ಅಥವಾ

ಒಟ್ಟು 16 ಕಡೆಗಳಲ್ಲಿ , 15 ವಚನಕಾರರು , 16 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಶ್ವಾಸದಿಂದ ಭಕ್ತ, ವಿಶ್ವಾಸದಿಂದ ಮಾಹೇಶ್ವರ, ವಿಶ್ವಾಸದಿಂದ ಪ್ರಸಾದಿ, ವಿಶ್ವಾಸದಿಂದ ಪ್ರಾಣಲಿಂಗಿ, ವಿಶ್ವಾಸದಿಂದ ಶರಣ, ವಿಶ್ವಾಸದಿಂದ ಐಕ್ಯ. ಇಂತೀ ವಿಶ್ವಾಸವಿಲ್ಲದವಂಗೆ ವಿರಕ್ತಿಯೆಂಬ ಗೊತ್ತಿನ ಠಾವ ತೋರಾ. ಪ್ರಭುವಿನ ಕೈಯಲ್ಲಿ, ನಿಜಗುಣನ ನೆನಹಿನಲ್ಲಿ, ಅಜಗಣ್ಣನ ಐಕ್ಯದಲ್ಲಿ ಕುರುಹಿಲ್ಲದೆ ವಸ್ತುವ ಬೆರೆದ ಠಾವಾವುದಯ್ಯಾ ? ಎತ್ತ ಸುತ್ತಿ ಬಂದಡೂ ಅಸ್ತಮಕ್ಕೆ ಒಂದು ಗೊತ್ತಿನಲ್ಲಿ ನಿಲ್ಲಬೇಕು. ಇಂತೀ ವಿಶ್ವಾಸದಿಂದಲ್ಲದೆ ವಸ್ತುವ ಕೂಡುವುದಕ್ಕೆ ನಿಶ್ಚಯವಿಲ್ಲ. ಈ ಗುಣ ಸಂಗನಬಸವಣ್ಣ ತೊಟ್ಟತೊಡಿಗೆ, ಬ್ರಹ್ಮೇಶ್ವರಲಿಂಗವ ಮುಟ್ಟುವ ಭೇದ.
--------------
ಬಾಹೂರ ಬೊಮ್ಮಣ್ಣ
ಲಿಂಗವನರಿತು ಅಂಗ ಲಯವಾಗಬೇಕು. ಅಂಕುರ ತೋರಿ ಬೀಜ ನಷ್ಟವಾದಂತೆ, ಸ್ವಯಂಭು ತೋರಿ ಪ್ರತಿಷ್ಠೆ ನಷ್ಟವಾದಂತೆ, ಅರ್ಕೇಶ್ವರಲಿಂಗವ ಅರಿದ ಗೊತ್ತಿನ ಒಲುಮೆ.
--------------
ಮಧುವಯ್ಯ
ಶಿಖಿರಶಿವಾಲಯವ ಕಂಡು ಕೈಮುಗಿದಲ್ಲಿ ದೈವ ಒಪ್ಪುಗೊಂಡಿತ್ತು, ಅದು ತಾನಿ[ತ್ತ] ಆಲಯವಾದ ಕಾರಣ. ಸಮಯದರ್ಶನಕ್ಕೆ ಇಕ್ಕಿ ಎರೆದಲ್ಲಿ, ಧರ್ಮವೆಂದು ಕೊಟ್ಟುಕೊಂಡಲ್ಲಿ, ಶಿವನೊಪ್ಪುಗೊಂಬುದೆ ವಿಧ. ದಿಟವಿರ್ದು ವಿಶ್ವಾಸದಿಂದ ಮಾಡುವ ಭಕ್ತಿ, ಚತುರ್ವಿಧ ಫಲಪದಂಗಳ ಗೊತ್ತಿನ ಮುಕ್ತಿ. ಇದು ಸತ್ಯಕ್ರೀವಂತನ ಚಿತ್ತ, ಗಾರುಡೇಶ್ವರಲಿಂಗದಲ್ಲಿ ಭಕ್ತಿ[ಯ] ಕ್ರೀ.
--------------
ಉಪ್ಪರಗುಡಿಯ ಸೋಮಿದೇವಯ್ಯ
ಶ್ರೀಗುರುಕರುಣಕಟಾಕ್ಷೆಯಿಂದ ತಮ್ಮ ತಾವರಿದ ನಿತ್ಯಮುಕ್ತ ನಿಜೋತ್ತಮ ಸದ್ಭಕ್ತ ಮಹೇಶ್ವರರು, ಹಿಂದೆ ಹೇಳಿದ ಬಹಿರಂಗ ಪಂಚಪಾತಕಮಂ ನಿರಸನಂಗೈದು ಮಾರ್ಗಕ್ರಿಯೆ ಶುದ್ಧರೆನಿಸಿ, ಅಂತರಂಗದ ಗುಪ್ತಪಾತಕಮಂ ನಿರಸನಗೈವ ವಚನಸೂತ್ರವದೆಂತೆಂದೊಡೆ : ತನಗುಳ್ಳ ಗಂಧ ರಸ ಮೊದಲಾದ ಸುಪದಾರ್ಥದ್ರವ್ಯಗಳ ಗುರು ಚರ ಪರ ಸ್ಥಿರ ತಂದೆ ತಾಯಿ ಘನಲಿಂಗ ಸಮ್ಮೇಳಕ್ಕೆ ಮಾಡದೆ ನಿರವಯಪರಿಪೂರ್ಣ ನಿರಂಜನ ಗುರುಲಿಂಗಜಂಗಮ ಪ್ರಸನ್ನೋದಯವಾದ ಚಿತ್ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರ ಮಹಾಮಂತ್ರ ಕೊನೆಮೊನೆಯಲ್ಲುದಯವಾದ ಮಹದರಿವು ಮಹಾಜ್ಞಾನ ಮಹಾನುಭಾವಾಚಾರ ಸಂಬಂಧದಾಚರಣೆಗಳೆ ಕೇವಲ ಎನ್ನ ಜನನಾಂಕುರದ ಮುಕ್ತಿದ್ವಾರವಾಗಿರುವ ಸ್ಥಿತಿಯ ಗೊತ್ತಿನ ಹಕ್ಕೆ, ನಾ ನಿರವಯಲಾಗುವ ಲಯಸ್ಥಾನದ ಉಳುವೆಯ ಮಹಾಮನೆಯೆಂದು ಭಾವಭರಿತವಾಗಿ ಹಿಂದುಮುಂದಣ ಫಲಪದದ ಭೋಗಮೋಕ್ಷದಾಪೇಕ್ಷೆಗಳಂ ನೆರೆನೀಗಿ, ಬಯಲಬ್ರಹ್ಮದಿರವ ಹೊದ್ದಲೊಲ್ಲದೆ ಪಾಪದಪುಂಜ, ಕರ್ಮದೋಕುಳಿ, ಮಲದಾಗರ, ಅನಾಚಾರದಕ್ರಿಯೆ, ಅಜ್ಞಾನ ವಿಷಯಾತುರದ ಭವಜೀವಿಗಳಾಗಿರುವ ಪರಮಪಾತಕರ ಮೋಹವಿಟ್ಟು, ನನ್ನ ಪೂರ್ವಾಶ್ರಯವೆಂದು, ಅತಿ ಪ್ರೇಮದಿಂದ ತನುಮನಧನವ ಸವೆದು, ಅವರೊಡಗೂಡಿ ತೀರ್ಥಯಾತ್ರೆಗಳಂ ಮಾಡಿ, ತಾ ಸ್ವೀಕರಿಸಿದ ಪ್ರಸಿದ್ಧಪ್ರಸಾದ ಪಾದೋದಕಪ್ರಸಾದಮಂ ಆ ತ್ರಿವಿಧ ದೀಕ್ಷಾಚಾರಹೀನವಾದ ಭೂಪ್ರತಿಷಾ*ದಿಗಳಿಗೆ ಕೊಟ್ಟು ಕೊಂಬುವ ಭ್ರಷ್ಟ ನಡಾವಳಿಯೆ ಅಂತರಂಗದ ಪ್ರಥಮಪಾತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಶೈವರು ಕಟ್ಟಿದ ಗುಡಿಯ ಹೊಗದ ಭಾಷೆ, ಶೈವರು ನಟ್ಟ ಲಿಂಗವ ಪೂಜಿಸದ ಭಾಷೆಯ ವಿವರವನೆನಗೆ ಪಾಲಿಸಯ್ಯಾ ! ದೇಹದ ದೇವಾಲಯದ ಮಧ್ಯದಲ್ಲಿ ಭಾವಿಸುತಿಪ್ಪ ಶಿವಲಿಂಗದ ಗೊತ್ತಿನ ಸುಖದ ಪರಿಣಾಮದ ಭಕ್ತಿಯ ನಿರಾವಲಂಬವನೆನಗೆ ಕೃಪೆಮಾಡಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನೋಡುವ ಕಣ್ಣ ಕನ್ನಡಿ ನುಂಗಿದ ಮತ್ತೆ ನೋಡಿ ನೋಡಿಸಿಕೊಂಬವರಿನ್ನಾರು ಹೇಳಾ. ಉಂಬ ಬಾಯಿ ಆಡುವ ಮಡಕೆಯಾದಲ್ಲಿ ಬಡಿಸುವರಿನ್ನಾರು ಹೇಳಾ. ನಿಮ್ಮೊಳಗಾದಲ್ಲಿ ಪೂಜಿಸುವರಿನ್ನಾರು ಹೇಳಾ. ನೀನೆನ್ನೊಳಗಾದಲ್ಲಿ ನಾನಿದಿರಿಟ್ಟು ಮುಟ್ಟುವಠಾವ ತೋರಾ. ನಾ ನಿನ್ನವನಾಗಿ ಇತ್ತ, ನೀನು ಎನ್ನವನಾಗಿ ಅತ್ತ, ನನಗೂ ನಿನಗೂ ಮಮತೆ ಬಿಡದಾಗಿ ನಾನು ನೀನು ತತ್ತು ಗೊತ್ತಿನ ಲಕ್ಷಿತರು. ಇದು ಭಕ್ತಿ ವಿಶ್ವಾಸ ಭೇದ, ಸದ್ಯೋಜಾತಲಿಂಗವ ಕೂಡಬೇಕಾದ ಕಾರಣ.
--------------
ಅವಸರದ ರೇಕಣ್ಣ
ಬಸವಣ್ಣ ಶ್ರುತಿಸಿದ ವಾಕ್ಯದಿಂದ ಗುರುವೆಂಬ ಮಹಿಮೆಯ ಕಂಡೆನಯ್ಯಾ ! ಬಸವಣ್ಣ ಶ್ರುತಿಸಿದ ವಾಕ್ಯದಿಂದ ಲಿಂಗಸಾವಧಾನದ ಗೊತ್ತಿನ ಪರಿಣಾಮದ ಸುಖದ ಸುಗ್ಗಿಯ ಕಂಡೆನಯ್ಯಾ ! ಬಸವಣ್ಣ ಶ್ರುತಿಸಿದ ವಾಕ್ಯದಿಂದ ಪಾದೋದಕ ಪ್ರಸಾದವ ನಿತ್ಯ ನಾ ಸೇವಿಸಿ ಭವದಗ್ಧನಾದೆನಯ್ಯಾ ! ಬಸವಣ್ಣ ಶ್ರುತಿಸಿದ ವಾಕ್ಯದಿಂದ ಭಕ್ತಿ ಉನ್ನತವೆಂದು ನಂಬಿದೆನಯ್ಯಾ ! ಅದೇನು ಕಾರಣವೆಂದರೆ : ಸಿರಿಗಂಧದೊತ್ತಿಲಿದ್ದ ಜಾಲಿಗೆ ಪರಿಮಳ ಬಾರದಿಹುದೇನಯ್ಯಾ ? ಮರುಗದಗಿಡದೊತ್ತಿಲಿದ್ದ ಗರಗಕ್ಕೆ ಪರಿಮಳ ಬಾರದಿಹುದೇನಯ್ಯಾ ? ಬಸವಣ್ಣನ ಸೆರಗ ಸೋಂಕಿದ ಮನುಜರೆಲ್ಲ ಶಿವಗಣಂಗಳಾಗದಿಹರೇನಯ್ಯಾ ? ಇದು ಕಾರಣ, ಬಸವಣ್ಣನ ವಚನಾಮೃತವ ದಣಿಯಲುಂಡು ತೇಗಿದರೆ ಪಾತಕಕೋಟಿ ಪರಿಹಾರವಾಗದಿಹದೇನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ ?
--------------
ಹೇಮಗಲ್ಲ ಹಂಪ
ಅಯ್ಯಾ, ಆದಿ ಅನಾದಿಯಿಂದತ್ತತ್ತ ಮೀರಿ ತೋರುವ ನಿತ್ಯ ನಿರಂಜನ ಗುರು-ಲಿಂಗ-ಜಂಗಮ ಶಿವಶರಣರ ಸತ್ಯ ಸನ್ಮಾರ್ಗದ ಗೊತ್ತಿನ ಮರ್ಯಾದೆಯನರಿಯದೆ ಮತ್ರ್ಯದ ಜಡಜೀವಿ ಭವಿಪ್ರಾಣಿಗಳ ಹಾಂಗೆ ಗುಹ್ಯಲಂಪಟಕಿಚ್ಛೆಸಿ ದಾಸಿ ವೇಶಿ ಸೂಳೆ ರಂಡೆ ತೊತ್ತುಗೌಡಿಯರ ಪಟ್ಟ ಉಡಿಕೆ ಸೋವಿಯೆಂದು ಮಾಡಿಕೊಂಡು ಭುಂಜಿಸಿ, ಷಟ್ಸ ್ಥಲ ಬ್ರಹ್ಮಾನುಭಾವವ ಕೇಳಿ ಹೇಳುವ ಮೂಳ ಬೊಕ್ಕಿಯರ ಕಂಡು ಎನ್ನ ಮನ ನಾಚಿತ್ತು ಕಾಣೆ! ಅವ್ವ ನೀಲವ್ವನ ಮೋಹದ ಮಗಳೆ! ಅಪ್ಪ ಬಸವಣ್ಣನ ಸುಚಿತ್ತದ ಪು[ತ್ರಿಯೆ]! ನಿಷ್ಕಳಂಕ ಸದ್ಗುರುಪ್ರಭುದೇವರ ಸತ್ಯದ ಸೊಸೆಯೆ! ಅಣ್ಣ ಮಡಿವಾಳಪ್ಪನ ಭಾವ, ಚನ್ನಮಲ್ಲಿಕಾರ್ಜುನನರ್ಧಾಂಗಿಯೆ! ಚಿಕ್ಕಯ್ಯಪ್ರಿಯ ಸಿದ್ಧಲಿಂಗನೊಡಹುಟ್ಟಿದವಳೆ! ಎನ್ನಕ್ಕ ಮಹಾದೇವಿ ಕೇಳವ್ವ! ಮತ್ರ್ಯದ ಜಡಜೀವಿ ಭ್ರಷ್ಟರ ಬಾಳಿವೆ ಎಂದೆ!
--------------
ಘಟ್ಟಿವಾಳಯ್ಯ
ಕಾಲನ ಗೆದ್ದೆಹೆನೆಂದು ಮಾಡಿ ಬೇಡದ ನಿತ್ಯಾರ್ಚನೆ. ಘಟಲಿಂಗಕ್ಕೆ ಹೊತ್ತಿನ ಗೊತ್ತಿನ ಕಟ್ಟುಂಟೆ ? ಕತ್ತಲೆಯ ಮನೆಯಲ್ಲಿ ಕುಳಿತು ಸಕ್ಕರೆಯ ಮೆದ್ದಡೆ, ಕತ್ತಲೆಗೆ ಅಂಜಿ ಮೆತ್ತನಾಯಿತ್ತೆ ಸಕ್ಕರೆಯ ಮಧುರ ? ಚಿತ್ತದ ಪ್ರಕೃತಿ ಹಿಂಗಿ, ನಿಶ್ಚಯ ನಿಜ ನೆಮ್ಮುಗೆಯಲ್ಲಿ ಮಾಡುವಡೆ, ಚಿತ್ತದಲ್ಲಿ ಅಚ್ಚೊತ್ತಿದಂತೆಯಿಪ್ಪ ಹೊತ್ತಿನ ಗಡಿಯವನಲ್ಲ. ಚಿತ್ತಜಹರ ಗುಡಿಯೊಡೆಯ ಗುಮ್ಮಟನ ಅಗಮ್ಯೇಶ್ವರಲಿಂಗ ಕಟ್ಟುಗೊತ್ತಿನೊಳಗಲ್ಲ.
--------------
ಮನುಮುನಿ ಗುಮ್ಮಟದೇವ
ಕಾಯಕ್ಕೆ ಕರ್ಮ ಗುರುವಾಗಬೇಕು, ಉಭಯ ವೇಧಿಸಿ ನಿಂದಲ್ಲಿ ಸ್ವಾನುಭಾವ ಸನ್ನದ್ಧನಾಗಿ ಗುರುವಾಗಬೇಕು. ಆತನನುಜ್ಞೆಯಿಂದ ಬಂದ ಚಿತ್ತದ ಗೊತ್ತಿನ ಕುರುಹು, ಅದೆ ವಸ್ತು ನಿಶ್ಚಯ, ಸದಾಶಿವಮೂರ್ತಿಲಿಂಗವು ತಾನಾಗಿ.
--------------
ಅರಿವಿನ ಮಾರಿತಂದೆ
ಅಪ್ಪು ಮಣ್ಣು ಕೂಡಿ ಘಟವಾದಂತೆ, ಚಿತ್ತು ಶಕ್ತಿ ಕೂಡಿ ಎನಗೆ ಇಷ್ಟವಾಗಿ ಬಂದು ನಿಂದೆಯಲ್ಲಾ! ಚಿತ್ತ ನಿಲುವುದಕ್ಕೆ ಗೊತ್ತಾಗಿ, ಗೊತ್ತಿನ ಮರೆಯಲ್ಲಿ ನಾ ಹೊತ್ತ ಸಕಲೇಂದ್ರಿಯವನೀಸೂವುದಕ್ಕೆ ತೆಪ್ಪವಾಗಿ ಭವಸಾಗರವ ದಾಂಟಿಸಿದೆಯಲ್ಲಾ! ಭಕ್ತಿಪ್ರಿಯ ಸತ್ಯಕರಂಡಮೂರ್ತಿ ಸದಾಶಿವಮೂರ್ತಿಲಿಂಗವೆ ಎನ್ನಂಗದಲ್ಲಿ ಹಿಂಗದಿರು.
--------------
ಸತ್ಯ ಕರಂಡಮೂರ್ತಿ ಸದಾಶಿವಲಿಂಗ
ಯಾಚಕನ ಮಾಟ, ಕೀರ್ತಿಗೆ ಇಕ್ಕುವನ ಮನೆಯಲ್ಲಿಯ ಊಟ, ಜಗ ಮೆಚ್ಚಬೇಕೆಂದು ಮಾಟ ಕೂಟ, ಮನ ಮೆಚ್ಚಬೇಕೆಂಬುದಕ್ಕಿಲ್ಲ. ಇಂತೀ ಮಾಟ ಕೂಟ, ಅವನ ವ್ರತದಾಟ, ಕೂಸು ಹೇತು ಕಲಸಿ, ತಮ್ಮಪ್ಪನ ಬಾಯಲ್ಲಿ ಇಕ್ಕಿ, ಮಿಕ್ಕುದ ತೋರಿದಂತಾಯಿತ್ತು. ವರ್ತಕ ಚಿತ್ತಶುದ್ಧವಿಲ್ಲದವನ ತ್ರಿವಿಧದ ಗೊತ್ತಿನ ಪೂಜೆ ಮಾಡಿ, ನಷ್ಟವಹುದಕ್ಕೆ ಇದೇ ದೃಷ್ಟ. ಇದಕ್ಕೆ ಐಘಂಟೇಶ್ವರಲಿಂಗವೇ ಸಾಕ್ಷಿ.
--------------
ಸತ್ತಿಗೆ ಕಾಯಕದ ಮಾರಯ್ಯ
ಅರ್ತಿಗೆ ತಿರಿಗಿ ಮೊತ್ತದ ಮಾತನಾಡಿ ಕತ್ತೆ ಹೊರೆಯ ಹೊತ್ತು ಹೆಂಗತ್ತೆಯ ಕಂಡು ಬಾಯಬಿಟ್ಟು ಒರಲುವಂತೆ ಒರಲುತ್ತಿರ್ಪವರ ಕಂಡು ತ್ರಿವಿಧದ ಗೊತ್ತಿನ ಮಾರಿಯ ತುತ್ತೆಂದೆ ಚನ್ನಬಸವಣ್ಣಪ್ರಿಯಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಹಿಂಡಿನೊಳಗಣ ಕುರುಬನ, ತೋಳ ತಿಂಬಾಗ ಕುರಿ ಮಾಣಿಸಬಲ್ಲವೆ ? ಕಟ್ಟೊಡೆಯ ಕೊಲುವಾಗ ಮತ್ತೊಬ್ಬರು ಬೇಡಾ ಎನಲುಂಟೆ ? ಹುಟ್ಟಿಸಿದಾತ ಭವದ ಗೊತ್ತಿಂಗೆ ತಳ್ಳುವಡೆ ನಮ್ಮ ಗೊತ್ತಿನ ಅರಿವೇನ ಮಾಡುವುದು ? ಉಭಯವು ನಿನ್ನಾಟ, ಏಣಾಂಕಧರ ಸೋಮೇಶ್ವರಲಿಂಗವೆ.
--------------
ಬಿಬ್ಬಿ ಬಾಚಯ್ಯ
ಚಚ್ಚೆಗೊಟ್ಟಿಯಿಂದ ಒಡೆಯತನ ಹುಚ್ಚಾಗಿ ಕೆಟ್ಟಿತ್ತು. ಪ್ರತ್ಯುತ್ತರದಿಂದ ಭೃತ್ಯತನವಡಗಿತ್ತು. ಮೂರರ ಗೊತ್ತಿನ ಆಸೆಯಿಂದ ಗುರುಚರಪರವೆಂಬ ಹರವರಿ ನಿಂದಿತ್ತು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಈ ಗುಣ ದೂರವಾಯಿತ್ತು.
--------------
ಶಿವಲೆಂಕ ಮಂಚಣ್ಣ
ಇನ್ನಷ್ಟು ... -->