ಅಥವಾ

ಒಟ್ಟು 17 ಕಡೆಗಳಲ್ಲಿ , 8 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂದಚಂದದ ಬಣ್ಣವ ಹೊದ್ದು, ಹರನ ಶರಣರೆಂಬ ಅಣ್ಣಗಳೆಲ್ಲರು ಕರಣಂಗಳೆಂಬ ಉರವಣೆಯ ಅಂಬಿಗಾರದೆ, ಭಕ್ತಿಯೆಂಬ ಹರಿಗೆಯ ಹಿಡಿದು, ಮುಕ್ತಿಯೆಂಬ ಗ್ರಾಮವ ಮುತ್ತಿ ಕಾದಿ, ಸತ್ತರೆಲ್ಲರು ರುದ್ರನ ಶೂಲದ ಘಾಯದಲ್ಲಿ. ಎನಗೆ ಹೊದ್ದಿಗೆ ಯಾವುದೋ, ನಿಃಕಳಂಕ ಮಲ್ಲಿಕಾರ್ಜುನಾ?
--------------
ಮೋಳಿಗೆ ಮಾರಯ್ಯ
ಐದು ಕೇರಿಯ ಮುಂದೆ ಒಂದು ಗ್ರಾಮವ ಕಂಡೆನಯ್ಯ, ಆ ಗ್ರಾಮದ ಮುಂದೆ ಒಂದು ಗುಡಿಯ ಕಂಡೆನಯ್ಯ. ಆ ಗುಡಿಯೊಳಗೊಬ್ಬ ಪುರುಷನು ಲಿಂಗಾರ್ಚನೆಯ ಮಾಡುತಿರ್ಪನು ನೋಡಾ ! ಆ ಪುರುಷನ ಸರ್ಪ ನುಂಗಿ, ಆ ಸರ್ಪನ ಕಪ್ಪೆ ನುಂಗಿ ನಿರ್ವಯಲಾದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮೇರುವೆಯೊಳಗಣ ಪುರುಷನು ಊರೊಳಗಣ ನಾರಿಯ ಕೈವಿಡುದು, ಆರು ಕೇರಿಯ ದಾಂಟಿ, ಮೂರು ಗ್ರಾಮವ ಮೀರಿ, ಪರಕೆ ಪರವಾದ ಲಿಂಗವನಾಚರಿಸಿ ನಿಶ್ಮಿಂತ ನಿರಾಕುಳನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬತ್ತಲೆಯಾದ ಭಾಮಿನಿಯ ಅಂಗದಲ್ಲಿ ಇಪ್ಪತ್ತೈದು ಗ್ರಾಮವ ಕಂಡೆನಯ್ಯ. ಆ ಗ್ರಾಮದೊಳಗೊಬ್ಬ ಪುರುಷನು ಒಂಬತ್ತು ಬಾಗಿಲು ಶಿಖರದಲ್ಲಿ ನಿಂದು ಪರಕೆ ಪರವನಾಚರಿಸುತಿಪ್ಪ ನೋಡಾ. ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಕೇರಿಯ ಮುಂದೆ ಮೂರು ಗ್ರಾಮವ ಕಂಡೆನಯ್ಯ. ಮೂರು ಗ್ರಾಮದ ಮುಂದೆ ಒಂದು ಲಿಂಗವ ಕಂಡೆನಯ್ಯ. ಆ ಲಿಂಗವ ನೋಡ ಹೋಗದ ಮುನ್ನ ಆರು ಕೇರಿ ಅಳಿದು, ಮೂರು ಗ್ರಾಮ ಹೋಗಿ, ಮೀರಿ ಕಂಡೆನಯ್ಯ ಆ ಲಿಂಗವನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆದಿಯ ಸಂಗದಿಂದ ಮೂವರು ಹುಟ್ಟಿ, ಆರು ಗ್ರಾಮವ ಪೊಕ್ಕು, ಒಂಬತ್ತು ಬೀದಿಯನೇರಿ ಬರಲು, ಕಡೆಯ ಬಾಗಿಲಲ್ಲಿ ಸ್ವಯಂಪ್ರಕಾಶವೆಂಬ ಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ತನ್ನ ಮರೆದು ಮುಂದೆ ಕಾಣಬಲ್ಲಾತನೆ ನಿಮ್ಮ ಶರಣನೆಂಬೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬತ್ತಲೆಯಾದ ಭಾಮಿನಿಯ ಅಂಗದಲ್ಲಿ ಇಪ್ಪತ್ತೈದು ಗ್ರಾಮವ ಕಂಡೆನಯ್ಯ. ಆ ಗ್ರಾಮದೊಳಗೊಬ್ಬ ಪುರುಷನು ಹತ್ತೆಂಟು ಕೇರಿಗಳ ದಾಂಟಿ ನಿರವಯಲಿಂಗವನಾಚರಿಸಿ ನಿರ್ಮುಕ್ತನಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗ್ರಾಮಮಧ್ಯದ ಧವಳಾರದೊ?ಗೊಂದು ಸತ್ತ ಹೆಣನಿರುತ್ತಿರಲು, ಗ್ರಾಮ ಸುತ್ತಿ ಬರುತಿದ್ದ ರಕ್ಕಸಿ ಆ ಸತ್ತುದ ಕಂಡಳಲ್ಲಾ. ಗ್ರಾಮ ನನ್ನ ಕಾಹು, ಗ್ರಾಮದಲ್ಲಿ ನಾನಿಪ್ಪೆ, ಇದಾರೊ ಕೊಂದವರು ? ನಾನು ಕೊಲ್ಲದ ಮುನ್ನ, ಅದು ತಾನೆ ಸತ್ತಡೆ, ಎನಗಿದು ಸೋಜಿಗವು. ಸತ್ತುದು ಗ್ರಾಮವ ಕೆಡಿಸಿತ್ತು, ಇನ್ನಿದ್ದರೆ ಎನ್ನನೂ ಕೆಡಿಸಿತ್ತು. ಇಲ್ಲಿದ್ದವರಿಗುಪಟಳ ನೋಡಾ ! (ಎಂದು) ಗ್ರಾಮ ಬಿಟ್ಟು ಹೋಯಿತ್ತಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಐದು ದಾರಿಯ ಮೇಲೆ ಒಬ್ಬ ಪುರುಷ ನಿಂದಿರುವುದ ಕಂಡೆನಯ್ಯ. ಆ ಪುರುಷಂಗೆ ಒಬ್ಬ ಸತಿಯಳಿಪ್ಪಳು ನೋಡಾ. ಆ ಸತಿಯಳ ಸಂಗದಿಂದ ಆರು ದೇಶವ ದಾಂಟಿ, ಮೂರು ಗ್ರಾಮವ ಮೀರಿ, ಪರಕೆಪರವನಾಚರಿಸುತಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಓಂ ಪ್ರಥಮದಲ್ಲಿ ಲಜ್ಜೆಗೆಟ್ಟು ಕಳ್ಳನು ಐವರ ಕೂಡಿಕೊಂಡು ಮಹಾಜ್ಞಾನವೆಂಬ ಕನ್ನಗಂಡಿಯ ಕೊರೆದು, ಹವಳ ನೀಲ ರತ್ನ ಧವಳ ಮುತ್ತು ಮಾಣಿಕ್ಯವ ಕದ್ದು, ಆರು ಕೇರಿಯ ದಾಂಟಿ, ಮೂರು ಗ್ರಾಮವ ವಿೂರಿ ಹೋದ ಕಳ್ಳನ ಏಕೋಭಾವವೆಂಬ ಕಂಬಕ್ಕೆ ಕಟ್ಟಿ, ಕಂಬ ಕರಗಿ, ಕಳ್ಳ ಅಡಗಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬೀಜದ ನೆಲೆಯಲ್ಲಿ ಹಲವು ತೋರುವವೊಲು, ಮೂಡಿ ಮೊಳೆತಲ್ಲಿ ಉಲುಹಿಗೆ ಅಲರಾಯಿತ್ತು. ನಾನೆಂಬಲ್ಲಿ ನೀನಾದೆ, ನೀನಾನೆಂಬಲ್ಲಿ ಉಲುಹಾದೆಯಲ್ಲಾ! ಉಲುಹಿನ ನೆಲೆಯ ಕಡಿದು, ಗಲಭೆಯ ಗ್ರಾಮವ ಬಿಟ್ಟು, ನೆಲೆಯಾಗು ಮನದ ಕೊನೆಯಲ್ಲಿ. ಒಲವರ ಬೇಡ, ಸದಾಶಿವಮೂರ್ತಿಲಿಂಗವೆ.
--------------
ಅರಿವಿನ ಮಾರಿತಂದೆ
ನಾನಾ ದೇಶವ ತಿರುಗಿ ಒಂದು ಮುಳ್ಳುಮೊನೆಯ ಮೇಲೆ ಒಬ್ಬ ಪುರುಷನು ನಿಂದಿರುವುದ ಕಂಡೆನಯ್ಯ. ಆ ಪುರುಷನ ಸತಿಯಳು ಒಬ್ಬ ಮಗನ ಹಡೆದು ಆರು ಮೂರು ಗ್ರಾಮವ ಕಟ್ಟಿಸಿ ಆ ಶಿಶುವ ಆ ಪುರುಷಂಗೆ ಕೊಟ್ಟು ಹೆಂಡತಿ ಬತ್ತಲೆಯಾದುದ ಕಂಡೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಿಚ್ಚಿನೊಳಗೆ ಕಿಚ್ಚು ಹುಟ್ಟಿ ಉರಿವುತ್ತಿದ್ದಿತ್ತು. ಕಿಚ್ಚ ಕಾಯ ಹೋದವರ ಹಚ್ಚಡ ಬೆಂದು ಬತ್ತಲೆಯಾದರು. ಆ ಕಿಚ್ಚು ಗ್ರಾಮವ ಸುತ್ತಿ ದಳ್ಳುರಿಗೊಳಲು ಗ್ರಾಮದವರು ಗ್ರಾಮದಾಸೆಯ ಬಿಟ್ಟು ಹೋದರು. ಗ್ರಾಮಕ್ಕಿನ್ನು ಮರಳಿ ಬಾರವೆಂದು ನೇಮವ ಮಾಡಿಕೊಂಡರು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಗ್ರಾಮಕ್ಕಾಗಿ ಬೇಗ ಹೋದರು.
--------------
ಸ್ವತಂತ್ರ ಸಿದ್ಧಲಿಂಗ
ಶ್ರೀ ವಿಭೂತಿಯಿಲ್ಲದವನ ಹಣೆಯ ಸುಡುಯೆಂದಿತ್ತು ಪೌರಾಣ. ಶಿವಾಲಯವಿಲ್ಲದ ಗ್ರಾಮವ ಸುಡುಯೆಂದಿತ್ತು ಪೌರಾಣ. ಶಿವಾರ್ಚನೆಯಿಲ್ಲದವನ ಜನ್ಮವ ಸುಡುಯೆಂದಿತ್ತು ಪೌರಾಣ. ಶ್ರೀ ಶಿವಸ್ತುತಿಯಿಲ್ಲದವನ ಆಗಮವ ಸುಡುಯೆಂದಿತ್ತು ಪೌರಾಣ. ಅದು ಎಂತೆಂದರೆ : ಸಾಕ್ಷಿ :``ಧಿಗ್ ಭಸ್ಮರಹಿತಂ ಭಾಳಂ ಧಿಗ್ ಗ್ರಾಮಮಶಿವಾಲಯಂ | ಧಿಗ್ ಗನೀಶ್ರಾಶ್ರಿತಂ ಜನ್ಮ ಧಿಗ್‍ವಿದ್ಯಾಮಶಿವಾಶ್ರಯಾಂ ||'' ಎಂದುದಾಗಿ, ಎಲ್ಲಿ ಲಿಂಗಾರ್ಚನೆಯಿಲ್ಲ, ಎಲ್ಲಿ ತ್ರಿಪುಂಡ್ರವಿಲ್ಲ, ಎಲ್ಲಿ ರುದ್ರಜಪವಿಲ್ಲ ಅವನ ಮನೆ ಹೊಲೆಮಾದಿಗನ ಮನೆಯ ಸರಿಯೆಂದಿತ್ತು ಪೌರಾಣ. ಅದು ಎಂತೆಂದರೆ : ಸಾಕ್ಷಿ :``ಯತ್ರ ಲಿಂಗಾರ್ಚನಂ ನಾಸ್ತಿ | ನಾಸ್ತಿ ಯತ್ರ ತ್ರಿಪುಂಡ್ರಕಂ | ಯತ್ರ ರುದ್ರ ಜಪಂ ನಾಸ್ತಿ | ತತ್‍ಚಾಂಡಾಲ ಗುರೋರ್ಗೃಹಂ ||'' ಹೀಗೆಂಬುದನರಿಯದೆ ವಾಗದ್ವೈತದಿಂದ ಶ್ರೀವಿಭೂತಿಯ ಪೂಸದೆ, ಶ್ರೀರುದ್ರಾಕ್ಷಿಯ ಧರಿಸದೆ, ಶಿವಲಿಂಗದ ಪೂಜೆಯನನುದಿನ ಮಾಡದೆ, ಶಿವನಿರೂಪದಿಂದಲಾವರಣವನರಿಯದೆ, ಶಿವನ ಸಾಧಿಸೇನೆಂಬ ಅಜ್ಞಾನಿಗಳ ಕಂಡು ನಾ ಬೆರಗಾದೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸೀಮೆಯ ಮೀರಿದ ಸಂಬಂಧಿಯ, ಗ್ರಾಮವ ಮೀರಿದ ಅನಾಮಿಕನ, ಆದ್ಯಕ್ಷರದ ಭೇದ ತಾನಾದ ಅನ್ಯಯಕಾರಿಯ, ನಾದದೊಳಗಣ ಬಿಂದು, ಬಿಂದುವಿನೊಳಗಣ ಭೇದ, ಭೇದದೊಳಗಣ ಕಳೆ, ಕಳೆಯೊಳಗಣ ಸಂಯೋಗ, ಸಂಯೋಗದಲ್ಲಿ ಸಂಬಂಧಿ, ವಿಯೋಗದಲ್ಲಿ ನಿತ್ಯ. ತಾತ್ಪರ್ಯವರ್ಮ ಕಳೆಗಳನರಿದಂಥ ಮುಕ್ತ ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿದ ಉರುತರ ತಾತ್ಪರ್ಯ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->