ಅಥವಾ

ಒಟ್ಟು 30 ಕಡೆಗಳಲ್ಲಿ , 17 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ, ಇಂತು ನಿರಂಜನ ಮಹಾಲಿಂಗಾನುಭಾವಸೂತ್ರವ ಎರಡೆಂಬತ್ತೆಂಟುಕೋಟಿ ಹರಗುರು ವಾಕ್ಯಪ್ರಮಾಣವಚನಾನುಭಾವವ ಪ್ರಕಟಿಸಿ ಈ ಒಂದು ವಚನಾರ್ಥದಲ್ಲಿ ಅತಿಗೋಪ್ಯದಿಂದ ಅನಾದಿ ನಿಃಕಳಂಕ ನಿಶ್ಶೂನ್ಯ ನಿರಂಜನ ನಿರಾವಯ ಶರಣಸೂತ್ರವಿಡಿದು ನಿರಾಯಾಸಂ ಆಯಾಸಂಗಳೇನು ತೋರದೆ ಈ ವಚನಾರ್ಥದ ಆದಿ-ಅಂತ್ಯವನರುಹಿಸಿಕೊಟ್ಟೆವು ನೋಡ. ಆ ವಿಚಾರವೆಂತೆಂದಡೆ : ಶ್ರೀ ಮದ್ಗುರು ಕಾರುಣ್ಯವೇದ್ಯನು, ವಿಭೂತಿ-ರುದ್ರಾಕ್ಷಧಾರಕನು, ಪಂಚಾಕ್ಷರೀ ಭಾಷಾಸಮೇತನು, ಲಿಂಗಾಂಗಸಂಬಂದ್ಥಿ, ನಿತ್ಯಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ, ಪಾದೋದಕ-ಪ್ರಸಾದಗ್ರಾಹಕನು, ಗುರುಭಕ್ತಿ ಸಂಪನ್ನನು, ಏಕಲಿಂಗ ನಿಷ್ಠಾಪರನು, ಚರಲಿಂಗ ಲೋಲುಪ್ತನು, ಶರಣ ಸಂಗವೈಶ್ವರ್ಯನು, ತ್ರಿವಿಧಕ್ಕಾಯತನು, ತ್ರಿಕರಣಶುದ್ಧನು, ತ್ರಿವಿಧ ಲಿಂಗಾಂಗಸಂಬಂದ್ಥಿ, ಅನ್ಯದೈವದ ಸ್ಮರಣೆಯ ಹೊದ್ದ, ಭವಿಸಂಗವ ಮಾಡ, ಭವಿಪಾಕವ ಕೊಳ್ಳ, ಪರಸ್ತ್ರೀಯರ ಬೆರಸ, ಪರಧನವನೊಲ್ಲ, ಪರನಿಂದ್ಯವನಾಡ, ಅನೃತವ ನುಡಿಯ, ಹಿಂಸೆಯ ಮಾಡ, ತಾಮಸಭಕ್ತರ ಸಂಗವಮಾಡ, ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಬ್ಥಿಮಾನ ಮುಂತಾದವೆಲ್ಲವ ಸಮರ್ಪಿಸಿ ಪ್ರಸಾದ ಮುಂತಾಗಿ ಭೋಗಿಸುವ, ಜಂಗಮನಿಂದ್ಯವ ಸೈರಿಸ, ಪ್ರಸಾದನಿಂದ್ಯವ ಕೇಳ, ಅನ್ಯರನಾಸೆಗೈಯ್ಯ, ಪಾತ್ರಾಪಾತ್ರವನರಿದೀವ, ಚತುರ್ವಿಧಪದವಿಯ ಹಾರೈಸ, ಅರಿಷಡ್ವರ್ಗಕ್ಕೆ ಅಳುಕ, ಕುಲಾದಿಮದಂಗಳ ಬಗೆಗೊಳ್ಳ, ದ್ವೈತಾದ್ವೈತವ ನುಡಿವನಲ್ಲ, ಸಂಕಲ್ಪ-ವಿಕಲ್ಪವ ಮಾಡುವನಲ್ಲ, ಕಾಲೋಚಿತವ ಬಲ್ಲ, ಕ್ರಮಯುಕ್ತನಾಗಿ ಷಟ್‍ಸ್ಥಲಭರಿತ, ಸರ್ವಾಂಗಲಿಂಗಿ, ದಾಸೋಹಂ ಸಂಪನ್ನ ಇಂತೀ ಭಾವನ್ನದಿರವ ಅಂತರಂಗದಲ್ಲಿ ಒಳಕೊಂಡು ಬಹಿರಂಗದಲ್ಲಿ ನಡೆದಂತೆ ನುಡಿದು, ನುಡಿದಂತೆ ನಡದು, ಸದ್ಭಕ್ತಿ-ಜ್ಞಾನ-ವೈರಾಗ್ಯ ಸಂಪನ್ನತ್ವದಿಂದ ಸಕಲಪ್ರಮಥಗಣಂಗಳಿರುವ ಕೀರ್ತಿಸಿಕೊಳ್ಳುತ್ತ, ಆ ಆದಿಪ್ರಮಥರ ಕೀರ್ತನೆ ವಿಚಾರವೆಂತೆಂದಡೆ : ಶ್ರೀಮದನೇಕಲೋಕ-ವಿಸ್ತಾರಕ ಕಾರಣರೂಪ, ಸತ್ತಿಚಿತ್ತಾನಂದ ನಿತ್ಯಪರಿಪೂರ್ಣ ಅವಿರಳ ಪರಂಜ್ಯೋತಿಸ್ವರೂಪ, ಪರತರ ಪರಬ್ರಹ್ಮಾನುಭಾವ ಸಾರ್ವಭೌಮ, ಷಟ್ಸ್ಥಲಸ್ಥಾಪನಾಚಾರ್ಯ, ಪಂಚಾಚಾರ ಪ್ರಮಥನಾಯಕ ಸರ್ವಾಚಾರ ನಿಷ್ಠಾಗರಿಷ್ಠ, ಲಿಂಗಲೋಲುಪ್ತ, ಲಿಂಗಭೋಗೋಪಭೋಗಿ, ಜಂಗಮಾನುಭಾವ, ಸದ್ಭಕ್ತ ಹೃನ್ಮಂದಿರವಾಸ, ನಿತ್ಯ ಕಲ್ಯಾಣೋತ್ಸಹಪೂರ್ಣಾವತರ್ಯ, ಲಿಂಗಲೀಲಾನಂದ, ಏಕವಿಂಶತಿಯುಗಸ್ಥಾಪನಾಚಾರ್ಯವರ್ಯ, ಮಂಜುಳಾಂತರಂಗ, ಮನುಮುನಿವಂದ್ಯ, ಪ್ರದಾಯಕ ತ್ರೈದಶಪರ್ವತಾದ್ಥೀಶ್ವರ, ಮದನಮರ್ದನ, ಮಾಯಾಕೋಲಾಹಲ, ಅಷ್ಟಾವರಣ ಸ್ವರೂಪ, ತ್ರಿವಿಧಾನುಗ್ರಹ ಪ್ರತಿಪಾದಕ, ತ್ರಿವಿಧ ಪಾದೋದಕ ಪ್ರಸಾದಲೋಲುಪ್ತ, ತ್ರಿವಿಧಾಚಾರಸನ್ಮೋಹಿ, ತ್ರಿಗುಣಾನಂದಭರಿತ, ತ್ರಿಮಲದೂರ, ನಿರ್ಮಲ-ನಿಃಕಳಂಕ-ನಿಃಶೂನ್ಯ-ನಿರಂಜನ, ಅನುಮಿಷಾರಾಧ್ಯ, ತ್ರಿವಿಧ ಲಿಂಗಾನುಭಾವ ಅಖಿಳಾಂಡ ಪ್ರತಿಷ್ಠಾಪ್ರದಾಯಕ, ಸದ್ಧರ್ಮಸ್ವರೂಪ, ಸತ್ಕ್ರಿಯಾ ಸಮ್ಯಜ್ಞಾನ ಸದಾಭರಿತ, ನಿತ್ಯ ತೃಪ್ತಾನಂದಮಂತ್ರಸ್ವರೂಪ, ಅನಂತಸೂರ್ಯಚಂದ್ರಾಗ್ನಿಪ್ರಕಾಶ, ಅಜ್ಞಾನ ತಿಮಿರಾಂಧಸ್ಯ, ಕಾರಣಾವತಾರ ಸರ್ವಜ್ಞ ಪ್ರದಾಯಕ, ಕಾಮಧೇನು-ಕಲ್ಪವೃಕ್ಷ, ಚಿಂತಾಮಣಿಗೆ ಮಾತೃಸ್ವರೂಪ, ವಾಚಾತೀತ-ವರ್ಣಾತೀತ-ಭಾವಾತೀತ-ಜ್ಞಾನಾತೀತ, ಚಿತ್ಕಲಾಸ್ವರೂಪ, ಅಯೋನಿಸಂಭವ, ಅಜಡಸ್ವರೂಪ, ಬತ್ತೀಶಕಳಾಮೂರ್ತಿ, ಜರೆಮರಣ ಸಂಸ್ಕøತಿದೂರ, ವರವೀರಶೈವಮತ ಸ್ಥಾಪನಾಚಾರ್ಯ, ನಿಜ ಶಿವಯೋಗಭರಿತಾನಂದಮೂರ್ತಿ, ಗುರುಮಾರ್ಗಾಚಾರ ಪ್ರತಿಷ್ಠಾಪ್ರದಾಯಕ, ಅನಾಚಾರ ಸಂಹಾರ, ಮಹಿಮಾಸ್ವರೂಪ, ಸದ್ಭಕ್ತಜಿಹ್ವಾಗ್ರ ಹೃನ್ಮಂದಿರಾವಾಸ. ಏಕವಿಂಶತಿ ದೀಕ್ಷಾಬೋಧಸ್ವರೂಪ, ಷಡ್ಗುಣೈಶ್ವರ್ಯ ಸಂಪತ್ಕರವನುಳ್ಳ ಮುಕ್ತಿಪ್ರದಾಯಕ, ಮೂಲಮಂತ್ರಮೂರ್ತಿ ಲೋಕಪಾವನಾರ್ಥ ಕೂಡಲಸಂಗಮೇಶ್ವರನ ಚಿದ್ಗರ್ಭೋದಯ ಬಸವದಂಡನಾಥ ಪ್ರಮಥಗಣಂಗಳ ಭಕ್ತಿಹಿತಾರ್ಥವಾಗಿ, ಅವತರಿಸಿದಂಥ ವಿರಾಣ್ಮೂರ್ತಿ! ಅನಾದಿಗಣೇಶ್ವರ, ಅನಾದಿಗಣೇಶ್ವರನ ಶಿಷ್ಯರು ಆದಿಗಣೇಶ್ವರ, ಆದಿಗಣೇಶ್ವರನ ಶಿಷ್ಯರು ನಿರ್ಮಾಯವೆಂಬ ಗಣೇಶ್ವರ, ನಿರ್ಮಾಯನೆಂಬ ಗಣೇಶ್ವರನ ಶಿಷ್ಯರು ನಿರಂಜನನೆಂಬ ಗಣೇಶ್ವರ, ನಿರಂಜನನೆಂಬ ಗಣೇಶ್ವರನ ಶಿಷ್ಯರು ಜ್ಞಾನಾನಂದನೆಂಬ ಗಣೇಶ್ವರ, ಜ್ಞಾನಾನಂದನೆಂಬ ಗಣೇಶ್ವರನ ಶಿಷ್ಯರು ಆತ್ಮ ಗಣೇಶ್ವರ, ಆತ್ಮಗಣೇಶ್ವರನ ಶಿಷ್ಯರು ಆಧ್ಯಾತ್ಮ ಗಣೇಶ್ವರ, ಆಧ್ಯಾತ್ಮಗಣೇಶ್ವರನ ಶಿಷ್ಯರು ರುದ್ರನೆಂಬ ಗಣೇಶ್ವರ, ರುದ್ರನೆಂಬ ಗಣೇಶ್ವರನ ಶಿಷ್ಯರು ಬಸವಪ್ರಭುದೇವರು, ಬಸವಪ್ರಭುದೇವರ ಶಿಷ್ಯರು ಆದಿಲಿಂಗದೇವರು, ಆದಿಲಿಂಗದೇವರ ಶಿಷ್ಯರು ಚೆನ್ನವೀರೇಶ್ವರದೇವರು, ಚೆನ್ನವೀರೇಶ್ವರದೇವರ ಶಿಷ್ಯರು ಹರದನಹಳ್ಳಿ ಗೋಸಲದೇವರು, ಹರದನಹಳ್ಳಿ ಗೋಸಲದೇವರ ಶಿಷ್ಯರು ಶಂಕರದೇವರು, ಶಂಕರದೇವರ ಶಿಷ್ಯರು ದಿವ್ಯಲಿಂಗದೇವರು, ದಿವ್ಯಲಿಂಗದೇವರ ಶಿಷ್ಯರು ಚೆನ್ನಬಸವೇಶ್ವರದೇವರು, ಚೆನ್ನಬಸವೇಶ್ವರದೇವರ ಶಿಷ್ಯರು ತೋಂಟದ ಸಿದ್ಧೇಶ್ವರಸ್ವಾಮಿಗಳು, ತೋಂಟದ ಶಿದ್ಧೇಶ್ವರಸ್ವಾಮಿಗಳ ಸಿಷ್ಯರು ಮರುಳಸಿದ್ಧೇಶ್ವರಸ್ವಾಮಿಗಳು, ಮರುಳಸಿದ್ಧೇಶ್ವರಸ್ವಾಮಿಗಳ ಶಿಷ್ಯರು ರೇವಣಸಿದ್ಧೇಶ್ವರಸ್ವಾಮಿಗಳು, ರೇವಣಸಿದ್ಧೇಶ್ವರಸ್ವಾಮಿಗಳ ಶಿಷ್ಯರು ಶಿವಲಿಂಗೇಶ್ವರಸ್ವಾಮಿಗಳು, ಶಿವಲಿಂಗೇಶ್ವರಸ್ವಾಮಿಗಳ ಶಿಷ್ಯರು ನಿರಂಜನೇಶ್ವರಸ್ವಾಮಿಗಳು, ನಿರಂರನೇಶ್ವರಸ್ವಾಮಿಗಳ ಶಿಷ್ಯರು ಮರಿಬಸವಲಿಂಗೇಶ್ವರಸ್ವಾಮಿಗಳು, ಮರಿಬಸವಲಿಂಗೇಶ್ವರಸ್ವಾಮಿಗಳ ಶಿಷ್ಯರು ಸ್ವತಂತ್ರಸಿದ್ಧಲಿಂಗೇಶ್ವರಸ್ವಾಮಿಗಳು, ಸ್ವತಂತ್ರಸಿದ್ಧಲಿಂಗೇಶ್ವರಸ್ವಾಮಿಗಳ ಶಿಷ್ಯರು ಚೆನ್ನಮಲ್ಲೇಶ್ವರಸ್ವಾಮಿಗಳು ಚೆನ್ನಮಲ್ಲೇಶ್ವರಸ್ವಾಮಿಗಳ ಶಿಷ್ಯರು ಚೆನ್ನಂಜೇಶ್ವರಸ್ವಾಮಿಗಳು, ಚೆನ್ನಂಜೇಶ್ವರಸ್ವಾಮಿಗಳ ಶಿಷ್ಯರು ಗುರುಶಾಂತೇಶ್ವರಸ್ವಾಮಿಗಳು, ಗುರುಶಾಂತೇಶ್ವರಸ್ವಾಮಿಗಳ ಶಿಷ್ಯರು ಶಾಂತಮಲ್ಲಸ್ವಾಮಿಗಳು ಶಾಂತಮಲ್ಲಸ್ವಾಮಿಗಳ ಕರ-ಮನ-ಭಾವದಲ್ಲುದಯವಾದ ಗುರುಸಿದ್ಧಲಿಂಗ ನಾನಯ್ಯ. ಆ ಗುರುಸಿದ್ಧಲಿಂಗನ ಕರ-ಮನ-ಸುಭಾವದಲ್ಲಿ ಶರಣಗಣಂಗಳ ಶುದ್ಧಸಿದ್ಧಪ್ರಸಿದ್ಧ ಪ್ರಸಾದವಾಗಿ ಅಷ್ಟವಿಧಾರ್ಚನೆ-ಷೋಡಶೋಪಚಾರ-ಮಂತ್ರ-ಧ್ಯಾನ- ಜಪ-ಸ್ತೋತ್ರ-ಮನೋರ್ಲಯ-ನಿರಂಜನ ಪೂಜೆಯ ಕೈಕೊಂಡು ಪ್ರಮಥಗಣಂಗಳ ಸ್ವಾನುಭಾವಸೂತ್ರವನೊಳಕೊಂಡು ಒಳಗು ಬೆಳಗನೆ ನುಂಗಿ ಬೆಳಗು ಒಳಗನೆ ನುಂಗಿ, ಛಳಿ ಮೋಹಕದ ಮಂಜು ನುಂಗಿದಂತೆ ಹಲವು ದೀಪವ ಬಯಲ ಗಾಳಿ ನುಂಗಿದ ತೆರದಿ ಕಳೆಯಳಿದ ಕೂಡಲಚೆನ್ನಸಂಗಯ್ಯನು. ಇಂತು ಚಿಕ್ಕದಂಡನಾಥ ಚೆನ್ನಬಸವೇಶ್ವರಸ್ವಾಮಿಗಳ ಪ್ರಸನ್ನಪ್ರಸಾದಕ್ಕೆ ಒಪ್ಪಿಗೆಯಾಗಿ ಈ ವಚನಾನುಭಾವಶಾಸ್ತ್ರವ ಕೈಕೊಂಡು ಸದ್ಭಕ್ತಶರಣಗಣಂಗಳಿಗೆ ಬೋದ್ಥಿಸಿ ಸಂಪೂರ್ಣವಮಾಡುವುದಕ್ಕೆ ಕರ್ತುಗಳಾಗಿ ಒಪ್ಪುತಿರ್ಪಿರಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಹುಟ್ಟಿದ ಮನೆಯ ಸುಟ್ಟು ನೆರಮನೆಯ ಸುಟ್ಟು ಹೋಗುವಾಹುತಿ ಹೋತ್ರನಂತೆ, ದೇಹಾಬ್ಥಿಮಾನವಿಡಿದು ಉಪದೇಶವಾಗಿ ತನುವಿಕಾರ ಬಿಡದೆ ಗುರುಭಕ್ತಿ ದಹನಮಾಡಿ, ಜಂಗಮಲಿಂಗವ ಕಂಡು ನಿಂದಿಸಿ ಜಂಗಮಭಕ್ತಿಯ ದಗ್ಧಮಾಡಿ ದುರ್ಗತಿಯಕೂಡಿ ಹೋಗುವ ನರಕಜೀವಿಗಳಿಗೆಂತು ಭಕ್ತಿನೆಲೆಗೊಂಬುವುದಯ್ಯಾ? ನಿತ್ಯಾನಂದ ನಿಲುವಿಗೆ ಸತ್ಯವಾಗಿತ್ತಡೆ ಕರ್ತುವಿಗೆ ಭಕ್ತಿ ನಿಜವೆಂಬೆ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನುಶೀಲ ಗುರುಭಕ್ತಿ, ಮನಶೀಲ ಲಿಂಗಭಕ್ತಿ, ಧನಶೀಲ ಜಂಗಮಭಕ್ತಿ, ತ್ರಿವಿಧಶೀಲ ಮಹಾಭಕ್ತಿ. ಅಂಗ ಮನ ಭಾವ ಕರಣಂಗಳಲ್ಲಿ ವ್ರತದಂಗವೆ ಪ್ರಾಣವೆಂದು ಇಪ್ಪುದು ಛಲಭಕ್ತಿ. ಇಂತೀ ಭೇದಭಾವಂಗಳಲ್ಲಿ ಅಣುಮಾತ್ರ ತಪ್ಪ ಕ್ಷಣಮಾತ್ರ ಸೈರಿಸೆವೆಂಬುದು ನಿಶ್ಚಯಭಕ್ತಿ. ಇಂತೀ ವರ್ತಕಶುದ್ಧ ಸದ್ಭಕ್ತಂಗೆ ಮತ್ರ್ಯ-ಕೈಲಾಸವೆಂಬ ತತ್ತು ಗೊತ್ತಿಲ್ಲ. ಆತ ವ್ರತಲಕ್ಷಣಮೂರ್ತಿ, ಏಲೇಶ್ವರಲಿಂಗವು ತಾನೆ.
--------------
ಏಲೇಶ್ವರ ಕೇತಯ್ಯ
ವರ್ಮವನರಿತು ನಿಮ್ಮ ಕಾಬವರು ಸುಲಭವೆ ಲೋಕದ್ಲ? ಲಿಂಗಭಕ್ತಿ ಜಂಗಮಭಕ್ತಿ ಗುರುಭಕ್ತಿ ಸುಲಭವೆ? ಲಿಂಗಭಕ್ತ ಪ್ರಭುದೇವ, ಜಂಗಮಭಕ್ತ ಬಸವಣ್ಣ. ಗುರು ಮೊದಲಾದ ಪ್ರಸಾದವ ಸರ್ವಕ್ಕೆ ಅನುಭಾವಿ ಚೆನ್ನಬಸವಣ್ಣ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಇಂತಿವರ ಪಾದಕ್ಕೆ ನಮೋ ನಮೋ ಎಂಬೆ.
--------------
ಸಿದ್ಧರಾಮೇಶ್ವರ
ಪರಮಜ್ಞಾನವೆಂಬ ಸಸಿಗೆ, ಗುರುಭಕ್ತಿ ಎಂಬ ಭೂಮಿಯ ಮಣ್ಣ ತಂದು ಪಾತೆಯ ಕಟ್ಟಿದೆ ಲಿಂಗಭಕ್ತಿ ಎಂಬ ಗೊಬ್ಬರವ ತುಂಬಿದೆ ಜಂಗಮಭಕ್ತಿ ಎಂಬ ಪರಮಾನಂದದ ಜಲವ ನೀಡಿದೆ. ಇಂತಿವರಿಂದ, ಭಕ್ತಿವೃಕ್ಷ ಫಲವ ಧರಿಸೆ ಗುಹೇಶ್ವರಲಿಂಗದಲ್ಲಿ ಮುಕ್ತನಾದೆನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ವಿಭೂತಿ ರುದ್ರಾಕ್ಷಿಯ ಧರಿಸಿ ಷಡಕ್ಷರಿಯಂ ಜಪಿಸಿ ಗುರು ಲಿಂಗ ಜಂಗಮದ ಆದ್ಯಂತವನರಿಯದೆ ಏನೆಂದು ಪೂಜಿಸುವಿರಿ, ಆರಾಧಿಸುವಿರಿ? ಅದೆಂತೆಂದಡೆ: ನೆಲದ ಮೇಲಣ ಶಿಲೆಯ ಕಲ್ಲುಕುಟಿಕ ಕಡಿದು ಖಂಡಿಸಿ ಹರದನ ಕೈಯಲ್ಲಿ ಕೊಟ್ಟು ಮಾರಿಸಿಕೊಂಡುದು ಲಿಂಗವಾದ ಪರಿ ಹೇಂಗೆ? ಸಕಲ ವ್ಯಾಪಾರ ಅಳುವಿಂಗೆ ಒಳಗಾಗಿ ತೊಡಿಸಿ ಬರೆಸಿಕೊಂಡುದು ಮಂತ್ರವಾದ ಪರಿ ಹೇಂಗೆ? ಅಜ್ಞಾನಿ ಮೃಗ ಪಶುವಿನ ಸಗಣಿಯ ಸುಟ್ಟುದು ವಿಭೂತಿಯಾದ ಪರಿ ಹೇಂಗೆ? ಪಂಚಭೂತಿಕದಿಂದ ಜನಿಸಿದ ವೃಕ್ಷದ ಫಲ ರುದ್ರಾಕ್ಷಿಯಾದ ಪರಿ ಹೇಂಗೆ? ಸಕಲ ಜೀವವೆರಸಿ ಕರಗಿದ ಆಸಿಯ ಜಲ ತೀರ್ಥವಾದ ಪರಿ ಹೇಂಗೆ? ಸಕಲ ಪ್ರಾಣಿಗಳಾಹಾರ ಹದಿನೆಂಟು ಧಾನ್ಯ ಕ್ಷುಧಾಗ್ನಿಯಲ್ಲಿ ಜನಿಸಿ ಪಚನವಾದುದು ಪ್ರಸಾದವಾದ ಪರಿ ಹೇಂಗೆ? ಅದೆಂತೆಂಡೆ: ನಿಗಮ ಶಾಸ್ತ್ರಕ್ಕೆ ಅಗಣಿತವಾದ ನಾದಬಿಂದುವಿಗೆ ನಿಲುಕದ ನಿತ್ಯತೃಪ್ತ ಪರಂಜ್ಯೋತಿಲಿಂಗದ ವೈಭವಕ್ಕೆ ಅಂಗವಾದುದು ಈ ಗುರುವಲ್ಲಾ ಎಂದು ಅರಿದು ಆ ಲಿಂಗದ ಚೈತನ್ಯ ಈ ಲಿಂಗವಲ್ಲಾ ಎಂದು ಅರಿದು ಮಾಡೂದು ತನು ಮನ ಧನ ವಂಚನೆಯಳಿದು. ಗುರುಭಕ್ತಿ ಸನ್ನಿಹಿತವಾಗಿ ಆ ಲಿಂಗದ ವದನ ಈ ಜಂಗಮವಲಾ ಎಂದರಿದು ಮಾಡೂದು ಆ ತನು ಮನ ಧನ ವಂಚನೆಯಳಿದು. ಜಂಗಮಭಕ್ತಿ ಸನ್ನಿಹಿತವಾಗಿ ಆ ಲಿಂಗದ ಕಾಯಕಾಂತಿಯ ಬೆಳಗಿನ ಐಶ್ವರಿಯಲ್ಲ ಎಂದರಿದು ಧರಿಸೂದು ಶ್ರೀ ವಿಭೂತಿಯ. ಆ ಲಿಂಗದ ಶೃಂಗಾರದ ಹರಭರಣವಲಾ ಎಂದರಿದು ಅಳವಡಿಸೂದು ರುದ್ರಾಕ್ಷಿಯನು. ಆ ಲಿಂಗದ ಉತ್ತುಂಗ ಕಿರಣಚರಣಾಂಬುಜವಲಾ ಎಂದು ಧರಿಸೂದು, ಕೊಂಬುದು ಪಾದೋದಕವನು. ಆ ಲಿಂಗದ ನಿತ್ಯಪದ ಸಂಯೋಗ ಶೇಷವ ತಾ ಎಂದರಿದು ಕೊಂಬುದು ಪ್ರಸಾದವನು. ಇಂತಿವೆಲ್ಲವನರಿದುದಕ್ಕೆ ಸಂತೋಷವಾಗಿ ಚರಿಸುವಾತನೆ ಸದ್ಭಕ್ತ. ಆತನ ಕಾಯ ಕರಣ ಪ್ರಾಣ ಭಾವಾದಿಗಳು ಸೋಂಕಿದೆಲ್ಲವೂ ಲಿಂಗದ ಸೋಂಕು, ಲಿಂಗದ ಕ್ರೀ, ಲಿಂಗದ ದಾಸೋಹ. ಇಂತೀ ತ್ರಿವಿಧವ ಸವೆದು ಅಳಿದುಳಿದ ಸದ್ಭಕ್ತನ ಶ್ರೀಪಾದಕ್ಕೆ ನಮೋ ನಮೋ ಎಂಬೆನು ಕಾಣಾ, ಬಸವಣ್ಣಪ್ರಿಯ ನಿಃಕಳಂಕ ಸೋಮೇಶ್ವರನೆ.
--------------
ನಿಃಕಳಂಕ ಚೆನ್ನಸೋಮೇಶ್ವರ
ಆಧಾರದಲ್ಲಿ ಗುರುಸಂಬಂಧವು. ಸ್ವಾಧಿಷಾ*ನದಲ್ಲಿ ಲಿಂಗಸಂಬಂಧವು. ಮಣಿಪೂರಕದಲ್ಲಿ ಜಂಗಮಸಂಬಂಧವು. ಅನಾಹತದಲ್ಲಿ ಪಾದೋದಕಸಂಬಂಧವು. ವಿಶುದ್ಧಿಯಲ್ಲಿ ಪ್ರಸಾದಸಂಬಂಧವು. ಆಜ್ಞೇಯದಲ್ಲಿ ಅರುಹುಸಂಬಂಧವು. ಈ ಅರುಹುವಿಡಿದು ಗುರುವ ಕಂಡು, ಲಿಂಗವ ನೋಡಿ, ಜಂಗಮವ ಕೂಡಿ, ಪಾದೋದಕ ಪ್ರಸಾದದ ಘನವ ಕಾಂಬುದೆ ಅಂತರಂಗವೆನಿಸುವುದು. ಈ ಅಂತರಂಗದ ವಸ್ತುವು ಭಕ್ತಹಿತಾರ್ಥವಾಗಿ ಬಹಿರಂಗಕ್ಕೆ ಬಂದಲ್ಲಿ, ಗುರುಭಕ್ತಿ, ಲಿಂಗಪೂಜೆ, ಜಂಗಮಾರಾಧನೆ, ಪಾದೋದಕಪ್ರಸಾದ ಸೇವನೆಯ ಪ್ರೇಮವುಳ್ಳಡೆ ಬಹಿರಂಗವೆನಿಸುವುದು. ಇಂತೀ ಅಂತರಂಗ ಬಹಿರಂಗದ ಮಾಟಕೂಟವ ಬಿಡದಿರ್ಪ ಪರಮಪ್ರಸಾದಿಗಳ ಒಳಹೊರಗೆ ಭರಿತನಾಗಿರ್ಪನು ನಮ್ಮ ಅಖಂಡೇಶ್ವರನು.
--------------
ಷಣ್ಮುಖಸ್ವಾಮಿ
ಗುರು ಅಳಿದಲ್ಲಿ ಗುರುಪಟ್ಟವೆಂದು ಕಟ್ಟಿ ಪರಮ ಗುರುವೆಂದು ಶರಣೆಂಬಲ್ಲಿ ಲಿಂಗಬಾಹ್ಯವಾಗಿ ಅಂಗವ ಹರಿದುಹೋದಲ್ಲಿ ಮತ್ತೊಂದು ಲಿಂಗ ಉಂಟೆಂದು ಕಟ್ಟಿಕೊಳ್ಳರೇತಕ್ಕೆ ? ಗುರು ಪೂರ್ವ, ಲಿಂಗ ಉತ್ತರವೆ ? ಗುರು ಆದಿ, ಲಿಂಗ ಅನಾದಿಯೇ ? ಇದು ಕಾರಣದಲ್ಲಿ ಗುರುಭಕ್ತಿ ಅರಿಬಿರಿದು, ಲಿಂಗಭಕ್ತಿ ಎತ್ತಲಾನು ಒಬ್ಬ ಜಂಗಮಭಕ್ತಿಗೆ ಸಂಗನಬಸವಣ್ಣನಲ್ಲದಿಲ್ಲ ಬ್ರಹ್ಮೇಶ್ವರಲಿಂಗ ಸಾಕ್ಷಿಯಾಗಿ.
--------------
ಬಾಹೂರ ಬೊಮ್ಮಣ್ಣ
ಅಂಗ ಆಚಾರಂಗವಾಗದನ್ನಕ್ಕರ, ಮನಸು ಉನ್ಮನಸಾಗದನ್ನಕ್ಕರ, ಪ್ರಾಣ ಚಿತ್ಪ್ರಾಣವಾಗದನ್ನಕ್ಕರ, ಭಾವ ಮಹಾನುಭಾವವಾಗದನ್ನಕ್ಕರ, ಜೀವ ಸಜ್ಜೀವವಾಗದನ್ನಕ್ಕರ, ಇಹಪರಕಾಂಕ್ಷೆ ಅಳಿಯದನ್ನಕ್ಕರ, ಎಂತು ಮಾಹೇಶ್ವರನಪ್ಪನಯ್ಯಾ? ಕಾಯದಲ್ಲಿ ಗುರುಭಕ್ತಿ ಕಾಣದನ್ನಕ್ಕರ, ಮನದಲ್ಲಿ ಲಿಂಗಭಕ್ತಿ ಕಾಣದನ್ನಕ್ಕರ, ಪ್ರಾಣದಲ್ಲಿ ಜಂಗಮಭಕ್ತಿ ಕಾಣದನ್ನಕ್ಕರ, ಭಾವದಲ್ಲಿ ಪ್ರಸಾದಭಕ್ತಿ ಕಾಣದನ್ನಕ್ಕರ ಎಂತು ಮಾಹೇಶ್ವರನಪ್ಪನಯ್ಯಾ ? ಗುರುನಿರಂಜನ ಚನ್ನಬಸವಲಿಂಗದಲ್ಲಿ ಶರಣರ ಸಂಗವಿಲ್ಲದನ್ನಕ್ಕರ ಎಂತು ಮಾಹೇಶ್ವರನಪ್ಪನಯ್ಯಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಭಾವ ಬಲಿಸಬೇಕಲ್ಲದೆ ವಿಭಾವ ಮಾಡಲುಂಟೆ? ಗುರುಭಕ್ತಿಯಲ್ಲಿ ಭಾವ ಬಲಿದುದೆ ಬ್ರಹ್ಮಜ್ಞಾನ; ಗುರುಭಕ್ತಿಯ್ಲ ಭಾವ ನಿಂದುದೆ ಸಹಜಸ್ಥಿತಿ ಗುರುಭಕ್ತಿ ಮರೆವ ಅರಿವ ಮರೆತುದೆ, ಕಪಿಲಸಿದ್ಧಮಲ್ಲಿಕಾರ್ಜುನದೇವನ ಮಹಾಮನೆ; ಇದು ಸತ್ಯ ಕೇಳಾ ಶಿವತಾಯಿಯೆ.
--------------
ಸಿದ್ಧರಾಮೇಶ್ವರ
ಷಡುಸ್ಥಳ ಸಮನಿಸದಯ್ಯಾ ಎಲ್ಲರಿಗೆ. ಷಡುವ್ರತ ಸಮನಿಸದಯ್ಯಾ ಎಲ್ಲರಿಗೆ. ಅರಿದರಿದು ಗುರುಭಕ್ತಿ, ಅರಿದರಿದು ಲಿಂಗಭಕ್ತಿ ಅರಿದರಿದು ಜಂಗಮಭಕ್ತಿ. ಅರಿದಯ್ಯಾ, ಸುಲಭವೆ ಎಲ್ಲರಿಗೆ? ಅವ್ಯಯ ಕರುಣ ಅಳವಟ್ಟವರಿಗಲ್ಲದೆ ಗುರು-ಚರ-ಇಷ್ಟತ್ರಯ ಅಳವಡದು. ವ್ರತವಾರರ್ಲ ನಿಪುಣತೆಯಯ್ಯಾ. ನಿನ್ನ ಕೃಪೆ ಎತ್ತಾನೊಬ್ಬರಿಗಲ್ಲವೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಗುರುಭಕ್ತಿ ಉಂಟು, ಲಿಂಗಭಕ್ತಿ ಉಂಟು. ಜಂಗಮಭಕ್ತಿ ಎತ್ತಲಾನೆ ಉಂಟು. ತನ್ನನರಿದು ಇದಿರ ಕಾಬ ಜ್ಞಾನಭಕ್ತಿ ಚೆನ್ನಬಸವಣ್ಣಂಗೆ ಸಾಧ್ಯವಾಯಿತ್ತು ನೋಡಾ. ಅದು ಅರಿದರುವಿಂಗೆ ಮುನ್ನವೆ ಕುರುಹಿಟ್ಟ ನಿಜ. ಆ ಗುಣ ಸಂಗನಬಸವಣ್ಣ ಬಂದ ಹಾದಿ, ಬ್ರಹ್ಮೇಶ್ವರಲಿಂಗದಲ್ಲಿಗಾಗಿ.
--------------
ಬಾಹೂರ ಬೊಮ್ಮಣ್ಣ
ತನ್ನ ಮನವನರಿದಿಪ್ಪುದು ಗುರುಭಕ್ತಿ. ತನ್ನ ಭಾವವನರಿದಿಪ್ಪುದು ಲಿಂಗಭಕ್ತಿ. ತ್ರಿವಿಧ ಮಲವ ಮರೆದಿಪ್ಪುದು ಜಂಗಮಭಕ್ತಿ. ಈ ಗುಣ ನಿಶ್ಚಯವಾಗಿ ನಿಂದುದು ಚನ್ನಬಸವಣ್ಣಪ್ರಿಯ ಚಂದೇಶ್ವರ ಲಿಂಗವನರಿದುದು.
--------------
ನುಲಿಯ ಚಂದಯ್ಯ
ವರ್ಮವನರಿತು ಅಯ್ಯಾ ನಿಮ್ಮ ಕಾಬವರು ಸುಲಭವೆ ಲೋಕದಲ್ಲಿ ಲಿಂಗಭಕ್ತಿ ಜಂಗಮಭಕ್ತಿ ಗುರುಭಕ್ತಿ ಸುಲಭವೆ? ಲಿಂಗಭಕ್ತ ಪ್ರಭುದೇವರು, ಜಂಗಮಭಕ್ತ ಬಸವಣ್ಣ, ಗುರು ಮೊದಲಾದ ಪ್ರಸಾದ ಸರ್ವಕ್ಕೂ, ಅನುಭವಿ ಚೆನ್ನಬಸವಣ್ಣ. ಕಪಿಲಸಿದ್ಧಮಲ್ಲಿಕಾರ್ಜುನಯ್ಯ, ಇವರ ಪಾದಕ್ಕೆ ನಮೋ ನಮೋಯೆಂಬೆ.
--------------
ಸಿದ್ಧರಾಮೇಶ್ವರ
ಗುರುಭಕ್ತಿ ಗುರುಭಜನೆಯಿಲ್ಲದವನ ಕೈಯಲು ಕರುಣವ ಪಡೆವ ನರಕಿಯ ನೆರೆಯಲ್ಲಿರಲಾಗದಯ್ಯಾ. ಶಿವಭಕ್ತಿ ಶಿವಭಜನೆಯಿಲ್ಲದವನ ಕೈಯಲಿ ಕರುಣವ ಪಡೆದ ಪಾಪಿಯ ಸಂಗವ ಮಾಡಲಾಗದು. ಶೈವಸನ್ಯಾಸಿ ಕಾಳಾಮುಖಿಯ ಗುರುವೆಂಬ ಅನಾಮಿಕನ ನೋಡಲಾಗದು, ಮಾತಾಡಿಸಲಾಗದು. ತಟ್ಟು ಮಟ್ಟಿಯನಿಟ್ಟ ಭ್ರಷ್ಟಂಗೆ ಶಿಶುವಾದ ಕಷ್ಟಭ್ರಷ್ಟನ ಮುಟ್ಟಲಾಗದು. ವಿಭೂತಿ ರುದ್ರಾಕ್ಷಿಗಳಲ್ಲಿ ಪ್ರೀತಿಯಿಲ್ಲದ ನರನ ಗುರುವೆಂಬ ಪಾತಕನ ಮಾತು ಬೇಡ. ಭಕ್ತರಲ್ಲದರಲ್ಲಿ ಭಕ್ತಿಯಿಲ್ಲದರಲ್ಲಿ ಭಕ್ತನಾದರೆ ಅವನ ಯುಕ್ತಿ ಬೇಡ. ಇವೆಲ್ಲವೂ ಇಲ್ಲದವರಲ್ಲಿ ಕರುಣವ ಹಡೆದು ಬಲುಹಿಂದ ನಡೆವವನ ಸೊಲ್ಲುಬೇಡ. ಇದು ಕಾರಣ ಕೂಡಲಚೆನ್ನಸಂಗಯ್ಯನಲ್ಲಿ ಸಮಯಕ್ಕೆ ಸಮನಿಸದವನು ನಮಗೆ ಬೇಡಯ್ಯಾ.
--------------
ಚನ್ನಬಸವಣ್ಣ
ಇನ್ನಷ್ಟು ... -->