ಅಥವಾ

ಒಟ್ಟು 38 ಕಡೆಗಳಲ್ಲಿ , 5 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಡಾಭರಣರು ಘನವೆಂಬೆನೆ ? ಅಂಡಾಭರಣರು ಘನವಲ್ಲ. ರುಂಡಾಭರಣರು ಘನವೆಂಬೆನೆ ? ರುಂಡಾಭರಣರು ಘನವಲ್ಲ. ಗಂಗಾಧರರು ಘನವೆಂಬೆನೆ ? ಗಂಗಾಧರರು ಘನವಲ್ಲ. ಗೌರೀವಲ್ಲಭರು ಘನವೆಂಬೆನೆ ? ಗೌರೀವಲ್ಲಭರು ಘನವಲ್ಲ. ಚಂದ್ರಶೇಖರರು ಘನವೆಂಬೆನೆ ? ಚಂದ್ರಶೇಖರರು ಘನವಲ್ಲ. ನಂದಿವಾಹನರು ಘನವೆಂಬೆನೆ ? ನಂದಿವಾಹನರು ಘನವಲ್ಲ. ತ್ರಿಯಂಬಕರು ಘನವೆಂಬೆನೆ ? ತ್ರಿಯಂಬಕರು ಘನವಲ್ಲ. ತ್ರಿಪುರವೈರಿ ಘನವೆಂಬೆನೆ ? ತ್ರಿಪುರವೈರಿ ಘನವಲ್ಲ. ಪಂಚಮುಖರು ಘನವೆಂಬೆನೆ ? ಪಂಚಮುಖರು ಘನವಲ್ಲ. ಫಣಿಕುಂಡಲರು ಘನವೆಂಬೆನೆ ? ಫಣಿಕುಂಡಲರು ಘನವಲ್ಲ. ಶೂಲಪಾಣಿಗಳು ಘನವೆಂಬೆನೆ ? ಶೂಲಪಾಣಿಗಳು ಘನವಲ್ಲ. ನೀಲಲೋಹಿತರು ಘನವೆಂಬೆನೆ ? ನೀಲಲೋಹಿತರು ಘನವಲ್ಲ. ಅದೇನು ಕಾರಣವೆಂದೊಡೆ, ಇಂತಿವರಾದಿಯಾಗಿ ಅನಂತಕೋಟಿ ರುದ್ರಗಣಂಗಳು ಶರಣನ ಸರ್ವಾಂಗದಲ್ಲಿ ಅಡಗಿಹರಾಗಿ ಅಖಂಡೇಶ್ವರಾ, ನಿಮ್ಮ ಶರಣ ಘನಕ್ಕೆ ಘನವೆಂಬೆನಯ್ಯಾ.
--------------
ಷಣ್ಮುಖಸ್ವಾಮಿ
ಜಂಗಮ ಘನವೆಂಬೆನೆ ? ಬೇಡಿ ಕಿರಿದಾಯಿತ್ತು. ಲಿಂಗ ಘನವೆಂಬೆನೆ ? ಕಲುಕುಟಿಗರ ಕೈಯೆ ಮಾಡಿಸಿಕೊಂಡು ಕಿರಿದಾಯಿತ್ತು. ಭಕ್ತ ಘನವೆಂಬೆನೆ ? ತನುಮನಧನ ವಂಚನೆಯಿಂದ ಕಿರಿದಾಯಿತ್ತು. ಇಂತೀ ತ್ರಿವಿಧ ನಿಷ್ಪತ್ತಿಯಾಗದನ್ನಕ್ಕರ ಕೂಡಲಚೆನ್ನಸಂಗಮದೇವನೆಂತೊಲಿವನೊ ?
--------------
ಚನ್ನಬಸವಣ್ಣ
ವೇದ ಘನವೆಂಬೆನೆ, ವೇದ ನಾದದೊಳಗಡಗಿತ್ತು. ನಾದ ಘನವೆಂಬೆನೆ, ನಾದ ಬಿಂದುವಿನೊಳಗಡಗಿತ್ತು. ಬಿಂದು ಘನವೆಂಬೆನೆ, ಬಿಂದು ಅಂಗದೊಳಗಡಗಿತ್ತು. ಅಂಗ ಘನವೆಂಬೆನೆ, ಅಂಗ ಲಿಂಗದೊಳಗಡಗಿತ್ತು. ಲಿಂಗ ಘನವೆಂಬೆನೆ, ಲಿಂಗ ನಿಶ್ಚಿಂತದೊಳಗಡಗಿತ್ತು. ನಿಶ್ಚಿಂತ ಘನವೆಂಬೆನೆ, ನಿಶ್ಚಿಂತ ನಿರಾಳದೊಳಗಡಗಿತ್ತು. ನಿರಾಳ ಘನವೆಂಬೆನೆ, ನಿರಾಳ ನಿರೂಪದೊಳಗಡಗಿತ್ತು. ನಿರೂಪ ನಿಃಕಳಂಕ ನಿಃಶೂನ್ಯ ನಿರಂಜನ ಪರಾಪರ ನೀನೇ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶಾಸ್ತ್ರಘನವೆಂಬೆನೆ ಕರ್ಮವ ಭಜಿಸುತ್ತಿದೆ. ವೇದ ಘನವೆಂಬೆನೆ ಪ್ರಾಣವಧೆಯ ಹೇಳುತ್ತಿದೆ. ಶ್ರುತಿ ಘನವೆಂಬೆನೆ ಮುಂದಿಟ್ಟು ಅರಸುತ್ತಿದೆ. ಅಲ್ಲೆಲ್ಲಿಯೂ ನೀವಿಲ್ಲದ ಕಾರಣ, ತ್ರಿವಿಧದಾಸೋಹದಲಲ್ಲದೆ ಕಾಣಬಾರದು ಕೂಡಲಸಂಗಮದೇವನ. 208
--------------
ಬಸವಣ್ಣ
ಗುರುಸ್ಥಲ ಘನವೆಂಬೆನೆ ? ಗುರುವಿಂಗೆ ಲಿಂಗವುಂಟು. ಲಿಂಗಸ್ಥಲ ಘನವೆಂಬೆನೆ ? ಲಿಂಗಕ್ಕೆ ಜಂಗಮವುಂಟು. ಆ ಜಂಗಮ ಎಲ್ಲಿ ಇದ್ದಡೆ ಅಲ್ಲಿ, ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಭಕ್ತಿ ಅನುಭಾವ ಸನ್ನಿಹಿತ ಕಾಣಾ_ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಭೂಮಿ ಘನವೆಂಬೆನೆ ಪಾದಕ್ಕೊಳಗಾಯಿತ್ತು ಗಗನ ಘನವೆಂಬೆನೆ ಕಂಗಳೊಳಗಾಯಿತ್ತು. ಮಹವು ಘನವೆಂಬೆನೆ ಮಾತಿಂಗೊಳಗಾಯಿತ್ತು. ಘನ ಘನವೆಂಬುದಿನ್ನೆಲ್ಲಿಯದೆಲವೊ! ಅರಿವಿಂಗಾಚಾರವಿಲ್ಲ, ಕುರುಹಿಂಗೆ ನೆಲೆಯಿಲ್ಲ. ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದೆನು.
--------------
ಘಟ್ಟಿವಾಳಯ್ಯ
ಸಮುದ್ರ ಘನವೆಂಬೆನೆ ! ಧರೆಯ ಮೇಲಡಗಿತ್ತು. ಧರೆ ಘನವೆಂಬೆನೆ ! ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು, ನಾಗೇಂದ್ರನ ಘನವೆಂಬೆನೆ ಪಾರ್ವತಿಯ ಕಿರುಕುಣಿಕೆಯ ಮುದ್ರಿಕೆಯಾಯಿತ್ತು. ಅಂತಹ ಪಾರ್ವತಿ ಘನವೆಂಬೆನೆ ಪರಮೇಶ್ವರನ ಅರ್ಧಾಂಗಿಯಾದಳು, ಅಂತಹ ಪರಮೇಶ್ವರ ಘನವೆಂಬೆನೆ ನಮ್ಮ ಕೂಡಲಸಂಗನ ಶರಣರ ಮನದ ಕೊನೆಯ ಮೊನೆಯ ಮೇಲಡಗಿದನು.
--------------
ಬಸವಣ್ಣ
ವೇದ ಘನವೆಂಬೆನೆ ? ವೇದ ವೇಧಿಸಲರಿಯದೆ ಕೆಟ್ಟವು. ಶಾಸ್ತ್ರ ಘನವೆಂಬೆನೆ ? ಶಾಸ್ತ್ರ ಸಾಧಿಸಲರಿಯದೆ ಕೆಟ್ಟವು. ಪುರಾಣ ಘನವೆಂಬೆನೆ ? ಪುರಾಣ ಪೂರೈಸಲರಿಯದೆ ಕೆಟ್ಟವು. ಆಗಮ ಘನವೆಂಬೆನೆ ? ಆಗಮ ಅರಸಲರಿಯದೆ ಕೆಟ್ಟವು. ಅದೇನು ಕಾರಣವೆಂದಡೆ: ವೇದ ಶಾಸ್ತ್ರ ಪುರಾಣಾಗಮಂಗಳೆಲ್ಲ, ತಮ್ಮ ತನುವಿಡಿದು ಅರಸಲರಿಯವು. ಇದಿರಿಟ್ಟುಕೊಂಡು ಕಡೆಹೋದ, ನರಲೋಕದ ನರರುಗಳರಿಯರು, ಸುರಲೋಕದ ಸುರರುಗಳರಿಯರು, ಕೂಡಲಚೆನ್ನಸಂಗಮದೇವಾ ನಿಮ್ಮ ಶರಣನೇ ಬಲ್ಲ.
--------------
ಚನ್ನಬಸವಣ್ಣ
-->