ಅಥವಾ

ಒಟ್ಟು 11 ಕಡೆಗಳಲ್ಲಿ , 5 ವಚನಕಾರರು , 10 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾವು ಬಲ್ಲವರಾದೆವೆಂದು ಗೆಲ್ಲಸೋಲಕ್ಕೆ ಹೋರುತಿಪ್ಪರು. ಇದೆಲ್ಲವನತಿಗಳೆದ ಮತ್ತೆ ಗೆಲ್ಲಸೋಲಕ್ಕೆ ಹೋರಲೇಕೋ ? ಗೆಲ್ಲುವಂಗೆ ಸೋಲುವದೆ ಧರ್ಮ, ಸೋತ ಮತ್ತೆ ಒಲವರವಿಲ್ಲವಾಗಿ. ಜಲನದಿಯಲ್ಲಿ ಹೋಹ ಬಲುಮರನಂತೆ, ಇವರ ನೆಲೆ ಇಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಪ್ಪು ಲವಣವೆಲ್ಲವು ಸರಿ, ಪರಿಪಾಪಕವೆಲ್ಲವು ಸರಿ. ಇವೆಲ್ಲಾಯೆಂದು ಬಿಟ್ಟ ಮತ್ತೆ, ಲೌಕಿಕಕ್ಕೆ ದೂರಸ್ತನಾಗಿ, ಪರಮಾರ್ಥಕ್ಕೆ ಸಂಪದನಾಗಿ, ತನಗೆ ಕರ್ತುವಾದ ಗುರುಚರದಲ್ಲಿ ಭೃತ್ಯನಾಗಿರಬೇಕು. ಗೆಲ್ಲಸೋಲಕ್ಕೆ ಹೊತ್ತುಹೋರದೆ, ಶರಣರ ಸಮೂಹದಲ್ಲಿ ಅಲ್ಲ ಅಹುದೆನದಿಪ್ಪುದೆ ? ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ನೇಮ ಸಂದಿತ್ತು.
--------------
ಶಿವಲೆಂಕ ಮಂಚಣ್ಣ
ಭೂಮಿಯಲ್ಲಿ ಪೂಜಿಸಿಕೊಂಬ ಅರುಹಿರಿಯರೆಲ್ಲರೂ ವೇದ ಶಾಸ್ತ್ರ ಪುರಾಣ ಆಗಮ ಶ್ರುತಿ ಸ್ಮøತಿ ತತ್ವದಿಂದ ಇದಿರಿಗೆ ಬೋದ್ಥಿಸಿ ಹೇಳುವ ಹಿರಿಯರೆಲ್ಲರೂ ಹಿರಿಯರಪ್ಪರೆ ? ನುಡಿದಂತೆ ನಡೆದು, ನಡೆದಂತೆ ನುಡಿದು, ನಡೆನುಡಿಸಿದ್ಧಾಂತವಾಗಿಯಲ್ಲದೆ ಅರುಹಿರಿಯರಾಗಬಾರದು. ಗೆಲ್ಲಸೋಲಕ್ಕೆ ಹೋರಿ ಬಲ್ಲಿದರಾದೆವೆಂದು ತನ್ನಲ್ಲಿದ್ದ ಹುಸಿಯ ಹುಸಿವ ಕಲ್ಲೆದೆಯವನ ನೋಡಾ. ಇವರೆಲ್ಲರ ಬಲ್ಲತನವ ಕಂಡು ನಿಲ್ಲದೆ ಹೋದ, ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಇಷ್ಟಲಿಂಗಕ್ಕೆ ದೃಷ್ಟಪದಾರ್ಥಂಗಳ ಅರ್ಪಿಸುವಲ್ಲಿ ಕಟ್ಟಳೆವುಂಟು, ತನ್ನ ಘಟದ ಲಕ್ಷಣವುಂಟು. ಇಂತೀ ಉಭಯವ ಪ್ರಮಾಣಿಸಿಕೊಂಡು ಅರ್ಪಣದಿಂದ ಅರ್ಪಿಸುವಲ್ಲಿ ತೃಪ್ತಿಯ ಅಭಿಲಾಷೆಯಿಂದ ಸತ್ಯ ಸದೈವರ ಸಹಪಙ್ಞ್ತಯಲ್ಲಿ ಕ್ಷುತ್ತಿನ ಅಪೇಕ್ಷಕ್ಕಾಗಿ ಮತ್ತೆ ಪುನರಪಿಯಾಗಿ ಇಕ್ಕು ತಾಯೆಂದಡೆ, ಅದು ತನ್ನ ಕ್ಷುತ್ತಿನ ಭೇದವೊ ? ಭರಿತಾರ್ಪಣದ ಯುಕ್ತಿಯ ಭಿತ್ತಿಯೊ? ಭರಿತಾರ್ಪಣವೆಂಬಲ್ಲಿ ಲಿಂಗಕ್ಕೆ ಕೊಟ್ಟಲ್ಲದೆ ಮುಟ್ಟೆನೆಂಬ ಕಟ್ಟೊ ? ಅಲ್ಲಾ, ಸಾಧಕಾಂಗಿಗಳ ಸಂಗದ ಗುಣದಿಂದ ಬಂದ ಮುಟ್ಟೊ ? ಇಂತಿವ ತಿಳಿದು, ಮನವಚನಕಾಯ ಕರಣೇಂದ್ರಿಯಂಗಳು ಮುಂತಾದ ಭೇದಂಗಳಲ್ಲಿ ಒಮ್ಮೆಗೊಮ್ಮೆ ತುತ್ತನಿಡುವಲ್ಲಿ, ಸವಿಯಾದ ರಸಾನ್ನಗಳ ಚಪ್ಪಿರಿವಲ್ಲಿ, ಅಲ್ಲಿಗಲ್ಲಿಗೆ ಉಭಯವಳಿದ ಭರಿತಾರ್ಪಣದ ತೆರನ ಕಂಡು, ಈ ಗುಣ ಜಿಹ್ವೇಂದ್ರಿಯದ ಭರಿತಾರ್ಪಣ. ಇಂತೀ ಭರಿತಾರ್ಪಣವನಂಗೀಕರಿಸಿದ ಸರ್ವವ್ಯವಧಾನಿಯ ಎಚ್ಚರಿಕೆಯ ಮುಟ್ಟು, ಮುಂದೆ ಗುಹ್ಯೇಂದ್ರಿಯಕ್ಕೆ ಸಿಕ್ಕು. ಇಂತೀ ವಿಷಯ ವ್ಯಸನಾದಿಗಳಲ್ಲಿ ಭರಿತಾರ್ಪಣದಿಂದ ಕೂಡುವ ಪರಿಯಿನ್ನೆಂತೊ ? ಇಂದ್ರಿಯ ಬಿಡುವನ್ನಕ್ಕ ಪುನರಪಿಯಾಗಿ ಅಂಗೀಕರಿಸಿಯಲ್ಲದೆ ಚಲನೆಯ ಗುಣ ಹೆರೆಹಿಂಗದು. ಅಲ್ಲಿಯ ಭರಿತಾರ್ಪಣದ ಪರಿಯ ಬಲ್ಲವನಾದಡೆ ಸರ್ವ ಎಲ್ಲಾ ಗುಣದಲ್ಲಿ ಭರಿತಾರ್ಪಣ, ಲಿಂಗಾಂಗ ಪರಿಪೂರ್ಣನೆಂಬೆ. ಇಂತೀ ಗುಣವನರಿಯದೆ ಕಂಡಕಂಡವರ ಕಂಡು ಕೈಕೊಂಡು ಈ ವ್ರತವನಂಗೀಕರಿಸಿದನಾದಡೆ ಗುರುವಿಂಗೆ ದೂರ, ಲಿಂಗ ಅವಂಗಿಲ್ಲ, ಚರಪ್ರಸಾದ ಸಲ್ಲ. ಇಂತಿವನರಿಯದೆ, ಗೆಲ್ಲಸೋಲಕ್ಕೆ ಹೋರಿಹೆನೆಂದಡೆ ಚೆನ್ನಬಸವಣ್ಣನ ಕೋರಡಿಯ ಕೊಡುವೆ. ಸಂಗನಬಸವಣ್ಣನ ಮೆಚ್ಚಿಸುವೆ. ಪ್ರಭು ನಿಜಗುಣದೇವರ ತಲೆದೂಗಿಸುವೆ. ಇದಕ್ಕೆ ಹಾಕಿದೆ ಮುಂಡಿಗೆ, ವರ್ಮದ ತಲೆಸುತ್ತು, ಎನ್ನೊಡೆಯ ಚೆನ್ನ ಚೆನ್ನಕೂಡಲ ರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಧರೆಯೊಳಗೆ ಹುಟ್ಟಿದವರೆಲ್ಲ ಬಲ್ಲೆನೆಂದು ಬಲ್ಲತನಕ್ಕೆ ಗೆಲ್ಲಸೋಲಕ್ಕೆ ಹೋರಿ, ಸಲ್ಲದೆ ಹೋದರು ನಮ್ಮ ಶರಣರಿಗೆ. ಅದೇನು ಕಾರಣವೆಂದರೆ, ಇವರೆಲ್ಲ ಪುರಾಣದ ಪುಂಡರು, ಶಾಸ್ತ್ರದ ಸಟೆಯರು, ಆಗಮದ ತರ್ಕಿಗಳು, ವೇದದ ಹಾದರಿಗರು, ಬೀದಿಯ ಪಸರದ, ಸಂತೆಯ ಸುದ್ದಿಯ ಗೊತ್ತಿಗರು. ಇಂತಿವರಾರೂ ಲಿಂಗದ ನೆಲೆಯನರಿಯರು. ಹಿಂದೆ ಹೋದ ಯುಗಂಗಳಲ್ಲಿ ಹರಿಬ್ರಹ್ಮರು ವಾದಿಸಿ, ನಮ್ಮ ದೇವನ ಕಾಣದೆ ಹೋದರು. ಇದಕ್ಕೆ ಶ್ರುತಿ ಸಾರುತ್ತಿದೆ. ದೇವ ದಾನವ ಮಾನವರು ಕಾಲ ಕಾಮಾದಿಗಳ ಆರಾಧಿಸಿ, ನಮ್ಮ ದೇವರ ಕಾಣದೆ ಹೋದರು. ನಿಮ್ಮ ಪಾಡೇನು ? ಅರಿಮರುಳುಗಳಿರಾ ? ನಮ್ಮ ದೇವನ ಕಂಡೆನೆಂದರೆ ನೋಟಕಿಲ್ಲ, ನೆನಹಿಗಿಲ್ಲ. ತನುವಿಗಿಲ್ಲ, ಸಾಧಕರಿಗಿಲ್ಲ, ಭಾವನೆಗಿಲ್ಲ. ಇಂತಪ್ಪ ದೇವನ ಒಡಲ ಹಿಡಿವರ ಕಂಡೆನೆಂದರೆ ಆಗದು. ಇದರ ಬಿಡುಮುಡಿಯನರಿದು ಅಂಗೈಸುವ ಶರಣರ ಸಂಗದೊಳಗೆ ಎನ್ನ ಕಂಗಳು ಲಿಂಗವಾಗಿ, ಕರವೆ ಜಂಗಮವಾಗಿ, ಇಹಪರದೊಳಗೆ ಪರಿಪೂರ್ಣವಾದೆನಯ್ಯಾ. ನಿಮ್ಮ ಧರ್ಮ ನಿಮ್ಮ ಧರ್ಮ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಪ್ರಭುದೇವರು ಬಂದ [ಬರವಿನ ವೃದ್ಧಿ] ಅವಧಿಯಿಲ್ಲ. ಕಲ್ಲನೆತ್ತಿದವರ ಕೂಡೆ ಗೆಲ್ಲಸೋಲಕ್ಕೆ ಹೋರಿಯಾಡಿ, ಬಲ್ಲೆವೆಂದು ಗೆಲ್ಲಗೂಳಿಗಳ ಕೂಡೆ ಬಲ್ಲತನಕ್ಕೆ ನೆಲೆ[ಗೊ]ಟ್ಟು, ಒಳ್ಳೆಹವರ ಗುಣವನರಸೆಹೆನೆಂದು, ಎಲ್ಲಾ ಠಾವಿನಲ್ಲಿ ತಿರುಗಿಬಂದು ಅಟ್ಟ ಊಟದಲ್ಲಿ ನಿಷೆ*ಯ ತೋರಿಹೆನೆಂದು, ಕಷ್ಟಗುಣವಾದ [ಬೇಟ]ವ ಹೊಕ್ಕೆನೆಂಬ ಕಷ್ಟಗುಣ ಬಿಡದು. ಭಾವದ ಕದಳಿಯಂ ಮರೆದು, ವಾಯದ ಕದಳಿಯಂ ಹೊಕ್ಕು, ಭಾವದ ಭ್ರಮೆಯಿಂದ ತಿರುಗಿ ಬಂದು, ಸಂಗನಬಸವಣ್ಣಂಗೆ ಸಂಗವಿಶೇಷವ ತೋರದೆ [ಹ]ಂಗಿಸಿ ಕೊಟ್ಟೆಯಲ್ಲಾ, ಸಂಗಮೇಶ್ವರದೇವರೆಂಬ ಕಲ್ಲಿನ ಮನೆಯ ಕಲ್ಲಿನೊಳಗೆ ಹೊಕ್ಕು ವಲ್ಲಭನನರಿಯದೆ, ಪ್ರಭು ಮೊದಲಾಗಿ ಇವರೆಲ್ಲರು ಕೆಟ್ಟರಲ್ಲಾ. ನಮಗೆ ಬಲ್ಲತನವ ತೋರಿದ ಎನ್ನ ವಲ್ಲಭ ನೀನೆ ಚೆನ್ನಬಸವಣ್ಣ, ಸಂಗನಬಸವಣ್ಣಂಗೆ, ಪ್ರಮಥಗಣಂಗಳು ಮೊದಲಾದವರಿಗೆ, ಎನಗೆ, ನಿಃಕಳಂಕ ಮಲ್ಲಿಕಾರ್ಜುನಂಗೆ, ನಿನ್ನಿಂದೆ ಭವವಿರಹಿತನಾದೆ.
--------------
ಮೋಳಿಗೆ ಮಾರಯ್ಯ
ಬ್ರಹ್ಮನ ಉತ್ಪತ್ಯವ ಕಳೆದಲ್ಲದೆ ಲಿಂಗಕ್ಕೆ ಮಜ್ಜನವೆರೆಯಲಾಗದು. ವಿಷ್ಣುವಿನ ಸ್ಥಿತಿಯನರಿದಲ್ಲದೆ ಲಿಂಗಕ್ಕೆ ನೈವೇದ್ಯವ ತೋರಲಾಗದು. ರುದ್ರನ ಲಯವ ಹಿಂಗಿಯಲ್ಲದೆ ಲಿಂಗಸಂಗಿಯಾಗಬಾರದು. ಮಾತಿನ ಗೆಲ್ಲಸೋಲಕ್ಕೆ ಹಿರಿಯರಾದಿರಲ್ಲದೆ ಬಲ್ಲವರಾದುದಿಲ್ಲ. ಭಕ್ತರೆಂಬವರು ಉಂಟು, ಇಲ್ಲವೆಂಬ ಸಂದೇಹದಲ್ಲಿ ಸಂಕಲ್ಪಜೀವಿಗಳಾದರು. ಇಂತೀ ದ್ವಯದ ಅವಧಿಯನರಿಯದೆ ಭಕ್ತರೆಂತಾದಿರಪ್ಪಾ. ಇಂತೀ ಉಭಯದ ತೆರನನರಿಯದ ಜಂಗಮವೆಂತಾದಿರಣ್ಣಾ. ಆಜ್ಞೆಯೊಳಡಗದ ಹೆಂಡತಿಗೆ ಗಂಡನಾದಂತೆ ಇದಕ್ಕಿನ್ನೇವೆ, ನಿಃಕಳಂಕ ಮಲ್ಲಿಕಾರ್ಜುನಾ ? || 550 ||
--------------
ಮೋಳಿಗೆ ಮಾರಯ್ಯ
ನಾನಾ ಸ್ಥಲಂಗಳ ಹೊಲಬಿನ ಹೊಲನ ವಿಚಾರಿಸುವಲ್ಲಿ, ಸುಖದುಃಖವೆಂಬ ಉಭಯವುಂಟು. ತಾನರಿದಲ್ಲಿ, ನಡೆನುಡಿ ಸಿದ್ಧಾಂತವಾದಲ್ಲಿ, ಇಹಪರಸುಖ. ಭಾವಕ ಪರಿಭ್ರಮಣದಿಂದ, ಯಾಚಕ ಮಾತುಗಂಟತನದಿಂದ, ವಸ್ತುಭಾವದ ನಿಹಿತವನರಿಯದೆ, ವಾಗ್ವಾದಕ್ಕೆ, ಗೆಲ್ಲಸೋಲಕ್ಕೆ ಹೋರುವಲ್ಲಿ, ಇಹಪರ ಉಭಯದಲ್ಲಿಗೆ ದುಃಖ. ಇಂತೀ ಸ್ಥಲಂಗಳ ಗರ್ಭೀಕರಿಸಿ, ಆರುಸ್ಥಲವ ಅಲ್ಲಾ ಎನ್ನದೆ, ಮೂರುಸ್ಥಲ ಇಲ್ಲಾ ಎನ್ನದೆ, ಬೇರೊಂದು ಸ್ಥಲವುಂಟೆಂದು ಊರೆಲ್ಲಕ್ಕೆ ದೂರದೆ, ಆರಾರ ಅರಿವಿನಲ್ಲಿ, ಆರಾರ ಸ್ಥಲಂಗಳಲ್ಲಿ, ಆರಾರ ಕ್ರೀ ನೇಮಂಗಳಲ್ಲಿ ಇಪ್ಪ, ವಿಶ್ವಾಸಕ್ಕೆ ತಪ್ಪದಿಪ್ಪ ಆ ವಸ್ತುವ, ಬೇರೊಂದು ಲಕ್ಷಿಸಿ, ಕಟ್ಟಗೊತ್ತಿಂಗೆ ತರವಲ್ಲ. ದೃಷ್ಟವಲ್ಲಾ ಎಂದು ಇದಿರಿಂಗೆ ಹೇಳಲಿಲ್ಲ. ತನ್ನ ಭಾವ ನಿಶ್ಚಯವಾದಲ್ಲಿ, ನಿಃಕಳಂಕ ಮಲ್ಲಿಕಾರ್ಜುನ ಹುಟ್ಟುಗೆಟ್ಟ
--------------
ಮೋಳಿಗೆ ಮಾರಯ್ಯ
ವಾರಿಯಿಂದಾದ ಮುತ್ತು ಶಾಂತಿಯ ಜಲದಲ್ಲಿ ಹಾಕಲಿಕಾಗಿ, ಮುನ್ನಿನ ಎನ್ನಯ ವಾರಿ ಬಂದಿತ್ತೆಂದು ತಾ ಗಟ್ಟಿಗೊಂಡುದಿಲ್ಲ. ಈ ಮುತ್ತು ತದ್ಭಾವ ಅಪ್ಪುವಿನಂತಾದುದಿಲ್ಲ. ಈ ಉಭಯದ ಭೇದವ ತಿಳಿದಡೆ, ದ್ವೈತಾದ್ವೈತವ ಬಲ್ಲರೆಂಬೆ. ಹೀಂಗಲ್ಲದೆ ಗೆಲ್ಲಸೋಲಕ್ಕೆ ಹೋರುವ ಕಲ್ಲೆದೆಯವರಿಗೆಲ್ಲಿಯದೊ, ಗೋಳಕಾಕಾರ ವಿಶ್ವವಿರಹಿತ ಲಿಂಗವು ಸಾಧ್ಯವಪ್ಪುದು ?
--------------
ಸಿದ್ಧಾಂತಿ ವೀರಸಂಗಯ್ಯ
ಬಲ್ಲವರಾದಡೆ ಗೆಲ್ಲಸೋಲಕ್ಕೆ ಹೋರಲೇಕಯ್ಯಾ? ಮಹದಲ್ಲಿ ಅನುವನರಿದವಂಗೆ ಹೋರಟೆಯೇಕಯ್ಯಾ ? ಗೆಲ್ಲಗೂಳಿತನವಲ್ಲದೆ ಬಲ್ಲವರೆಂತಾದಿರಣ್ಣಾ? ಅರಕೆಗೊಂಡವನೊಡಲು ನಂದಿಸಿದಡೀ ಪದ, ಕೊನೆಯ ಮೊನೆಯಂತೆ, ಶಿಶು ಕಂಡ ಕನಸಿನಂತೆ, ಪಶುವಿನ ಉದರದಲ್ಲಿ ಸೋಂಕಿದ ಶತವ್ಯಾಧಿಯಂತೆ, ಇದು ಲಿಂಗೈಕ್ಯವು. ಮುಟ್ಟಲಿಲ್ಲವಾಗಿ ಒಡಲಿಲ್ಲ, ಒಡಲಿಲ್ಲವಾಗಿ ನೀನೆನಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನ ತಾನೆಯಾಗಿ.
--------------
ಮೋಳಿಗೆ ಮಾರಯ್ಯ
-->