗುಡಿಗೆ. ಮತ್ತೆ ಕಂಡನು ಒಬ್ಬ ತಳವಾರನು. ಆ ತಳವಾರನು ಗದೆಯ ತಕ್ಕೊಂಡು ಇಡಲೊಡನೆ ಮಂಗಳನೆಂಬ ಹಕ್ಕಿ ಬಿತ್ತು ನೋಡಾ! ಇದ ನೀವಾರಾದಡೆ ಹೇಳಿರಯ್ಯ, ನಾನಾದರೆ ಅರಿಯೆನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮನೆಯೊಳಗಣ ಜ್ಯೋತಿ ಮನೆಯ ಸುಟ್ಟು, ಮನೆ ಉಳಿದಿತ್ತು, ಅರಣ್ಯಸುಟ್ಟು ಅರಣ್ಯದ ಪಕ್ಷಿಯ ಕಾಲು ಸುಟ್ಟು ನಡೆಯಿತ್ತು, ತಲೆ ಸುಟ್ಟು ಕಣ್ಣು ಉಳಿದಿತ್ತು. ಮೈಸುಟ್ಟು ಪ್ರಾಣ ಉಳಿದಿತ್ತು, ಉಭಯ ರೆಕ್ಕೆ ಸುಟ್ಟು ಉರಿಯ ನುಂಗಿ ಗಗನಕ್ಕೆ ಹಾರಿ, ಮೇಲುಗಿರಿಯಲ್ಲಿ ಅಡಗಿತ್ತು. ಅದು ಅಡಗಿದ ಠಾವಿನಲ್ಲಿ ಅಡಗಬಲ್ಲರೆ ಭಕ್ತನೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆನು ನೀನೆಂಬ ಸಂದೇಹ ಗಗನಕ್ಕೆ ಕೈಯನಿಟ್ಟಂತೆ! ಕೈ ಗಗನವ ನುಂಗಿತ್ತೊ, ಗಗನ ಕೈಯ ನುಂಗಿತ್ತೊ ಎಂಬುದ ನಿನ್ನ ನೀ ತಿಳಿದು ತಿಳಿವಿನ ಕಣ್ಣಿಂದ ನೋಡಯ್ಯಾ. ನಿಜಗುಣವೆಂಬ ಆನಂದರತ್ನವ ನುಂಗಿದ ರುಚಿಯನು ಏನೆಂದು ಉಪಮಿಸುವೆ?
--------------
ನಿಜಗುಣಯೋಗಿ
ಮೇರುಗಿರಿ ಉದಯಗಿರಿ ನೀಲಗಿರಿ ಹೇಮಗಿರಿ ರಜತಗಿರಿ ಇಂತೀ ಗಿರಿಗಳಿಗೆ ಛಳಿಯಾದರೆ ಹೊದ್ದಿಸುವರುಂಟೇನಯ್ಯಾ? ಆ ಗಿರಿಯ ಕೆಳಗೆ ಗಗನವುಂಟು ; ಆ ಗಗನಕ್ಕೆ ಗಬಸಣಿಗೆಯಿಕ್ಕುವರುಂಟೇನಯ್ಯ? ಆ ಗಗನದ ಕೆಳಗೆ ಸಪ್ತಸಮುದ್ರಗಳುಂಟು. ಅವುಗಳ ನೀರುಡುಗಿದರೆ ಆ ನೀರ ಕೂಡಿಸುವರುಂಟೇನಯ್ಯಾ? ಆ ಸಮುದ್ರಂಗಳ ಕೆಳಗೆ ಒಂದು ಮದಸೊಕ್ಕಿದ ಇಲಿ, ಆ ಇಲಿಯ ತಿಂದೆನೆಂದು ಒಂದು ಮಾರ್ಜಲ ಬರಲು, ಆ ಮಾರ್ಜಾಲನು ಆ ಇಲಿಯ ಕಂಡು ನಿಬ್ಬೆರಗಾಯಿತ್ತು. ಆ ಇಲಿಯು ಬಂದು ಆ ಮಾರ್ಜಾಲನ ಕಿವಿಯ ತಿಂಬೋದು. ಆದ ಕಂಡು ಬೆರಗಾದ ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ನೀರಿಂಗೆ ನೈದಿಲೆಯೆ ಶೃಂಗಾರ, ಸಮುದ್ರಕ್ಕೆ ತೆರೆಯೆ ಶೃಂಗಾರ, ನಾರಿಗೆ ಗುಣವೆ ಶೃಂಗಾರ, ಗಗನಕ್ಕೆ ಚಂದ್ರಮನೆ ಶೃಂಗಾರ, ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ. 74
--------------
ಬಸವಣ್ಣ
ಅಯ್ಯಾ, ನಿಮ್ಮ ಶರಣರನುಭಾವಕ್ಕೆ ಪ್ರತಿಸಾಕ್ಷಿಯೆಂದು ಬೆರೆಸಿ ಹೇಳುವರು ಹಾದಿ ಹತ್ತಿಕೆಯ ನುಡಿಗಳ. ಅದು ಎನಗೆಂದೂ ಸೊಗಸದು ಕಾಣಾ. ಎನ್ನ ನಿಜರತ್ನಪ್ರಕಾಶ ನಿಮ್ಮ ಶರಣರ ವಚನ. ಇವಕ್ಕೆ ಸಾಕ್ಷಿ ತಂದು ಹೇಳುವ ಭಾವವ ದಹಿಸಿ ಭಸ್ಮವ ಮಾಡಿ ಧರಿಸಿರ್ದೆನಾಗಿ ಕಾಣಿಸದು. ಶರಧಿಗೆ ತೊರೆಗಾವಲಿ, ಮೇರುವಿಗೆ ಮೊರಡಿ, ಗಗನಕ್ಕೆ ಕೊಪ್ಪರಿಗೆ ತೋರಿದರೆ ಸರಿಯಪ್ಪುದೆ ? ಆ ಕುರಿಗಳ ನುಡಿ ಅತ್ತಿರಲಿ, ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರ ನುಡಿಬೆಳಗನಗಲದಿರ್ದೆನು ನಿಮ್ಮೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸ್ವಪ್ನವಾವುದು ? ಶ್ರೋತ್ರಾದಿಗಳೈದು, ವಾಗಾದಿಗಳೈದು -ಈ ಹತ್ತು ಕರಣಂಗಳು ಭ್ರೂಮಧ್ಯದಲ್ಲಿ ನಿಂದು ಶಬ್ದಾದಿಗಳೈದು, ವಚನಾದಿಗಳೈದು, ವಾಯು ಹತ್ತು , ಕರಣ ನಾಲ್ಕು, ಪುರುಷನೊಬ್ಬ- ಈ ಇಪ್ಪತ್ತೈದು ಕರಣಂಗಳೊಡನೆ ಕಂಠಸ್ಥಾನದಲ್ಲಿ ನಿಂದು ಗಗನಕ್ಕೆ ಹಾರುವ ಹಾಂಗೆ, ಮುಗಿಲಹತ್ತುವ ಹಾಂಗೆ, ನಾನಾ ವ್ಯಾಪಿಯಂ ಕಂಡ ಅವರ ಸ್ವಪ್ನ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಒಬ್ಬ ಕನ್ನೆಯು ಐದು ಮುಖದ ಪಕ್ಷಿಯ ಸಂಗವ ಮಾಡಲು ಮೇಲಿಂದ ಒಬ್ಬ ಪುರುಷನ ನೋಡಲು ಪಕ್ಷಿಯು ಗಗನಕ್ಕೆ ಹಾರಿ ನಿರ್ವಯಲಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆ ಪರಶಿವನ ಗರ್ಭದಲ್ಲಿರ್ದ ಬ್ರಹ್ಮಾಂಡದೊಳಗೆ ಪಿಂಡಾಂಡವಾದ ಪುಣ್ಯಾತ್ಮರು, ಬಿಂದುರೂಪಾಗಿ ಬಂದ ಸೂತಕ ಕಂಡು ಸಂದೇಹಗೊಂಡು, ಚಂದವಳಿದು, ಹಿಂದೆ ಬಂದಾ ಯೋನಿಯ ಕಿಸುಕುಳ ಮೂತ್ರದಕುಣಿಗೆ ಬೀಳಬಾರದೆಂದು ಹೇಯ ಹುಟ್ಟಿ ಸ್ತ್ರೀ ಭೋಗವ ಬಿಟ್ಟು, ವೈರಾಗ್ಯ ತಲಿಗೇರಿ, ಅನ್ನ ವಸ್ತ್ರವ ಕಳೆದು ಊರೊಳಗಿರಬಾರದೆಂದು ದೇಶ ಸಂಚಾರ ಮಾಡಿ, ಕಾಶಿ, ಕೇದಾರ, ರಾಮೇಶ್ವರ, ಶ್ರೀಶೈಲ, ಉಳವಿ, ಹಂಪಿ, ಗೋಕರ್ಣ ಮೊದಲಾದ ಅನಂತ ತೀರ್ಥವ ಮಿಂದು, ಸಾಯಬಾರದ ಅಂಗಸಿದ್ಧಿ, ಅಲಗುನೋಯಿಸದ ಘುಟಿಕಾಸಿದ್ಧಿ, ಹೇಳಿದ್ದಾಗುವ ವಾಕ್ಯಸಿದ್ಧಿ, ಹೆಸರುಹೇಳುವ ಬೆನಕನಸಿದ್ಧಿ, ರೋಗಕಳೆಯುವ ಮೂಲಿಕಿಸಿದ್ಧಿ, ಬೆರಗುಮಾಡುವ ಬೇತಾಳಸಿದ್ಧಿ, ಅಗ್ನಿಸ್ತಂಭನ, ಜಲಸ್ತಂಭನ, ಗಗನಕ್ಕೆ ಹಾರುವ ಯೋಗಸಿದ್ಧಿ, ದೂರದೃಷ್ಟಿ, ದೂರಶ್ರವಣ, ಸರ್ವದೃಷ್ಟಿ, ಉಂಡೂಟ, ಕಂಡ ಕನಸು, ಮನೋಬಯಕೆ, ಹಿಂದಿನ ಖೂನ, ಕನಸಸಾಕ್ಷಿ, ಇಂದ್ರಜಾಲ, ಮಹೇಂದ್ರಜಾಲ, ಸುವರ್ಣಜನನ, ಬಂಗಾಳಿ, ಮರಣಯೋಗ, ಪರಕಾಯಪ್ರವೇಶ, ರಾಜಯೋಗ, ರಾಜವಶ, ಜನವಶ, ಸ್ತ್ರೀವಶ, ಭಸ್ಮಸಿದ್ಧಿ, ಅಂಜನಸಿದ್ಧಿ, ಮೋಹನ, ವೈರಿಸ್ತಂಭನ, ವಾಯುಸ್ತಂಭನ, ಭೂತ, ಪ್ರೇತ, ಪಿಶಾಚಿ, ಬ್ರಹ್ಮರಾಕ್ಷಸ, ಜಟ್ಟಿಂಗ, ಹಿರೋಡ್ಯಾ, ಯಲ್ಲಮ್ಮಾ, ಪೋತಮ್ಮಾ, ಚಂಡಿಚಾಮುಂಡ್ಯಾದಿಗಳ ಮಾತನಾಡಿಸುವ ಮಂತ್ರಸಿದ್ಧಿ, ಹುಲಿ, ಹಲ್ಲಿ, ಕತ್ತಿ, ನರಿ, ಕಾಗಿ, ಹಾಲ್ಹಕ್ಕಿ ಮೊದಲಾದ ಮೃಗಪಕ್ಷಿಯ ಮಾತು ತಿಳಿಯುವ ಯಂತ್ರತಂತ್ರಸಿದ್ಧಿ, ಮಲಮೂತ್ರವನು ಬಿಡದ ಅಂತರಪಚನ ಅದೃಶ್ಯ ಅನಂತ ಆಹಾರ ಜೀವಸ್ತಂಭನ, ದೇವ ಪ್ರತ್ಯಕ್ಷ ಸಂಜೀವನ, ಬಂಧವಿಮೋಚನ, ದೃಷ್ಟಿ ಆಗಮನ, ಇಷ್ಟದಾಯಕ ಮನೋಗಮನ ಮೊದಲಾದ ಅನಂತ ಸಿದ್ಧಿಗಳಿಗಾಶೆ ಮಾಡಿ ಮಣ್ಣುಗಾಣದೇ ಹೋದರು ಅನಂತರು. ಅದು ಅಂತಿರಲಿ, ಫಲಪದವಿ ಪಡೆವೆವೆಂದು ಹಳ್ಳ, ಕೊಳ್ಳ, ನದಿತೀರ, ಅಡವಿ ಅರಣ್ಯ ಗುಡ್ಡ ಗಿರಿ, ಗವಿ ವಟವೃಕ್ಷ, ಸಂಗಮ, ಮಠ ಮಾನ್ಯ ಮೊದಲಾದ ಸುಸ್ಥಳದಲ್ಲಿ ಕುಳಿತು ನಿದ್ರೆ ಆಹಾರ ತೊರೆದು, ಆಸನವ ಬಲಿದು, ಮೌನ ಮುದ್ರೆಯ ಹಿಡಿದು, ವಾತ, ಅಂಬು, ಪರ್ಣ, ಕಲ್ಲು, ಹಣ್ಣು, ಬೂದಿ, ಹುಲ್ಲಿನ ರಸ, ನೆಲ, ಬೇರು, ಗಡ್ಡಿ ಮೊದಲಾದ ಆಹಾರವ ಕೊಂಡು, ಮೈಗೆ ಹುತ್ತೇರಿ, ಜಡಿಯಲ್ಲಿ ಆಲವ ಬೆಳೆದು, ಗಡ್ಡದೊಳು ಗೀಜಗವು ಮನಿ ಮಾಡಿರಲು, ಮನವಳಿಯದೆ, ಘನವ ತಿಳಿಯದೆ, ತನುವ ಉಳಿಯದೆ, ಪಂಚೇಂದ್ರಿಯ ಮಿಂಚು ತೊಳಿಯದೆ, ಹಳೆಹಂಚಾದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಆಕಾಶ ಒಂದಂಡಜ, ಪೃಥ್ವಿ ಒಂದಂಡಜ (ಒಂದು ಪಿಂಡಜ?) ಆ ಎರಡರ ಮಧ್ಯದಲ್ಲಿ ಪಕ್ಷಿ ಮರಿಗಳನಿಕ್ಕಿತ್ತ ಕಂಡೆ. ತುಪ್ಪುಳು ಬಾರದು ಅದರೊಪ್ಪವನೇನೆಂಬೆನು ಗುರುವೆ ? ಬಯಲನೆ ಉಡುಗಿತ್ತು ನಿರ್ವಯಲನೆ ಗೂಡು ಮಾಡಿತ್ತು, ಉರಿಯನೆ ಉಂಡಿತ್ತು ಮಧುರಸವನೆ ಹಿಂಡಿತ್ತ ಕಂಡೆ. ಪಕ್ಷಿಗೆ ಪಕ್ಕ ಬಂದಿತ್ತು ಗಗನಕ್ಕೆ ಹಾರಿತ್ತು ! ಹಾರಿ ಹೋಗುತ್ತ ನಮ್ಮ ಗುಹೇಶ್ವರಲಿಂಗವ ಕೂಡಿತ್ತ ಕಂಡೆ !
--------------
ಅಲ್ಲಮಪ್ರಭುದೇವರು
ಗಗನಕ್ಕೆ ನಿಚ್ಚಣಿಕೆಯನಿಕ್ಕಿದವರುಂಟೆ ? ವಾಯುವಿನ ಸ್ಥಳವನರಿದವರುಂಟೆ ? ಅಂಬುಧಿಯ ಗುಣ್ಪವನಳೆದವರುಂಟೆ ? ಲಿಂಗದ ಪ್ರಮಾಣ ಹೇಳಬಹುದೆ ? ಚಂದ್ರಮಂಡಲ ತಾರಾಮಂಡಲ ಸೂರ್ಯಮಂಡಲ ಇತ್ತಿತ್ತಲಯ್ಯಾ ! ಪಂಚಮುಖವಾಗಿ, ನೊಸಲಕಣ್ಣು ಚತುರ್ಭುಜ ಅಣುಮಾತ್ರವೆ ? ಒಬ್ಬ ಶರಣನಾಗಿ ಗುಹೇಶ್ವರನೆಂಬ ಘನನೆಲೆಯ ಬಲ್ಲಡೆ ಅಲ್ಲಿಂದತ್ತ ಶರಣು ಶರಣು.
--------------
ಅಲ್ಲಮಪ್ರಭುದೇವರು
ಕ್ರಿಯವೇ ಅಧಿಕವೆಂಬ ಗೊಡ್ಡು ಸಿದ್ಧಾಂತಿಗಳ ಮಾತು ಸೊಗಸದಯ್ಯಾ ಎನಗೆ. ಜ್ಞಾನವೇ ಅಧಿಕವೆಂಬ ದಡ್ಡ ವೇದಾಂತಿಗಳ ಮಾತು ಸೊಗಸದಯ್ಯ ಎನಗೆ. ಅದೇನು ಕಾರಣವೆಂದೊಡೆ : ಆವುದಾನೊಂದು ಪಕ್ಷಿಯು ಉಭಯ ರೆಕ್ಕೆಯಿಂದ ಗಗನಕ್ಕೆ ಹಾರುವಂತೆ ಅಂತರಂಗದಲ್ಲಿ ಸಮ್ಯಕ್‍ಜ್ಞಾನ ಬಹಿರಂಗದಲ್ಲಿ ಶಿವಸತ್‍ಕ್ರಿಯಾಸನ್ನಿಹಿತವಿಲ್ಲದೆ ಪರವಸ್ತುವ ಕೂಡಬಾರದಾಗಿ. ಇದು ಕಾರಣ, ಸತ್‍ಕ್ರಿಯಾ ಸಮ್ಯಕ್‍ಜ್ಞಾನಸಂಪನ್ನರಾದ ಮಹಾಶರಣರ ತೋರಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಮೇಲುಗಿರಿಯಮೇಲಣ ಪಕ್ಷಿ ಉತ್ತಾಯವಾಗಿ ಉಭಯ ರೆಕ್ಕೆಯಿಂದ ಗಗನಕ್ಕೆ ಹಾರಿ, ತ್ರಿಭುವನ ಮೊದಲಾದ ಚತುರ್ದಶಭುವನದಲ್ಲಿ ಮರಿಯನಿಕ್ಕಲು, ಆ ಮರಿಯ ವಿಲಾಸದಿಂ ಹಲಬರು ರೋಧನಂಗೈಯುತ್ತಿಪ್ಪರು. ಇವರಬ್ಬರವ ಕೇಳಿ ಉತ್ತರದೇಶದ ಕಪ್ಪಿ ಆರ್ಭಟಿಸಿ ಉರಿಯನುಗುಳಿ, ಸುನಾದಸ್ವರದಿಂದ ಧ್ವನಿಯಮಾಡಿ, ಆ ಸುಸ್ವರನಾದವ ಕೇಳಿ ಪೂರ್ವದಿಕ್ಕಿನ ಕಾಳೋಗರವೆಂಬ ಸರ್ಪನು ಹೊರಟು ಉರಿಯ ಬೆಳಕಿನಲ್ಲಿ ಮನುಜರ ಕಚ್ಚಿ ಉರಿಯ ನುಂಗಿ ಸರ್ಪ ಸತ್ತು ಸತ್ತ ಸರ್ಪನ ಕಪ್ಪಿ ನುಂಗಿ ಎತ್ತ ಹೋದಿತ್ತೆಂದರಿಯೆನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->