ಅಥವಾ

ಒಟ್ಟು 19 ಕಡೆಗಳಲ್ಲಿ , 9 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವಶಿವಾ, ಈ ಮಾಯಾಸಂಸಾರಯುಕ್ತವಾದ ದೇಹದ ಸುಖ ಹೇಳಲಂಜುವೆ. ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಈ ದೇಹದ ವಿಸ್ತಾರ ಪೇಳ್ವೆ, ಎಲೆ ಮರುಳ ಮಾನವರಿರಾ, ಲಾಲಿಸಿ ಕೇಳಿರಿ, ಎಲುವಿನ ಕಂಬ, ಎಲುವಿನ ತೊಲೆಗಳು, ಸಂದೆಲವುಗಳೆ ಬಿಗಿ ಮೊಳೆಗಳು, ಕರುಳಜಾಳಿಗೆ ಬಿಗಿಜಂತಿಗಳು, ಬರುಕಿ ಎಲವುಗಳೆ ಜಂತಿಗಳು, ಬೆರಳೆಲವುಗಳೆ ಚಿಲಿಕೆಗಳು. ಇಂತೀ ಗೃಹಕ್ಕೆ ಮಾಂಸದ ಮೇಲುಮುದ್ದೆಗಳು, ರಕ್ತದ ಸಾರಣೆಗಳು, ಮಜ್ಜದ ಮಡುಗಳು, ಕೀವಿನ ಕುಣಿಗಳು, ಪಿತ್ತದ ಕೊಂಡಗಳು, ಶೋಣಿತದ ಕಾವಲಿಗಳು, ಮೂತ್ರದ ಹಳ್ಳಗಳು, ಅಮೇಧ್ಯದ ಹುತ್ತಗಳು, ಹುಳುವಿನ ಡೋಣಿಗಳು, ಜಂತಿನ ಬಣವೆಗಳು-ಇಂತಪ್ಪ ಮನಗೆ ಎಂಟು ಗವಾಕ್ಷಗಳು. ಬಾಯಿ ಎಂಬುದೊಂದು ದೊಡ್ಡ ದರವಾಜು. ಇಂತೀ ದುರಾಚಾರಯುಕ್ತವಾದ ದೇಹವೆಂಬ ಗೃಹಕ್ಕೆ ಮೂವರು ಕರ್ತೃಗಳಾಗಿಹರು. ಅವರು ಆರಾರೆಂದಡೆ: ಹೊನ್ನೊಂದು ಭೂತ, ಹೆಣ್ಣೊಂದು ಭೂತ, ಮಣ್ಣೊಂದು ಭೂತ. ಇಂತೀ ತ್ರಿವಿಧ ಭೂತಸ್ವರೂಪರಾದ ಬ್ರಹ್ಮ ವಿಷ್ಣು ರುದ್ರರೆಂಬ ತ್ರಿವಿಧದೇವತೆಗಳು. ಅದೆಂತೆಂದಡೆ: ಹೊನ್ನು ರುದ್ರನಹಂಗು, ಹೆಣ್ಣು ವಿಷ್ಣುವಿನಹಂಗು, ಮಣ್ಣು ಬ್ರಹ್ಮನಹಂಗು, ಇಂತಪ್ಪ ತ್ರಿಮೂರ್ತಿಗಳ ಹಂಗಿನಿಂದಾದ ದೇಹವು ಮಿಥೆಯೆಂದು ತಿಳಿದು ವಿಸರ್ಜಿಸಲರಿಯದೆ, ಆ ಅನಿತ್ಯದೇಹದ ಸುಖವನು ಮೆಚ್ಚಿ ಮರುಳಾಗಿ, ಬಿಡಲಾರದೆ, ಈ ಹೇಸಿಕಿ ಹೊಲೆಸಂಸಾರದಲ್ಲಿ ಶಿಲ್ಕಿ ಮಲತ್ರಯದಾಶೆಗೆ ಹೊಡದಾಡಿ ಹೊತ್ತುಗಳೆದು ಸತ್ತುಹೋಗುವ ಕತ್ತೆಗಳಿಗಿನ್ನೆತ್ತಣ ಮುಕ್ತಿ ಹೇಳಾ ! ಮುಂದೆ ಹೊಲೆಮಾದಿಗರ ಮನೆಯಲ್ಲಿ ಶುನಿ ಶೂಕರ ಕುಕ್ಕುಟನ ಬಸುರಲ್ಲಿ ಹುಟ್ಟಿಸದೆ ಬಿಡನೆಂದಾತ ನಿಮ್ಮ ಶರಣ ವೀರಾದ್ಥಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆರು ನೆಲೆ ಮಂಟಪದ ಕೋಣೆಯಲ್ಲಿ ಆರು ಜ್ಯೋತಿಯ ಮುಟ್ಟಿಸಿ ಆ ಜ್ಯೋತಿಯ ಬೆಳಗಿನಲ್ಲಿ ಆರು ಲಿಂಗವ ನಿರ್ಮಿಸಿ ಆರು ಲಿಂಗದ ಪ್ರತುಮೆಯಲ್ಲಿ ಆರು ಹಂತದ ಸೋಪಾನದಲ್ಲಿ ಮಹಾ ನಿರ್ಮಳವೆಂಬ ದುರ್ಗಮಂ ನಿರ್ಮಿಸಿ ಆ ದುರ್ಗದಲ್ಲಿ ಅರಸಂಗೆ ಕಾಲಿಲ್ಲದಾಕೆಯ ಮದುವೆಯ ಮಾಡಿ ತೂತಿಲ್ಲದ ಭೋಗಕ್ಕೆ ಕೂಡಿ ಬಿಂದುವಿಲ್ಲದೆ ಮಕ್ಕಳಾದ ಪರಿಯ ನೋಡಾ. ತೊಟ್ಟಿಲಿಲ್ಲದೆ ಹಾಸಿ ಮಲಗಿಸಿ ನಿದ್ರೆಗೆಯ್ಸಿದ ಶರಣನಾಚರಣೆಯನೆಂತೆಂಬೆನು. ಇದ ಕಂಡು ನಡೆಯಲರಿಯದೆ, ತಮ್ಮ ಮನ ಬಂದಂತೆ ನಡೆವರು. ಶಿವಯೋಗಕ್ಕೆ ದೂರವಾದರು ನೋಡಾ. ಹೊನ್ನ ಕಟ್ಟಿ ವಿರಕ್ತನು ಬ್ಥಿಕ್ಷೆಯೆನಲಾಗದು. ಭಕ್ತನ ಗೃಹವೆಂದು ಜಂಗಮವು ಹೋದಲ್ಲಿ ಆ ಭಕ್ತನು ಎದ್ದು ನಮಸ್ಕರಿಸಿ ತನ್ನಲ್ಲಿರ್ದ ಪದಾರ್ಥವಂ ತಾನು ಸಹವಾಗಿ ಶಿವಾರ್ಪಣವ ಮಾಡ[ಬ]ಹುದಲ್ಲದೆ. ಇದಲ್ಲದೆ, ಜಂಗಮವ ಬೇರೆ ಕುಳ್ಳಿರಿಸಿ ಉಂಡನಾದರೆ ಅವನಿಗೆ ದೀಕ್ಷೆಯ ಕೊಟ್ಟ ಗುರುವಿಗೆ ತನ್ನ ಮಾರ್ಗವ ಬಿಟ್ಟು ಶಿವಭಕ್ತನಾದರೆ ಮೋಕ್ಷವಿಲ್ಲವಾಗಿ. ಕೋಳಿ ಒಂದು ಕುಟುಕ ಕಂಡರೆ ತನ್ನ ಮರಿಗೆ ತೋರದುಳಿವುದೆ? ಕಾಗೆ ಒಂದಗುಳ ಕಂಡರೆ ತನ್ನ ಬಳಗವ ಕರೆಯದುಳಿವುದೆ? ಶಿವಭಕ್ತನಾಗಿ ತನ್ನ ಲಿಂಗವ ಪೂಜಿಸಿ ಜಂಗಮವ ಮರೆದವನಾದರೆ ಸತ್ತ ದನವಿಗೆ ನರಿ ಹೋದಂತಾಯಿತ್ತು. ಆ ನರಿ ಹೋದ ನೆನಹಿನಲ್ಲಿ ನಾಯಿ ಹೋದಂತಾಯಿತ್ತು. ಇಷ್ಟಕ್ಕಿಂದ ಕರಕಷ್ಟವೆ ಶಿವಭಕ್ತರು? ಷಟ್ಚಕ್ರದ ಭಾವದಲ್ಲಿವೊಪ್ಪಿರುವ ಶಿವಶರಣರು ತಮ್ಮ ನಡೆ ನುಡಿಗಳ ಬಿಡದೆ ನಡೆವುದು. ಅದ ಕಂಡು ಕಣ್ದೆರೆದು ನೋಡಿದೆನಯ್ಯ. ಆವ ವರ್ತನೆಯಲ್ಲಿ ತಾನಿದ್ದರೇನು? ಆವ ಭಾವ ಹೇಂಗಿದ್ದರೇನು? ನಮ್ಮಾಚರಣೆ ನಮಗೆ ಶುದ್ಧ. ಗುರು ಕಲ್ಪಿತನಾದರು ಅವನು ಹಿಂದೆ ಸಂಬಂಧವಾದ ಕಾರಣ, ಅವನಿಗೆ ಬಂಧ ದೊರಕುವದಲ್ಲದೆ ನನಗೆ ದೊರಕದೆಂದು ತಾನು ನಿಶ್ಚೆಸಿದರೆ ತನಗೆ ದೊರಕಬಲ್ಲದೆ? ತಾನು ಪೂರ್ವದಲ್ಲಿ ತಾ ಪಡದುದು ತನಗೆ ತಪ್ಪುವದೆ? ಪ್ರಾಣಿಹಿಂಸೆಯ ಮಾಡುವಾತನಾದರೆಯು ಅವನಿಗೆ ಕಲ್ಪಿತವೇತಕ್ಕೆ? ಹಿಂದೆ ಅವನು ಶಿವನಪ್ಪಣೆವಿಡಿದು ಬಂದ ಕಾರಣ ಅವನಿಗೆ ಬಂದಿತಲ್ಲದೆ ಗಗನದ ಮಂಟಪದ ಮೇಲೆ ಊಧ್ರ್ವಮುಖದ ಗದ್ದುಗೆಯ ಮಾಡಿ ಮಹಾಪ್ರಕಾಶವೆಂಬ ಬೆಳಗಂ ತೋರಿ ಓಂಕಾರವೆಂಬ ಲಿಂಗವ ಮೂರ್ತಮಾಡಿಸಿ ಅದಕ್ಕೆ ಸದ್ಭಾವವೆಂಬ ಪುಷ್ಪವ ತಂದು ಜ್ಞಾನಪ್ರಕಾಶವೆಂಬ ಜ್ಯೋತಿಯಂ ಪೊತ್ತಿಸಿ ಸದ್ಭಕ್ತಿಯೆಂಬ ನೈವೇದ್ಯಮಂ ಮಾಡಿ ನಿರ್ಮಳವೆಂಬ ಪೂಜಾರಿಯಾಗಿರ್ಪನು. ಇದನರಿಯದೆ ತಮ್ಮ ಮನ ಬಂದಂತೆ ಇಪ್ಪವರ ಲಿಂಗಹೋದವನಾದರು ಅವನ ಕಣ್ಣಲ್ಲಿ ಕಂಡು ಅವನಷ್ಟಕ್ಕಲ್ಲದೆ ಅನ್ಯರ ಗೃಹವ ಬಿಡಲೇತಕ್ಕೇ? ಪಾಪವ ಮಾಡಿದನಾರು ಅವನ ಗೃಹಕ್ಕಲ್ಲದೆ ಅವನೊಂದಿಗೆ ಬೆರಸಿದವನಾದರು ಅವನಿಗೆ ಪಾಪ ಸಂಭವಿಸುವುದುಂಟೇ? ಇದ ಸಂಕಲ್ಪವ ಮಾಡಿ ಬಿಡಲೇತಕ್ಕೆ? ಒರ್ವಾನೊಬ್ಬನು ಭವಿಯ ಒಡನಾಡಲು ಅವನ ಪಾಪವು ಅವನಲ್ಲಿಪ್ಪುದಲ್ಲದೆ ಮಿಕ್ಕಿನ ಗೃಹಕ್ಕೆ ಸಂಬಂಧವೇನು? `ಮಾಡಿದವರನಲ್ಲದೆ ಮಿಕ್ಕಿನವರ ಸಂಕಲ್ಪವ ಮಾಡಲಾಗದು'ಯೆಂಬುದು ಗುರುವಚನ. ಹೆಣ್ಣು ಬಿಂದು ಸಂಬಂಧವಾಗಲು ಆ ಭೋಗಕ್ಕೆ ಶರಣನು ಅದನು ಮನದಲ್ಲಿ ಕಂಡು ಸಂತೋಷವಾಗಿಪ್ಪ. ಇಂತೀ ಭಾವಶುದ್ಧವುಳ್ಳಾತನು ಮತ್ರ್ಯಲೋಕಕ್ಕೆ ಮರಳಿ ಬಾರನೆಂಬುದು. ಶರಣ ಸಕಲವಿದ್ಯವ ಕಲಿತು ಫಲವೇನು? ನಿಂದ್ಯನೆ ದೊರಕೊಂಡಮೇಲೆ? ಹುಣ್ಣು ಹುಗಳು ಕೋಷ್ಠವಾಗಿರಲು, ಅವರ ಕಂಡು ಜರಿಯಲಾರದೆಂಬುದೆನ್ನ ಭಾಷೆ. ಇಂದ್ರಿಯಸುಖಕ್ಕೆ ಹೋಗಿ ಬಿದ್ದು ಶಿವಮಾಡಿದರಾಯಿತ್ತೆಂಬ ಅವಿಚಾರದ ನುಡಿಯ ಕೇಳಲಾಗದು. ತನ್ನ ಮನವು ಶುದ್ಧವಾದ ಮೇಲೆ, ಸಕಲ ಸುಖಂಗಳು ತನಗುಂಟಲ್ಲದೆ, ಜ್ಞಾನಿಗೆ ಕತ್ತಲೆಯಿಲ್ಲ. ಅಜ್ಞಾನಿಗೆ ಪಾಪವಿಲ್ಲ. ಇದನರಿದು, ಮುಂದುಗೊಂಡು ತಿರುಗುವ, ಅಣ್ಣಗಳ ಕಂಡು, ನಗುತಿರ್ಪರು ನಿಮ್ಮ ಶರಣರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಭವಿತನಕ್ಕೆ ಹೇಸಿ ಭಕ್ತನಾಗಬೇಕೆಂದು, ಜಂಗಮವ ಕಂಡು ಗೃಹಕ್ಕೆ ಬಿಜಯಂಗೈಸಿ ತಂದು, ತೊತ್ತಿನ ಕೈಯಲ್ಲಿ ಅಗ್ಗವಣಿಯ ತಂದಿರಿಸಿ ಪಾದಾರ್ಚನೆಯ ಮಾಡುವ ಭಕ್ತನ ಯುಕ್ತಿಯ ಕೇಳಿರಣ್ಣಾ ! ಭಕ್ತರ ಬಸುರಲ್ಲಿ ಬರುತ ಬರುತಲಾ ತೊತ್ತಿನ ಬಸುರಲ್ಲಿ ಬರುತ್ತಿಪ್ಪನು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಭಕ್ತನ ಕಾಯವ ಜಂಗಮ ಧರಿಸಿಪ್ಪ ನೋಡಾ, ಜಂಗಮದ ಪ್ರಾಣವ ಭಕ್ತ ಧರಿಸಿಪ್ಪ ನೋಡಾ. ಭಕ್ತನಲ್ಲಿಯೂ ಭಕ್ತಜಂಗಮವೆರಡೂ ಸನ್ನಹಿತ, ಜಂಗಮದಲ್ಲಿಯೂ ಜಂಗಮಭಕ್ತವೆರಡೂ ಸನ್ನಹಿತ, ಜಂಗಮಕ್ಕಾದಡೂ ಭಕ್ತಿಯೆ ಬೇಕು, ಭಕ್ತಂಗೆ ಭಕ್ತಿಸ್ಥಲವೆ ಬೇಕು. ಭಕ್ತನ ಅರ್ಥಪ್ರಾಣಾಬ್ಥಿಮಾನಕ್ಕೆ ತಾನೆ ಕಾರಣನೆಂದು ಬಂದ ಜಂಗಮ ಆ ಭಕ್ತನ ಮನೆಗೆ ತಾನೆ ಕರ್ತನಾಗಿ ಹೊಕ್ಕು, ತನುಮನಧನಂಗಳೆಲ್ಲವನೊಳಕೊಂಡು, ಆ ಭಕ್ತನ ಪಾವನವ ಮಾಡಬಲ್ಲಡೆ ಆತ ಜಂಗಮವೆಂಬೆ. ಆ ಜಂಗಮದ ಗಳಗರ್ಜನೆಗೆ ಸೈರಿಸಿ, ಮುಡುಹಿಂಗ ಮುನ್ನೂರು ಪಟ್ಟವ ಕಟ್ಟಿದಡೆ ಆತ ಭಕ್ತನೆಂಬೆ. ತನ್ನ ಮಠಕ್ಕೆ ತಾ ಬಹಡೆ ಮುನಿಸುಂಟೆ ಕೂಡಲಸಂಗನ ಶರಣರ ಮನೆಯ ಬಾಗಿಲುಗಾಹಿ ನಾನಾಗಿರ್ದು ಕರ್ತರು ಗೃಹಕ್ಕೆ ಬಂದಡೆ ಬೇಕು ಬೇಡೆನ್ನೆ.
--------------
ಬಸವಣ್ಣ
ಜ್ಯೋತಿ ಇದ್ದ ಗೃಹಕ್ಕೆ ತಮವುಂಟೇನಯ್ಯಾ ? ಪರಂಜ್ಯೋತಿಲಿಂಗದ ಸಂಗದ ಬೆಳಗಲಿಹ ಮಹಾತ್ಮನಿಗೆ ಮಾಯಾತಮಂಧದ ಭೀತಿಯುಂಟೇನಯ್ಯಾ ? ಕಂಠೀರWವಘೆನಿಹ ವನದೊಳು ಕರಿವುಂಟೇನಯ್ಯಾ ? ಲಿಂಗವೆಂಬ ಸಿಂಹದ ಮರೆಯಬಿದ್ದಾತಂಗೆ ಅಷ್ಟಮದವೆಂಬ ಕರಿಯ ಭಯವುಂಟೇನಯ್ಯಾ ? ಗರುಡನಿದ್ದ ಸ್ಥಾನದಲ್ಲಿಗೆ ಉರಗನ ಭಯವುಂಟೇನಯ್ಯಾ ? ಪರಮಾತ್ಮನೊಳುಬೆರೆದ ನಿಬ್ಬೆರಗಿ ಶರಣಂಗೆ ಕುಂಡಲಿಸರ್ಪನ ಭಯವುಂಟೇನಯ್ಯಾ ? ಆನೆಯ ಮೇಲೆ ಹೋಗುವ ಮಾನವನಿಗೆ ಶ್ವಾನನ ಭಯವುಂಟೇನಯ್ಯಾ ? ಲಿಂಗಾಂಗಸಮರಸವೆಂಬ ಮದ ತಲೆಗೇರಿ ಹೋಗುವ ಶಿವಶರಣಂಗೆ ಪಂಚೇಂದ್ರಿಯವೆಂಬ ಶ್ವಾನನ ಭಯವುಂಟೇನಯ್ಯಾ ? ಉರಿವುತಿಹ ಅಗ್ನಿಗೆ ಸೀತದ ಭಯವುಂಟೇನಯ್ಯಾ ? ಗುರುಕರುಣಾಗ್ನಿಯಲ್ಲಿ ಭವದಗ್ಧನಾದ ಶರಣಂಗೆ ಅನ್ಯಭಯಭೀತಿಯ ಚಳಿ ಉಂಟೇನಯ್ಯಾ ? ಉರಗಮುಟ್ಟಲು ಸರ್ವಾಂಗವನೆಲ್ಲ ವಿಷಕೊಂಡಂತೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಲಿಂಗಸೋಂಕಿದವರೆಲ್ಲ ಸರ್ವಾಂಗಲಿಂಗಿಗಳಾದುದ ನೋಡಾ.
--------------
ಹೇಮಗಲ್ಲ ಹಂಪ
ಒಂದು ಪಟ್ಟಣದೊಳಗೆ ಛಪ್ಪನ್ನ ಗೃಹಕ್ಕೆ ಒಂದೆ ಕೀಲಾಗಿ, ಆ ಕೀಲಿನ ಸಕೀಲವನಾರಿಗೂ ಕಾಣಬಾರದೆಂದೂ_ ಭಾವಿಸಿ ಕಂಡರು ಒಂದೆ ಮನದವರು. ಉಳಿದವರೆಲ್ಲ ಆ ಕೀಲಿನೊಳಗಾಗಿ ಜೀವ ಜೀರ್ಣವಾಯಿತ್ತು. ಹದಿನೆಂಟು ಸ್ಥಾನದ ಕೀಲಗಳ ಸಂಗವನಳಿದು, ಸುಸಂಗವಾಗಿ ಶೃಂಗಾರ ಭೃಂಗಾರವಾಗದೆ ಒಂದು ಮುಖದಲ್ಲಿ ನಿಂದು ಗುಹೇಶ್ವರಾ_ನಿಮ್ಮ ಶರಣ ಚನ್ನಬಸವಣ್ಣ ಹೊರಗಾದ !
--------------
ಅಲ್ಲಮಪ್ರಭುದೇವರು
ಗುರುಲಿಂಗಜಂಗಮದಲ್ಲಿ ಅತ್ಯಂತ ಪ್ರೇಮಿಗಳೆಂದು ಪರರ ಮುಂದೆ ತಮ್ಮ ಬಿಂಕವ ತೋರುವರು. ತೋರಿದಂತೆ ಆಚರಣೆಯ ತೋರರು. ಅದೆಂತೆಂದಡೆ : ತನ್ನ ದೀಕ್ಷೋಪದೇಶವ ಮಾಡಿದಂಥ ಗುರು ಮನೆಗೆ ಬಂದರೆ ಮನ್ನಿಸರು. ನಯನುಡಿಯ ಮಾತನಾಡರು. ಒಂದು ಹೊನ್ನು ವಸ್ತ್ರವ ಬೇಡಿದರೆ ಇಲ್ಲೆಂಬರಲ್ಲದೆ ಕೊಟ್ಟು ಸಂತೋಷಪಡಿಸುವವರಿಲ್ಲ. ಗ್ರಾಮದ ಮಧ್ಯದಲ್ಲಿ ಆವನೊಬ್ಬ ಜಾತಿಹಾಸ್ಯಕಾರನು ಬಂದು, ಡೋಲು ಡಮಾಮಿಯ ಹೊಡೆದು, ಬೊಬ್ಬಿಯ ರವಸದಿಂದ ಮಣ್ಣವರಸಿ, ರಟ್ಟಿ ಮಂಡಿಯ ತಿಕ್ಕಿ, ತೊಡೆಯ ಚಪ್ಪರಿಸಿ, ಕೋ ಎಂದು ಕೂಗಿ, ಭೂಮಿಗೆ ಕೈ ಹಚ್ಚಿ, ಲಾಗದ ಮೇಲೆ ಲಾಗ ಹೊಡೆದು, ಅಂತರಪುಟಕಿಯಲ್ಲಿ ಮೂರು ಹೊರಳಿಕೆಯ ಹೊರಳಿ, ಮುಂದೆ ಬಂದು ನಿಂತು, ಮಜುರೆಯ ಮೇಲೆ ಮಜುರೆಯ ಹೊಡೆದು, ಅವರ ಹೆಸರೆತ್ತಿ ಕೊಂಡಾಡಲು, ಅವರ ಲಾಗಕ್ಕೆ ಮೆಚ್ಚಿ ಶಾಲು ಶಕಲಾತಿ ಮೊದಲಾದ ವಸ್ತ್ರವ ಕೊಟ್ಟು, ಕಾಲತೊಡರು ಮುಂಗೈಸರಪಳಿ ಛತ್ರ ಚಾಮರ ಜಲ್ಲಿ ಮೊದಲಾದ ಚಾಜವ ಕೊಟ್ಟು, ಸಂತೋಷಪಡಿಸುವರಲ್ಲದೆ ಇಲ್ಲೆಂಬರೇ? ಇಲ್ಲೆನ್ನರಯ್ಯ. ಮತ್ತಂ, ಲಿಂಗಪೂಜೆಯ ಮಾಡೆಂದಡೆ ಎನ್ನಿಂದಾಗದೆಂಬರು. ಲಿಂಗಕ್ಕೆ ಸಕಲಪದಾರ್ಥವನರ್ಪಿಸಿ ಸಲಿಸೆಂದಡೆ ಎನ್ನಿಂದಾಗದೆಂದು, ಬಂದ ಪದಾರ್ಥವ ಲಿಂಗಕ್ಕೆ ತೋರದೆ ಬಾಯಿಗೆಬಂದಂತೆ ತಿಂಬುವರು. ಜಟ್ಟಿಂಗ ಹಿರಿವಡ್ಯಾ ಲಕ್ಕಿ ದುರ್ಗಿ ಚಂಡಿ ಮಾರಿಯ ಪೂಜಿಸೆಂದಡೆ ತನುಮನವು ಹೊಳೆಯುಬ್ಬಿದಂತೆ ಉಬ್ಬಿ, ಹೊತ್ತಾರೆ ಎದ್ದು ಪತ್ರಿ ಪುಷ್ಪವ ತಂದು, ಒಂದೊತ್ತು ಉಪವಾಸ ಮಾಡಿ, ಮೈಲಿಗೆಯ ಕಳೆದು ಮಡಿಯನುಟ್ಟು, ಮನಪೂರ್ವಕದಿಂ ಪೂಜೋಪಚಾರವ ಮಾಡಿ, ಭೂಮಿಯಲ್ಲಿ ಕಾಯಕಷ್ಟವ ಮಾಡಿ ಬೆಳೆದಂಥ ಹದಿನೆಂಟು ಜೀನಸಿನ ಧಾನ್ಯವ ತಂದು ಪಾಕ ಮಾಡಿ, ಆ ದೇವತೆಗಳಿಗೆ ನೈವೇದ್ಯವ ಕೊಟ್ಟು, ಮರಳಿ ತಾವು ಉಂಬುವರಲ್ಲದೆ, ಅಂತಪ್ಪ ದೇವತೆಗಳಿಗೆ ಕೊಡದ ಮುನ್ನವೆ ಸಾಯಂಕಾಲಪರಿಯಂತರವಾದಡೂ ಒಂದು ಬಿಂದು ಉದಕ ಒಂದಗಳನ್ನವ ಕೊಳ್ಳದೆ, ತನು-ಮನ ಬಳಲಿಸುವರಯ್ಯಾ. ಮತ್ತಂ, ಜಂಗಮಲಿಂಗವು ಹಸಿವು ತೃಷೆ ಆಪ್ಯಾಯನವಾಗಿ ಮಧ್ಯಾಹ್ನ ಸಾಯಂಕಾಲದೊಳಗೆ ಭಿಕ್ಷಕ್ಕೆ ಬಂದಡೆ, ಅನುಕೂಲವಿಲ್ಲ, ಮನೆಯೊಳಗೆ ಹಡದಾರ ಗದ್ದಲುಂಟು ಮನೆಯೊಳಗೆ ಗೃಹಸ್ಥರು ಬಂದಾರೆ, ಘನಮಾಡಿಕೊಳ್ಳಿರಯ್ಯಾ ಮುಂದಕ್ಕೆ ಎಂಬರಲ್ಲದೆ, ಅಂತಪ್ಪ ಆಪ್ಯಾಯನವಾದ ಜಂಗಮವ ಕರೆದು ಅನ್ನೋದಕವ ನೀಡಿ, ತೃಪ್ತಿಯ ಬಡಿಸುವರೆ ? ಬಡಿಸುವದಿಲ್ಲ. ಊರೊಳಗೆ ಒಬ್ಬ ಜಾರಸ್ತ್ರೀಯಳು ಉಂಡು ವೀಳ್ಯವಕೊಂಡು ಸಹಜದಲ್ಲಿ ತಮ್ಮ ಗೃಹಕ್ಕೆ ಬಂದಲ್ಲಿ ಆ ಜಾರಸ್ತ್ರೀಗೆ ಮನೆಯವರೆಲ್ಲರು ಉಣ್ಣು ಏಳು ಉಂಬೇಳೆಂದು ಆಕೆಯ ಕರವ ಪಿಡಿದು ಕರೆವರಯ್ಯಾ. ಅವಳು ಎನಗೆ ಹಸುವಿಲ್ಲೆಂದು ತಮ್ಮ ಗೃಹಕ್ಕೆ ಹೋಗಲು, ಅವಳು ಹೋದಮೇಲೆ ದೇವರಿಗೆ ಎಡಿಯ ಕಳಿಸಿದಂತೆ ಕಳುಹುವರಯ್ಯ. ಇಂತಪ್ಪ ತ್ರಿವಿಧಭ್ರಷ್ಟ ಹೊಲೆ ಮಾದಿಗರಿಗೆ ಗುರು-ಲಿಂಗ-ಜಂಗಮದ ಪ್ರೇಮಿಗಳಾದ ಸದ್ಭಕ್ತರೆಂದಡೆ, ಶಿವಜ್ಞಾನಿಗಳಾದ ಶಿವಶರಣರು ಕಂಡು ತಮ್ಮೊಳಗೆ ತಾವೇ ನಕ್ಕು ಅರಿಯದವರಂತೆ ಶಬ್ದಮುಗ್ಧರಾಗಿ ಸುಮ್ಮನೆ ಇರ್ದರು ಕಾಣಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಇತ್ತಲಾಗಿ,ಅದೇ ನಿರಾಕಾರಪರಿಪೂರ್ಣ ಪರಶಿವಮೂರ್ತಿಯೆ ನಿಜಗುರುಲಿಂಗಜಂಗಮಲೀಲೆಯ ಧರಿಸಿ, ಪಾವನಾರ್ಥವಾಗಿ ಪಂಚಮಹಾಪಾತಕಸೂತಕಂಗಳ ಬಾಹ್ಯಾಂತರಂಗಳಲ್ಲಿ ಮಹಾಜ್ಞಾನ ಕ್ರಿಯಾಚರಣದಿಂದ ಕಡಿದು ಕಂಡರಿಸಿ, ಬಿಡುಗಡೆಯನುಳ್ಳ ಹರಗಣಂಗಳಿಗೆ ನಿಜೇಷ*ಲಿಂಗ ಭಸಿತ ರುದ್ರಾಕ್ಷಿಗಳ ಕಾಯವೆನಿಸಿ, ಸತ್ಕ್ರಿಯಾಚಾರ ಭಕ್ತಿ ಸಾಧನೆಯ ನಿರ್ವಾಣಪದವಿತ್ತರು ನೋಡಾ. ಅಲ್ಲಿಂದ ಚಿತ್ಪಾದೋದಕ ಪ್ರಸಾದ ಮಂತ್ರವೆ ಪ್ರಾಣವೆನಿಸಿ, ಶಿವಯೋಗಾನುಸಂಧಾನದಿಂದ ಮಹಾಜ್ಞಾನದ ಚಿದ್ಬೆಳಗನಿತ್ತರು ನೋಡಾ. ಆ ಬೆಳಗೆ ತಾವಾದ ಶರಣಗಣಾರಾಧ್ಯ ಭಕ್ತಮಹೇಶ್ವರರು, ಅನ್ಯಮಣಿಮಾಲೆಗಳ ಧರಿಸಿ, ಅನ್ಯಜಪಕ್ರಿಯೆಗಳ ಮಾಡಲಾಗದು. ಅದೇನು ಕಾರಣವೆಂದಡೆ : ಹಿಂದೆ ಕಲ್ಯಾಣಪಟ್ಟಣದಲ್ಲಿ ಚೆನ್ನಮಲ್ಲಿಕಾರ್ಜುನಾರಾಧ್ಯರು, ಉಡುತಡಿ ಮಹಾದೇವಿಗಳು ಪುರುಷನ ಬಿಡುಗಡೆಯ ಮಾಡಿ, ವೈರಾಗ್ಯದೊಳ್ ಅಲ್ಲಮಪ್ರಭುವಿದ್ದೆಡೆಗೆ ಬಂದು ಶರಣಾಗತರಾಗಲು, ಆ ಪ್ರಭುಸ್ವಾಮಿಗಳು ಅವರೀರ್ವರ ಭಕ್ತಿಜ್ಞಾನವೈರಾಗ್ಯ ಸದಾಚಾರಕ್ರಿಯಾವರ್ತನೆಯ ನೋಡಿ ಸಂತೋಷಗೊಂಡು, ಇಂತಪ್ಪ ಸದ್ಧರ್ಮಿಗಳಂ ದಂಡನಾಥ ಮೊದಲಾಗಿ ಅಕ್ಕನಾಗಾಂಬಿಕೆಯು ಮೊದಲಾದ ಪ್ರಮಥಗಣಾದ್ಯರಿಗೆ ದರುಶನ ಸ್ಪರುಶನ ಸಂಭಾಷಣೆ ಪಾದೋದಕ ಪ್ರಸಾದಾನುಭಾವವೆಂಬ ಷಡ್ರಸಾಮೃತವ ಕೊಡಿಸಬೇಕೆಂದು, ತಮ್ಮ ಭಾವದ ಕೊನೆಯಲ್ಲಿ ಅಚ್ಚೊತ್ತಿ , ಹರುಷಾನಂದ ಹೊರಚೆಲ್ಲಿ , ಆಗವರೀರ್ವರಂ ಕೈವಿಡಿದು ಕಲ್ಯಾಣಪಟ್ಟಣಕ್ಕೆ ಹೋಗಿ, ಅನಾದಿ ಪ್ರಮಥಗಣಾಧೀಶ್ವರರ ಸಂದರ್ಶನವಾಗಬೇಕೆಂದು ಕರೆದಲ್ಲಿ , ಆಗ ಮಹಾದೇವಿಯಮ್ಮನು ಸಂತೋಷಂಗೊಂಡು, ಹರಹರಾ ಸ್ವಾಮಿ ಅವರಲ್ಲಿ ಸನ್ಮಾರ್ಗ ನಡೆನುಡಿಗಳೇನೆಂದು ಬೆಸಗೊಳಲು, ಅವರು ಕೇವಲ ಪರಿಪೂರ್ಣಜ್ಯೋತಿರ್ಮಯ ಲಿಂಗಜಂಗಮದಲ್ಲಿ ಕೂಟಸ್ಥರಾಗಿ, ಬಾಹ್ಯಾಂತರಂಗದೊಳ್ ಪರಮಪಾತಕ ಸೂತಕ ಅನಾಚಾರ ಅಜ್ಞಾನ ಅಪಶೈವ ಅಸತ್ಯವಿರಹಿತರಾಗಿ, ನಿರ್ವಂಚಕ ನಿಃಪ್ರಪಂಚ ನಿರ್ವಾಣ ನಿಃಕಾಮ ಸತ್ಯಶುದ್ಧಕಾಯಕ ಸದಾಚಾರ ಕ್ರಿಯಾಜ್ಞಾನಾನಂದ ನಡೆನುಡಿಯುಳ್ಳ ಸದ್ಧರ್ಮ ಅಪಾತ್ರ ಸತ್ಪಾತ್ರವರಿದ ಶಿವಸನ್ಮಾನಿತರು, ನಿಜಾನಂದಯೋಗತೂರ್ಯರು, ಕೇವಲ ಪರಶಿವನಪ್ಪಣೆವಿಡಿದು ಚಿಚ್ಛಕ್ತಿಗಳೊಡಗೂಡಿ ಪಾವನಾರ್ಥ ಅಷ್ಟಾವರಣ ನಿಜವೀರಶೈವಮತೋದ್ಧಾರಕ ಮಹಿಮರ ಚರಣದ ದರುಶನಮಾತ್ರದಿಂದಿವೆ ಜ್ಯೋತಿರ್ಮಯ ಕೈವಲ್ಯಪದವಪ್ಪುದು ತಪ್ಪದುಯೆಂದು ಅಲ್ಲಮನುಸುರಲು, ಆಗ ಸಮ್ಯಕ್‍ಜ್ಞಾನಿ ಮಹಾದೇವಿಯರು ಸತ್ಕ್ರಿಯಾಮೂರ್ತಿ ಚೆನ್ನಮಲ್ಲಿಕಾರ್ಜುನಗುರುವರನು ಸಂತೋಷಗೊಂಡು, ತ್ರಿವಿಧರು ಕಲ್ಯಾಣಕ್ಕೆ ಅಭಿಮುಖವಾಗಲು, ಆ ಪ್ರಶ್ನೆಯು ಹಿರಿಯ ದಂಡನಾಥಂಗೆ ಲಿಂಗದಲ್ಲಿ ಪ್ರಸನ್ನವಾಗಲು, ಆಗ ಸಮಸ್ತಪ್ರಮಥರೊಡಗೂಡಿ, ಆ ಅಲ್ಲಮರು ಸಹಿತ ತ್ರಿವಿಧರು ಬರುವ ಮಾರ್ಗಪಥದಲ್ಲಿ ಅಡಿಯಿಡುವುದರೊಳಗೆ, ಇಳೆಯಾಳ ಬ್ರಹ್ಮಯ್ಯನೆಂಬ ಶಿವಶರಣನು ಈ ತ್ರಿವಿಧರಿಗೆ ಲಿಂಗಾರ್ಚನಾರ್ಪಣಕ್ಕೆ ಶರಣಾಗತನಾಗಿರಲು, ಅವರು ಅರ್ಚನಾರ್ಪಣಕ್ಕೆ ಬಪ್ಪದೆ ಇರ್ಪಷ್ಟರೊಳಗೆ ಹಿರಿದಂಡನಾಥ ಪ್ರಮಥರೊಡಗೂಡಿ, ಅಲ್ಲಮ ಮೊದಲಾದ ತ್ರಿವಿಧರಿಗೆ ವಂದಿಸಿ, ಲಿಂಗಾರ್ಚನಾರ್ಪಣಕ್ಕೆ ಶರಣುಶರಣಾರ್ಥಿಯೆನಲು, ಆಗ ಮಹಾದೇವಿಯಮ್ಮನವರು ಒಂದು ಕಡೆಗೆ ಕೇಶಾಂಬರವ ಹೊದೆದು, ಶರಣುಶರಣಾರ್ಥಿ ನಿಜವೀರಶೈವ ಸದ್ಧರ್ಮ ದಂಡನಾಥ ಮೊದಲಾದ ಸಮಸ್ತ ಗಣಾರಾಧ್ಯರುಗಳ ಶ್ರೀಪಾದಪದ್ಮಂಗಳಿಗೆಯೆಂದು ಸ್ತುತಿಸುವ ದನಿಯ ಕೇಳಿ, ಸಮಸ್ತ ಗಣಸಮ್ಮೇಳವೆಲ್ಲ ಒಪ್ಪಿ ಸಂತೋಷಗೊಂಡು, ಶರಣೆಗೆ ಶರಣೆಂದು ಬಿನ್ನಹವೆನಲು, ನಿಮಗಿಂದ ಮೊದಲೆ ಶರಣುಹೊಕ್ಕ ಶಿವಶರಣೆಗೆ ಏನಪ್ಪಣೆ ಸ್ವಾಮಿಯೆನಲು, ಆಗ ಆ ಬ್ರಹ್ಮಯ್ಯನು ಅಲ್ಲಮಪ್ರಭು ಚನ್ನಮಲ್ಲಿಕಾರ್ಜುನ ದಂಡನಾಥ ಮೊದಲಾದ ಸಮಸ್ತಪ್ರಮಥಗಣ ಸಮ್ಮೇಳಕ್ಕೆ ಶರಣುಶರಣಾರ್ಥಿ, ಈ ತನು-ಮನ-ಧನವು ನಿಮಗೆ ಸಮರ್ಪಣೆಯಾಗಬೇಕೆಂದು ಅಭಿವಂದಿಸಲು, ಆಗ ಕಲಿಗಣನಾಥ ಕಲಕೇತಯ್ಯಗಳು ನೀವು ನಿಮ್ಮ ಪ್ರಮಥರು ಅರೆಭಕ್ತಿಯಲ್ಲಾಚರಿಸುತ್ತಿಪ್ಪಿರಿ, ನಿಮ್ಮ ಗೃಹಕ್ಕೆ ನಿರಾಭಾರಿವೀರಶೈವಸಂಪನ್ನೆ ಮಹಾದೇವಿಯಮ್ಮನವರು ಬರೋದುಯೆಂಥಾದ್ದೊ ನೀವೆ ಬಲ್ಲಿರಿ. ಆ ಮಾತ ನೀವೆ ವಿಚಾರಿಸಬೇಕೆಂದು ನುಡಿಯಲು, ಆಗ ಬ್ರಹ್ಮಯ್ಯಗಳು ತಮ್ಮ ಕರ್ತನಾದ ಕಿನ್ನರಿಯ ಬ್ರಹ್ಮಯ್ಯನ ಕಡೆಗೆ ದೃಷ್ಟಿಯಿಟ್ಟು ನೋಡಲು, ಆ ಕಿನ್ನರಿಯ ಬ್ರಹ್ಮಯ್ಯನು ಹರಹರಾ, ಶರಣುಶರಣಾರ್ಥಿ, ನಮಗೆ ತಿಳಿಯದು, ನಿಮ್ಮ ಕೃಪೆಯಾದಲ್ಲಿ ನಮ್ಮ ಅರೆಭಕ್ತಿಸ್ಥಲವನಳಿದುಳಿದು, ನಿಮ್ಮ ಸದ್ಧರ್ಮ ನಿಜಭಕ್ತಿಮಾರ್ಗವ ಕರುಣಿಸಿ, ದಯವಿಟ್ಟು ಪ್ರತಿಪಾಲರ ಮಾಡಿ ರಕ್ಷಿಸಬೇಕಯ್ಯಸ್ವಾಮಿಯೆಂದು ಅಭಿವಂದಿಸಲು, ಅಯ್ಯಾ, ನಿಮ್ಮಿಬ್ಬರಿಂದಲೇನಾಯ್ತು ? ಇನ್ನೂ ಅನೇಕರುಂಟುಯೆಂದು ಕಲಿಗಣ ಕಲಕೇತರು ನುಡಿಯಲು, ಹರಹರಾ, ಪ್ರಭುಸ್ವಾಮಿಗಳೆ ನಿಮ್ಮಲ್ಲಿ ನುಡಿ ಎರಡಾಯಿತ್ತು , ಅದೇನು ಕಾರಣವೆಂದು ಮಹಾದೇವಿಯಮ್ಮನವರು ಪ್ರಭುವಿನೊಡನೆ ನುಡಿಯಲು, ಆಗ ಆ ಪ್ರಭುಸ್ವಾಮಿಗಳು ಅಹುದಹುದು ತಾಯಿ ನಾವು ನುಡಿದ ನುಡಿ ದಿಟ ದಿಟವು. ನಿಮ್ಮಂಶವಲ್ಲವಾದಡೆ ನಿಮಗಡಿಯಿಡಲಂಜೆಯೆಂದು ನುಡಿಯಲು, ಹರಹರಾ, ಹಾಗಾದೊಡೆ ಅವರ ಬಿನ್ನಹಂಗಳ ಕೈಕೊಂಡು ಅವರಲ್ಲಿರುವ ಅಸತ್ಯಾಚಾರದವಗುಣಗಳ ನಡೆನುಡಿಗಳ ಪರಿಹರಿಸಬೇಕು. ಮುಸುಂಕೇತಕೆ ಸ್ವಾಮಿಯೆಂದು ಮಹಾದೇವಮ್ಮನವರು ನುಡಿಯಲು, ಆಗ ಹಿರಿದಂಡನಾಥನು ಹರಹರಾ ನಮೋ ನಮೋಯೆಂದು ಕಲಿಗಣನಾಥ ಕಲಕೇತರೆ ನಮ್ಮವಗುಣಂಗಳ ಪರಿಹರಿಸಿ, ನಿಮ್ಮ ಕವಳಿಗೆಗೆ ಯೋಗ್ಯರಾಗುವಂತೆ ಪ್ರತಿಜ್ಞೆಯ ಮಾಡಿ, ನಮ್ಮ ಬಿನ್ನಪವನವಧರಿಸಿ ಲಿಂಗಾರ್ಚನಾರ್ಪಣಗಳ ಮಾಡಬೇಕು ಗುರುಗಳಿರಾಯೆಂದು ಅಭಿವಂದಿಸಲು, ಆ ನುಡಿಗೆ ಸಮಸ್ತಗಣ ಪ್ರಮಥಗಣಾರಾಧ್ಯರೆಲ್ಲ ಅಭಿವಂದಿಸಿ, ನಮ್ಮರೆಭಕ್ತಿ ನಿಲುಕಡೆಯೇನೆಂದು ಹಸ್ತಾಂಜುಲಿತರಾಗಿ ಇದಿರಿಗೆ ನಿಲಲು, ಆಗ ಆ ಕಲಿಗಣನಾಥ ಕಲಕೇತಯ್ಯಗಳು ನುಡಿದ ಪ್ರತ್ಯುತ್ತರವು ಅದೆಂತೆಂದೊಡೆ: ಅಯ್ಯಾ, ಕೈಲಾಸದಿಂದ ಪರಶಿವಮೂರ್ತಿ ನಿಮಗೆ ಅಷ್ಟಾವರಣ ಪಂಚಾಚಾರ ಸತ್ಯಶುದ್ಧ ನಡೆನುಡಿ ವೀರಶೈವಮತ ಸದ್ಭಕ್ತಿ ಮಾರ್ಗವ ಮತ್ರ್ಯಲೋಕದ ಮಹಾಗಣಗಳಿಗೆ ತೋರಿ, ಎಚ್ಚರವೆಚ್ಚರವೆಂದು ಬೆನ್ನಮೇಲೆ ಚಪ್ಪರಿಸಿ, ನಿಮ್ಮ ತನುಮನಧನವ ಶ್ರೀಗುರುಲಿಂಗಜಂಗಮಕ್ಕೆ ಸಮರ್ಪಿಸಿ, ವರಗುರುಲಿಂಗಜಂಗಮದ ಮಹಾಬೆಳಗಿನೊಳಗೆ ಬನ್ನಿರೆಂದು ಪ್ರತಿಜ್ಞೆಯ ಮಾಡಿ, ಪಂಚಪರುಷವ ಕೊಟ್ಟು, ಆ ಜಡಶಕ್ತಿಸಮ್ಮೇಳನೆನಿಸಿ ಕಳುಹಿಕೊಟ್ಟಲ್ಲಿ, ನೀವು ಬಂದು, ಎರಡುತೆರದಭಕ್ತಿಗೆ ನಿಂದುದೆ ಅರೆಭಕ್ತಿಸ್ಥಲವೆಂದು ನುಡಿಯಲು, ಆ ಎರಡುತೆರದ ಭಕ್ತಿ ವಿಚಾರವೆಂತೆಂದಡೆ : ಒಮ್ಮೆ ನಿಮ್ಮ ತನು-ಮನ-ಧನ, ನಿಮ್ಮ ಸತಿಸುತರ ತನುಮನಧನಂಗಳು ಶೈವಮತದವರ ಭೂಪ್ರತಿಷಾ*ದಿಗಳಿಗೆ ನೈವೇದ್ಯವಾಗಿರ್ಪವು. ಆ ನೈವೇದ್ಯವ ತಂದು ಶ್ರೀಗುರುಲಿಂಗಜಂಗಮಕ್ಕೆ ನಮ್ಮ ತನುಮನಧನವರ್ಪಿತವೆಂದು ಹುಸಿ ನುಡಿಯ ನುಡಿದು, ಎರಡು ಕಡೆಗೆ ತನುಮನಧನಂಗಳ ಚೆಲ್ಲಾಡಿ, ಅಶುದ್ಧವೆನಿಸಿ ಶುದ್ಧಸಿದ್ಧಪ್ರಸಿದ್ಧಪ್ರಸಾದ ನಮ್ಮ ತನುಮನಧನಂಗಳೆಂದು, ಕಾಯಾರ್ಪಣ ಕರಣಾರ್ಪಣ ಭಾವಾರ್ಪಣವೆಂದು ಒಪ್ಪವಿಟ್ಟು ನುಡಿವಲ್ಲಿ, ನೀವು ವೀರಶೈವಸಂಪನ್ನರೆಂತಾದಿರಿ ? ನಿಮ್ಮಲ್ಲಿ ಲಿಂಗಾರ್ಚನಾರ್ಪಣವೆಂತಾಗಬೇಕು ? ಹೇಳಿರಯ್ಯ ಪ್ರಮಥರೆಯೆಂದು ನುಡಿಯಲು, ಆಗ್ಯೆ ಏಳುನೂರಾಯೆಪ್ಪತ್ತು ಅಮರಗಣಂಗಳೆಲ್ಲ ಬೆರಗಾಗಿ, ಆ ಹರಹರಾ ಅಹುದಹುದೆಂದು ಬಂದ ನುಡಿ ತಪ್ಪಿ ನಡೆದೆವೆಂದು ಒಪ್ಪಿ ಒಡಂಬಟ್ಟು, ಅರೆಭಕ್ತಿ ಮಾಡುವವರ ವಿಚಾರಿಸಿ, ಕಡೆಗೆ ತೆಗೆದು ಗಣಿತವ ಮಾಡಿದಲ್ಲಿ, ಮುನ್ನೂರರವತ್ತು ಗಣಂಗಳಿರ್ಪರು. ಆ ಗಣಂಗಳ ಸಮ್ಮೇಳವ ಕೂಡಿಸಿ ಒಂದೊಡಲಮಾಡಿ, ನಿಮ್ಮೊಳಗಣ ಪ್ರೀತಿಯೇನೆಂದು ಮಹಾದೇವಮ್ಮನವರು ನುಡಿದು ಹಸ್ತಾಂಜುಲಿತರಾಗಿ ಬೆಸಗೊಳಲು, ಆಗ ಮುನ್ನೂರರವತ್ತು ಗಣಂಗಳು ನುಡಿವ ಪ್ರತ್ಯುತ್ತರ ಅದೆಂತೆಂದಡೆ : ಹರಹರಾ, ನಾವು ಬಂದ ಬಟ್ಟೆ ಅಹುದಹುದು, ಇಲ್ಲಿ ನಿಂದ ನಡೆ ಅಹುದಹುದು. ನಾವು ಕ್ರಿಯಾಮಾರ್ಗವ ಬಿಟ್ಟು ಮಹಾಜ್ಞಾನಮಾರ್ಗವ ಭಾವಿಸಿದೆವು, ಎಡವಿಬಿದ್ದೆವು, ತಪ್ಪನೋಡದೆ, ಒಪ್ಪವಿಟ್ಟು ಉಳುಹಿಕೊಳ್ಳಿರಯ್ಯ. ನಡೆಪರುಷ, ನುಡಿಪರುಷ, ನೋಟಪರುಷ, ಹಸ್ತಪರುಷ, ಭಾವಪರುಷರೆ ತ್ರಾಹಿ ತ್ರಾಹಿ, ನಮೋ ನಮೋಯೆಂದು ಅಭಿವಂದಿಸಲು, ಆಗ ಚೆನ್ನಮಲ್ಲಾರಾಧ್ಯರು, ನೀವು ತಪ್ಪಿದ ತಪ್ಪಿಗೆ ಆಜ್ಞೆಯೇನೆಂದು ನುಡಿಯಲು, ಆಗ್ಯೆ ಮುನ್ನೂರರವತ್ತು ಗಣಂಗಳು ನುಡಿದ ಪ್ರತ್ಯುತ್ತರವದೆಂತೆಂದೊಡೆ : ಅಯ್ಯಾ, ನಾವು ತಪ್ಪಿದ ತಪ್ಪಿಂಗೆ ಕ್ರಿಯಾಲೀಲೆಸಮಾಪ್ತಪರ್ಯಂತರವು ನಾವು ಮುನ್ನೂರರವತ್ತು ಕೂಡಿ, ನಿತ್ಯದಲ್ಲು ನಿಮಗೆ ಗುರುಲಿಂಗಜಂಗಮಕ್ಕೆ ಆರಾಧನೆಯ ಮಾಡಿ, ಕೌಪ ಕಟಿಸೂತ್ರ ಹುದುಗು ಶಿವದಾರ ವಿಭೂತಿ ವಸ್ತ್ರ ಪಾವುಡ ರಕ್ಷೆ ಪಾವುಗೆಗಳ ಪರುಷಕೊಂದು ಬಿನ್ನಹಗಳ ಸತ್ಯಶುದ್ಧ ಕಾಯಕವ ಮಾಡಿ, ಋಣಪಾತಕರಾಗದೆ, ನಿಮ್ಮ ತೊತ್ತಿನ ಪಡಿದೊತ್ತೆನಿಸಿರಯ್ಯಯೆಂದು ಅಭಿವಂದಿಸಲು, ಆಗ ಅಲ್ಲಮಪ್ರಭು ಮೊದಲಾದ ಘನಗಂಭೀರರೆಲ್ಲ ಒಪ್ಪಿ, ಶೈವಾರಾಧನೆಗಳಂ ಖಂಡಿಸಿ, ವೀರಶೈವ ಗುರುಲಿಂಗಜಂಗಮ ಭಕ್ತರೆ ಘನಕ್ಕೆ ಮಹಾಘನವೆಂದು ನುಡಿ ನಡೆ ಒಂದಾಗಿ, ಚೆನ್ನಮಲ್ಲಾರಾಧ್ಯರ ನಿರೂಪದಿಂದ ದಂಡನಾಥನ ಭಕ್ತಿಪ್ರಿಯರಾದ ಲಕ್ಷದಮೇಲೆ ತೊಂಬತ್ತಾರುಸಾವಿರ ಘನದೊಳಗೆ ಮಾರ್ಗಕ್ರಿಯೆ ಮೀರಿದ ಕ್ರಿಯಾಚರಣೆಸಂಬಂಧ ಸ್ವಸ್ವರೂಪ ಜ್ಞಾನಾಚಾರ ನಡೆನುಡಿ ಅಚ್ಚಪ್ರಸಾದ ನಿಚ್ಚಪ್ರಸಾದ ಸಮಯಪ್ರಸಾದವೆ ತಮಗೆ ಅಂಗ ಮನ ಪ್ರಾಣವಾಗಿ, ಮೊದಲಾದ ಚಿತ್ಕಲಾಪ್ರಸಾದ ಸಲ್ಲದ ಗಣಂಗಳ ಕಲಿಗಣನಾಥ ಕಲಕೇತರು ಖಂಡಿಸಿ ಆ ಹನ್ನೆರಡುಸಾವಿರಮಂ ತೆಗೆದು ಚೆನ್ನಮಲ್ಲಾರಾಧ್ಯರಿಗೆ ತೋರಲು, ಅವರು ಗಣಸಮೂಹಂಗಳೆಲ್ಲ ಸಂತೋಷದಿಂದ ಸನ್ಮತಂಬಟ್ಟು ಒಪ್ಪಿದ ತದನಂತರದೊಳು, ಪ್ರಭುಸ್ವಾಮಿಗಳು ಅಯ್ಯಾ, ದಂಡನಾಥ ಮೊದಲಾದ ಅಸಂಖ್ಯಾತ ಪ್ರಮಥಗಣಂಗಳೆ ಇನ್ನು ಹಿಂದಣ ಅರೆಭಕ್ತಿಸ್ಥಲವ ಮೆಟ್ಟಿದ ಪುತ್ರ ಮಿತ್ರ ಕಳತ್ರರ ಒಡಗೂಡಿ ಬಳಸಿದೊಡೆ, ಅಷ್ಟಾವರಣ ಪಂಚಾಚಾರಕ್ಕೆ ಹೊರಗೆಂದು ನಿಮ್ಮ ಗಣ ಮೆಟ್ಟಿಗೆಯಲಿ ಪಾವುಡವ ಕೊರಳಿಗೆ ಸುತ್ತಿ, ಭವದತ್ತ ನೂಂಕಿ, ಕಾಮಕಾಲರ ಪಾಶಕ್ಕೆ ಕೊಟ್ಟೆವೆಂದು ನುಡಿಯಲು, ಆ ಮಾತಿಗೆ ದಂಡನಾಥ ಮೊದಲಾದ ಅಚ್ಚಪ್ರಸಾದಿ ನಿಚ್ಚಪ್ರಸಾದಿ ಸಮಯಪ್ರಸಾದಿ ಚಿತ್ಕಲಾಪ್ರಸಾದಿಗಣಂಗಳೆಲ್ಲ ಎದ್ದು , ಹಸ್ತಾಂಜುಲಿತರಾಗಿ, ಹಸಾದ ಹಸಾದವೆಂದು ಕೈಕೊಂಡು, ಪರಮಪಾತಕಸೂತಕನಾಚರಂಗಳಂ ವಿಡಂಬಿಸಿ, ಶಿವಲಿಂಗಲಾಂಛನಯುಕ್ತರಾದ ಶಿವಜಂಗಮದ ಭಿಕ್ಷಾನ್ನದ ಶಬ್ದಮಂ ಕೇಳಿ, ಕ್ಷುಧೆಗೆ ಭಿಕ್ಷೆ, ಸೀತಕ್ಕೆ ವಸನಮಂ ಸಮರ್ಪಿಸಿ ಹಿರಿಕಿರಿದಿನ ನೂನಕೂನಂಗಳಂ ನೋಡದೆ ಶಿವರೂಪವೆಂದು ಭಾವಿಸಿ, ಅಲ್ಲಿ ಚೆನ್ನಮಲ್ಲಿಕಾರ್ಜುನಾರಾಧ್ಯ ಕಲಿಗಣನಾಥ ಕಲಕೇತರು ಖಂಡಿಸಿದ ಹನ್ನೆರಡುಸಾವಿರ ಪರಶಿವಜಂಗಮದೊಡನೆ ತೀರ್ಥಪ್ರಸಾದಾನುಭಾವ ಸಮರಸದಾಚರಣೆಯಂ ಬಳಸಿ ಬ್ರಹ್ಮಾನಂದರಾಗಿ, ಚಿತ್ಕಲಾಪ್ರಸಾದಿ ಜಂಗಮದೊಡವೆರೆದು, ಅಚ್ಚಪ್ರಸಾದಿಗಳು ಅಚ್ಚಪ್ರಸಾದಿಗಳೊಡವೆರೆದು, ನಿಚ್ಚಪ್ರಸಾದಿ ನಿಚ್ಚಪ್ರಸಾದಿಗಳೊಡವೆರೆದು, ಸಮಯಪ್ರಸಾದಿ ಸಮಯಪ್ರಸಾದಿಗಳೊಡವೆರೆದು ಒಂದೊಡಲಾಗಿ, ಚಿತ್ಕಲಾಪ್ರಸಾದಿಗಳು ತಮ್ಮಾನಂದದಿಂದ ಅಚ್ಚಪ್ರಸಾದಿಸ್ಥಲವನಾಚರಿಸಿದೊಡೆ ಬಹುಲೇಸು, ನಿಚ್ಚಪ್ರಸಾದಿ ಸಮಯಪ್ರಸಾದಿಗಳು ಅಚ್ಚಪ್ರಸಾದಿಸ್ಥಲವನಾಚರಿಸಿದೊಡೆ ಉತ್ತಮಕ್ಕುತ್ತಮ, ಅಚ್ಚಪ್ರಸಾದಿ ನಿಚ್ಚಪ್ರಸಾದಿಸ್ಥಲಕೆ ನಿಂದಡೆ ಅಯೋಗ್ಯವೆನಿಸುವುದು. ನಿಚ್ಚಪ್ರಸಾದಿ ಸಮಯಪ್ರಸಾದಿಸ್ಥಲಕೆ ನಿಂದೊಡೆ ಅಯೋಗ್ಯರೆನಿಸುವರು. ಈ ವರ್ಮಾದಿವರ್ಮಮಂ ತ್ರಿಕರಣದಲ್ಲಿ ಅರಿದು ಮರೆಯದೆ ಸಾವಧಾನದೆಚ್ಚರದೊಡನೆ ಲಿಂಗಾಂಗಸಮರಸೈಕ್ಯದೊಡನೆ ಕೂಡಿ ಎರಡಳಿದಿರಬಲ್ಲಾತ ನಿರವಯಪ್ರಭು ಮಹಾಂತ ತಾನೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಭಕ್ತ ಜಂಗಮದ ಪರಿಯ ಹೇಳಿಹೆನು ಕೇಳಿರಣ್ಣಾ: ಭಕ್ತರು ಜಂಗಮವಿದ್ದೆಡೆಗೆ ಹೋಗಿ, ದೀರ್ಘದಂಡ ನಮಸ್ಕಾರವಂ ಮಾಡಿ, ವಿಭೂತಿಯಂ ಕೊಟ್ಟು, ಎಲೆ ದೇವ. ನಿಮ್ಮ ತೊತ್ತು ಭೃತ್ಯನೆಂದು ಕಿಂಕುರ್ವಾಣತೆಯಂ ನುಡಿದು, ತೀರ್ಥಪ್ರಸಾದವನಿತ್ತು, ರಕ್ಷಿಸಬೇಕೆಂದು ಬಿನ್ನಪವನಿತ್ತು, ಕೊಂಡು ತನ್ನ ಗೃಹಕ್ಕೆ ಹೋಗಿ ಸಕಲಪದಾರ್ಥಂಗಳು ಆಯಿತ್ತಾದ ಬಳಿಕ ಬಂದು ನಮಸ್ಕಾರವಂ ಮಾಡಿ, ದೇವರಾಯವಾಯಿತ್ತು ಚಿತ್ತೈಸಿಯೆನೆ, ಒಳಿತೆಂದು ಆ ಜಂಗಮವು ಆ ಭಕ್ತನೊಡಗೂಡಿ ಗೃಹಕ್ಕೆ ಬಂದು ಉಲ್ಲಾಸದಿಂ ಆ ಭಕ್ತನು ಪಾದಾರ್ಚನೆಯ ಮಾಡಿ ಅಗ್ರ ಗದ್ದಿಗೆಯನಿಕ್ಕಿ ಮೂರ್ತಮಾಡಿಸಿ ಮರಳಿ ದೀರ್ಘದಂಡನಮಸ್ಕಾರಮಂ ಮಾಡಿ ತೀರ್ಥಪ್ರಸಾದಕ್ಕೆ ನಿರೂಪವೆ ಅಯ್ಯರಿ ಎಂದು ಎದ್ದು ಬಂದು ಆ ಜಂಗಮಕ್ಕೆ ನಮಸ್ಕರಿಸಿ ದಿವ್ಯಪಾದಮಂ ಪಿಡಿದು, ಸಾಕ್ಷಿ: ದೇಶಿಕಂ ಚರಣಾಂಗುಷ*ಂ[ಭಸಿ]ತಂ ಪ್ರಣಾಮಸ್ತಥಾ ಪಾದಪೂಜಾಮಿಮಾಂ ಕುರ್ಯಾತ್ ಗೋಪ್ಯಂ ಗೋಪ್ಯಂ ವರಾನನೇ ಎಂದು ವಿಭೂತಿಯಂ ಧರಿಸಿ, ಪತ್ರಿಪುಷ್ಪಗಳಿಂದ ಪೂಜೆಯಂ ಮಾಡಿ ತಾಂಬೂಲ ನೆನೆಗಡಲಿ ಮುಖ್ಯವಾದ ಫಲಾಹಾರಂಗಳನರ್ಪಿಸಿ ಪ್ರದಕ್ಷಿಣವಂ ಮಾಡಿ, ಸ್ತುತಿಸಿ, ನಮಸ್ಕರಿಸಿ ಹಸ್ತಪರುಶಮಂ ಮಾಡಿಕೊಂಡು, ಸಕಲಪದಾರ್ಥಂಗ[ಳ] ನೀಡಿ, ವಿಭೂತಿಯಂ ಮುಂದಿಟ್ಟು ನಮಸ್ಕರಿಸಿ ಕರವಂ ಮುಗಿದು ನಿಲ್ಲುವುದು ಭಕ್ತನಿಗೆ ಕರ್ತವ್ಯ. ಇನ್ನು ಜಂಗಮದ ಪರಿಯ ಹೇಳಿಹೆನು ಕೇಳಿರಣ್ಣಾ: ಜಂಗಮವೆ ಪರಾತ್ಪರ, ಜಂಗಮವೆ ಪರವಸ್ತು, ಇಂತಪ್ಪ ಜಂಗಮ ಭಕ್ತನ ಮೇಲಣ ಕರುಣದಿಂ ತೀರ್ಥವನಿತ್ತ ಬಳಿಕ ತಮ್ಮಿಷ್ಟಲಿಂಗ[ಕ್ಕೆ] ಕೊಟ್ಟುಕೊಂಬುದೆ ಜಂಗಮಕ್ಕೆ ಕರ್ತವ್ಯ. ಸಾಕ್ಷಿ: ಜಂಗಮಂ ಪರಾತ್ಪರಂ ಪಾದಾಂಗುಷ* ತೀರ್ಥಂ ತಥಾ ಸ್ವಯಂ ಲಿಂಗಾರ್ಪಿತ ಪೀತ್ವಾ ಜಂಗಮಃ ಪರಮೇಶ್ವರಃ ಮತ್ತಂ ಸ್ವಪಾದೋದಕ ತೀರ್ಥಾಂ ಚ ಸ್ವಲಿಂಗಸ್ಯ ಸಮರ್ಪ[ಣಂ] ಕೃತ್ವ್ಯಾ ವಿಭೇದವದ್ಭಕ್ತ್ಯಾ ಅರ್ಪಣೀಯಮನಂತರಂ ಇಂತೆಂಬ ಶ್ರುತ್ತ್ಯರ್ಥವನರಿಯದೆ ಬೇರೆ ತನಗೊಂದೆಡೆಯೆಂದು ಗೊಣಸೆ ತೆಗೆದುಕೊಂಡು ಎಡೆಮಾಡು ಭಕ್ತಾ ಎಂಬುದು ಜಂಗಮಕ್ಕೆ ಕ್ರಮವೆ? ಅಲ್ಲ. ಅದು ಗಣಸಮೇಳಕ್ಕೆ ಅಲ್ಲದ ಮಾತು. ಆತನ ಮಾತ ಕೇಳಿ ಎಡೆಮಾಡುವಾತ ಭಕ್ತನೆ? ಅಲ್ಲ. ಇವರಿಬ್ಬರ ಮುಖವ ನೋಡಲಾಗದೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಭಕ್ತರ ಹೆಚ್ಚು ಕುಂದು ಜಂಗಮದ ಹೆಚ್ಚು ಕುಂದೆಂಬುದನರಿಯಾ ಪ್ರಭುವೆ ? ನಿಮ್ಮ ಪ್ರಾಣವೆ ಬಸವಣ್ಣನ ಪ್ರಾಣ, ಬಸವಣ್ಣನ ಪ್ರಾಣವೆ ನಿಮ್ಮ ಪ್ರಾಣ ನಿಮ್ಮ ಕಾಯವೆ ಬಸವಣ್ಣನ ಕಾಯ, ಬಸವಣ್ಣನ ಕಾಯವೆ ನಿಮ್ಮ ಕಾಯ. ನೀವಿಲ್ಲದಿರೆ ಬಸವಣ್ಣನಿಲ್ಲ, ಬಸವಣ್ಣನಿಲ್ಲದಿರೆ ನೀವಿಲ್ಲ. ಇಂತಿದನೊಂದು ಬಿಚ್ಚಿ ಬೇರೆ ಮಾಡಬಾರದೆಂಬುದನರಿದು ಮತ್ತೆ ಬರಿದೆ ಮುನಿವರೆ ಬಲ್ಲವರು ? ನಡೆವ ವಾರುವ ಮುಗ್ಗಿದಡೆ ನಡೆಸಿಕೊಂಬುದಲ್ಲದೆ ಮಿಡಿ ಹರಿಯೆ ಹೊಯ್ದವರುಂಟೆ ಲೋಕದೊಳಗೆ ? ಮರಹಿಂದ ಬಂದ ಅವಗುಣವ ಸಂಪಾದಿಸದೆ ಜಿಜಯಂಗೈಯ್ವುದಯ್ಯಾ ನಿಮ್ಮ ಗೃಹಕ್ಕೆ ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣ ಬಸವಣ್ಣನಾರೆಂಬುದ ನೀನೊಮ್ಮೆ ತಿಳಿದು ನೋಡಾ ಪ್ರಭುವೆ.
--------------
ಚನ್ನಬಸವಣ್ಣ
ತನುವೆಂಬ ಮನೆಗೆ ಆಸ್ಥಿಯ ಗಳು, ನರದ ಭೀಮಗಟ್ಟು, ಮೂರುವರೆಕೋಟಿ ರೋಮಂಗಳ ಹೊದಿಕೆ ಮಾಂಸದ ಭಿತ್ತಿಗೆ, ಶುಕ್ಲದ ನೆಲಗಟ್ಟು ರಕ್ತದ ಸಾರಣೆ, ಮಜ್ಜೆಯ ಕಾರಣೆ, ನೇತ್ರ ಶ್ರೋತ್ರ ಘ್ರಾಣ ಗುದ ಗುಹ್ಯವೆಂಬವೇ ಗವಾಕ್ಷ, ಬಾಯ ಬಾಗಿಲಿಗೆ ಅಧರದ ತಾರುಗದ, ದಂತದ ಅಗುಳಿ, ಇಂತಪ್ಪ ಗೃಹಕ್ಕೆ ದ್ರವ್ಯವಾವದೆಂದಡೆ: ಕಫ ಪೈತ್ಯವೆಂಬ ಸಯದಾನ, ಸ್ವೇದವೆಂಬ ಅಗ್ಘವಣಿ, ಅನ್ನಪಾನಂಗಳೆಂಬ ಕಟ್ಟಿಗೆ, ಉದರಾಗ್ನಿಯಿಂ ಪಾಕವಾಗುತ್ತಂ ಇರಲು, ಅನುಭವಿಸುವ ಜೀವನು ಮಲಮೂತ್ರವೆಂಬ ವಿತ್ತ ಇಪ್ಪತ್ತೆರಡು ಸಾವಿರನಾಳದಿಂ ಪ್ರಯವಪ್ಪುದು ನಿಲಯಾಧಿಪನೆಂಬ ಜೀವಂಗೆ ಮನವೆಂಬ ಸತಿ ತನ್ಮಾತ್ರೆಗಳೆಂಬ ಸುತರು ಇಂತಪ್ಪ ಸಂಸಾರಸಾಮಗ್ರಿಯಿಂ ಜೀವಿಸುತ್ತಿರಲು, ಕಾಲಚಕ್ರಂಗಳು ತಿರುಗಲೊಡನೆ ಜ್ಞಾನಾಗ್ನಿಯಿಂ ಮನೆ ಬೆಂದು, ಎಲ್ಲರು ಪ್ರಳಯಕ್ಕೊಳಗಾದರು. ಆನೊಬ್ಬನೆ ಲಿಂಗಸಂಗಿಯಾಗಿ ಉಳಿದೆ ನೋಡಯ್ಯಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ದಯದಿಂದ ನೋಡಿ ಬಹು ವಿಚಾರವುಂಟು. ಷಟ್ಸ ್ಥಲಬ್ರಹ್ಮಚಾರಿ ತಾನು ಸಂಕಲ್ಪವನೇತಕ್ಕೆ ಮಾಡುವದು? ಗುರುವು ಹಿಡಿದು ಲಿಂಗವಾಯಿತ್ತು. ಲಿಂಗ ಹಿಡಿದು ಜಂಗವಾಯಿತ್ತು. ಜಂಗಮವು ಹಿಡಿದು ಪಾದೋದಕ ಪ್ರಸಾದವಾಯಿತ್ತು. ಇದನರಿಯದೆ ಭಿನ್ನಭೇದವ ಮಾಡಲಾಗದು. ಜಂಗಮನ ಕೊಂದವನಾದರು, ಲಿಂಗವ ಭಿನ್ನವ ಮಾಡಿದವನಾದರು, ಅವನ ಕಂಡು ಮನಸ್ಸಿನಲ್ಲಿ ನಿಂದಿಸಿದರೆ ವಿರಕ್ತನೆಂಬ ಭಾವನೆಯಿಲ್ಲ. ಭಕ್ತನ ಮಠವೆಂದು ಹೋದಲ್ಲಿ, ಆ ಭಕ್ತನು ಎದ್ದು ನಮಸ್ಕರಿಸಿ, ತನ್ನ ದಾಸಿಯರ ಕರದು `ಪಾದಾರ್ಚನೆಯ ಮಾಡು' ಎಂದರೆ ಆ ಪಾದಾರ್ಚನೆಯ ಮಾಡಿದ ಫಲವು ಅರಿಗೆ ಮೋಕ್ಷವಾಗುವದು? ಆ ತೊತ್ತಿನ ಬಸುರಲ್ಲಿ ಬಪ್ಪುದು ತಪ್ಪದು. ತಾನು ವಿರಕ್ತನಾದ ಮೇಲೆ, ಲಿಂಗವಿದ್ದವರಲ್ಲಿ ಲಿಂಗಾರ್ಪಿತವ ಬೇಡಲೇತಕ್ಕೆ? ತಾ ಬಿರಿದ ಕಟ್ಟಿ ಆಚರಿಸುವ ಶರಣನು ತನಗೆ ಸಮಾಚಾರ ಸಮನಾಗದಲ್ಲಿ ಹೊನ್ನ ಹಿಡಿದು ಬಡ್ಡಿ ವ್ಯವಹಾರವ ಮಾಡಿದ ಜಂಗಮದಲ್ಲಿ ತೆಗೆದುಕೊಳ್ಳಲಾಗದು. ಆ ಜಂಗಮವು ತ್ರಿವಿಧ ಪದಾರ್ಥದಲ್ಲಿದ್ದರೇನು? ವಂಚನೆಯಿಲ್ಲದೆ ಸವದರೆ ಆತ ಮುಟ್ಟಿದರೊಳಗಿಲ್ಲ. ಆತನ ಅಂತು ಇಂತು ಎನ್ನಲಾಗದು ಶರಣರಾಚರಣೆ. ಶರಣ ತಾ ಬಿರಿದ ಕಟ್ಟಿ ಆಚರಿಸಿದಲ್ಲಿ ತನ್ನಾಚರಣೆಗೆ ಕೊರತೆ ಬಂದರೆ ಬಂದಿತ್ತೆಂಬ ಹೇಹ ಬೇಡ. ಬಂದಾಗ ನರಳಿ, ಬಾರದಾಗ ಸದಾಚಾರದಲ್ಲಿರ್ಪುದೆ ಶರಣನಾಚರಣೆ. ಗುರು ಮೋಕ್ಷವಾಗಿಯಿಪ್ಪಾತನು ಪಾಪಕ್ಕೆ ಸಂಬಂಧವಾಗಲು ಆತನ ಕಂಡು ಮನದಲ್ಲಿವ ದ್ರೋಹಿಯೆಂದರೆ ನನ್ನ ಬಿರಿದಿಂಗೆ ಕೊರತೆಯದಾಗುವುದಲ್ಲದೆ ವಿರಕ್ತನೆಂಬ ಭಾವವೆನಗಿಲ್ಲ ನೋಡಾ. ಮುಂದೆ ಕ್ರಿಯಾಚರಣೆ. ವಿರಕ್ತನ ನಡೆಯೆಂತೆಂದೊಡೆ ಭಕ್ತಿಸ್ಥಲ ಸಂಬಂಧವಾದ ಭಕ್ತಂಗೆ ಕ್ರೀಯವ ಕೊಡುವ ಆಚರಣೆಯೆಂತೆಂದೊಡೆ ಆತ ತೆಗೆದು ಕೊಂಬ ಆಚರಣೆಯೆಂತೆಂದೊಡೆ ಪಾದಾರ್ಚನೆಯ ಮಾಡಿದಲ್ಲಿ ಪಾದತೀರ್ಥ ಕೊಡುವರು. ಅನ್ನವ ನೀಡಿದ ಹಂಗಿನಲ್ಲಿ ಪ್ರಸಾದವಂ ಕೊಡುವವರು. ಮುಯ್ಯಿಂಗೆ ಮುಯ್ಯನಿತ್ತುದಲ್ಲದೆ ಮುಕ್ತಿಯೆಂಬುದು ಅವುದು ಹೇಳ? ಭಕ್ತನಾಚಾರಣೆಯೆಂತೆಂದೊಡೆ- ಆ ಗೃಹಕ್ಕೆ ಹೋದಲ್ಲಿ ತಾ ಲಿಂಗಪೂಜೆಯ ಮಾಡುತ್ತಿರ್ದರಾದರು ತಾಯೆದ್ದು ಬಂದು ನಮಸ್ಕರಿಸುವದೆ ಭಕ್ತನ ಮಾರ್ಗ. ಎನ್ನೊಳಗೆ ಲಿಂಗವು ಜಂಗಮವು ಉಂಟೆಂಬ ಅವಿಚಾರದ ನುಡಿಯ ಕೇಳಲಾಗದು. ಮುಂದೆ ಭಕ್ತನು ಜಂಗಮದ ಪಾದವ ಹಿಡಿದಲ್ಲಿ ಪುಷ್ಪ ವಿಭೂತಿಯಿರಲು ಅಗ್ಛಣಿಯಿಲ್ಲದಿರಲು ಮರ್ಲೆದ್ವು ವ್ರತಸ್ಥಪಾದವ ಬಿಡಲಾಗದು. ಬಿಟ್ಟನಾದರೆ ಪಾದತೀರ್ಥಕ್ಕೆ ದೂರವಾಯಿತ್ತು. ಲೋಕಾಚಾರದ ಭಕ್ತರು ಪಾದವ ಹಿಡಿಯಲು, ಪುಷ್ಪ ವಿಭೂತಿಯಿರಲು ಅಗ್ಘಣಿಯಿಲ್ಲದಿರಲು ಆ ಪಾದಕ್ಕೆ ನಮಸ್ಕಾರವ ಮಾಡಿ ಪಾದವಂ ಬಿಟ್ಟು ಮತ್ತೆ ಹೋಗಿ ಅಗ್ಘಣಿಯಂ ತಂದು ಪಾದತೀರ್ಥವಂ ಪಡೆದು ಸಲಿಸುವುದು ಭಕ್ತನಾಚರಣೆ. ಜಂಗಮದೇವರ ಕರತಂದು ವ್ರತಸ್ಥನ ಪಾದತೀರ್ಥವಂ ಪಡೆದಲ್ಲಿ ಆ ಆ ದೇವರ ಸೆಜ್ಜೆಯಲ್ಲಿ ಲಿಂಗವಿಲ್ಲದಿರಲು ಆ ದೇವರು ಮಜ್ಜನವ ನೀಡಿದ ಸ್ಥಾನ ಅವರು ಮೂರ್ತಿಮಾಡಿರ್ದ ಸ್ಥಾನವ ನೋಡಿ ಆ ವ್ರತಸ್ಥನು ಪ್ರಾಣವ ಕೊಡುವುದು. ಭಕ್ತನು ಜಂಗಮವ ಕರಕೊಂಡು ಬಂದು ಪಾದತೀರ್ಥಮಂ ಪಡೆದು ಆ ಜಂಗಮದೇವನ ಸೆಜ್ಜೆಯಲ್ಲಿ ಲಿಂಗವಿಲ್ಲದಿರಲು ಅವರು ಮಜ್ಜನವ ನೀಡಿದ ಸ್ಥಾನದಲ್ಲಿ ಮೂರ್ತಿಗೊಂಡಿರ್ದ ಸ್ಥಾನದಲ್ಲಿ ಪರಾಂಬರಿಸಿ ಆ ಲಿಂಗವು ಸಿಕ್ಕಿದರೆ ಕ್ರೀಯವ ಜಂಗಮವು ಭಕ್ತರು ಸಲಿಸುವುದು, ಇಲ್ಲದಿದ್ದರೆ ಆ ಭಕ್ತರು ತೆಗೆದು ಕೊಂಬುದು. ಆ ಜಂಗಮವು ತೆಗೆದು ಕೊಳಲಾಗದು. ಇದು ಸಕಲ ಶರಣರಿಗೆ ಸನ್ಮತ. ಸಂಕಲ್ಪವ ಮಾಡಲಾಗದು ಮುಂದೆ ಮಾರ್ಗಕ್ಕೆ ತಾನು ನಡೆದಲ್ಲಿ ತನಗೆ ಮಾರ್ಗ ತಪ್ಪದು. ತನಗೆವೊ[ಂ]ದು ವೇಳೆ ಲಿಂಗವು ಭಿನ್ನ ಭಿನ್ನವಾಗಲು ಅದನು ಸಕಲ ಸಮಸ್ತಮೂರ್ತಿಗಳು ತಿಳಿದು ನೋಡಲು ಅದರಲ್ಲಿ ಭಿನ್ನ ಭಿನ್ನವಾಗದೆಯಿರಲು ಪರಾಂಬರಿಸಿ ಎಲ್ಲಾ ಮಾಹೇಶ್ವರರು ಎದ್ದು ಬಂದು ಅದರೊಳಗೆ ಸಂಕಲ್ಪವಿಲ್ಲವೆಂದು ನಮಸ್ಕಾರವ ಮಾಡುವುದು. ಲಿಂಗವು ಭಿನ್ನವಾಗಲು `ನಿಮ್ಮ ಗುರುಮಠಪೂರ್ವಕ್ಕೆ ಹೋಗಿ'ಯೆಂದು ಹೇಳಲು, `ನಾನೊಲ್ಲೆ, ನಿಮ್ಮ ಪಾದದಲ್ಲಿಯೇಕಾರ್ಥವ ಮಾಡಿಕೊಳ್ಳಿ'ಯೆಂದು ಹೇಳಲು, ಆ ದೇವರ ಅಡ್ಡಬೀಳಿಸಿಕೊಂಡು ವಸ್ತು ಹೋಗುವ ಪರಿಯಂತರದಲ್ಲಿ ಕಾದಿರುವುದು. ಅಥ[ವ] ಒಂದು ವೇಳೆ ಮೋಸ ಬಂದರೆ ಅಲ್ಲಿರ್ಪ ಭಕ್ತ ಮಾಹೇಶ್ವರರ ಬಿಡುವುದು. ಧರ್ಮಾಧರ್ಮದಲ್ಲಿ ವಿಚಾರಿಸದೆ ಆ ಭಕ್ತನು ಜಂಗಮ ಮುಟ್ಟಿದ ಗದ್ದುಗೆಯಲ್ಲಿ ಮೂರ್ತಿಮಾಡಿ `ಪ್ರಸಾದಕ್ಕೆ ಶರಣಾರ್ಥಿ'ಯೆನಲು ನೀಡಲಾಗದೆಂಬುದು ಆಚರಣೆ. ಆದ ನೀಡಿಯಿಟ್ಟರು ಮುಗಿವಲ್ಲಿ ಭಕ್ತನ ಪ್ರಸಾದ ಹೆಚ್ಚಾದರೆ `ಅಯ್ಯೋ ನನ್ನ ಪ್ರಸಾದ ಹೆಚ್ಚಾಯಿ'ತೆಂದು ಹೇಳಿದರೆ ಆ ಪ್ರಸಾದವನು ನೀಡಿಸಿ ಕೊಂಬ ಜಂಗಮಕ್ಕೆ ಆಚರಣೆ ಸಲ್ಲದು. ವ್ಯಾಪಾರವ ಕೊಟ್ಟು ವ್ಯಾಪಾರವನೊಪ್ಪಿಸಿಕೊಂಡರೆ ನಾವು ಪ್ರಸಾದವ ತೆಗೆದುಕೊಂಬುದು ಆಚರಣೆ. ಹೊನ್ನು ಹೆಣ್ಣು ಮಣ್ಣು ತ್ರಿವಿಧದಲ್ಲಿ ವಂಚನೆಯಿಲ್ಲದಿರ್ಪಡೆ ಅವನ ಹೆಣ್ಣು ಮಣ್ಣು ತ್ರಿವಿಧದಲ್ಲಿ ವಂಚನೆಯಿಲ್ಲದಿರ್ಪಡೆ ಅವನ ಪ್ರಸಾದವನು ತೆಗೆದುಕೊಂಬುದು ಇದು ಜಂಗಮದಾಚರಣೆ. ಗುರುದೀಕ್ಷೆಯಿಲ್ಲದವನು ಲಿಂಗಪೂಜೆಯ ಮಾಡಿದರೆ ಪಾದೋದಕ ಪ್ರಸಾದವ ಕೊಂಡರೆ ಸಹಜವಲ್ಲದೆ ಸಾಧ್ಯವಾಗದು. ಬಿಟ್ಟರಾದರೆ ಅವರಿಗೆ ಮೋಕ್ಷವಿಲ್ಲವು. ಜಂಗಮವು ಆವ ವರ್ತನೆಯಲ್ಲಿ ನಡಕೊಂಡರು [ಆಸ]ತ್ತು `ಬೇಡ ಹೋಗಿ'ಯೆಂದರೆ `ನಾನು ಅರಿಯದೆ ಮಾಡಿದೆ'ನೆಂದರೆ ಅವನನೊಪ್ಪಿಕೊಂಬುದು ಇದಕ್ಕೆ ಕಲ್ಪಿತ ಪಾಪಪುಣ್ಯಕ್ಕೆ ಒಳಗಾದವರು ಷಟ್ಸ ್ಥಲಕ್ಕೆ ಮಾತ್ರ ಆಗದು. ಭಕ್ತಂಗೆ ಪ್ರಸಾದವ ಕೊಡುವ ಆಚರಣೆಯೆಂತೆಂದೊಡೆ- ದೀಕ್ಷೆಯಿಲ್ಲದೆ ಶಿವಭಕ್ತನ ಗೃಹಕ್ಕೆ ಹೋಗಿ `ಭಿಕ್ಷೆ'ಯೆಂದೆನಾದರೆ, ಜಿಹ್ವೆಯ ಮುಕ್ಕುಳಿಸಿದರೆ ಪಾತಕ ನೋಡ. ಗುರುವಚನ ಪ್ರಮಾಣದಲ್ಲಿ ನಾನು ಗುರುಮುಖವ ಹಿಡಿದಲ್ಲಿ ಶಿವಮಂತ್ರಸ್ಮರಣೆಯನು ಶಿವಾನುಭಾವಿಗಳ ಸ್ಥಾನದಲ್ಲಿ ಬೆಸಗೊಂಬುದೆ ಶುದ್ಧವಾಯಿತ್ತು. ಇಲ್ಲದಿದ್ದರೆ ಶುದ್ಧವಿಲ್ಲವು. ಶಿವಶರಣನ ಜ್ಞಾನವೆಂತೆಂದೊಡೆ ನೀರಮೇಲಣ ತೆಪ್ಪದಂತಿರಬೇಕು, ಕ್ಷೀರದೊಳಗಣ ಘೃತದಂತಿರಬೇಕು, ಕೆಸರಿನೊಳಗಣ ತಾವರೆ ಪ್ರಜ್ವಲಿಸಿದಂತಿರಬೇಕು. ಲಿಂಗದೊಳಗೊಡವೆರದರೆ ಆರು ಆರಿಗೆಯು ಕಾಣದಂತೆ ನೋಡಾ. ಅಂದಳದೊಳಗೆ ಹೋಗುವನ ಹಜ್ಜೆಯ ಕಂಡವರಾರು ಹೇಳ? ಮಾತಿನಲ್ಲಿ ಮಹಾಜ್ಞಾನಿಗಳೆಂದರೊಪ್ಪುವರೆ? ಮಹಾಲಿಂಗದ ಬೆಳಗಿನಲ್ಲಿ, ತನ್ನ ನಡೆಯನೊಡವೆರದಿಪ್ಪ ಮಹಿಮಂಗೆ ದುಃಖವಿಲ್ಲ ನೋಡ ಭಕ್ತಿಸ್ಥಲವಾದುದು. ಭಕ್ತನ ಮಾರ್ಗವೆಂತೆಂದೊಡೆ- ತನ್ನ ಗೃಹಕ್ಕೆ ಜಂಗಮವು ಹೋದಲ್ಲಿ ಶುದ್ಧವಲ್ಲದೆ ಇದನರಿಯದೆ ಕಾಡದೈವಕ್ಕೆಲ್ಲ ಹರಕೆಯ ಮಾಡಿ ಆ ದೈವದ ಹೆಸರಿನಲ್ಲಿ ಜಂಗಮವ ಕರೆತಂದು ಉಣಲಿಕ್ಕಿದೆನಾದರೆ ಕಾರಿದ ಕೂಳಿಗಿಂದ ಕನಿಷ* ಕಾಣಾ. ಅನ್ಯ ದೈವದ ಪೂಜೆಯಿಲ್ಲದಾತನೆ ಶಿವಭಕ್ತ ನೋಡಾ. ತನ್ನ ಗುರುವು ಹಸ್ತಕ ಸಂಯೋಗವ ಮಾಡಿ, ಲಿಂಗವ ಧರಿಸಿದ ಬಳಿಕ ಲಿಂಗವಲ್ಲದೆ ಅನ್ಯಪೂಜೆಯೇತಕ್ಕೆ? ಇದನ್ಲರ್ವಿದರಿದು ಮಾಡಿದನಾದರೆ ಪಾತಕವಲ್ಲದೆ ಮತ್ತಿಲ್ಲ ನೋಡಾ. ಮೋಕ್ಷವೆಂಬುದೆಂದಿಗೂ ಇಲ್ಲ ನೋಡಾ. ಹುಟ್ಟುಗೆಟ್ಟು ಬಟ್ಟಬಯಲಾದವನಿಗೆ ದುಃಖವುಂಟೆ?. ಲಿಂಗದಲ್ಲಿ ನಿರ್ಭಯಲಾದವಂಗೆ ಸಂಕಲ್ಪವುಂಟೆ?. ಮಹಾಜ್ಞಾನಿಗೆ ಕತ್ತಲೆಯುಂಟೆ?. ಮಹಾಪ್ರಸಾದಿಗೆ ಸಂಕಲ್ಪಮುಂಟೆ?. ಜ್ಞಾನಿಗಳಿಗೆನ್ನವರು ತನ್ನವರೆಂಬ ಭೇದಮುಂಟೆ?. ಸದ್ಭಕ್ತಿಯುಳ್ಳಾತನು ತನ್ನ ಲಿಂಗವ ಪೂಜಿಸಿ ಅನ್ಯರಮನೆಯಲ್ಲಿ ಭೋಗದಲ್ಲಿದ್ದನಾದರೆ ಶ್ವಾನನ ಬಸುರಲ್ಲಿ ಬರುವು[ದು] ತಪ್ಪದು, ಅರೆಭಕ್ತರಾದವರ ಗೃಹದಲ್ಲಿ ಹೋಗಿ ಅನ್ನವ ಮುಟ್ಟಿದರಾದರೆ, ಅವನಿಗೆ ಗುರುವಿಲ್ಲ. ಮುಕ್ತಿಯೆಂಬುದು ಎಂದೆಂದಿಗೂ ಇಲ್ಲ ನೋಡಾ, ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ವೀರಶೈವಾಚಾರಗುರುಮಾರ್ಗವಿಡಿದು ಬಂದ ಭಕ್ತಗಣಾಧೀಶ್ವರರು ಕ್ರಿಯಾಜಂಗಮಲಿಂಗದ ಪಾದಪೂಜೆಯ ಮಾಡುವ ವಿವರವದೆಂತೆಂದೊಡೆ : ಜಂಗಮಲಿಂಗಮೂರ್ತಿಗಳು ತಮ್ಮ ಗೃಹಕ್ಕೆ ಬಂದು, ಶಿವಲಿಂಗಾರ್ಪಣಕ್ಕೆ ಭಿಕ್ಷಾಯೆಂದಾಕ್ಷಣವೆ, ಶರಣುಶರಣಾರ್ಥಿ, ಮಹಾಲಿಂಗಾರ್ಪಣಕ್ಕೆ ನಮಸ್ಕಾರವೆಂದು ಅಭಿವಂದಿಸಿ, ಆಸನವ ರಚಿಸಿದ ಮೇಲೆ ಮೂರ್ತಿಗೊಂಡ ತದನಂತರದೊಳು ಅವರ ಜಂಘೆಯಾಗೊಪ್ಪುವ ವೃತ್ತಸ್ಥಾನಪರಿಯಂತರವು, ಬಹುಗುಣದಲ್ಲಿ ತೊಳೆದಂಥ ನಿರ್ಮಾಲ್ಯವ ಧೂಳೋದಕದಿಂದ ಹೊಸದಾಗಿ ಕಟ್ಟಿದ ಆಲಯ ಬಾವಿ ಧನ ಧಾನ್ಯ ಕಾಯಿಪಲ್ಲೆ ಕಾಷ* ಮೊದಲಾದ ಜನನಿಜಠರದಿಂದುದಯವಾದ ಶಿಶುವಿಗೆ, ಲಿಂಗಾಂಗ ಮುಂತಾದ ಹೊಸ ಅರುವೆ ಆಭರಣ, ದಗ್ಧದ್ರವ್ಯ ಕಡೆಯಾದವಕ್ಕೆ ಸಂಪ್ರೋಕ್ಷಿಸಿ, ಪವಿತ್ರವೆನಿಸಿ, ಆಸೆ ಆಮಿಷ ರೋಷಾದಿಗಳಿಲ್ಲದಾಚರಿಸುವುದೆ ನಿರವಯಪ್ರಭು ಮಹಾಂತನಾಚಾರ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಕಣ್ಣಿಲ್ಲದ ಒಡ್ಡರು ಕಲ್ಲು ತಂದು ತಲೆಯಿಲ್ಲದವನ ಮನೆಗೆ ಹಾಕಿ, ಮನೆಯ ಕಟ್ಟದೆ ಕಲ್ಲಕೂಲಿಯ ತೆಗೆದುಕೊಂಡು ಗಮನಿಸಿದರು. ಅಂತಪ್ಪ ಗೃಹಕ್ಕೆ ನಾನು ತಿಗಟೆಯ ಹೂಡಿ ಮನೆಯ ಬಿಚ್ಚದೆ ಲೋಮಗುಂಡುವ ಇಳಿಯ ಬಿಟ್ಟು, ಮೂರುಮೂಲಿಯ ಯಾಸಿಯ ತಿದ್ದಿ, ಮನೆಯ ಕಟ್ಟಿ ಮದುವೆಯ ಮಾಡಿ ಸತ್ತು ಕಾಯಕವ ಮಾಡೆಂದು ಪೇಳಿದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->