ಅಥವಾ

ಒಟ್ಟು 73 ಕಡೆಗಳಲ್ಲಿ , 32 ವಚನಕಾರರು , 71 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರ್ಪಿತವಲ್ಲದುದ ಕಲಸಿದ ಕೈ, ಉಂಡ ಬಾಯಿ, ತುಂಬಿದ ಘಟ, ಅರಿದು ಕೊಂಡ ಆತ್ಮ ಇವ ಹಿಡಿದಡೆ ಭಂಗ. ಸಡಗರಿಸಿ ತುಂಬಿದ ಗರಳ ಘಟವನೊಡೆದು ಕಿತ್ತು ಆಸೆಯ ನುರಿಚಿ ಹಾಕಿ ಮತ್ತಾ ಅಂಗವನೊಡಗೂಡಿಹೆನೆಂಬ ಚಿತ್ತದ ಹಂಗು ಬೇಡ ಮತ್ತಾ ತಪ್ಪ ಕಂಡು ಎನ್ನಂಗವನೊಡಗೂಡುವ ಮನಕ್ಕೆ ಮನೋಹರ ಶಂಕೇಶ್ವರ ಲಿಂಗವೆ ಬೇಡಾ.
--------------
ಕರುಳ ಕೇತಯ್ಯ
ಭಕ್ತನಾಗಿ ಹುಟ್ಟಿ ಮತ್ತೊಬ್ಬರಲ್ಲಿ ಬೇಡುವುದೆ ಕಷ್ಟ. ಹೊತ್ತು ಹೋರಿ ಭೂಮಿಯ ಅಗೆವಲ್ಲಿ ಮೊತ್ತದ ಜೀವಂಗಳು ಸತ್ತುದ ದೃಷ್ಟವ ಕಂಡಲ್ಲಿಯೆ ಮಾಡುವ ಮಾಟ ನಷ್ಟ. ಇದನರಿತು ವಿರಕ್ತರಾಗಿ ಹೋದಲ್ಲಿ, ಮತ್ತೊಬ್ಬರ ಅಪ್ಪಾ ಅಣ್ಣಾ ಎಂದು ಚಿತ್ತ ಕಲಕುವದು ಕಷ್ಟ. ಈ ಹೊತ್ತ ದೇಹಕ್ಕೆ ನಗೆಯ ಚಿತ್ತದ ಕಾಯಕ, ಇದನೊಪ್ಪುಗೊ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮಾರುತನ ಸಂಗದ ಸ್ಫುಟಿತ ಪಲ್ಲವ ಕಾಷ್ಠ ತೃಣ, ಇವು ಮೊದಲಾದವೆಲ್ಲವು ಗಂಡಾಕಾರವಾಗಿ ತೋರಿ, ಸಂಚಾರ ಹಿಂಗೆ, ಮತ್ತವು ಪುನರಪಿಯಂತಾಗೆ. ಚಿತ್ತ ನಾಲ್ಕರೊಳು ಕೂಡಿದ ಮತ್ತಳಿಯೆ, ಚಿತ್ತದ ಬಂಧವಾವುದು ಹೇಳು, ಅಲೇಖನಾದ ಶೂನ್ಯಕಲ್ಲಿನ ಮನೆಯವನೆ.
--------------
ವಚನಭಂಡಾರಿ ಶಾಂತರಸ
ಮಹಾಜ್ಞಾನ ದಿವ್ಯಪರಿಪೂರ್ಣವಸ್ತು ಜಗಹಿತಾರ್ಥವಾಗಿ ಸ್ವಯಂಭುವೆಂಬ ಸ್ವರೂಪವ ಬಿಟ್ಟು, ಲೀಲಾಸಂಭವನಾಗಿ ಉಮಾಪತಿಯಾದಲ್ಲಿ, ಪಂಚವಕ್ತ್ರದಿಂದ ಪಂಚಭೂತಿಕಂಗಳು ಕಲ್ಪಿಸುವಲ್ಲಿ, ಕರ್ಮಶಕ್ತಿ ವಿಷ್ಣುರೂಪಾಯಿತ್ತು. ಭಾವಶಕ್ತಿ ಬ್ರಹ್ಮರೂಪಾಯಿತ್ತು. ಜ್ಞಾನಶಕ್ತಿ ರುದ್ರರೂಪಾಯಿತ್ತು. ಈ ಉಭಯವ ಘಟಿಸಿ ನಿಂದಲ್ಲಿ, ಷಡುದರ್ಶನ ಸಂಭವಿಸಿದ ಠಾವಾವುದು ? ಒಂದು ವೃಕ್ಷದಲ್ಲಿ ಹುಟ್ಟಿದ ಫಲ, ಮೊದಲೆ ಎಳದಾಗಿ, ತದನಂತರ ಮೀರಿ ಬಲಿದಲ್ಲದೆ ಬೀಜಾಂಕುರವಿಲ್ಲ. ಮರದಿಂ ಮೀರಿ ತೋರುವ ಅಂಕುರವಿಲ್ಲ. ವಸ್ತುವ ಮೀರುವ ದರ್ಶನವಿಲ್ಲ. ಅಪ್ಪು ಒಂದರಲ್ಲಿ ಹಲವು ಫಲವನನುಭವಿಸುವಂತೆ, ವಸ್ತು ಒಂದರಲ್ಲಿ ಸಕಲ ಕೃತ್ಯವ ಮಾಡಿ, ತನ್ನ ಚಿತ್ತದ ಕಲೆಯ ಹರಿದುಕೊಂಬವಂಗೆ ಅವನೊಳು ತಥ್ಯಮಿಥ್ಯ. ಕೈಯುಳಿ ಕತ್ತಿ ಅಡಿಗೂಂಡಕ್ಕಡಿಯಾಗಬೇಡ, ಅರಿ ನಿಜಾ[ತ್ಮಾ] ರಾಮ ರಾಮನಾ
--------------
ಮಾದಾರ ಚೆನ್ನಯ್ಯ
ಅಂಬರದಲ್ಲಿ ತೋರುವ ಚಾಪದ ಬಹುವರ್ಣದ ಸಂಭ್ರಮ ಕುಂಬ್ಥಿನಿಯ ಜಲದಲ್ಲಿ ತೋರುತ್ತಿರೆ ಉಭಯದಲ್ಲಿಯೂ ಬಯಲು. ಆ ರಂಜನೆಯಂತೆ ಚಿತ್ತದ ಕಲೆ ಚಿತ್‍ಶಕ್ತಿಯ ಅರಿವು ಮತ್ರ್ಯರಿಗೆ ಅಗೋಚರ. ಚಿತ್ತಜನ ಬಿಲ್ಲನೆತ್ತುವಾತ ಅನಿತ್ಯದ ಗೊತ್ತಿನಲೈದಾನೆ. ನಿತ್ಯದ ಗೊತ್ತ ಮುಟ್ಟಿ, ಉಭಯದ ಗೊತ್ತ ಬಚ್ಚಬಯಲಾಯಿತ್ತು. ಬಯಲ ಬೆಳಗಿನಲ್ಲಿ ಹೊಳಹುದೋರುತ್ತದೆ, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಬಕಧ್ಯಾನಿ ಜಪಧ್ಯಾನ ಉಂಟೆ? ಜೂಜುವೇಂಟೆ ಚದುರಂಗ ನೆತ್ತ ಪಗಡೆ ಪಗುಡಿ ಪರಿಹಾಸಕರ ಕೂಡು ಕೆಲವಂಗೆ ಶಿವಮೂರ್ತಿಧ್ಯಾನ ಉಂಟೆ? ಕುಕ್ಕುರಂಗೆ ಪಟ್ಟೆಮಂಚ ಸುಪ್ಪತ್ತಿಗೆ ಅಮೃತಾನ್ನವನನಿಕ್ಕಿ ಸಲಹಿದಡೂ ಹಡುಹಿಂಗೆ ಚಿತ್ತವನಿಕ್ಕುವುದೇ ದಿಟ. ಇಂತೀ ಜಾತಿಮತ್ತರ ಲಕ್ಷಣಭೇದ. ಇಂತೀ ಗುರುಚರ ಅಜ್ಞಾಪಿಸಿದ ಆಜ್ಞೆಯ ಮೀರಿದವಂಗೆ ಕುಕ್ಕುರನಿಂದತ್ತಳ ಕಡೆ. ಗುರುವಾದಡಾಗಲಿ, ಲಿಂಗವಾದಡಾಗಲಿ, ಚರವಾದಡಾಗಲಿ ವರ್ತನೆ ತಪ್ಪಿ ನಡೆದವಂಗೆ ಭಕ್ತಿವಿರಕ್ತಿ, ಮೋಕ್ಷಮುಮುಕ್ಷತ್ವವಿಲ್ಲ. ಸಂಗನಬಸವಣ್ಣ ಸಾಕ್ಷಿಯಾಗಿ, ಚನ್ನಬಸವಣ್ಣನರಿಕೆಯಾಗಿ, ಪ್ರಭು ಸಿದ್ಧರಾಮೇಶ್ವರ ಮರುಳುಶಂಕರ ನಿಜಗುಣ ಇಂತಿವರೊಳಗಾದ ನಿಜಲಿಂಗಾಂಗಿಗಳು ಮುಂತಾಗಿ ಎನ್ನ ಕಾಯಕಕ್ಕೆ ಸಾರು ಹೋಗೆಂದಿಕ್ಕಿದ ಕಟ್ಟು. ನಾ ಭಕ್ತನೆಂದು ನುಡಿದಡೆ ಎನಗೊಂದು ತಪ್ಪಿಲ್ಲ, ಅದು ನಿಮ್ಮ ಚಿತ್ತದ ಎಚ್ಚರಿಕೆ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗ ಸಾಕ್ಷಿಯಾಗಿ.
--------------
ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ
ಲಿಂಗವೆಂದು ಹಿಂಗಿ ಭಾವಿಸುವಾಗ ಅರಿವು ಲಿಂಗಕ್ಕೆ ಹೊರಗೆ. ಆ ಲಿಂಗ ಚಿತ್ತದ ಕೈಯಲ್ಲಿ ಪ್ರಮಾಣಿಸಿಕೊಂಬಾಗ ಅಣೋರಣೀಯಾನ್ ಮಹತೋ ಮಹೀಯಾನ್ ಎಂದು ಪ್ರಮಾಣಿಸಿಕೊಂಬುದು ಹುಸಿಯೆ ? ತೊರೆಯುದಕ ಮಳಲ ಮರೆಯಲ್ಲಿ ಬಂದು ಸಂದೇಹವ ಬಿಡಿಸುವಂತೆ, ಎಲ್ಲಿಯೂ ನೀನೇ, ಏಣಾಂಕಧರ ಸೋಮೇಶ್ವರಲಿಂಗವೆ.
--------------
ಬಿಬ್ಬಿ ಬಾಚಯ್ಯ
ಪ್ರಥಮದಲ್ಲಿ ವಸ್ತು ಅನಿರ್ವಾಚ್ಯವಾಗಿದ್ದಿತ್ತು. ಆ ಅನಿರ್ವಾಚ್ಯವಾಗಿದ್ದ ಪರವಸ್ತು ತನ್ನ ಲೀಲೆಯಿಂದ ತಾನೇ ಪರಬ್ರಹ್ಮವೆಂಬ ನಾಮವಾಯಿತ್ತು ! ಆ ನಾಮವನೆಯ್ದಿ ಕುಳವಾಯಿತ್ತು, ಆ ಕುಳದಿಂದ ಆತ್ಮನೆಂಬ ಲಿಂಗಸ್ಥಲವಾಯಿತ್ತು. ಆ ಸ್ಥಳ ಕುಳದೊಳಗೆಯ್ದಿ ಸ್ಥಳಕುಳವೆಂಬ ಎರಡಿಲ್ಲದೆ ನಿಂದಿತ್ತು. ಅದೆಂತೆಂದಡೆ: ವಾಙ್ಮನಕ್ಕಗೋಚರವಾದ ಪ್ರರಬ್ರಹ್ಮದಿಂದಾಯಿತ್ತು ಭಾವ, ಭಾವದಿಂದಾಯಿತ್ತು ಜ್ಞಾನ, ಜ್ಞಾನದಿಂದಾಯಿತ್ತು ಮನ, ಮನದಿಂದಾಯಿತ್ತು ಬುದ್ಧಿ, ಬುದ್ಧಿಯಿಂದಾಯಿತ್ತು ಚಿತ್ತ, ಚಿತ್ತದಿಂದಾಯಿತ್ತು ಅಹಂಕಾರ. ಇಂತು_ಅಹಂಕಾರ ಚಿತ್ತ ಬುದ್ಧಿ ಮನ ಜ್ಞಾನ ಭಾವ ಎಂದು ಆರಾದವು. ಈ ಆರೂ ಕೆಟ್ಟಲ್ಲದೆ ವಾಙ್ಮನಕ್ಕಗೋಚರವಾದ ಪರಬ್ರಹ್ಮವಾಗಬಾರದು. ಇದ ಕೆಡಿಸುವುದಕ್ಕೆ ಆರು ಸ್ಥಲವಾದವು. ಅವಾವೆಂದಡೆ: ಅಹಂಕಾರ ಅಡಗಿದಾಗ ಭಕ್ತಸ್ಥಲ, ಚಿತ್ತದ ಗುಣ ಕೆಟ್ಟಾಗ ಮಾಹೇಶ್ವರಸ್ಥಲ ಬುದ್ಧಿಯ ಗುಣ ಕೆಟ್ಟಾಗ ಪ್ರಸಾದಿಸ್ಥಲ, ಮನೋಗುಣ ಅಳಿದಾಗ ಪ್ರಾಣಲಿಂಗಸ್ಥಲ, ಜೀವನ ಗುಣ ಸಂದಾಗ ಶರಣ ಸ್ಥಲ ಭಾವ ನಿರ್ಭಾವವಾದಾಗ ಐಕ್ಯಸ್ಥಲ. ಇಂತು ಷಟ್ಸ್ಥಲವಾಗಿ ವಾಙ್ಮನಕ್ಕೆ ಅಗೋಚರವಾದ ಬ್ರಹ್ಮವೆ ಆತ್ಮನು. ಆ ಆತ್ಮನಿಂದ ಆಕಾಶ ಹುಟ್ಟಿತ್ತು, ಆ ಆಕಾಶದಿಂದ ವಾಯು ಹುಟ್ಟಿತ್ತು. ಆ ವಾಯುವಿನಿಂದ ಅಗ್ನಿ ಹುಟ್ಟಿತ್ತು, ಆ ಅಗ್ನಿಯಿಂದ ಅಪ್ಪು ಹುಟ್ಟಿತ್ತು. ಆ ಅಪ್ಪುವಿನಿಂದ ಪೃಥ್ವಿ ಹುಟ್ಟಿತ್ತು. ಇಂತು_ಕುಳಸ್ಥಳವಾಗಿ ಸ್ಥಳಕುಳವಾದ ವಿವರವೆಂತೆಂದಡೆ: ಪೃಥ್ವಿ ಅಪ್ಪುವಿನೊಳಡಗಿ, ಅಪ್ಪು ಅಗ್ನಿಯೊಳಡಗಿ, ಅಗ್ನಿ ವಾಯುವಿನೊಳಡಗಿ, ವಾಯು ಆಕಾಶದೊಳಡಗಿ, ಆಕಾಶ ಆತ್ಮನೊಳಡಗಿತ್ತು, ಆತ್ಮ ಪರಶಿವನಲ್ಲಿ ಅಡಗಿತ್ತು ! ಇಂತು_ಷಡಂಗವಡಗಿದ ಪರಿ ಎಂತೆಂದಡೆ: ``ಪೃಥ್ವೀ ಭವೇತ್ ಜಲೇ, ಜಲೇ ಮಗ್ನಾಜಲಂ ಗ್ರಸ್ತಂ ಮಹಾಗ್ನಿನಾ ವಾಯೋರಸ್ತಮಿತಂ ತೇಜೋ ವ್ಯೋಮ್ನಿ ವಾತೋ ವಿಲೀಯತೇ ವ್ಯೋಮ್ಯೋತ್ಮನಿ ವಿಲೀನಂ ಸ್ಯಾತ್ ಆತ್ಮಾ ಪರಶಿವೇ ಪದೇ'' _ ಎಂದುದಾಗಿ ಆತ್ಮನು ಪರಬ್ರಹ್ಮದೊಳಡಗಿ ನಿಂದಿತ್ತು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗುರುವನರಿಯದ ಕಾರಣ ತನು ಸವೆಯಬೇಕೆಂಬರು. ಲಿಂಗವನರಿಯದ ಕಾರಣ ಮನ ಸವೆಯಬೇಕೆಂಬರು. ಜಂಗಮವನರಿಯದ ಕಾರಣ ಧನ ಸವೆಯಬೇಕೆಂಬರು. ಇಂತೀ ತ್ರಿವಿಧವನರಿಯದ ಕಾರಣ ಮಾಟಕೂಟಕ್ಕೆ ಮನೆಗಟ್ಟಿ ಮಾಡುತ್ತಿರ್ದರಯ್ಯಾ ಮಹಾಗಣಂಗಳು, ತಾವು ಸ್ವಇಚ್ಫಾಪರರಲ್ಲದೆ. ಬ್ರಹ್ಮನ ಹಂಗಿಂದ ಬಂದ ಗುರುವನರಿಯರಾಗಿ, ವಿಷ್ಣುವಿನ ಹಂಗಿಂದ ಬಂದ ಲಿಂಗವನರಿಯರಾಗಿ, ರುದ್ರನ ಹಂಗಿಂದ ಬಂದ ಜಂಗಮವನರಿಯರಾಗಿ, ಅಹಂಕಾರವ ಮರೆದಲ್ಲಿಯೆ ಗುರುವನರಿದವ, ಚಿತ್ತದ ಪ್ರಕೃತಿಯ ಹರಿದಲ್ಲಿಯೆ ಲಿಂಗವನರಿದವ, ಮಾಟಕೂಟದ ಅಲಸಿಕೆಯ ಮರೆದಾಗವೆ ಜಂಗಮವನರಿದವ. ಇಂತೀ ತ್ರಿವಿಧಸ್ಥಲನಿರತಂಗಲ್ಲದೆ ವರ್ಮವಿಲ್ಲಾ ಎಂದೆ. ಖ್ಯಾತಿ ಲಾಭಕ್ಕೆ ಮಾಡುವಾತನ ಭಕ್ತಿ, ಅಗ್ನಿಯಲ್ಲಿ ಬಿದ್ದ ಬಣ್ಣವನರಸುವಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಿತ್ತಿಲ ಬಾಗಿಲಲ್ಲಿ ಹೋಹ ಹೆತ್ತ ತಾಯ ಮಗ ಕೊಂದು ಸತ್ತಳೆಂದು ಅಳುತ್ತಿದ್ದ. ಸತ್ತವಳೆದ್ದು ಮಗನಕ್ಕೆಯ ಮಾಣಿಸಿ ಮೊತ್ತದ ಬಂಧುಗಳೆಲ್ಲಾರು ಮತ್ತಿವರು ಬದುಕಿದರೆಂದು ಅಳುತ್ತಿದ್ದರು. ಇಂತೀ ಚಿತ್ತದ ಭೇದವನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಆದಿವಸ್ತು, ಅನಾದಿವಸ್ತುವೆಂದು ಭೇದವ ಮಾಡಿದಲ್ಲಿ, ತನ್ನಿರವಿನ ಭೇದವೊ ? ವಸ್ತುವಿನ ಸ್ವಯರೂಪದಂಗವೊ ? ಇಕ್ಷುದಂಡಕ್ಕೆ ಕಡೆ ನಡು ಮೊದಲಲ್ಲದೆ ಸಕ್ಕರೆಗುಂಟೆ? ಆದಿ ಅನಾದಿ ವಸ್ತು ವೆಂಬುದು ತನ್ನಯ ಚಿತ್ತದ ಗೊತ್ತಲ್ಲದೆ ಅದು ನಿಶ್ಚಯ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಏಕಮೂರ್ತಿ ಸ್ವಯಂಭು.
--------------
ಶಿವಲೆಂಕ ಮಂಚಣ್ಣ
ಅಪ್ಪು ತುಂಬಿದ ಕುಂಭದಲ್ಲಿ ಕಿಚ್ಚು ಹಾಕಿ ಕಟ್ಟಿಗೆಯನಿಕ್ಕಿ ಉರುಹಲಿಕ್ಕೆ ಆ ಅಪ್ಪುವ ಸುಟ್ಟುದುಂಟೆ ಕಿಚ್ಚು ? ಆ ಕುಂಭದ ತಪ್ಪಲಿನಲ್ಲಿ ಕಟ್ಟಿಗೆಯನಿಕ್ಕಿ ಉರುಹಲಿಕ್ಕೆ ಕುಂಭದ ಲೆಪ್ಪದ ಮರೆಯಲ್ಲಿ ಅಪ್ಪುವ ಸುಡಬಲ್ಲುದೆ ? ಇದು ಕಾರಣ ಕ್ರೀಯ ಮರೆಯಲ್ಲಿರ್ದ ನಿಃಕ್ರೀ ಶಿಲೆಯ ಮರೆಯಲ್ಲಿರ್ದ ನೆಲೆ ವಸ್ತುವ ಚಿತ್ತದ ಒಲವರದಿಂದ ಅರಿಯಬೇಕು ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವಲ್ಲಿ.
--------------
ಪ್ರಸಾದಿ ಭೋಗಣ್ಣ
ಅಪ್ಪುವಿನ ಉತ್ಕಟದ ಮಣಿಯಂತೆ ಚಿತ್ರದ ಎಸುಗೆಯ ಲಕ್ಷಣದಂತೆ ಸೂತ್ರದ ಲೆಪ್ಪದ ಭಿತ್ತಿ ಕಡೆಗಾಣಿಸಿದಂತೆ ದೀಪದ ಮೊತ್ತ ಕೆಟ್ಟು ಮೃತ್ತಿಕೆಯ ಘಟ ಒಪ್ಪವಿದ್ದಂತೆ ರಾಜ ಚಿತ್ರದ ಗೃಹ ಹೊತ್ತಿ ಬೆಂದು ಭಸ್ಮಗುಪ್ಪೆಯಿದ್ದಂತೆ ಇದು ಕ್ರಿಯಾಪಥ ಮುಕ್ತನ ಭೇದ. ಅರಿದು ಮರೆದವನ ಚಿತ್ತದ ಗೊತ್ತು. µಟ್ಕರ್ಮ ವಿರಕ್ತನ ನಷ್ಟ, ಸರ್ವಗುಣಿ ಸಂಪನ್ನನ ಮುಟ್ಟಿನ ಭೇದ; ನಿರುತ ಸ್ವಯ ಸಂಗದ ಕೂಟ, ಈ ಗುಣ ಸಾವಧಾನಿಯ ಬೇಟ, ಸರ್ವಾಂಗಲಿಂಗಿಯ ಕೂಟ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಮನದ ಕೈಯಿಂದರಿದು, ಬುದ್ಧಿಯ ಕೈಯಿಂದ ವಿಚಾರಿಸಿ, ಚಿತ್ತದ ಕೈಯಿಂದ ಅರ್ಪಿಸಿಕೊಂಬುದು ಜ್ಞಾತೃವೋ ಜ್ಞಾನವೋ ಜ್ಞೇಯವೋ ? ಇಂತೀ ತ್ರಿವಿಧದ ಕೈಯಲ್ಲಿ ತ್ರಿವಿಧಮುಖಂಗಳಿಂದ ಅರ್ಪಿಸಿಕೊಂಬುದು ಅಂಗದ ಮೇಲಿದ್ದ ಲಿಂಗಸೋಂಕೊರಿ ಆ ಲಿಂಗದ ಒಳಗಣ ಕಳಾಸ್ವರೂಪೊ ? ಅಲ್ಲಾ, ತನ್ನ ಅರಿದ ಅರುಹಿಸಿಕೊಂಬ ನಿರುಗೆಯ ಕುರುಹೊ ? ಇಂತೀ ಅಂಗದಲ್ಲಿ, ಭಾವದಲ್ಲಿ, ಅರಿದ ಅರಿಕೆಯಲ್ಲಿ ತ್ರಿವಿಧ ಕುರುಹಳಿದು ಒಡಗೂಡಿದಲ್ಲಿ ಅಂಗಸೋಂಕು, ಅಲ್ಲಿಯೇ ನಿರಾಳ ಭೋಗಬಂಕೇಶ್ವರಲಿಂಗವಲ್ಲಿಯೆ.
--------------
ಶ್ರೀ ಮುಕ್ತಿರಾಮೇಶ್ವರ
ವಿಷ ತನ್ನೊಳಗಾದಡೂ ತನ್ನ ಕೇಡು, ವಿಷದೊಳಗು ತಾನಾದಡೂ ತನ್ನ ಕೇಡು. ಕರ್ಕಸದ ನಡುವೆ ಹುಟ್ಟಿದ ಕಂಬದಂತೆ. ಇಂತಿವನರಿದು ಮಾಡಿ ನೀಡಿ ವೃಥಾ ನಿರರ್ಥಕ್ಕೆ ಹೋಗಬೇಡ. ಹುತ್ತಕ್ಕೆ ಹಾಲನೆರೆದಲ್ಲಿ ಸರ್ಪ ಕುಡಿಯಿತ್ತೆ ಆ ಹಾಲ? ಅದು ತಮ್ಮ ಕೃತ್ಯದ ಕಟ್ಟಣೆಗೆ ಸರ್ಪನೊಪ್ಪಿ ಕಾಟವ ಬಿಟ್ಟಿತೆ? ಅದು ತಮ್ಮ ಚಿತ್ತದ ದರ್ಪದ ತೆರ. ಇಂತೀ ವಿಶ್ವಾಸದಿಂದ ಶಿವಭಕ್ತಿಯನೊಪ್ಪುಗೊಂಬ, ಇದು ವಿಶ್ವಾಸಿಯ ಸ್ಥಲ. ಶಂಭುವಿನಿಂದಿತ್ತ ಸ್ವಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 86 ||
--------------
ದಾಸೋಹದ ಸಂಗಣ್ಣ
ಇನ್ನಷ್ಟು ... -->