ಅಥವಾ

ಒಟ್ಟು 17 ಕಡೆಗಳಲ್ಲಿ , 8 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಕಧ್ಯಾನಿ ಜಪಧ್ಯಾನ ಉಂಟೆ? ಜೂಜುವೇಂಟೆ ಚದುರಂಗ ನೆತ್ತ ಪಗಡೆ ಪಗುಡಿ ಪರಿಹಾಸಕರ ಕೂಡು ಕೆಲವಂಗೆ ಶಿವಮೂರ್ತಿಧ್ಯಾನ ಉಂಟೆ? ಕುಕ್ಕುರಂಗೆ ಪಟ್ಟೆಮಂಚ ಸುಪ್ಪತ್ತಿಗೆ ಅಮೃತಾನ್ನವನನಿಕ್ಕಿ ಸಲಹಿದಡೂ ಹಡುಹಿಂಗೆ ಚಿತ್ತವನಿಕ್ಕುವುದೇ ದಿಟ. ಇಂತೀ ಜಾತಿಮತ್ತರ ಲಕ್ಷಣಭೇದ. ಇಂತೀ ಗುರುಚರ ಅಜ್ಞಾಪಿಸಿದ ಆಜ್ಞೆಯ ಮೀರಿದವಂಗೆ ಕುಕ್ಕುರನಿಂದತ್ತಳ ಕಡೆ. ಗುರುವಾದಡಾಗಲಿ, ಲಿಂಗವಾದಡಾಗಲಿ, ಚರವಾದಡಾಗಲಿ ವರ್ತನೆ ತಪ್ಪಿ ನಡೆದವಂಗೆ ಭಕ್ತಿವಿರಕ್ತಿ, ಮೋಕ್ಷಮುಮುಕ್ಷತ್ವವಿಲ್ಲ. ಸಂಗನಬಸವಣ್ಣ ಸಾಕ್ಷಿಯಾಗಿ, ಚನ್ನಬಸವಣ್ಣನರಿಕೆಯಾಗಿ, ಪ್ರಭು ಸಿದ್ಧರಾಮೇಶ್ವರ ಮರುಳುಶಂಕರ ನಿಜಗುಣ ಇಂತಿವರೊಳಗಾದ ನಿಜಲಿಂಗಾಂಗಿಗಳು ಮುಂತಾಗಿ ಎನ್ನ ಕಾಯಕಕ್ಕೆ ಸಾರು ಹೋಗೆಂದಿಕ್ಕಿದ ಕಟ್ಟು. ನಾ ಭಕ್ತನೆಂದು ನುಡಿದಡೆ ಎನಗೊಂದು ತಪ್ಪಿಲ್ಲ, ಅದು ನಿಮ್ಮ ಚಿತ್ತದ ಎಚ್ಚರಿಕೆ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗ ಸಾಕ್ಷಿಯಾಗಿ.
--------------
ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ
ಗುರುಹಸ್ತದಲ್ಲಿ ಉತ್ಪತ್ಯವಾಗಿ, ಜಂಗಮಾನುಭವ ಶರಣರ ಸಂಗದಲ್ಲಿ ಬೆಳೆದು, ನಿಜಲಿಂಗದಲ್ಲಿ ಲೀಯವಾದ ಗುರುಚರ ಭಕ್ತರು ತಮ್ಮ ಸ್ಥೂಲಕಾಯವೆಂಬ ನರಕಂಥೆಯ ಕಳೆದರೆ, ಭಕ್ತ ಬಂಧುಗಳಾದ ಆಪ್ತ ಗಣಂಗಳು ಬಂದು ಸಮಾಧಿಯಂ ತೆಗೆದು, ಆ ಕಾಯವೆಂಬ ಕಂಥೆಯ ನಿಕ್ಷೇಪವಂ ಮಾಡುವುದೆ ಸದಾಚಾರ. ಇಂತಲ್ಲದೆ ಮೃತವಾದನೆಂದು ಗೂಟವಂ ಬಲಿದು, ಗುಂಟಿಕೆಯನಿಕ್ಕಿ, ಶೋಕಂಗೆಯ್ದು, ಪ್ರೇತಸೂತಕ ಕರ್ಮವಿಡಿದು, ತದ್ದಿನವಂ ಮಾಡುವದನಾಚಾರ, ಪಂಚಮಹಾಪಾತಕ. ಅವಂಗೆ ಗುರು ಲಿಂಗ ಜಂಗಮ ಪ್ರಸಾದವಿಲ್ಲ ಅದೆಂತೆಂದೊಡೆ: ``ಯೋ ಗುರುಂ ಮೃತಭಾವೇನ ತದ್ದಿನಂ ಯಸ್ಯ ಶೋಚ್ಯತೇ ಗುರುಲಿಂಗಪ್ರಸಾದಂ ಚ ನಾಸ್ತಿ ನಾಸ್ತಿ ವರಾನನೇ ಎಂದುದಾಗಿ, ಪ್ರೇತಸೂತಕದ ಪಾತಕರಿಗೆ ಅಘೋರನರಕ ತಪ್ಪದು. ಇಂತಪ್ಪ ಅಘೋರನರಕಿಗಳ ಮುಖವ ನೋಡಲಾಗದು ಕಾಣಾ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಊರ ಗುಬ್ಬಿಯೂ ಕಾಡಗುಬ್ಬಿಯೂ ಕೂಡಿಕೊಡು, ಒಣಗಿಲ ಮೇವ ತೆರನಂತೆ, ಭಕ್ತ ಮಾಡುವ ಠಾವಿನಲ್ಲಿ ಗುರುಚರ ಕರ್ತೃಗಳೆಂದು ಪೂಜಿಸಿಕೊಂಡು, ತಮ್ಮ ಆತ್ಮತೇಜರ ತಥ್ಯಮಿಥ್ಯಕ್ಕೆ ಕಡಿದಾಡುತ್ತ, ಆಸನ ಪಙÂ್ತ, ವಾಹನ ವಿಶೇಷ ಭೋಗಂಗಳಿಗೆ ಕುಕ್ಕನೆ ಕುದಿದು, ಬಿಕ್ಕನೆ ಬಿರಿವ ದುರ್ಮತ್ತರಿಗೆ ವಿರಕ್ತಿಯ ಮಾತಿನ ನಿಹಿತ ಇಂತೀ ಹೊತ್ತು ವಿಸ್ತರಿಸಲಾರದೆ, ಭಕ್ತರಿಚ್ಛೆವನರಿಯದೆ ತನ್ನ ನಿತ್ಯಾನಿತ್ಯವ ತಿಳಿಯಲರಿಯದೆ, ತನ್ನ ಪ್ರಕೃತಿಮತ್ಸರಗುಣದಿಂದ ಭಕ್ತರಂತಿಂತೆಂದು ನುಡಿವ, ತಟ್ಟುವ ಭಂಡನ, ಇಂತಿವರ ಕಂಡು ಅರ್ಚಿಸಿ ಪೂಜಿಸಿ ಶರಣೆಂಬ ಮಿಟ್ಟೆಯ ಭಂಡನ, ಈ ಉಭಯದ ಗುಣವನೆತ್ತಲಂದರಿಯೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ದೃಷ್ಟಿಯಿಂದ ನೋಡಿದ ಮತ್ತೆ ಕಂಡಡೆ ಭರಿತಾರ್ಪಣವೆತ್ತಣ ಮುಟ್ಟು ? ಮುಟ್ಟಿದುದ ಮುಟ್ಟಿ ಅರ್ಪಿಸುವಲ್ಲಿ ಲಿಂಗಾರ್ಪಿತವಿಲ್ಲದೆ ಸಲ್ಲದೆಂದು ಗುರುಚರ ಮುಖದಿಂದ ಪ್ರಸಾದಿಸಿ ತಾಯೆಂದ ಭರಿತಾರ್ಪಣ ಅದೆಲ್ಲಿಯ ತೊಟ್ಟು ? ಮತ್ತೆ ಗುರುಚರದಲ್ಲಿ ತ್ರಿವಿಧಮಲಕ್ಕೆ ಕಟ್ಟಿನಿಕ್ಕಿ, ತಪ್ಪಿ ಮುಟ್ಟಿದಲ್ಲಿ ವಂದಿಸಿ ನಿಂದಿಸುವದು. ಮತ್ತೆ ಪ್ರಸಾದವೆಂದು ಕೈಯೊಡ್ಡಿ ಕೊಂಬ ಭ್ರಷ್ಟನೆತ್ತಣ ಕೊಟ್ಟಿ. ಲಿಂಗಕ್ಕಿಂದವೂ ಗುರುಚರ ಭಕ್ತಿಸಂಗಗುಣವಿಶೇಷವೆಂಬುದನರಿದು ಗುರುಚರ ಪ್ರಸಾದವನಂಗೀಕರಿಸಿದ ಮತ್ತೆ ಆ ಲಿಂಗದ ಅಂಗವೆ ಘಟ. ಆ ಗುರುಚರಲಿಂಗಕ್ಕೆ ಪ್ರಾಣಸ್ವರೂಪವಾದ ಮತ್ತೆ ಆ ಲಿಂಗ ತನ್ನ ಸರ್ವಾಂಗದಲ್ಲಿ, ತಾ ವ್ಯವಹರಿಸುವಲ್ಲಿ ಹೆರೆಹಿಂಗದ ತೆರನ ತಿಳಿದು, ಆ ಲಿಂಗದಾದಿ ಗುರುಚರವಿಲ್ಲಾ ಎಂದು ಕಂಡ ಮತ್ತೆ ಗುರುವಿನ ಮುಖದಿಂದ ಲಿಂಗ ಸೋಂಕಿದ ಜಂಗಮದ ತೃಪ್ತಿಯಿಂದ ತ್ರಿವಿಧದ ವರ್ಮವನರಿದು, ಮುಂದಕ್ಕೆ ಕುಳವಿಲ್ಲದೆ, ಹಿಂದಕ್ಕೆ ನಷ್ಟವಾಗಿ, ಅಂದಂದಿಗೆ ಬಂಧ ಮೋಕ್ಷ ಕರ್ಮ ಹಿಂಗಿ ನಿಂದ ನಿಜಲಿಂಗಾಂಗಿಗೆ ಭರಿತಾರ್ಪಣ. ಇಂತಿವನೊಂದುವ ಸಂಧಿಸಿ ಕಾಣಿಸಿಕೊಳ್ಳದೆ ಭರಿತಾರ್ಪಣವೆಂದು ರಸಾಮೃತ ಮೃಷ್ಟಾನ್ನವ ಸುರಿಯಿಸಿಕೊಂಡು, ಯಥೇಷ್ಟವಾಗಿಟ್ಟುಕೊಂಡು, ಮಿಕ್ಕಾದುದ ಚೆಲ್ಲಿ ಸೂಸುವ ಕ್ರೀ ಭ್ರಷ್ಟಂಗೆ, ತ್ರಿವಿಧನಷ್ಟಂಗೆ, ವಿರಕ್ತಂಗೆ, ಕ್ಷಣಿಕ ಪಾರದ್ವಾರ ಹುಸಿ ಕೊಲೆ ಅತಿಕಾಂಕ್ಷೆ ಇಂತಿವು ಮೊದಲಾದ ಕಿಸುಕುಳವ ಬಿಟ್ಟವರಿಗೆ, ಭರಿತಾರ್ಪಣದ ಅರ್ಪಣದ ಅರ್ಪಿತವ ಬಲ್ಲವ ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗಕ್ಕೆ ಕೊಟ್ಟು ಕೊಳಬಲ್ಲವ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಅಯ್ಯಾ, ಗುರು ಚರ ಪರಭಕ್ತಗಣಂಗಳನುಣ್ಣಿಸಿ ಬಣ್ಣಿಸಿ, ಆಣೆ ಪ್ರಮಾಣಂಗಳ ಮಾಡಿ, ನಿಮ್ಮ ಪದಾರ್ಥವ ನಿಮಗೆ ವಂಚನೆಯಿಲ್ಲದೆ ತಂದೊಪ್ಪಿಸುವೆನೆಂದು ಮೃದುತರನುಡಿಯಿಂದ ಧನಧಾನ್ಯದ್ರವ್ಯವ ತಂದು, ಗುಹ್ಯಲಂಪಟ ಮೊದಲಾಗಿ ಸಮಸ್ತಲಂಪಟಕ್ಕೆ ಉದರಪೋಷಣವ ಹೊರದು, ಆ ಗುರುಚರ ಪರಭಕ್ತಗಣಂಗಳು ಬಂದು, 'ನಮ್ಮ ಪದಾರ್ಥವ ಕೊಡು' ಎಂದು ಬೇಡಿದಲ್ಲಿ ಕಡುದ್ರೇಕದಿಂದ ಮರಳಿ 'ನಿಮ್ಮ ಪದಾರ್ಥವನಾರು ಬಲ್ಲರು ? ' ನೀವೆ ನನಗೆ ಕೊಡಬೇಕಲ್ಲದೆ ನಾ ನಿಮಗೆಲ್ಲಿಯದ ಕೊಡಬೇಕೆಂದು ಸಮಸ್ತ ಜನ್ಮಾಂತರದಲ್ಲಿ ಹುಸಿಯನೆ ನುಡಿದು, ಹುಸಿಯನೆ ಮನೆಗಟ್ಟಿ, ಅವರಿಗೆ ಇಲ್ಲದಪವಾದವ ಕಲ್ಪಿಸಿ, ಕುಂದು ನಿಂದ್ಯವ ನುಡಿದು, ಗುರುಚರ ಪರಭಕ್ತಗಣ ದ್ರೋಹಿಯಾಗಿ ಯಮನಿಗೀಡಾಯಿತ್ತಯ್ಯ ಎನ್ನ ವಾಗೇಂದ್ರಿಯವು. ಇಂತು ದುರ್ಜನಸಂಗದಿಂದ ನಿಮ್ಮ ಚರಣದ ನಿಜನೈಷೆ*ಯನರಿಯದೆ ಭವಬಂಧನಕ್ಕೊಳಗಾದ ಅಂಧಕಂಗೆ, ಸತ್ಪಥವ ತೋರಿ ದಯವಿಟ್ಟು ನಿಮ್ಮ ಸದ್ಭಕ್ತ ಶಿವಶರಣ ಮಾರಯ್ಯಗಳ ಮನೆಯ ರಜಂಗಳ ಹೊಡವ ತೊತ್ತಿನ ತೊತ್ತಿನ ಒಕ್ಕು ಮಿಕ್ಕುದ ಕೊಡಿಸಿ ಸಲಹಯ್ಯ. ಶ್ರೀಗುರುಲಿಂಗಜಂಗಮವೆ, ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಗುರು ಪಾದವ ತನ್ನ ಕರದಲ್ಲಿ ಧರಿಸಿ, ಗುರು ಮುದ್ರೆಗಳ ತನ್ನಂತರಂಗ ಬಹಿರಂಗದಲ್ಲಿರಿಸಿ, ಗುರುಲಿಂಗಜಂಗಮದ ಪಾದತೀರ್ಥ ಪ್ರಸಾದವ ನಿರಂತರ ಸಾವಧಾನಿಯಾಗಿ ಕೊಂಡು ಕೃತಾರ್ಥರಾಗಲರಿಯದೆ, ಮತ್ತೆ ಬೇರೆ ಗುರುಚರ ಪರದೈವಂಗಳ ದಂಡ ಕಮಂಡಲ ಕಂಥೆ ಕಕ್ಷದಾರ ಭಿಕ್ಷಾಪಾತ್ರೆ ಹಾವುಗೆ ತೀರ್ಥಕುಂಭ ಭಸ್ಮದುಂಡೆ ಎಂಬಿವು ಆದಿಯಾದ ಮುದ್ರೆ ಧಾರಣ ದ್ರವ್ಯ ಪಾದೋದಕಂಗಳ ಗದ್ದುಗೆಯ ಪೂಜೆಯ ಬೋಳುಕರಂತೆ ಇದಿರಿಟ್ಟು ಆರಾಧಿಸುವ ಅನಾಚಾರಿಗಳಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ. ಇಂತೀ ಪಂಚಾಚಾರಕ್ಕೆ ಹೊರಗಾದ ಪಾತಕರನು ಕೂಡಲಚೆನ್ನಸಂಗಯ್ಯ ಅಘೋರನರಕದಲ್ಲಿಕ್ಕುವ
--------------
ಚನ್ನಬಸವಣ್ಣ
ಗುರುಮಾರ್ಗಾಚಾರ ಲಿಂಗಾಂಗಸಂಗಯೋಗಸಂಪನ್ನರೆಂದು ಉತ್ರಪತ್ರಂಗಳ ಲಿಖಿತಂಗೈದು, ತನ್ನ ಗೃಹದಲ್ಲಿ ತನ್ನ ಪಿತ-ಮಾತೆಯಾದ ಗುರುಚರಕ್ಕೆ ಒಂದು ಪಾಕ, ತನಗೊಂದು ಪಾಕ ಮಾಡಿಸಿಕೊಂಡು, ಉದರಮಂ ಹೊರೆದು, ಪ್ರಸಾದಿಗಳೆನಿಸಿ, ಗುರುಚರ ಬಂದಾಗ್ಗೆ ತಂಗಳ ನೀಡಿ, ಅವರಿಲ್ಲದಾಗ ಬಿಸಿಯನುಂಡು, ಮತ್ತೊಬ್ಬರಿಗೆ ಆಚಾರವ ಹೇಳಿ, ತಾನನಾಚಾರಿಯಾಗಿ ಸತ್ಕ್ರಿಯಾಸಮ್ಯಜ್ಞಾನವ ಮರೆದು, ಮಹಾಜ್ಞಾನಪರಿಪೂರ್ಣರೆನಿಸಿ, ತ್ರಿವಿಧಪ್ರಸಾದಪಾದೋದಕವರಿಯದವರಲ್ಲಿ ಸಮರಸಕ್ರಿಯೆಗಳಂ ಬಳಸಿ, ಡಂಬಕತನದಿಂದೊಡಲುಪಾಧಿವಿಡಿದು, ತಥ್ಯ ಮಿಥ್ಯ ತಾಗು ದೋಷ ಕಠಿಣ ನುಡಿಗಳ ಬಳಕೆಯಲ್ಲಿರ್ಪುದೆ ಅಂತರಂಗದ ದ್ವಿತೀಯಪಾತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಗುರುಜಂಗಮದ ಪಾದೋದಕವ ಲಿಂಗಕ್ಕೆ ಮಜ್ಜನವ ಮಾಡುವಲ್ಲಿ, ಆ ಲಿಂಗ ಮೊದಲೋ, ಗುರುಚರ ಮೊದಲೋ ? ಅನಾದಿಬೀಜ ಲಿಂಗ, ಆದಿಬೀಜ ಗುರುಚರ. ಇಂತೀ ಉಭಯವನರಿತಲ್ಲಿ, ಗುರುಚರಕ್ಕೆ ಲಿಂಗವೆ ಆದಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಗುರುಕಾರುಣ್ಯವಿಡಿದು ಅಂಗದ ಮೇಲೆ ಲಿಂಗವನುಳ್ಳ ನಿಜವೀರಶೈವ ಸಂಪನ್ನರಾದ ಗುರುಚರ ಭಕ್ತಿವಿವಾಹದ ಪರಿಯೆಂತೆಂದಡೆ: ದಾಸಿ, ವೇಸಿ, ವಿಧವೆ, ಪರಸ್ತ್ರೀ, ಬಿಡಸ್ತ್ರೀ ಮೊದಲಾದ ಹಲವು ಪ್ರಕಾರದ ರಾಸಿಕೂಟದ ಸ್ತ್ರೀಯರ ಬಿಟ್ಟು ಸತ್ಯಸದಾಚಾರವನುಳ್ಳ ಭಕ್ತಸ್ತ್ರೀಯರ, ಮುತ್ತೈದೆಯ ಮಗಳಪ್ಪ ಶುದ್ಧ ಕನ್ನಿಕೆಯ, ವಿವಾಹವಾಗುವ ಕಾಲದಲ್ಲಿ, ಭಕ್ತಗೃಹವಂ ಶೃಂಗರಿಸಿ ಭಕ್ತಿಪದಾರ್ಥಂಗ? ಕೂಡಿಸಿ ಭಕ್ತಿ ಸಂಭ್ರಮದಿಂದ ಗುಡಿಕಟ್ಟಿ ವಿವಾಹೋತ್ಸವಕ್ಕೆ ನೆರೆದ ಭಕ್ತಜಂಗಮಕ್ಕೆ ನಮಸ್ಕರಿಸಿ ಮೂರ್ತಿಗೊಳಿಸುತ್ತ ವಿಭೂತಿ ವಿಳಯವಂ ತಂದಿರಿಸಿ ಬಿನ್ನೈಸಿ ಅವರಾಜ್ಞೆಯಂ ಕೈಕೊಂಡು ಶೋಭನವೇಳುತ್ತ, ಮಂಗಳ ಮಜ್ಜನವಂ ಮಾಡಿ ಅಂಗವಸ್ತ್ರ ಲಿಂಗವಸ್ತ್ರಂಗಳಿಂ ಶೃಂಗರಿಸಿ ವಿಭೂತಿಯಂ ಧರಿಸಿ, ರುದ್ರಾಕ್ಷೆಯಂ ತೊಟ್ಟು ದಿವ್ಯಾಭರಣವನ್ನಿಟ್ಟು ಆಸನವಿತ್ತು ಕು?್ಳರಿಸಿ ಭಕ್ತಾಂಗನೆಯರೆಲ್ಲ ನೆರೆದು ಶೋಭನವಂ ಪಾಡುತ್ತ ಭವಿಶೈವಕೃತಕಶಾಸ್ತ್ರವಿಡಿದು ಮಾಡುವ ಪಂಚಸೂತಕ ಪಾತಕಯುಕ್ತವಾದ ಪಂಚಾಂಗ ಕರ್ಮ ಸಂಕಲ್ಪಗಳಂ ಅತಿಗಳೆದು ಅಂಗಲಿಂಗಸಂಬಂಧವನುಳ್ಳ ಪಂಚಾಚಾರಯುಕ್ತರಾದ ನಿಜವೀರಶೈವಸಂಪನ್ನರಾದ ಭಕ್ತಿವಿವಾಹಕ್ಕೆ ಮೊದಲಾದ ಗುರುವಾಜ್ಞೆವಿಡಿದು ಉಭಯವಂ ಕೈಗೂಡಿ ಸತಿಪತಿ ಭಾವವನುಳ್ಳ ಸತ್ಯವ್ರತವ ತಪ್ಪದಿರಿ ಎಂದು. ಭಕ್ತಾಜ್ಞೆಯಲ್ಲಿ ಭಸಿತವನಿಡಿಸಿ ಗುರುಲಿಂಗ ಜಂಗಮವೆಂಬ ಏಕ ಪ್ರಸಾದವನೂಡಿ ಇಂತು ಗುರುಚರ ಪರ ಮೊದಲಾದ ಭಕ್ತಗಣ ಸಾಕ್ಷಿಯಾಗಿ ಭಕ್ತಿವಿವಾಹದ ಭಕ್ತಾರಾಧ್ಯರುಗಳ ನಿಷೇಧವಮಾಡಿ ನಿಂದಿಸಿದವಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ, ಪ್ರಸಾದವಿಲ್ಲ; ಅವ ಭಕ್ತಾಚಾರಕ್ಕೆ ಸಲ್ಲನು. ಇಂತಪ್ಪ ಭಕ್ತಿ ಕಲ್ಯಾಣಯುಕ್ತವಾದ ಭಕ್ತರಾಧ್ಯರ ನಿಷೇಧವಮಾಡಿ ನಿಂದಿಸಿದವಂಗೆ ಇಪ್ಪತ್ತೆಂಟು ಕೋಟಿ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಅಯ್ಯ, ಗುರು ಜಂಗಮದ ಪಾದೋದಕ ಪ್ರಸಾದವ ಚಿದ್ಘನಲಿಂಗಕ್ಕೆ ಅರ್ಪಿತವ ಮಾಡಿಕೊಂಬಲ್ಲಿ ಆ ಲಿಂಗ ಮೊದಲೊ? ಗುರುಚರ ಮೊದಲೊ? ಆ ವಿಚಾರವೆಂತೆಂದಡೆ :ಅನಾದಿಬೀಜಲಿಂಗ ಆದಿಬೀಜ ಗುರುಚರ, ಇಂತೀ ಉಭಯವನರಿತಲ್ಲಿ ಗುರುಚರಕ್ಕೆ ಚಿದ್ಘನಲಿಂಗವೆ ಆದಿಯನಾದಿ, ಚಿದ್ಘನಲಿಂಗಕ್ಕೆ ಗುರುಚರವೆ ಆದಿ ಅನಾದಿ. ಇಂತೀ ವಿಚಾರವ ತಿಳಿದಲ್ಲಿ ಚಿದ್ಘನಲಿಂಗವ ಬಿಟ್ಟು ಗುರುಚರವುಂಟೆ? ಗುರುಚರವ ಬಿಟ್ಟು ಚಿದ್ಘನಲಿಂಗವುಂಟೆ? ಇವು ಮೂರು ಒಂದೆ ವಸ್ತುವಯ್ಯ. ಅದರಿಂದ ಆಚರಣೆಗೋಸ್ಕರ ಗುರುಭಕ್ತನಾಗಿ ಪೂಜೆಗೆ ನಿಂತಿರ್ಪುದಯ್ಯ. ಲಿಂಗಜಂಗಮವಾಗಿ ಪೂಜ್ಯಕ್ಕೆ ನಿಂತಿರ್ಪುದಯ್ಯ. ಗುರುಭಕ್ತನಾಗಿರ್ಪುದಯ್ಯ ; ಲಿಂಗಜಂಗಮವಾಗಿರ್ಪುದಯ್ಯ. ಇಚ್ಛೆ-ಅನಿಚ್ಛೆ, ಬೇಕು-ಬೇಡೆಂಬುದೆ ಗುರುಭಕ್ತರೂಪು. ಇಚ್ಛೆ-ಅನಿಚ್ಛೆ, ಬೇಕು-ಬೇಡೆನ್ನದೆ ಗುರುಭಕ್ತರಿಂದ ಬಂದುದ ಕೈಕೊಂಡು ಸಂತೃಪ್ತಿಯಲ್ಲಿರ್ಪುದೆ ಲಿಂಗಜಂಗಮ. ಇದನರಿದ ಮೇಲೆ ಮತ್ತೊಂದು ಪ್ರಕಾರ ಚಿಕ್ಕದಂಡನ ಪ್ರಸಾದವಾಕ್ಯವುಂಟು ! ಅದರ ವಿಚಾರವೆಂತೆಂದಡೆ-ಗುರು ಮುಟ್ಟಿದ್ದು ಪ್ರಸಾದವೆಂಬೆನೆ? ಅಲ್ಲಲ್ಲ. ಅದೇನು ಕಾರಣವೆಂದಡೆ, ಅನಾದಿಲಿಂಗವ ತೋರಲರಿಯನಾಗಿ, ಲಿಂಗ ಮುಟ್ಟಿದ್ದು ಪ್ರಸಾದವೆಂಬೆನೆ? ಅಲ್ಲಲ್ಲ. ಅದೇನು ಕಾರಣವೆಂದಡೆ, ಅಷ್ಟವಿಧಾರ್ಚನೆ, ಷೋಡಶೋಪಚಾರಕ್ಕೆ ಒಳಗಾಯಿತ್ತಾಗಿ. ಮತ್ತೆಂತುಂಟು ಗುರುಲಿಂಗ ಜಂಗಮಪ್ರಸಾದ? ಅನಾದಿಲಿಂಗವನರಿತು ಅಷ್ಟತನುವೆ ಅಷ್ಟವಿಧಾರ್ಚನೆಯಾಗಿ, ಮಲಮಾಯಪಾಶದಾಸೆಯ ನೀಗಿ ನಿಂದಡೆ ಗುರು-ಲಿಂಗ-ಜಂಗಮ ! ಆತ ತಟ್ಟಿದ್ದು ಮುಟ್ಟಿದ್ದೆಲ್ಲ ಮಹಾಪ್ರಸಾದ ನೋಡ. ಲಿಂಗವಿಲ್ಲದ ಜಂಗಮ, ಜಂಗಮವಿಲ್ಲದ ಲಿಂಗ ; ಈ ಲಿಂಗಜಂಗಮ ಜಂಗಮಲಿಂಗವೆಂಬ ವಿಚಾರವನರಿಯದೆ ಗುರುಭಕ್ತರೆಂತಹುದೊ? ಮರುಳೆ! ಲಿಂಗಜಂಗಮದಲ್ಲಿ ಚಿದ್ಘನತೀರ್ಥವ ಕೊಂಡು, ಜಂಗಮಲಿಂಗದಲ್ಲಿ ಚಿದ್ಘನಪ್ರಸಾದವ ಮುಗಿಯಬಲ್ಲಾತನೆ ಆದಿ ಅನಧಿಯಿಂದತ್ತತ್ತ ಮೀರಿ ತೋರುವ ಗುರುಭಕ್ತಶರಣ. ಪ್ರಸಾದಲಿಂಗಮೂರ್ತಿ ತಾನೆ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಇಕ್ಕಿಕ್ಕುವ ಠಾವಿನಲ್ಲಿ ಮಕ್ಕಳಂತೆ ತಳಿಗೆಯ ತೆಗೆಯದೆ, ಕೊಟ್ಟಹ ಕೊಟ್ಟಹರೆಂದು ಭಟ್ಟರಂತೆ ಅಟ್ಟಳಿಗೊಳಗಾಗದೆ, ಕೊಂಬತೆರದಲ್ಲಿ ಕೊಂಡು ಭಕ್ತಿಯಿಂದ ಬಂದ ತೆರದಲ್ಲಿ ಅನುಕರಿಸಿ, ಪ್ರಸಂಗವ ಕಂಡಕಂಡವರಲ್ಲಿ ಕೊಂಡಾಡದೆ, ಈ ಗುಣ ಹಿಂಗಿ ನಿಂದುದು ಗುರುಚರ ಭಾವ, ಆತ ತಾನೆ ಕಾಲಾಂತಕ ಭೀಮೇಶ್ವರಲಿಂಗವು.
--------------
ಡಕ್ಕೆಯ ಬೊಮ್ಮಣ್ಣ
-->