ಅಥವಾ

ಒಟ್ಟು 22 ಕಡೆಗಳಲ್ಲಿ , 9 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಗುರುಸ್ವಾಮಿ ಕರುಣಿಸಿಕೊಟ್ಟ ಇಷ್ಟಬ್ರಹ್ಮವೇ ಬಸವಣ್ಣನೆನಗೆ. ಆ ಬಸವಣ್ಣನೆ ನವಲಿಂಗಸ್ವರೂಪವಾಗಿಪ್ಪನಯ್ಯ. ಅದು ಹೇಗೆಂದಡೆ- ತನುತ್ರಯಂಗಳಲ್ಲಿ ಇಷ್ಟ ಪ್ರಾಣ ಭಾವವೆಂದು ಇಂದ್ರಿಯಂಗಳಲ್ಲಿ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆನಿಸಿಪ್ಪನಯ್ಯ. ಅದು ಹೇಗೆಂದಡೆ- ನಾಸಿಕದಲ್ಲಿ ಅಂಗಲಿಂಗಸಂಗ ಚತುರ್ವಿಂಶತಿ ಸ್ವರೂಪನೊಳಕೊಂಡು ಆಚಾರಲಿಂಗವಾಗಿ ಎನ್ನ ನಾಸಿಕದಲ್ಲಿ ಇಂಬುಗೊಂಡನಯ್ಯ ಬಸವಣ್ಣ. ಜಿಹ್ವೆಯಲ್ಲಿ ಅಂಗಲಿಂಗಸಂಗ ಅಷ್ಟಾದಶ ಸ್ವರೂಪನೊಳಕೊಂಡು ಗುರುಲಿಂಗವಾಗಿ ಎನ್ನ ಜಿಹ್ವೆಯಲ್ಲಿ ಇಂಬುಗೊಂಡನಯ್ಯ ಬಸವಣ್ಣ. ನೇತ್ರದಲ್ಲಿ ಅಂಗಲಿಂಗಸಂಗ ಷೋಡಶ ಸ್ವರೂಪನೊಳಕೊಂಡು ಶಿವಲಿಂಗವಾಗಿ ಎನ್ನ ನೇತ್ರದಲ್ಲಿ ಇಂಬುಗೊಂಡನಯ್ಯ ಬಸವಣ್ಣ. ತ್ವಕ್ಕಿನಲ್ಲಿ ಅಂಗಲಿಂಗಸಂಗ ಸಪ್ತಾದಶ ಸ್ವರೂಪನೊಳಕೊಂಡು ಜಂಗಮಲಿಂಗವಾಗಿ ಎನ್ನ ತ್ವಕ್ಕಿನಲ್ಲಿ ಇಂಬುಗೊಂಡನಯ್ಯ ಬಸವಣ್ಣ. ಶ್ರೋತ್ರದಲ್ಲಿ ಅಂಗಲಿಂಗಸಂಗ ತ್ರೆ ೈದಶ ಸ್ವರೂಪನೊಳಕೊಂಡು ಪ್ರಸಾದಲಿಂಗವಾಗಿ ಎನ್ನ ಶ್ರೋತ್ರದಲ್ಲಿ ಇಂಬುಗೊಂಡನಯ್ಯ ಬಸವಣ್ಣ. ಹೃದಯದಲ್ಲಿ ಅಂಗಲಿಂಗಸಂಗ ತ್ರಯೋದಶ ಸ್ವರೂಪವನೊಳಕೊಂಡು ಮಹಾಲಿಂಗವಾಗಿ ಎನ್ನ ಹೃದಯದಲ್ಲಿ ಇಂಬುಗೊಂಡನಯ್ಯ ಬಸವಣ್ಣ. ಇಂತೀ ಬಸವಣ್ಣನೆ ಅಂಗ ಲಿಂಗ ಹಸ್ತ ಮುಖ ಶಕ್ತಿ ಭಕ್ತಿ ಪದಾರ್ಥ ಪ್ರಸಾದ. ಇಂತಿವನರಿದು ಅರ್ಪಿಸಿದೆನಾಗಿ ಎನ್ನ ತನುವಿನಲ್ಲಿ ಶುದ್ಧಪ್ರಸಾದವಾಗಿ ಇಂಬುಗೊಂಡನಯ್ಯ ಬಸವಣ್ಣ. ಎನ್ನ ಮನದಲ್ಲಿ ಸಿದ್ಧಪ್ರಸಾದವಾಗಿ ಇಂಬುಗೊಂಡನಯ್ಯ ಬಸವಣ್ಣ. ಎನ್ನ ಪ್ರಾಣದಲ್ಲಿ ಪ್ರಸಿದ್ಧಪ್ರಸಾದವಾಗಿ ಇಂಬುಗೊಂಡನಯ್ಯ ಬಸವಣ್ಣ. ಇಂತೀ ಶುದ್ಧಸಿದ್ಧ ಪ್ರಸಿದ್ಧ ಪ್ರಸಾದದೊಳಗೆ ಮುಳುಗಿದ್ದ ಭೇದವನರಿದು ಬೋಳಬಸವೇಶ್ವರನ ಅನುಭಾವ ಸಂಪರ್ಕದಿಂದ ಸಿದ್ಧೇಶ್ವರನ ಘನಪ್ರಕಾಶ ಸಾಧ್ಯವಾಯಿತ್ತಾಗಿ ಪರಂಜ್ಯೋತಿ ಮಹಾಲಿಂಗಗುರು ಸಿದ್ದಲಿಂಗಪ್ರಭುವಿನಲ್ಲಿ ಎರಡರಿಯದಿರ್ದೆನಯ್ಯ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಶಿವ ಶಿವ ! ಪರಶಿವಮೂರ್ತಿ ಮಹಾಲಿಂಗವು ಕರುಣಿಸಿದ ಕರುಣದಿಂದ ನಾನಂಜೆ ಅಂಜೆನು. ವಾಙ್ಮನೋತೀತವು ಲಿಂಗವಾಗಿ ಅಂಗದ ಮೇಲೆ ನಿರಂತರವಾಗಿ ಸನ್ನಹಿತವಾಗಿ ಅಂಗಲಿಂಗ ಗುರುಲಿಂಗ ಏಕವಾಗಿ [ಪ್ರಾ]ಣಲಿಂಗವಾದನಾಗಿ [ಪ್ರಾ]ಣಲಿಂಗ. ಜಿಹ್ವೆಯಲ್ಲಿ ಮಂತ್ರಮಯ ಗುರುಲಿಂಗವಾಗಿ ಬಿಜಯಂಗೈದನಾಗಿ ಜಿಹ್ವೆಲಿಂಗ. ಕಂಗಳಲ್ಲಿ ಶಿವಲಿಂಗಮೂರ್ತಿಯಂ ತುಂಬಿದನಾಗಿ ಕಂಗಳು ಲಿಂಗ. ತ್ವಕ್ಕಿನಲ್ಲಿ ಜಂಗಮಲಿಂಗಮೂರ್ತಿಯಂ ತುಂಬಿದನಾಗಿ ತ್ವಕ್ಕು ಲಿಂಗ. ಕಿವಿಗಳಲ್ಲಿ ಲಿಂಗಮಹಾತ್ಮೆಯ ಶ್ರುತಿ ಪುರಾಣ ಪುರಾತರ ವಚನಂಗಳ ತುಂಬಿದನಾಗಿ ಶ್ರೋತ್ರ ಲಿಂಗವು. ಶಿವನ ಶ್ರೀಪಾದಕಮಲಪ್ರಸಾದವ ವಾಸಿಸುವಂತೆ ಮಾಡಿದನಾಗಿ ಘ್ರಾಣಲಿಂಗವು. ಲಿಂಗವ ನಿರಂತರ ಸ್ಪರ್ಶವ ಮಾಡುವಂತೆ ಮಾಡಿದನಾಗಿ ಹಸ್ತ ಲಿಂಗವಾದವು. ಲಿಂಗವನೆ ಭಾವಿಸುವಂತೆ ಮಾಡಿದನಾಗಿ ಭಾವ ಲಿಂಗವು. ಮನದಲ್ಲಿ ನೆನಹು ಭರಿತವಾಗಿ ಮನ ಲಿಂಗವು. ಸುವಿಚಾರ ಸಂಪೂರ್ಣವ ಗ್ರಹಿಸಿತ್ತಾಗಿ ಬುದ್ಧಿ ಲಿಂಗವು. ನಿಶ್ಚಯಪದವ ಹಿಡಿಯಿತ್ತಾಗಿ ಅಹಂಕಾರ ಲಿಂಗವು. ನಿರಂತರ ಮರೆಯದಂತೆ ಮಾಡಿದನಾಗಿ ಚಿತ್ತ ಲಿಂಗವು. ಇಂತು ಅಂತರಂಗ ಬಹಿರಂಗ ಲಿಂಗ, ಸರ್ವಾಂಗಲಿಂಗವ ಮಾಡಿ, ಸದ್ಗುರುಲಿಂಗವಾಗಿ ಜಂಗಮಲಿಂಗವಾಗಿ ಪ್ರಾಣಲಿಂಗವಾಗಿ ಪ್ರಸಾದಲಿಂಗವಾಗಿ ಪ್ರಸಾದವನಿಕ್ಕಿ ಸಲಹಿದನು. ಈ ಮಹಾಘನಪರಿಣಾಮವ ಶಿವ! ಶಿವ ನೀನೇ ಬಲ್ಲೆ ಶಿವ ಶಿವ! ಮಹಾದೇವ, ಶಿವ ಶಿವ! ಮಹಾದೇವ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ನೀನೇ ಬಲ್ಲೆ.
--------------
ಉರಿಲಿಂಗಪೆದ್ದಿ
ಎನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡನಯ್ಯಾ, ಬಸವಣ್ಣನು. ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡನಯ್ಯಾ, ಚನ್ನಬಸವಣ್ಣನು ಎನ್ನ ನೇತ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡನಯ್ಯಾ, ಘಟ್ಟಿವಾಳ ಮುದ್ದಯ್ಯನು. ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡನಯ್ಯಾ, ಸಿದ್ಧರಾಮಯ್ಯನು. ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡನಯ್ಯಾ, ಮರುಳಶಂಕರದೇವರು, ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡನಯ್ಯಾ, ಪ್ರಭುದೇವರು. ಎನ್ನ ಸರ್ವಾಂಗದಲ್ಲಿ ಮೂರ್ತಿಗೊಂಡರು ಪ್ರಮಥರು. ಗವರೇಶ್ವರಲಿಂಗದಲ್ಲಿ ಸುಖಿಯಾಗಿ ಬದುಕಿದೆನು ಕಾಣಾ, ಮಡಿವಾಳ ಮಾಚಯ್ಯ.
--------------
ಮೇದರ ಕೇತಯ್ಯ
ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ ಬಸವಣ್ಣ. ಎನ್ನ ಸೂಕ್ಷ್ಮತನುವಿಂಗೆ ಪ್ರಾಣಲಿಂಗವಾದಾತ ಬಸವಣ್ಣ. ಎನ್ನ ಕಾರಣತನುವಿಂಗೆ ಭಾವಲಿಂಗವಾದಾತ ಬಸವಣ್ಣ. ಎನ್ನ ದೃಕ್ಕಿಂಗೆ ಇಷ್ಟಲಿಂಗವಾದಾತ ಬಸವಣ್ಣ. ಎನ್ನ ಮನಕ್ಕೆ ಪ್ರಾಣಲಿಂಗವಾದಾತ ಬಸವಣ್ಣ. ಎನ್ನ ಭಾವಕ್ಕೆ ತೃಪ್ತಿಲಿಂಗವಾದಾತ ಬಸವಣ್ಣ. ಎನ್ನ ನಾಸಿಕಕ್ಕೆ ಆಚಾರಲಿಂಗವಾದಾತ ಬಸವಣ್ಣ. ಎನ್ನ ಜಿಹ್ವೆಗೆ ಗುರುಲಿಂಗವಾದಾತ ಬಸವಣ್ಣ. ಎನ್ನ ನೇತ್ರಕ್ಕೆ ಶಿವಲಿಂಗವಾದಾತ ಬಸವಣ್ಣ. ಎನ್ನ ತ್ವಕ್ಕಿಂಗೆ ಜಂಗುರುಲಿಂಗವಾದಾತ ಬಸವಣ್ಣ. ಎನ್ನ ಶ್ರೋತ್ರಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ. ಎನ್ನ ಹೃದಯಕ್ಕೆ ಮಹಾಲಿಂಗವಾದಾತ ಬಸವಣ್ಣ. ಎನ್ನ ಸುಚಿತ್ತವೆಂಬ ಹಸ್ತಕ್ಕೆ ಆಚಾರಲಿಂಗವಾದಾತ ಬಸವಣ್ಣ. ಎನ್ನ ಸುಬುದ್ಧಿಯೆಂಬ ಹಸ್ತಕ್ಕೆ ಗುರುಲಿಂಗವಾದಾತ ಬಸವಣ್ಣ. ಎನ್ನ ನಿರಹಂಕಾರವೆಂಬ ಹಸ್ತಕ್ಕೆ ಶಿವಲಿಂಗವಾದಾತ ಬಸವಣ್ಣ. ಎನ್ನ ಸುಮನವೆಂಬ ಹಸ್ತಕ್ಕೆ ಜಂಗಮಲಿಂಗವಾದಾತ ಬಸವಣ್ಣ. ಎನ್ನ ಸುಜ್ಞಾನವೆಂಬ ಹಸ್ತಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ. ಎನ್ನ ಸದ್ಭಾವವೆಂಬ ಹಸ್ತಕ್ಕೆ ಮಹಾಲಿಂಗವಾದಾತ ಬಸವಣ್ಣ. ಎನ್ನ ಆಧಾರಚಕ್ರದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಸ್ವಾದಿಷ್ಠಾನಚಕ್ರದಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಮಣಿಪೂರಕಚಕ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಅನಾಹತಚಕ್ರದಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ವಿಶುದ್ಧಿ ಚಕ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಆಜ್ಞಾಚಕ್ರದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಬ್ರಹ್ಮರಂಧ್ರದಲ್ಲಿ ನಿಃಕಲಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಶಿಖಾಚಕ್ರದಲ್ಲಿ ಶೂನ್ಯಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಪಶ್ಚಿಮಚಕ್ರದಲ್ಲಿ ನಿರಂಜನಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ವದನಕ್ಕೆ ಓಂಕಾರವಾದಾತ ಬಸವಣ್ಣ. ಎನ್ನ ಬಲದ ಭುಜಕ್ಕೆ ನಕಾರವಾದಾತ ಬಸವಣ್ಣ. ಎನ್ನ ಎಡದ ಭುಜಕ್ಕೆ ಮಕಾರವಾದಾತ ಬಸವಣ್ಣ. ಎನ್ನ ಒಡಲಿಂಗೆ ಶಿಕಾರವಾದಾತ ಬಸವಣ್ಣ. ಎನ್ನ ಬಲದ ಪಾದಕ್ಕೆ ವಕಾರವಾದಾತ ಬಸವಣ್ಣ. ಎನ್ನ ಎಡದ ಪಾದಕ್ಕೆ ಯಕಾರವಾದಾತ ಬಸವಣ್ಣ. ಎನ್ನಾ ಆಪಾದಮಸ್ತಕ ಪರಿಯಂತರ ಮಂತ್ರರೂಪಕಸಂಬಂಧವಾದಾತ ಬಸವಣ್ಣ. ಎನ್ನ ನಾದಕ್ಕೆ ಆಕಾರವಾದಾತ ಬಸವಣ್ಣ. ಎನ್ನ ಬಿಂದುವಿಂಗೆ ಉಕಾರವಾದಾತ ಬಸವಣ್ಣ. ಎನ್ನ ಕಳೆಗೆ ಮಕಾರವಾದಾತ ಬಸವಣ್ಣ. ಎನ್ನ ರುದ್ಥಿರಕ್ಕೆ ನಕಾರವಾದಾತ ಬಸವಣ್ಣ. ಎನ್ನ ಮಾಂಸಕ್ಕೆ ಮಕಾರವಾದಾತ ಬಸವಣ್ಣ. ಎನ್ನ ಮೇಧಸ್ಸಿಂಗೆ ಶಿಕಾರವಾದಾತ ಬಸವಣ್ಣ. ಎನ್ನ ಅಸ್ಥಿಗೆ ವಕಾರವಾದಾತ ಬಸವಣ್ಣ. ಎನ್ನ ಮಜ್ಜೆಗೆ ಯಕಾರವಾದಾತ ಬಸವಣ್ಣ. ಎನ್ನ ಸರ್ವಾಂಗಕ್ಕೆ ಓಂಕಾರವಾದಾತ ಬಸವಣ್ಣ. ಇಂತು ಬಸವಣ್ಣನೆ ಪರಿಪೂರ್ಣನಾಗಿ, ಬಸವಣ್ಣನೆ ಪ್ರಾಣವಾಗಿ, ಬಸವಣ್ಣನೆ ಅಂಗವಾಗಿ, ಬಸವಣ್ಣನೆ ಲಿಂಗವಾದ ಕಾರಣ, ನಾನು ಬಸವಣ್ಣಾ ಬಸವಣ್ಣಾ ಬಸವಣ್ಣಾ ಎಂದು ಬಯಲಾದೆನು ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಪರಶಿವನಾಮಾಮೃತವೆಂಬ ಪಂಚಾಕ್ಷರವನು ಅವ್ಯಕ್ತಮುಖದಿಂದೆ ಸ್ವೀಕರಿಸಿದೆನಾಗಿ, ಎನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ತೋರುತಿರ್ಪುದು. ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ತೋರುತಿರ್ಪುದು. ಎನ್ನ ನೇತ್ರದಲ್ಲಿ ಶಿವಲಿಂಗವಾಗಿ ತೋರುತಿರ್ಪುದು. ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ತೋರುತಿರ್ಪುದು. ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ತೋರುತಿರ್ಪುದು. ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ತೋರುತಿರ್ಪುದು. ಎನ್ನ ಬ್ರಹ್ಮಸ್ಥಾನದಲ್ಲಿ ನಿಷ್ಕಲಲಿಂಗವಾಗಿ ತೋರುತಿರ್ಪುದು. ಎನ್ನ ಶಿಖಾಗ್ರದಲ್ಲಿ ನಿಶ್ಶೂನ್ಯಲಿಂಗವಾಗಿ ತೋರುತಿರ್ಪುದು. ಎನ್ನ ಪಶ್ಚಿಮದಲ್ಲಿ ನಿರಂಜನಲಿಂಗವಾಗಿ ತೋರುತಿರ್ಪುದು. ಎನ್ನ ಸರ್ವಾಂಗದಲ್ಲಿ ತೋರಿ ತನ್ನಂತೆ ಮಾಡಿಕೊಂಡಿರ್ಪುದು ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯ, ನಿನ್ನ ಷಟ್ಚಕ್ರಂಗಳಲ್ಲಿ ಅನಾದಿ ನಿಷ್ಕಳಂಕ ಚಿದ್ಘನ ಇಷ್ಟಮಹಾಲಿಂಗವೆ ಷಡ್ವಿಧಲಿಂಗವಾಗಿ ನೆಲಸಿರ್ಪರು ನೋಡ, ಅದೆಂತೆಂದಡೆ: ಆಧಾರಚಕ್ರದ ನಾಲ್ಕೆಸಳಮಧ್ಯದಲ್ಲಿ ನಕಾರಮಂತ್ರಮೂರ್ತಿ ಆಚಾರಲಿಂಗವಾಗಿ ನೆಲಸಿರ್ಪರು ನೋಡ. ಸ್ವಾಧಿಷಾ*ನಚಕ್ರದ ಆರೆಸಳಮಧ್ಯದಲ್ಲಿ ಮಕಾರಮಂತ್ರಮೂರ್ತಿ ಗುರುಲಿಂಗವಾಗಿ ನೆಲಸಿರ್ಪರು ನೋಡ. ಮಣಿಪೂರಕಚಕ್ರದ ಹತ್ತೇಸಳಮಧ್ಯದಲ್ಲಿ ಶಿಕಾರಮಂತ್ರಮೂರ್ತಿ ಶಿವಲಿಂಗವಾಗಿ ನೆಲಸಿರ್ಪರು ನೋಡ. ಅನಾಹತಚಕ್ರದ ಹನ್ನೆರಡೆಸಳಮಧ್ಯದಲ್ಲಿ ವಕಾರಮಂತ್ರಮೂರ್ತಿ ಚರಲಿಂಗವಾಗಿ ನೆಲಸಿರ್ಪರು ನೋಡ. ವಿಶುದ್ಧಿಚಕ್ರದ ಹದಿನಾರೆಸಳಮಧ್ಯದಲ್ಲಿ ಯಕಾರಮಂತ್ರಮೂರ್ತಿ ಪ್ರಸಾದಲಿಂಗವಾಗಿ ನೆಲಸಿರ್ಪರು ನೋಡ. ಆಜ್ಞಾಚಕ್ರದ ಎರಡೆಸಳ ಮಧ್ಯದಲ್ಲಿ ಓಂಕಾರಮಂತ್ರಮೂರ್ತಿ ಮಹಾಲಿಂಗವಾಗಿ ನೆಲಸಿರ್ಪರು ನೋಡ. ಇಂತು ಷಟ್ಚಕ್ರಂಗಳಮಧ್ಯದಲ್ಲಿ ನೆಲಸಿ, ನಿನ್ನ ಷಡ್ವಿಧಭೋಗಂಗಳ ಕೈಕೊಂಡು, ಆ ಪರಿಣಾಮವ ನಿನಗೆ ಸಂತೃಪ್ತಿಯ ಮಾಡಿ, ಶರಣಸತಿ ಲಿಂಗಪತಿ ಭಾವದಿಂದ ಮೇಲುಗಿರಿಮಂಟಪದ ನವರತ್ನ ಖಚಿತ ಸಹಸ್ರದಳ ಪದ್ಮಯುಕ್ತವಾದ ಪರಿಯಂಕದ ಮೇಲೆ ಲಿಂಗಾನುಭಾವರತಿಸುಖಾನಂದದಿಂದ ಶೋಭಿಸುವಂಥದೆ ಆಧ್ಯಾತ್ಮ ದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕಮೂರ್ತಿ ಚೆನ್ನಬಸವರಾಜೇಂದ್ರನು ನಿರ್ಲಜ್ಜ ಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಗುರುನಿರಂಜನ ಪರಮಕಟಾಕ್ಷಮಣಿಯೆನಗೆ ಸರ್ವಾಚಾರ ಸಂಪತ್ತ ತೋರ ಬಂದುದು ನೋಡಾ. ಆಚಾರಲಿಂಗವಾಗಿ ಶ್ರದ್ಧಾಭಕ್ತಿಯೊಳು ಸುಖಿಸಿ ಎನ್ನ ಸುಚಿತ್ತಹಸ್ತವ ಕೊಳಬಂದ ನೋಡಾ. ಗುರುಲಿಂಗವಾಗಿ ನೈಷಿ*ಕಭಕ್ತಿಯೊಳು ಪರಿಣಾಮಿಸಿ ಎನ್ನ ಸುಬುದ್ಧಿಹಸ್ತವ ಕೊಳಬಂದುದು ನೋಡಾ. ಶಿವಲಿಂಗವಾಗಿ ಸಾವಧಾನಭಕ್ತಿಯೊಳು ಆನಂದಿಸಿ ಎನ್ನ ನಿರಹಂಕಾರಹಸ್ತವ ಕೊಳಬಂದುದು ನೋಡಾ. ಜಂಗಮಲಿಂಗವಾಗಿ ಅನುಭಾವಭಕ್ತಿಯೊಳು ಸಂತೋಷಬಟ್ಟು ಎನ್ನ ಸುಮನಹಸ್ತವ ಕೊಳಬಂದುದು ನೋಡಾ. ಪ್ರಸಾದಲಿಂಗವಾಗಿ ಆನಂದಭಕ್ತಿಯೊಳು ಹರುಷಬಟ್ಟು ಎನ್ನ ಸುಜ್ಞಾನಹಸ್ತವ ಕೊಳಬಂದುದು ನೋಡಾ. ಮಹಾಲಿಂಗವಾಗಿ ಸಮರಸಭಕ್ತಿಯೊಳು ತೃಪ್ತಿಬಟ್ಟು ಎನ್ನ ಸದ್ಭಾವಹಸ್ತವ ಕೊಳಬಂದುದು ನೋಡಾ. ಇಂತು ಷಡುಲಿಂಗವಾಗಿ ಷಟ್‍ಸ್ಥಲವನ್ನಿತ್ತು ಷಡುಭಕ್ತಿಯೊಳಾನಂದಿಸಿ ನಿರಂಜನ ಚನ್ನಬಸವಲಿಂಗ ಸಂಬಂಧಿಯೆನಿಸಬಂದುದು ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯ ! ಸಪ್ತಧಾತುವಿನ ಸಪ್ತವ್ಯಸನವನಳಿದು, ಜೀವನ ಸಂಕಲ್ಪ_ವಿಕಲ್ಪ ಆಸೆ_ಆಮಿಷಂಗಳ ಹೊಟ್ಟುಮಾಡಿ ತೂರಿ, ಹಿಂದೆ ಹೇಳಿದ ಭಕ್ತಸ್ಥಲದಲ್ಲಿ ನಿಂದು ನಿರ್ವಂಚಕನಾಗಿ ಪಾತಕಸೂತಕಗಳ ಪರಿದು ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಮೂರ್ತಿಯಾಗಿ ಪ್ರಜ್ವಲಿಸುವ ಸದ್ವೀರಮಾಹೇಶ್ವರನಂತರಂಗದಲ್ಲಿ ಪರಮಾನಂದ ಲೀಲೆಯಿಂ ಇಪ್ಪತ್ತೈದು ತತ್ತ್ವಂಗಳನೊಳಕೊಂಡು ಹದಿನೆಂಟು ಸ್ಥಲಂಗಳ ಗರ್ಭೀಕರಿಸಿಕೊಂಡು, ಎರಡು ಸಾವಿರದ ಐನೂರ ತೊಂಬತ್ತೆರಡು ಮಂತ್ರಮಾಲೆಗಳ ಪಿಡಿದುಕೊಂಡು ಇಪ್ಪತ್ತುನಾಲ್ಕು ಸಕೀಲಗರ್ಭದಿಂ, ಗುರುಮುಟ್ಟಿ ಗುರುವಾದ ಗುರುವಿಂಗೆ ಎಂಬ ಎರಡೆಂಬತ್ತೆಂಟು ಕೋಟಿ ವಚನಾನುಭಾವವ ಸ್ವಾನುಭಾವಜ್ಞಾನದಿಂದರಿದು, ಪುಷ್ಪ ಪರಿಮಳ [ಜ್ಯೋತಿ] ಪ್ರಕಾಶದಂತೆ ಏಕರೂಪಿನಿಂದ ಮಂತ್ರಮೂರ್ತಿ ಗುರುಲಿಂಗವಾಗಿ [ನೆಲಸಿರ್ಪುದು] ನೋಡ ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಅಖಂಡಬೆಳಗಿನೊಳಗಿರ್ದ ಅನುಪಮ ಶರಣನ ಕರಸ್ಥಲದಲ್ಲಿ ಕಾಣಿಸಿಕೊಂಬ ಜ್ಯೋತಿರ್ಮಯಲಿಂಗವು ತನ್ನ ವಿನೋದಕಾರಣ ಆ ಶರಣನ ಶ್ರದ್ಧೆಗೆ ಆಚಾರಲಿಂಗವಾಗಿ, ನಿಷೆ*ಗೆ ಗುರುಲಿಂಗವಾಗಿ, ಸಾವಧಾನಕ್ಕೆ ಶಿವಲಿಂಗವಾಗಿ, ಅನುಭಾವಕ್ಕೆ ಪ್ರಾಣಲಿಂಗವಾಗಿ, ತನ್ನ ಬೆಳಗಿನೊಳಡಗಿಸಿಕೊಂಡು ಆನಂದಭಕ್ತಿಯ ನೋಡುತಿರ್ದ ಗುರುನಿರಂಜನ ಚನ್ನಬಸವಲಿಂಗ ತಾನು ತಾನಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಚಾರಭಕ್ತ ಹನ್ನೆರಡು ಪ್ರಕಾರವನೊಳಕೊಂಡು ಆಚಾರಲಿಂಗವಾಗಿ ಲಿಂಗದ ಪೀಠದಲ್ಲಿ ಸಂಯೋಗವಾದನಯ್ಯ ಬಸವಣ್ಣ. ಗೌರವಮಾಹೇಶ್ವರ ಹನ್ನೆರಡು ಪ್ರಕಾರವನೊಳಕೊಂಡು ಗುರುಲಿಂಗವಾಗಿ ಲಿಂಗದ ಮಧ್ಯದಲ್ಲಿ ಸಂಯೋಗವಾದನಯ್ಯ ಬಸವಣ್ಣ. ಲೈಂಗಿಪ್ರಸಾದಿ ಹನ್ನೆರಡು ಪ್ರಕಾರವನೊಳಕೊಂಡು ಶಿವಲಿಂಗವಾಗಿ ಲಿಂಗದ ವರ್ತುಳದಲ್ಲಿ ಸಂಯೋಗವಾದನಯ್ಯ ಬಸವಣ್ಣ. ಚರಪ್ರಾಣಲಿಂಗಿ ಹನ್ನೆರಡು ಪ್ರಕಾರವನೊಳಕೊಂಡು ಜಂಗಮಲಿಂಗವಾಗಿ ಲಿಂಗದ ಗೋಮುಖದಲ್ಲಿ ಸಂಯೋಗವಾದನಯ್ಯ ಬಸವಣ್ಣ. ಪ್ರಸಾದಶರಣ ಹನ್ನೆರಡು ಪ್ರಕಾರವನೊಳಕೊಂಡು ಮಹಾಲಿಂಗವಾಗಿ ಲಿಂಗದ ಗೋಳಕದಲ್ಲಿ ಸಂಯೋಗವಾದನಯ್ಯ ಬಸವಣ್ಣ. ಇಂತಪ್ಪ ಬಸವಣ್ಣನೆ ಸಚ್ಚಿದಾನಂದ ಬ್ರಹ್ಮವು. ಆ ಸಚ್ಚಿದಾನಂದ ಬ್ರಹ್ಮವೆ ತನ್ನ ಲೀಲೆದೋರಿ ಒಂದು ಎರಡು ಮೂರು ಆರು ಒಂಬತ್ತು ಹದಿನೆಂಟು ಮೂವತ್ತಾರು ನೂರೊಂದು ನೂರೆಂಟು ಇನ್ನೂರಹದಿನಾರು ಮಿಗೆ ಮಿಗೆ ತೋರುವ ಬ್ರಹ್ಮವೆ ಬಸವಣ್ಣನು. ಈ ಬಸವಣ್ಣನೆ ಎನಗೆ ಇಷ್ಟಬ್ರಹ್ಮ. ಈ ಇಷ್ಟಬ್ರಹ್ಮದಲ್ಲಿ ಷೋಡಶ ದ್ವಿಶತ ಅಷ್ಟಾಶತ ಏಕಶತ ಛತ್ತೀಸ ಅಷ್ಟಾದಶ ನವ ಇಂತಿವೆಲ್ಲವು ಆರರೊಳಗಡಗಿ ಆರು ಮೂರರೊಳಗಡಗಿ ಆ ಮೂರು ಲಿಂಗದ ಗೋಳಕ ಗೋಮುಖ ವೃತ್ತಾಕಾರದಲ್ಲಿ ಅಡಗಿದ ಭೇದವನು ಸಿದ್ಧೇಶ್ವರನು ಎನಗರುಹಿದ ಕಾರಣ ದ್ವೆ ೈತಾದ್ವೆ ೈತವೆಲ್ಲವು ಸಂಹಾರವಾಗಿ ಹೋದವು. ನಾನು ದ್ವೆ ೈತಾದ್ವೆ ೈತವ ಮೀರಿ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದದೊಳಗೆ ಸತ್ತು ಪರಂಜ್ಯೋತಿ ಮಹಾಲಿಂಗಗುರು ಸಿದ್ಧ[ಲಿಂಗ] ಪ್ರಭುವಿನಲ್ಲಿ ಕೆಟ್ಟು ಬಟ್ಟಬಯಲಾದೆನಯ್ಯಾ, ಬೋಳಬಸವೇಶ್ವರ ನಿಮ್ಮಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಘನಮಹಿಮರನುಭಾವದ ಬೆಳಗೆನ್ನ ಕರಸ್ಥಲದಲ್ಲಿ ಇಷ್ಟಲಿಂಗವಾಗಿ ಅನಿಷ್ಟವ ನಷ್ಟಮಾಡಿ ಥಳಥಳನೆ ಹೊಳೆಯುತ್ತಿದೆ ನೋಡಾ. ಚಿನುಮಯ ಶರಣರನುಭಾವದ ಬೆಳಗೆನ್ನ ಮನಸ್ಥಲದಲ್ಲಿ ಪ್ರಾಣಲಿಂಗವಾಗಿ ಪ್ರಾಣನ ಪ್ರಕೃತಿಯ ದಹಿಸಿ ಥಳಥಳನೆ ಬೆಳಗುತ್ತಿದೆ ನೋಡಾ. ಸತ್ಪುರುಷರನುಭಾವದ ಬೆಳಗೆನ್ನ ಭಾವಸ್ಥಲದಲ್ಲಿ ಭಾವಲಿಂಗವಾಗಿ ಸಂಸಾರ ವಿಷಯಭ್ರಾಂತಿಯನಳಿಸಿ ಥಳಥಳನೆ ಹೊಳೆಯುತ್ತಿದೆ ನೋಡಾ. ನಿಜಪ್ರಕಾಶ ಶರಣರನುಭಾವದ ಬೆಳಗೆನ್ನ ಘ್ರಾಣದಲ್ಲಿ ಆಚಾರಲಿಂಗವಾಗಿ ಅನಾಚಾರವನುರುಹಿ ಥಳಥಳನೆ ಹೊಳೆಯುತ್ತಿದೆ ನೋಡಾ. ಸತ್ಯಶರಣರನುಭಾವದ ಬೆಳಗೆನ್ನ ಜಿಹ್ವೆಯ ಸ್ಥಲದಲ್ಲಿ ಗುರುಲಿಂಗವಾಗಿ ಅನೃತವ ನಾಶಮಾಡಿ ಥಳಥಳನೆ ಹೊಳೆಯುತ್ತಿದೆ ನೋಡಾ. ಅನುಪಮ ಶರಣರನುಭಾವದ ಬೆಳಗೆನ್ನ ನಯನ ಸ್ಥಲದಲ್ಲಿ ಶಿವಲಿಂಗವಾಗಿ ದುಶ್ಚಲನೆಯ ದಹಿಸಿ ಥಳಥಳನೆ ಹೊಳೆಯುತ್ತಿದೆ ನೋಡಾ. ಪರಿಪೂರ್ಣ ಶರಣರನುಭಾವದ ಬೆಳಗೆನ್ನ ತ್ವಕ್ಕಿನ ಸ್ಥಲದಲ್ಲಿ ಜಂಗಮಲಿಂಗವಾಗಿ ಭಿನ್ನಭಾವದ ಸೋಂಕನುರುಹಿ ಥಳಥಳನೆ ಹೊಳೆಯುತ್ತಿದೆ ನೋಡಾ. ಪರಮಾನಂದ ಶಣರನುಭಾವದ ಬೆಳಗೆನ್ನ ಶ್ರೋತ್ರಸ್ಥಲದಲ್ಲಿ ಪ್ರಸಾದಲಿಂಗವಾಗಿ ದುಃಶಬ್ದರತಿಯ ನಷ್ಟವ ಮಾಡಿ ಥಳಥಳನೆ ಹೊಳೆಯುತ್ತಿದೆ ನೋಡಾ. ಪರಮಶಾಂತ ಶರಣರನುಭಾವದ ಬೆಳಗೆನ್ನ ಹೃದಯಸ್ಥಲದಲ್ಲಿ ಮಹಾಲಿಂಗವಾಗಿ ಭಿನ್ನದರಿವನುರುಹಿ ಥಳಥಳನೆ ಹೊಳೆಯುತ್ತಿದೆ ನೋಡಾ. ನಿರುಪಮ ಶರಣರನುಭಾವದ ಬೆಳಗೆನ್ನ ಬ್ರಹ್ಮರಂಧ್ರದಲ್ಲಿ ನಿಃಕಲಲಿಂಗವಾಗಿ ಥಳಥಳನೆ ಹೊಳೆಯುತ್ತಿದೆ ನೋಡಾ. ನಿರ್ಮಾಯ ಶರಣರನುಭಾವದ ಬೆಳಗೆನ್ನ ಉನ್ಮನಿಯಲ್ಲಿ ಶೂನ್ಯಲಿಂಗವಾಗಿ ಥಳಥಳನೆ ಹೊಳೆಯುತ್ತಿದೆ ನೋಡಾ. ನಿರವಯ ಶರಣರನುಭಾವದ ಬೆಳಗೆನ್ನ ಪಶ್ಚಿಮದಲ್ಲಿ ನಿರಂಜನಲಿಂಗವಾಗಿ ಥಳಥಳನೆ ಹೊಳೆಯುತ್ತಿದೆ ನೋಡಾ. ಇದು ಕಾರಣ, ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಅಖಂಡ ಶರಣರನುಭಾವದ ಬೆಳಗೆನ್ನ ಕಿಂಚಿತ್ತು ಕಾಣಿಸದೆ ಸರ್ವಾಂಗದಲ್ಲಿ ಥಳಥಳನೆ ಹೊಳೆಯುತ್ತಿದೆ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಚಾರಭಕ್ತ ಎಪ್ಪತ್ತೆರಡು ಪ್ರಕಾರವನೊಳಕೊಂಡು ಆಚಾರಲಿಂಗವಾಗಿ ಎನ್ನ ಶ್ರದ್ಧೆಯಲ್ಲಿ ಸಂಗವಾದನಯ್ಯ ಬಸವಣ್ಣ. ಗೌರವಮಾಹೇಶ್ವರನು ಎಪ್ಪತ್ತೆರಡು ಪ್ರಕಾರವನೊಳಕೊಂಡು ಗುರುಲಿಂಗವಾಗಿ ಎನ್ನ ನೈಷೆ*ಯಲ್ಲಿ ಸಂಗವಾದನಯ್ಯ ಬಸವಣ್ಣ. ಲೈಂಗಿಪ್ರಸಾದಿ ಎಪ್ಪತ್ತೆರಡು ಪ್ರಕಾರವನೊಳಕೊಂಡು ಶಿವಲಿಂಗವಾಗಿ ಎನ್ನ ಸಾವಧಾನದಲ್ಲಿ ಸಂಗವಾದನಯ್ಯ ಬಸವಣ್ಣ. ಚರಪ್ರಾಣಲಿಂಗಿ ಎಪ್ಪತ್ತೆರಡು ಪ್ರಕಾರವನೊಳಕೊಂಡು ಜಂಗಮಲಿಂಗವಾಗಿ ಎನ್ನನುಭಾವದಲ್ಲಿ ಸಂಗವಾದನಯ್ಯ ಬಸವಣ್ಣ. ಪ್ರಸಾದಶರಣ ಎಪ್ಪತ್ತೆರಡು ಪ್ರಕಾರವನೊಳಕೊಂಡು ಪ್ರಸಾದಲಿಂಗವಾಗಿ ಎನ್ನಾನಂದದಲ್ಲಿ ಸಂಗವಾದನಯ್ಯ ಬಸವಣ್ಣ. ಮಹಾಘನಐಕ್ಯ ಎಪ್ಪತ್ತೆರಡು ಪ್ರಕಾರವನೊಳಕೊಂಡು ಮಹಾಲಿಂಗವಾಗಿ ಎನ್ನ ಸಮರಸದಲ್ಲಿ ಸಂಗವಾದನಯ್ಯ ಬಸವಣ್ಣ. ಆಚಾರ ಗೌರವ ಶ್ರದ್ಧೆ ನೈಷ್ಟೆ ಲಿಂಗದ ಪೀಠ. ಲೈಂಗಿ ಸಾವಧಾನ ಲಿಂಗದ ಮಧ್ಯಚರ. ಅನುಭಾವ ಲಿಂಗದ ಗೋಮುಖ. ಪ್ರಸಾದ ಆನಂದ ಲಿಂಗದ ವರ್ತುಳ. ಮಹಾಘನ ಸಮರಸಲಿಂಗದ ಗೋಳಕ. ಇಂತೀ ನಾನಾ ಪ್ರಕಾರವ ಸಿದ್ಧೇಶ್ವರ ಇಷ್ಟಲಿಂಗದಲ್ಲಿ ಅರುಹಿದನಾಗಿ ತತ್ವಮಸಿ ವಾಕ್ಯವೆಲ್ಲವೂ ನುಗ್ಗುನುಸಿಯಾಗಿ ಹೋದವು. ಸಚ್ಚಿದಾನಂದಬ್ರಹ್ಮ ತಾನಾಗಿ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ನಾನು ಕೆಟ್ಟು ಬಟ್ಟಬಯಲಾಗಿ ಹೋದೆನಯ್ಯ ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ಲಿಂಗವನಾಚರಿಸುವ ಅಂಗವೇ ಸ್ಥೂಲದಲ್ಲಿ ಗುರುಲಿಂಗವಾಗಿ, ಲಿಂಗದಲ್ಲಿ ಸುಖಿಸುವ ಅಂಗವೇ ಸೂಕ್ಷ್ಮದಲ್ಲಿ ಜಂಗಮವಾಗಿ, ಲಿಂಗವಂ ಪ್ರಸನ್ನಮಾಡಿಕೊಂಬ ಅಂಗವೇ ಕಾರಣದಲ್ಲಿ ಮಹಾಲಿಂಗಮಾಗಿ, ಲಿಂಗದಲ್ಲಿ ಕ್ರಿಯಾಶಕ್ತಿ ಕೂಡಲು, ಅಂಗದಲ್ಲಿ ಮಂತ್ರಶಕ್ತಿ ಕೂಡಿತ್ತು. ಲಿಂಗದಲ್ಲಿ ಇಚ್ಛಾಶಕ್ತಿ ನೆರೆಯಲು, ಅಂಗದಲ್ಲಿ ಆದಿಶಕ್ತಿ ನೆರೆಯಿತ್ತು. ಲಿಂಗದಲ್ಲಿ ಪರಾಶಕ್ತಿ ಬೆರೆಯಲು, ಅಂಗದಲ್ಲಿ ಜ್ಞಾನಶಕ್ತಿ ಬೆರೆಯಿತ್ತು. ಸ್ಥೂಲದಲ್ಲಿ ಅಂಗಲಿಂಗವೇಕಮಾಗಲು, ಮಂತ್ರಕ್ರಿಯೆಗಳೊಂದಾಯಿತ್ತು. ಸೂಕ್ಷ್ಮದಲ್ಲಿ ಲಿಂಗಾಂಗವೇಕವಾಗಲು, ವಿವಿಧೇಚ್ಛೆಯೊಂದಾಯಿತ್ತು ಕಾರಣದಲ್ಲಿ ಲಿಂಗಾಂಗವೇಕವಾಗಲು, ಪರಜ್ಞಾನವೇಕವಾಯಿತ್ತು. ಲಿಂಗಾಚಾರವೇ ಇಷ್ಟವಾಗಿ, ಲಿಂಗಸುಖವೇ ಪ್ರಾಣವಾಗಿ, ಲಿಂಗಪ್ರಸಾದವೇ ಭಾವವಾಗಿ, ಪ್ರಸಾದದಲ್ಲಿ ಮನಪರವಶಮಾಗಿ, ಶಿವಸುಖದಲ್ಲಿ ಪ್ರಾಣಪರವಶಮಾಗಿ, ಶಿವಾಚಾರದಲ್ಲಿ ಲಿಂಗಪರವಶವಾದುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪ್ರಥಮದಲ್ಲಿ ನಾಮ ರೂಪು ಕ್ರೀ ಏನೂ ಏನೂ ಇಲ್ಲದ ಮಹಾಘನ ಶೂನ್ಯಬ್ರಹ್ಮವು. ಆ ಶೂನ್ಯಬ್ರಹ್ಮದಿಂದ ಶುದ್ಧ ಪ್ರಣವ. ಆ ಶುದ್ಧ ಪ್ರಣವಧಿಂದ ಚಿತ್ತು ಭಾವದಕ್ಷರ. ಆ ಚಿತ್ತು ಭಾವದಕ್ಷರದಿಂದ ಪರಶಕ್ತಿ. ಆ ಪರಾಶಕ್ತಿಯಿಂದ ಅಕ್ಷರತ್ರಯಂಗಳು. ಆ ಅಕ್ಷರತ್ರಯಂಗಳಿಂದ ಓಂಕಾರ. ಆ ಓಂಕಾರವೆ ಬಸವಣ್ಣನು. ಆ ಬಸವಣ್ಣನೆ ಎನ್ನ ವದನಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಬಲದ ಭುಜಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಎಡದ ಭುಜಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದೇಹಮಧ್ಯಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ ಎನ್ನ ಬಲದ ತೊಡೆಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಎಡದ ತೊಡೆಗೆ ಯಕಾರಾವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ಥೂಲತನುವಿಂಗೆ ಉಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸೂಕ್ಷ ್ಮತನುವಿಂಗೆ ಮಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕಾರಣತನುವಿಂಗೆ ಆಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಯತಕ್ಕೆ ಬಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ವಾಯತಕ್ಕೆ ಸಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸನ್ನಿಹಿತಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕ್ರೀಗೆ ಅವಾಚ್ಯ ಸ್ವರೂಪಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಕ್ಕೆ ಮಹಾಶೂನ್ಯ ಸ್ವರೂಪನಾಗಿ ಬಂದನಯ್ಯ ಬಸವಣ್ಣ. ಎನ್ನ ರುಧಿರಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಾಂಸಕ್ಕೆ ಮಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮೇದಸ್ಸಿಂಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಸ್ಥಿಗೆ ವಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಜ್ಜೆಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ತ್ವಗಮಯಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದೇಹಭಾವ ಕೊಂದಹೆನೆಂದು ಬಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಹೊನ್ನು ಹೆಣ್ಣು ಮಣ್ಣೆಂಬ ಸಕಲಾಸೆಯ ಕೊಂದಹೆನೆಂದು ಸಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಇಂದ್ರಿಯ ವಿಷಯಂಗಳ ಕೊಂದಹೆನೆಂದು ವಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನಾದಕ್ಕೆ ಆಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಬಿಂದುವಿಂಗೆ ಉಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕಳೆಗೆ ಮಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಾಣಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಿಶ್ವಂಗೆ ಇಷ್ಟಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ತೈಜಸಿಂಗೆ ಪ್ರಾಣಲಿಂಗವಾಗಿ ಬಂದನಯ್ಯ ಬಸವಣ್ಣ ಎನ್ನ ಪ್ರಜ್ಞೆಗೆ ತೃಪ್ತಿಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಸತ್ವಕ್ಕೆ ಶುದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನ್ನ ರಜಕ್ಕೆ ಸಿದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನ್ನ ತಮಕ್ಕೆ ಪ್ರಸಿದ್ಧಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನಗೆ ಬಕಾರವೆ ಗುರುವಾಗಿ ಬಂದನಯ್ಯ ಬಸವಣ್ಣ. ಎನಗೆ ಸಕಾರವೆ ಲಿಂಗವಾಗಿ ಬಂದನಯ್ಯ ಬಸವಣ್ಣ. ಎನಗೆ ವಕಾರವೆ ಜಂಗಮವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಸೂಕ್ಷ ್ಮತನುವಿಂಗೆ ಪ್ರಾಣಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಕಾರಣತನುವಿಂಗೆ ಭಾವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಶಿವ ಕ್ಷೇತ್ರಜ್ಞ ಕರ್ತಾರ ಭಾವ ಚೈತನ್ಯ ಅಂತರ್ಯಾಮಿಯೆಂಬ ಷಡುಮೂರ್ತಿಗಳಿಗೆ ನಕಾರ ಮಃಕಾರ ಶಿಕಾರ ವಾಕಾರ ಯಕಾರ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಚಿತ್ತಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಬುದ್ಧಿಗೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅಹಂಕಾರಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಮನಸ್ಸಿಂಗೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಭಾವಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಬ್ರಹ್ಮತತ್ವಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಿಷ್ಣುತತ್ವಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ರುದ್ರತತ್ವಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಈಶ್ವರತತ್ವಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸದಾಶಿವತತ್ವಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಹಾಶ್ರೀಗುರುತತ್ವಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪೃಥ್ವಿಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಪ್ಪುವಿಂಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಗ್ನಿತತ್ವಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಾಯುವಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಕಾಶಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆತ್ಮಂಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಾಣವಾಯುವಿಂಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಪಾನವಾಯುವಿಂಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವ್ಯಾನವಾಯುವಿಂಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಉದಾನವಾಯುವಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸಮಾನವಾಯುವಿಂಗೆ ಯಕಾರವಾಗಿ ಬಂದನಯ್ಯ ಬಸವಣ್ಣ ಎನ್ನ ಪಂಚವಾಯುವಿಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆಧಾರಚಕ್ರಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ವಾಧಿಷಾ*ನಚಕ್ರಕ್ಕೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಮಣಿಪೂರಚಕ್ರಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅನಾಹತಚಕ್ರಕ್ಕೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ವಿಶುದ್ಧಿಚಕ್ರಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಆಜ್ಞಾಚಕ್ರಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಚತುರ್ದಳಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷಡುದಳಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಾದಶದಳಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷೋಡಶದಳಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಿದಳಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಚತುರಾಕ್ಷರಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷಡಾಕ್ಷರಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದಶಾಕ್ಷರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಾದಶಾಕ್ಷರಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಷೋಡಶಾಕ್ಷರಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಿಯಾಕ್ಷರಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಮ. ಎನ್ನ ಕೆಂಪುವರ್ಣಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನೀಲವರ್ಣಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕುಂಕುಮವರ್ಣಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪೀತವರ್ಣಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶ್ವೇತವರ್ಣಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮಾಣಿಕ್ಯವರ್ಣಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ರಾಗ್ರಾವಸ್ಥೆಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ವಪ್ನಾವಸ್ಥೆಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸುಷುಪ್ತಾವಸ್ಥೆಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ತೂರ್ಯಾವಸ್ಥೆಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅತೀತಾವಸ್ತೆಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನಿರಾವಸ್ಥೆಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಂತಃಕರಣಂಗಳಿಗೆ ಚತುರ್ವಿಧ ಬಿಂದು ಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅರಿಷಡ್ವರ್ಗಂಗಳಿಗೆ ಷಡ್ವಿಧಧಾತು ಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ದಶವಾಯುಗಳಿಗೆ ದಶವಿದ ಕ್ಷೇತ್ರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ದ್ವಾದಶೇಂದ್ರಿಯಂಗಳಿಗೆ ದ್ವಾದಶ ವಿಕೃತಿಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಷೋಡಶಕಲೆಗೆ ಷೋಡಶಕಲಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಅಹಂಕಾರ ಮಮಕಾರಗಳಿಗೆ ವಿದ್ಯಾಲಿಂಗವಾಗಿ ಬಂದನಯ್ಯಬಸವಣ್ಣ. ಎನ್ನ ಭಕ್ತಿಸ್ಥಲಕ್ಕೆ ಆಚಾರಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಮಾಹೇಶ್ವರಸ್ಥಲಕ್ಕೆ ಗುರುಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಸಾದಿಸ್ಥಲಕ್ಕೆ ಶಿವಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಪ್ರಾಣಲಿಂಗಿಸ್ಥಳಕ್ಕೆ ಜಂಗಮಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಶರಣಸ್ಥಲಕ್ಕೆ ಪ್ರಸಾದಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಐಕ್ಯಸ್ಥಲಕ್ಕೆ ಮಹಾಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ಚಿತ್ತಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಬುದ್ಧಿಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅಹಂಕಾರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಮನಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಭಾವಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಕ್ರಿಯಾಶಕ್ತಿಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜ್ಞಾನಶಕ್ತಿಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಇಚ್ಛಾಶಕ್ತಿಗೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆದಿಶಕ್ತಿಗೆ ವಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪರಶಕ್ತಿಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಚಿತ್ಶಕ್ತಿಗೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶ್ರದ್ಧೆಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನಿಷೆ*ಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅವಧಾನಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಅನುಭಾವಕ್ಕೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಆನಂದಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಸಮರಸಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶಬ್ದಕ್ಕೆ ಗುರುವಾಗಿ ಬಂದನಯ್ಯ ಬಸವಣ್ಣ. ಎನ್ನ ಸ್ಪರುಶನಕ್ಕೆ ಲಿಂಗವಾಗಿ ಬಂದನಯ್ಯ ಬಸವಣ್ಣ. ಎನ್ನ ರೂಪಿಂಗೆ ಶಿವಲಾಂಛನವಾಗಿ ಬಂದನಯ್ಯ ಬಸವಣ್ಣ. ಎನ್ನ ರಸಕ್ಕೆ ಶಿವಪ್ರಸಾದವಾಗಿ ಬಂದನಯ್ಯ ಬಸವಣ್ಣ. ಎನ್ನ ಗಂಧಕ್ಕೆ ಶಿವಾನುಭಾವವಾಗಿ ಬಂದನಯ್ಯ ಬಸವಣ್ಣ ಎನ್ನ ನಾಸಿಕಕ್ಕೆ ನಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಜಿಹ್ವೆಗೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ನೇತ್ರಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ತ್ವಕ್ಕಿಂಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಶ್ರೋತ್ರಕ್ಕೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಹೃದಯಕ್ಕೆ ಓಂಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ವಾಕ್ಕಿಂಗೆ ಯಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪಾಣಿಗೆ ವಾಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪಾದಕ್ಕೆ ಶಿಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಗುಹ್ಯಕ್ಕೆ ಮಃಕಾರವಾಗಿ ಬಂದನಯ್ಯ ಬಸವಣ್ಣ. ಎನ್ನ ಪಾಯುವಿಂಗೆ ನಕಾರವಾಗಿ ಬಂದನಯ್ಯ ಬಸವಣ್ಣ. ಇಂತೀ ಪಂಚೇಂದ್ರಿಯಂಗಳೆ ಪಂಚಮಹಾಯಜ್ಞ. ಆ ಪಂಚಮಹಾಯಜ್ಞದಲ್ಲಿ ಎನ್ನ ಮನ ಹಾರೈಸಿ ಪೂರೈಸಿ ಒಲಿದು ಕೇಳಿತ್ತು ಮುಟ್ಟಿತ್ತು ನೋಡಿತ್ತು ರುಚಿಸಿತ್ತು ವಾಸಿಸಿತ್ತು. ಎನ್ನ ಮಾನಸ ವಾಚಕ ಕಾಯಕ ಕರಣಂಗಳೆಲ್ಲವು ಪಂಚಮಹಾಯಜ್ಞ ಸೋಂಕಿ ಪಂಚಮಹಾಯಜ್ಞವಪ್ಪುದು ತಪ್ಪದು. ಅದೆಂತೆಂದಡೆ- ಮಹಾಜ್ಯೋತಿಯ ಸೋಂಕಿದ ಉತ್ತಮ ಅಧಮ ತೃಣ ಮೊದಲಾದವೆಲ್ಲವು ಮಹಾ ಅಗ್ನಿಯ ಸೋಂಕಿ ಮಹಾ ಅಗ್ನಿಯಪ್ಪುದು ತಪ್ಪದು. ಇಂತಪ್ಪ ಮಹಾಯಜ್ಞವನೊಳಕೊಂಡಿಪ್ಪ ಮೂಲಾಗ್ನಿಯೇ ಬಸವಣ್ಣ. ಆ ಬಸವಣ್ಣನೆ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿಯೇ ಚಿದ್ಬ ್ರಹ್ಮ. ಆ ಚಿದ್ಬ ್ರಹ್ಮವೇ ಬಸವಣ್ಣ. ಆ ಬಸವಣ್ಣನೇ ಎನಗೆ ಅಷ್ಟಾವರಣ ಸ್ವರೂಪನಾದ ಸಚ್ಚಿದಾನಂದ ಬಸವಣ್ಣ. ನಿತ್ಯಪರಿಪೂರ್ಣ ಬಸವಣ್ಣ. ಅಖಂಡಾದ್ವಯ ಬಸವಣ್ಣ. ನಿರಂಜನ ಬಸವಣ್ಣ. ನಿರ್ಮಾಯ ಬಸವಣ್ಣ, ನಿರಾಚರಣ ಬಸವಣ್ಣ. ನಿರ್ಜನಿತ ಬಸವಣ್ಣ. ನಿರ್ಲೇಪ ಬಸವಣ್ಣ. ನಿಃಕಪಟಿ ಬಸವಣ್ಣ. ಅಸಾಧ್ಯ ಸಾಧಕ ಬಸವಣ್ಣ. ಅಭೇದ್ಯ ಭೇದಕ ಬಸವಣ್ಣ. ಚಿತ್ಪ್ರಕಾಶ ಬಸವಣ್ಣ. ಇಂತಪ್ಪ ಬಸವಣ್ಣನ ಅಂಗವೆ ಚಿದಾಕಾಶ. ಆ ಚಿದಾಕಾಶದ ಮಧ್ಯದಲ್ಲಿ ಚಿತ್ಪ್ರಾಣವಾಯು. ಆ ಚಿತ್ಪ್ರಾಣವಾಯುವಿನ ಮಧ್ಯದಲ್ಲಿ ಚಿದಾಗ್ನಿ. ಆ ಚಿದಾಗ್ನಿಯ ಮಧ್ಯದಲ್ಲಿ ಚಿಜ್ಜಲ. ಆ ಚಿಜ್ಜಲದ ಮಧ್ಯದಲ್ಲಿ ಚಿದ್ಭೂಮಿ. ಆ ಚಿದ್ಭೂಮಿಯ ಮಧ್ಯದಲ್ಲಿ ಹೃದಯ. ಆ ಹೃದಯದ ಮಧ್ಯದಲ್ಲಿ ಆಕಾರ ಉಕಾರ ಮಕಾರ ಪ್ರಣಮಪೀಠ. ಆ ಪ್ರಣವಪೀಠದ ಮಧ್ಯದಲ್ಲಿ ಜಂಗಮ ಆ ಜಂಗಮವ ಮಕುಟದಲ್ಲಿ ಶೂನ್ಯಲಿಂಗ. ಆ ಶೂನ್ಯಲಿಂಗದಲ್ಲಿ ಚಿದಂಬರ, ಆ ಚಿದಂಬರರಲ್ಲಿ ಶಿವಶಕ್ತಿ. ಆ ಶಿವಶಕ್ತಿಯಲ್ಲಿ ಪಂಚಶಕ್ತಿ. ಆ ಪಂಚಶಕ್ತಿಯಲ್ಲಿ ಪಂಚನಾದ. ಆ ಪಂಚನಾದದಲ್ಲಿ ಪಂಚಸಾದಾಖ್ಯ. ಆ ಪಂಚಸಾದಾಖ್ಯದಲ್ಲಿ ಈಶ್ವರ. ಆ ಈಶ್ವರನಲ್ಲಿ ಮಾಹೇಶ್ವರ. ಆ ಮಾಹೇಶ್ವರನಲ್ಲಿ ರುದ್ರ. ಆ ರುದ್ರನಲ್ಲಿ ತ್ರಯವಯ ಹಿರಣ್ಯಗರ್ಭ ವಿರಾಟ್‍ಮೂರ್ತಿ. ಇಂತೀ ಎಂಬತ್ತುಮೂರು ಮೂರ್ತಿಗಳೊಳಗೆ ಎಂಬತ್ತೆರಡೆ ಬಸವಣ್ಣನಂಗವೊಂದೆ ಪ್ರಾಣ. ಆ ಪ್ರಾಣ ಚೈತನ್ಯ ಶೂನ್ಯವೆ ಗೋಳಕ ಗೋಮುಖ ವೃತ್ತಾಕಾರವಾಗಿ ಕರಸ್ಥಲದಲ್ಲಿ ಪಿಡಿದು ಆ ಲಿಂಗದ ಆದಿಪ್ರಣಮವೆ ಪೀಠ, ಆಕಾರವೆ ಕಂಠ, ಉಕಾರವೆ ಗೋಮುಖ, ಮಕಾರವೆ ವರ್ತುಳ, ನಾಳ ಬಿಂದು ಮಹಾತೇಜ. ನಾದವೆ ಅಖಂಡಲಿಂಗ. ಇಂತಪ್ಪ ಬಸವಣ್ಣನ ನಿತ್ಯತ್ವವೆ ಲಿಂಗ; ಪೂರ್ಣತ್ವವೆ ಗುರು. ಚಿತ್ಪ್ರಕಾಶವೆ ಜಂಗಮ. ಆನಂದವೆ ಪ್ರಸಾದ, ಚಿದ್ರಸದ ಪ್ರವಾಹವೆ ಪಾದತೀರ್ಥ. ಇಂತಪ್ಪ ಬಸವಣ್ಣ ಅನಂತಕೋಟಿ ಬ್ರಹ್ಮಾಂಡಗಳ ರೋಮಕೂಪದಲ್ಲಿ ಸಂಕಲ್ಪಿಸಿ ಅಲ್ಲಿದ್ದಾತ್ಮಂಗೆ ಸುಜ್ಞಾನ ಕ್ರೀಯನಿತ್ತು ತದ್ ಭೃತ್ಯ ಕರ್ತೃ ತಾನಾಗಿ ಇಷ್ಟಾರ್ಥಸಿದ್ಧಿಯನೀವುತಿಪ್ಪ ಬಸವಣ್ಣನ ಭೃತ್ಯರ ಭೃತ್ಯರ ತದ್‍ಭೃತ್ಯನಾಗಿರಿಸಿ ಬಸವಣ್ಣನ ಪಡುಗ ಪಾದರಕ್ಷೆಯ ಹಿಡಿವ ಭಾಗ್ಯವಯೆನಗೀವುದಯ್ಯ, ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಬಸವಣ್ಣನ ಅರುಹಿಕೊಟ್ಟ ಸಿದ್ಧೇಶ್ವರನ ಶ್ರೀಪಾದಪದ್ಮದಲ್ಲಿ ಭೃಂಗನಾಗಿರ್ದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಗುಮ್ಮಳಾಪುರದ ಸಿದ್ಧಲಿಂಗ
ನಿತ್ಯಾನಂದ ನಿಜಗುರುವಿತ್ತ ನಿರ್ಮಲಲಿಂಗ ಆಧಾರದಲ್ಲಿ ಆಚಾರಲಿಂಗವಾಗಿ ಪ್ರಕಾಶವ ತೋರುತಿಹನು. ಎನ್ನ ಸ್ವಾಧಿಷಾ*ನದಲ್ಲಿ ಗುರುಲಿಂಗವಾಗಿ ಪ್ರಭೆಯ ತೋರುತಿಹನು. ಎನ್ನ ಮಣಿಪೂರಕದಲ್ಲಿ ಶಿವಲಿಂಗವಾಗಿ ಕಳೆಯ ಪ್ರಭಾವಿಸುತಿರ್ದನು. ಎನ್ನ ಅನಾಹತದಲ್ಲಿ ಜಂಗಮಲಿಂಗವಾಗಿ ಬೆಳಗುತಿರ್ದನು. ಎನ್ನ ವಿಶುದ್ಧಿಯಲ್ಲಿ ಪ್ರಸಾದಲಿಂಗವಾಗಿ ಮಹಾಪ್ರಕಾಶವ ಬೀರುತಿರ್ದನು. ಎನ್ನ ಆಜ್ಞೇಯದಲ್ಲಿ ಮಹಾಲಿಂಗವಾಗಿ ಸಕಲಮಹಾಪ್ರಕಾಶವ ಬೀರುತಿರ್ದನು. ಎನ್ನ ಬ್ರಹ್ಮಚಕ್ರದಲ್ಲಿ ನಿಃಕಲಲಿಂಗವಾಗಿ ಅಖಂಡ ಬೆಳಕ ತೋರುತಿಹನು. ಎನ್ನ ಶಿಖೆಯಲ್ಲಿ ನಿಶ್ಶೂನ್ಯಲಿಂಗವಾಗಿ ಅವಿರಳಪ್ರಕಾಶ ತೋರುತಿಹನು. ಎನ್ನ ಪಶ್ಚಿಮದಲ್ಲಿ ನಿರಂಜನಲಿಂಗವಾಗಿ ಅಗಣಿತಪ್ರಕಾಶವ ತೋರುತಿಹನು. ಇಂತು ಸರ್ವಾಂಗದಲ್ಲಿ ತನ್ನ ಪ್ರಭೆಯ ತೋರಿ ಎನ್ನ ಕರಸ್ಥಲದಲ್ಲಿ ನಿತ್ಯ ನಿರಂಜನ ಚನ್ನಬಸವಲಿಂಗವು ನಿತ್ಯವಾಗಿರ್ದುದ ಕಂಡು ನಮೋ ನಮೋ ಎನುತಿರ್ದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->