ಅಥವಾ

ಒಟ್ಟು 30 ಕಡೆಗಳಲ್ಲಿ , 3 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಷ್ಟಭೋಗಂಗಳ ಕಾಮಿಸಿ, ತನಗೆಂಬ ಜ್ಞಾನೇಂದ್ರಿಯ ಅಂತಃಕರಣಗಳ ಮುಸುಡುಗುತ್ತಲೀಯದೆ ಸ್ವಾನುಭಾವರ ಸುಖದೊಳಗಿರಬಲ್ಲಡೆ ಕಕ್ಷಸ್ಥಲದಲ್ಲಿ ಧರಿಸುವುದಯ್ಯಾ. ಇಂದ್ರಿಯ ನಿರೂಡ್ಥೀಯ ವಿಕಳದ ಅಪೇಕ್ಷೆಯಿಂ ಕಾಂಚಾಣಕ್ಕೆ ಕೈಯಾನದೆ ನಿಚ್ಚಯ ದೃಡಚಿತ್ತದೊಳಿರಬಲ್ಲಡೆ ಕರಸ್ಥಲದಲ್ಲಿ ಧರಿಸುವುದಯ್ಯಾ. ಅಂಗನೆಯರ ಅಂಗಸುಖದ ವಿರಹಕ್ಕೆ ತನುವನೊಪ್ಪಿಸದೆ ಲಿಂಗವನಪ್ಪಿ ಪರಮಸುಖದ ಸುಗ್ಗಿಯೊಳಿರಬಲ್ಲಡೆ ಉರಸ್ಥಲದಲ್ಲಿ ಧರಿಸುವುದಯ್ಯಾ. ನಿಂದೆ ನಿಷ್ಠುರ ಅನೃತ ಅಸಹ್ಯ ಕುತರ್ಕ ಕುಶಬ್ದವಳಿದು ಶಿವಾನುಭಾವದ ಸುಖದೊಳಿರಬಲ್ಲಡೆ ಕಂಠಸ್ಥಲದಲ್ಲಿ ಧರಿಸುವುದಯ್ಯಾ. ಲಿಂಗವಿಹೀನರಾದ ಲೋಕದ ಜಡಮಾನವರಿಗೆ ತಲೆವಾಗದೆ ಶಿವಲಿಂಗಕ್ಕೆರಗಿರಬಲ್ಲಡೆ ಶಿರದಲ್ಲಿ ಧರಿಸುವುದಯ್ಯಾ. ಅಂತರ್ಮುಖವಾಗಿ ಶಿವಜ್ಞಾನದಿಂ ಪ್ರಾಣಗುಣವಳಿದು ಸದಾ ಸನ್ನಿಹಿತದಿಂದೆರಡರಿಯದಿರಬಲ್ಲಡೆ ಅಮಳೋಕ್ಯದಲ್ಲಿ ಧರಿಸುವುದಯ್ಯಾ. ಶಿವತತ್ವದ ಮೂಲಜ್ಞಾನಸಂಬಂದ್ಥಿಗಳಪ್ಪ ಶಿವಶರಣರ ಮತವಿಂತಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅಯ್ಯಾ, ಕ್ರಿಯಾವಿಭೂತಿಯ ಧರಿಸಿದ ಭಕ್ತನು ಚಿದ್ರುದ್ರಾಕ್ಷಿಯ ಧರಿಸಿ ಮಂತ್ರಧ್ಯಾನವ ಮಾಡಬೇಕಾದ ನಿಮಿತ್ತ, ಪ್ರಥಮದಲ್ಲಿ ರುದ್ರಾಕ್ಷಿಮಣಿಗಳ ಕ್ರಮವ ಮಾಡದೆ, ಅವರು ಹೇಳಿದಂತೆ ಕ್ರಯವ ಕೊಟ್ಟು ಮುಖಭಿನ್ನವಾದುದನುಳಿದು, ಸ್ವಚ್ಛವಾದ ರುದ್ರಾಕ್ಷಿಗಳ ಶ್ರೀಗುರುಲಿಂಗಜಂಗಮದ ಸನ್ನಿಧಿಗೆ ತಂದು ವೃತ್ತಸ್ಥಾನದ ಪರಿಯಂತರವು ಧೂಳಪಾದೋದಕವ ಮಾಡಿ, ಆ ರುದ್ರಾಕ್ಷಿಯ ಪೂರ್ವಾಶ್ರಯವ ಕಳೆದು, ಲಿಂಗಧಾರಕಭಕ್ತರಿಂದ ಗುರುಪಾದೋದಕ ಮೊದಲಾಗಿ ಶಿವಪಂಚಾಮೃತದಿಂದ ಇಪ್ಪತ್ತೊಂದು ಪೂಜೆಯ ಮಾಡಿಸಿ ಆಮೇಲೆ ಶ್ರೀಗುರುಲಿಂಗಜಂಗಮದ ಪಾದಪೂಜೆಗೆ ಧರಿಸಿ, ಆಮೇಲೆ ಲಿಂಗಜಂಗಮಕ್ಕೆ ಸಮರ್ಪಿಸಿ, ಅವರಿಂದ ದಯಚಿತ್ತವ ಪಡೆದು, ಶರಣುಹೊಕ್ಕು ಮಹಾಪ್ರಸಾದವೆಂದು ಬೆಸಗೊಂಡು, ಆ ಕರುಣಾಕಟಾಕ್ಷ ಮಾಲೆಗಳ ಭಿನ್ನವಿಟ್ಟು ಅರ್ಚಿಸದೆ, ಅಭಿನ್ನಸ್ವರೂಪು ಮುಂದುಗೊಂಡು ಬಹುಸುಯಿಧಾನದಿಂದ ತನ್ನ ತೊಡೆಯ ಮೇಲೆ ಮೂರ್ತವ ಮಾಡಿಕೊಂಡು, ತನ್ನ ಜ್ಞಾನಪ್ರಕಾಶವೆಂದು ಭಾವಿಸಿ ತನ್ನ ತಾನರ್ಚಿಸಿ, ಮಂತ್ರಧ್ಯಾನಾರೂಢನಾಗಿ ತತ್ತತ್ ಸ್ಥಾನದಲ್ಲಿ ಧರಿಸುವುದಯ್ಯಾ. ಇಂತು ವಿಭೂತಿ ರುದ್ರಾಕ್ಷಿಯ ಧರಿಸಿ ಲಿಂಗನಿಷ್ಠಾಪರನಾದ ಭಕ್ತನು ಸ್ಥಲಮೆಟ್ಟಿಗೆಯಿಂದ ಆಯಾಯ ಮಂತ್ರವ ಹೇಳುವುದಯ್ಯಾ. ಅದರ ವಿಚಾರವೆಂತೆಂದಡೆ: ಕ್ರಿಯಾದೀಕ್ಷಾಯುಕ್ತನಾದ ಉಪಾಧಿಭಕ್ತಂಗೆ ಗುರುಮಂತ್ರವ ಹೇಳುವುದಯ್ಯಾ. ಕ್ರಿಯಾದೀಕ್ಷೆಯ ಪಡೆದು ಗುರುಲಿಂಗಜಂಗಮದಲ್ಲಿ ಅರ್ಥಪ್ರಾಣಾಭಿಮಾನಂಗ? ನಿರ್ವಂಚಕತ್ವದಿಂದ ಸಮರ್ಪಿಸಿ ನಡೆನುಡಿ ಸಂಪನ್ನನಾದ ನಿರುಪಾಧಿಭಕ್ತಂಗೆ ಲಿಂಗಮಂತ್ರವ ಹೇ?ುವುದಯ್ಯಾ ಇವರಿಬ್ಬರ ಆಚರಣೆಯ ಪಡೆದು ಸಮಸ್ತ ಭೋಗಾದಿಗಳು ನೀಗಿಸಿ ಸಚ್ಚಿದಾನಂದನಾದ ಸಹಜಭಕ್ತಂಗೆ ಜಂಗಮಮಂತ್ರವ ಹೇ?ುವುದಯ್ಯಾ. ಆ ಮಂತ್ರಂಗಳಾವುವೆಂದಡೆ: ಶಕ್ತಿಪ್ರಣವ ಹನ್ನೆರಡು ಗುರುಮಂತ್ರವೆನಿಸುವುದಯ್ಯಾ, ಶಿವಪ್ರಣವ ಹನ್ನೆರಡು ಲಿಂಗಮಂತ್ರವೆನಿಸುವುದಯ್ಯಾ, ಶಿವಶಕ್ತಿರಹಿತವಾದ ಹನ್ನೆರಡು ಜಂಗಮಮಂತ್ರವೆನಿಸುವುದಯ್ಯಾ. ಇಂತು ವಿಚಾರದಿಂದ ಉಪಾಧಿ ನಿರುಪಾಧಿ ಸಹಜಭಕ್ತ ಮಹೇಶ್ವರರಾಚರಿಸುವುದಯ್ಯಾ. ಇನ್ನು ನಿರಾಭಾರಿ ವೀರಶೈವನಿರ್ವಾಣ ಸದ್ಭಕ್ತಜಂಗಮಗಣಂಗಳು ಶುದ್ಧಪ್ರಸಾದಪ್ರಣವ ಹನ್ನೆರಡು, ಸಿದ್ಧಪ್ರಸಾದಪ್ರಣವ ಹನ್ನೆರಡು, ಪ್ರಸಿದ್ಧಪ್ರಸಾದಪ್ರಣವ ಹನ್ನೆರಡು, ಇಂತು ವಿಚಾರದಿಂದ ಮೂವತ್ತಾರು ಪ್ರಣವವನೊಡಗೂಡಿ, ಶುದ್ಧಪ್ರಸಾದಪ್ರಣವ ಆಚಾರಲಿಂಗ ಗುರುಲಿಂಗ ಇಷ್ಟಲಿಂಗ ಪರಿಯಂತರ ತ್ರಿವಿಧ ಲಿಂಗಕ್ಕೆಂದು ಮಾಡುವುದಯ್ಯಾ. ಸಿದ್ಧಪ್ರಸಾದಪ್ರಣವ ಶಿವಲಿಂಗ ಜಂಗಮಲಿಂಗ ಪ್ರಾಣಲಿಂಗ ಪರಿಯಂತರ ತ್ರಿವಿಧಲಿಂಗಕ್ಕೆಂದು ಮಾಡುವುದಯ್ಯಾ. ಪ್ರಸಿದ್ಧಪ್ರಸಾದಪ್ರಣವ ಪ್ರಸಾದಲಿಂಗ ಮಹಾಲಿಂಗ ಭಾವಲಿಂಗ ಪರಿಯಂತರ ತ್ರಿವಿಧಲಿಂಗಕ್ಕೆಂದು ಮಾಡುವುದಯ್ಯಾ. ಹೀಗೆ ಹರುಕಿಲ್ಲದೆ ಸ್ಥಲಮೆಟ್ಟಿಗೆಯಿಂದ ಕರುಣಿಸಿದ ಗುರುವಿಂಗೆ ಬೆಸಗೊಂಡ ಶಿಷ್ಯೋತ್ತಮಂಗೆ. ಆಯಾಯ ಲಿಂಗಪ್ರಸಾದ ಒದಗುವುದೆಂದಾಂತ ನಮ್ಮ ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
ಸಕಲೇಂದ್ರಿಯಂಗಳ ಪ್ರಪಂಚು ನಾಸ್ತಿಯಾಗಿರಬಲ್ಲಡೆ ಕಕ್ಷದಲ್ಲಿ ಧರಿಸುವುದಯ್ಯಾ ಶಿವಲಿಂಗವ. ಕಾಂಚನಕ್ಕೆ ಕೈಯಾನದಿರ್ದಡೆ ಕರಸ್ಥಲದಲ್ಲಿ ಧರಿಸುವುದಯ್ಯ ಶಿವಲಿಂಗವ. ಪರಸ್ತ್ರೀಯರ ಅಪ್ಪುಗೆ ಇಲ್ಲದಿರ್ದಡೆ ಉರಸ್ಥಲದಲ್ಲಿ ಧರಿಸುವುದಯ್ಯ ಶಿವಲಿಂಗವ. ಎಂದೆಂದೂ ಹುಸಿಯನಾಡದಿರ್ದಡೆ ಜಿಹ್ವಾಪೀಠದಲ್ಲಿ ಧರಿಸುವುದಯ್ಯ ಶಿವಲಿಂಗವ. ಅನ್ನಪಾನಂಗಳಿಗೆ ಬಾಯ್ದೆರೆಯದಿರ್ದಡೆ ಅಮಳೋಕ್ಯದಲ್ಲಿ ಧರಿಸುವುದಯ್ಯ ಶಿವಲಿಂಗವ. ಅನ್ಯರಾಜರಿಗೆ ತಲೆವಾಗದಿರ್ದಡೆ ಉತ್ತಮಾಂಗದಲ್ಲಿ ಧರಿಸುವುದಯ್ಯ ಶಿವಲಿಂಗವ. ಇಂತೀ ಷಡ್‍ವಿಧಾಚಾರ ನೆಲೆಗೊಂಡು ಷಡ್‍ವಿಧ ಸ್ಥಾನದಲ್ಲಿ ಶಿವಲಿಂಗವ ಧರಿಸಬಲ್ಲಡೆ, ಭಕ್ತನೆಂಬೆನು, ಮಹೇಶ್ವರನೆಂಬೆನು, ಪ್ರಸಾದಿಯೆಂಬೆನು, ಪ್ರಾಣಲಿಂಗಿಯೆಂಬೆನು, ಶರಣನೆಂಬೆನು, ಐಕ್ಯನೆಂಬೆನು. ಇಂತೀ ಭೇದವನರಿಯದೆ ಲಿಂಗವ ಧರಿಸಿದಡೆ ಮಡಿಲಲ್ಲಿ ಕಲ್ಲ ಕಟ್ಟಿಕೊಂಡು ಕಡಲ ಬಿದ್ದಂತಾಯಿತ್ತು ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಏಕಮುಖದ ರುದ್ರಾಕ್ಷಿಯೊಂದನೆ ಶಿಖಿಯಲ್ಲಿ ಧರಿಸುವುದಯ್ಯಾ. ದ್ವಿತ್ರಿದ್ವಾದಶ ಮುಖದ ಮೂರು ಮಣಿಯ ಮೂಧ್ರ್ನಿಯಲ್ಲಿ ಧರಿಸುವುದಯ್ಯಾ. ಏಕಾದಶಮುಖದ ಮೂವತ್ತಾರು ಮಣಿಯ ಶಿರವ ಬಳಸಿ ಧರಿಸುವುದಯ್ಯಾ. ಐದು ಏಳು ಹತ್ತುಮುಖದ ರುದ್ರಾಕ್ಷಿಯ ಒಂದೊಂದು ದ್ವಿಕರ್ಣದಲ್ಲಿ ಧರಿಸುವುದಯ್ಯಾ. ಷಡಾಷ್ಟಮುಖದ ದ್ವಾತ್ರಿಂಶತ್ ರುದ್ರಾಕ್ಷಿಯ ಕಂಠದಲ್ಲಿ ಧರಿಸುವುದಯ್ಯಾ. ಚತುರ್ಮುಖದ ಪಂಚಾಶತ್ ರುದ್ರಾಕ್ಷಿಯ ಉರಮಾಲೆಯಾಗಿ ಧರಿಸುವುದಯ್ಯಾ. ತ್ರಿದಶಮುಖದ ದ್ವಾತ್ರಿಂಶ ರುದ್ರಾಕ್ಷಿಯ ದ್ವಿಬಾಹುಗಳಲ್ಲಿ ಧರಿಸುವುದಯ್ಯಾ. ನವಮುಖದ ಚತುರ್ವಿಂಶ ರುದ್ರಾಕ್ಷಿಯ ದ್ವಿಮಣಿಬಂಧದಲ್ಲಿ ಧರಿಸುವುದಯ್ಯಾ. ಚತುರ್ದಶಮುಖದ ರುದ್ರಾಕ್ಷಿಯ ಅಷ್ಟೋತ್ತರಶತವ ಉಪವೀತದಂತೆ ಧರಿಸುವುದಯ್ಯಾ. ಇಂತರಿದು ಧರಿಸಿದ ಶಿವಮಾಹೇಶ್ವರನ ಹೆಜ್ಜೆಹೆಜ್ಜೆಗೆ ಅಶ್ವಮೇಧಯಾಗದ ಫಲ ತಪ್ಪದಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಅಯ್ಯಾ, ಶ್ರೀವಿಭೂತಿಯ ಧರಿಸುವ ಭೇದವೆಂತೆಂದಡೆ : ಸಹಜಲಿಂಗಧಾರಕರು ಎಂಟುಸ್ಥಾನದಲ್ಲಿ ಧರಿಸುವುದಯ್ಯಾ. ಕ್ರಿಯಾದೀಕ್ಷಾನ್ವಿತರಾದ ಉಪಾಧಿಭಕ್ತರು ಹದಿನಾರು ಸ್ಥಾನದಲ್ಲಿ ಧರಿಸುವುದಯ್ಯಾ. ಕ್ರಿಯಾದೀಕ್ಷೆ, ಮಂತ್ರದೀಕ್ಷೆಯುಕ್ತರಾದ ನಿರುಪಾಧಿಭಕ್ತರು ಮೂವತ್ತೆರಡು ಸ್ಥಾನದಲ್ಲಿ ಧರಿಸುವುದಯ್ಯಾ. ಕ್ರಿಯಾದೀಕ್ಷೆ ಮಂತ್ರದೀಕ್ಷೆ ವೇಧಾದೀಕ್ಷೆಯುಕ್ತರಾದ ಸಹಜಭಕ್ತರು ಮೂವತ್ತಾರು ಸ್ಥಾನದಲ್ಲಿ ಧರಿಸುವುದಯ್ಯಾ. ಕ್ರಿಯಾದೀಕ್ಷೆ ಮಂತ್ರದೀಕ್ಷೆ ವೇಧಾದೀಕ್ಷೆ ಸಚ್ಚಿದಾನಂದದೀಕ್ಷಾಯುಕ್ತರಾದ ನಿರ್ವಂಚನಭಕ್ತರು ನಾಲ್ವತ್ತುನಾಲ್ಕು ಸ್ಥಾನದಲ್ಲಿ ಧರಿಸುವುದಯ್ಯಾ. ಕ್ರಿಯಾ-ಮಂತ್ರ-ವೇಧಾ-ಸಚ್ಚಿದಾನಂದ-ನಿರ್ವಾಣಪದದೀಕ್ಷಾ ಸಮನ್ವಿತರಾದ ಸದ್ಭಕ್ತಶರಣಗಣಂಗಳು, ಆಪಾದಮಸ್ತಕ ಪರಿಯಂತರ ಸ್ನಾನ ಧೂಳನವ ಮಾಡಿ ನಾಲ್ವತ್ತೆಂಟು ಸ್ಥಾನದಲ್ಲಿ ಮಂತ್ರಸ್ಮರಣೆಯಿಂದ ತ್ರಿಪುಂಡ್ರವ ಧರಿಸುವುದಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕಾಂಚನಕ್ಕೆ ಕೈಯಾನದಿರ್ದಡೆ ಕರಸ್ಥಲದಲ್ಲಿ ಧರಿಸುವುದಯ್ಯಾ ಶಿವಲಿಂಗವ. ಕಾಂಕ್ಷೆಯಿಲ್ಲದಿರ್ದಡೆ ಕಕ್ಷೆಯಲ್ಲಿ ಧರಿಸುವುದಯ್ಯಾ ಶಿವಲಿಂಗವ. ಅಪ್ಪಿಲ್ಲದಿರ್ದಡೆ ಉರಸೆಜ್ಜೆಯಲ್ಲಿ ಧರಿಸುವುದಯ್ಯಾ ಶಿವಲಿಂಗವ. ಅನ್ನಪಾನಾದಿಗಳಿಗೆ ಬಾಯ್ದೆರೆಯದಿರ್ದಡೆ, ಅಮಳೋಕ್ಯದಲ್ಲಿ ಧರಿಸುವುದಯ್ಯಾ ಶಿವಲಿಂಗವ. ಭಿನ್ನಶಬ್ದವಿಲ್ಲದಿರ್ದಡೆ ಮುಖಸೆಜ್ಜೆಯಲ್ಲಿ ಧರಿಸುವುದಯ್ಯಾ ಶಿವಲಿಂಗವ. ಲೋಕಕ್ಕೆರಗದಿರ್ದಡೆ ಉತ್ತಮಾಂಗದಲ್ಲಿ ಧರಿಸುವುದಯ್ಯಾ ಶಿವಲಿಂಗವ. ನಾಭಿಯಿಂದ ಕೆಳಯಿಕ್ಕೆ ಧರಿಸಲಾಗದು. ಅದೇನು ಕಾರಣವೆಂದಡೆ : ಅದು ಹೇಯಸ್ಥಾನವಾದುದಾಗಿ. ಜಿಹ್ವೆಗೆ ತಾಗಿದ ಸಕಲರುಚಿಯೂ ಗಳದಿಂದಿಳುವುದಾಗಿ ಗಳವೇ ವಿಶೇಷಸ್ಥಳವೆಂದು ಗಳದಲ್ಲಿ ಧರಿಸಿದೆನಯ್ಯಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಅಯ್ಯಾ, ಸಹಜಲಿಂಗಧಾರಕ ಭಕ್ತ ಉಪಾಧಿಭಕ್ತರು [ವಿಭೂತಿಯ] ಗುರುಪಾದೋದಕದಲ್ಲಿ ಸಮ್ಮಿಶ್ರವ ಮಾಡಿ ಧರಿಸುವದಯ್ಯಾ. ನಿರುಪಾಧಿಭಕ್ತ_ಸಹಜಭಕ್ತರು ಗುರುಪಾದೋದಕ_ಲಿಂಗಪಾದೋದಕ ಸಮ್ಮಿಶ್ರವ ಮಾಡಿ ಷಡಕ್ಷರಮಂತ್ರವ ಸ್ಥಾಪಿಸಿ ಧರಿಸುವದಯ್ಯಾ. ನಿರ್ವಂಚಕಭಕ್ತ_ನಿರ್ವಾಣಶರಣಗಣಂಗಳು ಗುರುಪಾದೋದಕದಲ್ಲಿ ಘಟ್ಟಿಯ ಕುಟ್ಟಿ ಲಿಂಗಪಾದೋದಕವ ಆ ಘಟ್ಟಿಗೆ ಸಮ್ಮಿಶ್ರವ ಮಾಡಿ ಆದಿ ಪ್ರಣಮಗಳಾರು ಅನಾದಿ ಪ್ರಣಮಗಳಾರು ಚಿತ್ಕಲಾ ಪ್ರಸಾದ ಪ್ರಣಮಗಳಾರು ನಿಷ್ಕಳಂಕ ಚಿತ್ಕಲಾಮೂಲ ಪ್ರಣಮ ಮೂರು ಇಂತು ಇಪ್ಪತ್ತೊಂದು ಪ್ರಣಮಂಗಳ ಸ್ಥಾಪಿಸಿ ಜಂಗಮಮೂರ್ತಿಗಳು ಧರಿಸಿದ ಮೇಲೆ ಧರಿಸುವುದಯ್ಯಾ. ಹಿಂಗೆ ಧರಿಸಿದವರಿಗೆ ನಿಜಕೈವಲ್ಯಪದವಾಗುವದೆಂದಾತ ನಮ್ಮ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
-->