ಅಥವಾ

ಒಟ್ಟು 19 ಕಡೆಗಳಲ್ಲಿ , 10 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಿಳಿಯ ಗರ್ಭದಲ್ಲಿ ಮಾರ್ಜಾಲ ಹುಟ್ಟಿ ಹಾವಿನ ತಲೆಯ ಮುಟ್ಟಲು ಹೆಡೆಯನೆಗೆದು ಮಾಣಿಕವ ಕಚ್ಚಿ ಎರಡುದಾರಿಯ ಕಟ್ಟಿ ಆಡಲು ಪುರದ ಜನರು ಭೀತಿಗೊಂಡು ನೋಡುವ ಸಮಯದಲ್ಲಿ ಮಾಣಿಕ ಹಾವ ನುಂಗಿ ಜನರ ಹೊಯ್ದು ಒಯ್ಯಲು, ಗಿಳಿ ಸತ್ತು ಗುರುನಿರಂಜನ ಚನ್ನಬಸವಲಿಂಗ ತಾನೆಯಾಯಿತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಓದನಾದರಿಸಿ, ಗಿಳಿಯ ತಂದು ಸಲಹಿ ಓದಿಸಿದಳಯ್ಯಾ; ಆಲದ ಮರದ ಗಿಳಿ ಓಜೆಗೊಂಡಿತ್ತಯ್ಯಾ ! ಗಿಳಿ ಓದಿತ್ತು, ತನ್ನ ಪರಬ್ರಹ್ಮವ ಬೇಡಿತ್ತು; ತನ್ನ ಪೂರ್ವಾಶ್ರಯದ ಕೊರೆಯ ಕೂಳನುಂಡ ಗಿಳಿ, ಮರೆಯಿತ್ತು ತನ್ನ ತಾನು ! ಅರಿವೆಂಬ ಜ್ಞಾನ ಹುಟ್ಟಿತ್ತಯ್ಯಾ ; ಅರಿವೆಂಬ ಜ್ಞಾನ ಹುಟ್ಟಲಿಕೆ ಜಂಪಿನ ಕಡ್ಡಿಯ ಮೇಲೆ ಕುಳಿತಿರ್ದಿತ್ತಯ್ಯಾ ! ಜಂಪಿನ ಕಡ್ಡಿಯ ಮೇಲೆ ಕುಳಿತ ಗಿಳಿ, ಜಂಪಳಿಸುತ್ತಿರ್ದಿತ್ತು ತನ್ನ ತಾನು. `ಅಕ್ಕಟಾ ಅಕ್ಕಟಾ' ಎಂದು, ತನ್ನ ಪೂರ್ವಾಶ್ರಯದ ಅಕ್ಕನೆಂಬಾ ಅಕ್ಕನ ಕರೆಯಿತ್ತು. ಚಕ್ಕನೆ ಲಿಂಗವೆಂಬ ಗೊಂಚಲ ಹಿಡಿಯಲು ಮಿಕ್ಕು ಪಲ್ಲವಿಸಿತ್ತು, ಕೂಡಲಚೆನ್ನಸಂಗಯ್ಯನಲ್ಲಿ ಪ್ರಭುವೆಂಬ ಲಿಂಗವು.
--------------
ಚನ್ನಬಸವಣ್ಣ
ಕಂಗಳ ತಿರುಳನುರುಹಿ, ಆದಿಯ ಬೀಜವ ವೇದವರಿಯಲ್ಲಿ ಸುಟ್ಟು, ಆ ಭಸ್ಮವ ಹಣೆಯಲ್ಲಿ ಧರಿಸಿ, ಅರಳಿಯ ಮರದೊಳಗಾಡುವ ಗಿಳಿಯ ಎಲೆ ನುಂಗಿತ್ತ ಕಂಡೆ. ಅರಳಿ ಹೂವಾಯಿತ್ತು, ಫಲ ನಷ್ಟವಾಯಿತ್ತು ನೋಡಾ. ಎಲೆ ಉದುರಿತ್ತು, ಆ ಮರದ ಮೊದಲಲ್ಲಿಗೆ ಕಿಚ್ಚನಿಕ್ಕಿ, ಬ್ರಹ್ಮನ ತಲೆಯಲ್ಲಿ ಬೆಣ್ಣೆಯ ಬೆಟ್ಟ ರುದ್ರಲೋಕಕ್ಕೆ ದಾಳಿ ಮಾಡಿ, ಗ್ರಾಮದ ಮಧ್ಯದೊಳಗೊಂದು ಕೊಂಡವ ಸುಟ್ಟು, ಯಜ್ಞ ಪುರುಷನ ಹಿಡಿದು, ಕೈ ಸಂಕಲೆಯನಿಕ್ಕಿ, ಗಂಗೆವಾಳುಕರಿಗೆ ಕೈವಲ್ಯವನಿತ್ತು, ಅಷ್ಟಮೂರ್ತಿಯೆಂಬ ನಾಮವ ನಷ್ಟವ ಮಾಡಿ, ವಿಶ್ವಮೂರ್ತಿಯ ಪಾಶವಂ ಪರಿದು, ಮುಕ್ತಿ ರಾಜ್ಯಕ್ಕೆ ಪಟ್ಟಮಂ ಕಟ್ಟಿ, ರುದ್ರಲೋಕಕ್ಕೆ ದಾಳಿ ಮಾಡಿ, ಆ ಮೂರ್ತಿಗಣೇಶ್ವರರಿಗೆ ಐಕ್ಯಪದವನಿತ್ತು, ಬಟ್ಟಬಯಲ ಕಟ್ಟಕಡೆಯೆನಿಪ ಸಿದ್ಭ ನಿಜಗುರು ಭೋಗಸಂಗನಲ್ಲಿ ಸಯವಾದ ಅಲ್ಲಮ ಅಜಗಣ್ಣ ಚೆನ್ನಬಸವ ಬಸವರಾಜ ಮುಖ್ಯವಾದ ಲಿಂಗಾಂಗಿಗಳ ಪಾದಕ್ಕೆ ನಮೋ ನಮೋ ಎಂದು ಬದುಕಿದೆ.
--------------
ಭೋಗಣ್ಣ
ಪಂಚವರ್ಣದ ಗಿಳಿಯೊಂದು ಪ್ರಪಂಚರಚನೆಗೆ ಬಂದು. `ಭವ ಬ್ರಹ್ಮ, ಭವ ಬ್ರಹ್ಮ' ಎಂಬುತ್ತಿದೆ, ಆ ಗಿಳಿಯು ಮೂರು ಮನೆಯ ಪಂಜರದಲ್ಲಿ ಕೂತು, `ಕುರುಷ್ವ ಲಿಂಗಪೂಜಾಂ, ಲಿಂಗಪೂಜಾಂ' ಎಂಬುತ್ತಿದೆ. ಆ ಗಿಳಿಯ ವಚನವ ಕೇಳಿದಾತಂಗೆ ಸುಖ, ಗಿಳಿಗೆ ಸುಖ; ಕೇಳದವಂಗೆ ಸುಖವಿಲ್ಲ, ಹೇಳಿದವಂಗೆಯು ಸುಖವಿಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹೆಣದ ಚಪ್ಪರದ ಮಣಿಮಾಡದ ಮೇಲೆ, ಸುತ್ತಿದವಾರು ಸೀರೆ. ಹೆಣಕ್ಕೆ ಹೊದ್ದಿಸಿದವು ಮೂರು ಸೀರೆ. ಮಣಿಮಾಡದ ಕಂಬಕ್ಕೆ ಸುತ್ತಿದವೆಂಟು, ನಾನಾ ಚಿತ್ರದ ಬಣ್ಣದ ಸೀರೆ. ಒಪ್ಪಿತ್ತು ತುದಿಯಲ್ಲಿ ಹೊಂಗಳಸ. ಆ ಹೊಂಗಸಳದ ತುದಿಯ ಕೊನೆಯ ಮೊನೆಯ ಮೇಲೆ ಬಿಳಿಯ ಗಿಳಿ ಬಂದು ಕುಳಿತಿತ್ತು. ಕಳಶ ಮುರಿಯಿತ್ತು, ಕಂಬ ಮಾಡದ ಹಂಗ ಬಿಟ್ಟಿತ್ತು. ಕಂಬದ ಸೀರೆ ಒಂದೂ ಇಲ್ಲ. ಮಾಡಕ್ಕೆ ಹಾಕಿದ ಮಂಚದ ಕೀಲು ಬಿಟ್ಟವು. ಮಾಡದ ಹೆಣ ಸಂಚರಿಸಿಕೊಂಡು ಮುಂಚಿತ್ತು. ಹೆಣದಾತ್ಮ ಗಿಳಿಯ ಕೊಕ್ಕಿನ ತುದಿಗಂಗವಾಗಿ, ಇದು ಅಗಣಿತವಾಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಿರಿದಪ್ಪ ಮಹಾಮೇರುವೆಯ ತುದಿಯಲ್ಲಿ, ಒಂದು ಅರಗಿನ ಗಿಳಿ ತತ್ತಿಯನಿಕ್ಕಿ, ತತ್ತಿಯ ಆ ಗಿರಿ ನುಂಗಿತ್ತ ಕಂಡೆ. ಗಿಳಿಯ ಕುರುಹಿಲ್ಲದೆ ಹಾರಿಹೋಯಿತ್ತು. ನಿಃಕಳಂಕ ಮಲ್ಲಿಕಾರ್ಜುನಾ, ನೀವೇ ಬಲ್ಲಿರಿ.
--------------
ಮೋಳಿಗೆ ಮಾರಯ್ಯ
ನಾನೊಂದು ಗಿಳಿಯ ಕಂಡೆ, ಬೆಕ್ಕಿನ ಬಾಧೆ ಘನ. ತಾ ಕೋಲಿನಲ್ಲಿದ್ದಡೆ ಶಯನಕ್ಕೆ ಆಸೆಯಿಲ್ಲ. ಪಂಜರಕ್ಕೆ ಸಂದ ಕೂಡುವ ಸಂಗದವನಿಲ್ಲ. ಕೊರೆಯ ಕೂಳನಿಕ್ಕುವುದಕ್ಕೆ ಅಡಿಗರಟವಿಲ್ಲ. ಗಿಳಿಯ ಹಿಡಿದು ನಾ ಕೆಟ್ಟೆ. ಹಕ್ಕಿಯ ಹಂಬಲಿಲ್ಲ, ಗುಡಿಯೊಡೆಯ ಗುಮ್ಮಟನಾಥ ಅಗಮ್ಯೇಶ್ವರಲಿಂಗ.
--------------
ಮನುಮುನಿ ಗುಮ್ಮಟದೇವ
ಹರಿವ ನೀರ ಉರಿಕೊಂಡದಲ್ಲಿ ಅರಗಿನ ಭೂಮಿ ಕರಗದಿರುವದ ಕಂಡೆ. ನವಗೋಪುರಯುಕ್ತವಾದ ಆಕಾಶದಲ್ಲಿ ಒಂದೂರ ಕಂಡೆ. ಸತಿಪತಿಸಹಿತವಾಗಿ ನವಮುಗ್ಧರಿರುವದ ಕಂಡೆ. ಊರ ನಡುವೆ ಸಹಸ್ರ ಶತಪಂಚತ್ರಯ ಏಕಕಾನಿಯ ಪಂಜರವ ಕಂಡೆ. ಅಗ್ನಿವರ್ಣ ಶ್ವೇತಮುಖದ ಗಿಳಿಯ ಕಂಡೆ. ಹಲವರು ಗಿಳಿಯ ಕಂಡು ಸಂತೋಷಬಟ್ಟು ರಕ್ಷಿಸಿ ಉಣ್ಣದೆ ಉಂಡು ಹೋಗುವದ ಕಂಡೆ. ನಾನು ಗಿಳಿಯ ಕಂಡು ಸಂತೋಷಬಟ್ಟು ರಕ್ಷಿಸಿ ಉಂಡು ಉಣ್ಣದೆ ಹೋಗುವದ ಕಂಡೆ. ಹಡದವರು ಸತ್ತು, ಹಡಿಯದವರು ಉಳಿದರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮುದ್ದುಮುಖದ ಮಾನಿನಿಯ ಮಸ್ತಕದ ಮೇಲೆ ಅಗ್ನಿವರ್ಣದ ಪಂಜರದಲ್ಲಿ ಶ್ವೇತವರ್ಣದ ಒಂದು ಗಿಳಿ ಇಹುದು. ಆ ಗಿಳಿಯ ಕೊಳ್ಳಬೇಕೆಂದು ಆನೆ, ಕುದುರೆ, ವೈಲಿ, ಪಲ್ಲಕ್ಕಿಯನೇರಿಕೊಂಡು ಹೋದವರಿಗೆ ಆ ಗಿಳಿಯ ಕೊಡಳು. ದ್ರವ್ಯವುಳ್ಳವರಿಗೆ ಆ ಗಿಳಿಯ ತೋರಳು. ಕೈ ಕಾಲು ಕಣ್ಣು ಇಲ್ಲದ ಒಬ್ಬ ಬಡವ್ಯಾಧನು ಬಂದರೆ, ಆ ಗಿಳಿಯ ಕೊಟ್ಟು ಸುಖಿಸುವಳು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮಾತನಾಡುವ ಪಂಜರದ ವಿಂಹಗನ ಕೊಂದು, ಕೋಡಗ ನುಂಗಿತ್ತು. ನುಂಗಿದ ಕೋಡಗವ ಮಂಜರಿ ತಿಂದಿತ್ತು. ತಿಂದ ಮಂಜರಿಯ ಅಂಧಕ ಕಂಡ. ಆ ಅಂಧಕ ಪಂಗುಳಗೆ ಹೇಳಲಾಗಿ, ಪಂಗುಳ ಹರಿದು ಮಂಜರಿಯ ಕೊಂದ. ಪಂಜರದ ಗಿಳಿಯ, ಮಂಜರಿಯ ಲಾಗ, ಅಂಧಕನ ಧ್ಯಾನವ, ಪಂಗುಳನ ಹರಿತವ, ಈ ದ್ವಂದ್ವಗಳನೊಂದುಮಾಡಿ, ಈ ಚತುರ್ವಿಧದಂಗವ ತಿಳಿದಲ್ಲಿ, ಪ್ರಾಣಲಿಂಗಸಂಬಂಧ. ಸಂಬಂಧವೆಂಬ ಸಮಯ ಹಿಂಗಿದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊರ ಮೇಲೆ ಆಡುವ ಗಿಳಿಯ ಕಂಡೆ ನೋಡಾ. ಕೇರಿಯೊಳಗೆ ಹಾರುವ ಬೆಕ್ಕ ಕಂಡೆನಯ್ಯ. ಬೆಕ್ಕಿಗೆ ತಲೆಯಿಲ್ಲ ನೋಡಾ, ಗಿಳಿಗೆ ಮೂಗಿಲ್ಲ ನೋಡಾ. ಆ ಹಾರುವ ಬೆಕ್ಕಿಂಗೆ ತಲೆ ಬಂದಲ್ಲದೆ, ಆಡುವ ಗಿಳಿಗೆ ಮೂಗು ಬಂದಲ್ಲದೆ, ನಿಃಕಲಪರಬ್ರಹ್ಮ ಲಿಂಗವು ಕಾಣಬಾರದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಜಂಬೂದ್ವೀಪದಲ್ಲಿ ಹುಟ್ಟಿದವೈದು ಒಂಟೆ. ಒಂಟೆಯ ಕೊರಳೊಳಗೆ ಘಂಟೆಗೆ ನಾದವಿಲ್ಲ, ಆ ಘಂಟೆಯ ಒಳಗಣ ನಾಲಗೆ ನಾಶವಾದ ಕಾರಣ. ಆ ಒಂಟೆಯ, ಘಂಟೆಯ, ಆ ಜಂಬೂದ್ವೀಪವ ಒಂದು ಗಿಳಿಯ ಕಂಟಕ ನುಂಗಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಗಿಳಿಯ ಹಂಜರವಿಕ್ಕಿ, ಸೊಡರಿಂಗೆಣ್ಣೆಯನೆರೆದು, ಬತ್ತಿಯನಿಕ್ಕಿ ಬರವ ಹಾರುತ್ತಿದ್ದೆನೆಲೆಗವ್ವಾ. ತರಗೆಲೆ ಗಿರಿಕೆಂದಡೆ ಹೊರಗನಾಲಿಸುವೆ; ಅಗಲಿದೆನೆಂದೆನ್ನ ಮನ ಧಿಗಿಲೆಂದಿತ್ತೆಲೆಗವ್ವಾ. ಕೂಡಲಸಂಗಮದೇವನ ಶರಣರು ಬಂದು, ಬಾಗಿಲ ಮುಂದೆ ನಿಂದು `ಶಿವಾ' ಎಂದಡೆ, ಸಂತೋಷ ಪಟ್ಟೆನೆಲೆಗವ್ವಾ. 375
--------------
ಬಸವಣ್ಣ
-->