ಅಥವಾ

ಒಟ್ಟು 51 ಕಡೆಗಳಲ್ಲಿ , 18 ವಚನಕಾರರು , 46 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತ ಭಕ್ತನ ಕಂಡಲ್ಲಿ ಕೈಮುಗಿವುದೆ ಭಕ್ತಸ್ಥಲ. ಜಂಗಮ ಜಂಗಮವ ಕಂಡಲ್ಲಿ ಶರಣೆಂಬುದೆ ಜಂಗಮಸ್ಥಲ. ಭಕ್ತ ಜಂಗಮ ಎಂದು ಬೇರುಂಟೆ ? ರಸದಂತೆಡ ಭಕ್ತ, ರುಚಿಯಂತೆ ಜಂಗಮ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
`ನಿರಾಭಾರೀತಿ ವಿಜ್ಞೇಯಃ ಸ ಏವ ಪರಮಶ್ಶಿವಃ | ವೀರಶೈವಕ್ರಮಃ ಪ್ರೋಕ್ತಃ ಪ್ರಾಯಶ್ಚಿತ್ತವಿವರ್ಜಿತಃ || ಎಂದು, ಇವು ಮೊದಲಾದ ಜಂಗಮಸ್ಥಲ ಪ್ರವರ್ತನೆ ಯುಳ್ಳಾತನು ನಿರಾಭಾರಿ ವೀರಶೈವನೆಂದರಿಯಲ್ತಕ್ಕತನು, ಆ ನಿರಾಭಾರಿ ವೀರಶೈವನೆ ಉತ್ಕøಷ್ಟವಾದ ಶಿವನು ತಾನೆ. ಈ ಪ್ರಕಾರದಿಂದ ನಿರೂಪಿಸಲ್ಪಟ್ಟ ವೀರಶೈವ ಕ್ರಮವು ಪ್ರಾಯಶ್ಚಿತ್ತವಿಲ್ಲದೆ ಇದಂಥದು ಎಂದು ಅರಿಯಲ್ತಕ್ಕುದಯ್ಯ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ. ಈ ತ್ರಿವಿಧಭೇದವ ವಿವರಿಸಿ ಹೇಳೆಹೆ ಕೇಳಿರಣ್ಣಾ. ಗುರುಸ್ಥಲ ವೇದಾಂತ, ಲಿಂಗಸ್ಥಲ ಸಿದ್ಧಾಂತ, ಜಂಗಮಸ್ಥಲ ಪ್ರಸಿದ್ಧಾಂತ. ಇಂತೀ ತ್ರಿವಿಧಭೇದ ಐಕ್ಯವಹ ತೆರ ಸಮರ್ಪಣವೆಂತಾದುದಣ್ಣಾ ? ಗುರುಸ್ಥಲ ಸಂಗನಬಸವಣ್ಣನಾದ, ಲಿಂಗಸ್ಥಲ ಚೆನ್ನಬಸವಣ್ಣನಾದ. ಜಂಗಮಸ್ಥಲ ಪ್ರಭುವಾಗಿ ಬಂದ. ಬಂದ ಅಂದವ ತಿಳಿದು ನೋಡು. ಗುರುಲಿಂಗಜಂಗಮವೆಂಬ ಸಂದೇಹದಲ್ಲಿ ನಿಂದು, ಆನಂದಿಸುತ್ತಿರ್ಪ ಭಾವದ ಬಳಲಿಕೆಯ ಅಣ್ಣಗಳು ಕೇಳಿರೊ. ಕಾಯ ಬಸವಣ್ಣನಾದ, ಜೀವ [ಚೆನ್ನ]ಬಸವಣ್ಣನಾದ. ಅದರ ಅರಿವು ಕಳೆ ಪರಿಪೂರ್ಣ ಪರಂಜ್ಯೋತಿ ಪ್ರಭುವಾದ. ಇಂತೀ ತ್ರಿವಿಧಭೇದವ ಕೊಟ್ಟು ಬಂದು, ಭಕ್ತಿ ಮುಕ್ತಿ ವಿರಕ್ತಿಯಿಂದ ಮಹಾಮನೆಯಲ್ಲಿ ಮಾಡಿ ಕೆಟ್ಟ ಬಸವಣ್ಣ. ಹೇಳಿ ಕೆಟ್ಟ ಚೆನ್ನಬಸವಣ್ಣ, ಉಂಡೆಹೆನೆಂದು ಗರ್ವದಲ್ಲಿ ಕುಳಿತು ಕೆಟ್ಟ ಪ್ರಭುದೇವರು. ಅಂತುಕದಲ್ಲಿರ್ದ ಸಂಗನಬಸವಣ್ಣ, ಸಂಕಲ್ಪದಲ್ಲಿರ್ದ ಚೆನ್ನಬಸವಣ್ಣ. ಸಂದೇಹದಂಗವ ತಾಳಿರ್ದ ಪ್ರಭುದೇವರು. ಇಂತಿವರಂಗದಲ್ಲಿ ಲಿಂಗವುಂಟೆಂಬೆನೆ, ಜ್ಞಾನಕ್ಕೆ ದೂರ. ಇಲ್ಲವೆಂಬೆನೆ ಸಮಯಕ್ಕೆ ದೂರ. ಇಂತೀ ಉಭಯದ ಸಂದನಳಿದರೆಂಬೆನೆ, ಪ್ರಭು ಸಂದೇಹಿಯಾದ. ಇವರೆಲ್ಲರೂ ಅಡುವ ಲಂದಣಗಿತ್ತಿಯ ಮನೆಯ ಉಂಬಳಿಕಾರರಾದರು. ಇದು ಸಂದೇಹವಿಲ್ಲ. ಗುರುವೆಂದಡೆ ಸರ್ವರಿಗೆ ಬೋಧೆಯ ಹೇಳಿ, ಕರ್ಮಕಾಂಡಿಯಾದ. ಲಿಂಗವೆಂದಡೆ ಯುಗಯುಗಂಗಳಿಗೊಳಗಾದ, ಪ್ರಳಯಕ್ಕರುಹನಾದ. ಪ್ರಭುದೇವರು ಜಂಗಮವೆಂಬೆನೆ ಗೆಲ್ಲ ಸೋಲಕ್ಕೆ ಹೋರಿ, ಕಾಯದೊಳು ನಾನಿಲ್ಲವೆಂದು ಚೌವಟಗೊಳಗಾದ. ಎಲ್ಲಿಯೂ ಕಾಣೆ, ಲೀಲೆಗೆ ಹೊರಗಾದವನ. ಭಕ್ತಿ ಮುಕ್ತಿ ವಿರಕ್ತಿ ಲೇಪವಾಗಿ, ನಾನೆನ್ನದೆ ಇದಿರೆನ್ನದೆ, ಜಗದಲ್ಲಿ ತಾನೇನೂ ಎನ್ನದಿರ್ಪುದೆ ತ್ರಿವಿಧ ಸಮರ್ಪಣ ಆಚಾರ. ಭಾವರಹಿತ ವಿಕಾರ, ನಿರುತ ಪರಿಪೂರ್ಣನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಇದ್ದ ಪರಿ ಇಂತುಟಿದೆ ನೋಡಯ್ಯಾ; ನಿಂದಡೆ ನೆಳಲಿಲ್ಲ, ನಡೆದಡೆ ಹೆಜ್ಜೆಯಿಲ್ಲ, ಭೂತಳದೊಳಗೆ ಕಂಡುದಿಲ್ಲ. ಇಂತಪ್ಪ ಅನಿಯಮದ ಸುಳುಹು, ಅಹುದಹುದು, ಅರಿದರಿದು ಜಂಗಮಸ್ಥಲ ಇಂತುಟಲ್ಲದೆ, ಎಂತುಟು ಹೇಳಾ ಆಪ್ಯಾಯನದ ಅರಿಕೆಯ ಹೊಲಬ ಕಾಣಬಾರದು, ಊಡಿಸಿದಡೆ ಉಂಬನೊ ಉಣ್ಣನೊ ಉಂಬಂಥವರಾದಡೆ ನೀಡುವೆ ಕೂಡಲಸಂಗಮದೇವರಿಗೆ ಚೆನ್ನಬಸವಣ್ಣಾ, ನೀನಹುದಹುದೆನಲಿಕೆ.
--------------
ಬಸವಣ್ಣ
ಜ್ಞಾನದಲ್ಲಿ ಸುಳಿವ ಜಂಗಮಸ್ಥಲದ ಇರವು ಹೇಂಗಿರಬೇಕೆಂದಡೆ: ಅಂಬುದ್ಥಿಯ ಕೂಡಿದ ಸಂ[ಭೇದದ]ತಿರಬೇಕು. ಮುಖ ಶಿರ ಬೋಳಾದಡೇನೊ, ಹುಸಿ ಕೊಲೆ ಕಳವು ಪಾರದ್ವಾರ ಅತಿಕಾಂಕ್ಷೆಯ ಬಿಡದನ್ನಕ್ಕರ ? ಗಡ್ಡ ಜಡೆ ಕಂಥೆ ಲಾಂಛನವ ತೊಟ್ಟಿಹ ಬಹುರೂಪರಂತೆ, ಜಗದೊಳಗೆ ಸುಳಿವ ಬದ್ಧಕತನದಲ್ಲಿ ದ್ರವ್ಯಕ್ಕೆ ಗೊಡ್ಡೆ[ಯ]ರ[ನಿ]ರಿವ ದೊಡ್ಡ ಮುದ್ರೆಯ ಕಳ್ಳರು, ತುರುಬ ಚಿಮ್ಮುರಿಗಳ ಕಟ್ಟಿ, ನಿರಿಗುರುಳ ಬಾಲೆಯರ ಮುಂದೆ ತಿರುಗುತಿಪ್ಪ ಬರಿವಾಯ ಭುಂಜಕರುಗಳು ಅರಿವುಳ್ಳವರೆಂದು ಬೀಗಿ ಬೆರೆವುತಿಪ್ಪರು. ಅರಿವಿನ ಶುದ್ಧಿಯನರಿದ ಮಹಾತ್ಮಂಗೆ ಹಲುಬಲೇತಕ್ಕಯ್ಯಾ, ಮೊಲೆಯ ಕಾಣದ ಹಸುಳೆಯಂತೆ ? ಅರಿವಿನ ಶುದ್ಧಿ ಕರಿಗೊಂಡವಂಗೆ, ನರಗುರಿಗಳ ಭವನವ ಕಾಯಲೇತಕ್ಕೆ ? ಅರಿವೆ ಅಂಗವಾದ ಲಿಂಗಾಂಗಿಗೆ ಬರುಬರ ಭ್ರಾಂತರ ನೆರೆ ಸಂಗವೇತಕ್ಕೆ ? ಇದು ಕಾರಣ, ತುರುಬೆಂಬುದಿಲ್ಲ, ಜಡೆಯೆಂಬುದಿಲ್ಲ, ಬೋಳೆಂಬುದಿಲ್ಲ. ಅರುಹು ಕುರುಹಿಂಗೆ ಸಿಕ್ಕದು, ಅರಿದುದು ಕುರುಹಿಂಗೆ ಸಿಕ್ಕದು, ಅರಿದುದು ಮರೆಯಲಾಗಿ, ಮರೆದುದು ಅರಿದುದಕ್ಕೆ ಕುರುಹಿಲ್ಲವಾಗಿ, ಇಂತೀ ಸಂಚಿತ ಪ್ರಾರಬ್ಧ ಆಗಾಮಿಗೆ ಹೊರಗಾದುದು, ಜ್ಞಾನ ಜಂಗಮಸ್ಥಲ. ಹೀಂಗಲ್ಲದೆ ಗೆಲ್ಲ ಸೋಲಕ್ಕೆ ಹೋರಿ ಬಲ್ಲವರಾದೆವೆಂಬವರ ವಲ್ಲಭ ನಿಃಕಳಂಕ ಮಲ್ಲಿಕಾರ್ಜುನಲಿಂಗನವರನೊಲ್ಲನಾಗಿ.
--------------
ಮೋಳಿಗೆ ಮಾರಯ್ಯ
ಆಚಾರಕರ್ಪರ, ವಿಚಾರಕರ್ಪರ, ಅವಿಚಾರಕರ್ಪರದ ನಿರ್ಣಯವಾವುದೆನಲು, ಅನ್ಯದೈವ ಭವಿಮಿಶ್ರ ಅನಾಚಾರ ಭಕ್ಷಾಭಕ್ಷ ಪೇಯಾಪೇಯ ಅನ್ಯಾಯ ಇಂತಿವರನುಸರಣಿಗೊಳ್ಳದೆ ವಿಚಾರಿಸಿ ಭಕ್ತರ ಗೃಹವ ಹೋಗುವುದೀಗ ಆಚಾರಕರ್ಪರ. ನಾನಾರೊ ? ಎಂದು ವಿಚಾರಿಸಿ ತನಗೆ ಮುಸುಕಿದ ಮಾಯಾಪಟಲದ ಭ್ರಮೆಯಂ ಪರಿದು ಶ್ರೀಗುರುವಿನ ಸದ್ಭಾವಜ್ಞಾನಮನಕರಣದಿಂ ಉದಯಿಸಿದವನಜಾತಸ್ವಯಂಭುವೆಂದರಿದು, ಆಶೆಯಾಮಿಷ ಕಾಯಗುಣ ಇಂದ್ರಿಯದುರವಣೆ ಮನೋವಿಕಾರಾದಿಗಳಿಗೆ ಸಿಲ್ಕದೆ, ಆ ಮನ ಮೊದಲಾದ ಕಾರಣಂಗಳ ತನ್ನರಿವಿನಾಜ್ಞೆಯಿಂ ಲಿಂಗದಲ್ಲಿ ನೆನಹು ನೆಲೆಗೊಳಿಸಿ, ನೋಟವನಿಮಿಷವೆನಿಸಿ, ಅನ್ಯನುಡಿ ಅನ್ಯನಡೆಯೆಲ್ಲಮಂ ಮುನ್ನವೆ ತ್ಯಜಿಸಿ, ಲಿಂಗದ ನಡೆ ನುಡಿ ಚೈತನ್ಯವಳವಟ್ಟು, ಪರಶಿವನ ಪರತತ್ವವೆ ಪರಮಕರ್ಪರ ವಿಷಯ, ಶಿಕ್ಷಾದಂಡವೆ ಕಟ್ಟಿಗೆ, ಪಂಚಭೂತಕಾಯವನುಳಿದ ಅಕಾಯವೆ ಕಂಥೆ, ಪರಮವೈರಾಗ್ಯವೆ ಯೋಗವಟ್ಟಿಗೆ, ನಿರಾಶಾಪಥವೆ ಯೋಗವಾವುಗೆ, ನಿಷ್ಕಾಮಿತವೆ ಒಡ್ಯಾಣ. ಬಿಂದುಚಲಿಸಿದ ಸಂಧಾನಗತಿ ನಿಂದು ಲಿಂಗಸಂಯೋಗದ ಸಮರತಿಯ ಮುಕ್ತ್ಯಂಗನೆಯೆನಿಸುವ ಚಿಚ್ಛಕ್ತಿಯ ಕೂಟದ ಊಧ್ರ್ವರೇತಸ್ಸಿನ ಪರಮವಿಶ್ರಾಂತಿಯೆ ಕೌಪೀನ, ಅಪ್ರಮಾಣ ಚಾರಿತ್ರ್ಯವೆ ಆಧಾರಘುಟಿಕೆ, ಲಿಂಗಗಂಭೀರದ ಮಹದೈಶ್ವರ್ಯವೆ ವಿಭೂತಿ, ನಿರುಪಾಧಿಕ ತೇಜೋಮಯವಾದ ಮಹಾಲಿಂಗದ ಪ್ರಕಾಶವೆ ಭಸ್ಮೋದ್ಧೂಳನಾಗಿ, ಆ ಭಸ್ಮೋದ್ಧೂಳನ ಪ್ರಕಾಶದಿಂ ಅಜ್ಞಾನತಮವಳಿದ ಸಜ್ಞಾನಕ್ಷೇತ್ರದಲ್ಲಿ ಸುಳಿವ ಸುಳುಹೆ ದೇಶಾಂತರವಾಗಿ ಚರಿಸುವುದೆಂತೆಂದಡೆ: ಜಂಗಮಸ್ಯ ಗೃಹಂ ನಾಸ್ತಿ ಸ ಗಚ್ಛೇತ್ ಭಕ್ತಮಂದಿರಂ ಯದಿ ಗಚ್ಛೇತ್ ಭವೇರ್ಗೇಹಂ ತದ್ಧಿಗೋಮಾಂಸಭಕ್ಷಣಂ ಎಂದುದಾಗಿ ಇಂತೀ ವಿಚಾರದಲ್ಲಿ ಸುಳಿವ ಸುಳುಹೆ ವಿಚಾರಕರ್ಪರ. ವೇದಾತೀತಾಗಮಾತೀತಃ ಶಾಸ್ತ್ರಾತೀತೋ ನಿರಾಶ್ರಯಃ ಆನಂದಾಮೃತಸಂತುಷ್ಟೋ ನಿರ್ಮಮೋ ಜಂಗಮಃ ಸ್ಮೃತಃ ಇಂತೆಂದುದಾಗಿ, ಕಾಯಗುಣವಳಿದು, ಪರಕಾಯಗುಣವುಳಿದು, ಇಂದ್ರಿಯಗುಣವಳಿದು, ಅತೀಂದ್ರಿಯತ್ವದಲ್ಲಿ ವಿಶ್ರಾಂತಿಯನೈದಿ, ರಣಗುಣವಳಿದು, ನಿರಾವರಣ ನಿರ್ಮಲ ನಿರ್ವಿಕಾರ ನಿಜಲಿಂಗದಲ್ಲಿ ನಿಶ್ಚಲಿತನಾಗಿ, ಜೀವನ ಗುಣವಳಿದು, ಪರಮಾತ್ಮಲಿಂಗದಲ್ಲಿ ಘನಚೈತನ್ಯ ತಲ್ಲೀಯವಾಗಿ, ತನಗಿದಿರಿಟ್ಟು ತೋರುವ ತೋರಿಕೆಯೆಲ್ಲವೂ ತಾನಲ್ಲದೇನು ಇಲ್ಲವೆಂದರಿದು, ಕಾಬವೆಲ್ಲವೂ ಶಿವರೂಪು, ಕೇಳುವವೆಲ್ಲವೂ ಶಿವಾನುಭಾವ, ನಡೆದುದೆಲ್ಲವೂ ಶಿವಮಾರ್ಗ, ನುಡಿದುದೆಲ್ಲವೂ ಶಿವತತ್ವ, ಕೊಡುವ ಕೊಂಬೆಡೆಯಲ್ಲಿ ಎಡೆದೆರಪಿಲ್ಲದೆ ಅಖಂಡಾದ್ವಯ ಪರಿಪೂರ್ಣಚಿದಾನಂದರೂಪ ತಾನೆಂದರಿದು, ನಿಂದ ನಿಲವೆ ಅವಿಚಾರಕರ್ಪರ. ಅದೆಂತೆಂದಡೆ: ಚರಾಚರವಿಹೀನಂ ಚ ಸೀಮಾಸೀಮಾವಿವರ್ಜಿತಂ ಸಾಕ್ಷಾನ್ ಮುಕ್ತಿಪದಂ ಪ್ರಾಹುರುತ್ತಮಂ ಜಂಗಮಸ್ಥಲಂ ಎಂದುದಾಗಿ, ಶಬ್ದ ಚಲನೆಯಿಲ್ಲದುದೆ ಲಿಂಗವೆಂದರಿದು, ಬಿಂದುಚಲನೆಯಿಲ್ಲದುದೆ ಜಂಗಮವೆಂದರಿದು, ಆ ಬಿಂದುವನೆ ಲಿಂಗಮುಖದಲ್ಲಿ ನಿಲಿಸಿ ಆ ನಾದವನೆ ಘನಚೈತನ್ಯಜಂಗಮಮುಖದಲ್ಲಿ ನಿಲಿಸಿ, ಆ ನಾದಬಿಂದುವನೊಂದು ಮಾಡಿ ನಿಂದ ನಿಲವೆ ಉಪಮಾತೀತವದೆಂತೆಂದಡೆ: ನಾದನಿಶ್ಚಲತೋ ಲಿಂಗಂ ಬಿಂದುನಿಶ್ಚಲತೋ ಚರಃ ನಾದಬಿಂದು ಸಮಾಯುಕ್ತ ಶ್ರೇಷ*ಂ ತಲ್ಲಿಂಗಜಂಗಮಂ ಎಂದುದಾಗಿ, ಮನಶ್ಚಂದಿರ ಇತ್ಯುಕ್ತಂ ಚಕ್ಷುರಾದಿತ್ಯ ಉಚ್ಯತೇ ಚಂದಿರಾದಿತ್ಯಸಂಯುಕ್ತಂ ಉತ್ತಮಂ ಜಂಗಮಸ್ಥಲಂ ಎಂದುದಾಗಿ, ಮನಸ್ಥಂ ಮನೋಮಧ್ಯಸ್ಥಂ ಮನೋಮಧ್ಯಸ್ಥ ವರ್ಜಿತಾಃ ಮನಸಾ ಮನ ಆಲೋಕ್ಯ ಸ್ವಯಂ ಸಿದ್ಧಾ ಸುಯೋಗಿನಃ ಇಂತೆಂದುದಾಗಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ, ನಿಮ್ಮ ಶರಣರಜಾತಜನಿತರು, ಅನುಪಮಚರಿತರು.
--------------
ಉರಿಲಿಂಗಪೆದ್ದಿ
ಶ್ರೀ ಗುರುಸ್ವಾಮಿ ಶಿಷ್ಯನನನುಗ್ರಹಿಸುವ ಪರಿಯೆಂತೆಂದರೆ: ಆಚಾರಸ್ಥಲ ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಅರ್ಪಿತಸ್ಥಲ ಪ್ರಸಾದಸ್ಥಲವೆಂದು ಕರುಣಿಸುವುದು ದೀಕ್ಷೆ. ಈ ಕ್ರಮವರಿದು ಮಹಾಪ್ರಸಾದವೆಂದು ಕೈಕೊಂಡ ಬಳಿಕ ಪರಪಾಕಂ ನ ಕರ್ತವ್ಯಂ ಲಿಂಗನೈವೇದ್ಯಕಿಲ್ಬಿಷಂ ಸ್ವಯಂಪಾಕಂ ಪವಿತ್ರಾಣಾಂ ಲಿಂಗನೈವೇದ್ಯಮುತ್ತಮಂ ಎಂಬುದಾಗಿ, ಒಡಲ ಕಕ್ಕುಲತೆಗೆ, ಭಕ್ತನ ದಾಕ್ಷಿಣ್ಯಕ್ಕೆ ಅನ್ಯದೈವ ಭವಿನೇಮಸ್ತರುಳ್ಳಲ್ಲಿ ಹೊಕ್ಕರೆ, ಕೂಡಲಚೆನ್ನಸಂಗಾ ಅವರಂದೆ ದೂರ.
--------------
ಚನ್ನಬಸವಣ್ಣ
ಕಾಯದ ಕೈಯಲ್ಲಿ ಕರಸ್ಥಲ, ಪ್ರಾಣದ ಕೈಯಲ್ಲಿ ಜಂಗಮಸ್ಥಲ, ಈ ಉಭಯಭಾವದ ಶಿವಲಿಂಗಾರ್ಚನೆ ಪರಮಾನಂದಸುಖಸ್ಥಲ. ಕಾಯ ಭಕ್ತ, ಪ್ರಾಣ ಜಂಗಮ, ಆವುದ ಘನವೆಂಬೆನಾವುದ ಕಿರಿದೆಂಬೆ ಕೂಡಲಸಂಗನ ಶರಣರು ಬಂದಡೆ ಉಪಚಾರಕ್ಕೆ ಇಂಬಿಲ್ಲ, ಕರುಣದಿಂದ ಬರಹೇಳಾ, ಅಪ್ಪಣ್ಣಾ.
--------------
ಬಸವಣ್ಣ
ಕೃತಯುಗದಲ್ಲಿ ಓಂಕಾರಸತ್ಯರೂಪದೇವಾಂಗನೆಂಬ ಭಕ್ತನ ಮಾಡುವಲ್ಲಿ ಸ್ಥೂಲಕಾಯನೆಂಬ ಜಂಗಮ, ಅಂದಿಗೆ ಪ್ರಥಮಮೂಲಸ್ಥಾನ ಕೇತಾರೇಶ್ವರ. ತ್ರೇತಾಯುಗದಲ್ಲಿ ಘಂಟಾಕರ್ಣನೆಂಬ ಭಕ್ತನ ಮಾಡುವಲ್ಲಿ, ಶೂನ್ಯಕಾಯನೆಂಬ ಜಂಗಮ, ಅಂದಿಗೆ ಪ್ರಥಮಮೂಲಸ್ಥಾನ ರಾಮೇಶ್ವರ. ದ್ವಾಪರದಲ್ಲಿ ವೃಷಭನೆಂಬ ಭಕ್ತನ ಮಾಡುವಲ್ಲಿ, ಅನಿಮಿಷನೆಂಬ ಜಂಗಮ, ಅಂದಿಗೆ ಪ್ರಥಮಮೂಲಸ್ಥಾನ ¸õ್ಞರಾಷ್ಟ್ರ. ಕಲಿಯುಗದಲ್ಲಿ ಬಸವನೆಂಬ ಭಕ್ತನ ಮಾಡುವಲ್ಲಿ ಪ್ರಭುವೆಂಬ ಜಂಗಮ, ಅಂದಿಗೆ ಪ್ರಥಮಮೂಲಸ್ಥಾನ ಶ್ರೀಶೈಲ. ಇಂತೀ ನಾಲ್ಕು ಯುಗಕ್ಕೆ ನಾಲ್ಕು ಜಂಗಮಸ್ಥಲ, ನಾಲ್ಕು ಯುಗಕ್ಕೆ ನಾಲ್ಕು ಲಿಂಗ (ಭಕ್ತ?) ಸ್ಥಲ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಸರ್ವ ನಿರ್ವಾಣದಲ್ಲಿ ಗುರುಸ್ಥಲ, ಲಯ ನಿರ್ವಾಣದಲ್ಲಿ ಲಿಂಗಸ್ಥಲ. ಇಷ್ಟ ಕಾಮ್ಯ ಮೋಕ್ಷಂಗಳು, ಉತ್ಪತ್ಯಸ್ಥಿತಿಲಯ ಆಣವ ಮಾಯಾ ಕಾರ್ಮಿಕ ನವಗುಣಂಗಳು ನಿಂದು, ಶಬ್ದಮುಗ್ಧವಾದುದು ಜಂಗಮಸ್ಥಲ. ಇಂತೀ ಕುಳ ವಿವರವ ವೇದಿಸಿ ಸರ್ವಜ್ಞಾನ ಪರಿಪೂರ್ಣವಾಗಿಪ್ಪ ತ್ರಿವಿಧಮೂರ್ತಿಯೆ ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.
--------------
ಮೋಳಿಗೆ ಮಾರಯ್ಯ
ಗುರುಸ್ಥಲ ಭಕ್ತಿವಂಶಿಕ, ಲಿಂಗಸ್ಥಲ ಮಾಹೇಶ್ವರ ವಂಶಿಕ, ಜಂಗಮಸ್ಥಲ ಪ್ರಸಾದಿಯ ವಂಶಿಕ. ಪ್ರಾಣಲಿಂಗಿ ಶರಣ ಐಕ್ಯನೆಂಬೀ ತ್ರಿವಿಧ ಅನಾದಿಯ ಸೋಂಕು. ಅವು ಪೂರ್ವಗತಿಗೆ ಬಂದು, ಉತ್ತರಗತಿಯನೆಯ್ದಿಸುವುದಕ್ಕೆ ಗೊತ್ತಾಗಿ, ನಿತ್ಯ ಅನಿತ್ಯವೆಂಬ ಉಭಯದ ಹೆಚ್ಚುಕುಂದ ತಿಳಿವುದಕ್ಕೆ ದೃಷ್ಟವ ಕೊಟ್ಟೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬ್ರಹ್ಮಾಬ್ರಹ್ಮರಿಲ್ಲದಂದು, ವಿಷ್ಣು ಮಾಯಾಜಾಲವಿಲ್ಲದಂದು ಸೃಷ್ಟ್ಯಸೃಷ್ಟಿಯಿಲ್ಲದಂದು, ಕಾಳಿಂಗ ಕರೆಕಂಠರಿಲ್ಲದಂದು, ಉಮೆಯ ಕಲ್ಯಾಣವಿಲ್ಲದಂದು, ದ್ವಾದಶಾದಿತ್ಯರಿಲ್ಲದಂದು, ನಂದಿಕೇಶ್ವರನಿಲ್ಲದಂದು ಲಿಂಗಸ್ಥಲ ಜಂಗಮಸ್ಥಲ ಪ್ರಸಾದಿಸ್ಥಲವಿಲ್ಲದಂದು ದೇಹಾಹಂಕಾರ ಪ್ರಕೃತಿಯಿಲ್ಲದಂದು, ಕೂಡಲಚೆನ್ನಸಂಗಯ್ಯ ತಾನೆನ್ನದಿರ್ದನಂದು
--------------
ಚನ್ನಬಸವಣ್ಣ
ಎನ್ನಂತರಂಗದೊಳಗೆ ಅರಿವಾಗಿ, ಎನ್ನ ಬಹಿರಂಗದೊಳಗೆ ಆಚಾರವಾಗಿ ನೀನೆಡೆಗೊಂಡು, ಎನ್ನ ಮನದೊಳಗೆ ಘನ ನೆನಹಾಗಿ ಮೂರ್ತಿಗೊಂಡು, ಗುರುಸ್ಥಲ ಲಿಂಗಸ್ಥಲ ಜಂಗಮಸ್ಥಲ ಪ್ರಸಾದಿಸ್ಥಲವೆಂಬ ಚತುರ್ವಿಧವನೂ ಎನಗೆ ಸ್ವಾಯತವ ಮಾಡಿ ತೋರಿ, ಪ್ರಾಣಲಿಂಗವೆಂಬ ಹಾದಿಯ ಸೆರಗ ತೋರಿಸಿ, ಎಲ್ಲಾ ಅಸಂಖ್ಯಾತರನೂ ಪಾವನವ ಮಾಡಿದಿರಾಗಿ- ಕೂಡಲಸಂಗಮದೇವಾ, ನಿಮ್ಮಿಂದ ಸಕಲ ಸನುಮತವ ನಾನರಿದೆನಲ್ಲದೆ, ಎನ್ನಿಂದ ನೀನಾದೆ ಎಂಬುದ ನಿಮ್ಮ ಪ್ರಮಥರು ಮೆಚ್ಚರು ನೋಡಯ್ಯಾ.
--------------
ಬಸವಣ್ಣ
ಆಚಾರವರಿುರಿ, ವಿಚಾರವರಿುರಿ ಜಂಗಮಸ್ಥಲ ಲಿಂಗ ಕಾಣಿರಯ್ಯಾ. ಜಾತಿಭೇದವಿಲ್ಲ, ಸೂತಕವಿಲ್ಲ, ಅಜಾತಂಗೆ ಕುಲವಿಲ್ಲ. ನುಡಿದಂತೆ ನಡೆಯದಿದ್ದಡೆ ಕೂಡಲಸಂಗಯ್ಯ ಮೆಚ್ಚ ಕಾಣಿರಯ್ಯಾ. 418
--------------
ಬಸವಣ್ಣ
ಲಿಂಗಸ್ಥಲ ಜಂಗಮಸ್ಥಲ ಪ್ರಸಾದಸ್ಥಲವನರಿದಿಹೆವೆಂದರೆ ಮತ್ತಾರಿಗೂ ಆಗದು. ಸಾಧಿಸುವ ಸಾಧಕಂಗಲ್ಲದೆ ಮತ್ತಾರಿಗೂ ಆಗದು. ಭೇದಿಸುವ ಭೇದಕಂಗಲ್ಲದೆ ಮತ್ತಾರಿಗೂ ಆಗದು. ಪ್ರಸಾದಿಯ ಪ್ರಸಾದ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗಲ್ಲದೆ ಮತ್ತಾರಿಗೂ ಆಗದು.
--------------
ಚನ್ನಬಸವಣ್ಣ
ಇನ್ನಷ್ಟು ... -->