ಅಥವಾ

ಒಟ್ಟು 29 ಕಡೆಗಳಲ್ಲಿ , 17 ವಚನಕಾರರು , 28 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಯಾಗುಣ ರೂಪಾದಲ್ಲಿ ಮಲಕ್ಕೊಡಲಾಯಿತ್ತು ಮಲಸ್ಥರೂಪವಾಗಿ ನಿಂದಲ್ಲಿ ಬಲವಂತರೆಲ್ಲರು ಮಲದ ಬೆಂಬಳಿಯಲ್ಲಿ ಮರುಳಾದರು. ಮರುಳಾಟದಲ್ಲಿ ಮಾರಿ ಒಲವರವಾಗಿ ಮನ ಶುದ್ಧವಿಲ್ಲದವರ ಮನೆ ಮನೆಯಲ್ಲಿ ತನುವಿಕಾರವನಾಡಿಸುತ್ತೈದಾಳೆ. ಮಾರಿಯ ಮುರಿದು ದಾರಾವತಿಯ ಕೆಡಿಸಿ ಕೈಯ ಡಕ್ಕೆಯ ಗತಿಯ ಹಿಂಗಿ ಮಾಯೆಯ ಬಾಗಿಲ ಭ್ರಾಂತಿಯ ಬಿಟ್ಟಲ್ಲಿ ಕಾಲಾಂತಕ ಬ್ಥೀಮೇಶ್ವರಲಿಂಗವನರಿದುದು.
--------------
ಡಕ್ಕೆಯ ಬೊಮ್ಮಣ್ಣ
ಅಯ್ಯಾ, ರುದ್ರಾಕ್ಷೆಯಿಂದ ಇಹವ ಕಂಡೆ. ಅಯ್ಯಾ, ರುದ್ರಾಕ್ಷೆಯಿಂದ ಪರವ ಕಂಡೆ. ಅಯ್ಯಾ, ರುದ್ರಾಕ್ಷೆಯಿಂದ ಗತಿಯ ಕಂಡೆ. ಅಯ್ಯಾ, ರುದ್ರಾಕ್ಷೆಯಿಂದ ಮತಿಯ ಕಂಡೆ ಅಯ್ಯಾ, ರುದ್ರಾಕ್ಷೆಯಿಂದ ಮೋಕ್ಷವ ಕಂಡೆ ಅಯ್ಯಾ, ಇನ್ನ ಬದುಕಿದೆ, ಬದುಕಿದೆನಯ್ಯಾ, ಅಯ್ಯಾ, ಭವಂ ನಾಸ್ತಿಯಾಯಿತ್ತೆನಗೆ. ಅಯ್ಯಾ, ಮಹಾಲಿಂಗ ಕಲ್ಲೇಶ್ವರಾ, ಶ್ರೀಮಹಾರುದ್ರಾಕ್ಷೆಯಿಂದೆ ಕಂಡೆನಯ್ಯಾ, ಎನ್ನ ಕರಸ್ಥಳದಲ್ಲಿ ಮಹಾಗೂಢವಾಗಿರ್ಪ ನಿಮ್ಮ ದಿವ್ಯಮೂರ್ತಿ ಪೆಂಪನು.
--------------
ಹಾವಿನಹಾಳ ಕಲ್ಲಯ್ಯ
ತತ್ ತ್ವಂ ಅಸಿಯೆಂಬ ತ್ರಿವಿಧಭೇದಂಗಳಲ್ಲಿ ತ್ರಿವಿಧಮಯನಾಗಿ, ತ್ರಿಗುಣಾತ್ಮನಾಗಿ, ತ್ರಿಶಕ್ತಿಪತಿಯಾಗಿ ಗತಿಯ ತೋರಿಹೆನೆಂದು ಪ್ರತಿರೂಪಾದೆ. ಎಳ್ಳಿನೊಳಗಣ ಎಣ್ಣೆ, ಕಲ್ಲಿನೊಳಗಣ ಬೆಂಕಿ, ಬೆಲ್ಲದೊಳಗಣ ಮಧುರ, ಅಲ್ಲಿಯೆ ಅಡಗಿ ಮಥನದಿಂದಲ್ಲದೆ ತೋರದವೊಲು ಅಲ್ಲಿಯೆ ಅಡಗಿದೆ ಗುಡಿಯೊಳಗೆ, ಗುಮ್ಮಟನಾಥನ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಕೂರ್ಮನ ಗತಿಯ ಕುವಾಡ ಯೋಗವು ಕುಹಕವಾದಿಗಳಿಗಳವಡದು. ಉತ್ತಮಾಂಗವನು ಉರಸ್ಥಲದಲ್ಲಿ ಬೈಚಿಡುವ ಬಯಕೆಯನಾರೈದು ನೋಡಾ! ಅದನು ಆರಯ್ಯಲಚಲ ನೀನೇ, ಸಿಮ್ಮಲಿಗೆಯ ಚೆನ್ನರಾಮನೆಂಬ ಲಿಂಗವು ಎಂದೂ ಎನಲಿಲ್ಲ!
--------------
ಚಂದಿಮರಸ
ಅಟ್ಟಿ ಹಾವುತಲೊಮ್ಮೆ , ಹೋಗಿ ನಿಲುತಲೊಮ್ಮೆ , ಬೀಗಿ ನಗುತಲೊಮ್ಮೆ , ಮರುಳಿನಂತೆ, ಮಂಕಿನಂತೆ ದೆಸೆದೆಸೆಯ ನೋಡುತ್ತ, ಅಂಗಡಿ ರಾಜಬೀದಿಯ ಶೃಂಗಾರಂಗಳ ನಲಿನಲಿದು ನೋಡುತ್ತ , ಇತ್ತರದ ಭದ್ರದ ಮೇಲೆ ನಾಟ್ಯವನಾಡುವವರ ನೋಡಿ ನಗುತ್ತ , ನೋಡುವ ಗಾವಳಿಯ ಜನರನಟ್ಟಿ ಹೊಯಿವಂತೆ ಹರಿವುತ್ತ , ಗುದಿಯಿಕ್ಕಿದಂತೆ ನಿಂದಿರೆ ಬೀಳುತ್ತ , ನಾಟ್ಯವನಾಡುವವವರಿಗೆ ಇದಿರಾಗಿ, ತಾ ಮರಳಿಯಾಡುತ್ತ , ಹಾಡುತ್ತ ಬೈವುತ್ತ ಕೆರಳಿ ನುಡಿವುತ್ತ , ವಾದ್ಯ ಮೇಳಾಪವ ಕಂಡು ಆಳಿಗೊಂಡು ನಗುತ್ತ , ಹಸ್ತವನಾಡಿಸಿ ಗತಿಯ ಮಚ್ಚರಿಸಿ ಕೈಯೊಡನೆ ಮರುಳಾಟವನಾಡುತ್ತ , ಮೆಲ್ಲಮೆಲ್ಲನೆ ನಿಂದು ನೋಡಿ ನಡೆವುತ್ತ , ಎಂದಿನ ಸುಳುಹಿನೊಳಗಲ್ಲದ ಸುಳುಹು, ಬಸವಣ್ಣ ನಿಮ್ಮಾಣೆ, ಸೊಡ್ಡಳನಾಗದೆ ಮಾಣನು.
--------------
ಸೊಡ್ಡಳ ಬಾಚರಸ
ಮಾತುಳ್ಳನ್ನಕ್ಕ ದೇಹ ಹಿಂಗದು; ನೆನಹುಳ್ಳನ್ನಕ್ಕ ಪ್ರಾಣ ಸೂತಕ ಬಿಡದು; ಕಾಯದ ಜೀವದ ಹೊಗೆಯ ಸಂದ ಬಿಚ್ಚಲರಿಯದು; ಆನು ನಿರ್ದೇಹಿ ಎಂದಡೆ ನಗರೆ ನಿಮ್ಮ ಪ್ರಮಥರು? ಎನ್ನ ಅಂತರಂಗದಲುಳ್ಳ ಅವಗುಣವ ಹಿಂಗಿಸಿ, ನಿಮ್ಮಂತೆ ಮಾಡಿದಡಾನುಳಿವೆನಲ್ಲದೆ ಬೇರೆ ಗತಿಯ ಕಾಣೆ ನೋಡಾ, ಅಯ್ಯಾ, ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
ಕೆಲವರು ಲಿಂಗವ ಪೂಜಿಸಿ ಪಡೆದರು ಗತಿಯ; ಕೆಲವರು ಲಿಂಗವ ಪೂಜಿಸಿ ಪಡೆದರು ಮತಿಯ; ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಪೂಜಿಸಿ, ಪಡೆಯಲಿಲ್ಲ ಅವನ ಜ್ಯೋತಿಯ?
--------------
ಸಿದ್ಧರಾಮೇಶ್ವರ
ಅಯ್ಯಾ, ಆಸೆಯ ಪಾಶದಿಂದ ತೊಳಲಿತಯ್ಯ ಎನ್ನ ಕಾಯವು. ಆಸೆ-ಆಮಿಷದಿಂದ ಹೊದಕುಳಿಗೊಂಡಿತಯ್ಯ ಎನ್ನ ಮನವು. ಆಸೆಯೆಂಬ ಮರವೆಯಲ್ಲಿ ಮನೆಮಾಡಿತಯ್ಯ ಎನ್ನ ಪ್ರಾಣವು. ಆಸೆಯೆಂಬ ಹೊಡೆಗಿಚ್ಚಿನಲ್ಲಿ ಹೊಡದಾಡಿ ಸತ್ತಿತಯ್ಯ ಎನ್ನ ಭಾವವು. ಇನ್ನೆನಗೆ ಗತಿಯ ಪಥವ ತೋರಿಸಿ ರಕ್ಷಿಸಯ್ಯ, ಭವಪಾಶರಹಿತ ಪರಬ್ರಹ್ಮಮೂರ್ತಿ ಶ್ರೀಗುರುಲಿಂಗಜಂಗಮವೆ ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಅರಿವಿನಲ್ಲಿ ಉದಯಿಸಿ ಮರಹು ನಷ್ಟವಾಗಿರ್ದ ಶರಣನ ಪರಿಯನರಸಲುಂಟೆ ? ಗತಿಯ ಹೇಳಲುಂಟೆ ? ಶಿಶು ಕಂಡ ಕನಸಿನಂತಿಪ್ಪರು ಗುಹೇಶ್ವರಾ ನಿಮ್ಮ ಶರಣರು !
--------------
ಅಲ್ಲಮಪ್ರಭುದೇವರು
ಗತಿಯ ಪಥವನರಿವಡೆ, ದಿಟವ ಸುಯಿದಾನ ಮಾಡು. ದಿಟ ಬೇರೆ ಆಚಾರ ಶಿವಾಚಾರವೆಂ[ದರು]ಮರುಳೆ. ಗುರು ದೇವನೆಂದರು ಮರುಳೆ. ದೂರತೋsಂ ಗುರುಂ ದಷ್ಟ್ವಾ ಉದಾಸೀನೇನ ಯೋ ವ್ರಜೇತ್ | ಶ್ವಾನಯೋನಿಂ ಶತಂ ಗತ್ವಾ ಚಾಂಡಾಲಗೃಹಮಾಚರೇತ್ || ಶಿವೇ ಕೃದ್ಧೇ ಗುರುಸ್ತ್ರಾತಾ ಗುರೌ ಕೃದ್ಧೇ ನ ಕಶ್ಚನ | ತಸ್ಮಾದಿಷ್ಟಂ ಗುರೋಃ ಕುರ್ಯಾತ್ ಕಾಯೇನ ಮನಸಾ ಗಿರಾ || ಎಂದುದಾಗಿ, ಬಸವಪ್ರಿಯ ಕೂಡಲಚೆನ್ನಸಂಗಮದೇವ ಮುನಿದಡೆ ತಿಳುಹಬಹುದು, ಗುರು ಮುನಿದಡೆ ತಿಳುಹಬಾರದು, ಏಳೇಳು ನರಕ ತಪ್ಪದು.
--------------
ಸಂಗಮೇಶ್ವರದ ಅಪ್ಪಣ್ಣ
ಕೂತಾಗ ಭಕ್ತ ಮುನಿದಾಗ ಮಾನವನಾದ ಪಾತಕರ ನುಡಿಯ ಕೇಳಲಾಗದು. ಅಂಥ ಪಾತಕರ ಉಲುಹೆಂಬುದು, ಉಲಿವ ಕಬ್ಬಕ್ಕಿಯ ಉಲುಹಿನಂತೆ. ಅದನು ಮಹಂತರು ಕೇಳಲಾಗದು. ಅದಕ್ಕದು ಸ್ವಭಾವವೆಂಬುದ ಬಲ್ಲರಾಗಿ, ಮತಿಗೆಟ್ಟು ನುಡಿವ ಮತ್ತರಹ ಮತ್ರ್ಯರ ನುಡಿಯ ಗಡಣೆ, ಭ್ರಾಂತಿವಿಡಿದ ಭ್ರಮಿತರಿಗೆ ಯೋಗ್ಯವಲ್ಲದೆ, ಸಜ್ಜನ ಸಾತ್ವಿಕ ಜ್ಞಾನವೇದ್ಯರಹ ಸದ್ಭಕ್ತರು ಮೆಚ್ಚವರೆ ? ಅಸತ್ಯವೆ ರೂಪಾಗಿಪ್ಪ ಶೂನ್ಯವಾದಿಗಳೆತ್ತಲೂ ಸಲ್ಲರಾಗಿ ಅವರುಗಳು ಪ್ರೇತಗಾಮಿಗಳು. ಅಮೇಧ್ಯ ಕೂಪದಲ್ಲಿ ಉತ್ಪನ್ನವಾದ ಕ್ರಿಮಿಗಳಂತಪ್ಪ ಜೀವಿಗಳು ತಾವಾರೆಂದರಿಯರು. ಇಂದು ನಿಂದ ಗತಿಯ ತಿಳಿಯರು, ಮುಂದಣ ಗತಿಯನೆಂತೂ ಎಯ್ದಲರಿಯರು. ಆತ್ಮನು ಶ್ವೇತ ಪೀತ ಹರಿತ ಕಪೋತ ಮಾಂಡಿಷ್ಟ ಕೃಷ್ಣರೆಂಬ ಷಡ್ವರ್ಣದೊಳಗಾವ ವರ್ಣವೆಂದೂ ವಿಚಾರಿಸಲರಿಯರಾಗಿ, ಭ್ರಾಂತುವಿಡಿದು ಆತ್ಮೋಹಮೆಂದು ಅಹಂಕರಿಸಿ, ಅಜ್ಞಾನ ತಲೆಗೇರಿ, ಮತ್ತತನದಿಂದಜಾತ ಶಿವಶರಣರ ದೂಷಿಸಿ, ಮಿಥ್ಯವಾದದಿಂದ ನುಡಿವರು ತಾವೆ ಘನವೆಂದು, ಬಯಲಬೊಮ್ಮದ ಹಮ್ಮಿನ ನೆಮ್ಮುಗೆವಿಡಿದು, ಸಹಜ ಸಮಾಧಾನ ಶಿವೈಕ್ಯರ ಹಳಿದು ನುಡಿವರು. ಆದಿಯಲ್ಲಿ ಅಹಂ ಬ್ರಹ್ಮವೆಂದು ಬ್ರಹ್ಮನೆ ವಿಧಿಯಾದನು. ಹರಗಣಂಗಳೊಳಗೆ ಅಗ್ರಗಣ್ಯ ಗಣೇಶ್ವರನಹ ನಂದಿಕೇಶ್ವರನ ಉದಾಸೀನಂ ಮಾಡಿ, ಆ ನಂದಿಕೇರ್ಶವರನ ಶಾಪದಿಂದ ಸನುತ್ಕುಮಾರನೆ ವಿಧಿಯಾದನು. ಕರ್ಮವೆ ಅಧಿಕವೆಂದು ಕೆಮ್ಮನೆ ಕೆಟ್ಟ ಹೆಮ್ಮೆಯಲ್ಲಿ, ದ್ವಿಜ ಮುನಿಗಳ ನೆರಹಿ ಕ್ರತುವ ಮಾಡಿ, ಆ ದೇವ ಮುನಿಗಳೊಳಗಾಗಿ, ದಕ್ಷಂಗೆ ಬಂದ ಅಪಾಯವನರಿದು ಮರೆದರಲ್ಲಾ. ಕುಬೇರನಿಂದಧಿಕವಹ ಧನ, ದೇವೇಂದ್ರನಿಂದಧಿಕವಹ ಐಶ್ವರ್ಯ, ಸೂರ್ಯನಿಂದಧಿಕವಹ ತೇಜಸ್ಸು, ಗಜ ಪಟೌಳಿ ಸೀತಾಂಗನೆಗತ್ಯಧಿಕವಹ ರೂಪು ಲಾವಣ್ಯ ಸೌಂದರ್ಯವನುಳ್ಳ ಸ್ತ್ರೀಯರುಂಟು. ಕೋಟಿವಿದ್ಯದಲ್ಲಿ ನೋಡುವಡೆ ಸಹಸ್ರವೇದಿಯೆನಿಸುವ ರಾವಣನು ಪಾರದ್ವಾರಕಿಚ್ಛೈಸಿ ಪರವಧುವಿನ ದೆಸೆಯಿಂದಲೇನಾದನರಿಯರೆ ! ತನು ಕೊಬ್ಬಿನ ಮನ, ಮನ ವಿಕಾರದ ಇಂದ್ರಿಯ ವಿಷಯಂಗಳ ಅಂದವಿಡಿದ ವಿಕಳತೆಯಲ್ಲಿ ನುಡಿವ ಸಟೆಗರ ಕಾಯಲರಿವವೆ ? ನಿಮ್ಮಯ ಮನ ಸನ್ನಿಧಿಯಲ್ಲಿ, ಇಂತಿವೆಲ್ಲವ ಕಂಡೂ ಕೇಳಿಯೂ ಅರಿಯರು. ಹರನ ಸದ್ಭಕ್ತರ ಕೂಡೆ ವಿರೋಧಿಸಿ, ನರಕವನು ಮುಂದೆ ಅನುಭವಿಸಿ, ಇಂದು ಅಪಖ್ಯಾತಿಗೊಳಗಾಗಿ ಕೆಟ್ಟುಹೋಗಬೇಡ. ಅತ್ಯಧಿಕ ಶಿವನೆ ಸತ್ಸದಾಚಾರವಿಡಿದು, ನಿತ್ಯಪದವ ಪಡೆಯಿರೆ ಘಾಸಿ ಮಾಡುವನು ನಿಮ್ಮ ಸೋಜಿಗ. ಸದಾಶಿವ ಬಲ್ಲಿದನೆನ್ನ ದೇವ ಮಹಾಲಿಂಗ ಕಲ್ಲೇಶ್ವರನು ತನ್ನ ಭಕ್ತರೆ ಕೆಡೆನುಡಿದವರ ಬಿಡದೆ ದಂಡಿಸುವನು.
--------------
ಹಾವಿನಹಾಳ ಕಲ್ಲಯ್ಯ
ಜಂಗಮಕ್ಕೆ ಮಾಡಿ ಗತಿಯ ಪಡೆದೆಹೆನೆಂಬ ಬೆವಹಾರದ ಭಕ್ತರು ನೀವು ಕೇಳಿರಯ್ಯಾ. ಜಂಗಮಕ್ಕೆ ಮಾಡಿ, ಗತಿಯ ಪಡೆದೆಹೆನೆಂಬ, ಭಕ್ತಿವ್ಯರ್ಥರು ನೀವು ಕೇಳಿರಯ್ಯಾ. ಅಗ್ನಿಮುಖದಲ್ಲಿ ಪಾಕವಾದ ಸಸಿ ತೆನೆಯಪ್ಪುದೆ ಶಶಿಧರಂಗೆ ಮಾಡಿದಡೆ ಫಲವಪ್ಪುದು, ಆ ಫಲದಾಯಕನೆ ಮರಳಿ ಭವಕ್ಕೆ ಬಹನು. ಜಂಗಮಕ್ಕೆ ಮಾಡಿದಡೆ ಫಲವಿಲ್ಲ, ಮರಳಿ ಭವವಿಲ್ಲ. ಕಿಚ್ಚಿನ ಕಣಜದಲ್ಲಿ ಬೀಜವ ತುಂಬಿ ಬಿತ್ತುವ ದಿನಕ್ಕರೆಸಿದಡುಂಟೆ, ಕೂಡಲಸಂಗಮದೇವಾ
--------------
ಬಸವಣ್ಣ
ಅಧೋಮುಖದಷ್ಟದಳಕಮಲದಲ್ಲಿ ಹಂಸಗತಿ ಮನದ ನಡೆವಳಿಯಿಂದ ದಿಗ್ವಳಯದ ಅಷ್ಟಗುಣಯುಕ್ತವಾಗಿಹನು. ಇದಲ್ಲದೆ ಮತ್ತೆಯು ನಿಧನ ನಿದ್ರೆ ಚಿಂತೆ ಲಜ್ಜೆ ಕ್ಷುಧೆ ತೃಷೆ ವಿಷಯ ಆಧಿವ್ಯಾsಧಿದ್ಯೂತೋದ್ಯೋಗ ದಾಹ ಶೋಷ ರತಿ ಸ್ವೇದ ಕೋಪ ಶೋಕ ಉದ್ಬ್ರಮೆ ಭಯ ಎಂಬ ಹದಿನೆಂಟು ದೋಷಾವರಣನಾಗಿ ಅಜ್ಞಾನದಿಂ ತಿರುಗುವ ಜೀವನು ಶ್ರುತಗುರು ಸ್ವಾನುಭಾವದಿಂ ಪರಮನ ಗತಿಯನರಿತು ತನ್ನ ಗತಿಯ ಮರದು, ದಶವಾಯುವ ದೆಸೆಗೆ ಹರಿಯದೆ, ಮಧ್ಯನಾಳದಲ್ಲಿ ನಿಂದ ಮರುವಾಳ ಮರದು ಸೌರಾಷ್ಟ್ರ ಸೋಮೇಶ್ವರಲಿಂಗದ ಬೆಳಗಿನೊಳಗೆ ಬೆರಸಿ ಬೇರಿಲ್ಲದ ಶಿಖಿಕರ್ಪುರದಂತಾಯಿತ್ತು.
--------------
ಆದಯ್ಯ
ಲಿಂಗವೇ ಪ್ರಾಣವಾಗಿ ಪ್ರಾಣಲಿಂಗವೆಂಬ ಪ್ರಪಂಚನರಿಯನಯ್ಯಾ ! ಘನವೇ ಮನದಲ್ಲಿ ವೇಧಿಸಿ, ಮನ ಲಿಂಗಲೀಯವಾಗಿ ನೆನಹಿನ ಸಂಕಲ್ಪ ಕ್ರೀ ನಿಃಷ್ಪತ್ತಿಯಾಗೆ, ಅಂಗಲಿಂಗವೆಂಬ ಭಾವ ಬಗೆಗೆಟ್ಟು, ಲಿಂಗವೇ ಸರ್ವಾಂಗಮುಖವಾದ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣನ ಸ್ವತಂತ್ರತೆಯ ಗತಿಯ ನೋಡಾ.
--------------
ಆದಯ್ಯ
ಆಚಾರವೆಂಬುದು ಆಗೋಚರ ನೋಡಯ್ಯಾ, ಆರಿಗೆಯೂ ಸಾಧ್ಯವಲ್ಲ. ಮರ್ತ್ಯಲೋಕದಲ್ಲಿ ಆ ಸದಾಚಾರದ ಬೆಳವಿಗೆಯ ಮಾಡಲೆಂದು ಬಸವಣ್ಣ ಬಂದು ಭಕ್ತಿಸ್ಥಲವ ಹರಹಿದ. ಗುರು ಲಿಂಗ ಜಂಗಮ ದಾಸೋಹ ಪಾದೋದಕ ಪ್ರಸಾದದ ಹಾದಿಯನೆಲ್ಲರಿಗೆ ತೋರಿದ. ಶಿವಾಚಾರವ ಬೆಳವಿಗೆಯ ಘನವನಹುದಲ್ಲವೆಂದು ಬಿಜ್ಜಳ ತರ್ಕಿಸಲು, ಅನಂತಮುಖದಿಂದ ಒಡಂಬಡಿಸಿ ಅಹುದೆನಿಸಿದ. ಬಂದ ಮಣಿಹ ಪೂರೈಸಿತ್ತೆಂದು ಲಿಂಗದೊಳಗೆ ಬಗಿದು ಹೊಕ್ಕಡೆ, ಹಿಂದೆ ಲೋಕವರಿದು ಬದುಕಬೇಕೆಂದು ಸೆರಗ ಕೊಟ್ಟ. ನಾನು ಹಿಂದುಳಿದಹಳೆಂದು ಮುಂದಣ ಗತಿಯ ತೋರಿ, ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ ತನ್ನ ಪ್ರಸನ್ನದೊಳಗೆ ಇಂಬಿಟ್ಟುಕೊಂಡನು ಎನ್ನ ಹೆತ್ತ ತಂದೆ ಸಂಗನಬಸವಣ್ಣನು.
--------------
ನಾಗಲಾಂಬಿಕೆ
ಇನ್ನಷ್ಟು ... -->