ಅಥವಾ

ಒಟ್ಟು 22 ಕಡೆಗಳಲ್ಲಿ , 9 ವಚನಕಾರರು , 19 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಜಂಗೆ ಮಂತ್ರಿ ಮುಖ್ಯವಾದಂತೆ ಬಾಹ್ಯಪ್ರಾಣಕ್ಕೆ ಮನವೆ ಮುಖ್ಯ ನೋಡಾ. ಮನ ಮುಖ್ಯವಾಗಿ ಸರ್ವಪಾಪ ಅನ್ಯಾಯವ ಗಳಿಸಿ, ಕಾಲಂಗೆ ಗುರಿಮಾಡಿ, ಜನನ ಮರಣಕ್ಕೆ ತರಿಸಿ, ಮುನ್ನ ಕಾಡುತ್ತಿದೆ. ಮನವ ನಿರಸನವ ಮಾಡುವರೆನ್ನಳವೆ ? ನಿನ್ನಳವ ಎನ್ನೊಳಿತ್ತು ಮನ್ನಿಸಿ ಕಾಯಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರುಚರಮೂರ್ತಿ ಪೂಜಿಸಿಕೊಂಬಲ್ಲಿ ತಮ್ಮ ವಿವರವ ತಾವರಿಯಬೇಕು. ಹೆಣ್ಣು ಹೊನ್ನು ಮಣ್ಣು ಹೊರಗೆಂದು ಕೆಲವರಿಗೆ ಹೇಳಿ ಗನ್ನದಿಂದ ತಾವು ಗಳಿಸಿ ಕೂಡುವುದು, ಅದು ತಾನೆ ಅನ್ಯಾಯವಲ್ಲವೆ? ಬಿರಿದ ಕಟ್ಟಿದ ಬಂಟ ಭಾಷೆಗೆ ತಪ್ಪಿದಡೆ, ರಾಜನ ಮುಖಕ್ಕೆ ಏರಿದಡೆ, ಅದೆ ಭಂಗ. ಇಂತಿವನರಿಯದೆ ಮೂಗ ಕೊಯಿದು ಮಾರಿ, ಹಣ್ಣ ಮೆಲುವ ಅಣ್ಣಗಳಿಗೇಕೆ ಗುರುಚರಸ್ಥಲ? ಇಂತಿವರೆಲ್ಲರು ಸದಾಶಿವಮೂರ್ತಿಲಿಂಗಕ್ಕೆ ಹೊರಗು.
--------------
ಅರಿವಿನ ಮಾರಿತಂದೆ
ಒಡವೆ ವಸ್ತು ಧನ ಧಾನ್ಯವ ಲೋಭದಿಂದ ಗಳಿಸಿ, ಮಡದಿಮಕ್ಕಳಿಗೆಂದು ಮಡುಗಿಕೊಂಡು, ದಾನಧರ್ಮವ ಪರ ಉಪಕಾರಕ್ಕೆ ನೀಡದೆ, ಹೇಸಿಗುಣದಲ್ಲಿಪ್ಪ ಮಾನವರ ಆಯುಷ್ಯ ವ್ಯಯಿದು ಕಾಲಮೃತ್ಯು ಬಂದು ಹೊಡೆದೊಯ್ಯು[ವಾಗ], ಸುಖದಲ್ಲಿರುವಂದಿನ ಮಡದಿ-ಮಕ್ಕಳು ಒಡವೆ-ವಸ್ತು ಧನಧಾನ್ಯ ಕಾಯುವವೆ ? ಕಾಯವು. ಎರವಿನ ಸಿರಿ, ಎರವಿನ ಮನೆ, ಎರವಿನ ಮಡದೇರು, ಎರವಿನ ಮಕ್ಕಳ ನೆಚ್ಚಿಕೊಂಡು ಊರ ಸೀರಿಂಗೆ ಅಗಸ ಬಡದು ಸಾವಂತೆ, ಪರಾರ್ಥನರಕದೊಡವೆಯ ನೆಚ್ಚಿ ನನ್ನತನ್ನದೆಂದು ಲೋಭತ್ವದಿಂದ ಕೆಟ್ಟರು. ಬರುತೇನು ತರಲಿಲ್ಲ , ಹೋಗುತೇನು ಒಯ್ಯಲಿಲ್ಲ , ಹುಟ್ಟುತ್ತಲೆ ಬತ್ತಲೆ, ಹೋಗುತಲೆ ಬತ್ತಲೆ. ಈ ನಷ್ಟಸಂಸಾರವ ನಂಬಿ ಕೆಡದಿರಿ ಮನುಜರಿರ. ನಂಬಿ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವ.
--------------
ಹೇಮಗಲ್ಲ ಹಂಪ
ಕಾಯಕ್ಲೇಶದಿಂದ ತನುಮನ ಬಳಲಿ ಧನವ ಗಳಿಸಿ ಗುರುಲಿಂಗಜಂಗಮಕ್ಕೆ ವೆಚ್ಚಿಸಿ ದಾಸೋಹವ ಮಾಡುವ ಭಕ್ತನ ಪಾದವ ತೋರಯ್ಯಾ, ನಿಮ್ಮ ಧರ್ಮ. ಅದೇಕೆಂದಡೆ; ಆತನ ತನು ಶುದ್ಧ ಆತನ ಮನ ಶುದ್ಧ. ಆತನ ನಡೆ ನುಡಿ ಪಾವನ. ಆತಂಗೆ ಉಪದೇಶವ ಮಾಡಿದ ಗುರು ನಿರಂಜನ ನಿರಾಮಯ. ಅಂತಹ ಭಕ್ತನ ಕಾಯವೆ ಕೈಲಾಸವೆಂದು ಹೊಕ್ಕು ಲಿಂಗಾರ್ಚನೆಯ ಕಾಡುವ ಜಂಗಮ ಜಗತ್ಪಾವನ. ಇಂತಿವರಿಗೆ ನಮೋ ನಮೋ ಎಂಬೆ ಕೂಡಲಚೆನ್ನಸಂಗಯ್ಯ
--------------
ಚನ್ನಬಸವಣ್ಣ
ಈ ಸಂಸರ್ಗದಲ್ಲಿ ಹುಟ್ಟಿದ ಶಿಶುವೆಂದು ಮಾಯಾಮೋಹದಿಂದ ಲಾಲಿಸಿ, ಸಕಲ ಸುಖಭೋಗಂಗಳಲ್ಲಿ ಪಾಲಿಸಿ, ವಸ್ತು ವಸ್ತ್ರ ಮುಂತಾದ ರತ್ನಮೌಕ್ತಿಕಂಗಳ ಗಳಿಸಿ ನಿಕ್ಷೇಪಿಸಿಪ್ಪವರಿಂದ ಕಡೆಯೆ? ತನ್ನ ಕರಕಮಲದಲ್ಲಿ ಹುಟ್ಟಿದ ಶಿಶುವಿಂಗೆ ಶಿವಜ್ಞಾನದಿಂದ ಬಂದ ಶಿಷ್ಯಂಗೆ ಶಿವಶ್ರದ್ಧೆ ಮೋಹ ಹೀಗಿರಬೇಕು. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ. ಮಾತುಳಂಗ ಮಧುಕೇಶ್ವರನು
--------------
ದಾಸೋಹದ ಸಂಗಣ್ಣ
ಕೋಣನ ಕೊರಳಲ್ಲಿ ಕಪಿ, ಬೆನ್ನಿನಲ್ಲಿ ರಕ್ಷಿ, ಬಾಲದ ಜವೆಗೊಂದೊಂದು ಮುಸುವ, ಕೊಂಬಿನ ಮೇಲೆ ಕುಣಿವ ಗಿಡುಗ ; ಇಂತಿವೆಲ್ಲವ ಸಂತೈಸಿಕೊಂಡು ರಕ್ಷಿ ನಡೆದಳು. ತಮಪುರವೆಂಬ ಪಟ್ಟಣಕ್ಕೊಸ್ತಿಯ ಹೋಗಿ, ಆ ಪಟ್ಟಣದೊಳು ಸ್ಥಿರವಾಗಿ ನಿಂದು, ಬದುಕು ಮನೆ ಅರ್ಥವಂ ಗಳಿಸಿ, ತಮಪುರದರಸಿಂಗೆ ಸರಿಗೊರನಿಕ್ಕಿ ತಮದ ಮರೆಯಲ್ಲಿಪ್ಪ ವನಿತೆಯ ಕಂಡರೊ[ಂದ]ಗ್ನಿ, ನಡೆದರೆರಡಗ್ನಿ, ನುಡಿದರೆ ಮೂರಗ್ನಿ, ಕೇಳಿದರೆ ನಾಲ್ಕಗ್ನಿ, ವಾಸಿಸಿದರೈದಗ್ನಿ. ಆ ಗಿರಿಯೊಳು ನಿಂದು, ಗಿಡುಗನನಡಸಿ, ಮುಸುವನ ಹರಿಯಬಿಟ್ಟು, ಕಪಿಯ ಕೈವಿಡಿದು ಜಪವ ಮಾಡಿ, ಕೋಣನ ನೆರೆ ಕೂಗುವವ ನುಡಿಯ ಪಾಶದೊಳು ಸಿಲ್ಕಿ, ತ್ರಿಲೋಕವೆಲ್ಲ ವ್ರತಭ್ರಷ್ಟರಾದ ಚೋದ್ಯವ ಕಂಡು ನಾ ಬೆರಗಾಗುತಿರ್ದೆನು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಹುಟ್ಟಿದ ಮಾನ್ಯರೆಲ್ಲ ದಶವಾಯು ಪಂಚಭೂತ ಸಪ್ತಧಾತು ಅರಿಷಡ್ವರ್ಗ ಅಷ್ಟಮದಂಗಳನೆಲ್ಲ ಸುಟ್ಟು ಸೂರೆಮಾಡಿ ನಿನ್ನೊಳು ಬೆರೆದರೆ, ಅಂಡಜ ಶ್ವೇದಜ ಉದ್ಬಿಜ ಜರಾಯುಜವೆಂಬ ನಾಲ್ಕು ತೆರದ ಯೋನಿಯಲ್ಲಿ ಹುಟ್ಟಿ, ಚೌರಾಸಿಲಕ್ಷ ಜೀವರಾಸಿಯಾಗಿ ಪಾಪಕರ್ಮವ ಗಳಿಸಿ ಯಮಂಗೆ ಗುರಿಯಾಗುವರಾರು ? ಅದು ಕಾರಣ, ಮೋಡದಮರೆಯ ಸೂರ್ಯನಂತೆ, ಸ್ಫಟಿಕದ ಘಟದೊಳಗಣ ಜ್ಯೋತಿಯಂತೆ, ಸರ್ವರ ಆತ್ಮದೊಳು ಮರೆಗೊಂಡುಯಿಪ್ಪ ತನುಗುಣ ಮನಗುಣ ಅಹಂಕಾರ ಮಾಯಾಮದದ ತಮಂಧದ ಕತ್ತಲೆಯ ಮರೆಮಾಡಿ ಕಾಣಗೊಡದೆಯಿಪ್ಪ ಮರೆಗೊಂಡ ಭೇದವ ಶಿವಶರಣರು ಬಲ್ಲರುಳಿದ ನರಗುರಿಗಳಿಗಸಾಧ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮನವಿಕಾರ ಸುಟ್ಟದನು ಮನವಿಕಾರದ ಭ್ರಮೆಯ ಹೋರಟೆಯಾಗದೆಂ ಬನುವಿನಿಂ ತ್ರಿಲೋಕಯೆಲ್ಲ ಭಂಗಿತರಾಗಿ ಜನನ ಮರಣಕೆ ಬರುವ ಮನವು ನಿರ್ಮನವಾಗಲವ ಸತ್ಯ ನಿತ್ಯ ಶರಣ. ಪದ :ಹರಿದು ಮರ್ಕಟನ ವಿಕಾರಕಿಂದಲಿ ಮೇಣು ಸುರೆ ಸವಿದವನ ವಿಕಾರವದರಿಂದ ಧ ತ್ತುರಿಯ ಸೇವಿಸಿದವನ ವಿಕಾರಯಿವು ತ್ರಿವಿಧಕೆ ಗೌರವಂ ಮನವಿಕಾರ ಚರಿಯ ಮದದ ಅಮಲು ತಲೆಗೇರಿ ತಾಮಸದಲಿಂ ಗಿರಿಯಂಧಕನವೋಲಿನಂತೆ ದೇವತಾ ಸತ್ಯ ಪುರುಷರುಂ ಶಿವಜ್ಞಾನ ಹೊಲಬನರಿಯದೆ ಕೆಟ್ಟುದನೇನ ಹೊಗಳ್ವೆ ನಾನು | 1 | ಹರಿಯ ಮುಂದುಗೆಡಿಸಿ ಅಜನ ಶಿರವ ಕಳೆಸಿ ಸುರನ ಮೈಯೋನಿಯಂ ಮಾಡಿ ದೇವರ್ಕಳಂ ನೆರೆ ಕೆಡಿಸಿ ಯತಿ ಸಿದ್ಧಸಾಧ್ಯರೆಲ್ಲರ ಸೆರೆಯ ಹಿಡಿದು ಭಂಗಿತರ ಮಾಡಿ ಧರೆಯ ಮನುಜರ ತಿಂದು ತೇಗಿ ಕಾಡುವ ಮನವ ನಿರಸನಮಾಡಿ ನಿರ್ಮೋಹಿಯಾಗಿಹ ಸತ್ಯ ಶರಣರಡಿಧೂಳಿಯ ಚಮ್ಮಾವುಗೆಯ ಪೊರೆವೆನೆನಗಿದೆ ಸತ್ಯ ಮುಕ್ತಿ ಕಂಡಾ |2| ಇಳೆಪತಿಗೆ ಮಂತ್ರಿ ತಾ ಮುಖ್ಯವಾದಂತೆ ಕಾಯ ದೊಳು ಚರಿಸುವ ಜೀವ ಪ್ರಾಣದ್ವಯ ದಶವಾಯು ಗಳು ಅಷ್ಟಮದ ಸಪ್ತವ್ಯಸನ ಅರಿವರ್ಗ ಚತುರಂತಃಕರಣವಿಷ್ಟೆಲ್ಲಕೆ ಸಲೆ ಮನಂ ಮುಖ್ಯವಾಗಿಯೂ ಪಾಪ ಅನ್ಯಾಯವ ಗಳಿಸಿ ಯಮನಿಂಗೆ ಗುರಿಮಾಡಿ ಬಂಧಿಸಿ ಜನರ ಕೊಲ್ಲಿಸುತಿಹ ವಿಧಿಗಂಜಿ ನಿಮ್ಮ ಮೊರೆಹೊಕ್ಕೆನೆಲೆ ಕಾಯೋ ಶಂಭುವೆ. | 3 | ಚಣಚಣಕ್ಕೆ ಪಾತಾಳಲೋಕಕೈದುವ ಮನಂ ಚಣಚಣಕ್ಕೆ ಆಕಾಶದತ್ತ ಹಾರುವ ಮನಂ ಚಣಚಣಕ್ಕೆ ಸಪ್ತಸಮುದ್ರವ ಚರಿಸಿಬರುವುದೀ ಮನಮರುತ ಸರ್ವಾಂಗದಿ ಚಣಕೊಂದು ಬುದ್ಧಿಯ ನೆನದು ಕಾಡುವ ಮನದ ಗುಣದಿಂದ ನಾ ಕರ್ಮಶರಧಿಯೊಳು ಮುಣಗಿದೆನು ತ್ರಿಣಯ ನೀ ಕೈವಿಡಿದು ತೆಗೆದು ರಕ್ಷಿಸು ಎನ್ನ ಕರುಣಾಳು ದುರಿತಹರನೆ |4 | ಮನದಿಂದೆ ನೊಂದೆ ನಾ ಮನದಿಂದೆ ಬೆಂದೆ ನಾ ಮನದಿಂದ ಕಂದಿ ಕುಂದಿಯೆ ಕುಸಿದು ಭವಗಿರಿಯ ನನುದಿನಂ ಸುತ್ತುತಿರ್ದೆನು ಅಂಧಕನ ತೆರದಿ ಮನದ ನಸು ಗುನ್ನಿ ಚುರಿಚಿತನವು ಸರ್ವಾಂಗವೆಲ್ಲವ ಕೊಂಡು ತಿನಿಸೆದ್ದು ಮನದ ಗಂಧೆಯ ತುರಿಸಿ ತುರಿಸನೇ ಹಂಬಲಿಸಿ ಕನಲುತಿರ್ದೆನು ಎನ್ನ ಗುಣವ ನೋಡದೆ ಕಾಯೋ ಕಾಯೋ ಕರುಣಾಳುವೆ |5| ಪಾಪಿಮನ ಠಕ್ಕಮನ ಸರ್ವರೊಳು ಕೋಪಿಮನ ಕುಕ್ಕಮನ ಕಾಕುಮನ ಜಾಪಿಮನ ಹೇವಮನ ಹೆಬಗಮನ ಗುಣಧರ್ಮಕರ್ಮದಿಂದ ತಾಪಸಬಡುತಿರ್ದೆ ಗಾಯವಡೆದ ಉರಗ ನಾಪರಿಯಲೆನ್ನ ನೆರಳಿಸಿ ಒರಲಿಸುವ ಮನದ ರೂಪನಳಿದು ಜ್ಞಾನವಿತ್ತು ಸಲವಯ್ಯಾ ಚಿದ್ರೂಪ ಚಿನ್ಮಯ ಶಂಭುವೆ. | 6 | ಕೂಳಮನ ಕುರಿಮನ ಸರ್ವಚಾಂ ಡಾಲಿಮನ ಪರಧನ ಪರಸ್ತ್ರೀಯರನ್ಯಕ್ಕೆ ಕೋಳುಗೊಂಬುವ ಹೆಡ್ಡಮನ ಜಿಡ್ಡುಮನ ಜಾಳುಮನ ಹಾಳುಮನದ ಪಾಳೆಯವು ಹಲವು ಪರಿಯ ಮನದ ಗಾಡಿಗೆ ಸಿಲ್ಕಿ ಕಾಲಕರ್ಮಕ್ಕೆ ಗುರಿಯಾದೆನಿದ ಪರಿಹರಿಸಿ ಶೂಲಿ ಸರಸಿಜನ ಕಪಾಲಿ ಶಿರಮಾಲಿ ರಕ್ಷಿಸು ಕರುಣಾಂಬುನಿಧಿ ಗಿರಿಜೇಶನೆ |7| ಅಂಗಗೂಡಿನೊಳು ಮನಪಕ್ಷಿ ಹೊರಗಿರುವ ಪ ಕ್ಕಂಗಳೆರಡರೊಳು ಉಡುಪತಿ ಭಾನುವಂ ಪಿಡಿದು ಜಂಗಿಟ್ಟು ಭೂಯ್ಯೋಮ ಮಧ್ಯದೊಳು ಚರಿಸುತಿರಲೆತಿ ಸಿದ್ಧ ಸಾಧ್ಯರೆಲ್ಲ ಭಂಗಬಡುವರು ಮನವೆಂಬ ಪಕ್ಷಿಯ ಮುರಿದು ನುಂಗಬಲ್ಲಡೆ ಸತ್ಯಶಿವಯೋಗಿ ಶರಣ ನಿ ರ್ಭಂಗ ನಿರ್ಲೇಪ ನಿರ್ಮನ ನಿರಾಭಾರಿಯಾಗಿಹರೆನ್ನ ಪ್ರಾಣಲಿಂಗ. | 8 | ಹರನ ಶ್ರೀಪಾದದೊಳು ಮನವನಿಟ್ಟಿಹ ಸತ್ಯ ಶರಣಬಸವೇಶ ಪ್ರಭುರಾಯ ಮೋಳಿಗೆ ಮಾರ ಗುರುಭಕ್ತ ನೆಂಬಣ್ಣ ದಾಸಿ ಕೇಶಯ್ಯನೋಹಿಲದೇವನುದುಟಯ್ಯ ಮರುಳಶಂಕರ ಮುಖ್ಯವಾದ ಪ್ರಮಥರ ದಿವ್ಯ ಚರಣದಲಿ ಮನವ ಮಗ್ನಿಸಿದ ದಾಸೋಹಿಗಳ ವರಪ್ರಸಾದಕ್ಕೆ ಯೋಗ್ಯನ ಮಾಡು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. | 9 |
--------------
ಹೇಮಗಲ್ಲ ಹಂಪ
ಇಂತೀ ಕ್ರಮದಲ್ಲಿ ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನ ನೀಡಿದ ಭಕ್ತಗಣಂಗಳಿಗೆ ಮೋಕ್ಷವೆಂಬುದು ಕರತಳಾಮಳಕವಾಗಿರ್ಪುದು. ಇಂತಪ್ಪ ವಿಚಾರವ ತಿಳಿಯದೆ ಮೂಢಮತಿಯಿಂದ ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನವ ನೀಡಿದಾತನೇ ಭಕ್ತನೆಂದು ವೇದಾಗಮಶ್ರುತಿ ಪ್ರಮಾಣವಾಕ್ಯಂಗಳು ಸಾರುತ್ತಿರ್ಪವು. ಆ ಶ್ರುತಿ ಸಾರಿದ ವಾಕ್ಯಗಳು ಪ್ರಮಾಣ. ಅದೆಂತೆಂದಡೆ: ಅಂತಪ್ಪ ಶ್ರುತಿವಾಕ್ಯಂಗಳ ಕೇಳಿ ಸ್ವಾನುಭಾವಗುರುಮುಖದಿಂದ ವಿಚಾರಿಸಿಕೊಳ್ಳಲರಿಯದೆ, ತಮ್ಮಲ್ಲಿ ಸ್ವಯಂಜ್ಞಾನೋದಯವಾಗಿ ತಾವು ತಿಳಿಯದೆ ಮೂಢಮತಿಯಿಂದ ಅಜ್ಞಾನ ಎಡೆಗೊಂಡು ಗುರುವಿಗೆ ತನುವ ನೀಡಬೇಕೆಂದು, ಆ ಗುರುವಿನ ಸೇವಾವೃತ್ತಿಯಿಂದ ತನುವ ದಂಡನೆಯ ಮಾಡುವರು. ಅದೇನು ಕಾರಣವೆಂದಡೆ: ಗುರುವಿನ ನಿಲುಕಡೆಯನರಿಯದ ಕಾರಣ. ಲಿಂಗಕ್ಕೆ ಮನವ ನೀಡಬೇಕೆಂದು ಧೂಪ-ದೀಪ-ನೈವೇದ್ಯ-ತಾಂಬೂಲ ಮೊದಲಾದ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿ, ಹಸ್ತದಲ್ಲಿರುವ ಇಷ್ಟಲಿಂಗದಲ್ಲಿ ಮನವ ನಿಲ್ಲಿಸಬೇಕೆಂದು ಎವೆಗೆ ಎವೆ ಹೊಡೆಯದೆ ಸತ್ತ ಮಲದ ಕಣ್ಣಿನಂತೆ ಕಣ್ಣು ತೆರೆದು ನೋಡಿದಡೆ ಆ ಕಲ್ಲಲಿಂಗದಲ್ಲಿ ಮನವು ನಿಲ್ಲಬಲ್ಲುದೆ ? ನಿಲ್ಲಲರಿಯದು. ಅದೇನು ಕಾರಣವೆಂದಡೆ : ಆ ಇಷ್ಟಬ್ರಹ್ಮದ ನಿಜನಿಲುಕಡೆಯ ಸ್ವರೂಪ ತಾವೆಂದರಿಯದ ಕಾರಣ. ಇಂತೀ ಪರಿಯಲ್ಲಿ ಮನವ ಬಳಲಿಸುವರು. ಜಂಗಮಕ್ಕೆ ಧನವ ನೀಡಬೇಕೆಂದು ಅನ್ನ-ವಸ್ತ್ರ ಮೊದಲಾದ ಹದಿನೆಂಟು ಧಾನ್ಯ ಜೀನಸು ಸಹವಾಗಿ ನಾನಾ ಧಾವತಿಯಿಂದ ಗಳಿಸಿ ಸಕಲ ಪದಾರ್ಥವನು ಜಂಗಮಕ್ಕೆ ನೀಡಿ, ಆತ್ಮನ ಬಳಲಿಸುವರು. ಅದೇನು ಕಾರಣವೆಂದಡೆ, ಆ ಜಂಗಮದ ನಿಜನಿಲುಕಡೆಯ ಸ್ವರೂಪ ತಾವೆಂದರಿಯದ ಕಾರಣ. ಇಂತಿವೆಲ್ಲವು ಹೊರಗಣ ಉಪಚಾರ. ಈ ಹೊರಗಣ ಉಪಚಾರವ ಮಾಡಿದವರಿಗೆ ಪುಣ್ಯಫಲಪ್ರಾಪ್ತಿ ದೊರಕೊಂಬುವದು. ಆ ಪುಣ್ಯಫಲ ತೀರಿದ ಮೇಲೆ ಮರಳಿ ಭವಬಂಧನವೇ ಪ್ರಾಪ್ತಿ. ಅದೆಂತೆಂದಡೆ : ಪುಣ್ಯವೇ ತೈಲ, ಫಲವೇ ಜ್ಯೋತಿ. ತೈಲವು ತೀರಿದ ಹಾಗೆ ಆ ಜ್ಯೋತಿಯ ಪ್ರಕಾಶ ಅಡಗುವದು. ಪುಣ್ಯ ತೀರಿದ ಮೇಲೆ ಫಲಪದ ನಾಶವಾಗುವದು ನೋಡೆಂದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅನಾಚಾರದ ಕಾಯ[ಕ]ವ ಮಾಡಿ, ಪದಾರ್ಥವನೆ ಗಳಿಸಿ ಆ ಪದಾರ್ಥವನೆ ಪಾಕವ ಮಾಡಿ, ಓಗರವ ಮಾಡುವುದು, ಆ ಓಗರವನೆ ಪ್ರಸಾದವ ಮಾಡಿ, ಆ ಪ್ರಸಾದವನೆ ಓಗರವ ಮಾಡಿ! ಇದು ಕಾರಣ ಕೂಡಲಚೆನ್ನಸಂಗನ ಶರಣನು ಅರ್ಪಿತವಲ್ಲದೆ ಮಾಡನು.
--------------
ಚನ್ನಬಸವಣ್ಣ
ಮಾತೆಪಿತರುಗಳಿಂದೆ ಉದಯವಾದ ಸುತನು ಮಾತೆಪಿತರುಗಳ ನಾಮವಿಡಿದು ಗಳಿಸಿದರ್ಥವ, ಮಾತೆಪಿತರು ತನ್ನ ಪ್ರಾಣವಾಗಿ ಸುಖಿಸಿ ಬಾಳಿದರೆ ಲೋಕಧರ್ಮಿಗಳು ಮೆಚ್ಚುವರು, ಮರೆದು ಬಾಳಿದರೆ ಪಾತಕನೆಂಬುವರು. ಚಿದ್ಘನ ಗುರುವಿನಿಂದುದಯವಾದ ಚಿಲ್ಲಿಂಗಭಕ್ತನು, ಚಿದಾನಂದ ದ್ರವ್ಯವ ಗಳಿಸಿ ಸತ್ತುಚಿತ್ತಾನಂದ ಪ್ರಾಣವಾಗಿ ಸುಖಿಸಿ ಬಾಳಿದರೆ ಆ ಲೋಕಧರ್ಮಿಗಳಾವರಿಸಿಕೊಂಬುವರು, ಮರೆದು ಸುಖಿಸಿದರೆ ಭವಕರ್ಮಿಯೆಂಬುವರು. ಇದನರಿದು ಬಂದೆ ನೀ ನೋಡಿ ಬಾರಾ ಎನ್ನ ಪ್ರಾಣವಾದ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನು ಮನ ಬಳಲದೆ ಉದ್ದಂಡವೃತ್ತಿಯಲ್ಲಿ ಧನವ ಗಳಿಸಿ ತಂದು ಗುರುಲಿಂಗಜಂಗಮಕ್ಕೆ ವೆಚ್ಚಿಸಿ, ದಾಸೋಹವ ಮಾಡಿ, ಭಕ್ತರಾದೆವೆಂಬವರನೆನಗೆ ತೋರದಿರಯ್ಯಾ. ಅದೇಕೆಂದರೆ:ಅವ ಪರಧನ ಚೋರಕ; ಅವ ಪಾಪಿ, ಅವಗೆ ವಿಚಾರಿಸದೆ ಉಪದೇಶವ ಕೊಟ್ಟ ಗುರುವಿಂಗೆ gõ್ಞರವ ನರಕ. ಅವನ ಕಾಯಕವ ವಿಚಾರಿಸದೆ ಅವರ ಮನೆಯಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವ ಜಂಗಮಕ್ಕೆ ಏಳನೆಯ ಪಾತಕ. ಇಂತಹರ ಬದುಕು, ಹುಲಿ ಕಪಿಲೆಯ ತಿಂದು ಮಿಕ್ಕುದ ನರ ಬಂದು ತಿಂಬಂತೆ ಕಾಣಾ. ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ತನುವ ದಂಡಿಸಿ ಧನವ ಗಳಿಸಿ ಅನುವರಿಯದೆ ಬಿನುಗು ಮುಖನಾಗಿ, ಕಲ್ಲುಮಣ್ಣಿಗೆ ಕಳೆದುಳಿವ ಕಾಲನ ಬಾಧೆಗೆ ಉಳಿವಿಲ್ಲ, ಮನವ ಕನಲಿಸಿ ಕ್ಷುಧೆಯ ಮರುಗಿಸಿ ಅರ್ಥವ ಗುಡಿಸಿ ಆಳ್ದನ ಮರೆದು ಸತಿಪುತ್ರ ವಿಷಯಭ್ರಾಂತಕ್ಕೊಲಿದು, ಅಳಿಸಿ ಕಸಗೂಡಿ ಕಳೆದುಳಿವ ಮಾಯೆಗುಳಿವಿಲ್ಲ. ಭಾವ ಬೆಚ್ಚಿ ಕೊನರಿ ಕೊಸದು ಧನವ ತಂದು, ಮಹಾದೇವನ ಮರೆದು, ಅನಿತ್ಯಸಂಸಾರ ಅಪವಾದ ಅರಿಷ್ಟಭಾವಕ್ಕೆಳಸಿ, ದುಷ್ಕರ್ಮಿಯಾಗಿ ಉಳಿದು, ದುರ್ಗತಿಯನೈದುವದೊಡಕೊಳವಲ್ಲ. ಮತ್ತೆಂತೆಂದೊಡೆ: ಒಡೆಯರಿಗೊಡವೆಯನು ವಂಚಿಸುವ ತುಡುಗುಣಿಯರ ಬಾಯಲ್ಲಿ ಹುಡಿಯ ಹೊಯ್ಯಿಸಿ ನಡೆವ ಕಡುಗಲಿ ವೀರಮಾಹೇಶ್ವರ ನಾನು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಒಡಲು ಒಡವೆ ಧರೆ ನಿನಗಾಯಿತ್ತೆಂದು ಉಣಲೊಲ್ಲದಿಪ್ಪ ಮರುಳೆ ಕೇಳಾ! ಅಡವಿಯನೆ ಕೆಳೆಗೊಂಡು ನೆಲದೊಳಗೆ ಬೈಚಿಟ್ಟು. ಹೊಲಬುದಪ್ಪಿ ಭೂತ ಕೊಡಲೊಲ್ಲದವೆಯೊ. ಹಾಗಕ್ಕೆ ಹಾಗವ ಗಳಿಸಿ ಆಗಾಯಿತ್ತೆಂದು ಉಣಲೊಲ್ಲದಿಪ್ಪ ಮರುಳೆ ಕೇಳಾ! ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದ ಕೇಳು ಮಾನವಾ.
--------------
ಗಾವುದಿ ಮಾಚಯ್ಯ
ಇಂತಪ್ಪ ಸಂಸಾರವ ಮಾಡಲರಿಯದೆ ಹೊನ್ನು ನನ್ನದು, ಹೆಣ್ಣು ನನ್ನದು, ಮಣ್ಣು ನನ್ನದು ಎಂದು ನಚ್ಚಿ ಮೆಚ್ಚಿಕೊಂಡು ಕೊಟ್ಟು ಎರಡು ಬಡ್ಡಿಯ ತೆಗೆದುಕೊಂಡು ಗಳಿಸಿ, ಗಳಿಸಿ, ತುಂಡ ಅಧಮ ಸೊಳೆಯರ ಬಾಯ ತೊಂಬಲ, ಉಚ್ಚಿ ಹೊಯ್ಯುವ ಬಚ್ಚಲಹರಿಗೆ ಮೆಚ್ಚಿ ಮರುಳಾಗಿ ತಾನು ಗಳಿಸಿದಂಥ ದ್ರವ್ಯವನು ಸತ್ಪಾತ್ರಕ್ಕಲ್ಲದೆ ಅಪಾತ್ರಕ್ಕೆ ಕೊಟ್ಟು, ಕೆಟ್ಟು ನಷ್ಟವಾಗಿ ಹೋಗುವ ಮೂಳ ಹೊಲೆಯರಿಗೆ ಇನ್ನೆತ್ತಣ ಶಿವಜ್ಞಾನವೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇನ್ನಷ್ಟು ... -->