ಅಥವಾ

ಒಟ್ಟು 23 ಕಡೆಗಳಲ್ಲಿ , 11 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಿಳಿಯ ಗರ್ಭದಲ್ಲಿ ಮಾರ್ಜಾಲ ಹುಟ್ಟಿ ಹಾವಿನ ತಲೆಯ ಮುಟ್ಟಲು ಹೆಡೆಯನೆಗೆದು ಮಾಣಿಕವ ಕಚ್ಚಿ ಎರಡುದಾರಿಯ ಕಟ್ಟಿ ಆಡಲು ಪುರದ ಜನರು ಭೀತಿಗೊಂಡು ನೋಡುವ ಸಮಯದಲ್ಲಿ ಮಾಣಿಕ ಹಾವ ನುಂಗಿ ಜನರ ಹೊಯ್ದು ಒಯ್ಯಲು, ಗಿಳಿ ಸತ್ತು ಗುರುನಿರಂಜನ ಚನ್ನಬಸವಲಿಂಗ ತಾನೆಯಾಯಿತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಕ್ಷುದಂಡದ ತುದಿಯ ಸುಳಿಯಲ್ಲಿ ಹುಟ್ಟಿತೊಂದು ಗಿಳಿ, ರಟ್ಟೆ ಮೂರು, ಕಾಲೊಂದು, ಬಾಯಿ ಎರಡಾಗಿ. ಮುಚ್ಚಿದ ಕಣ್ಣು, ಮೂಗಿನ ಕೆಂಪು, ಮೈಯ ರಕ್ತವರ್ಣ, ತುಪ್ಪುಳು ಕಪ್ಪು, ಕಾಲು ಹಳದಿ, ಬಾಯಿ ಬೆಳ್ಳಗೆ ಹಾರಾಡುವ ಬಯಲರೂಪು, ತೋರದ ಆಗರದಲ್ಲಿ ಹಾರಿಹೋಯಿತ್ತು. ಆತ್ಮನೆಂಬ ರಾಮ, ಪಂಜರವಿಲ್ಲದೆ ಹೋಯಿತ್ತು, ಗುಡಿಯೊಡೆಯ ಗುಮ್ಮಟನಾಥನಲ್ಲಿ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಗಗನದ ಮೇಲೊಂದು ಅಬ್ಥಿನವ ಗಿಳಿ ಹುಟ್ಟಿ ಸಯ ಸಂಭ್ರಮದಲ್ಲಿ ಮನೆಯ ಮಾಡಿತ್ತು ಬ್ರಹ್ಮನಾ ಗಿಳಿಗೆ ಹಂಜರವಾದ, ವಿಷ್ಣು ಆ ಗಿಳಿಗೆ ಕೊರೆವ ಕೂಳಾದ ರುದ್ರನಾ ಗಿಳಿಗೆ ತಾ ಕೋಳಾದ (ಕೋಳುವೋದ ?) ಇಂತೀ ಮೂವರ ಮುಂದಣ ಕಂದನ ನುಂಗಿ ದೃಷ್ಟನಾಮ ನಷ್ಟವಾಯಿತ್ತು_ಇದೆಂತೊ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಲೋಕದ ಡೊಂಕ ನೀವು ತಿದ್ದುವಿರಯ್ಯ ನಿಮ್ಮ (ತನುಮನದ) ಡೊಂಕ ತಿದ್ದಿ ತೀಡಿಕೊಳಲರಿಯದೆ. ಪುರಾತನರು, ನುಡಿದಂತೆ ನಡೆಯದವರೆಲ್ಲ, ಕಡು ಓದಿದ ಗಿಳಿ ತನ್ನ ಮಲವ ತಾ ತಿಂದಂತೆ. ನೆರೆಮನೆಯವರ ದುಃಖವ ಕೇಳಿ, ಗಡ್ಡ ಮೀಸೆ ಮುಂಡೆಯ ಬೋಳಿಸಿಕೊಂಡು (ಕಡೆಯಲ್ಲಿ) ಹೋಗಿ ಅಳುತಿಪ್ಪವರ ಕಂಡರೆ ಕೂಡಲಚೆನ್ನಸಂಗನ ಶರಣರು ನಗುತಿಪ್ಪರಯ್ಯಾ.
--------------
ಚನ್ನಬಸವಣ್ಣ
ಓದನಾದರಿಸಿ, ಗಿಳಿಯ ತಂದು ಸಲಹಿ ಓದಿಸಿದಳಯ್ಯಾ; ಆಲದ ಮರದ ಗಿಳಿ ಓಜೆಗೊಂಡಿತ್ತಯ್ಯಾ ! ಗಿಳಿ ಓದಿತ್ತು, ತನ್ನ ಪರಬ್ರಹ್ಮವ ಬೇಡಿತ್ತು; ತನ್ನ ಪೂರ್ವಾಶ್ರಯದ ಕೊರೆಯ ಕೂಳನುಂಡ ಗಿಳಿ, ಮರೆಯಿತ್ತು ತನ್ನ ತಾನು ! ಅರಿವೆಂಬ ಜ್ಞಾನ ಹುಟ್ಟಿತ್ತಯ್ಯಾ ; ಅರಿವೆಂಬ ಜ್ಞಾನ ಹುಟ್ಟಲಿಕೆ ಜಂಪಿನ ಕಡ್ಡಿಯ ಮೇಲೆ ಕುಳಿತಿರ್ದಿತ್ತಯ್ಯಾ ! ಜಂಪಿನ ಕಡ್ಡಿಯ ಮೇಲೆ ಕುಳಿತ ಗಿಳಿ, ಜಂಪಳಿಸುತ್ತಿರ್ದಿತ್ತು ತನ್ನ ತಾನು. `ಅಕ್ಕಟಾ ಅಕ್ಕಟಾ' ಎಂದು, ತನ್ನ ಪೂರ್ವಾಶ್ರಯದ ಅಕ್ಕನೆಂಬಾ ಅಕ್ಕನ ಕರೆಯಿತ್ತು. ಚಕ್ಕನೆ ಲಿಂಗವೆಂಬ ಗೊಂಚಲ ಹಿಡಿಯಲು ಮಿಕ್ಕು ಪಲ್ಲವಿಸಿತ್ತು, ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವೆಂಬ ಲಿಂಗವು.
--------------
ಚನ್ನಬಸವಣ್ಣ
ಮಾಯದ ಕೈಯಲಿ ಓಲೆ ಕÀಂಠವ ಕೊಟ್ಟಡೆ, ಲಗುನ ವಿಗುನವ ಬರೆಯಿತ್ತು ನೋಡಾ ಅರಗಿನ ಪುತ್ಥಳಿಗೆ ಉರಿಯ ಸೀರೆಯನುಡಿಸಿದಡೆ, ಅದು ಸಿರಿಯ ಸಿಂಗಾರವಾಯಿತ್ತು ನೋಡಾ. ಅಂಬರದೊಳಗಾಡುವ ಗಿಳಿ ಪಂಜರದೊಳಗಣ ಬೆಕ್ಕ ನುಂಗಿ ರಂಭೆಯ ತೋಳಿಂದ ಅಗಲಿತ್ತು ನೋಡಾ_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಹಾರುವ ಹಕ್ಕಿಯ ತಲೆಯ, ಕುಳಿತಿದ ಗೂಗೆ ನುಂಗಿತ್ತು, ಕುಳಿತಿದ ಗೂಗೆಯ ಕಣ್ಣ, ಕಾಗೆಯ ಮರಿ ಕುಡುಕಿತ್ತು. ಕಾಗೆಯ ಮರಿಯ, ಕೋಗಿಲ ಕಂಡು, ಅದ ಬೇಡಾ ಎಂದಡೆ, ಗಿಳಿ ಹಾಗಹುದೆಂದು ಹಾರಿ ಹೋಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರನು ಘಟಪಂಜರವನೊಲ್ಲದೆ.
--------------
ಸಗರದ ಬೊಮ್ಮಣ್ಣ
ಬೆಕ್ಕಿನ ತಲೆಯ ಗಿಳಿ ತಿಂದಿತ್ತು. ಕತ್ತೆ ಕುದುರೆಯ ರೂಪಾಯಿತ್ತು. ಮತ್ಸ್ಯ ಸಮುದ್ರವ ಕುಡಿದು, ಕೆರೆಯ ತಪ್ಪಲ ನೀರಿಗಾರದೆ ಸತ್ತಿತ್ತು ನೀರಕ್ಕದೆ. ಈ ಬಚ್ಚಬಯಲ ಇನ್ನಾರಿಗೆ ಹೇಳುವೆ, ಗೂಡಿನ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಹಿಂಡನಗಲಿ ಹಿಡಿವಡೆದ ಕುಂಜರ ತನ್ನ ವಿಂಧ್ಯವ ನೆನೆವಂತೆ ನೆನೆವೆನಯ್ಯಾ. ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ ನೆನೆವೆನಯ್ಯಾ ಕಂದಾ, ನೀನಿತ್ತ ಬಾ ಎಂದು ನೀವು ನಿಮ್ಮಂದವ ತೋರಯ್ಯಾ, ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಶಿವಶಿವಾ, ಈ ಮರುಳಮಾನವರ ಮರುಳತನವ ನಾನೇನೆಂಬೆನಯ್ಯಾ. ಹೊನ್ನು ತನ್ನದೆಂಬರು, ಹೊನ್ನು ರುದ್ರನದು. ಹೆಣ್ಣು ತನ್ನದೆಂಬರು, ಹೆಣ್ಣು ವಿಷ್ಣುವಿನದು. ಮಣ್ಣು ತನ್ನದೆಂಬರು, ಮಣ್ಣು ಬ್ರಹ್ಮನದು. ಇಂತೀ ತ್ರಿವಿಧವು ನಿಮ್ಮವೆಂಬಿರಿ- ನಿಮ್ಮವು ಅಲ್ಲ ಕಾಣಿರೋ ಎಲಾ ದಡ್ಡ ಪ್ರಾಣಿಗಳಿರಾ. ಇದಕ್ಕೆ ದೃಷ್ಟಾಂತ: ಗಗನದಲ್ಲಿ ಚಂದ್ರೋದಯವಾಗಲು ಭೂಮಂಡಲದಲ್ಲಿ ಕ್ಷೀರಸಮುದ್ರ ಹೆಚ್ಚುವದು. ಹೆಚ್ಚಿದರೇನು ? ಆ ಚಂದ್ರನ ವ್ಯಾಳ್ಯಕ್ಕೆ ಸಮುದ್ರವಿಲ್ಲ; ಸಮುದ್ರದ ವ್ಯಾಳ್ಯಕ್ಕೆ ಚಂದ್ರನಿಲ್ಲ. ಮತ್ತೆ ಆಕಾಶದಲ್ಲಿ ಮೋಡ ಬಂದು ಸುಳಿಗಾಳಿ ಬೀಸಲು ಗಿರಿಯೊಳಗಿರ್ದ ನವಿಲು ತನ್ನ ಪಕ್ಕವ ಬಿಚ್ಚಿ ಹರುಷಾನಂದದಲ್ಲಿ ಆಡುವದು ; ಪ್ರೇಮದಿಂದಲಿ ಕುಣಿಯವದು. ಕುಣಿದರೇನು ? ಚಂಡವಾಯುವಿನಿಂದ ಆಕಾಶದೊಳಗಣ ಕಾರಮುಗಿಲು ಹಾರಿಹೋಹಾಗ ನವಿಲು ಅಡ್ಡಬಂದಿತ್ತೆ ? ಇಲ್ಲ. ಗಿರಿಯೊಳಗಣ ಮಯೂರನನ್ನು ವ್ಯಾಧನು ಬಂದು ಬಲಿಹಾಕಿ ಕೊಲ್ಲುವಾಗ ಆ ಮೋಡ ಅಡ್ಡಬಂದಿತ್ತೆ ? ಇಲ್ಲ. ಇದರ ಹಾಂಗೆ, ನಿಮಗೆ ಬಾಲಪ್ರಾಯದಲ್ಲಿ ಮಾತಾಪಿತರ ಮೋಹ ಯೌವ್ವನಪ್ರಾಯದಲ್ಲಿ ಸ್ತ್ರೀ, ಪುತ್ರಮೋಹ. ಮಧ್ಯಪ್ರಾಯದಲ್ಲಿ ಧನಧಾನ್ಯದ ಮೋಹ. ಈ ಪರಿಯಲ್ಲಿ ಸಕಲವು ನೀವು ಇರುವ ಪರ್ಯಂತರದಲ್ಲಿ ಮಾಯಾ ಮಮಕಾರವಲ್ಲದೆ ಅಳಲಿ ಬಳಲಿ, ಕುಸಿದು ಕುಗ್ಗಿ ಮುಪ್ಪುವರಿದು, ಮರಣಕಾಲಕ್ಕೆ ಯಮದೂತರು ಬಂದು ಹಿಂಡಿ ಹಿಪ್ಪಿಯ ಮಾಡಿ ಒಯ್ಯುವಾಗ, ಮೂವರೊಳಗೆ ಒಬ್ಬರು ಅಡ್ಡಬಂದರೆ ? ಬಂದುದಿಲ್ಲ. ಅವರ ಸಂಕಟಕ್ಕೆ ನೀವಿಲ್ಲ, ನಿಮ್ಮ ಸಂಕಟಕ್ಕೆ ಅವರಿಲ್ಲ. ನಿನ್ನ ಪುಣ್ಯಪಾಪಕ್ಕೆ ಅವರಿಲ್ಲ, ಅವರ ಪುಣ್ಯಪಾಪಕ್ಕೆ ನೀನಿಲ್ಲ. ನಿನ್ನ ಸುಖದುಃಖಕ್ಕೆ ಅವರಿಲ್ಲ, ಅವರ ಸುಖದುಃಖಕ್ಕೆ ನೀನಿಲ್ಲ. ನಿನಗವರಿಲ್ಲ, ಅವರಿಗೆ ನೀನಿಲ್ಲ. ಇಂತಿದನು ಕಂಡು ಕೇಳಿ ಮತ್ತಂ ಹಿತ್ತಲಕ್ಕೆ ಹಳೆಯೆಮ್ಮಿ ಮನಸೋತ ಹಾಗೆ, ಹಾಳಕೇರಿಗೆ ಹಂದಿ ಜಪ ಇಟ್ಟ ಹಾಗೆ, ಹಡಕಿಗೆ ಶ್ವಾನ ಮೆಚ್ಚಿದ ಹಾಗೆ, ಮತ್ತಂ, ಮಾನವರೊಳಗೆ ಹಂದಿ, ನಾಯಿ, ಹಳೆಯೆಮ್ಮಿಯೆಂದರೆ- ಜೀವನಬುದ್ಭಿಯುಳ್ಳವನೇ ಹಂದಿ. ಕರಣಬುದ್ಧಿಯುಳ್ಳವನೇ ನಾಯಿ. ಮಾಯಾಪ್ರಕೃತಿಯುಳ್ಳವನೇ ಹಳೆಯೆಮ್ಮಿ. ಇವಕ್ಕೆ ಮೂರು ಮಲವಾವೆಂದಡೆ: ಆಣವಮಲ, ಮಾಯಾಮಲ, ಕಾರ್ಮಿಕಮಲವೆಂಬ ಮಲತ್ರಯವನು, ಕಚ್ಚಿ ಮೆಚ್ಚಿ ಮರುಳಾಗಿ ಬಿಡಲಾರದೆ ಕಂಡು ಕೇಳಿ ಮೋಹಿಸಿ, ಇದನು ಬಿಟ್ಟು ವೈರಾಗ್ಯಹೊಂದಿದರೆ ಮೋಕ್ಷವಿಲ್ಲೆಂದು ಪ್ರಪಂಚವಿಡಿದು ಪಾರಮಾರ್ಥ ಸಾಧಿಸಬೇಕೆಂದು ಹೇಳುವವರ, ಹೀಂಗೆ ಮಾಡಬೇಕೆಂಬುವರ ಬುದ್ಧಿಯೆಂತಾಯಿತಯ್ಯಾ ಎಂದಡೆ: ಗಿಳಿ ಓದಬಲ್ಲುದು; ಬಲ್ಲರೇನು ತನ್ನ ಮಲವ ತಾನು ತಿಂದ ಹಾಗೆ. ವಿಹಂಗ ಹನ್ನೆರಡುಯೋಜನದಮೇಲೆ ಅಮೃತಫಲವಿಪ್ಪುದ ಬಲ್ಲದು. ಬಲ್ಲರೇನು, ಅದು ಬಾಯಿಲಿ ತಿಂದು ಬಾಯಿಲೆ ಕಾರುವದು. ಹಾಂಗೆ ಈ ಮಾನವರು ತ್ರಿವಿಧಮಲಸಮಾನವೆಂಬುದ ಬಲ್ಲರು, ಬಲ್ಲರೇನು ? ಬಿಡಲಾರರು. ಇಂತೀ ಪರಿಪರಿಯಲ್ಲಿ ಕೇಳಿ ಕೇಳಿ ಕಂಡು ಬಿಡಲಾರದೆ ಇದ್ದರೆ ಇಂಥ ಹೊಲೆಸೂಳೆಯ ಮಕ್ಕಳ ಶರೀರವ ಖಡ್ಗದಿಂದ ಕಡಿದು ಕರಗಸದಿಂದ ಕೊರೆದು ಛಿದ್ರಚಿನಿಪಾಲವ ಮಾಡಿ, ಹದ್ದು ಕಾಗೆ ನಾಯಿಗಳಿಗೆ ಹಾಕಿದರೆ ಎನ್ನ ಸಿಟ್ಟು ಮಾಣದು. ಕಡೆಯಲ್ಲಿ ಚಂದ್ರಸೂರ್ಯರು ಇರುವ ಪರ್ಯಂತರ ಮಹಾ ಅಘೋರ ನರಕದಲ್ಲಿ ಕಲ್ಪಕಲ್ಪಾಂತರದಲ್ಲಿ ಹಾಕದೆ ಬಿಡನೆಂದಾತನು ವೀರಾಧಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೆಣದ ಚಪ್ಪರದ ಮಣಿಮಾಡದ ಮೇಲೆ, ಸುತ್ತಿದವಾರು ಸೀರೆ. ಹೆಣಕ್ಕೆ ಹೊದ್ದಿಸಿದವು ಮೂರು ಸೀರೆ. ಮಣಿಮಾಡದ ಕಂಬಕ್ಕೆ ಸುತ್ತಿದವೆಂಟು, ನಾನಾ ಚಿತ್ರದ ಬಣ್ಣದ ಸೀರೆ. ಒಪ್ಪಿತ್ತು ತುದಿಯಲ್ಲಿ ಹೊಂಗಳಸ. ಆ ಹೊಂಗಸಳದ ತುದಿಯ ಕೊನೆಯ ಮೊನೆಯ ಮೇಲೆ ಬಿಳಿಯ ಗಿಳಿ ಬಂದು ಕುಳಿತಿತ್ತು. ಕಳಶ ಮುರಿಯಿತ್ತು, ಕಂಬ ಮಾಡದ ಹಂಗ ಬಿಟ್ಟಿತ್ತು. ಕಂಬದ ಸೀರೆ ಒಂದೂ ಇಲ್ಲ. ಮಾಡಕ್ಕೆ ಹಾಕಿದ ಮಂಚದ ಕೀಲು ಬಿಟ್ಟವು. ಮಾಡದ ಹೆಣ ಸಂಚರಿಸಿಕೊಂಡು ಮುಂಚಿತ್ತು. ಹೆಣದಾತ್ಮ ಗಿಳಿಯ ಕೊಕ್ಕಿನ ತುದಿಗಂಗವಾಗಿ, ಇದು ಅಗಣಿತವಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಿರಿದಪ್ಪ ಮಹಾಮೇರುವೆಯ ತುದಿಯಲ್ಲಿ, ಒಂದು ಅರಗಿನ ಗಿಳಿ ತತ್ತಿಯನಿಕ್ಕಿ, ತತ್ತಿಯ ಆ ಗಿರಿ ನುಂಗಿತ್ತ ಕಂಡೆ. ಗಿಳಿಯ ಕುರುಹಿಲ್ಲದೆ ಹಾರಿಹೋಯಿತ್ತು. ನಿಃಕಳಂಕ ಮಲ್ಲಿಕಾರ್ಜುನಾ, ನೀವೇ ಬಲ್ಲಿರಿ.
--------------
ಮೋಳಿಗೆ ಮಾರಯ್ಯ
ಅದ್ವೈತನ ಕರಸ್ಥಲದೊಳಗೆ, ಅನಂತನೆಂಬ ಗಿಳಿ ಮೂರ್ತಗೊಂಡು ಅತೀತ ಅನಾಗತ ವರ್ತಮಾನವೆಂಬ ಕೊರೆಕೂಳನುಂಡು ಓದಿತ್ತು ಅಗಣಿತ ಪುರಾಣ(ವ), ಅನಾಮಯ ಶಾಸ್ತ್ರವನು, ಅನುಪಮ ವೇದವೆಂದು._ ನಿಃಸ್ಥಲವ ಸ್ಥಲವಿಡಲು, ನಿರ್ಮಳಾತ್ಮಂಗೆ ಇಹವಿಲ್ಲ ಪರವಿಲ್ಲ ! ಆದಿ ಮಧ್ಯಾಂತ ನಿರಾಳ ಗುಹೇಶ್ವರನ ಅನುಭವಿಗೆ ಸರ್ವಾಂಗ ಲಿಂಗವು !
--------------
ಅಲ್ಲಮಪ್ರಭುದೇವರು
ಆಡಿದಡೇನು, ಹಾಡಿದಡೇನು, ಓದಿದಡೇನು ತ್ರಿವಿಧದಾಸೋಹವಿಲ್ಲದನ್ನಕ್ಕರಿ ಆಡದೆ ನವಿಲು ಹಾಡದೆ ತಂತಿ ಓದದೆ ಗಿಳಿ ಭಕ್ತಿುಲ್ಲದವರನೊಲ್ಲ ಕೂಡಲಸಂಗಮದೇವ. 207
--------------
ಬಸವಣ್ಣ
ಉಣ್ಣೆ ಕೆಚ್ಚಲ ಹತ್ತಿದ್ದರೇನು ಕ್ಷೀರವದಕುಂಟೆ? ತಗಣಿ ತನುವ ಹತ್ತಿದ್ದರೇನು ಅಂಗನೆಯರ ಸುರತದ ಸುಖವ ಬಲ್ಲುದೆ? ಗಿಳಿ ಓದಿದರೇನು ಲಿಂಗವೇದಿಯಪ್ಪುದೆ? ಹೇಸರ ಏಸು ದೊಡ್ಡದಾದರೇನು ತೇಜಿಯಾಗಬಲ್ಲುದೆ? ತತ್ವದ ಮಾತು ಅಂಗಸಂಗಿಗಳಿಗೇಕೆ? ಭರ್ಗನ ಸಂಗ ಭವಿಗೇಕೆ? ಪಚ್ಚೆಯ ಪವಳದ ಗುಡಿಗೂಡಾರವೇಕೆ ಗೂಗೆಗೆ? ಗವುಡರ ಮನೆಯ ತೊತ್ತಿಂಗೆ ಬಲ್ಲಹನಾಣೆಯೇಕೆ? ಕೀಳು ಕುಲದೈವಕ್ಕೆರಗಿ ನರಕಕ್ಕಿಳಿವ ದುರಾಚಾರಿಗಳಿಗೆ ಶಿವಾಚಾರವಳಡುವುದೆ, ಕೂಡಲಚೆನ್ನಸಂಗಮದೇವಾ?
--------------
ಚನ್ನಬಸವಣ್ಣ
ಇನ್ನಷ್ಟು ... -->