ಅಥವಾ

ಒಟ್ಟು 23 ಕಡೆಗಳಲ್ಲಿ , 13 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಡಶೀಲಗಳ ಹೊತ್ತು ಕೆಡುವೊಡಲಹೊರೆವ ತುಡುಗುಣಿಗಳಾಚಾರಕ್ಕಗಣಿತ ನೋಡಾ ನಮ್ಮ ವೀರಮಾಹೇಶ್ವರನು. ಮನದಿಚ್ಫೆಗನುವಾದ ತನುಸುಖಪದಾರ್ಥವನು ದಿನದಿನಕ್ಕೆ ವ್ರತವೆಂದು ತಿನಬಂದ ಶುನಕನಲ್ಲ ನೋಡಾ ನಮ್ಮ ವೀರಮಾಹೇಶ್ವರನು. ಮುಟ್ಟುತಟ್ಟುಗಳಿಂದೆ ಕೆಟ್ಟೆನಲ್ಲಾಯೆಂದು ಕಟ್ಟುಕಾವಲಿಗೊಂಡು ಕೆಟ್ಟಸಿಟ್ಟುಗಳಿಂದೆ ಬಟ್ಟೆಯನು ಹಿಡಿವ ಪಟ್ಟುಗುಡುವನಂತಲ್ಲ ನೋಡಾ ನಮ್ಮ ವೀರಮಾಹೇಶ್ವರನು. ಮತ್ತೆಂತೆಂದೊಡೆ : ಪರಧನ ಪರಸತಿ ಪರಹಿಂಸೆ ಪರನಿಂದೆ ಪರದೈವ ಪರಸಮಯಾದಿ ದುರಾಸೆವಿಡಿದು ನಡೆಯದಿಹುದೇ ಶೀಲ ನೋಡಾ ನಮ್ಮ ವೀರಮಾಹೇಶ್ವರಂಗೆ. ತನು ಮನ ಪ್ರಾಣಾದಿ ಸಕಲ ಕರಣಾದಿ ಗುಣವಳಿದು ಗುರುನಿರಂಜನ ಚನ್ನಬಸವಲಿಂಗನ ನೆನಹು ಬಿಡದಿಹುದೇ ವ್ರತ ನೋಡಾ ನಮ್ಮ ವೀರಮಾಹೇಶ್ವರಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರುಷ ಲೋಹವ ಸೋಂಕಿದಲ್ಲಿ ಆ ಗುಣವಳಿದು ಹೇಮವಾಯಿತ್ತಲ್ಲದೆ, ಪುನರಪಿ ಶುದ್ಧಾತ್ಮವಾದುದಿಲ್ಲ. ಗುರು ಲಿಂಗವೆಂದು ಕೊಟ್ಟಡೆ ಅಂಗದಲ್ಲಿ ಬಂಧವಾಯಿತ್ತಲ್ಲದೆ, ಸರ್ವಾಂಗ ಆತ್ಮನಲ್ಲಿ ಲೀಯವಾದುದಿಲ್ಲ. ಇಂತಿದು ಕಾರಣದಲ್ಲಿ, ಕೆಂಡದ ಮೇಲೆ ಕಟ್ಟಿಗೆಯ ಹಾಕಿದಡೆ ಪೊತ್ತುವುದಲ್ಲದೆ, ನಂದಿದ ಪ್ರಕಾಶಕ್ಕೆ ಅರಳೆಯ ತಂದಿರಿಸಿದಡೆ ಹೊತ್ತಿದುದುಂಟೆ? ಇದು ಕಾರಣ, ಸಂಸಾರಪಾಶದಲ್ಲಿ ಬಿದ್ದ ಗುರು ಇಂತೀ ಗುರುಸ್ಥಲನಿರ್ವಾಹಸಂಪಾದನೆ, ಸದ್ಯೋಜಾತಲಿಂಗಕ್ಕೆ.
--------------
ಅವಸರದ ರೇಕಣ್ಣ
ಅಂಗ ಗುಣವಳಿದು ಲಿಂಗ ಗುಣ ಉಳಿಯಿತ್ತಯ್ಯ. ಆವರಿಸಿತ್ತಯ್ಯ ಪರಮ ಅನುಪಮ ಭಕ್ತಿಸುಖ. ಲಿಂಗಾಂಗವೆಂಬ ಎರಡನರಿಯೆನಯ್ಯ. ಶುದ್ಧ ಸುಜ್ಞಾನ ಜಂಗಮಲಿಂಗ ಗ್ರಾಹಕನಾಗಿ ಪ್ರಾಣಲಿಂಗವೆಂಬ ಎರಡನರಿಯೆನಯ್ಯ. ಎರಡೆರಡೆಂದು ಈ ಹುಸಿಯನೇಕೆ ನುಡಿವರಯ್ಯ. ಇನ್ನೆರಡು ಒಂದಾಯಿತ್ತಾಗಿ ಲೋಕಚಾತುರ್ಯ, ಲೋಕವ್ಯವಹರಣೆ. ಲೋಕಭ್ರಾಂತಿಯ ಮರೆದೆನಯ್ಯ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ, ನಿಮ್ಮಲ್ಲಿ ನಿಬ್ಬೆರಗಾದೆನಯ್ಯಾ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದ ಮೇಲೆ ಲಿಂಗ ಬರಲಾಗಿ, ಕಾಯದ ಗುಣವಳಿದು ಪ್ರಸಾದಕಾಯವಾಯಿತ್ತು. ಲಿಂಗದ ನೆನಹು ನೆಲೆಗೊಂಡು ಮನ ಹಿಂಗದಿರಲು ಮನದ ಮೇಲೆ ಪ್ರಸಾದ ನೆಲೆಗೊಂಡಿತ್ತು. ಲಿಂಗದಲ್ಲಿ ಪ್ರಾಣರತಿಸುಖವಾವರಿಸಿತ್ತಾಗಿ ಪ್ರಾಣದಲ್ಲಿ ಪ್ರಸಾದ ನೆಲೆಗೊಂಡಿತ್ತು. ಸರ್ವೇಂದ್ರಿಯಂಗಳು ಲಿಂಗದಲ್ಲಿ ಸಾವಧಾನಿಗಳಾದ ಕಾರಣ ಇಂದ್ರಿಯಂಗಳಲ್ಲಿಯೂ ಪ್ರಸಾದವೇ ನೆಲೆಗೊಂಡಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣಂಗೆ.
--------------
ಸ್ವತಂತ್ರ ಸಿದ್ಧಲಿಂಗ
ಆಚಾರಕರ್ಪರ, ವಿಚಾರಕರ್ಪರ, ಅವಿಚಾರಕರ್ಪರದ ನಿರ್ಣಯವಾವುದೆನಲು, ಅನ್ಯದೈವ ಭವಿಮಿಶ್ರ ಅನಾಚಾರ ಭಕ್ಷಾಭಕ್ಷ ಪೇಯಾಪೇಯ ಅನ್ಯಾಯ ಇಂತಿವರನುಸರಣಿಗೊಳ್ಳದೆ ವಿಚಾರಿಸಿ ಭಕ್ತರ ಗೃಹವ ಹೋಗುವುದೀಗ ಆಚಾರಕರ್ಪರ. ನಾನಾರೊ ? ಎಂದು ವಿಚಾರಿಸಿ ತನಗೆ ಮುಸುಕಿದ ಮಾಯಾಪಟಲದ ಭ್ರಮೆಯಂ ಪರಿದು ಶ್ರೀಗುರುವಿನ ಸದ್ಭಾವಜ್ಞಾನಮನಕರಣದಿಂ ಉದಯಿಸಿದವನಜಾತಸ್ವಯಂಭುವೆಂದರಿದು, ಆಶೆಯಾಮಿಷ ಕಾಯಗುಣ ಇಂದ್ರಿಯದುರವಣೆ ಮನೋವಿಕಾರಾದಿಗಳಿಗೆ ಸಿಲ್ಕದೆ, ಆ ಮನ ಮೊದಲಾದ ಕಾರಣಂಗಳ ತನ್ನರಿವಿನಾಜ್ಞೆಯಿಂ ಲಿಂಗದಲ್ಲಿ ನೆನಹು ನೆಲೆಗೊಳಿಸಿ, ನೋಟವನಿಮಿಷವೆನಿಸಿ, ಅನ್ಯನುಡಿ ಅನ್ಯನಡೆಯೆಲ್ಲಮಂ ಮುನ್ನವೆ ತ್ಯಜಿಸಿ, ಲಿಂಗದ ನಡೆ ನುಡಿ ಚೈತನ್ಯವಳವಟ್ಟು, ಪರಶಿವನ ಪರತತ್ವವೆ ಪರಮಕರ್ಪರ ವಿಷಯ, ಶಿಕ್ಷಾದಂಡವೆ ಕಟ್ಟಿಗೆ, ಪಂಚಭೂತಕಾಯವನುಳಿದ ಅಕಾಯವೆ ಕಂಥೆ, ಪರಮವೈರಾಗ್ಯವೆ ಯೋಗವಟ್ಟಿಗೆ, ನಿರಾಶಾಪಥವೆ ಯೋಗವಾವುಗೆ, ನಿಷ್ಕಾಮಿತವೆ ಒಡ್ಯಾಣ. ಬಿಂದುಚಲಿಸಿದ ಸಂಧಾನಗತಿ ನಿಂದು ಲಿಂಗಸಂಯೋಗದ ಸಮರತಿಯ ಮುಕ್ತ್ಯಂಗನೆಯೆನಿಸುವ ಚಿಚ್ಛಕ್ತಿಯ ಕೂಟದ ಊಧ್ರ್ವರೇತಸ್ಸಿನ ಪರಮವಿಶ್ರಾಂತಿಯೆ ಕೌಪೀನ, ಅಪ್ರಮಾಣ ಚಾರಿತ್ರ್ಯವೆ ಆಧಾರಘುಟಿಕೆ, ಲಿಂಗಗಂಭೀರದ ಮಹದೈಶ್ವರ್ಯವೆ ವಿಭೂತಿ, ನಿರುಪಾಧಿಕ ತೇಜೋಮಯವಾದ ಮಹಾಲಿಂಗದ ಪ್ರಕಾಶವೆ ಭಸ್ಮೋದ್ಧೂಳನಾಗಿ, ಆ ಭಸ್ಮೋದ್ಧೂಳನ ಪ್ರಕಾಶದಿಂ ಅಜ್ಞಾನತಮವಳಿದ ಸಜ್ಞಾನಕ್ಷೇತ್ರದಲ್ಲಿ ಸುಳಿವ ಸುಳುಹೆ ದೇಶಾಂತರವಾಗಿ ಚರಿಸುವುದೆಂತೆಂದಡೆ: ಜಂಗಮಸ್ಯ ಗೃಹಂ ನಾಸ್ತಿ ಸ ಗಚ್ಛೇತ್ ಭಕ್ತಮಂದಿರಂ ಯದಿ ಗಚ್ಛೇತ್ ಭವೇರ್ಗೇಹಂ ತದ್ಧಿಗೋಮಾಂಸಭಕ್ಷಣಂ ಎಂದುದಾಗಿ ಇಂತೀ ವಿಚಾರದಲ್ಲಿ ಸುಳಿವ ಸುಳುಹೆ ವಿಚಾರಕರ್ಪರ. ವೇದಾತೀತಾಗಮಾತೀತಃ ಶಾಸ್ತ್ರಾತೀತೋ ನಿರಾಶ್ರಯಃ ಆನಂದಾಮೃತಸಂತುಷ್ಟೋ ನಿರ್ಮಮೋ ಜಂಗಮಃ ಸ್ಮೃತಃ ಇಂತೆಂದುದಾಗಿ, ಕಾಯಗುಣವಳಿದು, ಪರಕಾಯಗುಣವುಳಿದು, ಇಂದ್ರಿಯಗುಣವಳಿದು, ಅತೀಂದ್ರಿಯತ್ವದಲ್ಲಿ ವಿಶ್ರಾಂತಿಯನೈದಿ, ರಣಗುಣವಳಿದು, ನಿರಾವರಣ ನಿರ್ಮಲ ನಿರ್ವಿಕಾರ ನಿಜಲಿಂಗದಲ್ಲಿ ನಿಶ್ಚಲಿತನಾಗಿ, ಜೀವನ ಗುಣವಳಿದು, ಪರಮಾತ್ಮಲಿಂಗದಲ್ಲಿ ಘನಚೈತನ್ಯ ತಲ್ಲೀಯವಾಗಿ, ತನಗಿದಿರಿಟ್ಟು ತೋರುವ ತೋರಿಕೆಯೆಲ್ಲವೂ ತಾನಲ್ಲದೇನು ಇಲ್ಲವೆಂದರಿದು, ಕಾಬವೆಲ್ಲವೂ ಶಿವರೂಪು, ಕೇಳುವವೆಲ್ಲವೂ ಶಿವಾನುಭಾವ, ನಡೆದುದೆಲ್ಲವೂ ಶಿವಮಾರ್ಗ, ನುಡಿದುದೆಲ್ಲವೂ ಶಿವತತ್ವ, ಕೊಡುವ ಕೊಂಬೆಡೆಯಲ್ಲಿ ಎಡೆದೆರಪಿಲ್ಲದೆ ಅಖಂಡಾದ್ವಯ ಪರಿಪೂರ್ಣಚಿದಾನಂದರೂಪ ತಾನೆಂದರಿದು, ನಿಂದ ನಿಲವೆ ಅವಿಚಾರಕರ್ಪರ. ಅದೆಂತೆಂದಡೆ: ಚರಾಚರವಿಹೀನಂ ಚ ಸೀಮಾಸೀಮಾವಿವರ್ಜಿತಂ ಸಾಕ್ಷಾನ್ ಮುಕ್ತಿಪದಂ ಪ್ರಾಹುರುತ್ತಮಂ ಜಂಗಮಸ್ಥಲಂ ಎಂದುದಾಗಿ, ಶಬ್ದ ಚಲನೆಯಿಲ್ಲದುದೆ ಲಿಂಗವೆಂದರಿದು, ಬಿಂದುಚಲನೆಯಿಲ್ಲದುದೆ ಜಂಗಮವೆಂದರಿದು, ಆ ಬಿಂದುವನೆ ಲಿಂಗಮುಖದಲ್ಲಿ ನಿಲಿಸಿ ಆ ನಾದವನೆ ಘನಚೈತನ್ಯಜಂಗಮಮುಖದಲ್ಲಿ ನಿಲಿಸಿ, ಆ ನಾದಬಿಂದುವನೊಂದು ಮಾಡಿ ನಿಂದ ನಿಲವೆ ಉಪಮಾತೀತವದೆಂತೆಂದಡೆ: ನಾದನಿಶ್ಚಲತೋ ಲಿಂಗಂ ಬಿಂದುನಿಶ್ಚಲತೋ ಚರಃ ನಾದಬಿಂದು ಸಮಾಯುಕ್ತ ಶ್ರೇಷ*ಂ ತಲ್ಲಿಂಗಜಂಗಮಂ ಎಂದುದಾಗಿ, ಮನಶ್ಚಂದಿರ ಇತ್ಯುಕ್ತಂ ಚಕ್ಷುರಾದಿತ್ಯ ಉಚ್ಯತೇ ಚಂದಿರಾದಿತ್ಯಸಂಯುಕ್ತಂ ಉತ್ತಮಂ ಜಂಗಮಸ್ಥಲಂ ಎಂದುದಾಗಿ, ಮನಸ್ಥಂ ಮನೋಮಧ್ಯಸ್ಥಂ ಮನೋಮಧ್ಯಸ್ಥ ವರ್ಜಿತಾಃ ಮನಸಾ ಮನ ಆಲೋಕ್ಯ ಸ್ವಯಂ ಸಿದ್ಧಾ ಸುಯೋಗಿನಃ ಇಂತೆಂದುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ನಿಮ್ಮ ಶರಣರಜಾತಜನಿತರು, ಅನುಪಮಚರಿತರು.
--------------
ಉರಿಲಿಂಗಪೆದ್ದಿ
ಆಗಮದ ಅನು ನಿಯಮದ ಸಂದೇಹ ಯೋಗದ ಭ್ರಾಂತು ಕ್ರೀಯ ಸಂಕಲ್ಪ ನಷ್ಟದ ಚಿಂತೆ ಈ ಪಂಚಮಹಾಪಾತಕವುಳ್ಳಾತ ಭಕ್ತಿಯ ನಿಯಮಿಗನಲ್ಲ. ಚಿಂತೆ, ಸಂಕಲ್ಪ, ಭ್ರಾಂತು, ಸಂದೇಹ, ಅನುವಿನ ಗುಣವಳಿದು ತಾನಾದಡೆ, ತಾನೆ ನಿತ್ಯ ಕಾಣಾ, ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
ದೀಕ್ಷಾಮೂರ್ತಿರ್ಗುರುರ್ಲಿಂಗಂ ಪೂಜಾಮೂರ್ತಿಃ ಪರಶ್ಶಿವಃ | ದೀಕ್ಷಾಂ ಪೂಜಾಂ ಚ ಶಿಕ್ಷಾಂ ಚ ಸರ್ವಕರ್ತಾ ಚ ಜಂಗಮಃ || ಎಂದುದಾಗಿ, ಪಂಚಭೂತ ಅರಿಷಡ್ವರ್ಗದುರವಣೆಯ ನಿಲಿಸಿ, ಭೀತಿ ಪ್ರೀತಿ ಪ್ರೇಮ ಕಾಲೋಚಿತವನರಿದು, ಕಿಂಕಿಲನಾಗಿ, ನಿರುಪಾಧಿಕನಾಗಿ ದಾಸೋಹ ಮಾಡುವಲ್ಲಿ ಭಕ್ತನು. ಅನ್ಯದೈವ ಪರವಧು ಪರಧನವಂ ಬಿಟ್ಟು, ಇಹಪರದಲ್ಲಿಯ ಭೂಕ್ತಿ ಮುಕ್ತಿಗಳಾಶೆಇಲ್ಲದೆ, ಏಕೋನಿಷೆ* ಗಟ್ಟಿಗೊಂಡು ಮಾಹೇಶ್ವರನಾಗಿರಬೇಕು. ಕಾಯದ ಮರದಲ್ಲಿ ಇಷ್ಟಲಿಂಗಾರ್ಪಿತ. ಮನ ಮೊದಲಾದ ಕರಣಂಗಳನು ಒಂದೆ ಮುಖದಲ್ಲಿ ನಿಲಿಸಿ, ಅವಧಾನವಳವಟ್ಟ ರುಚಿಯನು ಜಿಹ್ವೆಯ ಕರದಿಂದಲರ್ಪಿಸುವಲ್ಲಿ ಪ್ರಾಣಲಿಂಗಾರ್ಪಿತ. ತಟ್ಟುವ ಮುಟ್ಟುವ ನಿರೂಪವಹ ಸರ್ವವನು ಜಾನುಮುಖದಲ್ಲಿ ಭಾವದ ಕರದಿಂದ ಲಿಂಗ ಮುಂದು ಭಾವ ಹಿಂದಾಗಿ, ತೃಪ್ತಿಲಿಂಗಕ್ಕರ್ಪಿಸುವಲ್ಲಿ ಭಾವಲಿಂಗಾರ್ಪಿತ. ಇಂತೀ ಅರ್ಪಿತತ್ರಯದ ಅನುಭಾವ ವತ್ಸಲನಾಗಿ, ಅರ್ಪಿತವನರಿತು ಅನರ್ಪಿತ ನಷ್ಟವಾದಲ್ಲಿ ಪ್ರಸಾದಿ. ಮನ ಬದ್ಧಿ ಚಿತ್ತ ಅಹಂಕಾರದ ಗುಣವಳಿದು, ಪ್ರಾಣಚೈತನ್ಯದೊಳು ವಾಯುವಿನೊಳಡಗಿದ ಪರಿಮಳದಂತೆ, ಲಿಂಗಚೈತನ್ಯ ನೆಲೆಗೊಂಡಿಪ್ಪಲ್ಲಿ ಪ್ರಾಣಲಿಂಗಿ. ಪಂಚೇಂದ್ರಿಯಂಗಳ ಸಂಚವ ನಿಲಿಸಿ, ಲಿಂಗೇಂದ್ರಿಯವೆನಿಸಿತ್ತು. ಸಪ್ತಧಾತುವಿನ ಉರವಣೆಯಂ ಮೆಟ್ಟಿ, ಪ್ರಸನ್ನ ಲಿಂಗದ ಪರಮಸುಖಕ್ಕೆ ರತಿಭೋಗದಲ್ಲಿ ಸತಿಯಾಗಿರಲು ಶರಣ. ಕಾಯಜೀವ, ಪುಣ್ಯಪಾಪ, ಇಹಪರವೆಂಬ ಭ್ರಮೆಯಳಿದು, ಮಹಾಲಿಂಗದಲ್ಲಿ ಅವಿರಳಸಂಬಂಧವಾದಲ್ಲಿ ಲಿಂಗೈಕ್ಯನು. ಈ ಷಡುಸ್ಥಲದ ಆದಿಕುಳವು ಆರಿಗೆಯೂ ಅಳವಡದು. ಘನಕ್ಕೆ ಘನವು, ಲೋಕ ಲೌಕಿಕರಿಗಸಾಧ್ಯ. ನಿಮ್ಮ ಶರಣರಿಗೆ ಸುಲಭ ಕಾಣಾ, ಮಹಾಲಿಂಗ ಕಲ್ಲೇಶ್ವರಾ. ಈ ಷಡುಸ್ಥಲಕ್ಕೆ ಒಡಲಾಗಿ, ಭಕ್ತಿಭಂಡಾರಿ ಬಸವಣ್ಣಂಗೆ ಅಳವಡಿಸಿ ಮರೆದಿರಿ.
--------------
ಹಾವಿನಹಾಳ ಕಲ್ಲಯ್ಯ
ಭಂಡಾರದೊಳಗಿರ್ಪ ಸುವರ್ಣವೇ ಪ್ರಾಣಲಿಂಗವಾಗಿ, ಆಭರಣರೂಪಮಾದ ಸುವರ್ಣವೇ ಇಷ್ಟಲಿಂಗರೂಪಮಾಗಿ ಸಕಲಪ್ರಪಂಚದಲ್ಲೆಲ್ಲಾ ತಾನೇ ತುಂಬಿ, ತನ್ನ ಮಹಿಮೆಯಿಂದಲ್ಲೇ ಸಕಲಪ್ರಪಂಚವನಾಡಿಸುವ ಸುವರ್ಣವೇ ಭಾವಲಿಂಗಮಾಗಿ, ಪ್ರಪಂಚದಲ್ಲೆಲ್ಲಾ ತುಂಬಿರ್ಪಲ್ಲಿ ಮಹಾಲಿಂಗಮಾಗಿ, ಅದೇ ಆದಾಯಮುಖದಲ್ಲಿ ಒಮ್ಮುಖಕ್ಕೆ ಬಂದು ತನಗಿದಿರಿಟ್ಟಲ್ಲಿ ಪ್ರಸಾದಲಿಂಗಮಾಗಿ, ತನ್ನ ಸಂಸಾರಮುಖದಲ್ಲಿ ಸಂಚರಿಸುತ್ತಾ ತನಗೆ ಸೇವನಾಯೋಗ್ಯಮಾದಲ್ಲಿ ಜಂಗಮಲಿಂಗಮಾಗಿ, ಮುಂದೆ ತನ್ನ ಸಂರಕ್ಷಣಕಾರಣ ಕೋಶಭರಿತಮಾದಲ್ಲಿ ಶಿವಲಿಂಗಮಾಗಿ, ಅದೇ ಅಲಂಕಾರಮುಖದಲ್ಲಿ ದೊಡ್ಡಿತಾದಲ್ಲಿ ಗುರುಲಿಂಗಮಾಗಿ, ಈ ವಿಧದಲ್ಲೆಲ್ಲವು ತದಾಚರಣೆವಿಡಿದಿರ್ಪುದರಿಂ ಒಂದು ಸುವರ್ಣವೇ ಹಲವು ರೂಪಮಾಗಿ, ಪ್ರಪಂಚ ಸೃಷ್ಟಿ ಸ್ಥಿತಿ ಸಂಹಾರಕ್ಕೂ ಬ್ರಹ್ಮಾಂಡಕ್ಕೂ ತಾನೇ ಕಾರಣಮಾಗಿರ್ಪಂತೆ, ಒಂದು ಲಿಂಗವೇ ಹಲವು ರೂಪವಾಗಿ, ಭಕ್ತನ ಸೃಷ್ಟಿ ಸ್ಥಿತಿ ಸಂಹಾರಕ್ಕೂ ಬ್ರಹ್ಮಾಂಡಕ್ಕೂ ತಾನೇ ಕಾರಣಮಾಗಿರ್ಪುದು , ಪ್ರಪಂಚಕ್ಕೆ ತಾನು ಚೇತನಮಾಗಿ ಪ್ರಪಂಚವನಾಡಿಸುತ್ತಾ, ಆ ಪ್ರಪಂಚಕ್ಕೆ ತಾನೇ ಸುಖಪ್ರದನಾಗಿರ್ಪಂತೆ, ಲಿಂಗವು ನಿರ್ಗುಣಮಾದರೂ ಗುಣರೂಪಮಾದ ಭಕ್ತಿನಿಗೆ ತಾನು ಗುಣಮಾಗಿ, ಭಕ್ತಸುಖಪ್ರದಮಾಗಿರ್ಪುದು. ಸುವರ್ಣದಿಂ ಸುವರ್ಣವೇ ಜೀವನಮಾಗಿರ್ಪ ಅಧಿಕಬಲಮಂ ಸಂಪಾದಿಸಿ, ಆ ಬಲದಿಂದ ಶತ್ರುಸಂಹಾರಮಂ ಮಾಡಿ, ರಾಜ್ಯವನ್ನು ಸಂಪಾದಿಸಿ, ಅದೆಲ್ಲಕ್ಕೂ ತಾನೇ ಕರ್ತೃವಾಗಿ ತನ್ನಧೀನಮಾಗಿರ್ಪ ಆ ಆರಾಜ್ಯಾದಿಭೋಗವಂ ತಾನನುಭವಿಸುತ್ತಾ ನಿಶ್ಚಿಂತನಾಗಿ, ಐಶ್ವರ್ಯಕ್ಕೂ ತನಗೂ ಅಭೇದರೂಪಮಾಗಿರ್ಪ ಅರಸಿನಂತೆ, ಲಿಂಗದಿಂ ಲಿಂಗವೇ ಜೀವಿತಮಾಗಿರ್ಪ ನಿಜಬಲವಂ ಸಂಪಾದಿಸಿ, ತದ್ಬಲದಿಂ ತಮೋಗುಣ ಶತ್ರುಸಂಹಾರವಂ ಮಾಡಿ, ಮನೋರಾಜ್ಯಮಂ ಸಾಧಿಸಿ, ಎಲ್ಲಕ್ಕೂ ತಾನೇ ಕರ್ತೃವಾಗಿ, ತನ್ನಧೀನಮಾಗಿರ್ಪ ಮನೋಮುಖದಿಂದ ಬಂದ ಸುಖವನ್ನು ಉಪಾಧಿಯಿಲ್ಲದೆ ನಿಶ್ಚಿಂತಮಾಗನುಭವಿಸುತ್ತಾ, ದೀಪಪ್ರಭೆಯೋಪಾದಿಯಲ್ಲಿ ಲಿಂಗಕ್ಕೂ ತನಗೂ ಭೇದವಿಲ್ಲದೆ, ಐಶ್ವರ್ಯವಂತನು ತನ್ನ ಮುನ್ನಿನ ಗುಣವಳಿದು ಐಶ್ವರ್ಯಗುಣವೇ ನಿಜಮುಖ್ಯಗುಣಮಾಗಿ ಸಂಚರಿಸುತ್ತಿರ್ಪಂತೆ, ಲಿಂಗವಂತನು ತನ್ನ ಪೂರ್ವದ ಗುಣವಳಿದು ಲಿಂಗದಗುಣಮೆ ನಿಜಗುಣಮಾಗಿರ್ಪುದೇ ಲಿಂಗೈಕ್ಯವು. ಇಂತಪ್ಪ ಸಕೀಲವೆನಗೆ ಸಾಧ್ಯಮಪ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪೃಥ್ವಿಯೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು, ಭಿನ್ನಗಂಧದ ಹಂಗುಹರಿದು, ಆಚಾರಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಘ್ರಾಣವು. ಅಪ್ಪುವೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು, ಭಿನ್ನರುಚಿಯ ಹಂಗುಹರಿದು, ಗುರುಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಜಿಹ್ವೆಯು. ಅಗ್ನಿಯೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು, ಭಿನ್ನರೂಪದ ಹಂಗುಹರಿದು, ಶಿವಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ನೇತ್ರವು. ಪವನವೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು, ಭಿನ್ನಸ್ಪರ್ಶದ ಹಂಗುಹರಿದು, ಜಂಗಮಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಸರ್ವಾಂಗವು. ಆಕಾಶವೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು, ಭಿನ್ನಶಬ್ದದ ಹಂಗುಹರಿದು, ಪ್ರಸಾದಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಕರ್ಣವು. ಆತ್ಮವೆಂಬ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು, ಭಿನ್ನತೃಪ್ತಿಯ ಹಂಗುಹರಿದು, ಮಹಾಲಿಂಗಕ್ಕೆ ವದನವಾಗಿರ್ಪುದಯ್ಯಾ ಎನ್ನ ಹೃದಯವು. ಇಂತೀ ಷಡ್ವಿಧ ಭೂತಾಂಗದ ಪ್ರಕೃತಿವಿಕಾರದ ಗುಣವಳಿದು, ಷಡ್ವಿಧ ಭಿನ್ನಪದಾರ್ಥದ ಹಂಗುಹರಿದು ಷಡ್ವಿಧ ಇಂದ್ರಿಯಂಗಳು ಷಡ್ವಿಧಲಿಂಗಕ್ಕೆ ಷಡ್ವಿಧ ವದನಂಗಳಾಗಿ ಅಖಂಡೇಶ್ವರಾ, ನಾನೆ ನೀನಾದೆನಯ್ಯಾ.
--------------
ಷಣ್ಮುಖಸ್ವಾಮಿ
ಅರ್ಪಿತವ ಮಾಡುವ ಅವಧಾನವು, ಅನ್ಯವ ಸೋಂಕದ ಅವಧಾನವು, ಅರಿಷಡ್ವರ್ಗಂಗಳ ಮುಟ್ಟಲೀಯದವಧಾನದ ಪರಿಯ ನೋಡಾ, ಪಂಚಭೂತವೆಂಬ ಭವಿಯ ಕಳೆದು ಪ್ರಸಾದಿಯಾಗಿಪ್ಪ ಪರಿಯ ನೋಡಾ, ಪಂಚೇಂದ್ರಿಯಂಗಳ ಗುಣವಳಿದು ಪಂಚವಿಂಶತಿತತ್ವದಲ್ಲಿ ಪರಿಣಾಮಿ ಕೂಡಲಸಂಗಮದೇವರಲ್ಲಿ ಚೆನ್ನಬಸವಣ್ಣನು.
--------------
ಬಸವಣ್ಣ
ಅಂಗದ ಕಳೆ ಲಿಂಗದಲ್ಲಿ; ಲಿಂಗದ ಕಳೆ ಅಂಗದಲ್ಲಿ, ಅಂಗಕಳೆ ಲಿಂಗಕಳೆ ಎಂಬುಭಯವಳಿದು ಆತನ ಅಂಗವೆಲ್ಲವು ಲಿಂಗಮಯವಾಗಿ ಅಂಗಲಿಂಗ ಪದಸ್ಥನಯ್ಯ ಶರಣನು. ಮನದಲ್ಲಿ ಲಿಂಗ; ಲಿಂಗದಲ್ಲಿ ಮನಬೆರಸಿ ಮನವು ಮಹಾಘನವನಿಂಬುಗೊಂಡಿಪ್ಪುದಾಗಿ ಪ್ರಪಂಚುಪದಂಗಳನರಿಯನಯ್ಯ ಶರಣನು. ಮನಲಿಂಗ ಪದಸ್ಥನಾದ ಕಾರಣ ಪ್ರಾಣದೊಡನೆ ಲಿಂಗ; ಲಿಂಗದೊಡನೆ ಪ್ರಾಣ ಕೂಡಿ ಪ್ರಾಣನ ಗುಣವಳಿದು ಪ್ರಾಣಲಿಂಗ ಪದಸ್ಥನಯ್ಯ ಶರಣನು. ಭಾವ ಬ್ರಹ್ಮವನಪ್ಪಿ ಜಾಗ್ರ ಸ್ವಪ್ನ ಸುಷುಪ್ತಿಯೆಂಬ ಸರ್ವಾವಸ್ಥೆಯನಳಿದ ಪರಮಾವಸ್ಥನಯ್ಯ ಶರಣನು. ಎಲ್ಲಾ ಪದಂಗಳ ಮೀರಿ ಮಹಾಘನವನಿಂಬುಗೊಂಡ ಘನಲಿಂಗ ಪದಸ್ಥನಯ್ಯ ಶರಣನು. ಇಂತಪ್ಪ ಘನಮಹಿಮ ಶರಣಂಗೆ ಅವಲೋಕದಲ್ಲಿಯೂ ಇನ್ನಾರು ಸರಿಯಿಲ್ಲ; ಪ್ರತಿಯಿಲ್ಲ ಅಪ್ರತಿಮ ಶರಣಂಗೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗದ ಗುಣವಳಿದು ಲಿಂಗಾಗಿಯಾದ ನಿಜಶರಣನು, ಜಗದ ಠಕ್ಕರಾದ ಜಂಗುಳಿಗಳ ಬಾಗಿಲುಗಳಿಗೆ ಹೋಗನು ನೋಡ. ಹೋದಡೆ ಗುರುವಾಕ್ಯವಿಡಿದು ಹೋಗಿ, `ಲಿಂಗಾರ್ಪಿತ ಭಿಕ್ಷಾ' ಎಂದು ಭಿಕ್ಷವ ಬೇಡಿ, ಲಿಂಗಾಣತಿಯಿಂದ ಬಂದ ಭಿಕ್ಷವ, ಲಿಂಗ ನೆನಹಿನಿಂದ ಲಿಂಗನೈವೇದ್ಯವಾಗಿ ಕೈಕೊಂಡು, ಬಂದಬಂದ ಸ್ಥಲವನರಿದು, ಲಿಂಗಾರ್ಪಿತವ ಮಾಡಬೇಕು. ಅದೆಂತೆಂದಡೆ : ರಾಜಾನ್ನಂ ನರಕಶ್ಚೈವ ಸೂತಕಾನ್ನಂ ತಥೈವ ಚ | ಮೃತಾನ್ನಂ ವರ್ಜಯೇತ್ ಜ್ಞಾನೀ ಭಕ್ತಾನ್ನಂ ಭುಂಜತೇ ಸದಾ || ಇಂತೆಂದುದಾಗಿ, ಲಿಂಗಾಂಗಿಗೆ, ಲಿಂಗಾಭಿಮಾನಿಗೆ, ಲಿಂಗಪ್ರಾಣಿಗೆ ಇದೇ ಪಥವಯ್ಯಾ, ಸಕಳೇಶ್ವರದೇವಾ ನಿಮ್ಮಾಣೆ.
--------------
ಸಕಳೇಶ ಮಾದರಸ
ಪ್ರಾಣಾಪಾನಸಂಘಟದಿಂದ ಪ್ರಾಣನ ಗುಣವಳಿದು ಪ್ರಾಣಮಯಲಿಂಗವಾದ ಪ್ರಾಣಲಿಂಗಕ್ಕೆ ಸಮತೆಯೇ ಸ್ನಾನೋದಕ. ಪರಿಪೂರ್ಣಭಾವವೇ ವಸ್ತ್ರ ಶಕ್ತಿಗಳೇ ಯಜ್ಞಸೂತ್ರ. ವಿದ್ಯೆಯೇ ಸುಗಂಧ. ಭೂತದಯೆಯೇ ಅಕ್ಷತೆ. ಪಂಚ ವಿಷಯಂಗಳೇ ಪುಷ್ಟ. ಅಂತಕರಣಂಗಳೇ ಧೂಪ. ಪಂಚೇಂದ್ರಿಯಂಗಳೇ ದೀಪ. ಸುಖದುಃಖಶೂನ್ಯವಾದ ಆತ್ಮಕಳೆಯೇ ನೈವೇದ್ಯ. ಗುಣತ್ರಯಂಗಳೇ ತಾಂಬೂಲ. ಪ್ರಾಣಸಮರ್ಪಣವೇ ನಮಸ್ಕಾರವು. ಶಾಂತಿಯೇ ಪುಷ್ಪಾಂಜಲಿಯಾಗಿ, ಈ ಪರಿಯಿಂದ, ಪ್ರಾಣಲಿಂಗಪೂಜೆಯ ಮಾಡಬಲ್ಲಾತನೇ ಪ್ರಾಣಲಿಂಗಿ. ಆತನೇ ನಿಜಾನುಭಾವಿ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಆತನೇ ನಿರ್ಮಳ ಜ್ಞಾನಿ.
--------------
ಸ್ವತಂತ್ರ ಸಿದ್ಧಲಿಂಗ
ಕ್ಷುತ್ತು, ಪಿಪಾಸೆ, ಶೋಕ, ಮೋಹ, ಜರಾ, ಮರಣವೆಂಬ ಷಡೂರ್ಮಿಗಳಿಲ್ಲದೆಯಿಪ್ಪನು. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಷಡುವರ್ಗಂಗಳಿಲ್ಲದೆಯಿರುತಿರ್ಪನು. ನಾಹಂ ಕೋಹಂ ಸೋಹಂ ಎಂಬ ಭಾವರಹಿತನಾಗಿಪ್ಪನು. ಅಷ್ಟವಿಧಾರ್ಚನೆ, ಷೋಡಶೋಪಚಾರ ರಹಿತನಾಗಿಪ್ಪನು. ಕರ್ಪೂರ ಅಗ್ನಿ ಸಂಯೋಗವಾಗಿ ಕರ್ಪುರದ ಗುಣವಳಿದು ಅಗ್ನಿಯಾದಂತೆ ಲಿಂಗವ ನೆನನೆನೆದು ಲಿಂಗವೇ ತಾನಾಗಿಪ್ಪುದೀಗ ನಿಜಲಿಂಗೈಕ್ಯಸ್ಥಲವಿದೆಂಬೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪೃಥ್ವಿಗುಣವಳಿದು ಭಕ್ತನಾದೆನಯ್ಯ, ಅಪ್ಪುವಿನ ಗುಣವಳಿದು ಮಹೇಶ್ವರನಾದೆನಯ್ಯ. ಅಗ್ನಿಗುಣವನಳಿದು ಪ್ರಸಾದಿಯಾದೆನಯ್ಯ. ವಾಯುವಿನ ಗುಣವನಳಿದು ಪ್ರಾಣಲಿಂಗಿಯಾದೆನಯ್ಯ, ಆಕಾಶದ ಗುಣವನಳಿದು ಶರಣನಾದೆನಯ್ಯ. ಆತ್ಮನ ಗುಣವನಳಿದು ಐಕ್ಯನಾದೆನಯ್ಯ. ತನ್ನ ತಾನೇ ಅಳಿದು ನಿರಾಳನಾದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->