ಅಥವಾ

ಒಟ್ಟು 14 ಕಡೆಗಳಲ್ಲಿ , 8 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುಂಬಿದ ತೊರೆಯ ಹಾಯ್ದಹೆವೆಂದು ಹರುಗೋಲನೇರುವ ಅಣ್ಣಗಳು ನೀವು ಕೇಳಿರೆ. ತೊರೆಯೊಳಗಣ ನೆಗಳು ಹರುಗೋಲ ನುಂಗಿದಡೆ, ಗತಿಯಿಲ್ಲ. ಎಚ್ಚತ್ತು ನಡಿಸಿರೆ. ನಡುದೊರೆಯಲ್ಲಿ ಹುಟ್ಟು ಹಾಯ್ಕಿದಡೆ, ಹರುಗೋಲು ಮುಳುಗದೆ, ಏರಿದವರು ಸತ್ತರು. ಇದರೊಳಹೊರಗನರಿದಾತನಲ್ಲದೆ ಗುಹೇಶ್ವರಲಿಂಗದಲ್ಲಿ ಅಚ್ಚ ಶರಣನಲ್ಲ.
--------------
ಅಲ್ಲಮಪ್ರಭುದೇವರು
ಕಾಯದ ಗತಿಯಿಲ್ಲ, ನಡೆವವನಲ್ಲ. ಅಕಾಯಚರಿತ್ರನು, ಅನುಪಮಲಿಂಗೈಕ್ಯನು. ಕುಲ, ಛಲ, ವಿದ್ಯಾಮದ, ಮೋಹ, ಬಲುವಿಡಿಯ. ನಿರಹಂಕಾರವಿಡಿದು, ನಿರಂಗ ಸುಜ್ಞಾನ ಒಡಲಾ[ಗಿ] ಭರಿತಪ್ರಸಾದವಲ್ಲದನ್ಯವನರಿಯ. ಇದಕ್ಕೆ ಶ್ರುತಿ: ಶುಚಿರೂಪಂ ನಚಾಜ್ಞಾನಂ ಅರ್ಪಿತಾನರ್ಪಿತಂ ತಥಾ ಯಥಾ ವರ್ತೇತ ಯಸ್ಯಾಪಿ ಶಿವೇನ ಸಹ ಮೋದತೇ ಎಂದುದಾಗಿ ಅಂಗರುಚಿಯ ಹಂಗು ಹಿಂಗಿ ಲಿಂಗರುಚಿಯ ಸಂಗವಾದ ಸುಸಂಗಿ ಸೌರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ.
--------------
ಆದಯ್ಯ
ಒಂದು ಶಿಲೆಯೊಡೆದು ಮೂರಾದ ಭೇದವ ನೋಡಾ. ಒಂದು ಶಿಲೆ, ಶೂಲ ಕಪಾಲ ಡಿಂಡಿಮ ರುಂಡಮಾಲೆ ಐದು ತಲೆ, ತಲೆಯೊಳಗೊಬ್ಬಳು, ತೊಡೆಯೊಳಗೊಬ್ಬಳು. ಇಂತೀ ಕಡುಗಲಿಯ ದೇವನೆಂಬರು ನೋಡಾ. ಎನ್ನ ದೇವಂಗೈದು ಮುಖವಿಲ್ಲ, ಈರೈದು ಭುಜವಿಲ್ಲ. ಎನ್ನ ದೇವಂಗೆ ತೊಡೆಮುಡಿಯೊಳಾರನೂ ಕಾಣೆ. [ಹಿಡಿ]ವುದಕ್ಕೆ ಕೈದಿಲ್ಲ, ಕೊಡುವುದಕ್ಕೆ ವರವಿಲ್ಲ. ತೊಡುವುದಕ್ಕಾಭರಣವಿಲ್ಲ, ಒಡಗೂಡುವುದಕ್ಕೆಪುರುಷ[ನಿಲ್ಲ]. ತನಗೆ ಮತಿಯಿಲ್ಲ, ತನ್ನನರಿವವರಿಗೆ ಗತಿಯಿಲ್ಲ. ಗತಿಯಿಲ್ಲವಾಗಿ ಶ್ರುತಿಯಿಲ್ಲ, ಶ್ರುತಿಯಿಲ್ಲವಾಗಿ ನಾದವಿಲ್ಲ. ನಾದವಿಲ್ಲಾಗಿ ಬಿಂದುವಿಲ್ಲ, ಬಿಂದುವಿಲ್ಲವಾಗಿ ಕಳೆಯಿಲ್ಲ. ಇಂತಿವೆಲ್ಲವೂ ಇಲ್ಲವಾಗಿ ಹೊದ್ದಲಿಲ್ಲ, ಹೊದ್ದಲಿಲ್ಲವಾಗಿ ಸಂದಿಲ್ಲ, ಸಂದಿಲ್ಲವಾಗಿ ಸಂದೇಹವಿಲ್ಲ. ನಿಃಕಳಂಕ ಮಲ್ಲಿಕಾರ್ಜುನನಲ್ಲದೆ ಎಲ್ಲಿಯೂ ಕಾಣೆ.
--------------
ಮೋಳಿಗೆ ಮಾರಯ್ಯ
ನರರ ಹೊಗಳಿದಡೆ ಗತಿಯಿಲ್ಲ, ಸುರರ ಹೊಗಳಿದಡೆ ಗತಿಯಿಲ್ಲ. ಹರಿ ಬ್ರಹ್ಮ ಇಂದ್ರ ಚಂದ್ರಾದಿಗಳ ಹೊಗಳಿದಡೆ ಗತಿಯಿಲ್ಲ. ಪರಸತಿ ಪರಧನಂಗಳಿಗಳುಪಿ, ದುರ್ಯೋಧನ ಕೀಚಕ ರಾವಣರೆಂಬವರು ಮರಣವಾಗಿ ಹೋದವರ ಸಂಗತಿಯ ಹೇಳಿಕೇಳಿದಡೇನು ಗತಿಯಿಲ್ಲ. ಶ್ರೀಗುರುವಿನ ಚರಣವನರಿಯದ ಕಿರುಕುಳದೈವದ ಬೋಧೆಯ ಹೇಳಿ, ಆನು ಬದುಕಿದೆನೆಂಬ ಕವಿ ಗಮಕಿ ನಾನಲ್ಲ. ಹರ ನಿಮ್ಮ ನೆನೆವ ಶರಣರ ಚರಣದ ಗತಿಯಲ್ಲಿಪ್ಪೆನೆಂದ, ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ಗೋವು ಮೊದಲು ಚತುಃಪಾದಿ ಜೀವಂಗಳು ತಾವು ಬಂದ ಹಾದಿಯ ಮೂಸಿ ನೋಡಿ ತಮ್ಮಯ ಬೀಡಿಂಗೆ ಹೋಹಂತೆ, ಆ ಪರಿ ನಿನಗಿಲ್ಲ, ಪಶುವಿನ ಮತಿಯಷ್ಟು ಗತಿಯಿಲ್ಲ. ಬಂದುದ ಮರೆದ ಬಂಧಜೀವಿಗ ನಾನಾಗಿ ಜೀವಕಾಯದ ಸಂದ ಬಿಡಿಸು. ಬಿಂದು ನಿಲುವ ಅಂದವ ಹೇಳು, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ದೇವ ದೇವ ಮಹಾಪ್ರಸಾದ: ಕಂಗಳಲ್ಲಿ ಕರುಳಿಲ್ಲ, ಕಾಯದಲ್ಲಿ ಹೊರೆಯಿಲ್ಲ, ನುಡಿಯಲ್ಲಿ ಕಡೆಯಿಲ್ಲ, ನಡೆಯಲ್ಲಿ ಗತಿಯಿಲ್ಲ. ಇದೆಂತಹ ಸುಳುಹೆಂದರಿಯೆ, ಇದೆಂತಹ ನಿಲುವೆಂದು ತಿಳಿಯಬಾರದು. ಮರುಳಿಲ್ಲದ ಮರುಳು, ಅರಿವಿಲ್ಲದ ಅರಿವು. ಬಸವಪ್ರಿಯ ಕೂಡಲಚೆನ್ನಸಂಗನ ಶರಣರ ಬರವು ಕೌತುಕವಾಯಿತ್ತು, ಚಿತ್ತೈಸಯ್ಯಾ ಸಂಗನಬಸವಣ್ಣಾ.
--------------
ಸಂಗಮೇಶ್ವರದ ಅಪ್ಪಣ್ಣ
ಬ್ರಾಹ್ಮಣದೈವವೆಂದು ಆರಾಧಿಸಿದ [ಕಾರಣ] ಗೌತಮಗೆ ಗೋವಧೆಯಾಯಿತ್ತು. ಬ್ರಾಹ್ಮಣದೈವವೆಂದು ಆರಾಧಿಸಿದ ಕಾರಣ ಕರ್ಣನ ಕವಚ ಹೋಯಿತ್ತು. ಬ್ರಾಹ್ಮಣದೈವವೆಂದು ಆರಾಧಿಸಿದ ಕಾರಣ ನಾಗಾರ್ಜುನನ ತಲೆ ಹೋಯಿತ್ತು. ಬ್ರಾಹ್ಮಣದೈವವೆಂದು ಆರಾಧಿಸಿದ ಕಾರಣ ದಕ್ಷಂಗೆ ಕುರಿದಲೆಯಾಯಿತ್ತು. ವಿಷ್ಣುದೈವವೆಂದು ಆರಾಧಿಸಲು ಬಲಿಗೆ ಬಂಧನವಾಯಿತ್ತು. ವಿಷ್ಣುದೈವವೆಂದು ಆರಾಧಿಸಿದ ಕಾರಣ ಪಾಂಡವರಿಗೆ ದೇಶಾಂತರ ಯೋಗವಾಯಿತ್ತು. ವಿಷ್ಣುದೈವವೆಂದು ಆರಾಧಿಸಲು ಪರಶುರಾಮ ಸಮುದ್ರಕ್ಕೆ ಗುರಿಯಾದ. ವಿಷ್ಣುದೈವವೆಂದು ಆರಾಧಿಸಲು ವ್ಯಾಸನ ತೋಳು ಆಕಾಶಕ್ಕೆ ಹೋಯಿತ್ತು. ಈ ದೃಷ್ಟವಿದ್ದು, ಮಾಯಿರಾಣಿಯ ದೈವವೆಂದು ಆರಾಧಿಸಿದ ಕಾರಣ ತಲೆಯಲ್ಲಿ ಕೆರವ ಕಟ್ಟಿ, ಕೊರಳಲ್ಲಿ ಕವಡೆಯ ಕಟ್ಟಿ, ಬೇವನುಟ್ಟು, ಜಾವಡಿ ಅರಿಯ ಲಜ್ಜೆ ಹೋಯಿತ್ತು. ಮುಂದೆ ಭೈರವ ದೇವರೆಂದು ಆರಾಧಿಸಿದ ಕಾರಣ ಕರುಳ ಬೆರಳ ಖಂಡಿಸಿ ತುತ್ತು ತುತ್ತಿಗೆ ಅಂತರಂಗ ಬಹಿರಂಗವಾಯಿತ್ತು. ಮುಂದೆ ಜಿನನ ದೈವವೆಂದು ಆರಾಧಿಸಿದ ಕಾರಣ ಜೈನ ಮಾಡಿದ ಕರ್ಮ ನಿಷ್ಕರ್ಮವಾದುದಾಗಿ ನರರ ಹಾಡಿದಡೆ ಗತಿಯಿಲ್ಲ, ಕೇಳಿದರೆ ಗತಿಯಿಲ್ಲ ಹರ ನಿಮ್ಮ ಶರಣರ ಶ್ರೀಪಾದವೆ ಗತಿಯಾಗಿದ್ದೆ ನೋಡಾ. ಹರ ನಿಮ್ಮ ಶರಣರ ಒಲವಿಂದ ತುತ್ತು ಬುತ್ತಿಗೆ ಬೆನ್ನುಹತ್ತುವ ಮಾರಿ ಮಸಣಿ ಮೈಲಾರ ಹೊನ್ನ ಲಕ್ಷ್ಮಿಗಳು ಅರ್ಥ ಅಯುಷ್ಯವ ಕೊಡಬಲ್ಲವೆ ? ಒಡೆಯನಿಲ್ಲದ ಮನೆಯ ತುಡುಗುಣಿನಾಯಿ ಹೊಗುವಂತೆ, ಜಡದೇಹಿಗಳ ತನುವ ಕಾಡುತಿಹವೆಂದಾ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಸದಾಚಾರವ ಕಂಡು, ಲಾಂಛನಪಕ್ಷವನಾ[ಡಿ]ದವರಿಗೆ, ಇಹದೊಳು ಪರದೊಳು ಗತಿಯಿಲ್ಲ, ಕಾಣಿರೋ. ಮಣ್ಣೆತ್ತಾದಡೇನು, ತನ್ನೆತ್ತು ಗೆಲಬೇಕೆಂಬುದಕ್ಕೊಲಿವ ನಮ್ಮ ಕೂಡಲಸಂಗಯ್ಯ.
--------------
ಬಸವಣ್ಣ
ಗುರು ಶಿಷ್ಯ ಎರಡು ಒಂದಾದ ವಿನೋದವೇನೆಂಬೆ. ಶ್ರೀಗುರು ಮಹಾಂತಯೋಗೇಂದ್ರ ನೀವು ಎನಗೆ ಗತಿ ಮತಿ ಚೈತನ್ಯದಿ ಸರ್ವವು ನೀನೇ ಆದಿಯಲ್ಲಾ. ನಿನಗೆ ನಾನು ಏನಾದೆ ಹೇಳಾ ? ನಾನು ನೀನೇ ಆದದ್ದು ಹೇಳಬಾರದೆಂಬುದು ಅಹಂಕಾರವೇ ದೇವಾ ? ನೀನು ಅಹಂಕಾರಿಯಾಗಿರೆ ನಾನು ನಿರಹಂಕಾರಿಯಾದರೆ ಹೆಚ್ಚುಕಡಿಮೆಯಾಗುವದು. ಅದು ಕಾರಣ ನೀನು ಹೇಳದಿದ್ದರೆ ನಾನು ಹೇಳುವೆನು. ಅದೆಂತೆಂದೊಡೆ : ನಾನು ನಿನ್ನ ಗುರುವಿನಲ್ಲಿ ಮುಂದೆ ಹುಟ್ಟಿದೆ, ನೀನು ನನ್ನ ಹಿಂದೆ ಹುಟ್ಟಿದೆ : ನಿನಗೆ ನಾನು ಏನಾದೆ ? ನಿನಗೆ ನಾನು ಅಣ್ಣನಾದೆ. ಮತ್ತೆ ನಾನು ಮುಂದೆ ಗುರುವ ಪಡದು ನಾ ನಿನ್ನ ಪಡೆದೆ. ನಿನಗೆ ನಾನು ತಂದಿಯಾದೆ. ನಾ ಮುಂದೆ ಗುರುವಿನ ಪಡೆದು ಆ ಗುರುವಿನಿಂದ ನಿನ್ನ ಪಡದಲ್ಲಿ ನಾ ನಿನಗೆ ಮುತ್ತ್ಯಾನಾದೆ. ಮುಂದೆ ಸಾಧುರ ಸಂಗ ಪಡೆದು ಆ ಸಾಧುರ ಸಂಗದಿಂದೆ ಗುರುವಿನ ಪಡೆದು ಆ ಗುರುವಿನಿಂದ ನಿನ್ನ ಪಡದಲ್ಲೆ ನಾ ನಿನಗೆ ಅಜ್ಜನಾದೆ. ಮುಂದೆ ಸತ್ಕರ್ಮ, ಆ ಸತ್ಕರ್ಮ ಪಡದಲ್ಲೆ ಸಾಧುರಸಂಗ, ಆ ಸಾಧುರಸಂಗದಿಂದ ಗುರು, ಆ ಗುರುವಿನಲ್ಲಿ ನೀನಾದುದಕ್ಕೆ ನಿನಗೆ ಪಣಜನಾದೆ. ಮುಂದೆ ನೀತಿ ಪಡದಲ್ಲಿ ಆ ನೀತಿಯಿಂದ ಸತ್ಕರ್ಮ, ಆ ಸತ್ಕರ್ಮದಿಂದೆ ಸಾಧುರಸಂಗ, ಆ ಸಾಧುರಸಂಗದಿಂದೆ ಗುರು, ಆ ಗುರುವಿನಿಂದ ನಾನಾದಮ್ಯಾಲೆ ನಾ ನಿನಗೆ ಪಣಜನಪ್ಪನಾದೆ. ಮುಂದೆ ನಾನು ಜ್ಞಾನ ಪಡೆದಲ್ಲಿ ಆ ಜ್ಞಾನದಿಂದ ನೀತಿ, ಆ ನೀತಿಯಿಂದೆ ಸತ್ಕರ್ಮ, ಆ ಸತ್ಕರ್ಮದಿಂದೆ ಸಾಧುರಸಂಗ, ಆ ಸಾಧುರಸಂಗದಿಂದೆ ಗುರುವು, ಆ ಗುರುವಿನಿಂದ ನಿನ್ನ ಪಡೆದಲ್ಲಿ ನಾ ನಿನಗೆ ಪಣಜನ ಮುತ್ತ್ಯನಾದೆ. ನಾ ಮುಂದೆ ನರಜನ್ಮ ಪಡದಲ್ಲಿ ಜ್ಞಾನ, ಆ ಜ್ಞಾನದಿಂದೆ ನೀತಿ, ನೀತಿಯಿಂದ ಸತ್ಕರ್ಮ, ಸತ್ಕರ್ಮದಿಂದೆ ಸಾಧುರ ಸಂಗ, ಸಾಧುರಸಂಗದಿಂದೆ ಗುರುವು, ಗುರುವಿನಿಂದೆ ನೀನು, ನಾ ನಿನಗೆ ಪಣಜನಜ್ಜನಾದೆ. ಈ ನರಜನ್ಮಕ್ಕೆ ಮುಂದೆ ಪುಣ್ಯವೆ ಕಾರಣ. ಮುಂದೆ ಪುಣ್ಯಪಡೆದಲ್ಲಿ ಆ ಪುಣ್ಯದಿಂದೆ ಈ ನರಜನ್ಮಪಡೆದೆ. ಈ ನರಜನ್ಮದಿಂದೆ ಜ್ಞಾನಪಡೆದೆ, ಈ ಜ್ಞಾನದಿಂದೆ ನೀತಿಪಡೆದೆ, ನೀತಿಯಿಂದೆ ಸತ್ಕರ್ಮ, ಸತ್ಕರ್ಮದಿಂದೆ ಸಾಧುರಸಂಗಪಡೆದೆ. ಈ ಸಾಧುರಸಂಗದಿಂದೆ ಗುರುವಿನಪಡೆದೆ. ಗುರುವಿನಿಂದ ನಿನ್ನ ಪಡೆದೆ ; ನಾ ನಿನಗೆ ಪಣಜನ ಪಣಜನಾದೆ. ಇಷ್ಟಾದರೂ ಆಯಿತೇ ? ಮತ್ತೆ ನಿನ್ನ ಘ್ರಾಣಕ್ಕೆ ಗಂಧವಕೊಟ್ಟೆ, ನಿನ್ನ ಜಿಹ್ವೆಗೆ ರಸವ ನೀಡಿದೆ, ನಿನ್ನ ನೇತ್ರಕ್ಕೆ ರೂಪವ ತೋರಿದೆ, ನಿನ್ನ ಅಂಗಕ್ಕೆ ಆಭರಣವನಿಟ್ಟೆ, ನಿನ್ನ ಶ್ರೋತ್ರಕ್ಕೆ ಶಬ್ದವ ಕೊಟ್ಟೆ, ನಿನ್ನ ಹೃದಯಕ್ಕೆ ತೃಪ್ತಿಯಮಾಡಿದೆ. ನಾನು ಈ ಪರಿಯಲ್ಲಿ ನಿನ್ನ ಹುಟ್ಟಿಸಿದೆ, ನಿನ್ನ ಬೆಳೆಸಿದೆ, ನಿನ್ನ ಮನ್ನಿಸಿದೆ, ನಿನ್ನ ವರ್ಣಿಸಿದೆ. ಮತ್ತೆ ಗುರು-ಶಿಷ್ಯ ಸತಿ-ಪತಿನ್ಯಾಯ. ನೀ ಪತಿ ನಾ ಸತಿ, ಅಹುದೋ ಅಲ್ಲವೋ ? ಮತ್ತೆ ನೀ ಪತಿಯಾದ ಮೇಲೆ ನಿನಗೆ ನಾನು ಸೋಲಬೇಕೋ ನನಗೆ ನೀನು ಸೋಲಬೇಕೋ ? ನನಗೆ ನೀ ಸೋತಲ್ಲಿ ನಾ ಹೆಚ್ಚೊ ? ನೀ ಹೆಚ್ಚೊ ? ನಾನೇ ಹೆಚ್ಚು. ಅದು ಹೇಗೆಂದಡೆ : ನನ್ನ ಮುಡಿಯಲಾದ ಗಂಧಕ್ಕೆ ನಿನ್ನ ಘ್ರಾಣೇಂದ್ರಿಯ ಸೋತಿತು. ನನ್ನ ಅಧರಾಮೃತಕ್ಕೆ ನಿನ್ನ ಜಿಹ್ವೇಂದ್ರಿಯ ಸೋತಿತು. ನನ್ನ ಹಾವ ಭಾವ ವಿಭ್ರಮ ವಿಲಾಸ ಶೃಂಗಾರ ತೋರಿಕೆಗೆ ನಿನ್ನ ನಯನೇಂದ್ರಿಯ ಸೋತಿತು. ನನ್ನ ಅಂಗದಾಲಿಂಗಕ್ಕೆ ನಿನ್ನ ತ್ವಗೇಂದ್ರಿಯ ಸೋತಿತು. ನನ್ನ ಸಂಗಸಮರಸದಲ್ಲಿ ನಿನ್ನ ಸಂಯೋಗ ಸೋತಿತು. ನೀನು ಆವ ಪರಿಯಾಗಿ ನನ್ನ ಸೋಲಿಸಬಂದರೆ. ನಾನು ನಿನ್ನ ಆವಾವ ಪರಿಯಾಗಿ ಸೋಲಿಸಿದೆ. ಅದು ಹಾಂಗಿರಲಿ, ಇನ್ನೊಂದುಂಟು-ಅದು ಏನೆನಲು : ನೀನು ನಾ ಮುಡದದ್ದು ಮುಡದಿ, ನಾ ಉಂಡದ್ದು ಉಂಡಿ, ನಾ ಕಂಡದ್ದು ಕಂಡಿ, ನಾ ಉಟ್ಟದ್ದು ಉಟ್ಟಿ, ನಾ ಕೇಳಿದ್ದು ಕೇಳಿದಿ, ನಾ ಕುಡದದ್ದು ಕುಡಿದಿ, ನೀನು ನನ್ನ ಪ್ರಸಾದಿ ಆದಿಯಲ್ಲಾ. ಮತ್ತೆ ನನ್ನ ಮೂಗೇ ನಿನ್ನ ಮೂಗು, ನನ್ನ ಬಾಯಿಯೇ ನಿನ್ನ ಬಾಯಿ, ನನ್ನ ಕಣ್ಣೇ ನಿನ್ನ ಕಣ್ಣು, ನನ್ನ ಮೈಯ್ಯೇ ನಿನ್ನ ಮೈ, ನನ್ನ ಕಿವಿಯೇ ನಿನ್ನ ಕಿವಿ, ನನ್ನ ಹೃದಯವೇ ನಿನ್ನ ಹೃದಯ, ನನ್ನ ಪ್ರಾಣವೇ ನಿನ್ನ ಪ್ರಾಣ, ನನ್ನ ಮನವೇ ನಿನ್ನ ಮನ, ನನ್ನ ಪ್ರಾಣವೇ ನಿನ್ನ ಪ್ರಾಣ, ನನ್ನ ಮನವೇ ನಿನ್ನ ಮನ, ನಾನೇ ನೀನು, ನನ್ನ ಬಿಟ್ಟರೆ ನಿನಗೆ ಗತಿಯಿಲ್ಲ. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಹರಂಗೆ ಅಜ ಹರಿ ಮೊದಲಾದ ದೈವಂಗಳ ಸರಿಯೆಂಬ ನರಕಿಗಳ, ಗುರುವಿಂಗೆ ನರರ ಸರಿಯೆಂಬ ಕಡುಪಾಪಿಗಳ, ಪರಶಿವಧರ್ಮಕ್ಕೆ ವೇದಾಗಮಂಗಳ ಸರಿಯೆಂಬ ಪಾತಕರ, ಪರಶಕ್ತಿ ಜಗದಂಬೆ ಉಮಾದೇವಿಯರಿಗೆ ಉಳಿದಾದ ಶಕ್ತಿಗಳ ಸರಿಯೆಂಬ ಕರ್ಮಿಗಳ, ಇಂತಿವರ ಮುಖವ ನೋಡಿದವರಿಗೆ ನರಕವಲ್ಲದೆ ಮತ್ತೊಂದು ಗತಿಯಿಲ್ಲ. ಇಂತಿವರ ಹೊರೆಯಲ್ಲಿರಲಾಗದು, ಒಡನೆ ನುಡಿಯಲಾಗದು, ಒಂದಾಸನದಲ್ಲಿ ಕುಳ್ಳಿರಲಾಗದು. ಶಿವಂ ಬ್ರಹ್ಮಾದಿಭಿಃ ಸಾಮ್ಯಂ ಗುರುಃ ಪ್ರಾಕೃತೈಸ್ಸಮಂ | ಶಿವಂ ವಿದ್ಯಾ ಚ ವೇದಾದ್ಯೈರ್ಮನುತೇ ಯಸ್ತು ಮಾನವಃ || ಸ ಪಾಪೀ ದುರ್ಮತಿಃ ಕ್ರೂರಃ ಶ್ವಪಚಃ ಶ್ವಪಚಾಧಮಃ | ಶಿವಂ ಬ್ರಹ್ಮಾದಿಭಿಃ ಸಾಮ್ಯಂ ಶಿವಂ ಲಕ್ಷ್ಯಾದಿ ಶಕ್ತಿಭಿಃ || ಸ್ವಗುರುಂ ಪ್ರಾಕೃತೈಸ್ಸಾರ್ಧಂ ಯೇ ಸ್ಮರಂತಿ ವದಂತಿ ಚ | ತೇಷಾಂ ಪಾಪಾನಿ ನಶ್ಯಂತಿ ಶ್ರೀಮತ್ ಪಂಚನದಾಶ್ರಯಃ || ಇಂತೆಂದುದಾಗಿ, ಇದು ಕಾರಣ, ಇಂತೀ ಮರುಳು ದುರಾತ್ಮರನೆನಗೆ ತೋರಿಸದಿರಯ್ಯಾ. ಬಸವಪ್ರಿಯ ಕೂಡಲಚೆನ್ನಸಂಗಯ್ಯಾ, ಬೇಡುವೆ ನಿಮ್ಮದೊಂದೇ ವರವನು.
--------------
ಸಂಗಮೇಶ್ವರದ ಅಪ್ಪಣ್ಣ
-->