ಅಥವಾ

ಒಟ್ಟು 16 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತ ಬ್ರಹ್ಮ. ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡಾತ ವಿಷ್ಣು. ಕಂಠದಲ್ಲಿ ಲಿಂಗವ ಧರಿಸಿಕೊಂಡಾತ ರುದ್ರ. ಉರಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತ ಈಶ್ವರ. ಉತ್ತಮಾಂಗದಲ್ಲಿ ಲಿಂಗವ ಧರಿಸಿಕೊಂಡಾತ ಸದಾಶಿವ. ಆಮಳೋಕ್ಯದಲ್ಲಿ ಲಿಂಗವ ಧರಿಸಿಕೊಂಡಾತ ಪರಮೇಶ್ವರ. ಬ್ರಹ್ಮಂಗೆ ಪೀತವರ್ಣದ ಲಿಂಗ, ವಿಷ್ಣುವಿಂಗೆ ನೀಲವರ್ಣದ ಲಿಂಗ, ರುದ್ರಂಗೆ ಕಪಿಲವರ್ಣದ ಲಿಂಗ, ಈಶ್ವರಂಗೆ ಮಾಂಜಿಷ್ಟವರ್ಣದ ಲಿಂಗ, ಸದಾಶಿವಂಗೆ ಮಾಣಿಕ್ಯವರ್ಣದ ಲಿಂಗ, ಪರಮೇಶ್ವರಂಗೆ ಸ್ಫಟಿಕವರ್ಣದ ಲಿಂಗ. ಬ್ರಹ್ಮ ಪಾಶುಪತಿಯಾಗಿ ಸುಳಿದ, ವಿಷ್ಣು ಜೋಗಿಯಾಗಿ ಸುಳಿದ, ರುದ್ರ ಶ್ರವಣನಾಗಿ ಸುಳಿದ, ಈಶ್ವರ ಸನ್ಯಾಸಿಯಾಗಿ ಸುಳಿದ, ಸದಾಶಿವ ಯೋಗಿಯಾಗಿ ಸುಳಿದ, ಪರಮೇಶ್ವರ ಕಾಳಾಮುಖಿಯಾಗಿ ಸುಳಿದ. ಬ್ರಹ್ಮಂಗೆ ಕಾವಿ ಬಿಳಿದು, ವಿಷ್ಣುವಿಂಗೆ ಪೀತಸಕಲಾತಿ, ರುದ್ರಂಗೆ ಕಾಗು ಕಂಬಳಿ, ಈಶ್ವರಂಗೆ ಮೃಗಾಜಿನ ಕಾವಿಕಪ್ಪಡ, ಸದಾಶಿವಂಗೆ ಪುಲಿಚರ್ಮ ರತ್ನಗಂಬಳಿ, ಪರಮೇಶ್ವರಂಗೆ ಮೇಕೆಚರ್ಮ ಸಿತಕಪ್ಪಡ. ಬ್ರಹ್ಮ ಸ್ಥೂಲನೆಂದು, ವಿಷ್ಣು ಸೂಕ್ಷ್ಮನೆಂದು, ರುದ್ರ ಕಾರಣನೆಂದು, ಈಶ್ವರ ಸಕಲನೆಂದು, ಸದಾಶಿವ ನಿಃಕಲನೆಂದು, ಪರಮೇಶ್ವರ ಶೂನ್ಯನೆಂದು. ಬ್ರಹ್ಮಂಗೆ `ನ'ಕಾರ, ವಿಷ್ಣುವಿಂಗೆ `ಮ'ಕಾರ, ರುದ್ರಂಗೆ `ಶಿ'ಕಾರ, ಈಶ್ವರಂಗೆ `ವ'ಕಾರ, ಸದಾಶಿವಂಗೆ `ಯ'ಕಾರ, ಪರಮೇಶ್ವರಂಗೆ `ಓಂ' ಕಾರ. ಬ್ರಹ್ಮಂಗೆ ಭಕ್ತಸ್ಥಲ, ವಿಷ್ಣುವಿಂಗೆ ಮಹೇಶ್ವರಸ್ಥಲ, ರುದ್ರಂಗೆ ಪ್ರಸಾದಿಸ್ಥಲ, ಈಶ್ವರಂಗೆ ಪ್ರಾಣಲಿಂಗಿಸ್ಥಲ, ಸದಾಶಿವಂಗೆ ಶರಣಸ್ಥಲ, ಪರಮೇಶ್ವರಂಗೆ ಐಕ್ಯಸ್ಥಲ. ಇಂತಪ್ಪ ಶೈವಲಿಂಗದ ಭಕ್ತಿಯು, ಷಡುಸ್ಥಲದ ಸುಳುಹಿನೊಳಗಲ್ಲ. ರೇವಣಸಿದ್ಧಯ್ಯದೇವರು ಸಾಕ್ಷಿಯಾಗಿ ಪ್ರಭುದೇವರ ವಿರಶೈವ ಲಿಂಗ ಜಂಗಮದ ಷಡುಸ್ಥಲ ಸುಳುಹು ಆ ಭೇದವ ಕೂಡಲಚೆನ್ನಸಂಗಯ್ಯನಲ್ಲಿ ಕಾಣಾ, ಸಿದ್ಧರಾಮಯ್ಯಾ.
--------------
ಚನ್ನಬಸವಣ್ಣ
ಘ್ರಾಣಕ್ಕೂ ಗುದಕ್ಕೂ ಪೃಥ್ವಿ ಎಂಬ ಮಹಾಭೂತ. ಅಲ್ಲಿ ನಿವೃತ್ತಿ ಎಂಬ ಕಲೆಯಿಹುದು. ಆ ಕಲೆಯಲ್ಲಿ, ಕ್ರಿಯಾಶಕ್ತಿಯುಕ್ತವಾದ ಆಚಾರಲಿಂಗವ ಧರಿಸಿದಾತ ಭಕ್ತನು. ಜಿಹ್ವೆಗೂ ಗುಹ್ಯಕ್ಕೂ ಅಪ್ಪು ಎಂಬ ಮಹಾಭೂತ. ಅಲ್ಲಿ ಪ್ರತಿಷೆ* ಎಂಬ ಕಲೆಯಿಹುದು. ಆ ಕಲೆಯಲ್ಲಿ, ಜ್ಞಾನಶಕ್ತಿಯುಕ್ತವಾದ ಗುರುಲಿಂಗವ ಧರಿಸಿದಾತ ಮಾಹೇಶ್ವರನು. ನೇತ್ರಕ್ಕೂ ಪಾದಕ್ಕೂ ಅಗ್ನಿ ಎಂಬ ಮಹಾಭೂತ. ಅಲ್ಲಿ ವಿದ್ಯೆ ಎಂಬ ಕಲೆಯಿಹುದು. ಆ ಕಲೆಯಲ್ಲಿ, ಇಚ್ಛಾಶಕ್ತಿಯುಕ್ತವಾದ ಶಿವಲಿಂಗವ ಧರಿಸಿಕೊಂಡಾತ ಪ್ರಸಾದಿ. ತ್ವಕ್ಕಿಗೂ ಪಾಣಿಗೂ ವಾಯುವೆಂಬ ಮಹಾಭೂತ. ಅಲ್ಲಿ ಶಾಂತಿ ಎಂಬ ಕಲೆಯಿಹುದು. ಆ ಕಲೆಯಲ್ಲಿ, ಆದಿಶಕ್ತಿಯುಕ್ತವಾದ ಜಂಗಮಲಿಂಗವ ಧರಿಸಿಕೊಂಡಾತ ಪ್ರಾಣಲಿಂಗಿ. ಶ್ರೋತ್ರಕ್ಕೂ ವಾಕ್ಕಿಗೂ ಆಕಾಶ ಎಂಬ ಮಹಾಭೂತ. ಅಲ್ಲಿ ಶಾಂತ್ಯತೀತ ಎಂಬ ಕಲೆಯಿಹುದು. ಆ ಕಲೆಯಲ್ಲಿ, ಪರಾಶಕ್ತಿಯುಕ್ತವಾದ ಪ್ರಸಾದಲಿಂಗವ ಧರಿಸಿಕೊಂಡಾತ ಶರಣನು. ಆತ್ಮಾಂಗಕ್ಕೆ ಮನ ಎಂಬ ಮಹಾಭೂತ. ಅಲ್ಲಿ ಶಾಂತ್ಯತೀತೋತ್ತರ ಎಂಬ ಕಲೆಯಿಹುದು. ಆ ಕಲೆಯಲ್ಲಿ, ಚಿಚ್ಛಕ್ತಿಯುಕ್ತವಾದ ಮಹಾಲಿಂಗವ ಧರಿಸಿಕೊಂಡಾತ ಐಕ್ಯನು. ಇಂತೀ ಷಡುಸ್ಥಲಭಕ್ತರು ಷಡ್ವಿಧಲಿಂಗವ ಧರಿಸಿ ನಿರಾಳಲಿಂಗಾರ್ಚನೆಯ ಮಾಡುತ್ತಿಹರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ಪ್ರಭುವೇ.
--------------
ಸ್ವತಂತ್ರ ಸಿದ್ಧಲಿಂಗ
ಕಕ್ಷೆಯಲ್ಲಿ ಲಿಂಗವ ಧರಿಸಿಕೊಂಡಾತ ಭಕ್ತನು. ಕರಸ್ಥಲದಲ್ಲಿ ಲಿಂಗವ ಧರಿಸಿಕೊಂಡಾತ ಮಾಹೇಶ್ವರನು. ಉತ್ತಮಾಂಗದಲ್ಲಿ ಲಿಂಗವ ಧರಿಸಿಕೊಂಡಾತ ಪ್ರಸಾದಿ. ಉರಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತ ಪ್ರಾಣಲಿಂಗಿ. ಕಂಠಸೆಜ್ಜೆಯಲ್ಲಿ ಲಿಂಗವ ಧರಿಸಿಕೊಂಡಾತ ಶರಣ. ಅಮಳೋಕ್ಯದಲ್ಲಿ ಲಿಂಗವ ಧರಿಸಿಕೊಂಡಾತ ಐಕ್ಯ. ಇಂತೀ ಷಡುಸ್ಥಲದವರೆಲ್ಲ ಲಿಂಗವ ಧರಿಸಿ, ನಿತ್ಯ ಲಿಂಗಾಂಗ ಸಂಬಂಧಿಗಳಾಗಿ, ಲಿಂಗಾವಧಾನಿಗಳಾಗಿರ್ದರಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣರು.
--------------
ಸ್ವತಂತ್ರ ಸಿದ್ಧಲಿಂಗ
-->